varthabharthi


ಭೀಮ ಚಿಂತನೆ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಆತ್ಮೀಯತೆಗೆ ಸಾಕ್ಷಿಕೊಡಿ ಇಲ್ಲವಾದರೆ ಬಿಟ್ಟುಬಿಡಿ

ವಾರ್ತಾ ಭಾರತಿ : 21 Dec, 2017

ಭಾಗ-1

ದಲಿತರೊಂದಿಗೆ ಮೇಲ್ಜಾತಿಯವರು ಹೇಗೆ ಅಮಾನವೀಯ ರೀತಿಯಲ್ಲಿ ವರ್ತಿಸುತ್ತಾರೆ ಅನ್ನುವುದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಹೃದಯವನ್ನೇ ತಲ್ಲಣಗೊಳಿಸುವಂತಹ ಒಂದು ಘಟನೆ ನಡೆದಿದೆ. ಇಂಧೋರ್ ಹಾಗೂ ಗ್ವಾಲಿಯರ್ ಸಂಸ್ಥಾನದಲ್ಲಿ ಬಳಹಾಯಿ ಅನ್ನುವ ಒಂದು ದಲಿತರ ಜಾತಿಯಿದೆ. ಹೋಳಿ ಹುಣ್ಣಿಮೆಯ ಮರುದಿನ ಬಳಹಾಯಿ ಜಾತಿಯ ಹೆಣ್ಣುಮಕ್ಕಳ ಕಣ್ಣು ಕಟ್ಟಿ ಊರಲ್ಲೆಲ್ಲ ಅವರ ಮೆರವಣಿಗೆ ಮಾಡಲಾಗುತ್ತದೆ, ಆಗ ಮೇಲ್ಜಾತಿಯವರು ಅವರ ಮೇಲೆ ಕಸ, ಹೊಲಸನ್ನೆಲ್ಲ ಎರಚುತ್ತಾರೆ. ಈ ಹೊಲಸಿನ ಹೊಡೆತದಿಂದ ಬೇಸತ್ತ ಮಹಿಳೆಯರು ನಮ್ಮನ್ನು ಬಿಟ್ಟು ಬಿಡಿ ಎಂದು ಗೋಗರೆದರೂ ಮೇಲ್ಜಾತಿಯವರು ಅವರ ಮೇಲೆ ಇನ್ನಷ್ಟು ಹೊಲಸು ಎರಚಿ ಮಜಾ ನೋಡುತ್ತಾರೆ. ಬಣ್ಣದಾಟದ ಈ ಪ್ರಕಾರಕ್ಕೆ ‘ಝಂಬರಾಬಿಗಾರ್’ ಅನ್ನುತ್ತಾರೆ ಹಾಗೂ ಹೀಗೆ ಮಾಡುವುದು ಊರಿನವರ ಹಕ್ಕು ಎಂದು ಅಲ್ಲಿಯ ಜನರ ತಿಳುವಳಿಕೆಯಿದೆ. ಇತ್ತೀಚೆಗೆ ಈ ಬಳಹಾಯಿ ಜನರಲ್ಲಿ ಸಾಮಾಜಿಕ ಜಾಗೃತಿ ಆರಂಭವಾಗಿದೆ ಹಾಗೂ ತಮ್ಮ ಹೆಣ್ಣುಮಕ್ಕಳ ಅವಸ್ಥೆ ನೋಡಲಾರದೆ ಈ ಜನ ಈ ವರ್ಷ ‘ಝಂಬರಾಬಿಗಾರ್’ ಆಟವನ್ನು ನಿಲ್ಲಿಸಿರುವುದರಿಂದ ಮೇಲ್ಜಾತಿಯ ಜನ ಸಿಟ್ಟಿಗೆದ್ದು ಈ ಬಳಹಾಯಿ ಜನರನ್ನು ಬಹಳ ಪೀಡಿಸುತ್ತಿದ್ದಾರೆ. ಕೆಲವೊಂದು ಕಡೆಯಂತೂ ಅವರನ್ನು ಸಿಕ್ಕಾಪಟ್ಟೆ ಹೊಡೆಯಲಾಗುತ್ತಿದೆ. ಅವರಿಗೆ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ.

ಅವರಿಗೆ ಅವರ ಕೂಲಿಯನ್ನೂ ಕೊಡದಂತೆ ಕೂಟನೀತಿಗಳನ್ನು ರಚಿಸಲಾಗುತ್ತಿದೆ. ಇನ್ನೂ ಕೆಲವೆಡೆ ಅವರ ಮನೆಗಳನ್ನೂ ಸುಡಲಾಗುತ್ತಿದೆ. ಈ ಎಲ್ಲ ಪೀಡೆಗಳಿಗೆ ಬೇಸತ್ತ ಬಳಹಾಯಿ ಜನ ತಾವು ವಾಸಿಸುತ್ತಿದ್ದ ವಸತಿಗಳನ್ನು ಬಿಟ್ಟು ಕಂಡಲ್ಲಿ ವಲಸೆ ಹೋಗುತ್ತಿದ್ದಾರೆ. ಈ ತೊಂದರೆ ಕೇವಲ ಜನತೆಯಿಂದ ಮಾತ್ರವಲ್ಲ ಮೇಲೆ ಹೇಳಿದ ಸಂಸ್ಥಾನದ ಅಧಿಕಾರಿಗಳೂ ಇದರಲ್ಲಿ ಸೇರಿಕೊಂಡಿದ್ದಾರೆ!! ಇಂತಹ ಒಂದು ಪ್ರಕಾರ ಮಲಬಾರ್‌ನಲ್ಲಿಯೂ ನಡೆದಿದೆ. ಮಲಬಾರ್‌ನಲ್ಲಿ ದಲಿತರು ಕೇವಲ ಹಿತ್ತಾಳೆಯ ಒಡವೆಗಳನ್ನೇ ಉಪಯೋಗಿಸಬೇಕು ಅನ್ನುವ ಪದ್ಧತಿಯಿದೆ. ಕಳೆದ ಮೇ ತಿಂಗಳಿನ ಕೊನೆಯಲ್ಲಿ ಮಾನೂರ್ ಎಂಬ ಊರಿನಲ್ಲಿ ದಲಿತರ ಒಂದು ಸಭೆಯನ್ನು ಕರೆಯಲಾಗಿತ್ತು. ಅಲ್ಲಿ ಮಲಬಾರಿನ ದಲಿತರು ಹಿತ್ತಾಳೆಯ ಒಡವೆಳನ್ನು ಬಿಟ್ಟು ಚಿನ್ನದ ಒಡವೆಗಳನ್ನು ಧರಿಸುವ ರೂಢಿಯನ್ನಾರಂಭಿಸಬೇಕು ಅನ್ನುವ ಮಸೂದೆ ಮಂಜೂರಾಯಿತು. ಶುಭಸ್ಯಂ ಶೀಘ್ರಂ ಅಂದುಕೊಂಡು ಸಭೆಯ ಚಾಲಕರು ಕೆಲವು ದಲಿತ ಸ್ತ್ರೀಯರಿಗೆ ನಾಣ್ಯದ (ಆಗಿನ ಕಾಲದಲ್ಲಿ ಈಗಿನಂತೆ ಬೇರೆ ಬೇರೆ ಆಕಾರದ ಒಡವೆಗಳಿರಲಿಲ್ಲ, ಅವು ನಾಣ್ಯದ ಇಲ್ಲವೆ ಬಿಲ್ಲೆಯ ರೂಪದಲ್ಲಿರುತ್ತಿದ್ದವು. ಅದಕ್ಕೆ ಮರಾಠಿಯಲ್ಲಿ ‘ಪುತಳ್ಯಾ’ ಅನ್ನುತ್ತಿದ್ದರು) ಆಕಾರದ ಒಡವೆಗಳನ್ನು ಹಂಚಿದರು. ಅಷ್ಟಕ್ಕೆ ಸಿಟ್ಟಿಗೆದ್ದ ಮೇಲ್ಜಾತಿಯ ಜನ ಇವರಿಗೆ ಇವರ ಕೂಲಿಯನ್ನೇ ಕೊಡುವುದಿಲ್ಲ ಎಂದು ಧರಣಿ ಕೂತಿದ್ದಾರೆ.

ಇಂತಹುದೇ ಪರಿಣಾಮ ಮಹಾಡ್ ಪರಿಷತ್ತಿನದ್ದಾಗುತ್ತಿದೆ ಅನ್ನುವುದು ಖೇದದ ವಿಷಯ. ಮಹಾಡ್ ಪರಿಷತ್ತಿನಲ್ಲಿ ರೊಟ್ಟಿ ಬೇಡುವುದು, ಸತ್ತ ಪ್ರಾಣಿಗಳ ಮಾಂಸ ತಿನ್ನುವಂತಹ ಅನಿಷ್ಟ ರೀತಿಗಳನ್ನು ನಿಲ್ಲಿಸುವಂತಹ ಮಸೂದೆ ಮಂಜೂರಾಗಿತ್ತು. ಈ ಮಸೂದೆ ಇಷ್ಟು ಬೇಗ ಜಾರಿಗೆ ಬರಬಹುದೆಂದು ನಾವು ಕನಸಿನಲ್ಲೂ ನೆನೆಸಿರಲಿಲ್ಲ. ಯಕ್ಷಿಣಿಯ ಮಂತ್ರದಂಡ ತಿರುಗಿದಂತೆ ಕುಲಾಬಾ ಜಿಲ್ಲೆಯಲ್ಲಿ ರೊಟ್ಟಿ ಬೇಡುವುದು ಹಾಗೂ ಸತ್ತ ಪ್ರಾಣಿಗಳ ಮಾಂಸ ತಿನ್ನುವುದನ್ನು ನಿಲ್ಲಿಸಲಾಯಿತು. ಆದರೆ ಈ ಹೊಸ ಪದ್ಧತಿ ಜಾರಿಗೆ ತಂದ ಊರುಗಳಲ್ಲಂತೂ ದಲಿತರ ಮೇಲೆ ದೊಡ್ಡ ಸಂಕಟವೇ ಎದುರಾಗಿದೆ. ಕೆಲವೆಡೆಯಲ್ಲಿ ಅವರಿಗೆ ಊರ ಒಳಗಿನಿಂದ ಓಡಾಡುವುದನ್ನು ತಡೆಯಲಾಗಿದೆ. ಕೆಲವೆಡೆ ಊರಿನ ಜನರು ದಲಿತರಲ್ಲಿ ಉಳುಮೆಗಾಗಿ ಬಿಟ್ಟ ಜಮೀನನ್ನು ಕಿತ್ತುಕೊಂಡಿದ್ದಾರೆ.

ಹೀಗೆ ದಲಿತರನ್ನು ಪೀಡಿಸಿ ಪೀಡಿಸಿ ಹಳೆಯ ಹೀನ ಪದ್ಧತಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಲಾಗುತ್ತಿದೆ. ಇದನ್ನೆಲ್ಲ ನೋಡಿ, ಓದಿ ಯಾವುದೇ ಬುದ್ಧಿವಂತ ಮನುಷ್ಯನಿಗೆ ಆಶ್ಚರ್ಯವಾಗದಿರದು. ದಲಿತರು ಚೊಕ್ಕಟವಾಗಿರುವುದಿಲ್ಲ, ಎಂಜಲನ್ನು ಬೇಡಿ ತಿನ್ನುತ್ತಾರೆ ಹಾಗೂ ಸತ್ತ ಪ್ರಾಣಿಗಳ ಮಾಂಸ ತಿನ್ನುತ್ತಾರೆ, ಆದ್ದರಿಂದಲೇ ಅವರನ್ನು ಅಸ್ಪಶ್ಯರೆಂದು ಕರೆಯುವುದು ಎಂದು ಮೇಲ್ಜಾತಿಯವರು ಯಾವತ್ತೂ ದಿಮಾಕಿನಲ್ಲಿ ಹೇಳುತ್ತಿರುತ್ತಾರೆ ಹಾಗೂ ಇಂತಹ ಅಮಂಗಲಕಾರಿ ಆಚಾರಗಳನ್ನು ಬಿಡದೆ ಅವರನ್ನು ಮೇಲ್ಜಾತಿಯವರೆಂದು ಒಪ್ಪಿಕೊಳ್ಳುವುದಾದರೂ ಹೇಗೆ ಅನ್ನುವ ಉಪದೇಶವನ್ನು ಯಾವತ್ತೂ ಕೊಡಲಾಗುತ್ತದೆ. ದಲಿತರು ಅಜ್ಞಾನದ ಆಂಧಕಾರದಲ್ಲಿ ಮುಳುಗಿದ್ದಾಗ ಇಂತಹ ಉಪದೇಶದ ಅಗತ್ಯವಿತ್ತು, ಆದರೆ ಇತ್ತೀಚೆಗೆ ಎಲ್ಲ ದಲಿತರು ಸಂಪೂರ್ಣವಾಗಿ ಎಚ್ಚರಗೊಂಡಿದ್ದಾರೆ. ಅವರಿಗೆ ಹೀನತೆಯನ್ನು ತಂದುಕೊಟ್ಟಿರುವಂತಹ ರೂಢಿ ಪರಂಪರೆಗಳನ್ನವರು ಬಿಟ್ಟುಬಿಡಲು ಸಿದ್ಧರಿದ್ದಾರೆ. ಆದರೆ ಮೇಲ್ಜಾತಿಯವರ ಮಾತನ್ನು ಕೇಳಿಯೇ ತಮ್ಮಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿರುವ ದಲಿತರ ದಾರಿಯಲ್ಲಿ ಈ ಮೇಲ್ಜಾತಿಯವರೇ ಮುಳ್ಳು ಹರಡುತ್ತಿದ್ದಾರೆ ಅನ್ನುವುದೇ ಆಶ್ಚರ್ಯ.

ದಲಿತರು ‘ನಮ್ಮನ್ನು ಅಸ್ಪಶ್ಯರೆಂದು ಯಾಕೆ ಕರೆಯುತ್ತೀರಿ?’ ಎಂದು ಕೇಳಿದಾಗ ಮೇಲ್ಜಾತಿಯವರು ‘‘ನೀವು ತಿನ್ನಬಾರದ್ದನ್ನೆಲ್ಲ ತಿನ್ನುತ್ತೀರಿ, ಅಮಂಗಲ ಮಾತನಾಡುತ್ತೀರಿ ಹಾಗೂ ನೀವು ಚೊಕ್ಕಟವಾಗಿರುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನಾವು ನಿಮ್ಮನ್ನು ಮುಟ್ಟುವುದಾದರೂ ಹೇಗೆ?’’ ಅನ್ನುತ್ತ ದಲಿತರ ಏಳಿಗೆಯಲ್ಲಿ ಮೇಲ್ಜಾತಿಯವರೇ ಅಡ್ಡಗಾಲು ಹಾಕುತ್ತಾರೆ. ಈಗ ಅದೇ ದಲಿತರು ಸ್ವಂತ ಖುಶಿಯಿಂದ ತಮ್ಮ ಎಲ್ಲ ಆಚಾರ-ವಿಚಾರಗಳನ್ನು ಬದಲಿಸಲು ಸಿದ್ಧರಿರುವಾಗ ಅವರದನ್ನು ಬದಲಿಸಬಾರದು ಎಂದು ಅವರ ವಿರುದ್ಧ ತಮ್ಮಲ್ಲಿರುವ ಶಕ್ತಿಯನ್ನೆಲ್ಲ ಉಪಯೋಗಿಸಿ ತಮ್ಮ ಏಳಿಗೆಗಾಗಿ ಕಷ್ಟಪಡುತ್ತಿರುವ ದಲಿತರನ್ನು ಪೀಡಿಸಿ ಅವರು ತಮಗೆ ಹಾಕಿಕೊಟ್ಟಿರುವ ಗೆರೆಯನ್ನು ದಾಟಬಾರದು ಎಂದು ನಿರ್ಧರಿಸಿರುವ ಮೇಲ್ಜಾತಿಯವರನ್ನು ನೋಡಿ ಯಾವುದೇ ಬುದ್ಧಿವಂತನಿಗೆ ಆಶ್ಚರ್ಯವಾಗದಿರದು. ದಲಿತರು ಯಾರಿಗೂ ನಷ್ಟವಾಗದಂತೆ ತಮ್ಮ ಏಳಿಗೆಗಾಗಿ ಕಷ್ಟಪಡುತ್ತಿರುವಾಗ ‘ನಿಮಗೆ ಕೊಬ್ಬು’ ಎಂದು ಹೇಳಿ ಹಿಂದೂ ಮಾಮಲೆದಾರರು ಅವರ ಫಿರ್ಯಾದುಗಳ ಕಡೆ ಗಮನ ಕೊಡದಿರುವುದು, ಹಿಂದೂ ಸಾಹುಕಾರರು ಅವರಿಗೆ ಉದ್ದರಿ ಕೊಡುವುದನ್ನು ನಿಲ್ಲಿಸುವುದು, ಹಿಂದೂ ಮಾರವಾಡಿಗಳು ಅವರಿಗೆ ಸಾಲ ಕೊಡುವುದನ್ನು ನಿಲ್ಲಿಸುವುದು ಹಾಗೂ ಹಿಂದೂ ಜಮೀನುದಾರರು ಅವರಲ್ಲಿ ತಮ್ಮ ಜಮೀನಿನಲ್ಲಿ ಉಳುಮೆಗೆ ಬಿಡದಿರುವುದು, ದಲಿತೋದ್ಧಾರದ ಇಂತಹ ಪ್ರಕಾರವನ್ನು ಇತಿಹಾಸದಲ್ಲಿ ಬರೆದಿಡಬೇಕು.

ನಿಜ ಹೇಳಬೇಕೆಂದರೆ ಸಾಕಷ್ಟು ಮೂಢರಾದ ದಲಿತರಿಗೆ ಹಳೆಯ ರೀತಿ, ರೂಢಿ ಪರಂಪರೆಯ ದೆವ್ವ ಯಾವ ರೀತಿ ಬಡಿದುಕೊಂಡಿದೆಯೆಂದರೆ ಎಷ್ಟೇ ಉಪದೇಶ ಮಾಡಿದರೂ ಉಪಯೋಗವಾದೀತೇ? ಅನ್ನುವ ಅನುಮಾನ ಯಾವತ್ತೂ ಕಾಡುತ್ತಿರುತ್ತಿತ್ತು. ಹೀಗಿದ್ದಾಗ ಉಪದೇಶ ತಟ್ಟನೆ ಉಪಯೋಗಕ್ಕೆ ಬಂದಿರುವುದನ್ನು ನೋಡಿ ದಲಿತೋದ್ಧಾರಕ್ಕಾಗಿ ದುಡಿಯುತ್ತಿರುವ ಜನರಿಗೆ ಸಂತೋಷವಾಗಬೇಕಿತ್ತು. ಆದರೆ ಹಾಗಾಗದೆ ಅವರ ತಲೆ ತಿರುಗುವುದನ್ನು ನೋಡಿದರೆ ಮೇಲ್ಜಾತಿಯವರಿಗೆ ಅಸ್ಪಶ್ಯತೆಯನ್ನು ಹೋಗಲಾಡಿಸುವುದೇ ಇಲ್ಲ, ಅಸ್ಪಶ್ಯರನ್ನು ಅಸ್ಪಶ್ಯರನ್ನಾಗಿಯೇ ಇಡುವುದಿದೆ ಅನ್ನುವುದು ಸ್ಪಷ್ಟವಾಗುತ್ತದೆ. ‘‘ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳದೆ ಇದ್ದರೆ ನಾವು ನಿಮ್ಮನ್ನು ಮನೆಗೆ ಸೇರಿಸುವುದಿಲ್ಲ’’ ಎಂದು ಹೇಳುವುದು ಹಾಗೂ ಜೀವನಶೈಲಿಯನ್ನು ಸುಧಾರಿಸುವ ಪ್ರಯತ್ನದಲ್ಲಿದ್ದಾಗಲೇ ‘‘ಗೆರೆ ದಾಟದಿರಿ’’ ಎಂದು ಹೆಜ್ಜೆ ಮುಂದಿಡುತ್ತಿರುವವನನ್ನು ಒದ್ದು ಕೆಳಗೆ ಬೀಳಿಸುವುದು. ಇಂತಹ ನಿಂದನೀಯ ವರ್ತನೆಯ ಮತ್ತೊಂದು ಅರ್ಥವೇನಿರಬಹುದು ಅನ್ನುವುದೇ ನಮಗೆ ತಿಳಿಯುತ್ತಿಲ್ಲ.
ಸ್ಮತಿಕಾರನಾದ ಮನು ಹೇಳಿದಂತೆ ಹಿಂದೂ ಸಮಾಜದ ವ್ಯಕ್ತಿಗೆ ಎಂಟು ಅಧಿಕಾರಗಳಿರಲು ಸಾಧ್ಯ.

ಆದರೆ ‘ಭಗವಾನ್’ ಮನುವು ಈ ಎಂಟು ಅಧಿಕಾರಗಳ ವಿಭಜನೆಯನ್ನು ತನ್ನ ಮನಬಂದಂತೆ ಮಾಡಿರುವುದರಿಂದ ಈ ಅಧಿಕಾರಗಳಲ್ಲಿ ಹೆಚ್ಚು ಅಧಿಕಾರಗಳನ್ನವನು ಬ್ರಾಹ್ಮಣರಿಗಾಗಿ ಕಾದಿರಿಸಿ, ಉಳಿದವುಗಳನ್ನು ಬ್ರಾಹ್ಮಣೇತರರಿಗಾಗಿ ಬಿಟ್ಟುಕೊಟ್ಟನು, ಇಲ್ಲಿಯೂ ದಲಿತರಿಗೆ ಏನೂ ಸಿಗಲಿಲ್ಲ. ಅವರವರಿಗೆ ಕೊಟ್ಟ ಅಧಿಕಾರದಂತೆ ಅವರ ಜೀವನಶೈಲಿಯನ್ನೂ ‘ಭಗವಾನ್’ ಮನು ಹೇಳಿದ್ದಾನೆ. ಎಂಟು ಅಧಿಕಾರಿಗಳಲ್ಲಿ ದಲಿತರಿಗೆ ಯಾವುದೇ ಅಧಿಕಾರವಿಲ್ಲದ್ದರಿಂದ ಅವರಿಗಾಗಿ ಮನುವು ತೀರ ಕೆಳದರ್ಜೆಯ ಜೀವನಶೈಲಿಯನ್ನು ಹೇಳಿದ್ದಾನೆ. ಮನುಸ್ಮತಿ ಯನ್ನು ಓದಿದವರಿಗದು ಅರ್ಥವಾಗುತ್ತದೆ. ದಲಿತರು ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವುದೆಂದರೆ ಎಂಟು ಅಧಿಕಾರಗಳ ಯಜಮಾನನಾಗಬಯಸುವುದೂ ಹೌದು. ಹಾಗಾಗಿ ಮೇಲ್ಜಾತಿಯವರು ಈ ಸ್ಪರ್ಧೆಗಾಗಿ ವಿರೋಧಿಸುವುದು ಸಹಜವೆ. ಆದರೆ ಈ ಎಲ್ಲ ಪ್ರಕಾರ ‘ಭಗವಾನ್’ ಮನುವಿನ ಪಾಠದಿಂದಲೇ ಆಗಿದೆ ಅನ್ನುವುದು ನಿರ್ವಿವಾದ. ಮೇಲಿನ ಕಾರಣಗಳಿಂದ ಕೆಲವು ಪ್ರಸಂಗಗಳಲ್ಲಿ ನಾವು ಒಲ್ಲದ ಮನಸ್ಸಿನಿಂದ ಮನುಸ್ಮತಿಯ ಮೇಲೆ ಟೀಕೆ ಮಾಡಬೇಕಾಗುತ್ತದೆ. ಇದರಿಂದಲೇ ನಮ್ಮ ವ್ಯವಸಾಯ ಬಂಧುಗಳಾದ ಪ್ರಬೋಧ್‌ಕಾರ್ (ಪ್ರಬೋಧ ಪತ್ರಿಕೆ ಸಂಪಾದಕರು) ಅವರು ನಮ್ಮ ಮೇಲೆ ಎಷ್ಟು ಸಿಟ್ಟಿಗೆದ್ದಿದ್ದಾರೆ ಅಂದರೆ ಅವರು ತಮ್ಮ ಪತ್ರಿಕೆಯನ್ನು ನಮಗೆ ಕಳುಹಿಸುವುದಿಲ್ಲ ಅನ್ನುತ್ತಾರೆ. ನಾವು ಅಮಂಗಳ ಮಾತನಾಡುತ್ತೇವೆ ಅನ್ನುವುದು ಅವರ ಅಂಬೋಣ. ಅವರು ಮಾಡಿರುವ ಈ ಆರೋಪದಲ್ಲಿ ಎಷ್ಟು ಸತ್ಯಾಂಶವಿದೆ ಅನ್ನುವುದರ ಬಗ್ಗೆ ಬೇರೆ ಕಡೆ ಪ್ರಕಟಿಸಿರುವ ಇತರ ವೃತ್ತಪತ್ರಿಕೆಗಳ ಅಭಿಪ್ರಾಯದಿಂದ ಓದುಗರೇ ನಿರ್ಧರಿಸಲಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)