varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಕಥೆಗಳಿಗೆ ನಮಸ್ಕಾರ

ವಾರ್ತಾ ಭಾರತಿ : 5 Nov, 2017
ಡಾ. ನಾಗತಿಹಳ್ಳಿ ಚಂದ್ರಶೇಖರ

ನವ್ಯದ ಸಂಕೀರ್ಣತೆಯಲ್ಲಿ ಸಿಕ್ಕು ಹಾಕಿಕೊಂಡು ಒದ್ದಾಡುತ್ತಿದ್ದ ಕನ್ನಡ ಕಥಾಲೋಕವನ್ನು ತನ್ನ ನವಿರು ಬೆರಳುಗಳ ಮೂಲಕ ಬಿಡಿಸಿ, ಅದಕ್ಕೆ ಹೊಸ ಸ್ವರ ಮಾಧುರ್ಯವನ್ನು ಕೊಟ್ಟವರು ಡಾ. ನಾಗತಿ ಹಳ್ಳಿ ಚಂದ್ರಶೇಖರ್. ಹೊಸ ತಲೆಮಾರೊಂದು ನಾಗತಿಹಳ್ಳಿ ಕತೆಗಳ ಹುಚ್ಚು ಹಿಡಿಸಿಕೊಂಡು ಓದತೊಡಗಿತು. ಅವರ ನಿರೂಪಣಾ ಶೈಲಿ, ಕತೆ ಹೇಳುವ ತಂತ್ರ ಮುಂದೆ ಒಂದು ಹೊಸ ಮಾರ್ಗವಾಗಿ ಬದಲಾದುದು ಇತಿಹಾಸ. ಇಲ್ಲಿ ತನ್ನ ಕತೆಗಳ ಕಾಲವನ್ನು ಕತೆಗಾರ ನಾಗತಿಹಳ್ಳಿ ಮೆಲುಕು ಹಾಕಿಕೊಂಡಿದ್ದಾರೆ.

ಮುವ್ವತ್ನಾಲ್ಕು ವರ್ಷದ ಹಿಂದೆ ನಾನು ಬರೆದದ್ದು. ನನಗೆ ಮರೆತುಹೋದರೂ ಓದಿದವರಿಗೆ ನೆನಪಿನಲ್ಲಿರುತ್ತದೆ. ಕೇಳು ಜನಮೇಜಯ ಕಾಲದಿಂದ ಓದುಗರ / ಕೇಳುಗರ ನೆನಪಲ್ಲಿ ಗಟ್ಟಿಯಾಗಿ ಉಳಿಯೋ ಪ್ರಯತ್ನವನ್ನು ಸಾಹಿತ್ಯ ಮಾಡುತ್ತಲೇ ಬಂದಿದೆ. ನಿಜವಾದ ಸಾಹಿತ್ಯಕ್ಕೆ ಒಂದು ವಿಚಿತ್ರ ಹಟ ಇರುತ್ತದೆ. ಅದು ಜಾತಿವಾದಿಗಳಿಗೆ, ಧರ್ಮಾಂಧರುಗಳಿಗೆ ಹೇಗಾದರೂ ಮನುಷ್ಯನಾಳದ ಸಹಜತೆ, ನೈಸರ್ಗಿಕತೆ ಮತ್ತು ವಾಸ್ತವವನ್ನು ಅರ್ಥಮಾಡಿಸಿ ಎಲ್ಲರೂ ಪ್ರೀತಿಯಿಂದ ಬದುಕಿರಿ ಎಂದು ತಿದ್ದುವ ಹಟ. ಆದ್ದರಿಂದಲೇ ಕಥೆಗಳಿಗೆ ನಮಸ್ಕಾರ.

ಮುಖಾಮುಖಿ:

ನಾನು ಕಥೆಗಾರ. ಕಥೆಗಳು ನನ್ನ ವ್ಯಕ್ತಿತ್ವ. ಅವು ಬದುಕನ್ನು ಭಿನ್ನವಾಗಿ ನೋಡಲು ಮತ್ತು ವಿಸ್ತಾರವಾಗಿ ಗ್ರಹಿಸಲು ಸೂಚಿಸಿವೆ. ಇವು ಅಂತಃಕರಣವನ್ನು ಸೂಕ್ಷ್ಮವಾಗಿರಿಸಿವೆ. ಆತ್ಮಸಾಕ್ಷಿಗೆ ತಪ್ಪು ಅನ್ನಿಸಿದ್ದನ್ನು ತಪ್ಪು ಎಂದು ಗಟ್ಟಿಯಾಗಿ ಹೇಳಲು ಧೈರ್ಯ ಕೊಟ್ಟಿವೆ. ದಂಗೆ ಏಳುವ ಹಕ್ಕನ್ನು ಕಾಯ್ದಿರಿಸಿವೆ. ಹಂಚಿ ಉಣ್ಣುವ ಅಗತ್ಯವನ್ನು ಮನದಟ್ಟು ಮಾಡಿವೆ. ಹುಟ್ಟಿ ಬೆಳೆಸಿದ ತಾಯಿ ಬೇರನ್ನು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿವೆ. ನನ್ನ ಹಳ್ಳಿಗೆ ಮತ್ತೆ ಮತ್ತೆ ಗಂಟು ಹಾಕಿಕೊಳ್ಳಲು ನೆರವಾಗಿವೆ. ಈ ಕಥೆಗಳು ನಲವತ್ತು ವರ್ಷ ನನ್ನ ಸಂಗಾತಿಗಳಾಗಿ ಕೈ ಹಿಡಿದು ನಡೆಸಿವೆ. ಕಡುಬಡತನ, ಹಸಿವು ಅವಮಾನಗಳನ್ನೆಲ್ಲ ಘನತೆಯಿಂದ ಎದುರಿಸಲು ಕಲಿಸಿವೆ. ಮಾತಲ್ಲಿ ಮನೆ ಕಟ್ಟುವ, ಹುಸಿ ವೇದಾಂತ ನುಡಿಯುವ, ಜನರ ಪೊಳ್ಳುತನವನ್ನು ಗುರುತಿಸುವ ಶಕ್ತಿಯನ್ನು ತಂದುಕೊಟ್ಟಿವೆ. ಮಮತೆಗೆ ಕರಗುವುದನ್ನು, ಸತ್ಯಕ್ಕೆ ಆದಷ್ಟು ಸಮೀಪವಾಗಿರುವುದನ್ನು ತಿಳಿಯ ಹೇಳಿವೆ. ಚಿಲ್ಲರೆ ಲಾಭಗಳಿಗೆ ಮಾರಿಕೊಳ್ಳದಂತೆ ಗದರಿವೆ. ಧೂರ್ತತನದಿಂದ ದೂರವಿರುವಂತೆ ಎಚ್ಚರಿಸಿವೆ. ತಿಳಿಯದ್ದನ್ನು ತಿಳಿದಿಲ್ಲ ಎನ್ನುವ ವಿವೇಕ, ತಿಳಿದಿರುವುದರ ಬಗ್ಗೆ ಹೆಮ್ಮೆಪಡುವ ಆತ್ಮವಿಶ್ವಾಸ-ಇದೆಲ್ಲ ಕಥೆಗಳಿಂದ ದಕ್ಕಿದ ಸೌಭಾಗ್ಯ. ಮಾತು, ಯೋಚನೆಗಳಾಚೆಗೆ ಕೃತಿಯ ಹೊಣೆಗಾರಿಕೆಯನ್ನು ನನ್ನ ಪ್ರೀತಿಯ ಕಥೆಗಳು ಹೊರಿಸಿವೆ. ಉಡುಗಿ ಹೋಗದೆ ಹೊರ ಬಂದ ಒಳದನಿಗಳು ಈ ಕಥೆಗಳು. ಸಾಮಾಜಿಕ ಕಾಯಕಲ್ಪಕ್ಕೆ ಸರಿಯಾದ ಸಿದ್ಧಾಂತಗಳು ಯಾವುವು? ವ್ಯಕ್ತಿತ್ವದ ಉನ್ನತಿಗೆ ನಿಜಕ್ಕೂ ಬೇಕಿರುವ ವೌಲ್ಯಗಳು ಯಾವುವು? ಎಲ್ಲ ಪ್ರಶ್ನೆಗಳಿಗೂ ಕಥೆಗಳೇ ತೋರುಗಂಬ. ಯಾವ ಧರ್ಮಗ್ರಂಥಗಳೂ ಹೇಳಿಕೊಡಲಾಗದ ನೀತಿ-ಅನೀತಿಯ ಪಾಠಗಳನ್ನು ಹೇಳಿಕೊಟ್ಟ, ಯಾರ ಹಂಗಿಲ್ಲದೆ ಬದುಕಬಹುದೆಂದು ತೋರಿಸಿಕೊಟ್ಟ ಕಥೆಗಳಿಗೆ ನಮಸ್ಕಾರ.

ಇದು ‘ಕಥಾಯಾತ್ರೆ’ ಎಂಬ ನಾಲ್ಕುನೂರು ಪುಟಗಳ ದಪ್ಪ ಪುಸ್ತಕ. ‘ಬೃಹತ್ ಗ್ರಂಥ’ ಎಂದರೆ ಒಗ್ಗುವುದಿಲ್ಲ. ದಪ್ಪ ಪುಸ್ತಕಾನೇ ಸರಿ. ವಯಸ್ಸಾದ ಚಿಕ್ಕ ಮಗುವಿನಂತೆ ನನ್ನ ತೊಡೆ ಮೇಲೆ ಕೂತಿದೆ. ಇದಕ್ಕೆ ‘ನನ್ನ ಕಥಾಯಾತ್ರೆ’ ಅಂತ ಹೆಸರಿಟ್ಟಿಲ್ಲ. ಯಾಕೆಂದರೆ ಇದು ನನ್ನೊಬ್ಬನ ಯಾತ್ರೆ ಅಲ್ಲ; ನನ್ನ ಓದುಗರದೂ. ನನ್ನ ವಾರಗೆಯ ಕಥೆಗಾರರದೂ. ಬಹುತೇಕ ನಾಲ್ಕು ದಶಕ ಒಟ್ಟಿಗೇ ನಡೆದಿದ್ದೇವೆ. ಎಂಟನೆ ಕ್ಲಾಸಿನಲ್ಲಿ ಬರೆದ ಆವರ್ತದಿಂದ ಹಿಡಿದು ಮೊನ್ನೆ ಮೊನ್ನೆ ಬರೆದ ಆತ್ಮಗೀತದವರೆಗೆ. ಈ ಎಲ್ಲ ಕಥೆಗಳಿಗೆ ನಮಸ್ಕಾರ.

 ಕೀರ್ತಿವಂತರಾದ ಮಕ್ಕಳು ಎಲ್ಲಿದ್ದರೂ ಹೇಗಿದ್ದರೂ ಹೆತ್ತವರ ಹೆಸರು ಉಳಿಸುವಂತೆ ಇಲ್ಲಿ ಕೆಲವು ಉತ್ತಮ ಕಥೆಗಳಿವೆ. ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಅನಿಸುತ್ತದೆ ಕೆಲವು ಕಥೆಗಳನ್ನು ಓದಿದಾಗ. ಅವು ಗಟ್ಟಿಮುಟ್ಟಾಗಿರಲಿ, ಕೃಶವಾಗಿರಲಿ ನಮ್ಮ ಮಕ್ಕಳೇ. ಮರುಓದಿನ ಸುಖಕ್ಕಾಗಿ ಅವನ್ನು ತಿದ್ದಲಾರೆ. ಫೋಟೊಶಾಪ್ ಬಳಸಿ ಸಣ್ಣ ಐಬು ತಿದ್ದಿ ಕಪ್ಪನ್ನು ವರ್ಣಮಯಗೊಳಿಸಿ ಸಿಂಗರಿಸುವುದನ್ನು ಕಥೆಗಾರ ಮಾಡಬಾರದು. ಬರವಣಿಗೆಯಲ್ಲಿ ಚಿರಾಯು, ದೀರ್ಘಾಯು ಮತ್ತು ಅಲ್ಪಾಯುಗಳೆಂಬ ಮೂರು ಗುಂಪಿರುತ್ತವೆ. ಅಲ್ಪಕಾಲೀನ ತುರ್ತಿಗೆ ಬರೆದದ್ದು ಚಿರಾಯುವಾಗಿ ಉಳಿದುಬಿಡುವಂತೆಯೇ, ಚಿರಾಯುವಾಗಲೆಂದು ತಪಸ್ಸು ಮಾಡಿ ಬರೆದದ್ದು ಅಲ್ಪಾಯುವಾಗಿಬಿಡುತ್ತದೆ. ಇದು ಬರವಣಿಗೆಗಿರುವ ಮಾಂತ್ರಿಕ ಶಕ್ತಿ. ಕಾಲನೆಂಬ ವಿಮರ್ಶಕ ಅಂಕ ನೀಡುತ್ತಾನೆ. ಪೂರ್ವಾಗ್ರಹಮುಕ್ತನಾದ ಇವನಲ್ಲಿ ಮಾತ್ರ ನನಗೆ ಗಾಢ ವಿಶ್ವಾಸ. ಏಕೆಂದರೆ ತಿಳಿಸಾರು, ಕೋಸಂಬರಿಯ ವಿಮರ್ಶಕರೂ; ನಾಟಿಕೋಳಿ ಮುದ್ದೆಯ ವಿಮರ್ಶಕರೂ ಬೇಜವಾಬ್ದಾರಿತನದಲ್ಲಿ ಸಮಾನ ಅಪಾಯಕಾರಿಗಳಾಗಿದ್ದಾರೆ. ಗುಂಪುಗಾರಿಕೆಯಲ್ಲಿ ಮುಳುಗಿದ್ದಾರೆ. ನನ್ನೊಳಗೆ ಹುಟ್ಟಿದ ಮಾತನ್ನು ಮುಟ್ಟಿ ನೋಡಿಕೊಳ್ಳುವಂತೆ ನೊಚ್ಚಗಾಗುವಂತೆ ಬಹುಕಾಲ ನಿಲ್ಲುವಂತೆ ಬರೆಯಬಲ್ಲೆ ಎಂಬುವುದು ನನ್ನ ಶಕ್ತಿ ಮತ್ತು ದೌರ್ಬಲ್ಯ. ಎಲ್ಲೋ ಏನೋ ನೋಡುತ್ತಾ ನಿಂತಿರುವಾಗ ಯಾರೋ ಬಂದು ಯಾವುದೋ ಕಥೆಯ ಪಾತ್ರವನ್ನು, ಮಾತನ್ನು, ಘಟನೆಯನ್ನು ಧೇನಿಸಿ ಸಚಿತ್ರವಾಗಿ ವಿವರಿಸುತ್ತಾರೆ. ಮೊನ್ನೆ ಗುಬ್ಬಚಿಯಂಥ ಗೌರಿಯ ಮೇಲೆ ಗಿಡುಗ ಗುಂಡು ಹಾರಿಸಿದ ದಿನಗಳಲ್ಲಿ ಎಲ್ಲ್ಲ ಕಡೆ ಮತಾಂಧತೆ, ಜಾತ್ಯತೀತತೆ ಶಬ್ದಗಳು ಭಾರೀ ಚಲಾವಣೆಯಲ್ಲಿದ್ದವು. ಆಗ ಓದುಗನೊಬ್ಬ ಬಂದು ಕಿವಿಯಲ್ಲಿ ಹೇಳಿದ. ‘‘ಆ ಕಥೇನಲ್ಲಿ ಅದೆಷ್ಟು ವ್ಯಂಗ್ಯ ಇದೆ, ಅದೆಷ್ಟು ಸತ್ಯ ಇದೆ, ಮರೆಯೋಕೆ ಆಗಲ್ಲ! ಕಥೆ ಹೆಸರು ‘ಸರಸ್ವತಿಪುರದಲ್ಲೊಂದು ಹೆಬ್ಬೆಟ್ಟಿನ ಗುರುತು’. ಆ ಶೀರ್ಷಿಕೇನೇ ಡಿಸ್ಟರ್ಬ್ ಮಾಡುತ್ತೆ. ಅಂತರ್‌ಜಾತಿ ಮದುವೆ, ದುರಂತ ಎಲ್ಲಾ ಕಾಡುತ್ತೆ. ಅದರಲ್ಲೊಂದು ಮಾತು ಬರುತ್ತೆ. ‘ಈ ದೇಶ ಜಾತ್ಯಾತೀತ ಆಗಿರುವುದು ಅನೈತಿಕ ಸಂಬಂಧಗಳಲ್ಲಿ ಮಾತ್ರ’. ಈ ಮಾತು ಅನೇಕರಿಗೆ ಮೆಟ್ಟಲ್ಲಿ ಹೊಡೆದ ಹಾಗಿದೆ...’’ ಮುವ್ವತ್ನಾಲ್ಕು ವರ್ಷದ ಹಿಂದೆ ನಾನು ಬರೆದದ್ದು. ನನಗೆ ಮರೆತುಹೋದರೂ ಓದಿದವರಿಗೆ ನೆನಪಿನಲ್ಲಿರುತ್ತದೆ. ಕೇಳು ಜನಮೇಜಯ ಕಾಲದಿಂದ ಓದುಗರ / ಕೇಳುಗರ ನೆನಪಲ್ಲಿ ಗಟ್ಟಿಯಾಗಿ ಉಳಿಯೋ ಪ್ರಯತ್ನವನ್ನು ಸಾಹಿತ್ಯ ಮಾಡುತ್ತಲೇ ಬಂದಿದೆ. ನಿಜವಾದ ಸಾಹಿತ್ಯಕ್ಕೆ ಒಂದು ವಿಚಿತ್ರ ಹಟ ಇರುತ್ತದೆ. ಅದು ಜಾತಿವಾದಿಗಳಿಗೆ, ಧರ್ಮಾಂಧರುಗಳಿಗೆ ಹೇಗಾದರೂ ಮನುಷ್ಯನಾಳದ ಸಹಜತೆ, ನೈಸರ್ಗಿಕತೆ ಮತ್ತು ವಾಸ್ತವವನ್ನು ಅರ್ಥಮಾಡಿಸಿ ಎಲ್ಲರೂ ಪ್ರೀತಿಯಿಂದ ಬದುಕಿರಿ ಎಂದು ತಿದ್ದುವ ಹಟ. ಆದ್ದರಿಂದಲೇ ಕಥೆಗಳಿಗೆ ನಮಸ್ಕಾರ.

ಪ್ರಾತಿನಿಧಿಕವಾದ ನಲವತ್ತೊಂದು ಕಥೆಗಳನ್ನು ಅಡಗಿಸಿಕೊಂಡಿರುವ ಈ ಪುಸ್ತಕವನ್ನು ಓದಿನ ಅನುಕೂಲಕ್ಕೆ ಗ್ರಾಮಮುಖಿ, ನಗರಮುಖಿ, ಪ್ರೇಮಮುಖಿ ಇತ್ಯಾದಿ ವಿಭಾಗಿಸಲಾಗಿದೆ. ಇದೊಂದು ಸ್ಟುಪಿಡ್ ವರ್ಗೀಕರಣ. ನಿಜ ಹೇಳಬೇಕೆಂದರೆ ಕಥೆಗಳು ಈ ವಿಭಾಗೀಯ ನಿಯಂತ್ರಣ ರೇಖೆಯನ್ನು ಕದ್ದು ದಾಟುತ್ತವೆ. ಒಂದರೊಳಗೊಂದು ಬೆರೆತು ಕಲಸುಮೇಲೋಗರವಾಗುತ್ತವೆ. ನಾವು ಮಾತ್ರ ಅಧ್ಯಯನದ ಅನುಕೂಲಕ್ಕಾಗಿ ಎಲ್ಲತರ ನಡುವೆ ಗೆರೆ ಎಳೆಯುತ್ತಲೇ ಇರುತ್ತೇವೆ. ಕತೆಗಳಿಗಿರುವುದು ಎರಡೇ ಗುರಿ. ವ್ಯಷ್ಟಿ ಮತ್ತು ಸಮಷ್ಟಿ. ಅದಕ್ಕಾಗಿ ಕಥೆಗಳಿಗೆ ನಮಸ್ಕಾರ.

ಗ್ರಾಮಮುಖಿ:

ಬನ್ನೇರಿ ಎಂಬುದು ಕಾಲಾತೀತವಾದ ದೇಶಾತೀತವಾದ ಪಾತ್ರ. ಅವಳು ಕೋಟ್ಯಂತರ ಗ್ರಾಮೀಣ ಮಹಿಳೆಯರ ಪ್ರತಿನಿಧಿ. ಈ ಮಣ್ಣಿನ ಮಕ್ಕಳು ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಯಾವುದಾದರೂ ಕಾಲದಲ್ಲಿ ಬವಣೆಮುಕ್ತರಾಗಿ ನೆಮ್ಮದಿಯಿಂದ ಬದುಕಿದ ಸಾಕ್ಷಿಗಳಿಲ್ಲ. ನಾನು ಆಫ್ರಿಕಾ, ಚೀನಾ, ನೇಪಾಳ, ಶ್ರೀಲಂಕಾ ಮುಂತಾದ ದೇಶಗಳ ಹಳ್ಳಿಗಳನ್ನು ಕಂಡಿದ್ದೇನೆ. ಕತ್ತೆದುಡಿತ, ಗಂಡಸಿನ ದರ್ಪ, ಲೈಂಗಿಕ ಶೋಷಣೆ, ಮೂಲಭೂತ ಅವಕಾಶಗಳಿಂದ ವಂಚನೆ, ಅಜ್ಞಾನ, ವೌಢ್ಯ... ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬನ್ನೇರಿಯ ಗಂಡ ಸಿದ್ರಾಮ ಪುಡಿರಾಜಕಾರಣದ ಆಸೆಗೆ ಬಿದ್ದು ಅವಳು ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಜತನವಾಗಿ ಕಾಪಾಡಿತ್ತಿದ್ದ ಆಸ್ತಿಯನ್ನು ಮಾರುತ್ತಾ ಹೋಗುತ್ತಾನೆ. ಈ ಕಥೆ ಬರೆದು ಮುವ್ವತ್ತೆರಡು ವರ್ಷಗಳಾಗಿವೆ. ಬನ್ನೇರಿಯರ ಬದುಕೇನೂ ಭಿನ್ನವಾಗಿಲ್ಲ. ಈಗ ಅವರು ರೈಲು ಪಾಸ್ ಮಾಡಿಕೊಂಡು ಹಳ್ಳಿಯಿಂದ ನಗರದ ಗಾರ್ಮೆಂಟ್ ಫ್ಯಾಕ್ಟರಿಗೆ, ಕೊಳೆಗೇರಿಗೆ, ವೇಶ್ಯಾವೃತ್ತಿಗೆ, ರಿಯಾಲಿಟಿ ಷೋಗಳಲ್ಲಿ ಕೂತು ಚಪ್ಪಾಳೆ ಹೊಡೆಯಲು ಜೂನಿಯರ್ ಆರ್ಟಿಸ್ಟ್‌ಗಳಾಗಿ ಹೋಗುತ್ತಿದ್ದಾರೆ. ಹಳ್ಳಿಯ ಗಂಡಸು ಹಲವಾರು ಭಾಗ್ಯಗಳ ಬೆನ್ನು ಹತ್ತಿ ರಾಜಕೀಯ ಪಕ್ಷಗಳ ಬಾಲಬಡುಕರೂ ಭಿಕ್ಷುಕರೂ ಆಗಿದ್ದಾರೆ.

  ‘ಪುಟ್ಟಕ್ಕ ಎಂದರೆ ಗಂಡಸು ಮತ್ತು ವಿಧವೆ’ ಎಂಬ ಮಾರ್ಮಿಕವಾದ ಮಾತು ಇನ್ನೊಂದು ಕಥೆಯಲ್ಲಿದೆ. ಪುಟ್ಟಕ್ಕನನ್ನು ಬನ್ನೇರಿಯ ಅಕ್ಕ ಅನ್ನಬಹುದು. ಬನ್ನೇರಿಯ ಬವಣೆಗಳಿಗಿಂತ ಭೀಕರ ಇವಳ ಕಥೆ. ಯಾರದೋ ಮನೆಯ ಬೀಗರೂಟದಲ್ಲಿ ಹಂದಿ ಬಾಡನ್ನು ಕುತ್ತಿಗೆಮಟ್ಟ ತಿಂದು ನಿಗರಾಡಿಕೊಂಡು ಸತ್ತ ಗಂಡ. ಏಕಾಂಗಿಯಾದ ಪುಟ್ಟಕ್ಕನಿಂದ ಅಕ್ರಮವಾಗಿ ಭೂಮಿ ಕಸಿಯುವ ಸ್ವಾಮಿ, ಭೂಮಿಯ ಜತೆಗೆ ನೈತಿಕತೆಯನ್ನೂ ನೀಗಿಕೊಳ್ಳುವ ಪುಟ್ಟಕ್ಕ... ಲಂಕೇಶರಿಗೆ ಬಹುವಾಗಿ ಮೆಚ್ಚುಗೆಯಾಗಿದ್ದ ಕಥೆ ಇದು. ಈಗಿನ ವಿಪರ್ಯಾಸವೆಂದರೆ ಅದೇ ಆಸ್ಪತ್ರೆಯಲ್ಲಿ ಪುಟ್ಟಕ್ಕಗಳು ಆಯಾಗಳಾಗಿ ಮಾಲಿಗಳಾಗಿ ಗ್ಲುಕೋಸ್ ಹಾಕಿಸಿಕೊಳ್ಳುತ್ತಾ ಮಲಗಿದ್ದಾರೆ. ಕಮಂಗಿಪುರದ ಕಥೆ ಕೂಡಾ ನೇರವಾಗಿ ನನ್ನ ಹಳ್ಳಿಯಿಂದ ಎದ್ದು ಬಂದ ಕಥೆ. ಕುಡಿಯಲು ನೀರಿಲ್ಲದ ಹಳ್ಳಿಗೆ ಹಾಲಿನ ಕನಸನ್ನು ಬಿತ್ತುತ್ತಾ ಹಳ್ಳಿಗರನ್ನು ವಂಚಿಸುವ ವಿದ್ಯಾವಂತ ನಿರುದ್ಯೋಗಿಯ ಕಥೆ. ಬ್ರಿಟಿಷರು ಹೇಗೆ ಹ್ಯಾಟು ಧರಿಸಿ ಬಂದು ನಮಗೆ ಟೋಪಿ ಹಾಕಿದರೋ ಅಂಥ ರೂಪಕ ಉಳ್ಳ ಕಥೆ.

ಬನ್ನೇರಿಯನ್ನು ಸಂಕ್ರಾಂತಿಯಾಗಿ ನಂಜುಂಡೇಗೌಡರು ಸಿನೆಮಾ ಮಾಡಿದರು. ಆಗ ನಾವಿಬ್ಬರೂ ಕಾರಂತರ ಹಿಂದೆ ಎಂಡಿಎನ್ನರ ಹಿಂದೆ ನಡೆಯುತ್ತಿದ್ದ ಚಳವಳಿ ಕಾಲಾಳುಗಳು. ಕೆ.ಬಾಲಚಂದರ್ ಮತ್ತು ಲಂಕೇಶರ ಬಳಿ ಕೆಲಸ ಮಾಡಿದ್ದ ಗೌಡರು ರೈತ ಚಳವಳಿಯ ಆಶಯಗಳೊಡನೆ ಕಥೆಯನ್ನು ಕಲಾತ್ಮಕವಾಗಿ ಸಮೀಕರಿಸಿದರು. ಅದು ಅವರ ಮೊದಲ ಸಿನೆಮಾ. ಲೋಕೇಶ್-ಸರಿತಾ ಜೋಡಿಯ ಅದ್ಭುತ ಅಭಿನಯ ಮರೆಯಲಾಗದ್ದು. ದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು ಎಂಬ ಹಾಡನ್ನು ನನ್ನಿಂದ ಬರೆಸಿದರು. ಗೆಳೆಯ ಬಿ.ಸುರೇಶ್ ಪುಟ್ಟಕ್ಕನನ್ನು ಮೆಡಿಕಲ್ ಕಾಲೇಜಿನಿಂದ ಬಿಡಿಸಿ ಹೈವೇಗೆ ಬಿಟ್ಟ. ವಿಷಯಾಂತರ ಮತ್ತು ತುಸು ಬೌದ್ಧಿಕ ಭಾರದಿಂದ ಚಿತ್ರ ಬಳಲಿತು. ನನ್ನ ಪುಟ್ಟಕ್ಕ ಬೇರೆಯೇ ಇದ್ದಳು. ಆದರೆ ಅವನೂ ಬದ್ದತೆಯಿಂದಲೇ ಸಿನೆಮಾ ಮಾಡಿದ್ದ. ಅದು ಅವನ ಸೃಜನಶೀಲ ಸ್ವಾತಂತ್ರ. ನನ್ನ ಮೊದಲ ಸಿನೆಮಾ ಉಂಡೂ ಹೋದ ಕೊಂಡೂ ಹೋದ ಕಮಂಗಿಪುರದ ಕಥೆಯನ್ನಾದರಿಸಿದ್ದು. ನನಗೆ ತೃಪ್ತಿ ಕೊಟ್ಟ ಸಿನೆಮಾ. ಆದರೆ ಭೂಮಿ ಗುಂಡಗಿದೆಯನ್ನು ಆಧರಿಸಿದ ಒಲವೇ ಜೀವನ ಲೆಕ್ಕಾಚಾರ ಮತ್ತು ಬಾ ನಲ್ಲೆ ಮಧುಚಂದ್ರಕೆ ಸಿನೆಮಾಗಳು ಸಾಹಿತ್ಯ ಕೃತಿಗಳಷ್ಟು ಖುಷಿ ಕೊಡಲಿಲ್ಲ. ಹಲವು ಮಿತಿಗಳು ಎದ್ದು ಕಾಣುತ್ತಿದ್ದವು. ಸಿನೆಮಾ ಕುರಿತು ನಾನು ಒಂದು ಮಾತನ್ನು ನಿಚ್ಚಳವಾಗಿ ಹೇಳಬೇಕು. ಸಿನೆಮಾ ಮತ್ತು ಕಿರುತೆರೆ ನನಗೆ ಬಹು ದೊಡ್ಡದನ್ನು ಕೊಟ್ಟಿವೆ. ಅಲೆಮಾರಿತನ, ನಾಯಕತ್ವ ಗುಣ, ತಾಳ್ಮೆ, ಮನೋವಿಜ್ಞಾನಿಯ ಮನೋಧರ್ಮ, ಎಲ್ಲವನ್ನೂ ಚಿತ್ರಿಕೆಗಳಾಗಿ ಕಲ್ಪಿಸಿಕೊಳ್ಳುವ ದೃಶ್ಯಪ್ರಜ್ಞೆ, ವ್ಯಾಪಾರದಲ್ಲಿ ನಿಯತ್ತು, ಅರ್ಹತೆ ಮೀರಿದ ಪ್ರಶಸ್ತಿ ಪುರಸ್ಕಾರ, ಆರ್ಥಿಕ ನೆಮ್ಮದಿ ಹೀಗೆ ಎಲ್ಲವನ್ನೂ ಕೊಟ್ಟಿವೆ. ನಾನು ಕಮರ್ಷಿಯಲ್ ಸಿನೆಮಾಕ್ಕೆ ಹೋಗದಿದ್ದರೆ ಸಮ್ಮೇಳನಗಳ ಏಕತಾನದ ವಿಚಾರ ಸಂಕಿರಣ, ಕ್ಯಾಂಪಸ್ ರಾಜಕಾರಣ ಮುಂತಾದ ಕ್ಲೀಷೆಗಳ ಸೀಮಿತಾನುಭವಗಳಲ್ಲಿ ಸಿಕ್ಕಿಬೀಳುತ್ತಿದ್ದೆ. ನನ್ನನ್ನು ಹಲವು ಬಗೆಯಲ್ಲಿ ವಿಕಸನಗೊಳಿಸಿದ ದೃಶ್ಯಮಾಧ್ಯಮಕ್ಕೆ ಬಹಳ ಋಣಿಯಾಗಿದ್ದೇನೆ. ಇದರಿಂದ ನಷ್ಟವೂ ಆಗಿದೆ. ಏನೆಂದರೆ ಸಾಹಿತ್ಯ ಅಕಾಡೆಮಿಗಳು, ವಿಮರ್ಶಾವಲಯ ನನ್ನನ್ನು ಸಿನೆಮಾ ಅಸ್ಪಶ್ಯನಂತೆ ನೋಡಿ ದೂರ ಇಟ್ಟಿವೆ. ಇದು ಬಹುಮುಖಿಯಾದವರ ಬಿಕ್ಕಟ್ಟು. ಹಲವು ದೋಣಿಗಳಲ್ಲಿ ಪ್ರಯಾಣಿಸುವವರ ಪಾಡು.

  ನಾನು ನನ್ನ ಹಳ್ಳಿಯನ್ನು ಎರಡನೆಯ ತಾಯಿ ಎಂದೇ ಭಾವಿಸಿ ಇಲ್ಲಿಯತನಕ ಬದುಕಿದ್ದೇನೆ ಎನ್ನಲು ಹೆಮ್ಮೆಪಡುತ್ತೇನೆ. ಅಲ್ಲಿನ ಎಲ್ಲ ಜಾತಿ ವರ್ಗಗಳ ಹೆಣಿಗೆಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡಿದ್ದರಿಂದ ಎರಡು ಬಗೆಯ ಪರಿಣಾಮಗಳಾಗಿವೆ. ಮೊದಲನೆಯದು ಕಥೆಗಾರನಾಗಿ ಬನ್ನೇರಿ, ಪುಟ್ಟಕ್ಕನ ಮೆಡಿಕಲ್ ಕಾಲೇಜು, ಕಮಂಗಿಪುರದ ಕಥೆಗಳನ್ನು ಬರೆಯಲು ಸಾಧ್ಯವಾದದ್ದು. ಎರಡನೆಯದು ಅಪ್ರಜ್ಞಾಪೂರ್ವಕವಾಗಿ ಹಳ್ಳಿಪರವಾದ ಚ್ಚಠಿಜಿಜಿಠಿ ಆದದ್ದು. ಇವು ಒಣಜಂಭದ, ಉದ್ದಟತನದ ಮಾತುಗಳಲ್ಲ. ಲೇಖಕನೊಬ್ಬ ಚ್ಚಠಿಜಿಜಿಠಿ ಆಗಲೇಬೇಕೆಂದೇನಿಲ್ಲ. ಆದರೆ ಇದು ನನ್ನ ಬಯಾಗ್ರಫಿಯ ಭಾಗ. ನಾನು ಹಳ್ಳಿಯನ್ನು ಉದ್ಧರಿಸಿದೆ ಅಂತಲ್ಲ. ನಾನು ಬದುಕುಳಿಯಲು ಹಳ್ಳಿಯೇ ನನ್ನ ಪ್ರಾಣವಾಯು ಆಗಿತ್ತು ಅಂತ. ಹಳ್ಳಿ ನನಗೇ ಬೇಕಿತ್ತು ಅಂತ.

  ನನ್ನ ಹಳ್ಳಿಯ ಪುಟ್ಟಕ್ಕ, ಬನ್ನೇರಿಯರಿಗಾಗಿ ಹದಿನೈದು ವರ್ಷಗಳ ಹಿಂದೆ ಊರಿನಲ್ಲಿ ಅಭಿವ್ಯಕ್ತಿ ಮಹಿಳಾ ಹಾಲು ಉತ್ಪಾದಕರ ಸಂಘ ಆರಂಭಿಸಿದೆ. ಎಲ್ಲ ಆಡಳಿತ ಹೆಣ್ಣುಮಕ್ಕಳದೇ. ವಲಸೆ ಕೊಂಚವಾದರೂ ತಪ್ಪಿದೆ. ಹಳ್ಳಿಯ ಗಂಡಸರ ಹತ್ತಿರ ಸಾವಿರ ರೂಪಾಯಿ ಇರೋದೂ ಒಂದೇ ; ಹೆಂಗಸರ ಬಳಿ ನೂರು ರೂಪಾಯಿ ಇರೋದೂ ಒಂದೇ. ಅವರ ಹಾಡು, ಜನಪದ, ಯೋಗ, ಕುಣಿತ, ನಾಟಕಕ್ಕಾಗಿ ಒಂದು ಒಳಾಂಗಣ ಭವನ, ಒಂದು ಬಯಲು ರಂಗಮಂದಿರ, ಒಂದು ಗ್ರಂಥಾಲಯವನ್ನೂ ಕಟ್ಟಿಸಿದ್ದಾಗಿದೆ. ಆದರೆ ಪ್ರಶ್ನೆ ಏನೆಂದರೆ ಇದನ್ನು ಮುಂದುವರಿಸಿಕೊಂಡು ಹೋಗುವವರಾರು? ಇದು activist ಆದವನ ತಲೆನೋವು. ಯಾವುದೇ ಸೇವೆಯನ್ನು ಜನ ಅನುಮಾನದಿಂದ ನೋಡಲು ಕಲಿತಿದ್ದಾರೆ. ಸೇವೆ ಅಂದರೆ ಅಲ್ಲಿ ಎನ್.ಜಿ.ಒ. ಇರಬೇಕು. ವಿದೇಶದ ಫೌಂಡೇಶನ್‌ಗಳಿಂದ ಹಣ ಬರಬೇಕು. ರಾಜಕೀಯ ಪಕ್ಷ ಅಥವಾ ಧಾರ್ಮಿಕ ಸಂಸ್ಥೆಗಳ ದೇಣಿಗೆ ಇರಬೇಕು. ಇದಾವುದೂ ಇಲ್ಲದೆ ನೀನು ಸ್ವಂತ ಹಣದಿಂದ ಸೇವೆ ಮಾಡಿದರೆ ಯಾರಾದರೂ ಏಕೆ ನಂಬುತ್ತಾರೆ? ದುಡ್ಡು ತಗೊಂಡು ಓಟು ಹಾಕುವ, ಲಂಚ ಕೊಟ್ಟೇ ಕೆಲಸ ಮಾಡಿಸಿಕೊಳ್ಳುವ ಜನಸಾಮಾನ್ಯನ ಮನಸ್ಸಿನ ಅನುಮಾನ ಸರಿಯಾಗಿಯೇ ಇದೆ. ನಾನು ಗ್ರಾಮ ಸೇವೆಯ ಸೋಗಿನಿಂದ ಮಾತನಾಡುತ್ತಿಲ್ಲ. ನೊಗ ಹೊತ್ತ ದಣಿವಿನಿಂದ ಮಾತ್ರ ಹೇಳುತ್ತಿದ್ದೇನೆ. ಹಳ್ಳಿಗರು ನಿತ್ಯನಾರಕಿಗಳಂತೆ ಬದುಕುತ್ತಿದ್ದಾರೆ. ಈ ನರಕಕ್ಕೆ ಬೇಸತ್ತು ಓದಿದ ದಲಿತ ಯುವಕರೂ ಹಳ್ಳಿ ಬಿಟ್ಟು ಓಡುತ್ತಿದ್ದಾರೆ. ಯಾರೂ ಮತ್ತೆ ಹಳ್ಳಿಯತ್ತ ತಪ್ಪಿಯೂ ತಲೆ ಹಾಕುವುದಿಲ್ಲ. ಎನ್ನಾರೈಗಳಿದ್ದಂತೆ ಈಗ ಎನ್ನಾರ್‌ವಿಗಳು. ನಾನ್ ರೆಸಿಡೆಂಟ್ ವಿಲೇಜರ್ಸ್. ಇದೆಲ್ಲ ಸಂಕ್ರಮಣವೇ? ಸರ್ವನಾಶವೇ? ಭಾರತದ ಹಳ್ಳಿಗಳಿಗೆ ನಿಜವಾದ ನಾಳೆಗಳು ಇವೆಯೇ?

ಸಾಮಾಜಿಕ ಬದ್ಧತೆಯ ತೋರಿಕೆಗಾಗಿ ಲೇಖಕರು ಹಲವು ಸರ್ಕಸ್ಸು ಮಾಡುತ್ತಾರೆ. ಹಳ್ಳಿಗಳ ಕಡೆ ತಲೆ ಹಾಕದವರು ಹಳ್ಳಿಯ ಹೆಸರನ್ನು ತಮ್ಮ ಹೆಸರಿನ ಜೊತೆ ತಗುಲಿ ಹಾಕಿಕೊಂಡಿರುತ್ತಾರೆ. ಗ್ರಾಮಪರ, ರೈತಪರ, ದಲಿತಪರ, ಮುಸ್ಲಿಮರ ಪರ ಎಂಬ ಪರಿವೇಷದೊಂದಿಗೆ ಬರೆಯುತ್ತಾರೆ. ಭ್ರಷ್ಟಾಚಾರದ ವಿರುದ್ಧ ಪ್ರಭುತ್ವದೆದುರು ಹಗಲು ಬಂಡಾಯ ಎದ್ದಂತೆ ನಟಿಸುತ್ತಲೇ ರಾತ್ರಿಯಾಗುತ್ತಿದ್ದಂತೆ ಒಳೊಪ್ಪಂದ ಮಾಡಿಕೊಂಡು ವಿಧಾನಸೌಧದಿಂದ ಎಲ್ಲವನ್ನೂ ಪಡೆಯುತ್ತಿರುತ್ತಾರೆ. ಈಗ ಬಂಡಾಯದ ವಿರುದ್ಧ ಬಂಡಾಯವೇಳಬೇಕಾದ, ಎಲ್ಲರನ್ನೂ ಅನುಮಾನದಿಂದ ನೋಡಬೇಕಾದ ವಿಚಿತ್ರ ಪರಿಸ್ಥಿತಿ ಇದೆ. ಕಾರಣ ಬರಹಗಾರ ಭ್ರಷ್ಟನಾಗಿದ್ದಾನೆ. ಇದು ರಾಜಕಾರಣಿಯೊಬ್ಬ ಭ್ರಷ್ಟನಾಗುವಷ್ಟೇ ಸಹಜ. ಆದರೆ ಅದಕ್ಕಿಂತ ಭೀಕರ.

ನಗರಮುಖಿ:

ಹಳ್ಳಿಗಳನ್ನು ಓಲೈಸುವ ಭರದಲ್ಲಿ ನಗರಗಳನ್ನು ನಿರ್ಲಕ್ಷಿಸಿ ಮಾತನಾಡೋದು ತಪ್ಪು. ಹಳ್ಳಿ-ನಗರಗಳ ನಡುವಿನ ಕಂದರವನ್ನು ಮುಚ್ಚಲು ನಗರಗಳೇ ಬೇಕು. ನಗರದಲ್ಲಿ ಸಂಪಾದಿಸುವ ಹಣ, ಕೀರ್ತಿ, ಅಧಿಕಾರ, ವರ್ಚಸ್ಸು ಬಳಸಿ ಹಳ್ಳಿಗಳನ್ನು ರಿಪೇರಿ ಮಾಡಬೇಕಿದೆ. ನಗರಮುಖಿ ವಿಭಾಗದಲ್ಲಿರುವ ಛಿದ್ರ, ಸ್ಖಲನ, ಅಕಾಲ, ಸಂಜೆ, ಮೇ 3 ಇವೆಲ್ಲ ನನ್ನ ಮೆಚ್ಚಿನ ಕಥೆಗಳು. ದಶಕಗಟ್ಟಲೆ ನಗರಗಳಲ್ಲಿ ಜೀವಿಸಿ ತಿಂದು ಉಂಡು ಮನೆ ಕಟ್ಟಿ ಕೊನೆಯಲ್ಲಿ ‘ಈ ನಗರ ನಂದಲ್ಲ ಅನಿಸುತ್ತೆ’ ಅಂತ ನಿಟ್ಟುಸಿರು ಬಿಡುವವರು ಕೃತಘ್ನರು. ನಗರ ಎಂದರೆ ಕೂಡಾ ಹಳ್ಳಿಗಳಂತೆಯೇ ಅಷ್ಟೇನೂ ಕೆಟ್ಟವರಲ್ಲದ ಜನ ಕೆಟ್ಟದ್ದಾಗಿ ಬದುಕುವ ಕ್ರಮ. ಮೊನ್ನೆ ಮಳೆಯಲ್ಲಿ ರಸ್ತೆ ಗುಂಡಿ ಬಿದ್ದು ಜನ ಸತ್ತರು. ಆ ಗುಂಡಿಯಲ್ಲಿ ದೀಪ ಹಚ್ಚಿ ಪ್ರತಿಭಟನೆಯ ದೀಪಾವಳಿ ಆಚರಿಸೋಣ ಎಂದರು ಕೆಲವರು. ರಾಜಕೀಯದವರು ಬಂದರೆ ದೀಪ ಯಾವುದು, ಬೆಂಕಿ ಯಾವುದು ಹೇಳುವುದು ಕಷ್ಟ. ಈ ಪಕ್ಷದವರು ದೀಪ ಹಿಡಿದು ಬರುವ ವೇಳೆಗೆ ಆ ಪಕ್ಷದವರು ಗುಂಡಿ ಮುಚ್ಚಿಸಿದ್ದರು. ಕ್ಯಾಮರಾ ನಿರಾಶೆಗೊಳ್ಳದಿರಲಿ ಅಂತ ಈ ಪಕ್ಷದವರು ಮತ್ತೆ ಗುಂಡಿ ತೋಡಿ ದೀಪ ಹಚ್ಚಿದರು. ಹಳ್ಳಿಗಳು ಹಾಗೆ ಸತ್ತರೆ ನಗರಗಳು ಹೀಗೆ ಬದುಕುತ್ತವೆ.

ಮೈಸೂರು, ಬೆಂಗಳೂರು ನಗರಗಳು ನನಗೆ ಅಪಾರ ಕಥೆಗಳನ್ನು ಕೊಟ್ಟಿವೆ. ಬಹುಮುಖ್ಯ ಕಥೆಗಳೆಲ್ಲ ಮೈದಾಳಿದ್ದು ಮೈಸೂರಲ್ಲಿ. ತುಂಡು ಸೈಟಿಗೆ ಪರದಾಡುವ ಕುಳ್ಳುಬಟ್ಟರನ್ನು ಮೈಸೂರು ಡೈರಿ ಕ್ಯಾಂಟೀನಿನಲ್ಲಿ ನೋಡಿದ್ದೆ. ಕಂಠಪೂರ್ತಿ ಕುಡಿದ ಮುತ್ತಾಲಯ್ಯನೆಂಬ ಕೆಳವರ್ಗದ ವ್ಯಕ್ತಿಯಿಂದ ಉಪಾಯವಾಗಿ ರಾಜೀನಾಮೆ ಬರೆಸಿಕೊಳ್ಳುವುದು, ಸಾವಿರಾರು ಲೀಟರ್ ಹಾಲಿಗೆ ಕಜ್ಜಿ ನಾಯೊಂದು ಬಿದ್ದು ಕ್ಷೀರಕ್ರೀಡೆ ಆಡಿದ ಮೇಲೂ ಅದೇ ಹಾಲನ್ನು ನಾಗರಿಕರಿಗೆ ಸರಬರಾಜು ಮಾಡುವುದು ಇಂಥ ತಮಾಷೆಯ, ವ್ಯಂಗ್ಯದ, ವಿಪರ್ಯಾಸದ ಕಥೆಗಳೆಲ್ಲ ಹುಟ್ಟಿದ್ದು ನಾನು ಮೈಸೂರು ಡೈರಿಯಲ್ಲಿ ನಾಲ್ಕು ರೂಪಾಯಿಗೆ ದಿನಗೂಲಿ ಮಾಡುವಾಗ. ಅಧ್ಯಾಪಕ ವೃತ್ತಿ ಹಿಡಿದ ಮೇಲೆ ಇನ್ನೊಂದಿಷ್ಟು ಹೊಸ ಕಥೆಗಳು ಹುಟ್ಟಿದವು. ಅಕಾಲ, ನಡುರಾತ್ರಿಯಲ್ಲಿ ಸಿಕ್ಕವರು, ಮನೆಗೆ ಬಂದ ಮಹಾಲಕ್ಷ್ಮೀ ಇಂಥವೆಲ್ಲ ನನ್ನನ್ನು ಕಾಡಿ ಬರೆಸಿಕೊಂಡವು. ಅಕಾಲ ರೈಲಿನಿಂದ ಬಿದ್ದ ನನ್ನ ಮೆಚ್ಚಿನ ವಿದ್ಯಾರ್ಥಿಯ ಕಥೆ. ಲಹರಿ ಲಹರಿ ಲಹರಿ, ಕನಸು ಹುಟ್ಟಿತು ಕೇಳಾ ಲಲಿತ ಪ್ರಬಂಧದಂಥ ಕತೆಗಳು. ಪ್ರತಿ ಕಥೆಯನ್ನು ಬರೆಯುವಾಗ ನಾನು ಪಟ್ಟ ಆತಂಕ, ಖುಷಿ, ಬೇನೆ ಮಾತಿಗೆ ನಿಲುಕದ್ದು. ನಾನು ಬರೆದದ್ದೋ ಅವು ಬರೆಸಿಕೊಂಡದ್ದೋ ಹೇಳುವುದು ಕಷ್ಟ. ಈ ಕತೆಗಳಿಲ್ಲದೆ ನನಗೆ ವ್ಯಕ್ತಿತ್ವವೇ ಇಲ್ಲ. ನಾನು ನನ್ನೆಲ್ಲ ಕಥೆಗಳನ್ನು ಜೀವಿಸಿದ್ದೇನೆ. ಜೀವಿಸುತ್ತಿದ್ದೇನೆ.

ಪ್ರೇಮಮುಖಿ :

ಪ್ರೇಮವೆನ್ನುವುದು ಗೋಳು ಮತ್ತು ಗೀಳು ಕೂಡಾ. ಅದು ಎಂದೂ ತಣಿಯದ ವ್ಯಾಕುಲತೆ. ಸ್ವಯಂ ಊನಗೊಳಿಸಿ ತಂದುಕೊಳ್ಳುವ ಬೇನೆ. ನನ್ನೊಬ್ಬಳು ನಾಯಕಿ ಪ್ರತಿನಾಯಕಿಗೆ ಹೇಳುತ್ತಾಳೆ. ‘ಈ ಗಂಡಸರು ಎಂಥ ಮೂರ್ಖರು ಗೊತ್ತಾ? ನಮ್ಮ ರವಿಕೆ ಹಿಂದಿನ ಕನ್ನಡಿಯಲ್ಲಿ ಕಣ್ಣುಚುಚ್ಚುವ ಬ್ರಾ ಪಟ್ಟಿಗಳನ್ನು ನೋಡಿಯೇ ಮೂರ್ಛೆ ಹೋಗುತ್ತಾರೆ. ಪ್ರತೀ ಪುರುಷನ ಸುಪ್ತ ಆರಾಧನೆ ಹೆಣ್ಣು. ನಾವು ಅವರನ್ನು ಕೋತಿ ಥರಾ ಕುಣಿಸ್ಬೇಕು ಕಣೆ’. ಇದನ್ನು ಅವಳು ನಿಜಕ್ಕೂ ಹೇಳಿದಳೋ, ಕಥೆಗಾರ ಹೇಳಿಸಿದನೋ ಊಹಿಸುವುದು ದುಸ್ತರ. ಅನಂತಮೂರ್ತಿಯವರು ನಾಗತಿಹಳ್ಳಿಯವರ ಹೆಂಗಸರಂತೂ ನಮ್ಮ ಪ್ರಜ್ಞೆಗೆ ಸವಾಲಾಗಬಲ್ಲರು ಎಂದು ಬರೆದಿದ್ದಾರೆ. ಕಥೆಗಾರರು ಕೋತಿ ತಾನು ಕೆಡುವುದಲ್ಲದೆ ವನವೆಲ್ಲಾ ಕೆಡಿಸಿದಂತೆ ಪ್ರೇಮದ ಹುಚ್ಚನ್ನು ಆವಾಹಿಸಿಕೊಂಡು ಅದನ್ನು ಎಳೆಯ ಹೃದಯಕ್ಕೆಲ್ಲಾ ಹರಡುವವರು. ಭೂಮಿ ಗುಂಡಗಿದೆಯ ರುಕ್ಮಿಣಿ, ಯಶೋಧರ ಚರಿತೆಯ ಯಶೋಧರೆ, ಮಲೆನಾಡಿನ ಹುಡುಗಿ ಉಷಾ, ನನ್ನ ಪ್ರೀತಿಯ ಹುಡುಗಿ ಉಮಾ, ಯಾತ್ರೆಯ ಮೃದಲಾ, ಸರಸ್ವತಿಪುರದ ವತ್ಸಲಾ, ಸನ್ನಿಧಿಯ ಪದುಮಾ, ನಾಟ್ಯರಾಣಿ ಶಾಂತಲೆಯ ಶಾಂತಲೆ... ನಾನು ಅವರನ್ನು ಎಷ್ಟು ಪ್ರೀತಿಸಿದೆ, ಗೌರವಿಸಿದೆ ಅಂದರೆ they are all my female versions. ಅದೊಂದು ಪ್ರೇಮಕಥೆಗಳ ಯುಗ. ಮೂಗು ಮುರಿಯುವವರೂ ಓರೆಗಣ್ಣಿನಿಂದ ಓದುತ್ತಿದ್ದ ಕಥೆಗಳು. ಒಂದು ಹಂತದಲ್ಲಿ ರೊಮ್ಯಾಂಟಿಸಿಸಂ ತುಂಬಿ ತುಳುಕಿದ್ದು ಹೆಚ್ಚೆನಿಸಿ ಅದನ್ನು ಮೀರಲು ವ್ಯಂಗ್ಯಕ್ಕೆ ಆತುಕೊಂಡಿದ್ದೂ ಹೌದು. ಕಥೆಗಳನ್ನು ಹಚ್ಚಿಕೊಂಡಿದ್ದ ಹುಡುಗಿಯೊಬ್ಬಳು ರಕ್ತದಲ್ಲಿ ಪತ್ರ ಬರೆಯತೊಡಗಿದ್ದಳು. ಓದುವುದಿರಲಿ; ಮುಟ್ಟಲೂ ಮುಜುಗರ. ಎಷ್ಟು ವಿವೇಕ ಹೇಳಿದರೂ ಕೇಳಳು. ಆಗಿನ್ನೂ ದಡ್ಡ ಹುಡುಗಿಯರು, ಭಾವುಕ ಹುಡುಗಿಯರು ಜೀವಿಸಿದ್ದ ಕಾಲ. ಅವಳಿಗೆ ಇಂಕಿನಲ್ಲಿ ಕಾಗದ ಬರೆದೆ. ‘ದೇಹದಿಂದ ಸಹಜವಾಗಿ ಹೆಣ್ಣುಗಳಿಗೆ ಆಗಾಗ ರಕ್ತ ಹೋಗುತ್ತದೆಂದು ಕೇಳಿ ಬಲ್ಲೆ. ಹೀಗೆ ಮತ್ತೆ ಮತ್ತೆ ನೀನು ರಕ್ತವನ್ನು ವೇಸ್ಟು ಮಾಡಬೇಡ’. ಇದು ಅತಿವ್ಯಂಗ್ಯದ ಮತ್ತು ಅಭಿರುಚಿಹೀನತೆಯ ಪೋಲಿ ಮಾತೆಂದು ಬಲ್ಲೆ. ಆನಂತರ ರಕ್ತದ ಕಾಗದಗಳು ತಟ್ಟನೆ ನಿಂತುಹೋದವು. ಹುಸಿ ಭಾವುಕತೆಯನ್ನು ಮೀರಲು ವ್ಯಂಗ್ಯ ಕಲಿತು ಹೀಗೆ ಪಾರಾಗುತ್ತಿದ್ದೆ.

ಸಾವಿನ ಭಯದಿಂದ ಆಳದಲ್ಲಿ ವಿಹ್ವಲಗೊಂಡವರೆಲ್ಲ ಗಂಧರ್ವರಾಗಲು ಪ್ರೇಮ ಕಥೆಗಳನ್ನು ಬರೆಯುತ್ತಾರೆ ಮತ್ತು ಓದುತ್ತಾರೆ. ಸಿಎಎಕ್ಸ್ ತೊಂಬತ್ತೇಳು ಅರವತ್ತು ಎಂಬ ನಂಬರಿನ ಪ್ರಿಯಾ ಸ್ಕೂಟರಿನ ಮೇಲೆ ಪ್ರೇಮ ಕತೆಗಳ ಜತೆಗೆ ಅಡ್ಡಾಡುತ್ತಾ ಇದ್ದ ನಾನು ಎಷ್ಟು ಅಧೀರನಾಗಿದ್ದೆ ಎಂದರೆ ಸ್ಟೆಪ್ನಿಯ ಹಿಂದೆ ಸಾವು ಅಂತ ಬರೆದುಕೊಂಡಿದ್ದೆ. ಮರೆತೂಬಿಟ್ಟಿದ್ದೆ. ಆದರೆ ಹಿಂಬಾಲಿಸುವರು ಹೆದರುತ್ತಿದ್ದರು. ತಲೆಕೆಡಿಸಿಕೊಳ್ಳುತ್ತಿದ್ದರು. ಇದೊಂದು ಬಾಲಿಶ ನಡವಳಿಕೆಯೇ? ತಿಳಿಯೆ. ಆದರೆ ಸನ್ನಿಧಿಯ ಪುಂಡಲೀಕನ ಸಾವು, ಸ್ಖಲನದ ವಿಶುವಿನ ಗರ್ಭಿಣಿ ಹೆಂಡತಿ ಸಾವು, ಅಕಾಲದ ಅಮರ್‌ನ ಸಾವು, ಮಲೆನಾಡಿನ ಹುಡುಗಿಯ ದೇವರಾಜನ ಸಾವು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದವು; ಪ್ರೀತಿಯ ಇನ್ನೊಂದು ಅರ್ಥ ಸಾವು ಅಂತ. ನನ್ನ ಇನ್ನೂ ಒಂದು ಅತಿರೇಕವಿದೆ. ಪ್ರತೀ ಮುಂಜಾನೆ ಎದ್ದಾಗ ಇದು ನನ್ನ ಬದುಕಿನ ಕಡೆಯ ದಿನ ಎಂಬ ಆತಂಕದಿಂದ ಬಳಲುವುದು. ಮತ್ತು ಈ ಆತಂಕವೇ ದೈತ್ಯ ಕೆಲಸಗಳನ್ನು ಮಾಡಿ ಮುಗಿಸುವ ಎನರ್ಜಿಯಾಗಿ ಮಾರ್ಪಡುವುದು. ಬದುಕು, ಪ್ರೀತಿ, ಸಾವು ಎಲ್ಲವೂ ಸಮಾನಾರ್ಥಕ ಪದಗಳಿರಬಹುದೇ?

ಕೆಲವರು ಕೇಳುತ್ತಾರೆ : ‘‘ಯಾಕೆ ನಿಮ್ಮ ಕತೆಗಳು ಕಡಿಮೆಯಾಗಿವೆಯಲ್ಲ?’’ ನನ್ನ ಉತ್ತರ: ‘‘ಯಾರು ಹಾಗೆಂದದ್ದು? ಒಂದು ಸಿನೆಮಾದ ಬರವಣಿಗೆಯಲ್ಲಿ ಹತ್ತಾರು ಕಥೆಗಳ ಶ್ರಮ, ಸಮಯ ಅಡಕವಾಗಿರುತ್ತದೆ. ಅಮೆರಿಕ ಅಮೆರಿಕದಲ್ಲಿ, ಅಮೃತಧಾರೆಯಲ್ಲಿ, ಮಾತಾಡ್ ಮಾತಾಡ್ ಮಲ್ಲಿಗೆಯಲ್ಲಿ ನೂರು ಸಣ್ಣ ಕಥೆಗಳಿವೆ. ಈಗಲೂ ಬರೆಯುತ್ತಿದ್ದೇನೆ. ಅವು ಕಥೆಗಳು ಮತ್ತು ಚಿತ್ರಕಥೆಗಳು. ಚಿತ್ರಕಥೆಗಳಿಗೂ ಕಥೆಗಳೇ ತಾಯಂದಿರು.’’

ಎಲ್ಲ ಕಥೆಗಳಿಗೆ ನಮಸ್ಕಾರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)