varthabharthi


ಪ್ರಚಲಿತ

ನೈಜ ಸ್ವಾತಂತ್ರ್ಯದ ಹುಡುಕಾಟದಲ್ಲಿ...

ವಾರ್ತಾ ಭಾರತಿ : 12 Aug, 2018
ಸನತ್ ಕುಮಾರ ಬೆಳಗಲಿ

ಆಗಸ್ಟ್ 15. ಸ್ವಾತಂತ್ರ ದಿನಾಚರಣೆ. ಪ್ರತಿ ವರ್ಷ ಈ ದಿನ ಸಮೀಪಿಸಿದಾಗಲೆಲ್ಲ ಮಾಧ್ಯಮಗಳಲ್ಲಿ ಸೂಕ್ಷ್ಮ ಸಂಗತಿಯೊಂದನ್ನು ಗಮನಿಸಬಹುದು. ದೇಶದ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಗೆ ಭಯೋತ್ಪಾದಕರಿಂದ ಧಕ್ಕೆಯಾಗಲಿದೆ. ಸ್ವಾತಂತ್ರ ದಿನಾಚರಣೆ ಸಮಾರಂಭಕ್ಕೆ ಭಂಗ ಉಂಟಾಗಲಿದೆ. ವಿಮಾನ ನಿಲ್ದಾಣ, ಬಸ್-ರೈಲು ನಿಲ್ದಾಣ ಸೇರಿದಂತೆ ರಾಷ್ಟ್ರೀಯ ಸ್ಮಾರಕಗಳಿಗೆ ಅಪಾಯವಾಗಲಿದೆ ಎಂಬಂತಹ ಸುದ್ದಿಗಳಿಗೆ ಬಿತ್ತರವಾಗುತ್ತವೆ. ಸುದ್ದಿ ವಾಹಿನಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಜನರಲ್ಲಿ ಆತಂಕ ಮೂಡುತ್ತದೆ. ಭವಿಷ್ಯದ ಬಗ್ಗೆ ಕಾರ್ಮೋಡ ಆವರಿಸುತ್ತದೆ. ಅಹಿತಕರ ಘಟನೆ ನಡೆಯದೆ ಸ್ವಾತಂತ್ರ ದಿನಾಚರಣೆಯು ಸರಾಗವಾಗಿ ನಡೆದುಬಿಟ್ಟರೆ, ಜನರು ನಿರಾಳ. ಎಲ್ಲ ರೀತಿಯ ಅಪಾಯವನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಸಮಾಧಾನ.

ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಕೇಂದ್ರ ಸರಕಾರವು ಬಜೆಟ್‌ನಲ್ಲಿನ ಅತಿ ಹೆಚ್ಚಿನ ಅನುದಾನವನ್ನು ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಗೆ ಮೀಸಲಿಡುತ್ತದೆ. ವಿಶ್ವದಲ್ಲೇ ಅತ್ಯಂತ ಸಮರ್ಥ ಸೇನಾ ಬಲವಿದ್ದು, ಎಂಥದ್ದೇ ದಾಳಿಯಾದರೂ ತಕ್ಕ ಉತ್ತರ ನೀಡುತ್ತೇವೆ ಎಂದು ಕೇಂದ್ರ ಸರಕಾರ ಸಾರಿ ಸಾರಿ ಹೇಳುತ್ತದೆ. ಆದರೂ ಸ್ವಾತಂತ್ರ ದಿನ ಸೇರಿದಂತೆ ಪ್ರಮುಖ ದಿನಗಳಲ್ಲಿ ಭದ್ರತೆಯ ವಿಷಯವೇ ಪ್ರಮುಖವಾಗಿ ಕಾಡುತ್ತದೆ.

ಸ್ವಾತಂತ್ರ ದಿನಾಚರಣೆಯ ಸಂಭ್ರಮ, ಸಡಗರಕ್ಕಿಂತ ಭದ್ರತೆ ಮತ್ತು ಬಂದೋಬಸ್ತ್ ಹೆಚ್ಚಿನ ಆದ್ಯತೆ ಪಡೆಯುತ್ತದೆ. ಸ್ವಾತಂತ್ರ ಪಡೆಯುವುದಕ್ಕಾಗಿ ದೇಶದ ಜನರೆಲ್ಲರೂ ಒಟ್ಟುಗೂಡಿ ಹೋರಾಟ ಮಾಡಿದ ದಿನಗಳಿಗಿಂತ ಭವಿಷ್ಯದ ಅಪಾಯದ ದಿನಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಹೇಳಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದೆಲ್ಲವೂ ಸಹಜವಾಗಿದೆ.

ದೇಶದ ಹೊರಗಿರುವ ಶತ್ರುಗಳ ಮೇಲೆ ನಿಗಾ ವಹಿಸಲು ಬೇರೆ ಬೇರೆ ಸ್ವರೂಪದಲ್ಲಿ ಎಷ್ಟೆಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ದೇಶದೊಳಗಿನ ವಿಚ್ಛಿದ್ರಕಾರಿ ಶಕ್ತಿ ಮತ್ತು ಜೀವ ವಿರೋಧಿ ಸಂಘಟನೆಗಳಿಂದ ಆಗುತ್ತಿರುವ ಅಪಾಯದ ಬಗ್ಗೆ ಯಾಕೆ ಕಣ್ಣಿಡಲಾಗುತ್ತಿಲ್ಲ? ತಾನು ಭಾರತೀಯ ಎಂದು ಗೋಗೆರೆದರೂ ಆಧಾರ್ ಕಾರ್ಡು ಇಲ್ಲದೆ ಭಾರತೀಯನೆಂದು ಒಪ್ಪದ ವ್ಯವಸ್ಥೆಯನ್ನು ಯಾಕೆ ಸರಿಪಡಿಸಲಾಗುತ್ತಿಲ್ಲ? ಹುಡುಗಿಯರು ಇಂಥದ್ದೇ ಉಡುಗೆ-ತೊಡುಗೆ ತೊಡಬೇಕು, ಇಲ್ಲದಿದ್ದರೆ ಅತ್ಯಾಚಾರಕ್ಕೆ ತುತ್ತಾಗಬೇಕು ಎಂದು ಬೆದರಿಕೆ ಒಡ್ಡುವವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಕೆಳ ಜಾತಿಯವರು ಒಳಚರಂಡಿ ಶುಚಿಗೊಳಿಸುವ-ತ್ಯಾಜ್ಯ ವಿಲೇವಾರಿ ಕೆಲಸ ಮಾಡಬೇಕೇ ಹೊರತು ಮೇಜು-ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವಂತಹ ಹುದ್ದೆಗೆ ಅರ್ಜಿ ಹಾಕದಂತೆ ದಮನಿಸುವವರಿಗೆ ಯಾಕೆ ಬುದ್ಧಿ ಕಲಿಸಲಾಗುತ್ತಿಲ್ಲ? ಸರ್ವಧರ್ಮೀಯರು ಇಲ್ಲಿ ಶತಮಾನಗಳಿಂದ ಜೊತೆಗೂಡಿ ಬಾಳುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರೂ ನಮ್ಮನ್ನು ಜಾತಿ-ಧರ್ಮದ ಹೆಸರಿನಲ್ಲಿ ಒಡೆಯುವ ಪ್ರಯತ್ನಕ್ಕೆ ಯಾಕೆ ನಿರ್ಬಂಧ ಹೇರಲಾಗುತ್ತಿಲ್ಲ?

ದೇಶ ಸ್ವಾತಂತ್ರಗೊಂಡು 70 ವರ್ಷಗಳು ದಾಟಿದ ನಂತರವೂ ಇಲ್ಲಿನ ಅಲ್ಪಸಂಖ್ಯಾತರು ತಮ್ಮ ದೇಶಾಭಿಮಾನ ಸಾಬೀತುಪಡಿಸಲು ಹೆಣಗಾಡಬೇಕು. ತಮ್ಮ ಪೂರ್ವಜರು ದೇಶದ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರೂ ಮತ್ತು ಕುಟುಂಬದವರು ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರೂ ತಮಗೆ ದೇಶದ ಮೇಲೆ ಪ್ರೇಮವಿದೆ ಎಂದು ತೋರ್ಪಡಿಸಲು ಮೂಲಭೂತವಾದಿ ಶಕ್ತಿಗಳು ಹೇಳಿದಂತೆ ಕೇಳಬೇಕು. ಹುಟ್ಟಿನಿಂದಲೂ ಅನುಸರಿಸಿಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಬದಲಿಸಿಕೊಂಡು ಕೆಲ ಸಂಘಟನೆಗಳು ಸೂಚಿಸಿದ್ದನ್ನೇ ತಿನ್ನಬೇಕು. ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಸಂವಿಧಾನದಡಿ ಭಾರತೀಯ ಪೌರತ್ವ ದೊರೆತರೂ ತಾನು ಭಾರತೀಯ ಎಂದು ಪ್ರತಿಪಾದಿಸಲು ಆಕೆ ಅಥವಾ ಆತ ಹುತಾತ್ಮನಾಗಲು ಅಥವಾ ಸರ್ವತ್ಯಾಗ ಮಾಡಲು ಸಿದ್ಧವಾಗಬೇಕು. ಇಷ್ಟವಿದ್ದರೂ-ಇಲ್ಲದಿದ್ದರೂ ಇದೆಲ್ಲವನ್ನೂ ಮಾಡಲೇಬೇಕು.

ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ಮಾಡಿ ಸ್ವಾತಂತ್ರ ಗಳಿಸಿದರೂ ಜಾತಿ-ಧರ್ಮದ ಹೆಸರಿನಲ್ಲಿ ಮಾಡಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳಿಂದ ಜನರು ಈಗಲೂ ನಲುಗುತ್ತಿದ್ದಾರೆ. ಪೂರ್ಣಪ್ರಮಾಣದ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ. ಮೂಢನಂಬಿಕೆ ಮತ್ತು ಕಂದಾಚಾರದಿಂದ ಕೆಲವರು ಶೋಷಣೆಗೊಳಗಾದರೆ, ಇನ್ನು ಕೆಲವರು ಧಾರ್ಮಿಕ ಕಟ್ಟುಪಾಡುಗಳಲ್ಲೇ ಸೆರೆಯಾಗಿದ್ದಾರೆ. ಆರ್ಥಿಕವಾಗಿ ಸಬಲರಾದರೂ ಮಹಿಳೆಯು ಪುರುಷ ಪ್ರಧಾನ ವ್ಯವಸ್ಥೆ ಸರಪಳಿಗಳಿಂದ ಬಿಡುಗಡೆ ಪಡೆಯಲು ಸಾಧ್ಯವಾಗಿಲ್ಲ. ಉಚಿತ ಶಿಕ್ಷಣದಡಿ ಮಕ್ಕಳು ಶಾಲೆಗಳಿಗೆ ಹೋಗಿ ಶಿಕ್ಷಣ ಪಡೆಯಲು ಹಂಬಲಿಸಿದರೂ ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಬಡವರು ಬಡತನದಿಂದ ಮುಕ್ತವಾಗಲು ಮತ್ತು ನೆಮ್ಮದಿಯ ಬಾಳು ಕಂಡುಕೊಳ್ಳಲು ಪ್ರಯತ್ನಿಸಿದರೂ ಸಫಲರಾಗುತ್ತಿಲ್ಲ.

ದೇಗುಲ ನಿರ್ಮಿಸುವ ಕೆಳ ಜಾತಿಯ ಕಾರ್ಮಿಕರಿಗೆ ದೇವರ ಗರ್ಭಗುಡಿಯೊಳಗೆ ಪ್ರವೇಶವೇ ನಿಷಿದ್ಧ ಇರುವಾಗ, ಆಹಾರದ ಹಕ್ಕು ಇದ್ದರೂ ಒಂದು ಹೊತ್ತಿನ ಊಟ ಸಿಗದೇ ನಿರ್ಗತಿಕ ಜನರು ಸಾಯುತ್ತಿರುವಾಗ ಸ್ವಾತಂತ್ರ ದಿನಾಚರಣೆ ಹೇಗೆ ಅರ್ಥಪೂರ್ಣ ಆದೀತು? ಸತ್ಯ ನುಡಿದರೆ-ಆಡಳಿತ ವ್ಯವಸ್ಥೆಯನ್ನು ಟೀಕಿಸಿದರೆ ಪ್ರಾಣ ಕಳೆದುಕೊಳ್ಳಬೇಕಾದ ಅಪಾಯಕಾರಿ ಸ್ಥಿತಿ ಒಂದೆಡೆಯಿದ್ದರೆ, ಮತ್ತೊಂದೆಡೆ ಧಾರ್ಮಿಕ ಮೂಲಭೂತವಾದಿತನವೇ ದೇಶಪ್ರೇಮದ ಸಂಕೇತವಾಗಿದೆ. ಪರಿಸ್ಥಿತಿ ಹೀಗಿದ್ದರೆ, ದೇಶ ಗಳಿಸಿದ ಸ್ವಾತಂತ್ರಕ್ಕೆ ಅರ್ಥವೇನು? ಶಾಲಾಕಾಲೇಜಿಗೆ ಹೋದ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಮನೆಗೆ ಬಾರದೇ ವಿಕೃತರ ಅಟ್ಟಹಾಸ-ಅತ್ಯಾಚಾರಕ್ಕೆ ಬಲಿಯಾಗುವುದಾದರೆ, ಕೊಲೆಗಡುಕರು-ಜೀವ ವಿರೋಧಿಗಳು ಹಣ ಮತ್ತು ಜಾತಿಯ ಪ್ರಭಾವದಿಂದ ಶಿಕ್ಷೆಗೆ ಒಳಪಡದೇ ಮುಕ್ತವಾಗಿ ಓಡಾಡುವುದಾದರೆ, ಸ್ವಾತಂತ್ರದ ವ್ಯಾಖ್ಯಾನ ಹೇಗೆ ತಾನೇ ಸುಲಭವಾಗಿ ಅರ್ಥವಾದೀತು? ಬುದ್ಧಿಜೀವಿಗಳು ಮತ್ತು ವಿಚಾರವಂತರನ್ನು ಹೊಡೆದು ಸಾಯಿಸಿದವರ ಪರ ಮೆರವಣಿಗೆ ನಡೆಯುವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಜೀವ ವಿರೋಧಿ ಸಂತಾನಗಳೇ ಹೆಚ್ಚು ಸಂಭ್ರಮಿಸುವುದಾದರೆ, ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ಹೇಗೆ ತಾನೇ ತಿಳಿಪಡಿಸಲು ಸಾಧ್ಯವಾದೀತು? ದೇಶವನ್ನಾಳಿದ ಈ ಹಿಂದಿನ ಸರಕಾರಗಳೆಲ್ಲ ದೇಶಕ್ಕಾಗಿ ಏನನ್ನೂ ಮಾಡಿಯೇ ಇಲ್ಲ, ದೇಶದ ಅಭಿವೃದ್ಧಿ ಈಗಿನಿಂದಲೇ ಆರಂಭವಾಗಿದೆ ಎಂದು ಜೋರಾಗಿ ಭಾಷಣ ಬೀಗಿಯುವವರ ಎದುರು ಕೂತು ಜನರು ಮೂಢರಾಗಿ ನಂಬುತ್ತಿರುವಾಗ, ವಾಸ್ತವಾಂಶದಿಂದ ಕೂಡಿತ ಸತ್ಯಾಸತ್ಯತೆ ಅವರಿಗೆ ತಿಳಿಯಪಡಿಸುವುದಾದರೂ ಹೇಗೆ? ಪಂಚ ವಾರ್ಷಿಕ ಯೋಜನೆ, ಪಂಚಶೀಲ ಯೋಜನೆ, ವಿದೇಶಿ ನೀತಿ, ಕೈಗಾರಿಕೆಗಳ ಸ್ಥಾಪನೆ, ಹಸಿರು ಕ್ರಾಂತಿ, ಉದ್ಯೋಗಾವಕಾಶ, ಸೇನಾಬಲ, ದೂರವಾಣಿ ಸಂಪರ್ಕ, ಶಿಕ್ಷಣ, ಸಾಮಾಜಿಕ ಜಾಗೃತಿ ಮುಂತಾದವು ಹಿಂದಿನ ಸರಕಾರಗಳದ್ದೇ ಕೊಡುಗೆ ಎಂದು ಜನರನ್ನು ನಂಬಿಸುವುದಾದರೂ ಹೇಗೆ? ಈಗ ಬರೀ ಮಾತುಗಳು ಉಳಿದಿವೆ-ಭರವಸೆಗಳು ಯಥಾಸ್ಥಿತಿಯಲ್ಲಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ?

ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡು ಭಾರತವು ಸ್ವಾತಂತ್ರ ಪಡೆದ ಕಾಲಘಟ್ಟದಲ್ಲೇ ಇನ್ನೂ ಕೆಲವು ದೇಶಗಳು ಸ್ವಾತಂತ್ರ ಪಡೆದವು. ಸ್ವಾವಲಂಬಿ ರಾಷ್ಟ್ರವಾಗುವ ಮತ್ತು ಪ್ರಜಾಪ್ರಭುತ್ವ ವೌಲ್ಯಗಳನ್ನು ಎತ್ತಿ ಹಿಡಿಯುವ ಕನಸು ಕಂಡವು. ಕೆಲವು ರಾಷ್ಟ್ರಗಳು ನನಸು ಮಾಡಿಕೊಂಡವೇ ಹೊರತು ಇನ್ನು ಕೆಲವು ಸ್ವಾತಂತ್ರವನ್ನೇ ಕಳೆದುಕೊಂಡವು. ಕೆಲವು ಸ್ವಾತಂತ್ರ ಪಡೆದುಕೊಂಡರೂ ಸರ್ವಾಧಿಕಾರ ಆಡಳಿತಕ್ಕೆ ಒಳಪಟ್ಟವು. ಅತಂತ್ರ ಸ್ಥಿತಿಯಲ್ಲಿ ಸಿಲುಕಿದವು. ಪಾಕಿಸ್ತಾನದಲ್ಲಿ ಚುನಾವಣೆ ನಡೆದು ಪ್ರಧಾನಿ ಆಯ್ಕೆಯಾದರೂ ಅದು ಸೇನಾಡಳಿತದಿಂದ ಮುಕ್ತವಾಗಿದೆ ಅಥವಾ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸರಕಾರ ಉತ್ತಮ ಆಡಳಿತ ನೀಡಲಿದೆ ಎಂದು ಸ್ಪಷ್ವವಾಗಿ ಹೇಳಲು ಆಗುವುದಿಲ್ಲ? ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲೂ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ಅಲ್ಲಿನ ಆಂತರಿಕ ಸಮಸ್ಯೆಗಳೇ ಹೆಚ್ಚಾಗಿವೆ. ಆರ್ಥಿಕ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸವಾಲುಗಳನ್ನು ಅವು ಎದುರಿಸುತ್ತಿವೆ.

ಸಂಕಷ್ಟಮಯ ಮತ್ತು ಅತಂತ್ರದಿಂದ ಕೂಡಿರುವ ದೇಶಗಳಿಂದಲೇ ಸುತ್ತುವರಿದಿರುವ ಭಾರತದಲ್ಲಿ ಈಗಲೂ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರವಾಗಿರಲು ಈ ಹಿಂದಿನ ಸರಕಾರಗಳೇ ಕಾರಣ. ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇತರ ಮಹನೀಯರ ದೂರದೃಷ್ಟಿ ಮತ್ತು ಚಿಂತನೆಗಳಿಂದ ದೇಶದಲ್ಲಿ ಈಗಲೂ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿ ಉಳಿದಿದೆ. ದೇಶದ ಸಂವಿಧಾನವು ಜನರಿಗೆ ಸ್ವಾತಂತ್ರವಾಗಿ ಮತ್ತು ಸ್ವವಲಂಬಿಯಾಗಿ ಬದುಕುವ ಹಕ್ಕು ನೀಡಿದೆ. ದೇಶದ ಪ್ರಜೆಗಳಾಗಿ ಹೇಗೆ ಬಾಳಬೇಕು ಎಂಬುದನ್ನು ಸಂವಿಧಾನ ತಿಳಿಸಿಕೊಟ್ಟಿದೆ. ಅದರಂತೆಯೇ ಎಲ್ಲರೂ ಬಾಳಿದರೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸಬಲಗೊಳಿಸಬಹುದು. ದಬ್ಬಾಳಕೆ, ದೌರ್ಜನ್ಯ, ಮೂಲಭೂತವಾದ, ಭಯ, ಆತಂಕ, ಶೋಷಣೆ, ಹಿಂಸೆ, ಕ್ರೌರ್ಯ ಎಲ್ಲವೂ ಕೊನೆಗೊಂಡು ಪ್ರತಿಯೊಬ್ಬರ ಮೊಗದಲ್ಲೂ ನೆಮ್ಮದಿಯ ನಗು ಮೂಡಿದಾಗಲೇ ದೇಶ ಗಳಿಸಿದ ಸ್ವಾತಂತ್ರ ಅರ್ಥಪೂರ್ಣವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)