varthabharthi


ನೇಸರ ನೋಡು

ನಮ್ಮ ನಡುವಣ ಮಹಾ ಮೇಧಾವಿ

ವಾರ್ತಾ ಭಾರತಿ : 10 Jun, 2018
ಜಿ.ಎನ್.ರಂಗನಾಥ ರಾವ್

ಡಾ. ಶೆಟ್ಟರ್ ಅವರ ಪ್ರತಿಭೆ ಮತ್ತು ವಿದ್ವತ್ತಿನ ಮುಖ್ಯ ಅಂಶವೆಂದರೆ, ಪರಸ್ಪರ ಮಿಳಿತವಾಗಿರುವ ಇತಿಹಾಸ, ಸಾಹಿತ್ಯ, ಕಲೆ ಇವುಗಳ ಅಂತರ್‌ಸಂಬಂಧವನ್ನು ಗುರುತಿಸುವುದರಲ್ಲಿ, ವಿಶ್ಲೇಷಿಸುವುದರಲ್ಲಿ ಅವರು ತೋರಿದ ಆಸಕ್ತಿ. ಇದರಿಂದಾಗಿಯೇ ಅವರು ಹಳೆಗನ್ನಡ ಕಾವ್ಯಕೃತಿಗಳು, ಸ್ಮಾರಕಗಳಾದ ವೀರಗಲ್ಲುಗಳು, ಸತಿಕಲ್ಲುಗಳು, ನಿಷಿಧಿಗಳು ಮೊದಲಾದವುಗಳನ್ನು ಅರಸುತ್ತಾ ಊರೂರು ಅಲೆದರು. ವಿಶೇಷ ಅಧ್ಯಯನ ನಡೆಸಿದರು.


ಹಳೆಗನ್ನಡ ಸಾಹಿತ್ಯ ಓದದೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಪೂರ್ತಿಯಾಗದು, ಅಧ್ಯಾಪನದಲ್ಲಿ ಪರಿಪೂರ್ಣತೆ ಸಿಗದು. ಇಂದಿನ ತಲೆಮಾರಿನವರಲ್ಲಿ ಹಳೆಗನ್ನಡ ಸಾಹಿತ್ಯದ ಓದಿನಲ್ಲಿ ಆಸಕ್ತಿ ಮೂಡಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎನ್ನುವ ಮಾತುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಅರ್ಥಪೂರ್ಣ ಹೆಜ್ಜೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಪ್ರಥಮವಾಗಿ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವುದು ಒಂದು ಶ್ಲಾಘನೀಯ ಕ್ರಮ. ಇದೇ ಮಾಹೆ 24, 25 ಮತ್ತು 26ರಂದು ಶ್ರವಣಬೆಳಗೊಳದಲ್ಲಿ ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷ ಪೀಠಕ್ಕೆ ನಾಡಿನ ಹಿರಿಯ ಸಂಶೋಧಕ, ಇತಿಹಾಸಕಾರ ಡಾ. ಷಡಕ್ಷರಪ್ಪ ಶೆಟ್ಟರ್ ಅವರನ್ನು ಆಯ್ಕೆಮಾಡಿರುವುದು ಸಂಶೋಧನೆ ಮತ್ತು ಹಳೆಗನ್ನಡ ಅಧ್ಯಯನಗಳ ಘನತೆ ಮತ್ತು ವಿದ್ವತ್ತಿಗೆ ದೊರೆತ ಮನ್ನಣೆಯಾಗಿದೆ.

ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಾನ್ಯತೆ, ಕೀರ್ತಿಗಳಿಗೆ ಭಾಜನರಾಗಿರುವ ಷಡಕ್ಷರಪ್ಪಶೆಟ್ಟರ್ ಬಳ್ಳಾರಿ ಜಿಲ್ಲೆಯ ಹಂಪಸಾಗರದವರು. ಜನನ ವರ್ಷ:1935. ಹೊಸಪೇಟೆಯ ಮುನಿಸಿಪಲ್ ಪ್ರೌಢಶಾಲೆ ಮತ್ತು ಬಳ್ಳಾರಿಯ ವೀರಶೈವ ಕಾಲೇಜುಗಳಲ್ಲಿ ಪದವಿಪೂರ್ವ ಹಂತದವರೆಗೆ ವಿದ್ಯಾಭ್ಯಾಸ. ಮುಂದಿನ ಓದಿಗಾಗಿ ಮೈಸೂರಿಗೆ ತೆರಳಿ ಮಹಾರಾಜ ಕಾಲೇಜು ಸೇರಿದರು. ಆಗ (1955-60) ಸಂಶೋಧನೆ ಮತ್ತು ಸೃಜನಾತ್ಮಕ ಕೆಲಸಗಳಿಗೆ ಖ್ಯಾತವಾಗಿದ್ದ ಮಹಾರಾಜ ಕಾಲೇಜಿನ ಬೌದ್ಧಿಕ ವಾತಾವರಣ ಸಾಹಿತ್ಯ, ಸಂಶೋಧನೆ, ಇತಿಹಾಸಗಳಲ್ಲಿ ಆಸಕ್ತಿ ಕುದುರಿಸುವಷ್ಟು ಪ್ರಭಾವಶಾಲಿಯಾಗಿತ್ತು.

ಶೆಟ್ಟರ್ ಅವರೂ ಈ ಪ್ರಭಾವದಿಂದ ಹೊರಗುಳಿಯಲಿಲ್ಲ. ಇತಿಹಾಸವನ್ನು ಉನ್ನತ ವ್ಯಾಸಂಗಕ್ಕೆ ಆಯ್ಕೆ ಮಾಡಿಕೊಂಡ ಶೆಟ್ಟರ್, ಎಸ್.ಶ್ರೀಕಂಠ ಶಾಸ್ತ್ರಿ, ಎಂ.ವಿ.ಕೃಷ್ಣ ರಾವ್ ಅವರಂಥ ಆದರ್ಶಪ್ರಾಯರಾದ ಗುರುಗಳ ಮಾರ್ಗದರ್ಶನದಲ್ಲಿ ಎಂ.ಎ. ಪದವಿಗಳಿಸಿದರು. ಅಲ್ಲಿಂದ ಮುಂದೆ ವೃತ್ತಿ ಮತ್ತು ಪ್ರವೃತ್ತಿ ಎರಡಕ್ಕೂ ಸಂಶೋಧನೆ ಮತ್ತು ಅಧ್ಯಯನಗಳೇ ಒದಗಿ ಬಂದವು. ಕಲಿತ ಮಹಾರಾಜ ಕಾಲೇಜಿನಲ್ಲೇ ಸ್ವಲ್ಪಕಾಲ ಉಪನ್ಯಾಸಕರಾಗಿದ್ದ ಶೆಟ್ಟರ್ ಅವರನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಕೈಬೀಸಿ ಕರೆಯಿತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾದರು.ಕರ್ನಾಟಕ ಕಾಲೇಜು ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಚಿಮ್ಮು ಹಲಗೆಯಾಯಿತು. ಡಾ. ಶೆಟ್ಟರ್ ಅವರ ಸಂಶೋಧನಾಸಕ್ತಿ ಮತ್ತು ವಿದ್ವತ್ತಿನ ಹರಹು ಹಾಗೂ ವ್ಯಾಪ್ತಿ ದೊಡ್ಡದು. ಅವರ ಅಧ್ಯಯನ ಮತ್ತು ಸಂಶೋಧನೆ ಕರ್ನಾಟಕದ ಇತಿಹಾಸಕ್ಕೆ ಮಾತ್ರ ಸೀಮಿತಗೊಳ್ಳದೆ ದಕ್ಷಿಣ ಭಾರತದ ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳಿಗೂ ಚಾಚಿಕೊಂಡಿತು.

 ಜೈನರ ಪವಿತ್ರ ಕ್ಷೇತ್ರವಾದ ಶ್ರವಣಬೆಳಗೊಳ ವಿದ್ಯಾರ್ಥಿಯಾಗಿದ್ದಾಗಲೇ ಶೆಟ್ಟರ್ ಅವರನ್ನು ಆಕರ್ಷಿಸಿದ ಐತಿಹಾಸಿಕ ಮಹತ್ವದ ಸ್ಥಳ. ಶ್ರವಣ ಬೆಳಗೊಳದ ಸ್ಮಾರಕ ಮತ್ತು ಅವಶೇಷಗಳನ್ನೇ ಸ್ನಾತಕೋತ್ತರ ಡಾಕ್ಟರೆಟ್ ಪದವಿಗಾಗಿ ವಿಶೇಷ ಅಧ್ಯಯನಕ್ಕೆ ಆಯ್ಕೆಮಾಡಿಕೊಂಡರು. ಜೈನಧರ್ಮದ ಪ್ರಮುಖ ಆಚರಣೆಗಳು ಹಾಗೂ ಅದರ ಏಳುಬೀಳುಗಳನ್ನು ತಿಳಿಯ ಪಡಿಸುವ ಆಕರಗಳ ಆಗರವಾಗಿ ಕಂಡಿತು ಶ್ರವಣಬೆಳಗೊಳ. ಈ ಆಕರಗಳು ಕನ್ನಡ ಭಾಷೆಯಲ್ಲಿದ್ದುದು ಶೆಟ್ಟರ್ ಅವರ ಸಂಶೋಧನೆ ಮತ್ತು ಅಧ್ಯಯನಗಳಿಗೆ ವಿಶೇಷ ಆಯಾಮವನ್ನೊದಗಿಸಿದವು. 1967ರಲ್ಲಿ ಪ್ರೊ.ಶೆಟ್ಟರ್ ‘ಶ್ರವಣಬೆಳಗೊಳ ಮಾನ್ಯುಮೆಂಟ್ಸ್’ ಎಂಬ ಪ್ರಬಂಧಕ್ಕೆ ಮೊದಲ ಪಿಎಚ್.ಡಿ. ಪಡೆದರು. ಅವರ ಹೆಸರಿಗೆ ಡಾಕ್ಟರ್ ಪೂರ್ವಪ್ರತ್ಯಯ ಅಂಟಿಕೊಂಡಿತು. ಈ ಅಧ್ಯಯನ ಕಾಲದಲ್ಲಿ ಶೆಟ್ಟರ್ ಅವರ ವಿಶೇಷ ಗಮನ ಸೆಳೆದದ್ದು, ಆಸಕ್ತಿ ಕೆರಳಿಸಿದ್ದು ಜೈನರಲ್ಲಿ ಧಾರ್ಮಿಕ ಆಚರಣೆಯ ರೂಪದಲ್ಲಿದ್ದ ಮರಣವಿಧಿ ಅಥವಾ ಸಲ್ಲೇಖನ ವ್ರತ. ಶ್ರವಣಬೆಳಗೊಳದಲ್ಲಿ ಲಭಿಸಿದ ಜೈನರ ಧಾರ್ಮಿಕ ಆಚರಣೆಯಾದ ಮರಣವಿಧಿಯನ್ನು ದಾಖಲಿಸಿರುವ ‘ನಿಷಿಧಿಗಳ’ ಅಧ್ಯಯನ ಹಾಗೂ ಹಳೆಗನ್ನಡ ಜೈನ ಕಾವ್ಯಗಳಲ್ಲಿ ದೊರೆತ ಮರಣಗಳ ಉಲ್ಲೇಖಗಳು ಶೆಟ್ಟರ್ ಅವರಲ್ಲಿ ಜೈನ ಧರ್ಮದ ಮರಣ ವಿಧಿಗಳನ್ನು ಕುರಿತಂತೆ ವಿಶೇಷ ಜಿಜ್ಞಾಸೆಗೆ ಕಾರಣವಾಯಿತು.

ಜೈನಧರ್ಮೀಯರ ಮರಣ ತತ್ವ ಮತ್ತು ಸಿದ್ಧಾಂತಗಳ ಹೆಚ್ಚಿನ ಅಧ್ಯಯನಕ್ಕೆ ಪ್ರೇರಣೆಯಾಯಿತು. ಇಂಥ ಅಧ್ಯಯನದ ಫಲ ‘ಇನ್ವೈಟಿಂಗ್ ಡೆತ್’. ಡಾ.ಶೆಟ್ಟರ್ ಅವರ ಪ್ರತಿಭೆ ಮತ್ತು ವಿದ್ವತ್ತಿನ ಮುಖ್ಯ ಅಂಶವೆಂದರೆ, ಪರಸ್ಪರ ಮಿಳಿತವಾಗಿರುವ ಇತಿಹಾಸ, ಸಾಹಿತ್ಯ, ಕಲೆ ಇವುಗಳ ಅಂತರ್‌ಸಂಬಂಧವನ್ನು ಗುರುತಿಸುವುದರಲ್ಲಿ, ವಿಶ್ಲೇಷಿಸುವುದರಲ್ಲಿ ಅವರು ತೋರಿದ ಆಸಕ್ತಿ. ಇದರಿಂದಾಗಿಯೇ ಅವರು ಹಳೆಗನ್ನಡ ಕಾವ್ಯಕೃತಿಗಳು, ಸ್ಮಾರಕಗಳಾದ ವೀರಗಲ್ಲುಗಳು, ಸತಿಕಲ್ಲುಗಳು, ನಿಷಿಧಿಗಳು ಮೊದಲಾದವುಗಳನ್ನು ಅರಸುತ್ತಾ ಊರೂರು ಅಲೆದರು. ವಿಶೇಷ ಅಧ್ಯಯನ ನಡೆಸಿದರು. ಸಾಮಾಜಿಕ ಆರ್ಥಿಕ ವ್ಯವಸ್ಥೆ, ಆಡಳಿತ, ಹಬ್ಬಹರಿದಿನಗಳ ಆಚರಣೆ, ಸಂಪ್ರದಾಯಗಳು, ರೂಢೀಪದ್ಧತಿಗಳು ಇವುಗಳ ಅಧ್ಯಯನವಾಗದೆ ಸಮಗ್ರ ಇತಿಹಾಸ ರೂಪುಗೊಳ್ಳದೆಂಬುದನ್ನು ಮನಗಂಡರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹಳೆಗನ್ನಡ ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ವಿಶೇಷ ಯೋಜನೆ ರೂಪಿಸಿದರು. ಹಳೆಗನ್ನಡ ಸಾಹಿತ್ಯದ ಅಧ್ಯಯನ ಕೈಗೊಂಡು ಮುವತ್ತೊಂದು ಸಂಪುಟಗಳಲ್ಲಿ ಹಳೆಗನ್ನಡ ಸಾಹಿತ್ಯದ ವಿಷಯ ಸೂಚಿಯನ್ನು ಸಿದ್ಧಗೋಳಿಸಿದರು.

ಈ ಸಂಪುಟಗಳ ವಿಷಯವ್ಯಾಪ್ತಿ ಶ್ರೀ ವಿಜಯನ ಕವಿರಾಜಮಾರ್ಗದಿಂದ ಹಿಡಿದು ತೆರಕಣಾಂಬಿ ಬೊಮ್ಮರಸನ ಜೀವಂಧರ ಚರಿತ್ರೆವರೆಗಿನ ಮುವತ್ತೊಂದು ಗ್ರಂಥಗಳನ್ನು ಒಳಗೊಂಡಿದೆ. ಶ್ರವಣ ಬೆಳಗೊಳದ ಸ್ಮಾರಕಗಳ ಅಧ್ಯಯನಮಾಡುತ್ತಿದ್ದಾಗ ಗಮನಕ್ಕೆ ಬಂದ ಚಂದ್ರಗಿರಿಯ ಶಾಸನಗಳ ಪ್ರಕಟಣೆ ಮತ್ತು ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನಲ್ಲಿ ಕಂಡುಬಂದ ಅಶೋಕನ ಎರಡು ಶಾಸನಗಳು ಶೆಟ್ಟರ್ ಅವರ ಮಹತ್ವಪೂರ್ಣ ಶೋಧನೆಗಳು. ಅವುಗಳ ಶೋಧದಿಂದ ಮೌರ್ಯ ಸಾಮ್ರಾಜ್ಯದ ಮತ್ತೊಂದು ಗಡಿಭಾಗವನ್ನು ಗುರುತಿಸಲು ಸಾಧ್ಯವಾಯಿತು ಎಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇತಿಹಾಸಕಾರ, ಸಂಶೋಧಕಜ್ಞ ಶೆಟ್ಟರ್ ಅವರ ವಿಶೇಷ ಕಾಳಜಿ ಎಂದರೆ, ಇಲ್ಲಿಯವರೆಗಿನ ಮಾಹಿತಿಗಳೆಲ್ಲವನ್ನೂ ಪ್ರಶ್ನಿಸುವ, ಪುನರ್ ಅಧ್ಯಯನಕ್ಕೆ ಒಳಪಡಿಸುವ ಕಾರ್ಯ. ಉತ್ಪ್ರೇಕ್ಷಿತ ಅಥವಾ ಅತಿರಂಜಿತ ಸ್ಥಳ ಪುರಾಣ, ಸ್ಥಳೀಯ ಇತಿಹಾಸವನ್ನು ಸಾಕ್ಷಿಪುರಾವೆಗಳ ಬೆಳಕಿನಲ್ಲಿ ಪುನರ್ ಪರಿಶೀಲಿಸಿ ಸತ್ಯವನ್ನು ಬೆಳಕಿಗೆ ತರುವಂಥ ಹಲವಾರು ಮಹತ್ವದ ಸಂಶೋಧನೆಗಳು ಮತ್ತು ಅಧ್ಯಯನಗಳು ಶೆಟ್ಟರ್ ಅವರ ಸಾಧನೆಯ ಕಪಾಟಿನೊಳಗಿವೆ.

ಕಿತ್ತೂರು ಸಂಸ್ಥಾನ ಕುರಿತ ಅವರ ಅಧ್ಯಯನ ಇದಕ್ಕೊಂದು ಉತ್ತಮ ಉದಾಹರಣೆಯಾಗ ಬಲ್ಲದು. ಕಿತ್ತೂರು ಸಂಸ್ಥಾನ ಮತ್ತು ಬ್ರಿಟಿಷರ ನಡುವೆ ನಡೆದ ಪತ್ರ ವ್ಯವಹಾರಗಳ ಮಾಹಿತಿಯ ಕೂಲಂಕಷ ಪರಿಶೀಲನೆಯ ಹಿನ್ನೆಲೆಯಲ್ಲಿ ಚೆನ್ನಮ್ಮನ ನಿರ್ಧಾರಗಳ ಸಾಫಲ್ಯ-ವೈಫಲ್ಯಗಳನ್ನು ಶೆಟ್ಟರ್ ವಸ್ತುನಿಷ್ಠ ವಿಮರ್ಶೆಯ ಒರೆಗೆ ಹಚ್ಚಿನೋಡಿದರು. ಇದನ್ನು ಜೀರ್ಣಿಸಿಕೊಳಲ್ಳಾಗದೆ ಕುದುರೆಯನೇರಿ ಸೆಣಸಿದ ಚೆನ್ನಮ್ಮನ ಚಿತ್ರವನ್ನೇ ಇಷ್ಟಪಟ್ಟ ಸ್ಥಳೀಯರ ವಿರೋಧವನ್ನು ಶೆಟ್ಟರ್ ಅವರು ಎದುರಿಸಬೇಕಾಯಿತೆನ್ನಲಾಗಿದೆ. ಇತಿಹಾಸ ಅಧ್ಯಯನದಲ್ಲಿ ಕಲೆ ಶೆಟ್ಟರ್ ಅವರನ್ನು ವಿಶೇಷ ಗಮನ ಸೆಳೆದಿರುವ ಮತ್ತೊಂದು ಕ್ಷೇತ್ರ. ಕಲೆ ಕುರಿತ ಅವರ ಅಧ್ಯಯನ ಕಲೆ ಮತ್ತು ಸಮಾಜಿಕ ಇತಿಹಾಸಗಳ ಒಂದು ವಿಶಿಷ್ಟ ಪರಿಪಾಕ. ಇದಕ್ಕೆ ಅತ್ಯುತ್ತಮ ನಿದರ್ಶ ಅವರ ‘ಹೊಯ್ಸಳ ಟೆಂಪಲ್ಸ್’. ಶ್ರವಣಬೆಳಗೊಳದ ಸ್ಮಾರಕಗಳ ಅಧ್ಯಯನದ ಅವಧಿಯಲ್ಲಿ ಶೆಟ್ಟರ್ ಅವರು ಹೊಯ್ಸಳರ ಕಲೆಯ ಸೊಬಗು-ಸೌಂದರ್ಯಗಳಿಗೆ ಮಾರು ಹೋಗಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಸಾಕ್ಷಾತ್ ನಿದರ್ಶನಗಳಲ್ಲಿ ಒಂದಾದ ಹೊಯ್ಸಳರ ಕಾಲದ ವಾಸ್ತು-ಶಿಲ್ಪಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮನಗಂಡ ಶೆಟ್ಟರ್ ಹೊಯ್ಸಳ ದೇವಾಲಯಗಳನ್ನು ತಮ್ಮ ಎರಡನೆಯ ಪಿಎಚ್.ಡಿ.ಗೆ ಆಯ್ದುಕೊಂಡರು.

1967ರಲ್ಲಿ ಕಾಮನ್ವೆಲ್ತ್ ಶಿಷ್ಯವೇತನ ಪಡೆದು ಹೊಯ್ಸಳ ದೇವಾಲಯಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದರು. ಈ ಅಧ್ಯಯನದ ಫಲ: ‘ದಿ ಹೊಯ್ಸಳ ಟೆಂಪಲ್ಸ್’. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ಈ ಗ್ರಂಥದ ಮೊದಲ ಸಂಪುಟ ಹೊಯ್ಸಳರು ಮತ್ತು ಅವರ ಕಾಲದ ಇತಿಹಾಸದ ಪಠ್ಯಕ್ಕೆ ಮೀಸಲಾದರೆ ಎರಡನೆಯದು ಚಿತ್ರ ಸಂಪುಟ. ಹಳೆಬೀಡು ಮತ್ತು ಬೇಲೂರು ಹಾಗೂ ಆಸುಪಾಸಿನ ಗ್ರಾಮಗಳಲ್ಲಿರುವ ಹೊಯ್ಸಳ ಶಿಲ್ಪಗಳ ಚಿತ್ರ ಸಂಪುಟ. ಎಚ್.ಎನ್.ಅಲ್ಲಮಪ್ರಭು ಅವರ ಕಪ್ಪುಬಿಳುಪು ಚಿತ್ರಗಳಿರುವ ಈ ಸಂಪುಟ ಹೊಯ್ಸಳ ದೇವಾಲಯಗಳ ಶಿಲ್ಪಕಲೆಯ ಚಿತ್ರಶಾಲೆಯಂತಿದೆ. 1991ರಲ್ಲಿ ಪ್ರಕಟವಾದ ಈ ಎರಡು ಸಂಪುಟಗಳು ಕನ್ನಡದಲ್ಲಿ ಪ್ರಕಟವಾಗದೇ ಇರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಈ ಸಂದರ್ಭದಲ್ಲಿ ನಾನು ಅಲ್ಲಮಪ್ರಭು ಅವರ ಬಗ್ಗೆ ಒಂದೆರಡು ಮಾತುಗಳನ್ನು ಬರೆಯದಿದ್ದರೆ ಅಪಚಾರವಾಗುತ್ತದೆ. ಅಲ್ಲಮಪ್ರಭು ಬ್ರಿಗೆಡ್ ರಸ್ತೆಯ ಸಂಧಿಯೊಂದರಲ್ಲಿ ಒಂದು ಸಣ್ಣ ಫೋಟೊ ಲ್ಯಾಬ್ ಇಟ್ಟುಕೊಂಡಿದ್ದರು. ಅವರು ದಿನನಿತ್ಯದ ರಗಳೆಯ ಸುದ್ದಿ ಛಾಯಾಗ್ರಾಹಕರಾಗಿರಲಿಲ್ಲ. ಅವರೊಬ್ಬರು ಸಾಂಸ್ಕೃತಿಕ ಹಾಗೂ ವನ್ಯಜೀವಿ ಛಾಯಾಗ್ರಾಹಕರಾಗಿದ್ದರು. ಹೀಗಾಗಿ ನನ್ನಂಥ ನಿಯತಕಾಲಿಕಗಳ ಸಂಪಾದಕರುಗಳಿಗೆ ಬೇಕಾದವರಾಗಿದ್ದರು. ನಾನು ಸಾಂಸ್ಕೃತಿಕ ಸಮಾರಂಭವೊಂದರ ಛಾಯಾಚಿತ್ರಕ್ಕಾಗಿ ಅಲ್ಲಮಪ್ರಭುವಿನ ಸ್ಟುಡಿಯೋಗೆ ಹೋದಾಗ ಪ್ರೊ. ಶೆಟ್ಟರ ಪರಿಚಯವಾಯಿತು. ಬ್ರಿಗೆಡ್ ರಸ್ತೆಯ ಕೊನೆಯ ಸಂಗಂ ಹೊಟೇಲಿನಲ್ಲಿ ಮಸಾಲೆ ದೋಸೆ ಕೊಡಿಸಿದ ಶೆಟ್ಟರ್ ಅವರು ‘ಹೊಯ್ಸಳ ಟೆಂಪಲ್ಸ್’ ತೆರೆದಿಟ್ಟರು. ಸವಿದು ನಾನು ಪುನೀತನಾದೆ.

ಡಾ.ಶೆಟ್ಟರ್ ಅವರ ಆಸಕ್ತಿ ಮತ್ತು ಅಧ್ಯಯನ ವ್ಯಾಪಕವೂ ವೈವಿಧ್ಯಮಯವೂ ಆದುದು. ಅವರು ಇತಿಹಾಸದ ವಿದ್ಯಾರ್ಥಿ. ಅವರ ಇತಿಹಾಸದ ಅಧ್ಯಯನ ವ್ಯಾಪ್ತಿ ಮತ್ತು ಕೃತಿಗಳ ರಚನೆ ಅಚ್ಚರಿಹುಟ್ಟಿಸುವಂಥದ್ದು. ಭಾರತೀಯ ಪ್ರಾಕ್ತನ ಶಾಸ್ತ್ರ, ಕಲೆಯ ಇತಿಹಾಸ, ಧರ್ಮಗಳ ಇತಿಹಾಸ, ತತ್ತ್ವಸಿದ್ಧಾಂತಗಳು, ಅಭಿಜಾತ ಸಾಹಿತ್ಯ ಕುರಿತು ಶೆಟ್ಟರ್ ಅವರು ವ್ಯಾಪಕ ಅಧ್ಯಯನ ನಡೆಸಿದ್ದಾರೆ, ಸಂಶೋಧನೆ ಮಾಡಿದ್ದಾರೆ ಹಾಗೂ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಶೆಟ್ಟರ್ ಸೃಜನಶೀಲ ಸಾಹಿತಿಯೂ ಹೌದು. ಯೌವನದ ದಿನಗಳಲ್ಲಿ ಅವರು ಕಥೆ, ಲಲಿತಪ್ರಬಂಧಗಳನ್ನು ರಚಿಸಿದ್ದುಂಟು. ‘ದೇವನಾಂಪ್ರಿಯ’ ಕಾವ್ಯನಾಮದಲ್ಲಿ ಶೆಟ್ಟರ್ ಅವರ ಕಥೆ, ಪ್ರಬಂಧಗಳು ‘ಸಂಕ್ರಮಣ’, ‘ಸುಧಾ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡದ್ದುಂಟು. ಒಲವು ಇತಿಹಾಸ ಮತ್ತು ಸಂಶೋಧನೆಗಳತ್ತ ಹೆಚ್ಚಾಗಿ ವಾಲಿದ್ದರಿಂದಲೋ ಏನೋ ಕಥನ ಸಾಹಿತ್ಯ ರಚನೆ ಹಿಂದಾಯಿತು. ಶೆಟ್ಟರ್ ಅವರು ಹಲವಾರು ಸಂಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಹನ್ನೊಂದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ, ಆರಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿರುವ ಶೆಟ್ಟರ್ ಅವರು ಕನ್ನಡದಲ್ಲಿ ಎಂಟಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಶ್ರವಣ ಬೆಳಗೊಳ(1981), ಸಾವಿಗೆ ಆಹ್ವಾನ(1986), ಶಂಗಂ ತಮಿಳಗಂ ಕನ್ನಡ ನುಡಿ(2008), ಬಾದಾಮಿ ಚಾಳುಕ್ಯ ಶಾಸನ(2012), ಸಾವನ್ನು ಅರಸಿ(2014), ಹಳೆಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ(2014) ಅವರ ಪ್ರಮುಖ ಕನ್ನಡ ಕೃತಿಗಳು. ಇತಿಹಾಸಕಾರರಾಗಿ ಹಾಗೂ ಸಂಶೋಧಕರಾಗಿ ಶೆಟ್ಟರ್ ಅವರು ವಿಶ್ವವಿದ್ಯಾನಿಲಯ ಸೇವೆಯಿಂದ ನಿವೃತ್ತಿಯ ನಂತರವೂ ಹಲವಾರು ಪ್ರಮುಖ ವಿದ್ವದೀಯ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದುವು, ಇತಿಹಾಸ ಸಂಶೋಧನೆಯ ಭಾರತೀಯ ಮಂಡಲಿ(ಐ.ಸಿ.ಎಚ್.ಆರ್), ಇಂದಿರಾಗಾಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್ಸ್ ಇತ್ಯಾದಿ. ಅವರು ಕೇಂಬ್ರಿಜ್, ಹಾರ್ವರ್ಡ್, ಹೈಡಲ್ಬರ್ಗ್, ಅಥೆನ್ಸ್ ಮೊದಲಾದ ಅಂತರ್‌ರಾಷ್ಟೀಯ ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅಂತರ್‌ರಾಷ್ಟ್ರೀಯ ವಿದ್ವತ್ ವಲಯಗಳಲ್ಲಿ ಪ್ರಖ್ಯಾತರು. ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಷಡಕ್ಷರ ಶೆಟ್ಟರ್ ಅವರ ಬಾಗಿಲು ಬಡಿದಿರುವುದುಂಟು. ಈಗ ಪ್ರಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಹಳೆಗನ್ನಡ ಅಧ್ಯಯನ ಮತ್ತೆ ಆದ್ಯತೆ ಪಡೆಯುವ ಲಕ್ಷಣಗಳು ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಡಾ.ಷಡಕ್ಷರಪ್ಪಶೆಟ್ಟರ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ಅಧ್ಯಯನಾಕಾಂಕ್ಷಿಗಳಗೆ ಸೂಕ್ತ ಮಾರ್ಗದರ್ಶನದ ಶುಭಸೂಚಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)