varthabharthi


ಈ ಹೊತ್ತಿನ ಹೊತ್ತಿಗೆ

ಅಂಬಿಗರ ಚೌಡಯ್ಯನ ದೋಣಿಯನ್ನೇರಿ...

ವಾರ್ತಾ ಭಾರತಿ : 3 Jun, 2018

12ನೆ ಶತಮಾನದ ಶರಣದ ಬದುಕು, ಚಿಂತನೆಗಳು ಬರೆದಷ್ಟು ಮುಗಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಸವ ಚಿಂತನೆ ಮತ್ತೆ ಮುನ್ನೆಲೆಗೆ ಬಂದಿದೆ. ವೈದಿಕ ಚಿಂತನೆಯ ಬೂದಿಯಿಂದ ಮುಚ್ಚಿ ಹೋಗಿರುವ ಬಸವ ಚಿಂತನೆಗಳ ಕೆಂಡ ಧಗ್ಗೆಂದಿದೆ. ಮನು ಚಿಂತನೆಯ ವಿರುದ್ಧ ತನ್ನ ಧ್ವನಿಯನ್ನು ಮತ್ತೆ ಮೊಳಗಿಸಿದೆ. ಇಂತಹದೊಂದು ಆಂದೋಲನದ ಹಿಂದೆ ಹಲವು ಬರಹಗಾರರ ಶ್ರಮಗಳು ಕೆಲಸ ಮಾಡಿವೆ. 12 ಶತಮಾನದ ವಚನಕಾರರನ್ನು ಗುರುತಿಸಿ ಅವರ ಚಿಂತನೆಗಳನ್ನು ವರ್ತಮಾನಕ್ಕೆ ಪದೇ ಪದೇ ಪರಿಚಯಿಸಿದ ಪರಿಣಾಮವಾಗಿ ಇಂದಿಗೂ ಶರಣರು ಧಾರ್ಮಿಕ ಗಡಿಗಳನ್ನು ದಾಟಿ ಕನ್ನಡಿಗರನ್ನು ಆವರಿಸಿಕೊಂಡಿದ್ದಾರೆ. ಶರಣರ ವಚನಗಳು ಮತ್ತು ಅವರ ಬದುಕಿನ ಬಗ್ಗೆ ಹಲವು ಮಹತ್ವದ ಕೃತಿಗಳು ಬಂದಿವೆ. ಅವುಗಳಲ್ಲಿ ಪ್ರೊ. ಎಚ್. ಲಿಂಗಪ್ಪ ಬರೆದಿರುವ ‘ಘನವಂತ ಅಂಬಿಗರ ಚೌಡಯ್ಯ’ ಕೂಡ ಸೇರಿದೆ. ಸುಮಾರು ನಾಲ್ಕುನೂರು ವಚನಗಳನ್ನು ರಚಿಸಿರುವ ಚೌಡಯ್ಯ, ಜನರಲ್ಲಿರುವ ಡಾಂಭಿಕತೆ, ಮೂಢನಂಬಿಕೆ, ಅಜ್ಞಾನ, ಅವಿವೇಕ ಇತ್ಯಾದಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ. ಜೊತೆಗೆ ಪ್ರಶ್ನಿಸಿ ವಿಮರ್ಶಿಸಿದ. ಕೃತಿಯಲ್ಲಿ ಲೇಖಕರು ಚೌಡಯ್ಯನ ನೀತಿಪರ ಹಾಗೂ ನ್ಯಾಯ ಪರ ನಿಲುನ್ನು ಸಮರ್ಥವಾಗಿ ಎತ್ತಿ ಹಿಡಿದಿದ್ದಾರೆ.

ಕೃತಿಯಲ್ಲಿ ಒಟ್ಟು 10 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ವಚನ ಚಳವಳಿಗೆ ಕಾರಣವಾದ ಕಾಲಘಟ್ಟವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಾರೆ. ಬಸವಣ್ಣನ ಚಳವಳಿಯ ಅನಿವಾರ್ಯತೆ ಮತ್ತು ಆ ಮೂಲಕ ತಳಸ್ತರದ ಜನರು ಹೇಗೆ ಸಾಮಾಜಿಕ ಬದಲಾವಣೆಗಳ ಭಾಗವಾಗಿ ಮುನ್ನೆಲೆಗೆ ಬಂದರು ಎನ್ನುವುದನ್ನು ವಿವರಿಸುತ್ತಾರೆ. ಎರಡನೆ ಭಾಗದಲ್ಲಿ 12ನೆ ಶತಮಾನದ ವಚನಗಳ ಹಿನ್ನೆಲೆ ಮತ್ತು ಅದು ಹೇಗೆ ಬದಲಾವಣೆಗಳಿಗೆ ಕಾರಣವಾಯಿತು ಎನ್ನುವುದನ್ನು ಹೇಳುತ್ತಾರೆ. ಮೂರನೆ ಭಾಗದಲ್ಲಿ ಘನವಂತ ಅಂಬಿಗರ ಚೌಡಯ್ಯ ಅವರ ಬದುಕು, ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಾರೆ. ಆತ ಬಾಳಿ ಬದುಕಿನ ಕಾಲ, ಹುಟ್ಟಿದ ಮತ್ತು ಐಕ್ಯಗೊಂಡ ಸ್ಥಳಗಳ ಬಗ್ಗೆಯೂ ಅನ್ವೇಷಣೆಯನ್ನು ಈ ಭಾಗದಲ್ಲಿ ನಡೆಸುತ್ತಾರೆ. ನಾಲ್ಕನೇ ಅಧ್ಯಾಯದಲ್ಲಿ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಇಟ್ಟುಕೊಂಡು ಆಗಿನ ಕಾಲಘಟ್ಟ, ಸಾಮಾಜಿಕ ಸ್ಥಿತಿಗತಿ ಹೇಗಿತ್ತು ಎನ್ನುವುದನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ‘‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು/ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವ...’’ ಎನ್ನುವ ಸಾಲುಗಳು ಆ ಸಂದರ್ಭದಲ್ಲಿ ಅಂಬಿಗರ ಕುರಿತಂತೆ ಸಮಾಜದ ಧೋರಣೆಯನ್ನು ಎತ್ತಿ ಹಿಡಿಯುತ್ತವೆ. ಇಂತಹ ಹಲವು ವಚನಗಳನ್ನು ಮುಂದಿಟ್ಟುಕೊಂಡು ಜಾತೀಯತೆ ಆ ಕಾಲವನ್ನು ಹೇಗೆ ಆಳುತ್ತಿತ್ತು ಎನ್ನುವುದನ್ನು ಅವರು ತಿಳಿಸುತ್ತಾರೆ. ಕೊನೆಯ ಅಧ್ಯಾಯದಲ್ಲಿ ಅಂಬಿಗರ ಚೌಡಯ್ಯನ ವಚನಗಳ ಅಪೂರ್ವ ಸಂಗ್ರಹಗಳಿವೆ. ರಶ್ಮಿ ಪ್ರಕಾಶನ ಚಿತ್ರದುರ್ಗ ಈ ಕೃತಿಯನ್ನು ಹೊರತಂದಿದೆ. ಪುಟಗಳು 120. ಕೃತಿಯ ಮುಖಬೆಲೆ 120 ರೂ. ಆಸಕ್ತರು 99459 98099 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)