varthabharthi


ಆರೋಗ್ಯ

ಮೊಡವೆಗಳ ಕಾಟದಿಂದ ಪಾರಾಗಲು ಸುಲಭ ಮನೆಮದ್ದುಗಳಿವು...

ವಾರ್ತಾ ಭಾರತಿ : 9 Apr, 2018

ಮುಖದಲ್ಲಿಯ ಮೊಡವೆ ಯುವಜನರ, ವಿಶೇಷವಾಗಿ ಯುವತಿ ಯರ ಪಾಲಿಗೆ ಕೆಟ್ಟಶತ್ರುವಾಗಿದೆ. ಸಮಸ್ಯೆಯೆಂದರೆ ಯಾವುದಾದರೂ ಸಮಾರಂಭಗಳಲ್ಲಿ ಭಾಗವಹಿಸುವುದಿದ್ದಾಗಲೇ ದಿಢೀರ್ ಆಗಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಚರ್ಮರೋಗ ತಜ್ಞರ ಬಳಿ ಧಾವಿಸಲೂ ಹೆಚ್ಚಿನವರಿಗೆ ಸಮಯವಿ ರುವುದಿಲ್ಲ. ಈ ಸಂದರ್ಭದಲ್ಲಿ ಮೊಡವೆಗಳ ಕಾಟದಿಂದ ಪಾರಾಗಲು ಮನೆಮದ್ದುಗಳು ನೆರವಿಗೆ ಬರುತ್ತವೆ. ಇವು ನಮ್ಮ ಅಡುಗೆಮನೆ ಗಳಲ್ಲಿಯೇ ಇರುತ್ತವೆ, ಆದರೆ ನಮಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಚರ್ಮದಲ್ಲಿಯ ರಂಧ್ರಗಳು ಮೊಡವೆಗಳು ಮೂಡಲು ಕಾರಣ ವಾಗಿವೆ. ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವವು ಅತಿಯಾಗಿ ಉತ್ಪತ್ತಿಯಾದಾಗ ಈ ರಂಧ್ರಗಳು ದೊಡ್ಡದಾಗುತ್ತವೆ. ಇದರಿಂದಾಗಿ ಹೆಚ್ಚಿನ ಕೊಳೆ ರಂಧ್ರಗಳನ್ನು ಪ್ರವೇಶಿಸುತ್ತದೆ ಮತ್ತು ಅದರ ಮುಚ್ಚುವಿಕೆಗೆ ಕಾರಣವಾಗುತ್ತದೆ. ಈ ರಂಧ್ರಗಳಲ್ಲಿರುವ ಸೂಕ್ಷ್ಮಜೀವಿ ಗಳು ಮೊಡವೆ ಹುಟ್ಟಲು ಕಾರಣವಾಗುತ್ತವೆ.

ಯುವತಿಯರಲ್ಲಿ ಋತುಚಕ್ರದ ಸಮಯ ಸಮೀಪಿಸಿದಾಗ ಮೊಡವೆ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಾನಸಿಕ ಒತ್ತಡವೂ ಇವುಗಳಿಗೆ ಕಾರಣವಾಗುತ್ತದೆ.

ಕೆಲವೊಮ್ಮೆ ಗರ್ಭ ನಿರೋಧಕ ಮಾತ್ರೆಗಳು, ಇತರ ಔಷಧಿಗಳು ಮತ್ತು ಥೈರಾಯ್ಡೆನಂತಹ ಆರೋಗ್ಯ ಸಮಸ್ಯೆಗಳಿಂದಲೂ ಮೊಡವೆಗಳು ಹುಟ್ಟಿಕೊಳ್ಳುತ್ತವೆ. ಮೊಡವೆಗಳು ದಿಢೀರ್ ಆಗಿ ಕಾಣಿಸಿಕೊಂಡರೆ ಮತ್ತು ಚಿಕಿತ್ಸೆಗೆ ಬಗ್ಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯ ಬೇಡಿ. ಏಕೆಂದರೆ ಮೊಡವೆ ಇತರ ಆರೋಗ್ಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು.

ಮೊಡವೆಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳ ಕುರಿತು ಮಾಹಿತಿಯಿಲ್ಲಿದೆ.....

► ಅಡುಗೆ ಸೋಡಾ

ಅಡುಗೆ ಸೋಡಾಕ್ಕೆ ನೀರನ್ನು ಸೇರಿಸಿ ಪೇಸ್ಟ್‌ನ್ನು ತಯಾರಿಸಿ ಮತ್ತು ಮಲಗುವ ಮುನ್ನ ಅದನ್ನು ಪೀಡಿತ ಭಾಗದಲ್ಲಿ ಲೇಪಿಸಿಕೊಳ್ಳಿ. ಅದು ಚೆನ್ನಾಗಿ ಒಣಗುವವರೆಗೂ ಹಾಗೆಯೇ ಬಿಟ್ಟು ಬಳಿಕ ನೀರಿನಿಂದ ತೊಳೆದುಕೊಳ್ಳಿ. ಮೊಡವೆಯ ಗಾತ್ರ ಕುಗ್ಗಿರುವುದನ್ನು ನೀವು ಗಮನಿಸಬಹುದು. ಜೊತೆಗೆ ಅಡುಗೆ ಸೋಡಾ ಚರ್ಮದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡಲೂ ನೆರವಾಗುತ್ತದೆ.

► ಶುಂಠಿ

 ಶುಂಠಿಯಲ್ಲಿ ಉರಿಯೂತ ನಿರೋಧಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ. ಶುಂಠಿಯ ರಸವನ್ನು ಮೊಡವೆಗೆ ಹಚ್ಚಿಕೊಂಡು 10 ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಶುಂಠಿಯು ಮುಖದಲ್ಲಿನ ಎಣ್ಣೆಯನ್ನು ನಿಯಂತ್ರಿಸಲೂ ನೆರವಾಗುತ್ತದೆ ಮತ್ತು ಕಪ್ಪುಕಲೆಗಳನ್ನೂ ನಿವಾರಿಸುತ್ತದೆ. ಹಿಂದೆ ಮೊಡವೆಗಳಿಂದ ಉಂಟಾದ ಕಪ್ಪುಕಲೆಗಳಿಂದ ಬಾಧೆ ಪಡುತ್ತಿರುವವರಿಗೆ ಇದು ಅದ್ಭುತ ಮದ್ದಾಗಿದೆ.

► ಕಪ್ಪು ಜೀರಿಗೆ

ಇದು ಬೂಷ್ಟು ನಿರೋಧಕವಾಗಿದ್ದು, ವಿಟಾಮಿನ್ ಇ ಅನ್ನು ಒಳಗೊಂಡಿದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಸತುವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಟದಲ್ಲಿ ನೆರವಾಗುತ್ತದೆ ಮತ್ತು ಮೊಡವೆಯನ್ನು ತೊಲಗಿಸುತ್ತದೆ. ಕೆಲವು ಕಪ್ಪುಜೀರಿಗೆ ಬೀಜಗಳನ್ನು ಹುಡಿ ಮಾಡಿ ಸ್ವಲ್ಪ ಜೇನಿಗೆ ಬೆರೆಸಿ ಪೀಡಿತ ಭಾಗದಲ್ಲಿ ಲೇಪಿಸಿಕೊಳ್ಳಿ. 20-25 ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಚರ್ಮವು ತೀರ ಒಣಗುವುದನ್ನು ಜೇನು ತಡೆಯುತ್ತದೆ.

► ದಾಲ್ಚಿನ್ನಿ

ಮೊಡವೆಯನ್ನು ಶೀಘ್ರವಾಗಿ ನಿವಾರಿಸಲು ದಾಲ್ಚಿನ್ನಿ ನೆರವಾಗುತ್ತದೆ. ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ಕಚ್ಚಾ ಜೇನಿನೊಂದಿಗೆ ಬೆರೆಸಿ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿ. 15-20 ನಿಮಿಷಗಳ ಬಳಿಕ ತೊಳೆದುಕೊಳ್ಳಿ. ದಾಲ್ಷಿನ್ನಿಯು ಮುಖದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವು ಜುಮುಗುಡುವ ಅನುಭವವನ್ನು ನೀಡುತ್ತದೆ. ಅದು ಬ್ಯಾಕ್ಟೀರಿಯಾ ನಿರೋಧಕ ಗುಣವನ್ನು ಹೊಂದಿದೆ. ಜೇನು ಉರಿಯೂತ ನಿವಾರಕವಾಗಿದ್ದು ಚರ್ಮಕ್ಕೆ ಹಿತವಾದ ಅನುಭವ ನೀಡುವುದ ರೊಂದಿಗೆ ತೇವಾಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

► ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್‌ನ್ನು ನಿಮ್ಮ ಇಷ್ಟದ ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಅದನ್ನು ಪೀಡಿತ ಭಾಗಕ್ಕೆ ಲೇಪಿಸಿ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳುವುದು ಒಳ್ಳೆಯದು. ಟೀ ಟ್ರೀ ಆಯಿಲ್ ತುಂಬ ತೀಕ್ಷ್ಣವಾಗಿರುವುದರಿಂದ ಅದನ್ನು ಇತರ ಎಣ್ಣೆಯೊಂದಿಗೆ ಬೆರೆಸಿ ದುರ್ಬಲಗೊಳಿಸುವುದು ಅತ್ಯಗತ್ಯವಾಗಿದೆ. ಅದನ್ನು ಸೂಕ್ತರೀತಿಯಲ್ಲಿ ಬಳಸಿದರೆ ನಿಮ್ಮ ಚರ್ಮದಲ್ಲಿಯ ನೈಸರ್ಗಿಕ ತೈಲಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಅದು ತನ್ನ ಸೋಂಕು ನಿವಾರಕ ಗುಣದಿಂದಾಗಿ ಮೊಡವೆಯಿಂದ ಶೀಘ್ರ ಮುಕ್ತಿ ಪಡೆಯಲು ನೆರವಾಗುತ್ತದೆ.

► ಪುದೀನಾ

 ಪುದೀನಾ ಚರ್ಮಕ್ಕೆ ಹಿತಕರವಾಗಿರುವ ಜೊತೆಗೆ ಮುಖದಲ್ಲಿನ ಮೊಡವೆ ಗಳು ಮತ್ತು ಸಣ್ಣಗುಳ್ಳೆಗಳನ್ನು ನಿವಾರಿಸಲು ನೆರವಾಗುತ್ತದೆ. ಪುದೀನಾ ಎಲೆಗಳನ್ನು ನೀರು ಸೇರಿಸಿ ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ದೊಡ್ಡದಾಗಿರುವ ರಂಧ್ರಗಳು ಮುಚ್ಚಿಕೊಳ್ಳಲು ನೆರವಾಗು ತ್ತದೆ. ಪುದೀನಾದಲ್ಲಿರುವ ಸ್ಯಾಲಿಸಿಲಿಕ್ ಆಮ್ಲವು ಮೊಡವೆಯಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಮತ್ತು ಮುಲ್ತಾನಿ ಮಿಟ್ಟಿ ಮುಖದಲ್ಲಿಯ ಹೆಚ್ಚಿನ ಎಣ್ಣೆಯನ್ನು ನಿವಾರಿಸುತ್ತದೆ. 20 ನಿಮಿಷಗಳ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

► ಲಿಂಬೆರಸ

ಲಿಂಬೆರಸವು ಅತ್ಯಂತ ಪ್ರಬಲ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿರುವುದರಿಂದ ಮೇದೋಗ್ರಂಥಿಗಳ ಸ್ರಾವದ ಉತ್ಪತ್ತಿಯನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ಚರ್ಮದಲ್ಲಿಯ ಕಪ್ಪುಕಲೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ಮುಖಕ್ಕೆ ಲಿಂಬೆರಸವನ್ನು ಹಚ್ಚಿಕೊಂಡು 10 ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಅತ್ಯುತ್ತಮ ಫಲಿತಾಂಶಕ್ಕಾಗಿ ಇದನ್ನು ವಾರಕ್ಕೆರಡು ಸಲ ಮಾಡಿ.

► ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವು ಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿದ್ದು, ಚರ್ಮದ ರಕ್ಷಣೆಗೆ ಅಗತ್ಯವಾಗಿರುವ ಎ ಮತ್ತು ಇ ವಿಟಾಮಿನ್‌ಗಳನ್ನು ಒಳಗೊಂಡಿದೆ. ಅದನ್ನು ಮುಖದ ತುಂಬ ಹಚ್ಚಿಕೊಂಂಡು ಚೆನ್ನಾಗಿ ಒಣಗಿದ ಬಳಿಕ ತೆಗೆಯಿರಿ. ಅದು ಮತ್ತೆ ಮೊಡವೆಗಳಾಗುವುದನ್ನೂ ತಡೆಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)