varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಕಲಾ ವಿಲಾಸಗಳ ನಾಯಕ

ವಾರ್ತಾ ಭಾರತಿ : 3 Nov, 2017
ಸತ್ಯಾ ಕೆ.

"ವಿಲಾಸ್ ನಾಯಕ್ ತನ್ನ 3ನೆ ಹರೆಯದಲ್ಲಿ ಕೈಯಲ್ಲಿ ಬ್ರಶ್ ಹಿಡಿದು ಪೇಪರ್ ಮೇಲೆ ಬಣ್ಣ ಹಚ್ಚುವ ಗೀಳು ಅಂಟಿಸಿಕೊಂಡಿದ್ದವರು. ಸ್ವತಃ ಕಲಿತು ಚಿತ್ರಕಲೆಯನ್ನು ಕರಗತ ಮಾಡಿಕೊಂಡವರು. ಮಂಗಳೂರು ವಿವಿಯಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಕಾರ್ಪೊರೇಟ್ ಸಂಸ್ಥೆ ಯೊಂದರಲ್ಲಿ ಆರು ವರ್ಷ ಸೇವೆ ಸಲ್ಲಿಸಿದವರು. ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಸಿಗುತ್ತಿದ್ದ ಬಿಡುವಿನ ವೇಳೆಯನ್ನು ಕಲೆಗಾಗಿಯೇ ಮೀಸಲಿಡುತ್ತಿದ್ದರು. 2011ರಲ್ಲಿ ಉದ್ಯೋಗವನ್ನು ಬಿಟ್ಟು ಹೃದಯಕ್ಕೆ ಹತ್ತಿರವಾಗಿದ್ದ ಕಲೆಯನ್ನೇ ತನ್ನ ಜೀವಾಳವಾಗಿಸಿಕೊಂಡರು."

ನೀವು ಸುಂದರ ಕೈಗಳನ್ನು ಮತ್ತು ಅದ್ಭುತವಾದ ಕಲ್ಪನೆಗಳನ್ನು ಹೊಂದಿದ್ದೀರಿ... ದೇವರು ನಿಮ್ಮನ್ನು ಆಶೀರ್ವದಿಸಲಿ’’.

2012ರಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂರೆದುರು ತನ್ನ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದಾಗ ಅವರು ಯುವ ಪ್ರತಿಭೆ ವಿಲಾಸ್ ನಾಯಕ್‌ರನ್ನು ಮುಕ್ತಕಂಠದಿಂದ ಹೊಗಳಿ ಅಭಿನಂದಿಸಿದ್ದು ಹೀಗೆ. ವಿಶ್ವದ ಅತ್ಯಂತ ಜನಪ್ರಿಯ ‘ಅತೀ ವೇಗದ ವರ್ಣಚಿತ್ರಕಾರ’ ಎಂಬ ಹೆಗ್ಗಳಿಕೆಯ ವಿಲಾಸ್‌ರ ಕಲಾ ನೈಪುಣ್ಯವನ್ನು ಕಂಡು ಫುಟ್ಬಾಲ್ ದಂತಕತೆ ಪೇಲೆ ‘‘ಇದು ನಂಬಲಸಾಧ್ಯ! ಇದು ಅಪ್ಪಟ ಪ್ರತಿಭೆ’’ ಎಂದು ಮುಕ್ತಕಂಠದಿಂದ ಹೊಗಳಿದ್ದರು. ಬಾಲಿವುಡ್‌ನ ಕಿಂಗ್ ಖಾನ್ ಶಾರುಕ್‌ರಂತೂ ಕಾರ್ಯಕ್ರಮ ವೊಂದರಲ್ಲಿ ನೋಡನೋಡುತ್ತಿದ್ದಂತೆಯೇ ತನ್ನ ಮುಖದ ಚಹರೆಯನ್ನು ಕೇವಲ ಎರಡು ನಿಮಿಷಗಳಲ್ಲೇ ಬಿಳಿ ಪರದೆಯ ಮೇಲೆ ನೋಡಿದಾಗ ವಿಲಾಸ್ ನಾಯಕ್‌ರ ಕೈಚಳಕಕ್ಕೆ ಬೆರಗಾಗಿ, ‘‘ನಿಜಕ್ಕೂ ನಂಬಲಸಾಧ್ಯ. ಇದನ್ನು ಹೇಗೆ ಮಾಡುತ್ತೀ, ನನಗೆ ಅಚ್ಚರಿಯಾಗುತ್ತಿದೆ’’ ಎಂದು ಉದ್ಗರಿಸಿದ್ದರು.

ದೇಶ ವಿದೇಶಗಳ ಗಣ್ಯರಿಂದ ಶ್ಲಾಘನೆ, ಮೆಚ್ಚುಗೆಗೆ ಪಾತ್ರವಾಗಿರುವ ವರ್ಣ ಚಿತ್ರಕಾರ ವಿಲಾಸ್ ನಾಯಕ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯವರು. ತನ್ನ 3ನೆ ಹರೆಯದಲ್ಲಿ ಕೈಯಲ್ಲಿ ಬ್ರಶ್ ಹಿಡಿದು ಪೇಪರ್ ಮೇಲೆ ಬಣ್ಣ ಹಚ್ಚುವ ಗೀಳು ಅಂಟಿಸಿಕೊಂಡಿದ್ದವರು. ಸ್ವತಃ ಕಲಿತು ಚಿತ್ರಕಲೆಯನ್ನು ಕರಗತ ಮಾಡಿಕೊಂಡವರು. ಮಂಗಳೂರು ವಿವಿಯಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದು (ಬಿಎ ಪದವಿಯಲ್ಲಿ 7ನೆ ರ್ಯಾಂಕ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 2ನೆ ರ್ಯಾಂಕ್ ಪಡೆದವರು) ಬೆಂಗಳೂರಿನಲ್ಲಿ ಕಾರ್ಪೊರೇಟ್ ಸಂಸ್ಥೆ ಯೊಂದರಲ್ಲಿ ಆರು ವರ್ಷ ಸೇವೆ ಸಲ್ಲಿಸಿದವರು. ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಸಿಗುತ್ತಿದ್ದ ಬಿಡುವಿನ ವೇಳೆಯನ್ನು ಕಲೆಗಾಗಿಯೇ ಮೀಸಲಿಡುತ್ತಿದ್ದರು. 2011ರಲ್ಲಿ ಉದ್ಯೋಗವನ್ನು ಬಿಟ್ಟು ಹೃದಯಕ್ಕೆ ಹತ್ತಿರವಾಗಿದ್ದ ಕಲೆಯನ್ನೇ ತನ್ನ ಜೀವಾಳವಾಗಿಸಿಕೊಂಡರು.

ಬೃಹತ್ತಾದ ಬಿಳಿ ಕ್ಯಾನ್ವಾಸ್ ಹಾಳೆಯ ಮೇಲೆ ಭಾವಚಿತ್ರವೊಂದರ ರಚನೆಗೆ ಸಾಮಾನ್ಯವಾಗಿ ಹಲವು ನಿಮಿಷಗಳು ಬೇಕು. ವಿಲಾಸ್, ಆ ಹಲವು ನಿಮಿಷಗಳನ್ನು ಕೇವಲ ಎರಡರಿಂದ ಮೂರು ನಿಮಿಷಗಳಿಗೆ ಇಳಿಸಿದರು. ಪ್ರಸ್ತುತ ಅವರ ಬೃಹತ್ ವರ್ಣ ಭಾವಚಿತ್ರ ರಚನೆಯ ಅವಧಿ 2.3 ನಿಮಿಷ. ಅವರ ಕಲೆಯ ಮೇಲಿನ ಪ್ರೀತಿ, ಏಕಾಗ್ರತೆಯ ಹಿಂದೆ ಕಠಿಣ ಪರಿಶ್ರಮವಿದೆ. ವೃತ್ತಿಪರ ತರಬೇತುದಾರರು ಇಲ್ಲದೆಯೇ, ಗ್ರಾಮೀಣ ಪ್ರದೇಶವೊಂದರಿಂದ ಬಂದ ಈ ಕಲಾ ಪ್ರತಿಭೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಮಾತ್ರವಲ್ಲ ವಿಶ್ವದ ಅತೀ ವೇಗದ ವರ್ಣಚಿತ್ರಕಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವಿಲಾಸ್ ಕೈಚಳಕಕ್ಕೆ ಹೊಸ ಜಗತ್ತು ಸೃಷ್ಟಿಸಿದ ರಿಯಾಲಿಟಿ ಶೋ!

ಭಾರತದ ನಂ.1 ಖ್ಯಾತಿಯ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ವಿಲಾಸ್ ನಾಯಕ್‌ರವರ ಕಲಾ ಪ್ರತಿಭೆಗೆ ಹೊಸ ವೇದಿಕೆ ಒದಗಿಸಿತು. ತಪಸ್ಸಿನ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಪೋಷಿಸಿಕೊಂಡು ಬಂದಿದ್ದ ವಿಲಾಸ್‌ರ ಕಲಾ ಪ್ರತಿಭೆ 2012ರಲ್ಲಿ ಈ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧಗೊಂಡಿತು. ನೋಡ ನೋಡುತ್ತಲೇ ನಿಮಿಷಾರ್ಧದಲ್ಲಿ ಬೃಹತ್ತಾದ ಕ್ಯಾನ್ವಾಸ್ ಹಾಳೆಯ ಮೇಲೆ ವಿಭಿನ್ನ ವರ್ಣಚಿತ್ರಗಳು ಮೂಡಿದಾಗ ಶೋನ ತೀರ್ಪುಗಾರರು , ಪ್ರೇಕ್ಷಕರು ದಂಗಾಗಿದ್ದರು.

ಗಣ್ಯರ ಜೊತೆ....

‘ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ 3’ ಅಂತಿಮ ಸುತ್ತಿಗೆ ಆಯ್ಕೆಯಾಗಿ ತನ್ನ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಕೋಟ್ಯಂತರ ವೀಕ್ಷಕರ ಮನಗೆದ್ದ ವಿಲಾಸ್ ನಾಯಕ್‌ರವರ ಕಲಾ ನೈಪುಣ್ಯತೆ ಎಎಕ್ಸ್‌ಎನ್ ಚಾನೆಲ್‌ನಲ್ಲಿ ಪ್ರಸಾರವಾಗುವ ‘ಏಷಿಯಾಸ್ ಗಾಟ್ ಟ್ಯಾಲೆಂಟ್’ ಮತ್ತು ‘ಗಾಟ್ ಟ್ಯಾಲೆಂಟ್ ವರ್ಲ್ಡ್ ಸ್ಟೇಜ್ ಲೈವ್’ನಲ್ಲೂ ಪ್ರೇಕ್ಷಕರ ಮನ ಸೂರೆಗೊಂಡಿತ್ತು. ಅಲ್ಲಿಂದ ವಿಲಾಸ್ ಹಿಂದಿರುಗಿ ನೋಡಲೇ ಇಲ್ಲ. ಭಾರತ ಮತ್ತು ಇತರ 24 ರಾಷ್ಟ್ರಗಳ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಕುಂಚದಲ್ಲಿ ಕಲಾಚಾತುರ್ಯವನ್ನು ಮೆರೆದಿದ್ದಾರೆ ವಿಲಾಸ್ ನಾಯಕ್. ಅಮೆರಿಕದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ, ಸಿಂಗಾಪುರದ ಅಧ್ಯಕ್ಷ ಸ್ಟಾರ್ ಚಾರಿಟಿ ಶೋನಲ್ಲಿ, ಲಂಡನ್‌ನಲ್ಲಿ ನಡೆದ ಏಶಿಯನ್ ಎಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಟಿಮ್ ಡಂಕನರವರ ಎನ್ಬಿಎ ಹಾಫ್ ಟೈಮ್ ಶೋನಲ್ಲಿ, ಅಮೃತಸರದಲ್ಲಿ ನಡೆದ ಹಾರ್ಟ್ ಆಫ್ ಏಶಿಯಾ ಕಾನ್ಫರೆನ್ಸ್, ವಾರಣಾಸಿಯಲ್ಲಿ ಜಪಾನ್ ಪ್ರಧಾನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಎದುರು, ನಿಕಟಪೂರ್ವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಎದುರು, ಭಾರತೀಯ ಯೋಧರ ಸಮ್ಮುಖ, ಇಸ್ರೋ, ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಮಾತ್ರವಲ್ಲದೆ, ಸಾವಿರಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿಯೂ ವಿಲಾಸ್ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ತಮ್ಮ ಕಲಾಕೃತಿಗಳ ಮಾರಾಟದಿಂದ ಸುಮಾರು ಒಂದೂವರೆ ಕೋಟಿ ರೂ. ಸಂಗ್ರಹಿಸಿ ಅರ್ಹರಿಗೆ ನೆರವು ನೀಡಿದ್ದಾರೆ. ಕಲೆಯ ಮೂಲಕ ಶಾಂತಿ, ಸಹಬಾಳ್ವೆ, ಮಹಿಳೆಯರ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಇತ್ಯಾದಿಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ ವಿಲಾಸ್ ನಾಯಕ್ .

ಕುಂಚದ ಮಾಂತ್ರಿಕನಿಗೆಪ್ರಶಸ್ತಿಗಳ ಸರಮಾಲೆ

  • 2013ರಲ್ಲಿ ಮಧುರೈಯಲ್ಲಿ ಜೆಸಿಐನಿಂದ ‘ಭಾರತದ ಶ್ರೇಷ್ಠ ಯುವ ಪ್ರತಿಭೆ’ ಪ್ರಶಸ್ತಿ.
  • 2012ರಲ್ಲಿ ಹೊಸದಿಲ್ಲಿಯಲ್ಲಿ ಎಂಟಟೇನರ್ ಕನೆಕ್ಟ್- ಲೈವ್ ಕೋಶೆಂಟ್ನ ‘ಮೋಸ್ಟ್ ಇನ್ನೋವೇಟಿವ್ ಆ್ಯಕ್ಟ್’ ಇನ್ ಇಂಡಿಯಾ ಪ್ರಶಸ್ತಿ.
  • ಮುಂಬೈನಲ್ಲಿ 2015ರಲ್ಲಿ ರಣವೀರ್ ಸಿಂಗ್ರಿಂದ 22ನೆ ಸೋಲ್ ಲಯನ್ಸ್ ಗೋಲ್ಡ್ ಅವಾರ್ಡ್ ಹಸ್ತಾಂತರ.
  • ಮುಂಬೈನಲ್ಲಿ ವೈಬಿಆರ್ ಕಾರ್ಪ್, ಬ್ರಾಂಡ್ಸ್ ಅಕಾಡಮಿಯಿಂದ ಕಲಾ ವಿಭಾಗದಲ್ಲಿ ‘ಐಕಾನ್ ಆಫ್ ದಿ ಇಯರ್ ಅವಾರ್ಡ್ 2017’.
  • ಹೊಸದಿಲ್ಲಿಯಲ್ಲಿ 2016ರ ‘ಟೈಮ್ಸ್ ಆಫ್ ಇಂಡಿಯಾ ಎಂಟರ್‌ಪ್ರನರ್ಶಿಪ್ ಪ್ರಶಸ್ತಿ’.
  • ಗೋಕುಲಂ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಸಂಗೀತ ದಿಗ್ಗಜರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಹರಿಹರರ್‌ನಿಂದ 2016ರ ಕಲಾರ್ನವ 2016 ಪ್ರಶಸ್ತಿ ಪ್ರದಾನ.
  • ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ‘ಯುವ ಪುರಸ್ಕಾರ 2011’
  • ಮಂಗಳೂರು ವಿಶ್ವವಿದ್ಯಾನಿಲಯದಿಂದ ‘ಸಂಸ್ಥಾಪನಾ ದಿನ ಸನ್ಮಾನ 2017’

 

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)