varthabharthi


ಚಿತ್ರ ವಿಮರ್ಶೆ

ಕನ್ನಡ ಸಿನೆಮಾ

ಆಸೆ, ದುರಾಸೆ, ದುರಂತಗಳನ್ನು ಹೇಳುವ ‘ಪಡ್ಡಾಯಿ’

ವಾರ್ತಾ ಭಾರತಿ : 15 Jul, 2018
-ಮುಸಾಫಿರ್

ಯುವ ನಿರ್ದೇಶಕ ಅಭಯ ಸಿಂಹ ಬೇರೆ ಬೇರೆ ಕಾರಣ ಗಳಿಂದ ಚಿತ್ರೋದ್ಯಮದಲ್ಲಿ ಸುದ್ದಿಯಾ ಗುತ್ತಾ ಬಂದವರು. ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿ ಯನ್ನು ಪಡೆದಿದೆ. ಬೆನ್ನಿಗೇ ಮಲಯಾಳಂ ನಟ ಮಮ್ಮುಟ್ಟಿಯನ್ನು ಕನ್ನಡಕ್ಕೆ ತರುವ ಪ್ರಯತ್ನದ ಮೂಲಕವೂ ಸುದ್ದಿಯಾದರು. ಆದರೆ ಚಿತ್ರ ‘ಶಿಕಾರಿ’ ನಿರೀಕ್ಷೆಯನ್ನು ತಲುಪಲಿಲ್ಲ. ಅಪ್ಪಟ ಮನರಂಜನೆಯ ಚಿತ್ರಗಳನ್ನೂ ಕೊಟ್ಟರು. ಒಂದು ರೀತಿಯಲ್ಲಿ ಅವರದು ವಯಸ್ಸಿಗೆ ಮೀರಿದ ಸಾಧನೆ. ಇದೀಗ ‘ಪಡ್ಡಾಯಿ’ ತುಳು ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿರುವ ಈ ಚಿತ್ರ, ಇದೀಗ ಸಾಮಾನ್ಯ ಪ್ರೇಕ್ಷಕರನ್ನು ತಲುಪುವ ಪ್ರಯತ್ನದಲ್ಲಿದೆ.

ತುಳು ಚಿತ್ರರಂಗದಲ್ಲಿ ಒಂದಾನೊಂದು ಕಾಲದಲ್ಲಿ ಗಂಭೀರ ವಸ್ತುಗಳುಳ್ಳ ಚಿತ್ರಗಳು ಬಹಳಷ್ಟು ಬಂದಿವೆ. ಬದ್ಕೆರೆ ಬುಡ್ಲೆ, ಬಂಗಾರ್ ಪಟ್ಲೇರ್ ಆ ಸಂದರ್ಭದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದ ಚಿತ್ರಗಳು. ಬಂಗಾರ್ ಪಟ್ಲೇರ್ ಚಿತ್ರದ ಬಳಿಕ, ತುಳುವಿನಲ್ಲಿ ಸೆಪ್ಟಂಬರ್ 8(ಶಿವರಾಮಕಾರಂತರು ಈ ಚಿತ್ರದಲ್ಲಿ ನಟಿಸಿದ್ದರು)ನಂತಹ ಚಿತ್ರ ಬಂತಾದರೂ, ಪ್ರೇಕ್ಷಕರ ಸ್ಪಂದನೆಯ ಕೊರತೆ ಯಿಂದ ತುಳು ಚಿತ್ರಗಳ ಯುಗವೇ ಮುಗಿಯಿತೇನೋ ಎಂಬ ಸ್ಥಿತಿ ನಿರ್ಮಾಣವಾಯಿತು. ವೃತ್ತಿ ರಂಗಭೂಮಿಯಲ್ಲಿ ಜನಪ್ರಿಯರಾಗಿದ್ದ ಕಾಪಿಕಾಡ್ ಬಳಗದ ಪ್ರವೇಶದ ಬಳಿಕ ಮತ್ತೆ ನಿರ್ದೇಶಕರು ತುಳು ಚಿತ್ರಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ತುಳುವರು ತುಳು ಚಿತ್ರಗಳ ಕಡೆಗೆ ಆಸಕ್ತಿಯನ್ನು ತೋರಿಸತೊಡಗಿದರು. ಆದರೆ ತೆಳು ಹಾಸ್ಯ ಚಿತ್ರಗಳಿಗೆ ಪ್ರೇಕ್ಷಕರು ಸ್ಪಂದಿಸಿದಷ್ಟು ಗಂಭೀರ ಕಥಾವಸ್ತುವುಳ್ಳ ಚಿತ್ರಗಳಿಗೆ ಸ್ಪಂದಿಸಿರುವುದು ಕಡಿಮೆ. ಇಂತಹ ವಾತಾವರಣದಲ್ಲಿ ಅಭಯ ಸಿಂಹ ಅವರು ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕವನ್ನು ಆಧರಿಸಿ ಒಂದು ಉತ್ತಮ ಚಿತ್ರವನ್ನು ಜನರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ.

ಮ್ಯಾಕ್‌ಬೆತ್ ನಾಟಕವನ್ನು ತುಳು ಪರಿಸರಕ್ಕೆ ಹೊಂದುವಂತೆ ಮರುನಿರೂಪಣೆ ಮಾಡಲಾಗಿದೆ. ತುಳು ನೆಲದ ರೂಪಕಗಳನ್ನು ಬಳಸಿ ಕಥಾನಾಯಕ ಮತ್ತು ನಾಯಕಿಯ ಒಳ ತುಮುಲಗಳನ್ನು ಹೇಳುವಲ್ಲಿ ನಿರ್ದೇಶಕರು ಚಿತ್ರದಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಕ್‌ಬೆತ್ ಕತೆ ಮನುಷ್ಯನ ಕನಸು, ಆಸೆ ಹೇಗೆ ದುರಾಸೆಯಾಗಿ ಆತನ ದುರಂತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಹೇಳುವ ನಾಟಕ. ಪಡ್ಡಾಯಿ ಚಿತ್ರದಲ್ಲಿ ಇದನ್ನು ಭಿನ್ನವಾಗಿ ನಿರೂಪಿಸಿದ್ದಾರೆ. ಚಿತ್ರದ ನಾಯಕ ಮಾಧವ(ಮೋಹನ್) ‘ಕಡಲ ಹುಲಿ’ ಎಂದೇ ಹೆಸರು ಪಡೆದಾತ. ಕಡಲಿನ ಪ್ರಚಂಡ ಅಲೆಗಳನ್ನು ಸೀಳಿ, ಅಲ್ಲಿಂದ ಮೀನುಗಳನ್ನು ಗೋರಿಕೊಂಡು ಬರುವ ಈತ, ಸಾಹುಕಾರ ದಿನೇಶಣ್ಣ(ಗೋಪಿನಾಥ್ ಭಟ್)ನ ಬಲಗೈ ಬಂಟ. ಮಾಧವನ ಪತ್ನಿ ಸುಗಂಧಿ. ಮ್ಯಾಕ್‌ಬೆತ್‌ಗೆ ಭವಿಷ್ಯತ್ತಿನ ಸೂಚನೆ ಸಿಕ್ಕಿದಂತೆಯೇ ಮಾಧವನಿಗೂ ದೈವದ ಮೂಲಕ, ಭವಿಷ್ಯದ ಸೂಚನೆಗಳು ಸಿಗುತ್ತವೆ. ದೈವ ನೀಡಿದ ಸಂಕೇತಗಳು ಒಂದೊಂದೇ ನಿಜವಾಗುವುದನ್ನು ಮಾಧವ ಕಾಣುತ್ತಾನೆ. ಅಂತಿಮವಾಗಿ ಆತನೇ ದೈವದ ಮಾತುಗಳನ್ನು ನಿಜ ಮಾಡಲು ಮುಂದಾಗುತ್ತಾನೆ. ಆಸೆ, ಕನಸುಗಳು ದುರಾಸೆಯಾಗಿ ಮಾರ್ಪಡುತ್ತದೆ. ಮಗನ ಮೇಲಿನ ಸಿಟ್ಟಿನಿಂದ ‘ನನ್ನೆಲ್ಲ ಆಸ್ತಿಯನ್ನು ಮಾಧವನ ಹೆಸರಿಗೆ ಮಾಡುವೆ’ ಎಂದು ದಿನೇಶಣ್ಣನ ಮಾತನ್ನು ದಂಪತಿ ನಿಜವೆಂದೇ ಭಾವಿಸಿ ಕನಸು ಕಾಣುತ್ತಾರೆ. ಆದರೆ, ಅದು ಬಾಯಿ ಮಾತಿಗೆ ಹೇಳಿದ್ದೆಂದು ಅರಿತಾಗ, ಆ ಮಾತನ್ನು ನಿಜ ಮಾಡಲು ಕೊಲೆಯ ದಾರಿಯನ್ನು ಹಿಡಿಯು ತ್ತಾರೆ. ಆ ಕೊಲೆಯ ಪಾಪ ಪ್ರಜ್ಞೆ ಇಬ್ಬರನ್ನೂ ದುರಂತಕ್ಕೆ ತಳ್ಳುತ್ತದೆ. ಆಧುನಿಕತೆಯ ಮೋಹದ ಒಳಸುಳಿಗೆ ಸಿಕ್ಕಿದ ಮನಸ್ಸು ಗಳ ತಲ್ಲಣಗಳನ್ನೂ ಈ ಸಿನೆಮಾ ಹೇಳುವ ಪ್ರಯತ್ನ ಮಾಡಿದೆ.

ಚಿತ್ರದಲ್ಲಿ ಸುಗಂಧಿಯ ಪಾತ್ರದಲ್ಲಿ ಬಿಂದು ರಕ್ಷಿಧಿಯ ಅಭಿನಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸುಗಂಧ ದ್ರವ್ಯದ ಮೂಲಕ ತನ್ನನ್ನು ಕಾಡುವ ರಕ್ತದ ವಾಸನೆಯಿಂದ ಪಾರಾಗುವ ದೃಶ್ಯ ಆಕೆಯ ಒಳತುಮುಲಗಳನ್ನು ಗಾಢವಾಗಿ ಕಟ್ಟಿಕೊಟ್ಟಿದೆ. ಮಾಧವನ ಪಾತ್ರಕ್ಕೆ ಮೋಹನ್ ಮೈಕಟ್ಟು ಒಗ್ಗುವಂತಿದೆ. ಮನಸ್ಸಿನ ಓಲಾಟಗಳನ್ನು, ಏರು ಇಳಿತಗಳನ್ನು ಕಡಲಿನ ಅಲೆಗಳ ಮೂಲಕ ತೆರೆದಿಡುವಲ್ಲಿ ಛಾಯಾಗ್ರಾಹಕ ವಿಷ್ಣು ಪ್ರಸಾದ್ ಯಶಸ್ವಿಯಾಗಿದ್ದಾರೆ. ಇಡೀ ಸಿನೆಮಾಕ್ಕೆ ಕಡಲೇ ಕೇಂದ್ರಬಿಂದುವಾಗಿದೆ. ಯಕ್ಷಗಾನದ ಹಿನ್ನೆಲೆಯಲ್ಲಿ ವೇಷ ಹಾಕುವ ಪಾತ್ರಗಳನ್ನು ನಿರೂಪಕರಂತೆಯೂ, ಕೋರಸ್‌ಗಳಂತೆಯೂ ಬಳಸಿರುವುದು ಚಿತ್ರಕ್ಕೆ ಪೂರಕವಾಗಿದೆ. ಉಳಿದ ಸಣ್ಣ ಪುಟ್ಟಪಾತ್ರಗಳು ಇನ್ನಷ್ಟು ಪೋಷಣೆಯನ್ನು ಪಡೆದುಕೊಳ್ಳುವ ಅಗತ್ಯವಿತ್ತು. ಚಿತ್ರದ ಕೊನೆಯಲ್ಲಿನ ಹೊಡೆದಾಟ ತುಸು ನಾಟಕೀಯವಾಗಿದೆ. ಆದರೆ ಅಂತ್ಯ ನಮ್ಮ ಮನದಲ್ಲಿ ಉಳಿಯುತ್ತದೆ. ಚಿತ್ರ ಮುಗಿದ ಬಳಿಕವೂ ನಮ್ಮನ್ನು ಕಾಡುತ್ತದೆ. ಅಭಯ ಸಿಂಹ ಅವರ ಪ್ರಯತ್ನವನ್ನು ತುಳುವರು ಬೆಂಬಲಿಸಬೇಕು. ಈ ಮೂಲಕ ತುಳು ಚಿತ್ರೋದ್ಯಮದಲ್ಲಿ ಹೊಸ ಪ್ರಯೋಗಗಳಿಗೆ ದಾರಿ ತೆರೆದುಕೊಡಬೇಕು.

-ಮುಸಾಫಿರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)