varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ನನ್ನ ಕನಸಿನ ಕುರಿಯಾಡುಪುರ

ವಾರ್ತಾ ಭಾರತಿ : 5 Nov, 2017
ಡಾ. ರಘುಪತಿ

ಇಲ್ಲಿನ ಕುರಿ-ಆಡು ಆಸ್ಪತ್ರೆ 24 ಗಂಟೆಗಳ ಆಸ್ಪತ್ರೆ. ಕುರಿಗಾರನ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿತ್ತು. ತುರ್ತುಚಿಕಿತ್ಸೆಯ ಫೋನ್ ಕರೆ ಬಂದರೆ ತಕ್ಷಣ ಧಾವಿಸಿ ಬರುವ ವ್ಯವಸ್ಥೆ ಅಲ್ಲಿತ್ತು. ದಿನದ 24 ಗಂಟೆಗಳು ಕೆಲಸ ಮಾಡುವ ಮೂರು ತಂಡಗಳ ಕೆಲಸದ ಅವಧಿಯ ಬೋರ್ಡ್ ಸಹ ತೂಗಾಡುತ್ತಿತ್ತು. ಅಲ್ಲಿಯೇ ನಿಂತಿದ್ದ ಆ್ಯಂಬುಲೆನ್ಸ್ ಅತ್ಯಾಧುನಿಕವಾಗಿ ಸಜ್ಜುಗೊಂಡಿತ್ತು. ಅಲ್ಲಿ ಜಂತುಹುಳಗಳ ಪರೀಕ್ಷೆ ಮಾಡುವ ಉಪಕರಣಗಳು, ರಕ್ತ ಪರೀಕ್ಷೆ ಉಪಕರಣಗಳು ಮುಂತಾದ ಹಲವು ಪರಿಕರಗಳ ಲ್ಯಾಬ್ ಆ ಆ್ಯಂಬುಲೆನ್ಸ್ ನಲ್ಲಿಯೇ ಕುಳಿತು ಗಮನ ಸೆಳೆಯುತ್ತಿತ್ತು. ಸಿಬ್ಬಂದಿ ಕುರಿಗಾರರನ್ನು ತಮ್ಮ ನೆಂಟರಂತೆ, ಸ್ನೇಹಿತರಂತೆ ಪರಿಭಾವಿಸಿ ಮಾತಾಡುತ್ತಿದ್ದ ಬಗೆ ಸೋಜಿಗವನ್ನು ಉಂಟು ಮಾಡುತ್ತಿತ್ತು.

ಈ ಹಳ್ಳಿಯ ಹೆಸರು ‘ಕುರಿಯಾಡುಪುರ’ ಎಂದುಕೊಳ್ಳಿ, ಹತ್ತು-ಹದಿನೈದು ಗ್ರಾಮಗಳ ಕೇಂದ್ರ. ಅಲ್ಲಿ ಕುರಿ ಸೊಸೈಟಿಯ ಮುಂದೆ ಜನರು ಕ್ಯೂ ನಿಂತಿದ್ದಾರೆ.

ಮೇಕೆ-ಕುರಿಯ ಹಾಲಿನ ಕ್ಯಾನ್ ಹಿಡಿದುಕೊಂಡು ಉದ್ದನೆಯ ಸಾಲು ಇದೆ. ‘ಕುರಿ ಸೊಸೈಟಿ’ಯ ಕಂಪ್ಯೂಟರೀಕೃತ ತೂಕದ ಯಂತ್ರದೊಡನೆ ಒಬ್ಬ ಮಹಿಳಾ ಸೆಕ್ರೆಟರಿ ಕೆಲಸ ಮಾಡುತ್ತಾ, ಹಾಲನ್ನು ಪಡೆಯುತ್ತಿದ್ದಾಳೆ. ಮತ್ತೊಂದು ಕಡೆ ಚರ್ಮದ ಸಂಗ್ರಹಣಾ ಕೊಠಡಿ. ಅಲ್ಲಿ ಪೇರಿಸಿರುವ ಚರ್ಮಗಳ ದೊಡ್ಡ ಸಾಲುಗಳೇ ಇವೆ. ಆಡು-ಕುರಿ ಚರ್ಮವನ್ನು ಆಡು-ಕುರಿ ಪಾಲಕರು ಕನಿಷ್ಠ ಹದಮಾಡಿಕೊಂಡು ‘ಸೊಸೈಟಿ’ ಫಿಕ್ಸ್ ಮಾಡಿದ ರೇಟಿಗೆ ಕೊಡುತ್ತಿದ್ದಾರೆ. ಸೊಸೈಟಿಯ ಮುಂದೆ ಇರುವ ಬೋರ್ಡ್‌ನಲ್ಲಿ ಆಯಾಯ ದಿನದ ಮಾಂಸ, ಚರ್ಮ, ಹಾಲು, ಉಣ್ಣೆಯ ಮಾರುಕಟ್ಟೆ ದರ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಆಡು-ಕುರಿಗಾರರು ತಮ್ಮ ಉತ್ಪನ್ನಗಳನ್ನು ಅದೇ ರೇಟಿಗೆ ಕೊಟ್ಟು ಸಂತೃಪ್ತಿಯೊಂದಿಗೆ ಮರಳುತ್ತಿದ್ದಾರೆ. ಆ ಊರಿನ ಹೆಸರು ಕುರಿಯಾಡುಪುರ. ಅದೊಂದು ಬಯಲು ಸೀಮೆಯ ಊರುಗಳ ಹೋಬಳಿ ಕೇಂದ್ರ. ಆ ಕುರಿ ಸೊಸೈಟಿಯ ಹೆಸರು: ದೇವರಾಜ ಅರಸು ಆಡು, ಕುರಿ ಮತ್ತು ಮಾಂಸ ಉತ್ಪಾದಕರ ಸಹಕಾರ ಸಂಘ. ಅದರ ಬೋರ್ಡ್ ಆಧುನಿಕವೂ ಅಲ್ಲದ ಈ ಊರಿನ ಪರಿಸರಕ್ಕೆ ಹೊಂದಿಕೊಳ್ಳುವ ಸಹಜ ಸೌಂದರ್ಯ ಹೊಂದಿರುವ ಬೋರ್ಡ್. ಬಿಲ್ಡಿಂಗ್ ಕಡಿಮೆ ಎಂದರೂ ಎರಡು ಎಕರೆ ಇದೆ. ಮುಂದೆ ದೊಡ್ಡದಾದ ಎರಡು ಅಂಗಳಗಳಲ್ಲಿ ಆಡು-ಕುರಿಗಳನ್ನು ದೇಹ ತೂಕದ ಆಧಾರದ ಮೇಲೆ ‘ಸೊಸೈಟಿ’ ಖರೀದಿಸುತ್ತಿದೆ. ನೋಡಿದರೆ ಹಿಂದೆ ಸಂತೆಯಲ್ಲಿ ಪಡೆಯುತ್ತಿದ್ದ ರೇಟ್‌ಗಿಂತ ನಾಲ್ಕು ಪಾಲು ಹೆಚ್ಚಿತ್ತು. ಇನ್ನೊಂದು ಅಂಗಳದಲ್ಲಿ ಉಣ್ಣೆ ಮತ್ತು ಚರ್ಮದ ಖರೀದಿ ನಡೆಯುತ್ತಿತ್ತು. ವಿದ್ಯಾವಂತ ಮಹಿಳಾ ಸೆಕ್ರೆಟರಿ ನೇತೃತ್ವದ ಸಿಬ್ಬಂದಿ ಇದನ್ನೆಲ್ಲಾ ನಿರ್ವಹಿಸುತ್ತಿದ್ದರು.

ಸೊಸೈಟಿಯ ಒಳಗೆ ಪ್ರವೇಶಿಸಿದರೆ ಅಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಕೊಠಡಿ. ಒಂದು ಮುಖ್ಯವಾದ ಜಾಗದಲ್ಲಿ ಶ್ರೀ ದೇವರಾಜ ಅರಸುರವರ ಉದ್ದನೆಯ ಆಳೆತ್ತರದ ಚಿತ್ರ ನಗುತ್ತಾ ನಮ್ಮನ್ನೆಲ್ಲಾ ಸ್ವಾಗತಿಸುತ್ತಿತ್ತು. ಅಲ್ಲಿಯೇ ಇದ್ದ ಅಧ್ಯಕ್ಷರು ನಮ್ಮನ್ನು ಸ್ವಾಗತಿಸಿದ್ದರು. ಶ್ರೀ ದೇವರಾಜ ಅರಸುರವರ ಫೋಟೊದತ್ತ ಹೆಮ್ಮೆಯಿಂದ ನೋಡಿ, ‘‘ಅವರು ಕುರಿ, ಆಡು ವಲಯಕ್ಕೆ ಶಕ್ತಿ ತುಂಬಿದರು’’ ಎಂದು ನಮ್ಮೆದುರಿಗೆ ಕೈ ಮುಗಿದರು. ಮತ್ತೆ ಎಲ್ಲಾ ಸಹಕಾರಿ ಸೊಸೈಟಿಗಳಲ್ಲಿರುವಂತೆ ಅಲ್ಲಿಯೂ ಹದಿಮೂರು ನಿರ್ದೇಶಕರ ಹೆಸರುಗಳ ಬೋರ್ಡ್ ಇತ್ತು. ಅಲ್ಲಿದ್ದ ಹೆಸರುಗಳನ್ನು ನೋಡಿದರೆ ಆ ಹತ್ತು ಊರುಗಳಲ್ಲಿದ್ದ ತರಾವರಿ ಹೆಸರುಗಳು ಇದ್ದವು. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಅವು ಒಂದೊಂದು ಜಾತಿಯನ್ನು ಸೂಚಿಸುತ್ತಿದ್ದವು. ಅವುಗಳಲ್ಲಿ ಬಹುತೇಕ ಕೆಳಜಾತಿಯ ಹೆಸರುಗಳೇ ವಿಜೃಂಭಿಸುತ್ತಿದ್ದವು. ದಲಿತರು, ಮಹಿಳೆಯರು, ಮುಸ್ಲಿಂ-ಎಲ್ಲರ ಸಮನ್ವಯತೆ ಎದ್ದು ಕಾಣುತ್ತಿತ್ತು.

ಹಿಂದಿನ ಅವಧಿಯಲ್ಲಿ ಆಗಿ ಹೋಗಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ಬೋರ್ಡ್ ನಲ್ಲಿಯೂ ಎಲ್ಲಾ ಜಾತಿಗಳ ಪ್ರಾತಿನಿಧ್ಯ ಕಾಣುತ್ತಿತ್ತು. ಪ್ರತಿ ಅವಧಿಗೂ ಇಲ್ಲಿ ಅಧ್ಯಕ್ಷರ ಹುದ್ದೆ ಜಾತಿವಾರು ರೋಟೇಶನ್ ಆಗುತ್ತಿರುವುದನ್ನು ಖಚಿತಪಡಿಸಿದರು ಅಲ್ಲಿನ ಅಧ್ಯಕ್ಷರು.

 ಮತ್ತೊಂದು ಬೋರ್ಡ್‌ನಲ್ಲಿ ಈ ಸೊಸೈಟಿಯ ವಾರ್ಷಿಕ ವಹಿವಾಟು ಪಟ್ಟಿ ಇತ್ತು. ಅದು ಮಾಂಸ, ಚರ್ಮ, ಹಾಲು, ಗೊಬ್ಬರ, ಉಣ್ಣೆಯ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿರುವುದರ ವಿವರ ಅಲ್ಲಿ ದಾಖಲಾಗಿತ್ತು. ಮತ್ತೊಂದು ಕಡೆ ಸಹಕಾರ ಸಂಘದ ಉದ್ದೇಶಗಳು ಎಲ್ಲರ ಗಮನ ಸೆಳೆಯುವಲ್ಲಿ ಸೋತಿರಲಿಲ್ಲ. ಹಾಲಿನ ಕ್ರಾಂತಿಯ ಹರಿಕಾರ ಕುರಿಯನ್ ಫೋಟೊ ಅಲ್ಲಿರುವುದನ್ನು ಕಂಡು ಆಶ್ಚರ್ಯವೇನೂ ಆಗಲಿಲ್ಲ. ಅಲ್ಲಿನ ದೊಡ್ಡ ಕಂಪ್ಯೂಟರ್ ಬೋರ್ಡ್ ನಲ್ಲಿ ಕುರಿ, ಆಡು ಉತ್ಪನ್ನಗಳ ಅಂದಂದಿನ ಮಾರುಕಟ್ಟೆಧಾರಣೆ ಸಾಲು ಸಾಲಾಗಿ ಬರುತ್ತಿತ್ತು. ಈ ಸೊಸೈಟಿಯಿಂದ ಯಾವ್ಯಾವ ನಗರಗಳಿಗೆ, ರಾಜ್ಯಗಳಿಗೆ, ದೇಶಗಳಿಗೆ ಸರಬರಾಜು ಮಾಡಿದ ಉತ್ಪನ್ನಗಳ ವಿವರವೂ ಸಹ ಒಂದಾದ ನಂತರ ಒಂದರಂತೆ ಹರಿದು ಬರುತ್ತಿತ್ತು. ಅಲ್ಲಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕೆಲವು ನಿರ್ದೇಶಕರು ಸುತ್ತಮುತ್ತಲಿನ ಕುರಿಗಾರರೊಂದಿಗೆ ಅವರ ಸಮಸ್ಯೆಗಳ ಕುರಿತಾಗಿ ಚರ್ಚಿಸುತ್ತಿದ್ದರು. ಕುರಿಗಾರರು ಅಡವಿಯಲ್ಲಿ ಮೇಯಿಸುವುದಕ್ಕೆ ಅನುಮತಿ, ಎಲ್ಲಾ ಊರುಗಳಲ್ಲಿ ಕುರಿ ತೊಟ್ಟಿ ನಿರ್ಮಾಣ, ಸತ್ತ ಕುರಿಗಳ ಪರಿಹಾರ ಧನ, ಹಳ್ಳಿಗಳಿಗೆ ಡಾಕ್ಟರ್‌ಗಳು ದಿನನಿತ್ಯ ಭೇಟಿಯ ವಿವರ-ಮುಂತಾದ ಹಲವನ್ನು ಸಂಬಂಧಿತ ಇಲಾಖೆಗಳೊಡನೆ ಅಲ್ಲಿಯೇ ಫೋನ್‌ನಲ್ಲಿ ಮಾತಾಡಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧ್ಯಕ್ಷರು ಮುಳುಗಿ ಹೋಗಿದ್ದರು.

ಮತ್ತೆ ನಾನು ಕಾರ್ಯಕಾರಿ ಮಂಡಳಿಯ ಕೊಠಡಿಯಿಂದ ಹೊರಬಂದು ಅಲ್ಲಿಯೇ ಪಕ್ಕದಲ್ಲಿದ್ದ ತರಬೇತಿಯ ಕೊಠಡಿಗೆ ಅಡಿ ಇಟ್ಟೆ. ಅದೊಂದು ಅತ್ಯಾಧುನಿಕ ಕೇಂದ್ರ, 40-50 ಜನ ಕೂಡಬಹುದಾದ ಸಬಾಂಗಣ, ಸೌಂಡ್ ಪ್ರೂಫ್ ಹೊಂದಿತ್ತು. ಅಲ್ಲಿ ಒಂದು ವಸ್ತು ಬಿದ್ದರೆ ಶಬ್ದ ಕೇಳುತ್ತಿತ್ತು. ಮುಂದೆ ದೊಡ್ಡ ಕಂಪ್ಯೂಟರ್ ಪರದೆ.

ಅಲ್ಲಿ ಈಗಾಗಲೇ 30-40 ಜನರಿಗೆ ತರಬೇತಿ ಶಿಬಿರ ನಡೆಯುತ್ತಿತ್ತು. ಆ ಮೂರು ದಿನಗಳ ಕಾರ್ಯಕ್ರಮ ಪಟ್ಟಿ ಅಲ್ಲಿ ತೂಗಾಡುತ್ತಿತ್ತು. ಕುರಿ-ಆಡು ಸಾಗಾಣೆೆ, ಅದರ ವೈದ್ಯ ಪದ್ಧತಿಗಳು, ಆಡು-ಕುರಿ ಉತ್ಪನ್ನಗಳ ಸಂಸ್ಕರಣೆ, ವೌಲ್ಯವರ್ಧನೆ ಮತ್ತು ಮಾರುಕಟ್ಟೆ, ಮೇವಿನ ವೈವಿಧ್ಯತೆ, ಆಹಾರ ನೀಡಿಕೆ, ವಿವಿಧ ದೇಶಗಳ ಆಡು-ಕುರಿ ಅಭಿವೃದ್ಧಿ, ಸಹಕಾರ ಸಂಘಗಳ ಯಶೋಗಾಥೆ, ಮಾದರಿ ಕುರಿ-ಆಡು ಪಾಲಕರೊಡನೆ ಸಂವಾದ, ಸಹಕಾರ ರಂಗದ ತಜ್ಞರ ದೊಡ್ಡ ಪಟ್ಟಿಯೇ ಅಲ್ಲಿ ಅನಾವರಣಗೊಂಡಿತ್ತು. ಅಲ್ಲಿಯೇ ಇದ್ದ ಇನ್ನೊಂದು ಕೊಠಡಿಯಲ್ಲಿ ಕುರಿ-ಆಡು ಪಾಲನೆಯ ದೇಶ, ವಿದೇಶ ಪತ್ರಿಕೆಗಳು, ಪುಸ್ತಕಗಳು, ಆಡಿಯೋ-ವೀಡಿಯೊ ಪರಿಕರಗಳು-ಎಲ್ಲರಿಗೂ ಎಟುಕುವಂತೆ, ಬಳಸುವಂತೆ ಲಭ್ಯವಿದ್ದವು. ಅಲ್ಲಿ ಒಬ್ಬ ವಿಷಯ ತಜ್ಞರು ಹೇಳಿದ ಪ್ರಕಾರ ಯಾವನೇ ಕುರಿಗಾರ ಸಮಸ್ಯೆಯೊಡನೆ ಸೊಸೈಟಿಗೆ ಬಂದರೆ ಬಗೆಹರಿಸುವ ಎಲ್ಲಾ ವ್ಯವಸ್ಥೆಯೂ ತರಬೇತಿ ಅಂಗಳದಲ್ಲಿ ಕಾಯುತ್ತಿತ್ತು.

ತರಬೇತಿ ವಿಭಾಗದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಕುರಿಗಾರರಿಗೆ ಮಾಹಿತಿ ಕೊಡುವ ನೂರಾರು ಫಲಕಗಳು ಅಲ್ಲಿಗೆ ಹೋದ ಪ್ರತಿಯೊಬ್ಬರ ಗಮನ ಸೆಳೆಯುತ್ತಿದ್ದವು. ಮಾಂಸ ಕುರಿತಾದ ಪೌಷ್ಟಿಕತೆ, ಅದರ ಅಗತ್ಯ ಮತ್ತು ಅನಿವಾರ್ಯತೆ, ಭಾರತದಲ್ಲಿ ಪ್ರೊಟೀನ್ ಕೊರತೆಯ ವಿವರಗಳು, ಇತ್ತೀಚಿನ ಒಲಿಂಪಿಕ್ಸ್‌ನಲ್ಲಿ ಗೆದ್ದ ದೇಶಗಳ ಮೆಡಲ್‌ಗಳ ಪಟ್ಟಿ ಮತ್ತು ಆ ದೇಶಗಳ ಜನರಿಗೆ ದೊರಕುತ್ತಿರುವ ಪ್ರೊಟೀನ್ ಬಳಕೆ-ಈ ಎಲ್ಲವೂ ಕಂಪ್ಯೂಟರೀಕೃತ ಬೋರ್ಡ್‌ನಲ್ಲಿ ರಾರಾಜಿಸುತ್ತಿದ್ದವು. ಅಲ್ಲಿಂದ ಮುಂದೆ ಹೊರಟರೆ ನಮಗೆ ಕಾಣಸಿಗುವುದೇ ಮೇವು ಮತ್ತು ಆಹಾರ ಘಟಕ. ಅಲ್ಲಿ ವಿವಿಧ ಮೇವಿನ ವಿವರ, ಅವುಗಳ ಪೌಷ್ಟಿಕತೆಯ ವಿವರ, ಆಹಾರ ಮಿಶ್ರಣದ ವಿವರ ಎಲ್ಲಾ ಗಮನ ಸೆಳೆಯುತ್ತಿದ್ದವು. ಆಡು-ಕುರಿಗಾರಿಕೆಗೆ ದೊಡ್ಡ ಸವಾಲು ಎಂದರೆ ಮೇವಿನದೇ ಆಗಿರುವುದನ್ನು ಮನನ ಮಾಡಿಕೊಂಡಂತಿತ್ತು, ಅಲ್ಲಿನ ಪರಿಸರ. ಪ್ರತಿ ಕುರಿಗಾರನೂ ತನ್ನ ಕುರಿಗಳ ವಿಶಿಷ್ಟತೆಗೆ ಅನುಗುಣವಾಗಿ ಆಹಾರ ಕ್ರಮವನ್ನು ವಿವರಿಸುವ ಸಲಹೆಗಾರರು ಅಲ್ಲಿಗೆ ಬಂದವರೊಡನೆ ಚರ್ಚಿಸುತ್ತಿದ್ದರು. ಅಲ್ಲಿಯೇ ಪಕ್ಕದಲ್ಲಿದ್ದ ಒಂದು ಎಕರೆಯ ಮೇವಿನ ಮಾದರಿ ವನಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ವಿವರಿಸುತ್ತಿದ್ದರು. ಒಂದು ಎಕರೆಯಲ್ಲಿ ಬೆಳೆಯಬಹುದಾದ ಸಮತೋಲಿತ ಪೌಷ್ಟಿಕಾಂಶ ನೀಡುವ ಮೇವುಗಳ ವಿವರದ ಚಾರ್ಟ್‌ನ್ನು ತ್ರಿ-ಡೈಮೆನ್ಸ್‌ನಲ್ಲಿ ಹಾಕಲಾಗಿತ್ತು. ಅಲ್ಲದೇ ಮೇವಿನ ಬೀಜಗಳ ಮಾರಾಟ ಸಹ ಅಲ್ಲಿಯೇ ನಡೆಯುತ್ತಿತ್ತು. ಒಣಮೇವು, ಹಸಿರು ಮೇವಿನ ಅನುಪಾತವನ್ನು ಪ್ರತಿಯೊಬ್ಬ ಕುರಿಗಾರರಿಗೆ ನಿಗದಿ ಪಡಿಸುವ ಕಾರ್ಯವೂ ನಡೆಯುತ್ತಿತ್ತು. ಕೇಂದ್ರೀಕೃತ ಏಕರೂಪದ ಆಹಾರವನ್ನು ತಿರಸ್ಕರಿಸಿ ಆಡು-ಕುರಿಗಾರನ ಹೊಲ, ತೋಟದಲ್ಲಿಯೇ ಅವನದೇ ಆದ ಅನನ್ಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿತ್ತು.

ಅಲ್ಲಿಯೇ ಮುಂದೆ ಸಾಗಿದರೆ, ಆಡು-ಕುರಿಗಳ ಆಸ್ಪತ್ರೆ. ಅಲ್ಲಿ ಪಶುವೈದ್ಯಾಧಿಕಾರಿ ತನ್ನ ಸಿಬ್ಬಂದಿಯೊಂದಿಗೆ ನಿಂತು ಕುರಿಯೊಂದಕ್ಕೆ ಹೆರಿಗೆ ಮಾಡಿಸುತ್ತಿದ್ದರು. ಆ ಆಸ್ಪತ್ರೆ ಎಲ್ಲಾ ಆಸ್ಪತ್ರೆಗಳಂತೆ ಇರಲಿಲ್ಲ. ಅಲ್ಲಿನ ಪಶುವೈದ್ಯ ಕುರಿಗಾರರಿಗೆ ರೋಗ ತಡೆಗಟ್ಟುವುದು, ರೋಗಗಳ ನಿಯಂತ್ರಣ, ಮನೆ ಮದ್ದು, ಮೇವುಆಹಾರ ರೂಪದ ಚಿಕಿತ್ಸೆ ಮುಂತಾದವುಗಳನ್ನು ಬೋಧಿಸುವ ಪ್ರೊಪೆಸರ್‌ನಂತೆ ಕಾಣುತ್ತಿದ್ದರು, ಅಲ್ಲಿನ ಡಾಕ್ಟರ್, ಯಾವ್ಯಾವ ಊರಿನಲ್ಲಿ ಕೈಗೊಂಡ ಲಸಿಕಾ ವಿವರಗಳ ಪಟ್ಟಿಯಲ್ಲಿ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡುವುದರ ಸೂಚಿಯಾಗಿದ್ದರು. ಅಲ್ಲಿ ನೆರೆದಿದ್ದ ಕುರಿಗಾರರೆಲ್ಲಾ ಅಲ್ಲಿನ ಸೊಸೈಟಿಯಲ್ಲಿ ಕಡ್ಡಾಯವಾಗಿ ತರಬೇತಿ ಹೊಂದಿದವರೇ ಆಗಿದ್ದ ಕಾರಣಕ್ಕೆ ಆಡು-ಕುರಿಗಳ ಸಾವಿನ ಪ್ರಮಾಣ ತಗ್ಗಿರುವುದನ್ನು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಇಲ್ಲಿನ ಕುರಿ-ಆಡು ಆಸ್ಪತ್ರೆ 24 ಗಂಟೆಗಳ ಆಸ್ಪತ್ರೆ. ಕುರಿಗಾರನ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿತ್ತು. ತುರ್ತುಚಿಕಿತ್ಸೆಯ ಫೋನ್ ಕರೆ ಬಂದರೆ ತಕ್ಷಣ ಧಾವಿಸಿ ಬರುವ ವ್ಯವಸ್ಥೆ ಅಲ್ಲಿತ್ತು. ದಿನದ 24 ಗಂಟೆಗಳು ಕೆಲಸ ಮಾಡುವ ಮೂರು ತಂಡಗಳ ಕೆಲಸದ ಅವಧಿಯ ಬೋರ್ಡ್ ಸಹ ತೂಗಾಡುತ್ತಿತ್ತು. ಅಲ್ಲಿಯೇ ನಿಂತಿದ್ದ ಆ್ಯಂಬುಲೆನ್ಸ್ ಅತ್ಯಾಧುನಿಕವಾಗಿ ಸಜ್ಜುಗೊಂಡಿತ್ತು. ಅಲ್ಲಿ ಜಂತುಹುಳಗಳ ಪರೀಕ್ಷೆ ಮಾಡುವ ಉಪಕರಣಗಳು, ರಕ್ತ ಪರೀಕ್ಷೆ ಉಪಕರಣಗಳು ಮುಂತಾದ ಹಲವು ಪರಿಕರಗಳ ಲ್ಯಾಬ್ ಆ ಆ್ಯಂಬುಲೆನ್ಸ್‌ನಲ್ಲಿಯೇ ಕುಳಿತು ಗಮನ ಸೆಳೆಯುತ್ತಿತ್ತು. ಸಿಬ್ಬಂದಿ ಕುರಿಗಾರರನ್ನು ತಮ್ಮ ನೆಂಟರಂತೆ, ಸ್ನೇಹಿತರಂತೆ ಪರಿಭಾವಿಸಿ ಮಾತಾಡುತ್ತಿದ್ದ ಬಗೆ ಸೋಜಿಗವನ್ನು ಉಂಟು ಮಾಡುತ್ತಿತ್ತು.

 ಮತ್ತೆ ಮುಂದುವರಿದರೆ, ನಿಮಗೆ ಎದುರಾಗುವುದು ಜೀವಂತ ಆಡು-ಕುರಿಗಳ ಲೋಕ. ಅಲ್ಲಿ ಎರಡು ವಿಭಾಗಗಳು ಇದ್ದವು. ಸಂಘದ ಮೂಲಕ ಖರೀದಿ ಮಾಡಿ, ನಗರಗಳ ಮಾರಾಟ ಕೇಂದ್ರಗಳಿಗೆ ಕಳಿಸಲು ಸಿದ್ಧಗೊಂಡ ಆಡು, ಕುರಿಗಳ ವಿಭಾಗ. ಅಲ್ಲಿ ಈ ವಾರದಲ್ಲಿ ಖರೀದಿ ಮಾಡಿದ ಆಡು, ಕುರಿಗಳನ್ನು ಮಾರುಕಟ್ಟೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಇದಾಗಿತ್ತು. ವಾರಕ್ಕೆ ಸರಾಸರಿ ಐನೂರು ಆಡು-ಕುರಿಗಳನ್ನು ಸೊಸೈಟಿ ಕುರಿಗಾರರಿಂದ ಖರೀದಿ ಮಾಡಿ, ಅವರಿಗೆ ವೈಜ್ಞಾನಿಕ ಬೆಲೆ ನೀಡಿ, ನಂತರ ಮಾರಾಟಗಾರರಿಗೆ ಮಾರಾಟ ಮಾಡಲಾಗುತ್ತಿತ್ತು. ಸೊಸೈಟಿ ತನ್ನ ಕಾಲ ಮೇಲೆ ನಿಂತುಕೊಳ್ಳುವ ಸ್ವಾವಲಂಬನೆಯ ಬಲ ಬಂದಿರುವುದೇ ಈ ವಿಭಾಗದಿಂದ. 500 ಆಡು, ಕುರಿಗಳ ಮಾರಾಟದ ಬಗ್ಗೆ ತೃಪ್ತಿ ಹೊಂದಿದ್ದರು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು.

 ಇನ್ನೊಂದು ವಿಭಾಗ ಮಾದರಿ ಸಾಕಣೆ ಪದ್ಧತಿಯ ಪರಿಚಯಕ್ಕೆ, ತರಬೇತಿಗೆ, ಪ್ರದರ್ಶನಕ್ಕೆ ಆಡು, ಕುರಿಗಳು ಮೀಸಲಾಗಿತ್ತು. ಅಲ್ಲಿ ಆ ಪ್ರದೇಶದಲ್ಲಿ ಲಭ್ಯವಿದ್ದ ಒಳ್ಳೆಯ ಟಗರುಗಳನ್ನು ಸಾಕಲಾಗುತ್ತಿತ್ತು. ಅವುಗಳ ವಂಶವೃಕ್ಷ, ವಂಶವಾಹಿ ಗುಣಗಳ ದಾಖಲಾತಿಗಳನ್ನು ಇಡಲಾಗಿತ್ತು. ಯಾರೇ ಆದರೂ ಇಲ್ಲಿನ ಟಗರುಗಳನ್ನು ಬಳಸಿ, ವಾಪಸು ಪಡೆಯಬಹುದಾಗಿತ್ತು. ಇದರ ಮೂಲಕ ಇಡೀ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಆಡು, ಕುರಿಗಳಲ್ಲಿ ಒಳಸಂಕರಣವನ್ನು ಸಮರ್ಥವಾಗಿ ತಡೆಗಟ್ಟಲಾಗಿತ್ತು.

 ಮಾದರಿ ಕುರಿ-ಆಡು ಸಾಗಾಣೆಯ ಶೆಡ್ ಕುರಿಗಾರರಿಗೆ ಹಲವು ಸಾಕಣೆ ತತ್ವಗಳನ್ನು ಹೇಳಿಕೊಡುವಂತೆ ಇತ್ತು. ಅಲ್ಲಿನ ವಸತಿ ವ್ಯವಸ್ಥೆ ಸರಳವಾಗಿ, ಸ್ಥಳೀಯ ಪರಿಕರಗಳನ್ನು ಬಳಸಿ ಮಾಡಲಾಗಿತ್ತು. ಅಲ್ಲಿ ವಸತಿ ರೊಪ್ಪ ತುಂಬಾ ಸರಳವಾದದು ಮತ್ತು ಮಿತವ್ಯಯದಿಂದ ಕೂಡಿದ್ದಾಗಿತ್ತು. ಸ್ಥಳೀಯ ಕಟ್ಟಡ ವಿನ್ಯಾಸ ಹೊಂದಿತ್ತು. ಗಾಳಿ, ಬೆಳಕು, ಯಥೇಚ್ಛವಾಗಿದ್ದು, ಆಡು-ಕುರಿಗಳು ಚೆನ್ನಾಗಿ ಓಡಾಡಿಕೊಂಡಿರಲು ಹೊರಗೂಡು ವಿಸ್ತಾರವಾಗಿತ್ತು. ಮತ್ತೆ ಅಲ್ಲಿ ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಿರುವುದು ಗಮನಾರ್ಹ ವಾಗಿತ್ತು. ಸ್ಥಳೀಯ ತಳಿಗಳು ಸರ್ವಶೇಷ್ಠ ಎನ್ನುವ ಧ್ಯೇಯ ವಾಕ್ಯ ಎದ್ದು ಕಾಣುತ್ತಿತ್ತು.

ಸಮರ್ಪಕವಾದ ಮೇವು ಆಹಾರ ನೀಡಿದರೆ ಎಂಥ ತಳಿಗಳೂ ಸಮೃದ್ಧವಾಗಿ ಬೆಳೆಯ ಬಲ್ಲವು ಎಂಬುದನ್ನು ಅಲ್ಲಿ ನಿರೂಪಿಸುತ್ತಿರುವಂತೆ ಕಾಣುತ್ತಿತ್ತು. ಟಗರುಗಳ ಎಚ್ಚರಿಕೆಯ ಬಳಕೆ ಇದ್ದರೆ ಸಾಕು, ಒಳಸಂಕರಣ ತಡೆಗಟ್ಟಿದರೆ ಒಳಿತು ಎನ್ನುವ ಸೂತ್ರದ ಮೇಲೆ ಅಲ್ಲಿನ ಸಾಕಣೆ ನಡೆಯುತ್ತಿತ್ತು. ಮೇವು ಕತ್ತರಿಸುವ ಯಂತ್ರ ಇದ್ದರೆ ಸಾಕು ಆಡು, ಕುರಿ ಸಾಕಣೆಗೆ ಎನ್ನುವಂತಿತ್ತು. ಅಲ್ಲಿಗೆ ಬಂದು ಹೋದ ಕುರಿಗಾರರ ಏಕೈಕ ಯಂತ್ರವಾಗಿತ್ತು-ಚಾಪ್ ಕಟ್ಟರ್. ಅದು ಮಳೆಯನ್ನೇ ಅವಲಂಬಿಸಿರುವ ಪ್ರದೇಶವಾದ್ದರಿಂದ ಹಸಿರುಮೇವು ದೊರಕುವುದು ಕಡಿಮೆಯೇ ಆಗಿತ್ತು. ಆ ಪ್ರದೇಶದಲ್ಲಿ ದೊರಕುವ ಒಣಮೇವು, ಕಡ್ಡಿಗಳನ್ನು ಮೇವು ಕತ್ತರಿಸುವ ಯಂತ್ರಗಳಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ, ಕಸವನ್ನೇ ರಸ ಮಾಡುವುದರಲ್ಲಿ ಸಿದ್ಧ ಹಸ್ತರು ಆ ಆಡು, ಕುರಿ ಪಾಲಕರು! ಇಲ್ಲಿಯವರೆಗೂ ಆಡು, ಕುರಿ ಸಾಕಣೆ, ಮೇವಿನ ಕುರಿತಾದ ವಿಷಯಗಳು ನೋಡುತ್ತಾ ಬರುತ್ತಿದ್ದ ನನಗೆ ಹೊಸದೊಂದು ಆಧುನಿಕ ಲೋಕ ತೆರೆದು ಕೊಂಡಿತು. ಅದು ಆ ಸೊಸೈಟಿಯ ಆಡು, ಕುರಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವಿಭಾಗ. ಅದಕ್ಕೆ ಹೊಂದಿಕೊಂಡಂತೆ ಇರುವ ಕೋಣೆಗಳಲ್ಲಿ ಆ ಉತ್ಪನ್ನಗಳಿಗೆ ಬೇಕಾದ ಪ್ರತ್ಯೇಕ ಸೆಕ್ಷನ್‌ಗಳಿದ್ದವು. ಚರ್ಮದ ವಿವಿಧ ಹಂತದ ಹದಗಾರಿಕೆ ಕಂಡ ಉತ್ಪನ್ನಗಳು ಅಲ್ಲಿದ್ದವು. ಅಲ್ಲಿಯೇ ಇದ್ದ ಆಡು, ಕುರಿ ಪಾಲಕರನ್ನು ವಿಚಾರಿಸಿದಾಗ ತಿಳಿದಿದ್ದು ಇಷ್ಟು : ಪರಂಪರೆಯಿಂದ ಚರ್ಮವನ್ನು ಹದ ಮಾಡಿದ ಜ್ಞಾನವನ್ನು ವಿಸ್ತರಿಸಿ, ಅದಕ್ಕೆ ಕೆಲವು ಆಧುನಿಕ ಕ್ರಮಗಳನ್ನು ಸೇರಿಸಿ, ಕುರಿಗಾರರಿಗೆ ತರಬೇತಿ ನೀಡಲಾಗಿತ್ತು. ಅದರಂತೆ ಅಲ್ಲಿ ಹಲವು ಚರ್ಮದ ವಸ್ತುಗಳು ಕಾಣಿಸುತ್ತಿದವು.

ಮತ್ತೆ ಉಣ್ಣೆಯ ಒಂದು ದೊಡ್ಡ ಕಾರ್ಯಾಗಾರವೇ ಅಲ್ಲಿತ್ತು. ನಾಲ್ಕರಿಂದ ಆರು ಬಗೆಯ ಬಣ್ಣದ ಉಣ್ಣೆ ನೂಲು ಕಂಡು ಬರುತ್ತಿತ್ತು. ಕೇವಲ ಕಂಬಳಿಗೆ ಸೀಮಿತವಾಗಿದ್ದ ಉಣ್ಣೆ ಕಸುಬನ್ನು ಇಲ್ಲಿ ಆಧುನಿಕಗೊಳಿಸಲಾಗಿತ್ತು. ಅಲ್ಲಿ ಇಂದಿನ ಬೇಡಿಕೆ, ಬಳಕೆಗಳಂತೆ ಬ್ಯಾಗ್, ಮಪ್ಲರ್, ಟೇಬಲ್ ಕ್ಲಾತ್, ಫೋರ್‌ಮ್ಯಾಟ್, ವಿದೇಶಿಗಳಿಗೆ ರಫ್ತಾಗುತ್ತಿದ್ದ ಲ್ಯಾಂಡ್ರಿಬ್ಯಾಗ್ ಮುಂತಾದವು ಅವುಗಳ ರೇಟ್‌ನೊಂದಿಗೆ ವಿರಾಜಮಾನವಾಗಿ ಕುಳಿತಿದ್ದವು.

ಕೊನೆಗೆ, ಅಂದರೆ ಮುಖ್ಯವಾದ ಜಾಗದಲ್ಲಿ ಪಬ್ಲಿಕ್‌ಗೆ ತೆಗೆದುಕೊಂಡ ಜಾಗದಲ್ಲಿ ಮೀಟ್ ಆ್ಯಂಡ್ ಮಿಲ್ಕ್‌ಪಾರ್ಲರ್ ಅತ್ಯಾಧುನಿಕ ವಿನ್ಯಾಸದೊಂದಿಗೆ ಥಳಥಳಿಸುತ್ತಿತ್ತು. ಹೊಳೆಯುವ ವಿಭಿನ್ನ ಬೋರ್ಡ್‌ಗಳಲ್ಲಿ ಮಾಂಸ ಮತ್ತು ಹಾಲಿನ ವಿವಿಧ ಉತ್ಪನ್ನಗಳ ವಿವರ ಕಣ್ಣು ಕುಕ್ಕುವಂತೆ ಕಾಣುತ್ತಿತ್ತು. ಮಾಂಸದ ವೌಲ್ಯ, ಅದರ ಅಗತ್ಯ, ಮನುಷ್ಯನ ಆರೋಗ್ಯದಲ್ಲಿ ಫ್ರೊಟೀನ್ ಆವಶ್ಯಕತೆ. ಇವೆಲ್ಲವೂ ಜನಾರೋಗ್ಯ ಮತ್ತು ಸಮೃದ್ಧ ಸಮಾಜ ನಿರ್ಮಾಣದಲ್ಲಿ ವಹಿಸುತ್ತಿರುವ ಪಾತ್ರವನ್ನು ನಿರೂಪಿಸುತ್ತಿದ್ದವು. ಒಂದು ಕಡೆ ಮಟನ್ ಕಟ್ಟರ್‌ನಿಂದ ಮಾಂಸವನ್ನು ಕಟಾವು ಮಾಡುತ್ತಿದ್ದರೆ, ಇನ್ನೊಂದು ಕಡೆ ಚಿಲ್ಲರ್ ಕುಳಿತ್ತಿತ್ತು. ಮೂರು ದಿನಗಳವರೆಗೂ ಐದು ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಮಾಂಸ ಕೆಡದಂತೆ, ಪ್ರೆಶ್ ಆಗಿಯೇ ಇರುವಂತೆ ಕಾಪಾಡಿಕೊಳ್ಳುವ ಸಾಮರ್ಥ್ಯ ಈ ಚಿಲ್ಲರ್‌ಗಿತ್ತು. ಇನ್ನೊಂದು ಕಡೆ ಶೋಕೇಷ್‌ನಲ್ಲಿ ಎಲ್ಲಾ ವಿವಿಧ ಮೀಟ್ ಮತ್ತು ಗೋಟ್‌ಮಿಲ್ಕ್‌ನ ವಿವಿಧ ಉತ್ಪನ್ನಗಳು ಕಾಣಸಿಗುತ್ತಿದ್ದವು. ಇಲ್ಲಿಗೆ ಆ ಊರಿನ ಮತ್ತು ಎಲ್ಲಾ ಹೆಣ್ಣು ಮಕ್ಕಳು ಬಂದು ಮಾಂಸವನ್ನು ತಮಗೆ ಬೇಕಾದ ತೂಕದಲ್ಲಿ ಕೊಂಡೊಯ್ಯುವ ದೃಶ್ಯ ಗಮನ ಸೆಳೆಯುತ್ತಿತ್ತು. ಈ ಮೀಟ್‌ಪಾರ್ಲರ್ ಹಿಂಬದಿಯಲ್ಲಿ 50 ಆಡು, ಕುರಿಗಳನ್ನು ಕಟ್ ಮಾಡುವ ಅತ್ಯಾಧುನಿಕ ವಧಾಗಾರ ನಿರ್ಮಾಣಗೊಂಡಿತ್ತು.

ಇದನ್ನೆಲ್ಲಾ ಸಂತೃಪ್ತಿಯಿಂದ, ಆನಂದದಿಂದ ನೋಡುತ್ತಾ, ಓಡಾಡುತ್ತಾ ಇದ್ದ ನನ್ನನ್ನು ಅಲ್ಲಿನ ಮಹಿಳಾ ಕಾರ್ಯದರ್ಶಿ ಕರೆದರು. ಅಧ್ಯಕ್ಷರ ಚೇಂಬರಿಗೆ ಹೋದೆ. ಅಲ್ಲಿ ಆಡಿನ ಹಾಲಿನ ಸುವಾಸಿತ ಹಲವು ಡಿಂಕ್ಸ್‌ಗಳು ನನ್ನನ್ನು ಕಾಯುತ್ತಿದ್ದವು. ಮತ್ತೆ ಮೀಟ್‌ನ ಬಿಸ್ಕತ್ ಜೊತೆಗೆ ಇತ್ತು. ಮೀಟ್ ಬಿಸ್ಕತ್ ತಿಂದು ಆಡಿನ ಹಾಲನ್ನು ಸವಿದೆ. ಆಗ ಶುರುವಾಯಿತು ಅಧ್ಯಕ್ಷರ ಮಾತು. ಜೊತೆ ಜೊತೆಯಲ್ಲಿ ಕಾರ್ಯದರ್ಶಿ ಸಾಥ್ ಕೊಡುತ್ತಿದ್ದರು.

ಈ ಆಡು, ಕುರಿ ಸೊಸೈಟಿ ಶುರುವಾದ ಮೇಲೆ ಆ ಹೋಬಳಿಯ ಆರ್ಥಿಕತೆಯೇ ಬದಲಾಗಿದೆ. ಅಲ್ಲಿನ ಪ್ರತಿ ಮಹಿಳಾ ಕೂಲಿ ಕಾರ್ಮಿಕರು 20 ಕುರಿ, ಆಡುಗಳನ್ನು ಸಾಕಿ, ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ಊರಿನಲ್ಲಿ ಈ ಕುರಿ ಸೊಸೈಟಿಯ ಅಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ ಅವು ಉದ್ಯೋಗ ಆಧಾರಿತ ಮಹಿಳಾ ಸ್ವಸಹಾಯ ಸಂಘಗಳಾಗಿವೆ. ಅಂದರೆ ಸಾಕಣೆ, ಉಣ್ಣೆ ನೇಯ್ಗೆ, ಚರ್ಮದ ಹದಗಾರಿಕೆ, ಮಾಂಸದ ಹಾಲಿನ ಉತ್ಪನ್ನಗಳ ತಯಾರಿಕೆ, ಉತ್ಪನ್ನಗಳ ಮಾರಾಟ - ಹೀಗೆ ಹಲವು ಚಟುವಟಿಕೆಗಳ ಆಧಾರದಲ್ಲಿ ಬೇರೆ ಬೇರೆ ಸಂಘಗಳನ್ನು ಕಟ್ಟಿ ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿ ನಡೆಯುವ ಸಾಕಣೆ, ಸಂಸ್ಕರಣೆ, ವೌಲ್ಯವರ್ಧನೆ ಮಾರಾಟಗಳು ಈ ಮಹಿಳಾ ಸ್ವಸಹಾಯ ಸಂಘಗಳ ಮೇಲೆ ನಿಂತಿವೆ.

ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳಂತೆ ಕೇವಲ ಹಣ ಉಳಿತಾಯಕ್ಕೆ ಸೀಮಿತವಾಗದೆ ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಭಾರತ ದೇಶದಲ್ಲಿಯೇ ಮೊದಲು ಎನಿಸಿ ಹೆಮ್ಮೆ ಉಂಟಾಯಿತು. ಈ ಕಾರಣಕ್ಕೆ ಸಂಘದ ಕಟ್ಟಡದಲ್ಲಿ ಒಂದು ಕೃಷಿ ಪತ್ತಿನ ಸಹಕಾರ ಸಂಘದಂತೆ, ಆಡು, ಕುರಿ ಅಭಿವೃದ್ಧಿ ಪತ್ತಿನ ಸಹಕಾರ ಸಂಘವೂ ಇದೆ. ಅದು ಬ್ಯಾಂಕ್‌ನಂತೆ ಗಿಜಿಗುಡುವುದನ್ನು ಕಂಡು ಖುಷಿಯಾಯಿತು.

ಅದಕ್ಕೆ ಕಾರ್ಯದರ್ಶಿ ಹೇಳಿದರು ‘‘ಈ ಸಹಕಾರ ಸಂಘದ ಅಡಿಪಾಯವೇ ಮಹಿಳಾ ಸ್ವಸಹಾಯ ಸಂಘಗಳು. ಈ ಮಹಿಳಾ ಸ್ವಸಹಾಯ ಸಂಘಗಳ ಕ್ರಿಯಾಶೀಲತೆ ಈ ಸೊಸೈಟಿಯನ್ನು ಉಳಿಸಿ ಬೆಳೆಸಿದೆ’’ ಎಂದು ಹೇಳಿದ್ದು ಹೆಚ್ಚುಗಾರಿಕೆ ಎನಿಸದೆ ಇರಲಿಲ್ಲ. ಬಾಂಗ್ಲಾ ದೇಶದ ಬಡವರ ಬ್ಯಾಂಕರ್ ಮುಹಮ್ಮದ್ ಯೂನಸ್ ಅವರು ಒಂದು ಸೆಕೆಂಡ್ ನನ್ನ ಮನಪಟಲದಲ್ಲಿ ಹಾದು ಹೋದರು.

ಮತ್ತೆ ಸುತ್ತಮುತ್ತಲಿನ ಊರುಗಳಲ್ಲಿ ಪೌಷ್ಟಿಕತೆ ಹೆಚ್ಚಿರುವುದು, ಆರೋಗ್ಯ ಸುಧಾರಿಸಿರುವುದು, ಅಲ್ಲದೆ ಆ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಈ ಸೊಸೈಟಿಯಿಂದ ಹಲವು ರೀತಿಯಲ್ಲಿ ಆರ್ಥಿಕ ಸಹಾಯ ನೀಡಿರುವುದು -ಈ ಬಗೆಗಿನ ಮಾಧ್ಯಮದ ವರದಿಗಳನ್ನು ನನ್ನ ಮುಂದೆ ಇಟ್ಟರು.

ಅರೆ, ಇದೇನಿದು ! ಆಡು, ಕುರಿ ಪಾಲಕರು ಮಾತ್ರ ಉದ್ಧಾರವಾಗಿಲ್ಲ, ಸಮಗ್ರ ಅಭಿವೃದ್ಧಿಯೇ ಇಲ್ಲಿ ಕಾಣುತ್ತಿತ್ತು. ಇಲ್ಲಿನ ಆಡು, ಕುರಿ ಪಾಲಕರು ಜಲ ಸಂರಕ್ಷಣೆ ಮತ್ತು ಕಾಡಿನ ಸಂರಕ್ಷಣೆಯಲ್ಲಿ ಭಾಗಿಯಾಗಿರುವ ನ್ಯೂಸ್ ಪೇಪರ್‌ಗಳ ರಿಪೋರ್ಟ್ ನನ್ನ ಮುಂದೆ ಇತ್ತು. ಅಲ್ಲದೆ ಅಲ್ಲಿನ ಎಲ್ಲಾ ಕೆರೆ, ಕಟ್ಟೆಗಳ ನೀರು ವರ್ಷದ 365 ದಿನಗಳಲ್ಲೂ ತುಂಬಿ ತುಳುಕಾಡುತ್ತಿತ್ತು. ಸಾರ್ವಜನಿಕ ಹುಲ್ಲುಗಾವಲುಗಳು, ಗೋಮಾಳ, ಸಾಮಾಜಿಕ ಅರಣ್ಯ ಪ್ರದೇಶದ ಅಭಿವೃದ್ಧಿ ಮಾಧ್ಯಮಗಳ ಮೂಲಕ ಇಡೀ ದೇಶದ ಗಮನ ಸೆಳೆದಿತ್ತು. ಹಳ್ಳಿಗಳಿಂದ ನಗರಗಳಿಗೆ ಜನ ಗುಳೆ ಹೋಗುವುದನ್ನು ನೂರಕ್ಕೆ ನೂರು ತಪ್ಪಿಸಲಾಗಿತ್ತು.

ಹೀಗೆ ಏನೇನೋ ಅವರೊಡನೆ ಚರ್ಚೆ ಮಾಡುತ್ತಿದ್ದೆ. ಅವರಿಗೆ ಸೊಸೈಟಿ ವ್ಯಾಪ್ತಿಯ ಗ್ರಾಮ ಸಭೆೆಗೆ ಹೋಗುವ ಸಮಯ ಹತ್ತಿರ ಬರುತ್ತಿತ್ತು. ಸೊಸೈಟಿ ಎಲ್ಲಾ ನಿರ್ಧಾರಗಳನ್ನು ಗ್ರಾಮ ಸಭೆಯಲ್ಲಿಯೇ ತೆಗೆದುಕೊಳ್ಳುವಂತಿತ್ತು. ಅಲ್ಲಿಂದ ಹೊರಟೆ. ಅಲ್ಲಿಯೇ ನನ್ನ ಮುಂದೆ ಢಾಳಾಗಿ ಕಾಣುತ್ತಿದ್ದ ದೇವರಾಜ ಅರಸು ಫೋಟೊ ಕಂಡು ಕಣ್ಣಲ್ಲಿ ಸಂತೋಷದ, ಆನಂದದ ಬಾಷ್ಪಗಳು ತುಳುಕಿದ್ದು ಅಸಹಜವಲ್ಲ.

ಮೇಲೆದ್ದು ನೋಡಿದರೆ ಮುಂಜಾನೆ 5 ಗಂಟೆ. ಮಾಮೂಲಿ ಟೈಮ್. ಇಲ್ಲಿಯವರೆಗೆ ಕಂಡಿದ್ದೆಲ್ಲಾ ಕನಸೇ ! ಇದು 2006ನೆಯ ಇಸವಿಯಲ್ಲಿ ಬಿದ್ದ ಕನಸು ಇದರೊಂದಿಗೆ ಓಡುತ್ತಿದ್ದೇನೆ ; ಇದರೊಂದಿಗೆ ಜೀವಿಸುತ್ತಿದ್ದೇನೆ.

ಹೌದು ಇದು ಕನಸಾದರೂ, ಈ ದಿಕ್ಕಿನಲ್ಲಿ ನಡೆಯಲು ಈ ನಾಡು ಆರಂಭಿಸಿದೆ. ದಾರಿ ದೂರದಂತೆ ಕಂಡರೂ, ಗುರಿ ಮುಟ್ಟುವ ಆತ್ಮವಿಶ್ವಾಸವೂ ಇದೆ. ಒಬ್ಬನೇ ನಡೆದರೆ ಬೇಗ ಹೋಗಬಹುದು ಎಂಬ ಆತುರ ಈಗ ಇಲ್ಲ. ಇದು ತುಂಬಾ ದೂರದ ನಡಿಗೆ ಆದ್ದರಿಂದ ಸುಸ್ತು, ಆಯಾಸ, ಅಡತಡೆಗಳು ಹೆಚ್ಚು ಬರಬಹುದು. ಜನರೊಡನೆ ನಡೆಯುವುದು ಸುಖ, ಶಕ್ತಿ ನೀಡುವುದರ ಅರಿವಿರುವ ನಾನು ಈಗ ಎಲ್ಲರೊಡನೆ ನಡೆಯುತ್ತಿದ್ದೇನೆ. ನಿಧಾನವಾದರೂ ನಡೆಯುತ್ತಾ, ಖುಷಿ ಅನುಭವಿಸುತ್ತಾ, ದೂರ ನೆನಪಿಸಿಕೊಂಡು ಅಂಜದೆ, ಗಮ್ಯದತ್ತ ದೃಢ ಹೆಜ್ಜೆಗಳನ್ನು ಇಡುತ್ತಾ, ಮುಂದೆ ಸಾಗುತ್ತಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)