varthabharthi


ಚಿತ್ರ ವಿಮರ್ಶೆ

ಈತ ಅತಿರಥ ಮಹಾರಥ ಸಾರಥಿ!

ವಾರ್ತಾ ಭಾರತಿ : 26 Nov, 2017
ಶಶಿಕರ ಪಾತೂರು

ಹೊಸ ರೀತಿಯ ಅಪರಾಧಗಳನ್ನು ಆಧಾರವಾಗಿಸುವ ಸಿನೆಮಾಗಳು ಯಾವಾಗಲೂ ಗಮನ ಸೆಳೆಯುತ್ತವೆ. ಅದೇ ರೀತಿ ನಕಲಿ ಪದವಿ ಪ್ರಮಾಣ ಪತ್ರ ಸೃಷ್ಟಿಸುವ ಜಾಲದ ಬಗ್ಗೆ ತೋರಿಸಿರುವ ‘ಅತಿರಥ’ ಅದೇ ಕಾರಣಕ್ಕೆ ಆಕರ್ಷಕ.

ತಲೆಮಾರುಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕುಟುಂಬದಲ್ಲಿ ಜನಿಸಿದವನು ಆಕಾಶ್. ಬಿಬಿಸಿಯಲ್ಲಿ ವೃತ್ತಿ ಮಾಡುವುದು ಆತನ ಧ್ಯೇಯ. ಆದರೆ ಸ್ಪೈ ಟಿವಿ ಎನ್ನುವ ಸಣ್ಣ ವಾಹಿನಿಯಲ್ಲಿ ಕೆಲಸ ಮಾಡುತ್ತಲೇ ಹೊಸದಾಗಿ ಪರಿಚಯವಾಗುವ ಗೆಳತಿಗೆ ಬಿಬಿಸಿಯಲ್ಲಿರುವುದಾಗಿ ಸುಳ್ಳು ಹೇಳುತ್ತಾನೆ. ಆದರೆ ಅದು ಸುಳ್ಳು ಎಂದು ತಿಳಿದಾಗ ಆಕೆ ಕೋಪಿಸುತ್ತಾಳೆ. ಮುಂದೆ ಆಕಾಶ್‌ಗೆ ನಿಜಕ್ಕೂ ಬಿಬಿಸಿಯಿಂದ ಸೆಲೆಕ್ಷನ್ ಬಂದಾಗ ಆಕೆ ಆತನಲ್ಲಿ ಅನುರಕ್ತೆಯಾಗುತ್ತಾಳೆ. ಆದರೆ ಅದೇ ವೇಳೆ ಅಲ್ಲಿಗೆ ಬರುವ ಪೊಲೀಸರು ನಕಲಿ ಪ್ರಮಾಣ ಪತ್ರ ದಂಧೆಯಲ್ಲಿ ಅಪರಾಧಿಯೆಂದು ಆಕಾಶ್‌ನನ್ನು ಬಂಧಿಸುತ್ತಾರೆ. ಆತ ಅಪರಾಧಿ ಅಲ್ಲ ಎನ್ನುವ ಸತ್ಯವನ್ನು ನಾಯಕಿ ನಂಬುತ್ತಾಳಾ? ನಕಲಿ ಸರ್ಟಿಫಿಕೇಟ್ ಎಂಬ ಕಾರಣದಿಂದ ಉದ್ಯೋಗ ಇರದೆ ಬೀದಿಗೆ ಬಿದ್ದ ಆಕಾಶ್ ಆ ದಂಧೆಯ ವಿರುದ್ಧ ಹೇಗೆ ತಿರುಗಿ ನಿಲ್ಲುತ್ತಾನೆ? ಆ ಜಾಲವನ್ನು ಭೇದಿಸುವ ರೋಚಕ ಪ್ರಯತ್ನದ ವಿಶೇಷತೆಗಳೇನು ಎನ್ನುವುದನ್ನು ನೀವು ಚಿತ್ರ ಮಂದಿರದಲ್ಲೇ ನೋಡಬೇಕು.

ಈ ಸಿನೆಮಾ

ತಮಿಳು ಚಿತ್ರ ‘ಕನಿತನ್’ನ ರಿಮೇಕ್ ಆಗಿದ್ದರೂ ಕನ್ನಡದ ಮಟ್ಟಿಗೆ ಹೊಸತು. ವ್ಯವಸ್ಥೆಯೊಳಗಿನ ನೈಜ ದುರಂತದ ಕತೆಯಾದ ಕಾರಣವೇ ಚಿತ್ರಕ್ಕೆ ನಾಯಕನಾಗಲು ಚೇತನ್ ಒಪ್ಪಿದ್ದಾರೆ ಎನ್ನಬಹುದು. ಹಾಗಾಗಿ ಆಕಾಶ್ ಪಾತ್ರದಲ್ಲಿ ಚೇತನ್ ತಮ್ಮ ಅಭಿಮಾನಿಗಳ ಮನಸ್ಸನ್ನು ಮತ್ತೊಮ್ಮೆ ಸೆಳೆಯುವಲ್ಲಿ ಗೆದ್ದಿದ್ದಾರೆ. ನಾಯಕಿಯಾಗಿ ಲತಾ ಹೆಗ್ಡೆ ತಮ್ಮ ಮುಗ್ಧ ಸ್ನಿಗ್ದ ಸುಂದರಿ. ನಾಯಕನ ತಂದೆ ತಾಯಿಯಾಗಿ ಅವಿನಾಶ್ ಮತ್ತು ಸುಧಾ ಬೆಳವಾಡಿ ನಟಿಸಿದ್ದಾರೆ. ಪೊಲೀಸ್ ಪೇದೆಯಾಗಿ ಅಚ್ಯುತ್ ಕುಮಾರ್ ರದ್ದು ನೆನಪಲ್ಲಿ ಉಳಿಯುವಂಥ ಪಾತ್ರ. ವಕೀಲನಾಗಿ ರವಿಶಂಕರ್ ಗೌಡರಿಗೆ ಅಪರೂಪದಲ್ಲೊಂದು ಉತ್ತಮ ಪಾತ್ರ ದೊರಕಿದೆ. ಹಾಸ್ಯ, ಹೀರೋಯಿಸಮ್ ಮತ್ತು ಕರುಣೆಯನ್ನು ಮೂಡಿಸುವಂಥ ಪಾತ್ರವಾಗಿ ಚಿತ್ರ ಮುಗಿದ ಮೇಲೆಯೂ ಕಾಡುತ್ತಾರೆ. ಪ್ರಶಾಂತ್ ಸಿದ್ಧಿಯ ಆಫೀಸ್ ಬಾಯ್ ಪಾತ್ರ ಕೂಡ ಕಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಯಕನ ಸ್ನೇಹಿತನಾಗಿ ತುಳು ಸಿನೆಮಾ ನಾಯಕ, ಕಿರುತೆರೆ ಸುನೀಲ್ ಭರವಸೆಯ ಪಾತ್ರವಾಗಿದ್ದಾರೆ.

ಒಂದೇ ದೃಶ್ಯದಲ್ಲಿ ಬಂದರೂ ಮೈ ನಡುಗಿಸುವ ಪೊಲೀಸ್ ಅಧಿಕಾರಿಯಾಗಿ ಶೋಭರಾಜ್ ನಟನೆ ಅಮೋಘ. ಖಳ ನಟ ಸಾಧು ಕೋಕಿಲ, ಖಳನಟ ಕಬೀರ್ ದುಹಾನ್ ಸಿಂಗ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರನ್ನು ಪಾತ್ರಕ್ಕೆ ತಕ್ಕ ಮಟ್ಟಿಗೆ ಬಳಸಿಕೊ್ಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

ಕ್ಷಣ ಕ್ಷಣವೂ ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿಸುವ ಸನ್ನಿವೇಶಗಳು ಮತ್ತು ಅದಕ್ಕೆ ತಕ್ಕಂತೆ ಸಾಧು ಕೋಕಿಲರ ಪುತ್ರ ಸುರಾಗ್ ನೀಡಿರುವ ಹಿನ್ನೆಲೆ ಸಂಗೀತ ಥಿಯೇಟರ್‌ನಲ್ಲಿ ಪ್ರೇಕ್ಷಕ ಮೈಮರೆಯುವಂತೆ ಮಾಡುತ್ತದೆ. ಛಾಯಾಗ್ರಾಹಕ ಜೈ ಆನಂದ್ ಮತ್ತು ಸಂಕಲನಕಾರ ಮುನಿರಾಜ್ ಪ್ರಯತ್ನವೂ ಚಿತ್ರಕ್ಕೆ ಪೂರಕವಾಗಿದೆ. ಕಥಾಗತಿಗೆ ತಡೆಯಾಗುವಂತೆ ಬರುವ ಐಟಮ್ ಹಾಡೊಂದನ್ನು ಹೊರತು ಪಡಿಸಿದರೆ ಒಟ್ಟು ಚಿತ್ರ ಎಚ್ಚರಿಕೆಯ ಸಂದೇಶ ಮತ್ತು ಸಂಭ್ರಮವನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ. ವಾರ್ತಾ ವಾಹಿನಿಯ ಪ್ರತಿನಿಧಿಗಳು ಪ್ರಯತ್ನಿಸಿದರೆ ಎಷ್ಟರ ಮಟ್ಟಿಗೆ ಸಮಾಜ ಸುಧಾರಣೆ ತರಬಹುದೆಂಬುದನ್ನು ಚಿತ್ರ ಸೂಚ್ಯವಾಗಿ ಹೇಳುತ್ತದೆ. ಬುದ್ಧಿಮತ್ತೆಯನ್ನೇ ಪ್ರಮುಖವಾಗಿಸಿ ನಡೆಸುವ ಹೋರಾಟದಲ್ಲಿ ನಾಯಕ ಅತಿರಥ ಮಹಾರಥ ಸಾರಥಿ ಎಂದರೆ ತಪ್ಪಲ್ಲ!

ತಾರಾಗಣ: ಚೇತನ್, ಲತಾ ಹೆಗ್ಡೆ ಮೊದಲಾದವರು

ನಿರ್ದೇಶನ : ಮಹೇಶ್ ಬಾಬು

ನಿರ್ಮಾಣ : ಪ್ರೇಮ್, ವೇಣುಗೋಪಾಲ್, ಮಂಜುನಾಥ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)