varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಅವಿಭಜಿತ ದಕ್ಷಿಣ ಕನ್ನಡದ ಬದುಕು

ವಾರ್ತಾ ಭಾರತಿ : 3 Nov, 2017
ನಿರೂಪಣೆ: ಬಸು ಮೇಗಲಕೇರಿ

ಫಕೀರ್ ಮುಹಮ್ಮದ್ ಕಟ್ಪಾಡಿ ಎಂದಾಗ ನಮಗೆ ನೆನಪಾಗುವುದು ‘ನೋಂಬು’ ಕತೆ. ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಕಟ್ಬಾಡಿ ಮೊದಲಿಗರು. ಇಲ್ಲಿನ ತಳಸ್ತರ ಬದುಕಿನ ಜೊತೆಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡವರು ಇವರು. ಇಲ್ಲಿ ಲೇಖಕರು ತನ್ನ ಬಾಲ್ಯ ಕಾಲದ ಕರಾವಳಿಯ ಸೌಹಾರ್ದ ಬದುಕನ್ನು ತೆರೆದಿಟ್ಟಿದ್ದಾರೆ. ಅಕ್ಷರ ಇನ್ನಷ್ಟೇ ಕಾಲಿಡುತ್ತಿರುವ ಹೊತ್ತಿನಲ್ಲೂ ಬಹುತ್ವ ಹೇಗೆ ಜನರ ಬದುಕನ್ನು ಸುಂದರವಾಗಿ ಹಿಡಿದಿಟ್ಟಿತ್ತು ಎನ್ನುವುದನ್ನು ಅವನ ನೆನಪುಗಳ ಫಲುಕುಗಳಿಂದ ನಮ್ಮದಾಗಿಸಿಕೊಳ್ಳಬಹುದು. ಇತ್ತೀಚೆಗೆ ಗಲಭೆಗಳಿಗಾಗಿ ಸುದ್ದಿಯಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ, ಮತ್ತೆ ಕಳೆದು ಹೋದ ದಿನಗಳ ಕಡೆಗೊಮ್ಮೆ ಮರಳಿ ನೋಡಬೇಕಾಗಿದೆ.

ನಮ್ಮ ಹಾಗೆಯೇ ನೀವು; ನಿಮ್ಮ ಹಾಗೆಯೇ ನಾವು...

ನೀರಿಗೆಂತ ಜಾತಿ!

ಕರಾವಳಿಯ ಕಟ್ಪಾಡಿ ಹತ್ತಿರದ ಪುಟ್ಟ ಕೋಟೆ ಗ್ರಾಮ ನನ್ನೂರು. ಆ ಗ್ರಾಮದಲ್ಲಿ ಮುಸ್ಲಿಮರದ್ದು, ಮೂರು ಕುಟುಂಬಗಳಿದ್ದವು. ಅದರಲ್ಲಿ ನಮ್ಮದೂ ಒಂದು. ಅಪ್ಪ ಕಟ್ಪಾಡಿಯ ಜುಮಾ ಮಸೀದಿಯ ಖತೀಬ್. ಅಮ್ಮ ಗೃಹಿಣಿ. ಅಪ್ಪನ ಊರು ಹೆಮ್ಮಾಡಿ, ಅಮ್ಮನದು ಬಾರ್ಕೂರು. ಅಲ್ಲಿಂದ ನಾವು ಕಟ್ಪಾಡಿ ಕೋಟೆ ಗ್ರಾಮಕ್ಕೆ ಬಂದದ್ದು. ಚಿಕ್ಕದೊಂದು ಮನೆ ಮಾಡಿಕೊಂಡೆವು. ಅಪ್ಪ ತನ್ನ ಮನೆಗೆ ಜಾಗ ಆಯ್ಕೆ ಮಾಡುವಾಗ ಮುಸ್ಲಿಮರ ಕೇರಿಯನ್ನು ಆಯ್ದುಕೊಳ್ಳದೆ ಕೋಟೆ ಗ್ರಾಮವನ್ನು ಆಯ್ದು ಕೊಂಡದ್ದು ನನಗೆ ನೀಡಿದ ದೊಡ್ಡ ಕೊಡುಗೆ ಅಂತ ನಾನು ತಿಳಿದುಕೊಂಡಿದ್ದೇನೆ. ನನಗೆ ನನ್ನ ಬಾಲ್ಯ, ನಮ್ಮೂರ ಬಗ್ಗೆ ಯೋಚಿಸಿದಾಗೆಲ್ಲ ನನ್ನ ಕಣ್ಣ ಮುಂದೆ ನಿಲ್ಲುವುದು ನನ್ನ ಅಮ್ಮ! ಆಕೆ ಒಂದು ಕ್ಷಣವೂ ಸುಮ್ಮನೆ ಕೂತವಳಲ್ಲ. ಹಾಗೆ ಅವಳನ್ನು ಚಲನಶೀಲವಾಗಿ ಇಟ್ಟಿದ್ದು ನಮ್ಮ ಮನೆಯ ಬಾವಿ ಅನ್ನುವುದು ನನ್ನ ಗ್ರಹಿಕೆ. ನಮ್ಮ ಕೋಟೆಗ್ರಾಮದ ಸುತ್ತ ಉದ್ಯಾವರ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಈ ನದಿ ಉಕ್ಕಿ ಹರಿಯುತ್ತದೆ. ಉಳಿದ ಬೇಸಿಗೆಕಾಲದಲ್ಲಿ ಇದು ಉಪ್ಪು ನೀರಿನ ಹೊಳೆ. ಹೀಗೆ ಉಪ್ಪು ನೀರು ನಮ್ಮ ಗ್ರಾಮದ ಸುತ್ತಲೂ ಉಕ್ಕಿ ಹರಿಯುವುದರಿಂದಾಗಿ ನಮ್ಮ ಊರಿನ ಬಹುಪಾಲು ಬಾವಿಗಳಲ್ಲಿ ಮಾರ್ಚ್‌ತಿಂಗಳಿಂದ ಮಳೆಗಾಲ ಬರುವ ತನಕ ಸಿಗುವುದು ಉಪ್ಪು ನೀರು ಅಥವಾ ಒಗರು ನೀರು! ನಮ್ಮ ಮನೆ ಸ್ವಲ್ಪ ಎತ್ತರದ ಪ್ರದೇಶದಲ್ಲಿರುವುದರಿಂದಲೋ ಏನೋ, ನಮ್ಮ ಬಾವಿಯಲ್ಲಿ ಸಿಹಿ ನೀರು ಇದೆ. ಹಾಗಾಗಿ ಊರಿನವರೆಲ್ಲರೂ ಕುಡಿಯುವ ನೀರಿನ ನೆಪದಲ್ಲಿ ನಮ್ಮ ಮನೆಗೆ ಬಂದುಹೋಗುವುದು ಮಾಮೂಲಿನ ಸಂಗತಿಯಾಗಿತ್ತು. ಅದಲ್ಲದೆ, ನಮ್ಮ ಮನೆ ತೆಂಗಿನ ತೋಟದ ಮಧ್ಯದಲ್ಲಿತ್ತು. ನಮ್ಮ ಅಂಗಳದಲ್ಲಿ ಅಮ್ಮ ಬೆಳೆಸಿದ್ದ ಬೆಂಡೆಕಾಯಿ, ಹೀರೇಕಾಯಿ ಮುಂತಾದ ತರಕಾರಿಗಳು, ಹೂವು, ಬಾಳೆ ಎಲೆ, ಕೆಸುವಿನ ಎಲೆ, ಅರಸಿನದ ಎಲೆ ಬೇಕಾದವರೂ ನಮ್ಮ ಮನೆಗೆ ಬರುತ್ತಿದ್ದರು. ಊರಲ್ಲಿರುವ ಮೊಗವೀರರು, ಬಿಲ್ಲವರು, ಬ್ರಾಹ್ಮಣರು, ಕ್ರೈಸ್ತರು ಎಲ್ಲರೂ ನಮಗೆ ಪರಿಚಿತರು. ಈ ಬಾವಿಕಟ್ಟೆ ನಮ್ಮಮ್ಮನಿಗೆ ಬೇರೆಯದೇ ಆದ ಜಗತ್ತಿನ ಜ್ಞಾನವನ್ನು ಪರಿಚಯಿಸಿದ ತಾಣ. ಬುದ್ಧನಿಗೆ ಅರಳಿಮರದ ಕಟ್ಟೆ ಇದ್ದಂತೆ, ನಮ್ಮಮ್ಮನಿಗೆ ಬಾವಿಕಟ್ಟೆ ಎಂದರೂ ಅಡ್ಡಿಯಿಲ್ಲ. ಅಲ್ಲಿ ನೀರು ತೆಗೆದುಕೊಂಡು ಹೋಗಲಿಕ್ಕಷ್ಟೇ ಹೆಂಗಸರು ಬರುತ್ತಿರಲಿಲ್ಲ. ಬಂದವರು ಸುಮ್ಮನೆ ಹೋಗುತ್ತಲೂ ಇರಲಿಲ್ಲ. ಎಲೆಯಡಿಕೆ, ಕಾಫಿ-ಟೀ, ತಿಂಡಿ ವಿನಿಮಯ ಎಲ್ಲವೂ ನಡೀತಿತ್ತು. ಸಿಹಿ ನೀರಿಗಾಗಿ ಬರುತ್ತಿದ್ದ ಹೆಚ್ಚಿನವರು ಕೆಳಜಾತಿಯವರು.

ನಮ್ಮೂರಿನ ಬ್ರಾಹ್ಮಣರ ಕೆಲವು ಮನೆಯಂಗಳದ ಬಾವಿಗಳಲ್ಲಿ ಸಿಹಿ ನೀರು ಸಿಗುತ್ತಿತ್ತು. ಆದರೆ ಅವರ ಬಾವಿಯಲ್ಲಿ ಅವರೇ ಸೇದಿ ಇತರರಿಗೆ ಕೊಡಬೇಕಾದ ಕಟ್ಟುನಿಟ್ಟು ಪಾಲಿಸುತ್ತಿದ್ದುದರಿಂದ, ಅದು ಅವರಿಗೆ ತ್ರಾಸದಾಯಕ ಕೆಲಸವಾಗಿರುತ್ತಿತ್ತು. ಪ್ರತೀ ಸಾರಿಯೂ ಅವರಿಗೆ ತೊಂದರೆ ಕೊಡುವುದು ಇಷ್ಟವಿಲ್ಲದ ಕೆಳಜಾತಿಯವರು ಯಾವುದೇ ತಡೆಯಿಲ್ಲದೆ ನಮ್ಮ ಬಾವಿಯ ನೀರು ಕೊಂಡೊಯ್ಯುವ ಸ್ವಾತಂತ್ರ ಇರುವುದರಿಂದ ಊರಿನ ಹೆಚ್ಚಿನ ಜನರೆಲ್ಲ ನೀರಿಗಾಗಿ ನಮ್ಮ ಮನೆಗೇ ಬರುತ್ತಿದ್ದರು. ಬ್ರಾಹ್ಮಣರು ನೀರಿಗೆ ಬರದಿದ್ದರೂ, ನಮ್ಮ ಅಮ್ಮ ಅಂಗಳದಲ್ಲಿ ಬೆಳೆದ ಬಾಳೆ ಎಲೆ ಮತ್ತು ಕೆಸುವಿನ ಎಲೆ(ಪತ್ರೊಡೆ ಎಲೆ), ದೀಪಾವಳಿಯ ಸಂದರ್ಭದಲ್ಲಿ ಕಡುಬಿಗೆ ಬೇಕಾಗುವ ಅರಸಿನ ಎಲೆಗಾಗಿ ನಮ್ಮ ಮನೆಗೆ ಬರುತ್ತಿದ್ದರು. ಅಮ್ಮನದು ಒಂದೇ ಫಿಲಾಸಫಿ, ನೀರಿಗೆಂತ ಜಾತಿ? ಅಲ್ಲಾಹ ನಮಗೆ ಕರುಣಿಸಿದ ನೀರು ಎಲ್ಲರಿಗೂ ಸೇರಿದ್ದು ಎನ್ನುವುದು ಆಕೆಯ ಸರಳ ವಾದವಾಗಿತ್ತು. ನೀರಿನ ನೆಪದಲ್ಲಿ ನಮ್ಮ ಮನೆಯ ಬಳಿ ಬರುತ್ತಿದ್ದ ಹೆಂಗಸರು, ಅವರ ಮನೆಯ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಹಬ್ಬ-ಹರಿದಿನಗಳನ್ನು ಕುರಿತು ಮಾತನಾಡುತ್ತಿದ್ದರು. ಮದುವೆ-ಮುಂಜಿ ಸಮಾರಂಭಗಳಲ್ಲಿ ಮಾಡಿದ್ದ ಖರ್ಚುವೆಚ್ಚಗಳೇ ಮುಂತಾದ ವಿಚಾರಗಳನ್ನು ತಪ್ಪದೆ ವರದಿ ಒಪ್ಪಿಸುತ್ತಿದ್ದರು. ಅಲ್ಲಿ ಅಮ್ಮ ಅವರ ಮನೆಯ ಸ್ಥಿತಿ-ಗತಿ, ಆಚಾರ, ಸಂಪ್ರದಾಯ, ಅಡುಗೆ ತಯಾರಿಸುವ ವಿಧಾನ ಎಲ್ಲವನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ಆದರೆ ಯಾವುದೇ ಸಂಗತಿಯನ್ನಾಗಲಿ, ಇದು ಬೇಡ, ಇದು ನಮ್ಮದಲ್ಲ, ಅವರದೇ ಬೇರೆ ನಮ್ಮದೇ ಬೇರೆ ಸಂಸ್ಕೃತಿ ಅಂತ ಎಂದೂ ಅಂದವಳಲ್ಲ. ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ ಅಮ್ಮ, ಒಳ್ಳೆಯದನ್ನು ಹೆಕ್ಕಿ ತೆಗೆದು ತನ್ನದಾಗಿಸಿಕೊಳ್ಳುತ್ತಿದ್ದಳು! ಅವರ ಅಡುಗೆ, ತಿಂಡಿಗಳು ಮಾಡುವ ರೀತಿ ತಿಳಿದುಕೊಂಡು ನಮ್ಮ ಮನೆಯಲ್ಲಿ ಮಾಡುವ ತಿಂಡಿಯಲ್ಲಿ, ಅಡುಗೆಯಲ್ಲಿ ಹೊಸ ಆವಿಷ್ಕಾರಗಳು, ಪ್ರಯೋಗಗಳು ನವೀನ ರೂಪವನ್ನು ಪಡೆದುಕೊಳ್ಳುತ್ತಿದ್ದವು. ಮುಖ್ಯವಾಗಿ ಬಿಲ್ಲವರು ಮತ್ತು ಮೊಗವೀರರು ಮಾಡುವ ವಿವಿಧ ರೀತಿಯ ಮೀನಿನ ಪದಾರ್ಥಗಳು, ಸುಕ್ಕ, ಪಲ್ಯಗಳು ಅವುಗಳಲ್ಲಿ ಬಳಸುವ ಸಂಬಾರ ಜೀನಸುಗಳು, ಜೀರಿಗೆ, ಮೆಂತ್ಯ, ಕೊತ್ತಂಬರಿ, ಓಮ, ಸಾಸಿವೆ, ಇಂಗು, ಶುಂಠಿ, ಕಾಳು ಮೆಣಸು, ಊರ ಮೆಣಸು, ಗಾಟಿ ಮೆಣಸು (ಬ್ಯಾಡಗಿ ಮೆಣಸು) ಮುಂತಾದವುಗಳನ್ನು ಬಳಸುವ ಹದ, ರೀತಿ ತಿಳಿದುಕೊಂಡು ಸಾಂಪ್ರದಾಯಿಕ ಬ್ಯಾರಿ ಅಡುಗೆಯಲ್ಲಿ ಹಲವು ರುಚಿಯ, ಸುವಾಸನೆಯ ಆವಿಷ್ಕಾರಗಳು ಉಂಟಾಗುತ್ತಿದ್ದವು.

‘ಹಿಂದುಗಳ ರೀತಿಯ ಅಡುಗೆ’ ಎಂದು ನಮ್ಮಲ್ಲಿ ಕೆಲವರು ಮೂಗುಮುರಿಯುವಂತೆ, ಅವಗಣನೆ ಮಾಡುವ ಗುಣ ನನ್ನಮ್ಮನಲ್ಲಿರಲಿಲ್ಲ! ತನ್ನ ಅಡುಗೆಯ ರುಚಿಯನ್ನು ಹಂಚಿಕೊಂಡು ತಿನ್ನುವ ಮತ್ತು ಇನ್ನೊಬ್ಬರಿಂದ ರುಚಿಯ ವಿಮರ್ಶೆ ಕೇಳುವ ಗುಣ ಅವಳಲ್ಲಿತ್ತು. ಬ್ಯಾರಿ ಅಡುಗೆಗಳಲ್ಲಿ ಮುಖ್ಯವಾಗಿ ಒಂದೊಂದು ಮೀನಿನ ಪದಾರ್ಥದಲ್ಲಿ ಒಂದೊಂದು ರೀತಿ, ಅಂದರೆ ಹೊಳೆ ಮೀನಿನ ವಿಧಗಳಲ್ಲಿ, ಕಾಣೆ, ಪಯ್ಯ, ಕೊಂತಿ, ಮಾಲ ಮುಂತಾದ ಪ್ರತಿಯೊಂದು ಮೀನುಗಳ ಸ್ವಾದದಲ್ಲಿ ವ್ಯತ್ಯಾಸವಿರುವಂತೆ, ವಿವಿಧ ಸಂಬಾರ ಪದಾರ್ಥಗಳ ಬಳಕೆಯಲ್ಲಿ ವ್ಯತ್ಯಾಸ ಉಂಟಾಗುತ್ತಿತ್ತು. ಕೆಲವು ರೀತಿಯ ಮೀನುಗಳಿಗೆ ಖಾರ ಕಮ್ಮಿ ಯಾ ಜಾಸ್ತಿ, ಸೌಮ್ಯ ರೀತಿಯ ವಿವಿಧ ಸಂಬಾರ ಸಾಮಾನುಗಳ ಬಳಕೆ ಒಂದೆಡೆಯಾದರೆ, ಇನ್ನೊಂದು ತರದಲ್ಲಿ ಕಡಲು ಮೀನಿನ ಪದಾರ್ಥ ಮಾಡುವಾಗ ಬಂಗುಡೆ, ಬಯ್ಗೆ, ಶಾಡೆ, ಅಂಜಾಲು, ಅಡೆಮೀನು, ಬೊಳಂಜೀರು ಮುಂತಾದ ವೈವಿಧ್ಯಮಯ ಮೀನುಗಳ ಸಾರಲ್ಲಿ ಬಳಸಲಾಗುವ ಸಂಬಾರ ಪದಾರ್ಥಗಳಲ್ಲಿ ಬದಲಾವಣೆಗಳು ಮೂಡಿಬಂದವು. ನೆರೆಹೊರೆಯ ಮನೆಯಲ್ಲಿ ಮಾಡುವ ಮೂಡೆ, ಪತ್ರೊಡೆ, ಗೋಳಿಬಜೆ, ವಡೆ ಮುಂತಾದ ತಿಂಡಿಗಳು ಕೆಲವೊಂದು ನಮ್ಮ ಅಡುಗೆ ಕೋಣೆಯೊಳಗೆ ಪ್ರವೇಶಿಸಿದವು. ನಮ್ಮ ಮನೆಯಲ್ಲಿ ಬಳಕೆ ಮಾಡುವ ಕ್ರಮವು ನೆರೆಹೊರೆಯವರ ಮನೆಯ ಅಡುಗೆಯ ಮನೆಯಲ್ಲೂ ಮುಖ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಜಾಯಿಕಾಯಿ ದಾಲ್ಚೀನಿಯ ಬಳಕೆಯ ಮೂಲಕ ಬದಲಾವಣೆಯಾದದ್ದಿದೆ! ನಮ್ಮ ತುಪ್ಪದನ್ನ ‘ನೈಚೋರು’ ಪ್ರತಿಷ್ಠರ ಮನೆಯ ಸಮಾರಂಭಗಳಲ್ಲಿ ಪ್ರವೇಶಿಸಿದ್ದವು. ಅಂತೂ ನಮ್ಮಮ್ಮನ ಪ್ರಯೋಗಗಳು ನಿಗೂಢವಾಗಿ ಹಲವು ಕಡೆ ಹಬ್ಬಿದ್ದು ನನಗೆ ಕಂಡು ಬಂದಿತ್ತು! ನಮ್ಮ ಸಂಬಂಧಿಗಳು, ಅತಿಥಿಗಳು ನಮ್ಮ ಮನೆಯ ಊಟ ತಿಂಡಿಯ ರುಚಿಯ ಬಗ್ಗೆ ಹಲವು ಸಲ ಬಾಯಿತುಂಬ ಹೊಗಳಿದ್ದು ನಾನು ಕೇಳಿದ್ದೆ. ಇದರ ಆವಿಷ್ಕಾರಕ್ಕೆ ಹಿಂದುಗಳ ಅಡುಗೆಯ ಪ್ರಭಾವ ಎಂದು ತಿಳಿದುಬಂದಾಗ ಹಲವರು ಮೂಗುಮುರಿದದ್ದು ಕೂಡ ನಾನು ಕಂಡಿದ್ದೆ! ಆದರೆ ನಿಗೂಢ ರೀತಿಯಲ್ಲಿ ನಮ್ಮ ಕುಟುಂಬದ ಸಂಬಂಧಿಕರ ಅಡುಗೆ ಕೋಣೆಗಳಲ್ಲಿಯೂ ಬದಲಾವಣೆಗಳಾದದ್ದು ನನ್ನ ಅನುಭವಕ್ಕೆ ಬಂದ ವಿಶೇಷವಾಗಿತ್ತು! ತನ್ನ ವಿಚಾರಗಳನ್ನು ಗೆಳೆಯರು, ಪರಿಚಿತರೊಂದಿಗೆ ಹಂಚಿಕೊಂಡು, ಇತರರದನ್ನು ತನ್ನದಾಗಿಸಿಕೊಳ್ಳುವ ಗುಣ ಅವಳಲ್ಲಿದ್ದ ಉತ್ತಮ ಮಟ್ಟದ ಸಾಂಸ್ಕೃತಿಕ ಲಕ್ಷಣ ಅಂತ ನನಗೆ ಈಗ ಅನ್ನಿಸುತ್ತಿದೆ.

ಔಷಧಿಯ ಚಮಾತ್ಕಾರ !

ಅಮ್ಮ ಒಂದು ರೀತಿಯಲ್ಲಿ ನಾಟಿ ವೈದ್ಯೆಯೂ ಆಗಿದ್ದಳು. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬರುವ ಸಣ್ಣ ಪುಟ್ಟ- ಕೆಮ್ಮು, ನೆಗಡಿ, ಜ್ವರ, ಹೊಟ್ಟೆ ನೋವು, ಭೇದಿಯಂತಹ ಕಾಯಿಲೆಗಳಿಗೆ ಕಷಾಯದ ಮದ್ದು ಮಾಡುತ್ತಿದ್ದಳು. ಅದು ಆಯುರ್ವೇದವೋ, ಯುನಾನಿಯೋ ಏನೆಂದು ಅವಳಿಗೇ ಗೊತ್ತಿರಲಿಲ್ಲ. ತನ್ನ ಹಿರಿಯರಿಂದ ದೊರಕಿದ ತಿಳುವಳಿಕೆಯಿಂದ ತಯಾರಿಸಿದ ಪುಟ್ಟ ಗುಳಿಗೆಗಳು! ಅದನ್ನು ಬಾಲಗ್ರಹದ ಮಾತ್ರೆ ಎಂದು ಹೇಳುತ್ತಿದ್ದಳು! ಶುಂಠಿ, ತುಳಸಿ, ಸಂಬಾರಬಳ್ಳಿ, ತುಂಬೆರಸ ಮುಂತಾದ ಸಾಮಾನ್ಯವಾಗಿ ತಮ್ಮ ಮನೆಯಂಗಳದಲ್ಲಿ ಜನರು ಬೆಳೆವ ಥರಾವರಿ ಸೊಪ್ಪನ್ನೇ ಬಳಸಿ ಮಾಡುವ ರಸದಲ್ಲಿ ಮಾತ್ರೆಯನ್ನು ಅರೆದು ಮಕ್ಕಳಿಗೆ ಕೊಡಲು ಹೇಳುತ್ತಿದ್ದಳು. ತಂದೆ ಮಸೀದಿಯ ಖತೀಬ್/ಇಮಾಮ್ ಆದುದರಿಂದ ಅವರನ್ನು ಊರಿನ ಜನರೆಲ್ಲ ‘ಮಸೀದಿಯ ಗುರುಗಳು’ ಅಂತಲೇ ಕರೆಯುತ್ತಿದ್ದರು. ಹಾಗಾಗಿ ಅಮ್ಮ ಕೊಡುವ ಮದ್ದಿಗೆ ಒಂದು ರೀತಿಯ ನಿಗೂಢ ಪವಾಡದ ಗುಣ ಬಂದಿತ್ತು! ಅಮ್ಮನನ್ನು ಸುತ್ತಮುತ್ತಲಿನ ಜನ ಗೌರವ ಭಾವನೆಯಿಂದ ಕಾಣುತ್ತಿದ್ದರು. ನಮ್ಮ ಮನೆಯಲ್ಲಿ ಅವಳ ಕಹಿಯಾದ ಔಷಧಿಯ ಪ್ರಯೋಗಗಳು ಮಕ್ಕಳಾದ ನಮ್ಮ ಮೇಲೆ ನಡೆಯುತ್ತಿದ್ದವು! ಬೆಳಗ್ಗೆ ವಾರಕ್ಕೊಮ್ಮೆ ಬರಿ ಹೊಟ್ಟೆಯಲ್ಲಿ ಕಡೆಂಜಿ ಕಾಯಿಯ ಸೊಪ್ಪಿನ ಕಹಿ ಕಷಾಯ, ತಿಂಗಳಿಗೊಮ್ಮೆ ಒಳ್ಳೆದ ಕೊಡಿಯ ಸೊಪ್ಪನ್ನು ಅರೆದು ಮಾಡಿದ ರಸ, ಜೀರಿಗೆ ಕಷಾಯ, ಓಮ ಕಷಾಯ ಇವೆಲ್ಲ ನಾಟಿ ಕಹಿ ಔಷಧಿಗಳ ಪ್ರಯೋಗಕ್ಕೆ ಮಕ್ಕಳಾದ ನಾವು ತುತ್ತಾಗುತ್ತಿದ್ದೆವು! ಅಮ್ಮನ ಇನ್ನೊಂದು ಗುಣವೆಂದರೆ, ಮದುವೆ-ಮುಂಜಿಗಳಿಗೆ, ಹಬ್ಬ-ಹರಿದಿನಗಳಿಗೆ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ನೆರೆಹೊರೆಯ ಬಡ ಹೆಂಗಸರಿಗೆ ಹಾಕಿಕೊಳ್ಳಲು ಕೊಡುತ್ತಿದ್ದುದು. ಸಮಾರಂಭ ಮುಗಿದ ಕೂಡಲೇ ಅವರು ತಪ್ಪದೆ ಹಿಂದೆ ತಂದು ಕೊಡುತ್ತಿದ್ದರು. ನಮ್ಮಮ್ಮನ ಬಳಿ ಹಳೆ ಕಾಲದ ಬ್ಯಾರಿ ಸಾಂಪ್ರದಾಯಿಕ ಶೈಲಿಯ ಗೆಜೆತಿಕ್, ಅವ್ಲ ಮಾಲೆ, ಐದೆಳೆಯ ಸರ ಮುಂತಾದ ಆಭರಣಗಳಿದ್ದವು. ನಮ್ಮೂರಲ್ಲಿ ಯಾರದೇ ಮದುವೆಯಾದರೂ, ಹೊಸ ಜೋಡಿ ಮನೆಗೆ ತಪ್ಪದೆ ಬರುತ್ತಿತ್ತು. ತಿಂಡಿ ತಿಂದು, ಚಾ ಕಾಫಿ ಇಲ್ಲವೇ ಶರಬತ್ತು ಕುಡಿದು ಅಮ್ಮನ ಆಶೀರ್ವಾದ ಪಡೆದು ಹೋಗುತ್ತಿದ್ದರು. ಇದು ಅಮ್ಮನಿಗೆ ಬಹಳ ಸಂಭ್ರಮದ ಜೊತೆಗೆ ಹೆಮ್ಮೆಯ ವಿಷಯವಾಗಿತ್ತು.

ಕೈ ಕಸುಬಿನ ಆಕರ್ಷಣೆ

ನಾನು ಮೊದಲೇ ಹೇಳಿದಂತೆ ಬಿಡುವಿನಲ್ಲಿ ಅಮ್ಮ ಸುಮ್ಮನೆ ಕೂರುವವಳಲ್ಲ! ತನ್ನ ಸ್ವಭಾವಕ್ಕೆ ತಕ್ಕಂತೆ ಅಮ್ಮನಿಗೆ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಆಸಕ್ತಿ ಇತ್ತು. ಬುಟ್ಟಿ, ಚಾಪೆ, ಊಟಕ್ಕೆ ಕೂರುವಾಗ ನೆಲಕ್ಕೆ ಹಾಸುವ ಬ್ಯಾರಿ ಸಂಪ್ರದಾಯದ ‘ಸುಪುರ’ ಎಂಬ ಉರುಟಿನ ಚಾಪೆ, ಈಗಿನ ಚೀಲದಂತೆ ಹಿಂದೆ ಬಳಸಲಾಗುತ್ತಿದ್ದ ಮುಂಡಗನ ಎಲೆಗಳಿಂದ ಮಾಡುವ ‘ಜಂಬುಲಿ’, ಕಾಲೊರೆಸುವ ಚಾಪೆ ಹೆಣೆಯುವುದನ್ನು ತನ್ನ ತವರಿನಲ್ಲಿ ನಮ್ಮಜ್ಜಿಯಿಂದ ಕಲಿತಿದ್ದಳು. ಮಾರುಕಟ್ಟೆಗೆ ಮಾರಲು ಬರುವ ನಮ್ಮ ಕಡೆ ಬ್ಯಾರಿ ಚಾಪೆಗಳೆಂಬ ಹೆಸರಿನ ಮುಂಡಗನ ಒಲಿಯಿಂದ ಮಾಡುವ ಚಾಪೆಗಳು ಇರುತ್ತವೆ. ಅವುಗಳನ್ನು ಮುಂಡಗನ (ಬೇಲಿಗಳಲ್ಲಿ ಸಾಮಾನ್ಯ ಕಂಡುಬರುವ ಕೇದಗೆ ಹೂವಿನ ಗಿಡಗಳ ಪೊದೆ) ಎಲೆಗಳಿಂದ ತಯಾರಿಸಲಾಗುತ್ತದೆ. ಬ್ಯಾರಿಗಳ ಚಾಪೆ ಎಂದೇ ಇದಕ್ಕೆ ಹೆಸರು. ಗೊಡ್ಡರ ಚಾಪೆಗಳಿಗೆ ಮಾರುಕಟ್ಟೆಯಲ್ಲಿ ಮೊದಲನೆ ಸ್ಥಾನವಾದರೆ, ಬ್ಯಾರಿಗಳ ಚಾಪೆಗೆ ಗುಣಮಟ್ಟದಲ್ಲಿ, ಬೆಲೆಯಲ್ಲಿ ಎರಡನೆಯ ಸ್ಥಾನ!

ಇದನ್ನೂ ಅಷ್ಟೇ, ಅಮ್ಮ ಅವಳಿಗಾಗಿ ಕಲಿತು ಮಾಡಿಕೊಂಡಿದ್ದಲ್ಲ. ತಮಗೆ ಗೊತ್ತಿದ್ದ ಬುಟ್ಟಿ, ಚಾಪೆ ಹೆಣೆಯುವುದನ್ನು, ಕಾಲು ಒರೆಸುವ ಚಾಪೆಗಳನ್ನು ತಯಾರಿಸುವುದನ್ನು ಆಸಕ್ತಿ ಇರುವ ನೆರೆಮನೆಯ ಹೆಂಗಸರಿಗೂ ಕಲಿಸುತ್ತಿದ್ದಳು. ಮನೆಯಲ್ಲಿಯೇ ಮಾಡಿಕೊಳ್ಳುವುದರಿಂದ ಖರ್ಚು ಕಡಿಮೆಗೊಳಿಸುವ ವಿಧಾನವೂ ಆಗಿತ್ತಲ್ಲ? ಹಾಗಾಗಿ ಊರಿನ ಹೆಂಗಸರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮ್ಮನನ್ನು ಅವಲಂಬಿಸಿದ್ದರು.

ಪತ್ರೊಡೆಗೆ ಹೊಸ ಆವಿಷ್ಕಾರ

ನಮ್ಮ ಊರಿನ ಬ್ರಾಹ್ಮಣರ ಹೆಂಗಸರೂ ನಮ್ಮ ಮನೆಗೆ ಬಾಳೆ ಎಲೆ ಮತ್ತು ಕೆಸುವಿನ ಎಲೆಗಳಿಗಾಗಿ ಬರುತ್ತಿದ್ದರು. ಬಾಳೆ ಎಲೆ ಊಟಕ್ಕಾದರೆ, ಕೆಸುವಿನ ಎಲೆ ಪತ್ರೊಡೆ ಮಾಡುವುದಕ್ಕೆ. ಹಾಗೆ ಅವರು ನಮ್ಮ ತೋಟಕ್ಕೆ ಬಂದು ಕಿತ್ತುಕೊಂಡು ಹೋಗುವಾಗ, ನನ್ನ ಅಮ್ಮ ಅವರನ್ನೂ ಬಿಡುತ್ತಿರಲಿಲ್ಲ. ಕೆಸುವಿನ ಎಲೆಯಲ್ಲಿ ಮಾಡುವ ಪತ್ರೋಡೆಗೆ ಏನೇನು ಹಾಕುತ್ತೀರಾ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದಳು. ಬ್ರಾಹ್ಮಣ ಹೆಂಗಸರ ಸಂಪರ್ಕದಲ್ಲಿ ನಮ್ಮಮ್ಮ ಕಲಿತ ಪತ್ರೊಡೆಯಲ್ಲಿ ತಂದ ಆವಿಷ್ಕಾರ ಮಾತ್ರ ವಿಶೇಷ ರೀತಿಯದೆಂದು ಎನಿಸಲ್ಪಟ್ಟಿತ್ತು! ಅಮ್ಮ ಮಾಡುತ್ತಿದ್ದ ಪತ್ರೊಡೆ ರುಚಿ, ಆಕಾರದಲ್ಲಿ ಬದಲಾಗಿತ್ತು!. ಆದರೆ ಅದು ಬದಲಾವಣೆ ಹೊಂದಿ, ಅಂದರೆ ಅದರಲ್ಲಿ ಅಕ್ಕಿ, ಬೆಳ್ಳುಳ್ಳಿ, ಮೆಣಸು, ಖಾರ, ಬೆಲ್ಲ, ಜೀರಿಗೆ, ಕೊತ್ತಂಬರಿ, ಮಸಾಲೆ ಹಾಕಿದ ಅರೆಪು ಎಲೆಗೆ ಹಚ್ಚಿ ಸುರುಳಿ ಮಾಡಿ ಹಬೆಯಲ್ಲಿ ಬೇಯಿಸಿ, ನಂತರ ಸುರುಳಿಗಳನ್ನು ಉರುಟಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಒಗ್ಗರಣೆ ಹಾಕಿ ಅದಕ್ಕೆ ಬೇರೆಯೇ ತರದ ರೂಪ, ರುಚಿ ಪಡೆದುಕೊಂಡು ಬ್ಯಾರಿ ಅಡುಗೆಯ ಛಾಪು ಬರುವಂತೆ ಮಾಡಿಕೊಂಡಿದ್ದಳು! ಬ್ರಾಹ್ಮಣರು ಸಾಮಾನ್ಯವಾಗಿ (ಹೆಚ್ಚಾಗಿ) ಊಟಕ್ಕೆ ಪಲ್ಯದ ಥರ ಮಾಡಿದರೆ, ಅಮ್ಮ ಅದನ್ನು ಬೆಳಗ್ಗಿನ ನಾಷ್ಟಾಕ್ಕೆ ತಿಂಡಿಯಾಗಿಸಿ ಹೊಸ ರುಚಿಯನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಳು! ಬ್ರಾಹ್ಮಣರ ಹೆಂಗಸರು ಅಮ್ಮನೊಂದಿಗೆ ಸ್ನೇಹವೇನೋ ಇಟ್ಟುಕೊಂಡಿದ್ದರಾದರೂ ನಮ್ಮ ಮನೆಯ ನೀರನ್ನೂ ಮುಟ್ಟುತ್ತಿರಲಿಲ್ಲ. ಜಗಲಿಯಲ್ಲಿ ಕೂತು ಅದೂ ಇದೂ ಮಾತಾಡಿ ಹೋಗುತ್ತಿದ್ದರು. ಒಮ್ಮಿಮ್ಮೆ ಅವರ ಪೈಕಿ ಸುಶೀಲಮ್ಮ ಎನ್ನುವವರು ನಮ್ಮನ್ನು ಕೆಣಕುವುದೂ ಇತ್ತು! ‘ನೀವು ಮಾಂಸ ಎಲ್ಲ ತಿನ್ನುತ್ತೀರಲ್ಲ? ನಾಯಿ, ಬೆಕ್ಕಿನ ಮಾಂಸವನ್ನೆಲ್ಲ ಯಾಕೆ ತಿನ್ನುವುದಿಲ್ಲ?’ ಎಂದೊಮ್ಮೆ ನನ್ನೊಂದಿಗೆ ಕೇಳಿದ್ದರು. ‘ನೀವು ಸೊಪ್ಪು, ತರಕಾರಿ ಎಲ್ಲ ತಿನ್ನುತ್ತೀರಲ್ಲಾ? ಹಾಗಾದರೆ, ಹುಲ್ಲು, ಸೋಗೆ, ಬೇಲಿಯ ಪೊದೆ, ಕಾಯಿಗಳನ್ನೆಲ್ಲ ಯಾಕೆ ತಿನ್ನುವುದಿಲ್ಲ?’ ಎಂದಿದ್ದೆ. ನಾ ಹಾಗೆ ಹೇಳಿದ್ದಕ್ಕೆ ಅಮ್ಮ ತರಾಟೆಗೆ ತೆಗೆದುಕೊಂಡು, ‘ವಯಸ್ಸಲ್ಲಿ ಹಿರಿಯರೊಂದಿಗೆ ಹಾಗೆಲ್ಲ ಮಾತಾಡಕೂಡದು’ ಎಂದು ಜೋರು ಮಾಡಿದ್ದಳು! ಅಮ್ಮ ಹಬ್ಬದ ದಿನಗಳಲ್ಲಿ ಸುಶೀಲಮ್ಮನಿಗೆ ಬಾಳೆಹಣ್ಣು, ಕಿತ್ತಲೆ ಹಣ್ಣು, ಸೇಬು ತರಿಸಿ ಕೊಡುತ್ತಿದ್ದಳು. ಉಳಿದ ನೆರೆಹೊರೆಯವರಿಗೆ ತಾನು ಮಾಡಿದ ಪಾಯಸ, ರೊಟ್ಟಿ, ತುಪ್ಪದನ್ನ (ನೈಚೋರು), ಕೋಳಿ ಸಾರು ಕೊಡುತ್ತಿದ್ದಳು. ಅವರು ಕೂಡ ಮನೆಯಲ್ಲಿ ಮಾಡಿದ ತಿಂಡಿ, ಅವಲಕ್ಕಿ, ಬೆಲ್ಲ, ಹುರಿಕಡಲೆ ಮುಂತಾದುವನ್ನು ತಮ್ಮ ಹಬ್ಬಗಳ ಸಂದರ್ಭದಲ್ಲಿ ಕೊಡುತ್ತಿದ್ದರು.

ತೌಬಾ ಬೋಧನೆ

ಇನ್ನು ರಮಝಾನ್ ಹಬ್ಬದ ದಿನಗಳಲ್ಲಿ ಮುಸ್ಲಿಂ ಹೆಂಗಸರನ್ನು ಸೇರಿಸಿಕೊಂಡು ಪ್ರತೀ ಶುಕ್ರವಾರ ತೌಬಾ ಮಾಡುವುದನ್ನು ಹೇಳಿಕೊಡುತ್ತಿದ್ದಳು. ಈ ಐದತ್ತು ಹೆಂಗಸರು ಬಂದವರು ಸೇರಿ ರಾತ್ರಿ ತರಾವೀಹ್ ನಮಾಝ್ ಕೂಡ ಮಾಡುತ್ತಿದ್ದರು. ಇಲ್ಲಿಯೂ ಅಮ್ಮನದು ಅದೇ ಚಾಳಿ! ನಮಾಝಿಗೆ ಬರುತ್ತಿದ್ದವರಿಂದ ವಿವಿಧ ರೀತಿಯ ಅಡುಗೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ತನಗೆ ಗೊತ್ತಿರುವ ಬೇರೆ ರೀತಿಯ ಖಾದ್ಯಗಳನ್ನು, ಮುಖ್ಯವಾಗಿ ರಮಝಾನಿನ ಉಪವಾಸದ ಇಫ್ತಾರ್ ಮತ್ತು ಸಹರಿಗೆ ಒಗ್ಗುವ ಅಡುಗೆಗಳ ಮಾದರಿಯನ್ನು ಅವರಿಗೆ ಹೇಳಿಕೊಡುತ್ತಿದ್ದಳು. ಅಮ್ಮ ಎಲ್ಲ ಜಾತಿಯ ಹೆಂಗಸರ ಜೊತೆ ಮಾತನಾಡುವ, ಬೆರೆಯುವ ಗುಣ ಹಲವು ಸಂಪ್ರದಾಯಸ್ಥ ಬ್ಯಾರಿ ಹೆಂಗಸರಿಗೆ ಸರಿ ಕಾಣುತ್ತಿರಲಿಲ್ಲ. ಮಸೀದಿಯ ಖಾಝಿಯವರ ಪತ್ನಿಯಾಗಿ ಹೀಗೆ ನೆರೆಹೊರೆಯ ಹಿಂದೂ ಹೆಂಗಸರೊಂದಿಗೆ ಬೆರೆಯುವ ಗುಣದ ಬಗ್ಗೆ ಸಾಕಷ್ಟು ಟೀಕೆಗೂ, ಕೊಂಕು ಮಾತುಗಳಿಗೂ ಗುರಿಯಾದದ್ದಿದೆ. ಆದಕ್ಕೆಲ್ಲ ತಲೆಕೆಡಿಸಿಕೊಳ್ಳದ ನಮ್ಮಮ್ಮ, ಇದರಲ್ಲೆಂತ ಜಾತಿ ಗೀತಿ ಎಂದು ನಿರ್ಲಕ್ಷಿಸಿ ಸುಮ್ಮನಾಗುತ್ತಿದ್ದರು. ಅವರಿಗೆ ಸಹಜವಾಗಿ ಈ ಗುಣ ಅವರ ರಕ್ತದಲ್ಲಿಯೇ ಬೆರೆತಿತ್ತು ಅಂತ ಕಾಣುತ್ತದೆ. ಅದಕ್ಕೆ ಕಾರಣ ಅಮ್ಮ ಕೃಷಿ ಕುಟುಂಬದಿಂದ ಬಂದದ್ದು ಎನ್ನುವುದು ನನ್ನ ಗ್ರಹಿಕೆ.

ತವರಿನ ಪ್ರಭಾವ

ಅಮ್ಮನ ಊರು ಬಾರ್ಕೂರು ಎಂದೆನಲ್ಲ, ಅಲ್ಲಿ ಅವರದು ಅಣ್ಣಂದಿರು, ತಮ್ಮಂದಿರು, ಅವರ ಹೆಂಡತಿ ಮಕ್ಕಳು ಸೇರಿದ ದೊಡ್ಡ ಸಂಸಾರ, ಕೃಷಿಕರ ಮನೆ, ಜಮೀನಿತ್ತು. ಭತ್ತ, ಕಬ್ಬು, ಮೆಣಸು, ಹುರುಳಿ, ಉದ್ದು, ಹೆಸರು ಬೆಳೆಯುತ್ತಿದ್ದರು. ದೊಡ್ಡ ತೆಂಗಿನತೋಟವಿತ್ತು, ತರಕಾರಿ ಬೆಳೆಯುತ್ತಿದ್ದರು. ಮನೆಯಷ್ಟೇ ದೊಡ್ಡ ಹಟ್ಟಿ ಇತ್ತು. ಅದರಲ್ಲಿ ಹಲವಾರು ದನಕರುಗಳು, ಉಳುವ ಎತ್ತುಗಳು, ಗಾಡಿಗೆ ಕಟ್ಟುವ ಎತ್ತುಗಳು, ಹಾಲಿಗಾಗಿ ಹಸು, ಎಮ್ಮೆ ಕಟ್ಟಿದ್ದರು. ಎತ್ತಿನಗಾಡಿ ಇತ್ತು. ಒಂದು ಕಡೆಯಿಂದ ಇನ್ನೊಂದುಕಡೆ ಪ್ರಯಾಣಿಸಲು ಬಳಸಲಾಗುತ್ತಿತ್ತು. ಆಗೆಲ್ಲ ಮನೆಯಾಳುಗಳು ಅದರೊಳಗೆ ಹುಲ್ಲಿನ ಮೆತ್ತೆ ಮಾಡಿ ಮೇಲೆ ಚಾಪೆಹಾಸಿ ಮನೆಯವರು ಕೂತು ಆರಾಮವಾಗಿ ಪ್ರಯಾಣ ಮಾಡುವ ವ್ಯವಸ್ಥೆ ಮಾಡುತ್ತಿದ್ದರು. ಆಗಮಾತ್ರ ಗಾಡಿಗೆ ಕಮಾನಿನಾಕಾರದ ಮಾಡು ಮೂಡುತ್ತಿತ್ತು. ಗಾಡಿಯೆಳೆಯುವ ಎತ್ತುಗಳ ಕೊಂಬುಗಳಿಗೆ ಬಣ್ಣಬಣ್ಣದ ಗೊಂಡೆಗಳು, ಕುತ್ತಿಗೆಗೆ ಗಲ್‌ಗಲ್ ಎನ್ನುವ ಕಂಚಿನ ಗಂಟೆಗಳು, ಹೂವಿನ ಮಾಲೆ ಹಾಕಲಾಗುತ್ತಿತ್ತು! ಇವನ್ನೆಲ್ಲ ನೋಡಿಕೊಳ್ಳುವುದಕ್ಕೆ ನಾಲ್ಕಾರು ಆಳುಗಳಿದ್ದರು.

ಈ ವಾತಾವರಣದಲ್ಲಿ ಬೆಳೆದಿದ್ದ ಅಮ್ಮನಿಗೆ ಕೃಷಿ ಗೊತ್ತಿತ್ತು ಮಾತ್ರವಲ್ಲ ಆ ಕೆಲಸಗಳಲ್ಲಿ ಆಸಕ್ತಿ ಇತ್ತು. ತವರಿನಲ್ಲಿ ಕಲಿತದ್ದನ್ನು ಬಿಡಬಾರದು ಎಂದು ಅಮ್ಮ, ಇಲ್ಲಿಯೂ ಅದನ್ನು ಮುಂದುವರಿಸಿದ್ದಳು. ನಮ್ಮ ಮನೆಯಲ್ಲಿ ಅಮ್ಮ ದನ, ಕರುಗಳನ್ನು ಸಾಕಿದ್ದಳು. ಹಾಲು ಕರೆದು ಮಾರುತ್ತಿದ್ದಳು. ಆದರೆ ಅವಳದೊಂದು ನಿಯಮವಿತ್ತು. ಅದೇನೆಂದರೆ ಹಾಲಿಗೆ ನೀರು ಬೆರೆಸಬಾರದೆಂಬುದು. ಹಾಗಾಗಿ ನಮ್ಮ ಮನೆಯದು ಗಟ್ಟಿಹಾಲು. ಮಕ್ಕಳಿರುವ ಮನೆಯವರೆಲ್ಲ ಈ ಗಟ್ಟಿಹಾಲು ಪಡೆಯಲು ನಮ್ಮ ಮನೆಗೆ ಬರುತ್ತಿದ್ದರು. ಅದರಲ್ಲಿ ನನಗೆ ಪಾಠ ಹೇಳುತ್ತಿದ್ದ ಮೇಸ್ಟ್ರುಗಳು ಕೂಡ ಇದ್ದರು. ನನಗೀಗಲೂ ನೆನಪಿದೆ, ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗಲೂ ಬಿಡುವಿನಲ್ಲಿ ಮೇಯಿಸಲು ದನಗಳನ್ನು ಪಳ್ಳಿ ಗುಡ್ಡೆಗೆ ಅಟ್ಟಿಕೊಂಡು ಹೋಗುತ್ತಿದ್ದೆ. ಬಿಡುವಿದ್ದಾಗ ಅಕ್ಕನೊಂದಿಗೆ ಗದ್ದೆ ಬಯಲಿಗೆ ಹುಲ್ಲು ಕೊಯ್ದು ತರಲು ಹೋಗುತ್ತಿದ್ದೆ. ಅದು ನಮ್ಮ ಬದುಕಿನ ಭಾಗವೇ ಆಗಿತ್ತು. ಅಮ್ಮ ಕೃಷಿ ಕುಟುಂಬದಿಂದ ಬಂದವಳಾದ್ದರಿಂದ ದನದ ಮಾಂಸ ತಿನ್ನುತ್ತಿರಲಿಲ್ಲ. ಮನೆಯಲ್ಲೂ ಮಾಡುತ್ತಿರಲಿಲ್ಲ. ಅಪ್ಪ, ಹೊರಗಿನವರು ಊಟಕ್ಕೆ ಕರೆದಾಗ ಹೋಗಿ ತಿಂದು ಬರುತ್ತಿದ್ದರೇ ಹೊರತು ಮನೆಗೆ ತರುತ್ತಿರಲಿಲ್ಲ. ಅವಳು ತನ್ನ ಕೃಷಿಕ ಕುಟುಂಬದಲ್ಲಿನ ಆಚರಣೆಯಂತೆ ಬತ್ತದ ಕೊಯ್ಲು ಮುಗಿದ ನಂತರ ಹೊಸ ಅಕ್ಕಿ ಮನೆಯಲ್ಲಿ ಅಡುಗೆ ಮಾಡುವಾಗ ಹೊಸತುಣ್ಣುವ ಹಬ್ಬವನ್ನು ತಪ್ಪದೆ ಆಚರಿಸುತ್ತಿದ್ದಳು. ಹೊಸತುಣ್ಣುವ ಹಬ್ಬ ಮಾಡದೆ ಹೊಸ ಅಕ್ಕಿ ಅಡುಗೆ ಕೋಣೆಯೊಳಗೆ ಬರಲು ಬಿಡುತ್ತಿರಲಿಲ್ಲ. ಇವೆಲ್ಲದಕ್ಕೂ ಕಡು ಸಂಪ್ರದಾಯಸ್ಥ ಮುಸ್ಲಿಮರೆನಿಸಿದ್ದ ನಮ್ಮಪ್ಪನ ಬೆಂಬಲ ಅವಳಿಗಿದ್ದೇ ಇರುತ್ತಿತ್ತು. ಹಲವು ವಿಧದ ತರಕಾರಿಗಳ ವಿಶೇಷ ಅಡುಗೆಯೊಂದಿಗೆ, ಅಪರೂಪಕ್ಕೆ ಒಮ್ಮೆಮ್ಮೆ ಬಲ್ಯಾನದ ಮೀನು ಸಿಕ್ಕರೆ ಮೀನಿನ ಸಾರನ್ನೂ ಮಾಡುತ್ತಿದ್ದಳು !

ಆದರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಬ್ಯಾರಿಗಳು ದನ ಸಾಕುವ ಹಾಗಿಲ್ಲ. ದನ ಮೇಯಿಸಲು ಕೊಂಡುಹೋಗುವುದು ಈಗ ಸಾಧ್ಯವಾಗದು. ದನಗಳನ್ನು ಮೇಯಿಸಲು ಅಟ್ಟಿಕೊಂಡು ಹೋದಾಗ ಕಸಾಯಿಖಾನೆಗೆ ಕೊಡಲು ಹೋಗುತ್ತಿಯಾ ಎಂದು ಹೊಡೆದು ಬಡಿದು ಗಲಾಟೆ ನಡೆದ ಹಲವು ಘಟನೆಗಳು ನಮ್ಮ ಕರಾವಳಿಯಲ್ಲಿ ನಡೆದು ಭಯ ಹುಟ್ಟಿಸಿದೆ! ಬಡಮುಸ್ಲಿಮರು ಹಸುಗಳನ್ನು ಸಾಕಿ ಹಾಲು ಕರೆದು ಮಾರಾಟ ಮಾಡುವುದು, ಹೈನುಗಾರಿಕೆ(ಪೈರಿನ ವ್ಯಾಪಾರ)ಯಲ್ಲಿ ತೊಡಗುವುದು ಅಪಾಯಕರವೆಂದು ಕಂಡುಕೊಂಡು ಕೃಷಿಕರು ಕೂಡ ಹಸು ಕರುಗಳನ್ನು ಸಾಕುವುದನ್ನು ಬಿಟ್ಟುಬಿಟ್ಟಿದ್ದಾರೆ!

ಬ್ಯಾಂಕ್ ನೌಕರನಾಗಿ ಕೆಲಸಕ್ಕೆ ಸೇರಿದ ಮೇಲೆ ವರ್ಗಾವಣೆ ಹೊಂದಿ ಹಲವು ಊರುಗಳನ್ನು ಸುತ್ತಬೇಕಾಗುತ್ತಿದ್ದ (‘ಹೋದಲ್ಲೆಲ್ಲ ಬಿಡಾರ ಹೂಡುವ ಅಲೆಮಾರಿಗಳಂತೆ’ ಎಂದು ಅಮ್ಮ ಹೇಳುತ್ತಿದ್ದಳು!) ನಾನು ಹದಿನೈದು ದಿನಕ್ಕೊಂದು ಸಲ ಊರಿಗೆ ಹೋಗುತ್ತಿದ್ದೆ. ಕಾರ್ಯಬಾಹುಳ್ಯದ ಕಾರಣದಿಂದ ಅದು ತಿಂಗಳಿಗೊಂದು ಸಲವಾಗುತ್ತಿತ್ತು. ನಾನು ಊರಿಗೆ ಬರುವುದನ್ನೇ ಕಾದಿರುತ್ತಿದ್ದ ನಮ್ಮ ಉಮ್ಮ(ಅಮ್ಮ), ಊರಿನಲ್ಲಿ ಆ ಅವಧಿಯಲ್ಲಿ ನಡೆದ ಹುಟ್ಟು, ಸಾವು, ಮದುವೆ, ಉತ್ಸವ ಮುಂತಾದ ಅಷ್ಟೂ ಸಮಾಚಾರಗಳನ್ನು ಚಾಚೂತಪ್ಪದೆ ವರದಿಯೊಪ್ಪಿಸುತ್ತಿದ್ದಳು. ನನಗದನ್ನು ತಿಳಿಯುವ ಆಸಕ್ತಿ ಇರುವುದು ಅವಳಿಗೆ ತಿಳಿದಿತ್ತು. ಆ ವಿವರಗಳು ಹೇಗಿದ್ದವೆಂದರೆ, ನಾನೇ ಊರಿನಲ್ಲಿದ್ದರೂ ಅಷ್ಟು ವಿಷಯಗಳನ್ನು ಖುದ್ದು ಕಂಡು, ಕೇಳಿರಲು ಸಾಧ್ಯವಾಗದಷ್ಟು ಇರುತ್ತಿತ್ತು!

ಬಾವಿಯ ನೀರು ಕುಡಿದು ಬೆಳೆದವರು!

ಈಗ ನಾನು ಊರಿಗೆ ಹೋದರೆ, ಬೀದಿಯಲ್ಲಿ ಸಿಗುವ, ಎದುರಾಗುವ ಜನ ನಿಮ್ಮ ಬಾವಿಯ ನೀರು ಕುಡಿದು, ನಿಮ್ಮ ಅಮ್ಮನ ಕೈ ಊಟ ತಿಂದು ಬೆಳೆದವರು ನಾವು ಎಂದು ಪರಿಚಯಿಸಿಕೊಳ್ಳುತ್ತಾರೆ. ಅದನ್ನು ಕೇಳಿದಾಗ ಹೃದಯತುಂಬಿ ಬರುತ್ತದೆ. ಆ ರೀತಿ ಎಲ್ಲರೊಂದಿಗೆ ಒಂದಾಗುವ ಅಮ್ಮನ ಗುಣ ವಿಶೇಷವಾದದ್ದು. ನಾನು ಬಾಲಕನಾಗಿದ್ದಾಗ ನಮ್ಮ ಗ್ರಾಮದಲ್ಲಿ ಜಾತಿ ಧರ್ಮದ ಪರಿವೆಯೇ ಇರುತ್ತಿರಲಿಲ್ಲ. ಕರ್ನಾಟಕದ ಕಡಲತಡಿಯ ಜಿಲ್ಲೆಯಲ್ಲಿ ಕೊಡುಕೊಳೆಯ, ಎಲ್ಲರೊಂದಿಗೆ ಬೆರೆಯುವ ಗುಣ ಪ್ರಕೃತಿದತ್ತವಾಗಿತ್ತು. ಸಂಪ್ರದಾಯಸ್ಥ ಮುಸ್ಲಿಮರು ಐದು ಬಾರಿ ನಮಾಝ್ ಮಾಡುವುದು, ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಪರಸ್ಪರರ ಪೂಜಾಸ್ಥಳಗಳಿಗೆ ಭೇಟಿ ಮಾಡುವುದು ನೇರ್ಚ, ಹರಕೆ ಹೇಳಿಕೊಳ್ಳುವುದು, ಉತ್ಸವ, ಉರೂಸ್, ಕಂಬಳಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿತ್ತು ಮಾತ್ರವಲ್ಲ ಸಹಜವೆನಿಸಲ್ಪಟ್ಟಿತ್ತು! ಊಟ, ತಿಂಡಿ, ಉಡುಪು, ಕೆಲವೊಂದು ಆಚರಣೆಗಳು ಒಂದೇ ಥರ ಇದ್ದವು. ಮಾಡುವ ರೀತಿಯಲ್ಲಿ ಕೆಲವೊಂದರಲ್ಲಿ ಭಿನ್ನತೆ ಇದ್ದರೂ ಅದು ಸಹಜವೆನಿಸಲ್ಪಡುತ್ತಿತ್ತು. ತನ್ನ ತವರಿಗೆ ಬಿಟ್ಟು ಇನ್ನೆಲ್ಲೂ ಹೋಗದೆ ತನ್ನ ಮನೆವಾರ್ತೆಯಲ್ಲಿ ಮುಳುಗಿರುತ್ತಿದ್ದ ನಮ್ಮಮ್ಮನಲ್ಲಿಗೆ ಬರುತ್ತಿದ್ದ ಹೆಂಗಸರು ‘ನಾವು ನಿಮ್ಮ ಹಾಗೆಯೇ, ನೀವು ನಮ್ಮ ಹಾಗೆಯೇ’ ಎಂದು ಮಾತಿನ ಮಧ್ಯೆ ಹೇಳುತ್ತಿರುವುದು ನಾನು ಹಲವು ಬಾರಿ ಕೇಳಿದ್ದೆ. ತಂದೆಯ ಬಳಿ ಬರುತ್ತಿದ್ದ ಗಂಡಸರು ಎಲ್ಲರೂ ನೀವು ನಾವು(ಬದುಕುತ್ತಿರುವುದು) ಒಂದೇ ಥರ ಎನ್ನುತ್ತಿದ್ದರು. ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಎನ್ನುವ ಘೋಷಣೆಗಳು ನಮ್ಮೂರಿಗೆ ಅಗತ್ಯವೇ ಇರಲಿಲ್ಲ! ನಮ್ಮೂರವರ ಬದುಕಿನಲ್ಲಿ ಸಹಜಗುಣವಾಗಿ ಬೆರೆತುಹೋಗಿತ್ತು. ಒಂದಂತೂ ಸ್ಪಷ್ಟವಾಗಿತ್ತು- ನಮ್ಮ ಹಾಗೆಯೇ ನೀವು; ನಿಮ್ಮ ಹಾಗೆಯೇ ನಾವು ಎನ್ನುವುದು ಪ್ರಕೃತಿಸಹಜವಾಗಿತ್ತು!

***

ನಮ್ಮ ಕೋಟೆ ಗ್ರಾಮದಲ್ಲೊಂದು ಮಸೀದಿ ಇದೆ. ಇದು ಕಟಪಾಡಿ ಮಸೀದಿ ಎಂದೇ ಪರಿಚಿತ! ನಮ್ಮ ತಂದೆ ಆ ಮಸೀದಿಯ ಖತೀಬ್/ಮೌಲ್ವಿಯಾಗಿದ್ದರು. ಅಪ್ಪ ಗಾಂಧೀಜಿ, ನೆಹರೂರನ್ನು ಇಷ್ಟಪಡುತ್ತಿದ್ದರು. ಕಾಂಗ್ರೆಸ್ ಪರವಾಗಿದ್ದರು. ಇದರಿಂದಾಗಿ ಹಲವು ಸಲ ತೊಂದರೆಗಳಿಗೆ ಒಳಗಾಗಿದ್ದರು. ತಂದೆಗೆ ಕನ್ನಡದಲ್ಲಿ ಓದು ಬರಹ ತಿಳಿದಿತ್ತು. ಅರೇಬಿಕ್ ಭಾಷೆ ತಕ್ಕಮಟ್ಟಿಗೆ ಬರುತ್ತಿತ್ತು. ಇಂಗ್ಲಿಷ್ ಕೂಡ ಕಲಿಯುವ ಆಸಕ್ತಿ ಇತ್ತು. ಕೊರಡ್ಕಲ್ ಶ್ರೀನಿವಾಸ ರಾವ್‌ರವರು ಬರೆದು ತನ್ನ ಮಗ ಡಾ. ವೆಂಕಟರಾವ್ ಕೊರಡ್ಕಲ್‌ರವರ ಹೆಸರಲ್ಲಿ ಪ್ರಕಟಿಸಿದ ‘ಸುಲಭದಲ್ಲಿ ಇಂಗ್ಲಿಷ್’ ಎಂಬ ಪುಸ್ತಕದ ಮೂಲಕ ಇಂಗ್ಲಿಷ್ ಕಲಿಯಲು ಪ್ರಯತ್ನಿಸುತ್ತಿದ್ದರು. ನಮ್ಮಮ್ಮನ ಮಕ್ಕಳಲ್ಲಿ ನಾನು ನಾಲ್ಕನೆಯವ. ನನ್ನ ಮೂವರು ಅಕ್ಕಂದಿರು ಶಾಲೆ ಕಲಿತಿದ್ದರು. ಮಸೀದಿಯ ಪಕ್ಕದಲ್ಲಿಯೇ ಬೋರ್ಡ್ ಹಿಂದೂಸ್ತಾನಿ ಸ್ಕೂಲ್ ಇತ್ತು. ಅಲ್ಲಿ ಇಬ್ಬರು ಶಿಕ್ಷಕರಿದ್ದರು. ಇಬ್ಬರಿಗೂ ಕನ್ನಡ ಮತ್ತು ಉರ್ದು ಬರುತ್ತಿತ್ತು. ಮಕ್ಕಳಿಗೆ ಉರ್ದು, ಕನ್ನಡ ಕಲಿಸುತ್ತಿದ್ದರು. 1ರಿಂದ 5ನೆ ತರಗತಿಯವರೆಗೆ ನಾನು ಅಲ್ಲಿಯೇ ಕಲಿತದ್ದು. ಜೊತೆಗೆ ಬೆಳಗ್ಗೆ ಎಂಟರಿಂದ ಒಂಬತ್ತೂವರೆಯ ತನಕ(ಅಂದರೆ ಶಾಲೆಯ ಸಮಯದ ತನಕ) ಮಸೀದಿಯಲ್ಲಿದ್ದ ಮದ್ರಸಾದಲ್ಲಿ ಧಾರ್ಮಿಕ ಪಾಠವನ್ನು ಎಸೆಸೆಲ್ಸಿ ತನಕವೂ ತಪ್ಪದೆ ಕಲಿಯುತ್ತಿದ್ದೆ.

ಊರಿನಲ್ಲಿದ್ದವರಲ್ಲಿ ಹೆಚ್ಚಿನವರು ಬಡವರು. ಅಲ್ಲಿ ಯಾರೂ ಶ್ರೀಮಂತರಿರಲಿಲ್ಲ. ಸರಳ ಬದುಕು. ನಾನು ಮೊಗವೀರರ ಮಕ್ಕಳೊಂದಿಗೆ ಗಾಳದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಬಿಲ್ಲವರ ಮಕ್ಕಳೊಂದಿಗೆ ಊರನ್ನು ಕಾಯುತ್ತದೆ ಎಂದು ಹೇಳಲಾಗುವ ಬೊಬ್ಬರ್ಯ ಭೂತದ ಕೋಲಕ್ಕೆ ಹೋಗುತ್ತಿದ್ದೆ, ಆಗಾಗ ನಮ್ಮ ಗ್ರಾಮದಲ್ಲಿ, ಮಟ್ಟು ಅಂಬಾಡಿ ಗ್ರಾಮಗಳಲ್ಲಿ ನಡೆಯುವ ನೇಮ, ಉತ್ಸವ, ಯಕ್ಷಗಾನ ಬಯಲಾಟ ನೋಡಲು ಹೋಗುತ್ತಿದ್ದೆ. ನಮ್ಮ ಗ್ರಾಮಕ್ಕೆ ದೂರದ ಊರುಗಳಿಂದ ಮೇಳಗಳು, ಯಕ್ಷಗಾನ ತಂಡಗಳು ಮುಖ್ಯವಾಗಿ ಸಾಸ್ತಾನದ ಗೂಳಿ ಗರಡಿ ಮೇಳ(ಜನರು ಇದನ್ನು ‘ಪೂಜಾರ್ಲ ಮೇಳ’ ಎಂದೂ ಕರೆಯುತ್ತಿದ್ದರು), ಪೆರ್ಡೂರು ಮೇಳ ನಮ್ಮ ಊರಿಗೆ ಬರುತ್ತಿದ್ದವು. ಆಗ ಕಲಾವಿದರು ಯಕ್ಷಗಾನದ ಪಾತ್ರಧಾರಿಗಳು ಮಾತ್ರವಲ್ಲ, ಪ್ರಚಾರಮಾಡುವುದು, ಪ್ರಾಯೋಜಕರನ್ನು ಭೇಟಿ ಮಾಡುವುದು, ಬಯಲಾಟದ ಖರ್ಚಿಗಾಗಿ ಧನಸಹಾಯ ಮಾಡುವಂತೆ ಜನರನ್ನು ಕೇಳಿಕೊಳ್ಳುವುದು, ವಂತಿಗೆ ಪಡೆಯಲು ಮನೆಮನೆ ಸುತ್ತುವುದು ಮುಂತಾದ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಪೂಜಾರ್ಲ ಮೇಳದ ಸೂರಪ್ಪ ಎಂಬ ಕಲಾವಿದ ರಾಕ್ಷಸ, ನಾಯಕ, ಹೆಣ್ಣಿನ ವೇಷ ಎಲ್ಲವನ್ನೂ ಸಮರ್ಥವಾಗಿ ಮಾಡುತ್ತಿದ್ದನೆಂದು ನನ್ನ ನೆನಪು! ಈ ರೀತಿ ನಡೆಯುವ ಸಮಾರಂಭಗಳು, ಮದುವೆಗಳು, ನಮ್ಮ ಗ್ರಾಮದಲ್ಲಿರುವ ಮೆಂಡನ್ ಮೂಲಸ್ಥಾನದ ವರ್ಷಂಪ್ರತಿ ಸಮಾರಂಭಗಳಿಗೆ ನಮ್ಮ ಬಾವಿಯ ನೀರೇ ಆಗಬೇಕಾಗಿತ್ತು. ನಮಗಾಗ ಈ ಆಚರಣೆಗಳು, ಉತ್ಸವಗಳು, ಜಾತ್ರೆಗಳು, ಹಬ್ಬಗಳು ನಮ್ಮದಲ್ಲ ಅನ್ನುವ ಆಲೋಚನೆಯೇ ಇರಲಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳ ಭಾಗವಾಗಿ ನೋಡಿ, ಭಾಗವಹಿಸಿ ಆನಂದಿಸುತ್ತಿದ್ದೆವು. ನನ್ನ ಒತ್ತಾಯ, ಆಸಕ್ತಿಗೆ ಸಂಪ್ರದಾಯಸ್ಥರಾಗಿದ್ದ ತಂದೆ ತಾಯಿ ಅಡ್ಡಿಯಾಗುತ್ತಿರಲಿಲ್ಲ!

ಬೇರೆ ಬೇರೆ ಅನ್ನುವ ಅನುಭವ

6ನೆ ಕ್ಲಾಸ್ ಕಲಿಯಲು ನಮ್ಮೂರಿನಿಂದ ಕಟ್ಪಾಡಿ ಪೇಟೆಶಾಲೆಗೆ ಸೇರಿದಾಗ, ನಮ್ಮ ಜಾತಿ ಬೇರೆ, ನಿಮ್ಮ ಜಾತಿ ಬೇರೆ, ಮೇಲು-ಕೀಳು ಎಂಬ ಮಾತುಗಳು ನನ್ನ ಕಿವಿಗಳ ಮೇಲೆ ಬೀಳಲಿಕ್ಕೆ ಶುರುವಾಯಿತು. ನಮ್ಮ ಜಾತಿ ದಲಿತರಿಗಿಂತ ಕೆಳಗಿನ ಐದನೇ ಸ್ಥಾನದ್ದು, ದನ ತಿನ್ನುವ ಜಾತಿ ಎಂದು ಮೇಲ್ಜಾತಿಯ ಹುಡುಗರು ನನಗೆ ಹೇಳುತ್ತಿದ್ದರು! ಅಪ್ಪನಿಗೆ ಊರ ಇತರ ಧಾರ್ಮಿಕ ನಾಯಕರ ಜೊತೆ ನಿಕಟ ಸಂಪರ್ಕವಿತ್ತು. ಅದರಲ್ಲಿ ಬ್ರಾಹ್ಮಣರೂ ಇದ್ದರು. ಅಪ್ಪನನ್ನು ಗುರುಗಳು(ಗುರುಕುಲು) ಎಂದು ಕರೆಯುತ್ತಿದ್ದರು. ಊರಿನ ಮುಸ್ಲಿಮರು, ಹಿಂದುಳಿದ ಜಾತಿಯ ಜನರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಮಸೀದಿಗೆ ಬರುತ್ತಿದ್ದರು. ಅಪ್ಪ ಅವರ ಕಷ್ಟಗಳನ್ನು ಕೇಳಿಕೊಂಡು ಸಮಾಧಾನ ಪಡಿಸುತ್ತಿದ್ದರು. ಲಕ್ಷದ್ವೀಪ, ಮಾಲ್ಡೀವ್ಸ್ ನಿಂದ ಮಸೀದಿಗೆ ಬರುತ್ತಿದ್ದ ಮುಸಾಫಿರ್(ಪ್ರವಾಸಿ)ಗಳಲ್ಲಿ ಹೆಚ್ಚಿನವರು ಸೂಫಿಗಳಾಗಿದ್ದರು. ಅವರು ಇಂತಹ ಜನರ ಸಂಕಷ್ಟಗಳಿಗೆ, ತೊಂದರೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಫಕೀರ್ ಬಾಬಾ ವಲಿಯುಲ್ಲಾಹರ ದರ್ಗಾದಲ್ಲಿ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭಕ್ಕೆ ಇವರೆಲ್ಲರೂ ತಪ್ಪದೆ ಹಾಜರಾಗುತ್ತಿದ್ದರು. ನಮ್ಮೂರಿನ ಉರೂಸಿಗೆ ಹಿಂದೂ-ಮುಸ್ಲಿಮರೆಂಬ ಭೇದವಿಲ್ಲದೆ ಬಹಳ ಜನ ವಿವಿಧ ರೀತಿಯ ಹರಕೆ ಹೊತ್ತುಕೊಳ್ಳುತ್ತಿದ್ದರು. ಉರೂಸ್ ಸಮಾರಂಭದ ಎರಡನೇ ದಿನ ಆಡು/ಕುರಿ ಮಾಂಸದಸಾರು, ತುಪ್ಪದನ್ನ ಊಟವೂ ಇರುತ್ತಿತ್ತು. ಇನ್ನಿತರ ಸಾಮಾನ್ಯ ದಿನಗಳಲ್ಲಿ ಹರಕೆಯ(ನೇರ್ಚೆ) ಬೆಲ್ಲದ ಗಂಜಿಯನ್ನು ಮಸೀದಿಯ ಅಡುಗೆ ಕೋಣೆ ಯಾ ಚಿಲ್ಲಾದಲ್ಲಿ ದೊಡ್ಡ ತಾಮ್ರದ ಡೇಗ್ ಎಂಬ ಹಂಡೆಯಲ್ಲಿ, ಹರಕೆಹೊತ್ತವರು ಅಡುಗೆಯವರಿಂದ ಮಾಡಿಸುತ್ತಿದ್ದರು. ಇದಕ್ಕೆ ಗಂಜಿ ಮಾಲಿದಾ ಪ್ರಸಾದವೆಂದೂ ಹೆಸರಿದೆ. ಬೋಳಂತೆ, ಅಂದರೆ ಬೆಳ್ತಿಗೆ ಅಕ್ಕಿಯಲ್ಲಿ ಮಾಡುವ ನೇರ್ಚದ ಗಂಜಿಯಲ್ಲಿ ಬೆಲ್ಲ, ಕಾಯಿತುರಿ, ಏಲಕ್ಕಿ, ದಾಲ್ಚೀನಿ ಹಾಕಿದ ರುಚಿಯಾದ ದಪ್ಪ ಪಾಯಸ! ಮಸೀದಿಯ ಬಳಿ ಬರುವ ಎಲ್ಲರಿಗೂ ಅದನ್ನು ಹಂಚುತ್ತಿದ್ದರು. ಜನ ಭಕ್ತಿಯಿಂದ ಸ್ವೀಕರಿಸುತ್ತಿದ್ದರು. ಅವರಲ್ಲಿ ಮಸೀದಿಯ ಸಮೀಪದ ಮನೆಗಳಲ್ಲಿ ವಾಸವಿರುವ ಬಡ ಮುಸ್ಲಿಮರು, ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಕೆಲವೊಮ್ಮೆ ಈ ಬಡವರ ಮನೆಯವರು ಈ ಆಹಾರಕ್ಕಾಗಿ ಕಾಯುವುದೂ ಇತ್ತು!

ದೂರದ ಲಕ್ಷದ್ವೀಪದಿಂದ ಧರ್ಮಪ್ರಚಾರಕ್ಕಾಗಿಯೋ, ಪ್ರವಾಸಿಗರಾಗಿಯೋ, ವ್ಯಾಪಾರಕ್ಕಾಗಿಯೋ ಮಂಗಳೂರು ಬಂದರಿಗೆ ಹಡಗುಗಳಿಂದ ಬರುತ್ತಿದ್ದ ಸೂಫಿಗಳು, ಮೌಲ್ವಿ ನಮ್ಮ ಮಸೀದಿಗೂ ಬರುತ್ತಿದ್ದರು. ಹಸಿರು ಪೇಟ, ಹಸಿರು ಬಟ್ಟೆ ಧರಿಸುತ್ತಿದ್ದರು. ಇವರಲ್ಲಿ ಕೆಲವರು ತಂದೆಗೆ ಪರಿಚಿತ ವ್ಯಕ್ತಿಗಳು ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಅವರ ಪ್ರವಚನಗಳೂ ಮಸೀದಿಯಲ್ಲಿ ನಡೆಯುತ್ತಿತ್ತು. ಇದರ ಪ್ರಭಾವ ಊರವರ ಮೇಲೆ ಗಾಢವಾಗಿತ್ತು! ಎಲ್ಲರೂ ನಮ್ಮವರು, ನಮ್ಮಂತೆಯೇ ಇರುವವರು ಎಂಬುದು ಇವರ ಮುಖ್ಯ ಬೋಧನೆಯಾಗಿತ್ತು. ಸರಳ ಬದುಕಿನ ಸೂಫಿಗಳು ಅಲೆಮಾರಿಗಳು. ಎಲ್ಲರ ಒಳಿತನ್ನು ಬಯಸುವವರು. ನಮ್ಮ ತಂದೆ ಆಗಾಗ ಹೇಳುವ ಅವರಿಗೆ ಸಂಬಂಧಿಸಿದ ಕತೆಗಳನ್ನು ಕೇಳಿ ಬೆಳೆದ ನನಗೆ ಸೂಫಿಗಳ ಬಗ್ಗೆ ಆಸಕ್ತಿ ಹುಟ್ಟಲು ಕಾರಣವಾಗಿತ್ತು.

ಮೊಗವೀರ ತಾಂಡೇಲರು ತಮ್ಮ ಬಲೆಗೆ ಮೀನು ಬೀಳಲಿಲ್ಲವೆಂಬ ಕಾರಣಕ್ಕೆ ನಮ್ಮ ತಂದೆಯ ಬಳಿ ಬಂದು ತಮ್ಮ ಬವಣೆಗಳನ್ನು ಹೇಳಿಕೊಳ್ಳುತ್ತಿದ್ದರು. ಒಂದು ಸಲ ಪ್ರಾರ್ಥನೆ ಮಾಡಿ ಗುರುಗಳೇ ಎಂದು ಕೇಳಿಕೊಳ್ಳುತ್ತಿದ್ದರು. ಅವರಲ್ಲೊಬ್ಬ ಕಾಂಪರಣ್ಣ ಅಂತ. ಊರ ಗುರಿಕಾರರಲ್ಲಿ ಒಬ್ಬ. ಅವನು ಮಾರಿ ಬಲೆಯ ತಾಂಡೇಲನೂ ಆಗಿದ್ದ. ಅವನು ತಂದೆಯ ಬಳಿಗೆ ಬಂದು, ಬಲೆಗೆ ಮೀನು ಬೀಳ್ತಿಲ್ಲ, ನೀವೊಂದು ಪ್ರಾರ್ಥನೆ ಮಾಡಿ ಎಂದು ಕೇಳಿಕೊಂಡಿದ್ದ. ದೀವ್‌ನಿಂದ ಬರುವ ಮೌಲ್ವಿಗಳು ಭವಿಷ್ಯ ಕೂಡ ಹೇಳುತ್ತಿದ್ದರು. ನಮ್ಮ ತಂದೆ ಕಾಂಪರಣ್ಣನ ಸಮಸ್ಯೆಯನ್ನು ಈ ಮೌಲ್ವಿಗಳ ಮುಂದಿಟ್ಟಾಗ, ಅವರು ದೀಪ ಹಚ್ಚಿ, ಅಲ್ಲಿಗೆ ಬಂದ ಯಾರಾದರೊಬ್ಬ ಹುಡುಗನನ್ನು ಕೂರಿಸಿ, ಒಂದು ಕಪ್ಪು ವಸ್ತ್ರವನ್ನು ಹೊದಿಸಿ, ಬೆಳಕನ್ನು ನೋಡಲು ಹೇಳುತ್ತಿದ್ದರು. ಆತ ಬೆಳಕಿನಿಂದ ಒಬ್ಬ ವ್ಯಕ್ತಿ ಹೊರಬಂದ, ಬೋಟ್‌ನ ಬಲೆ ಇಡುವ ಜಾಗದಲ್ಲಿ ಏನೋ ಹೂತಿಟ್ಟು ಹೊರಟುಹೋದ ಎಂದೆಲ್ಲ ಹೇಳತೊಡಗಿದ್ದ! ಮರುದಿನ ಮೌಲ್ವಿಯವರು ಬೋಟ್ ನಿಲ್ಲಿಸುವ ಜಾಗಕ್ಕೆ ಕಾಂಪರಣ್ಣನನ್ನು ಕರೆದುಕೊಂಡು ಹೋಗಿ ಏನನ್ನೋ ಅಗೆದು ತೆಗೆಸಿದ್ದರೆಂದು ಹೇಳುವುದು ಕೇಳಿದ್ದೆ.

ಒಂದು ವಾರದ ನಂತರ ಕಾಂಪರಣ್ಣ ಮನೆಗೆ ಬಂದು, ನನ್ನ ಕಷ್ಟ ಕಳೆಯಿತು. ನನ್ನ ಬಲೆಗೆ ಮೀನು ಬಿದ್ದವು. ಎಂದು ಒಂದು ಬುಟ್ಟಿ ತುಂಬ ಬಂಗುಡೆ, ಬೂತಾಯಿ ಮೀನುಗಳನ್ನು ತಂದು ಕೊಟ್ಟಿದ್ದ. ಅಷ್ಟೇ ಅಲ್ಲ ದೀವಿನ ಮಂತ್ರವಾದಿ ಮೌಲ್ವಿಗೆ ಶಾಲು ಹೊದಿಸಿ, ಕೈ ಮುಗಿದು ಕಾಣಿಕೆ ಹಣ ನೀಡಿ ಹೋಗಿದ್ದ. ಇದಿಷ್ಟೆ ಅಲ್ಲ ದನಕರುಗಳಿಗೆ ತೊಂದರೆಯಾದರೂ ಬಂದು ಅಪ್ಪನ ಬಳಿ ಪ್ರಾರ್ಥನೆ ಮಾಡಿಸುತ್ತಿದ್ದರು. ಅಪ್ಪನಿಗೆ ಪವಾಡ, ಮೂಢನಂಬಿಕೆಗಳಲ್ಲಿ ವಿಶ್ವಾಸವಿರಲಿಲ್ಲ. ಆದರೆ ಜನರ ಒಳಿತಿಗಾಗಿ, ಅವರವರ ನಂಬಿಕೆ ಅವರಿಗೆ ಎಂದು ಸುಮ್ಮನಾಗುತ್ತಿದ್ದರು. ಅವರ ದೇವರು ಬೇರೆ, ನಮ್ಮ ದೇವರು ಬೇರೆ ಅನ್ನುವುದು ನನ್ನ ತಿಳಿವಳಿಕೆಗೆ ಬಂದದ್ದು ದೊಡ್ಡವನಾದ ಮೇಲೆ. ಚಿಕ್ಕವನಿದ್ದಾಗ ದೇವರಲ್ಲಿ ಭಯಭಕ್ತಿ ಮೂಡಿತ್ತು. ಆದರೆ ಅದು ಇತರರ ನಂಬಿಕೆಯನ್ನು ಹೀಗೆಳವ, ಭೇದಭಾವ ಹುಟ್ಟಿಸುವ ಮಟ್ಟಕ್ಕೆ ಬೆಳೆದಿರಲಿಲ್ಲ. ಹಾಗೆ ನೋಡಿದರೆ, ನಾವು ಮಾಡುವ ಕೆಲಸಗಳು, ದೇವರ ಭಕ್ತಿಆಚರಣೆಗಳು ಬೇರೆಯಾಗಿರಬಹುದು. ಆದರೆ ನಮ್ಮ ಹಾಗೆಯೇ ನೀವು; ನಿಮ್ಮ ಹಾಗೆಯೇ ನಾವು ಎನ್ನುವುದು ಎಲ್ಲಾ ಕಾಲಕ್ಕೂ ಸಲ್ಲುವ ಸತ್ಯವಾಗಿ ಗೋಚರಿಸುತ್ತಿತ್ತು. ಕುರ್‌ಆನ್‌ನ ಬೋಧನೆಯೂ ಇದೇ ಆಗಿತ್ತು- ‘ಲಕುಂ ದೀನುಕುಂ ವಲಿಯದೀನ್’ ನಿಮ್ಮ ಧರ್ಮ ನಿಮಗೆ ನಮ್ಮ ಧರ್ಮ ನಮಗೆ!

ಕಟಪಾಡಿಯ ಸಂತ ಫಕೀರ್ ಬಾಬಾ ತೋರಿದ ಮಾನವೀಯತೆ

ಕಟ್ಪಾಡಿಯ ಫಕೀರ್ ಸಾಹಿಬ್ ವಲಿಯುಲ್ಲಾಹ್ ಎಂದೇ ಮುಸ್ಲಿಮ್ ವಲಯದಲ್ಲಿ ಪರಿಚಯವಿರುವ ಕಟಪಾಡಿಯ ಫಕೀರ್ ಬಾಬಾ ವಲೀಯುಲ್ಲಾಹ್ ಇಲ್ಲಿಯ ಹಿರಿಯರ ಹೇಳಿಕೆಯಂತೆ ಹದಿಮೂರು ಯಾ ಹದಿನಾಲ್ಕನೆಯ ಶತಮಾನದ ಸೂಫಿ ಸಂತರು. ಈ ನೆಲದ ಗುಣವೋ ಅಥವಾ ಸೂಫಿ ವಲಿಯುಲ್ಲಾಹರ ಗುಣವಿಶೇಷವೋ ಈ ಸಂತ ಕೂಡ ಜಾತಿ ಧರ್ಮಕ್ಕಿಂತ ಮಾನವೀಯತೆಯಲ್ಲಿ ಹೆಚ್ಚು ಆಸಕ್ತಿ ತೋರಿದವರು. ಇವರು ದೀವಿನ ಕಡೆಯಿಂದ ಫಕೀರ್ ಅಥವಾ ಬಡ ಪ್ರವಾಸಿಯಾಗಿ ಇಲ್ಲಿಗೆ ಬಂದರೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೆ. ಈಗಿನ ಆಧುನಿಕ ಮಸೀದಿಯ ಕಟ್ಟಡ ಇರುವ ಜಾಗದಲ್ಲೇ ಹಂಚಿನ ಮಾಡಿನ ಚಿಕ್ಕ ಮಸೀದಿ ಇತ್ತು. ಇಲ್ಲಿಗೆ ಫಕೀರ್ ಬಾಬಾ ಬರುವಾಗ ಮಸೀದಿಯ ಆವರಣದ ಪಕ್ಕದ ನೆರೆಹೊರೆಯಲ್ಲಿದ್ದ ಬಡ ಹಿಂದೂ ಮುಸ್ಲಿಮರ ಮಧ್ಯೆ ವಾಂತಿ ಭೇದಿಯ ರೋಗ ಹಬ್ಬಿತ್ತಂತೆ! ಇಲ್ಲಿ ದಿನವೂ ಒಬ್ಬರಲ್ಲ ಒಬ್ಬರು ಸಾವಿಗೀಡಾಗುತ್ತಿದ್ದರು. ಇದನ್ನು ತಿಳಿದ ಫಕೀರ್ ಬಾಬಾರು ಹಿಂದೂ, ಮುಸ್ಲಿಮ್ ಎಂಬ ಭೇದವಿಲ್ಲದೆ ಮನೆ ಮನೆಗೆ ಹೋಗಿ ಭಯ ಭೀತರಾಗಿದ್ದ ಜನರಿಗೆ ಧೈರ್ಯ ತುಂಬಿ ಸಮಾಧಾನ ಪಡಿಸುತ್ತಿದ್ದರಂತೆ. ದಿನೇ ದಿನೇ ರೋಗ ಉಲ್ಬಣಿಸುತ್ತಿತ್ತೇ ಹೊರತು ಕಮ್ಮಿಯಾಗುವ ಸೂಚನೆ ಕಂಡುಬರಲಿಲ್ಲ! ಫಕೀರ್ ಬಾಬಾ ಮಸೀದಿಯಲ್ಲೇ ಕೂತು ಹಗಲು ರಾತ್ರಿ ಎನ್ನದೆ ದೇವರ ಪ್ರಾರ್ಥನೆಯಲ್ಲಿ ಮಗ್ನರಾದರು ಎನ್ನಲಾಗುತ್ತದೆ. ಕೊನೆಗೆ ರೋಗ ಅವರ ಮೈಮೇಲೆ ಬಂತು ಅನ್ನುವುದಕ್ಕಿಂತ ಹಿರಿಯರು ಹೇಳುವಂತೆ ಪ್ರಾರ್ಥನೆಯ ಮೂಲಕ ತನ್ನ ಮೈ ಮೇಲೆ ಬರಿಸಿಕೊಂಡರು! ಕೆಲವೇ ದಿನಗಳಲ್ಲಿ ಶಕ್ತಿ ಕಳಕೊಂಡ ಬಾಬಾರು ಮಸೀದಿಯೊಳಗೆಯೇ ವಾಂತಿ ಭೇದಿ ಮಾಡಿಕೊಳ್ಳ ತೊಡಗಿದರು. ಮಸೀದಿಯ ಮೇಲ್ವಿಚಾರಕರು, ಊರವರು ಅವರನ್ನು ಮಸೀದಿಯಿಂದ ಹೊರಹಾಕಿದರಂತೆ! ಅಲ್ಲಿಯೇ ತೀರಿಕೊಂಡರು! ಅವರು ಮಾಡಿದ ಜನರು ವಾಂತಿಭೇದಿಯಿಂದ ಆರೋಗ್ಯವಂತರಾದರು ಎಂದು ಹಿರಿಯರು ಹೇಳುತ್ತಾರೆ. ಇದು ಜನರ ನಂಬಿಕೆ. ಆದುದರಿಂದಲೇ ಹಿಂದೂಗಳು ಮುಸ್ಲಿಮರು ಇಲ್ಲಿ ಒಂದಾಗಿ ದರ್ಗಾ ಪ್ರಾರ್ಥನೆಗೆ ನಿಯಾಝ್(ನೇಚೆರ್) ಹರಕೆ ಇಟ್ಟು ಇಂದಿಗೂ ಆಗಮಿಸುತ್ತಾರೆ ಎಂದು ಹೇಳುತ್ತಾರೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)