varthabharthi


ಇ-ಜಗತ್ತು

ಹ್ಯಾಕರ್‌ಗಳು ನಿಮ್ಮ ಮೊಬೈಲ್ ವ್ಯಾಲೆಟ್‌ಗೆ ಹೇಗೆ ಕನ್ನ ಹಾಕುತ್ತಾರೆ ಎನ್ನುವುದು ಗೊತ್ತೇ?

ವಾರ್ತಾ ಭಾರತಿ : 4 Nov, 2017

ಇತ್ತೀಚಿನ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ನೋಟು ಅಮಾನ್ಯದ ಬಳಿಕ ಡಿಜಿಟಲ್ ವ್ಯಾಲೆಟ್‌ಗಳ ಬಳಕೆಯು ಹೆಚ್ಚುತ್ತಿದೆ. ಇದೇ ವೇಳೆ ಹ್ಯಾಕರ್‌ಗಳಲ್ಲಿಯೂ ಈ ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಸೈಬರ್ ಖದೀಮರು ವ್ಯಾಲೆಟ್‌ಗಳಿಗೆ ಕನ್ನ ಹಾಕಲು ಸೋಷಿಯಲ್ ಇಂಜಿನಯರಿಂಗ್ ಸೇರಿದಂತೆ ವಿನೂತನ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.

ಯಾರಾದರೂ ನಿಮ್ಮ ವ್ಯಾಲೆಟ್‌ಗೆ ಕನ್ನ ಹಾಕಿದರೆ ಏನಾಗುತ್ತದೆ? ನೀವು ಹಣವನ್ನು ಕಳೆದುಕೊಳ್ಳುತ್ತೀರಿ. ಆದರೆ ಅದು ಬೇರೆ ಯಾವುದೇ ಮೊಬೈಲ್ ಸಂಖ್ಯೆಗೆ ಸರಳ ವ್ಯಾಲೆಟ್ ವರ್ಗಾವಣೆಯೇ ಆಗಬೇಕೆಂದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹ್ಯಾಕರ್‌ಗಳು ತಾವು ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳಲು ತಮ್ಮ ಮೊಬೈಲ್ ಸಂಖ್ಯೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳುವ ಬದಲು ಮೊಬೈಲ್/ಡಿಟಿಎಚ್ ರೀಚಾರ್ಜ್‌ಗಳಂತಹ ಆನ್‌ಲೈನ್ ಸೇವೆಗಳನ್ನು ಖರೀದಿಸುತ್ತಾರೆ. ಬಳಿಕ ತಮ್ಮಾಂದಿಗೆ ಶಾಮೀಲಾಗಿರುವ ರೀಚಾರ್ಜ್ ಡೀಲರಗಳಿಂದ ಈ ಖರೀದಿಯನ್ನು ನಗದಿಗೆ ಪರಿವರ್ತಿಸಿಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಮೊಬೈಲ್ ವ್ಯಾಲೆಟ್‌ನಲ್ಲಿ ಹೆಚ್ಚು ಹಣವನ್ನು ಇಡಲೇಬೇಡಿ.

 ವ್ಯಾಲೆಟ್‌ಗೆ ಕನ್ನ ಹಾಕುವ ಮೂಲಕ ಅದರಲ್ಲಿ ಶೇಖರವಾಗಿರುವ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನೂ ಹ್ಯಾಕರ್ ಪಡೆಯಬಹುದಾಗಿದೆ. ಹೆಚ್ಚಿನೆಲ್ಲ ವ್ಯಾಲೆಟ್‌ಗಳು ಬಳಕೆದಾರರ ಅನುಕೂಲಕ್ಕಾಗಿ ಕಾರ್ಡ್ ನಂಬರ್ ಮತ್ತು ಇತರ ವಿವರಗಳನ್ನು ಸೇವ್ ಮಾಡುವ ಆಯ್ಕೆಗಳನ್ನು ನೀಡುತ್ತವೆ. ನಿಮ್ಮ ವ್ಯಾಲೆಟ್‌ಗೆ ಕನ್ನ ಹಾಕುವ ಹ್ಯಾಕರ್‌ಗಳು ಈ ವಿವರಗಳನ್ನು ಡಾರ್ಕ್‌ವೆಬ್‌ನ ಭೂಗತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ನಿಮ್ಮ ವ್ಯಾಲೆಟ್ ಸಿವಿವಿ ಅಥವಾ ಎಕ್ಸ್‌ಪೈರಿ ದಿನಾಂಕವನ್ನು ಸ್ಟೋರ್ ಮಾಡಿರದಿದ್ದರೂ ಕದ್ದ ಮಾಹಿತಿಯನ್ನು ನಿಮ್ಮ ಮೇಲೆ ಫಿಷಿಂಗ್ ದಾಳಿಗಳಿಗೆ ಬಳಸಬಹುದಾಗಿದೆ. ನಿಮ್ಮ ಕಾರ್ಡ್ ಮಾಹಿತಿ ಹೊಂದಿರುವ ಸೈಬರ್ ಖದೀಮರು ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ನಿಮ್ಮನ್ನು ನಂಬಿಸಿ ನಿಮ್ಮಿಂದ ನಿರ್ಣಾಯಕ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ನಿಮ್ಮ ಮೊಬೈಲ್ ವ್ಯಾಲೆಟ್ ನೀವು ಎಷ್ಟು ವೆಚ್ಚ ಮಾಡಿದ್ದೀರಿ, ಎಷ್ಟು ಸಲ ಮತ್ತು ಯಾವುದಕ್ಕಾಗಿ ವೆಚ್ಚ ಮಾಡಿದ್ದೀರಿ ಎಂಬ ಎಲ್ಲ ವಿವರಗಳನ್ನು ಸ್ಟೋರ್ ಮಾಡಿಕೊಂಡಿರುತ್ತದೆ. ಹ್ಯಾಕರ್ ಈ ಎಲ್ಲ ಮಾಹಿತಿಗಳನ್ನು ಜಾಹೀರಾತು ಜಾಲಗಳಿಗೆ ಮಾರಿಕೊಳ್ಳಬಹುದು ಅಥವಾ ಟಾರ್ಗೆಟೆಡ್ ಸ್ಕಾಮ್ ನಡೆಸಲು ಬಳಸಿಕೊಳ್ಳಬಹುದು.

 ಹ್ಯಾಕರ್‌ನೋರ್ವ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾನೆ ಮತ್ತು ಹಣವನ್ನು ಕದಿಯಲು ಬಯಸಿದ್ದಾನೆ ಎಂದಿಟ್ಟುಕೊಳ್ಳಿ. ಅದನ್ನು ಅವನು ಎಲ್ಲಿಗೆ ಕಳುಹಿಸುತ್ತಾನೆ? ತನ್ನ ಖಾತೆಗಾ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಹಾಗೆ ಮಾಡಿದರೆ ಸುಲಭವಾಗಿ ಸಿಕ್ಕಿಬೀಳುತ್ತಾನೆ. ಈ ಸ್ಥಿತಿಯಲ್ಲಿ ನಿಮ್ಮ ಮೊಬೈಲ್ ವ್ಯಾಲೆಟ್‌ಗೆ ಕನ್ನ ಹಾಕಿರುವ ಕಳ್ಳ ಅಲ್ಲಿಂದ ಹಣವನ್ನು ಕದ್ದು ನಿಮ್ಮದೂ ಸೇರಿದಂತೆ ಕನ್ನ ಹಾಕಲಾದ ಇತರ ವ್ಯಾಲೆಟ್‌ಗಳಿಗೆ ರವಾನಿಸುತ್ತಾನೆ ಮತ್ತು ಈ ಡಿಜಿಟಲ್ ಹಣವನ್ನು ನಗದೀಕರಿಸಿಕೊಳ್ಳುತ್ತಾನೆ. ಇಂತಹ ಸಂದರ್ಭಗಳಲ್ಲಿ ಕಳವಿಗಾಗಿ ನಿಮ್ಮನ್ನು ದೂರಬಹುದು ಮತ್ತು ನೀವು ತಪ್ಪಿತಸ್ಥರಲ್ಲದಿದ್ದರೂ ಕಾನೂನು ಕ್ರಮ ನಿಮಗೆ ಮರೀಚಿಕೆಯಾಗುತ್ತದೆ. ಏಕೆಂದರೆ ಇದು ಭಾರತದಲ್ಲಿ ಸುದೀರ್ಘವಾಗಿದೆ ಮತ್ತು ಹತಾಶೆ ಮೂಡಿಸುವಂಥದ್ದಾಗಿದೆ.

ಹಾಗಾದರೆ ವ್ಯಾಲೆಟ್‌ನ್ನು ಸುರಕ್ಷಿತವಾಗಿರಿಸುವುದು ಹೇಗೆ? ಯಾವಾಗಲೂ ಅಧಿಕೃತ ಆ್ಯಪ್ ಸ್ಟೋರ್‌ಗಳಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಥರ್ಡ್ ಪಾರ್ಟಿ ಆ್ಯಪ್‌ಸ್ಟೋರ್‌ಗಳಂತಹ ಅಪರಿಚಿತ ಮೂಲಗಳಿಂದ, ವೆಬ್‌ಸೈಟ್ ಪಾಪ್-ಅಪ್‌ಗಳಿಂದ ಅಥವಾ ಎಸ್‌ಎಂಎಸ್/ಇಮೇಲ್‌ಗಳ ಲಿಂಕ್‌ಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಇವು ಮಾಲ್‌ವೇರ್ ಒಳಗೊಂಡಿರ ಬಹುದು ಮತ್ತು ನಿಮ್ಮ ಇ-ವ್ಯಾಲೆಟ್‌ಗಳು ಮತ್ತು ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಹ್ಯಾಕರ್‌ಗೆ ಅವಕಾಶ ಕಲ್ಪಿಸುತ್ತವೆ.

ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಸರಿಯಾಗಿ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ. ಗೂಗಲ್ ಅಥವಾ ಆ್ಯಪಲ್‌ನ ಅಧಿಕೃತ ಸ್ಟೋರ್‌ಗಳಲ್ಲಿ ಲಭ್ಯವಿರುವ ಆ್ಯಪ್‌ಗಳು ಖಂಡಿತವಾಗಿಯೂ ಸುರಕ್ಷಿತ ಎಂಬ ತಪ್ಪುಗ್ರಹಿಕೆ ಹೆಚ್ಚಿನವರಲ್ಲಿದೆ. ಆದರೆ ವಾಸ್ತವ ಹೀಗಿಲ್ಲ. ಗೂಗಲ್ ಪ್ಲೇ ಸ್ಟೋರ್‌ನಲ್ಲಿಯ ಆ್ಯಪ್‌ಗಳು ಮಾಲ್‌ವೇರ್‌ಗಳನ್ನು ಹೊಂದಿರುವ ಮತ್ತು ಬಳಕೆದಾರರ ಮಾಹಿತಿಗಳನ್ನು ಕದಿಯುತ್ತಿರುವ ಹಲವಾರು ಪ್ರಕರಣಗಳು ಇತ್ತೀಚಿಗೆ ಬಹಿರಂಗಗೊಂಡಿವೆ. ಆ್ಯಪ್ ತನಗೆ ಅನಗತ್ಯವಾದ ಮಾಹಿತಿಗಾಗಿ ಅನುಮತಿ ಕೇಳುತ್ತಿದೆ ಎಂದು ನಿಮಗನ್ನಿಸಿದರೆ ಅದನ್ನು ಇನ್‌ಸ್ಟಾಲ್ ಮಾಡಲೇಬೇಡಿ.

ಪ್ರಮುಖ ಆ್ಯಪ್‌ಗಳಿಗೆ ಆ್ಯಪ್ ಲಾಕರ್ ಬಳಸಿ. ಇದು ಮಾಲ್‌ವೇರ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿಯ ಮಾಹಿತಿಗಳ ಕಳ್ಳತನವನ್ನು ತಡೆಯುತ್ತದೆ. ಈ ಆ್ಯಪ್ ಲಾಕರ್‌ಗಳನ್ನು ಅಧಿಕೃತ ಆ್ಯಪ್ ಸ್ಟೋರ್‌ಗಳಿಂದ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಹೆಚ್ಚಾಗಿ ಇವು ಉಚಿತವಾಗಿರುತ್ತವೆ. ಇತ್ತೀಚಿನ ಕೆಲವು ಫೋನ್‌ಗಳಲ್ಲಿ ಈ ಸೌಲಭ್ಯ ಇನ್‌ಬಿಲ್ಟ್ ಆಗಿರುತ್ತದೆ. ಇದನ್ನು ಬಳಸಿ ಪ್ರಮುಖ ಆ್ಯಪ್‌ಗಳಾದ ಇ-ವ್ಯಾಲೆಟ್ಸ್, ಎಸ್‌ಎಂಎಸ್ ಮತ್ತು ಸೆಟ್ಟಿಂಗ್ಸ್ ಅನ್ನು ನೀವು ಲಾಕ್ ಮಾಡಬಹುದು.

ನಿಮ್ಮ ಎಸ್‌ಎಂಎಸ್‌ಗಳನ್ನು ಓದಲು ಯಾವುದೇ ಆ್ಯಪ್‌ಗೆ ಅನುಮತಿ ನೀಡಲೇಬೇಡಿ ಮತ್ತು ಇಂತಹ ಅನುಮತಿಯನ್ನು ಕೇಳುವ ಆ್ಯಪ್‌ಗಳ ಬಗ್ಗೆ ವಿಶೇಷ ಗಮನ ನೀಡಿ. ಈ ಆ್ಯಪ್‌ಗಳಿಗೆ ನೀವು ಅನುಮತಿಯನ್ನು ನೀಡಿದರೆ ಅದು ಎಸ್‌ಎಂಎಸ್ ಮೂಲಕ ರವಾನೆಯಾಗುವ ವನ್ ಟೈಮ್ ಪಾಸ್‌ವರ್ಡ್(ಒಟಿಪಿ)ನ್ನೂ ಓದಬಹುದು. ನಿಮ್ಮ ಫೋನ್ ಬೈ ಡಿಫಾಲ್ಟ್ ಈ ಅನುಮತಿಯನ್ನು ನೀಡಿದ್ದರೆ ಸೆಟ್ಟಿಂಗ್ಸ್‌ಗೆ ಹೋಗಿ ಅನುಮತಿಯನ್ನು ನಿಷ್ಕ್ರಿಯಗೊಳಿಸಿ.

ನಿಮ್ಮ ಒಟಿಪಿಯನ್ನು ಯಾವುದೇ ಕರೆ, ಮೆಸೇಜ್ ಅಥವಾ ಬಾಯಿಮಾತಿನ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ.

 ಸೂಕ್ಷ್ಮ ಡಾಟಾಗಳ ಸಂಪರ್ಕಕ್ಕಾಗಿ ಸಾರ್ವಜನಿಕ ವೈಫೈಯನ್ನು ಎಂದಿಗೂ ಬಳಸಬೇಡಿ. ಈ ಜಾಲದ ಮೂಲಕ ನಿಮ್ಮ ಹಣದ ವಹಿವಾಟು ನಡೆಸಬೇಡಿ. ಸಾರ್ವಜನಿಕ ವೈಫೈ ಜಾಲಗಳು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವುದಿಲ್ಲ, ಹೀಗಾಗಿ ಹ್ಯಾಕರ್‌ಗಳು ನಿಮ್ಮ ರಹಸ್ಯ ಡಾಟಾಗಳನ್ನು ಕಳ್ಳತನ ಮಾಡಲು ಸುಲಭವಾಗು ತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)