varthabharthi


ಭೀಮ ಚಿಂತನೆ

ಕೇವಲ ಕಾನೂನು ತಯಾರಿಸಿದರಷ್ಟೇ ಸಾಕೇ?

ವಾರ್ತಾ ಭಾರತಿ : 21 Sep, 2018

ಭಾಗ-1

ನಾನೀಗ ಸಚಿವ ಸಂಪುಟದಲ್ಲಿ ಸಚಿವನಾಗಿ ಉಳಿದಿಲ್ಲ ಎಂಬುದು ಲೋಕಸಭೆಗೆ ಅಧಿಕೃತವಾಗಿ ಅಲ್ಲದಿದ್ದರೂ ಅನಧಿಕೃತವಾಗಿ ತಿಳಿದಿದೆ. 1951, ಸೆಪ್ಟಂಬರ್ 27 ಗುರುವಾರದಂದು ನನ್ನ ಸಚಿವ ಪದದ ರಾಜೀನಾಮೆಯನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸಿ, ಕೂಡಲೇ ಅದನ್ನು ಸ್ವೀಕರಿಸಿ ನನ್ನನ್ನು ಈ ಹೊಣೆಯಿಂದ ಬಿಡುಗಡೆ ಮಾಡಿದರೆಂದು ಅವರನ್ನು ಕೋರಿದೆ. ಪ್ರಧಾನಮಂತ್ರಿಯವರು ದಯೆತೋರಿ ಮಾರನೆಯ ದಿನವೇ ಅದನ್ನು ಸ್ವೀಕರಿಸಿದರು. ನಾನು ದಿನಾಂಕ 28, ಶುಕ್ರವಾರದ ತನಕ ಸಚಿವನಾಗಿದ್ದೆ. ಇದಕ್ಕೆ ಕಾರಣವೇನೆಂದರೆ ಪ್ರಧಾನ ಮಂತ್ರಿಯವರು ಲೋಕಸಭೆಯ ಪ್ರಸ್ತುತ ಅಧಿವೇಶನ ಮುಗಿಯುವವರೆಗೆ ನಾನು ಸಚಿವನಾಗಿ ಮುಂದುವರಿಯಬೇಕೆಂದು ಕೋರಿದ್ದರು.

ಸಂವಿಧಾನದ ನಡೆದು ಬಂದ ಸಂಪ್ರದಾಯದಂತೆ ಪ್ರಧಾನ ಮಂತ್ರಿಯವರ ಕೋರಿಕೆಯನ್ನು ಮನ್ನಿಸುವುದು ನನ್ನ ಕರ್ತವ್ಯವಾಗಿತ್ತು. ಒಬ್ಬ ಸಚಿವನು ತನ್ನ ಸಚಿವ ಪದಕ್ಕೆ ರಾಜೀನಾಮೆಯನ್ನು ನೀಡಿದರೆ ಅವನು ಅದರ ಕುರಿತು ಲೋಕಸಭೆಯಲ್ಲಿ ತನ್ನ ನಿರೂಪಣೆಯನ್ನು ಮಾಡಬೇಕೆಂಬ ಏರ್ಪಾಡನ್ನು ಲೋಕಸಭೆ ನಿಯಮಗಳಲ್ಲಿ ಮಾಡಲಾಗಿದೆ. ನಾನು ಸಚಿವನಾಗಿದ್ದಾಗ ಹಲವು ಜನ ಸಚಿವರು ರಾಜೀನಾಮೆ ನೀಡಿರುವರು. ರಾಜೀನಾಮೆಯನ್ನು ನೀಡುವ ಸಚಿವರು ತಮ್ಮ ನಿರೂಪಣೆಯನ್ನು ಹೇಗೆ ಸಲ್ಲಿಸಬೇಕೆಂಬ ಬಗೆಗೆ ಸೂಕ್ತವಾದ ಸಂಪ್ರದಾಯ ಇನ್ನೂ ತಯಾರಾಗಿಲ್ಲ. ಈವರೆಗೆ ರಾಜೀನಾಮೆಯನ್ನು ಸಲ್ಲಿಸಿದ ಕೆಲವು ಜನ ಸಚಿವರು ಲೋಕಸಭೆಯಲ್ಲಿ ನಿರೂಪಣೆಯನ್ನು ಮಾಡದೆ ಹಾಗೆಯೇ ಹೊರಟು ಹೋದರೆ, ಇನ್ನು ಕೆಲವರು ನಿರೂಪಣೆಯನ್ನು ಮಾಡಿದ ತರುವಾಯ ಹೋದರು. ಈ ಬಗೆಗೆ ನಾನೇನು ಮಾಡಬೇಕೆಂಬ ಬಗ್ಗೆ ನನ್ನಿಂದ ಬೇಗನೆ ತೀರ್ಮಾನವನ್ನು ಕೈಗೊಳ್ಳಲು ಆಗಲಿಲ್ಲ. ಇಡಿಯ ಪರಿಸ್ಥಿತಿಯನ್ನು ಕುರಿತು ಯೋಚಿಸಿ, ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುವ ಸದಸ್ಯರು ಲೋಕಸಭೆಯಲ್ಲಿ ತನ್ನ ನಿರೂಪಣೆಯನ್ನು ಸಲ್ಲಿಸುವುದು ಅವನ ಕರ್ತವ್ಯ ಕರ್ಮವಾಗಿದ್ದು ಈ ತತ್ವವನ್ನನುಸರಿಸಿ ನಾನೀಗ ನನ್ನ ರಾಜೀನಾಮೆಯನ್ನು ಕುರಿತು ಲೋಕಸಭೆಯಲ್ಲಿ ನಿರೂಪಣೆಯನ್ನು ಮಾಡುವುದು ಅವಶ್ಯಕವಾಗಿದೆ ಎಂದು ತೀರ್ಮಾನಿಸಿದ್ದೇನೆ.

 ಸಚಿವ ಸಂಪುಟವು ತನ್ನ ಕಾರ್ಯವನ್ನು ಹೇಗೆ ಮಾಡುತ್ತದೆ, ಸಚಿವರೆಲ್ಲರೂ ಪ್ರತಿಯೊಂದು ಸಂಗತಿಯ ಬಗೆಗೆ ಒಮ್ಮತವನ್ನು ಹೊಂದಿರುವವರೇ, ಅವರಲ್ಲಿ ವಾಗ್ವಾದಗಳು ನಡೆಯುತ್ತವೆಯೇ ಎಂಬ ಸಂಗತಿಯು ಲೋಕಸಭೆಗೆ ಎಂದಿಗೂ ತಿಳಿದು ಬರುವುದೇ ಇಲ್ಲ. ಸಚಿವ -ಸಚಿವರಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದರೂ ಸಚಿವ ಸಂಪುಟದ ಯಾವ ಒಬ್ಬ ಸಚಿವನಿಗೆ ಬಹುಮತದ ಬೆಂಬಲ ಸಿಕ್ಕದೇ ಹೋದಾಗ ಅಂತ ಸಚಿವರು ತನ್ನ ಭಿನ್ನಾಭಿಪ್ರಾಯಗಳನ್ನು ಸಚಿವ ಸಂಪುಟದ ಹೊರಗೆ ವ್ಯಕ್ತಪಡಿಸಬಾರದು. ಪ್ರತಿಯೊಬ್ಬ ಸಚಿವರು ಸಚಿವ ಸಂಪುಟದ ಸಂಯುಕ್ತ ಹೊಣೆಗಾರಿಕೆಗೆ ತಲೆಬಾಗಬೇಕು ಎನ್ನುವ ಉಡದ ಹಿಡಿತದಂತಹ ಬಂಧನವನ್ನು ಸಚಿವನ ಕೊರಳಿಗೆ ಕಟ್ಟಿದ್ದರಿಂದ ಅವನು ಹೊರಗಡೆಯಲ್ಲಿ ತನ್ನ ಅಭಿಪ್ರಾಯಗಳನ್ನು ಪ್ರಕಟಿಸಲಾರನು. ಹೀಗಾಗಿ ಸಚಿವ ಸಂಪುಟದ ಕಾರ್ಯ ವಿಧಾನದ ಮಾಹಿತಿಯು ಲೋಕಸಭೆಗೆ ಲಭಿಸುವುದಿಲ್ಲ. ಹೀಗಾಗಿ ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯದ ಬೆಂಕಿ ಹೊಗೆಯಾಡುತ್ತಿದ್ದರೂ ಸಚಿವ ಸಂಪುಟವು ಸರಾಗವಾಗಿ ಸಾಗಿದೆ ಎಂದು ಲೋಕಸಭೆಗೆ ಅನ್ನಿಸುತ್ತದೆ. ಸಚಿವ ಸಂಪುಟವನ್ನು ತೊರೆಯಬೇಕೆನ್ನುವ ಸಚಿವರು ತಾನು ಹಾಗೇಕೆ ಮಾಡುತ್ತಿದ್ದೇನೆ ಎಂಬುದರ ಸವಿಸ್ತಾರವಾದ ಮಾಹಿತಿಯನ್ನು ಲೋಕಸಭೆಗೆ ನೀಡುವುದು ಅವನ ಕರ್ತವ್ಯ ಕರ್ಮವಾಗಿದೆ.

ಇದರ ಹೊರತಾಗಿ ಎರಡನೆಯ ಕಾರಣವೆಂದರೆ ಒಬ್ಬ ಸಚಿವನು ತನ್ನ ಸತ್ಯದ ಬದಿಯನ್ನು ಜನರೆದುರು ನಿರೂಪಿಸದೆ ಹೊರಟು ಹೋದರೆ, ಅವನ ಖಾಸಗಿ ಇಲ್ಲವೇ, ಸಾರ್ವಜನಿಕ ಸಂಗತಿಯ ಕುರಿತು ಜನರಲ್ಲಿ ಸಂದೇಹದ ಭಾವನೆ ತಲೆದೋರುವುದು. ರಾಜೀನಾಮೆಯನ್ನು ನೀಡುವ ಸಚಿವರು ಜನರಿಗೆ ತರ್ಕ ಕುತರ್ಕಗಳನ್ನು ಮಾಡಲು ಅವಕಾಶವನ್ನು ಕೊಡಬಾರದು. ಇದಕ್ಕಾಗಿ ಇರುವ ಉತ್ತಮ ಮಾರ್ಗವೆಂದರೆ ಜನರೆದುರು ತನ್ನ ಕೃತಿಯನ್ನು ಕುರಿತು ನಿರೂಪಣೆಯನ್ನು ಮಾಡುವುದು.

ಮೂರನೆಯ ಕಾರಣವೆಂದ,ೆ ನಮ್ಮ ಕೆಲವು ವೃತ್ತಪತ್ರಗಳು ಸಾರ್ವಜನಿಕ ಕಾರ್ಯಕರ್ತರನ್ನು ಕುರಿತು ಯಾವಾಗಲೂ ಪೂರ್ವಗ್ರಹದಿಂದ ಬರೆಯುತ್ತವೆ. ಕೆಲವಂತೂ ಕೇವಲ ಟೀಕೆಗಳ ಮಳೆಗರೆಯುತ್ತವೆ. ತರುವಾಯದಲ್ಲಿ ಎಂದಿಗೂ ಈ ಪತ್ರಿಕೆಗಳಿಗೆ ಪ್ರತಿಯೊಬ್ಬ ಕಾರ್ಯಕರ್ತನ ಗುಣಾವಗುಣಗಳ ಮೇಲೆ ಸೂಕ್ತವಾದ ಬೆಳಕು ಬೀರಲು ಸಾಧ್ಯವಾಗದು. ರಾಜೀನಾಮೆಯ ಪ್ರಕರಣದಲ್ಲಿ ಅವುಗಳಿಗೆ ಎಷ್ಟೊಂದು ದೋಷಗಳು ಕಂಡುಬರುವವೋ ಅವಷ್ಟನ್ನೇ ಕುರಿತು ಅವು ಜನರೆದುರು ಮಂಡಿಸುತ್ತಾ ಹೋಗುತ್ತವೆ. ಈ ಪತ್ರಿಕೆಗಳು ರಾಜೀನಾಮೆಯ ನಿಜವಾದ ಕಾರಣಗಳನ್ನು ಮಂಡಿಸದೇ ತಮ್ಮ ಕಪೋಲಕಲ್ಪತ ಸಂಗತಿಗಳನ್ನು ಅವಕ್ಕೆ ತುರುಕಿ ಬಿಡುತ್ತವೆ. ವೃತ್ತಪತ್ರಗಳಿಗೆ ಇಷ್ಟೆಲ್ಲ ಉಪದ್ವ್ಯಾಪಗಳನ್ನು ಮಾಡುವ ಅಗತ್ಯವೇನಿದೆ? ಏಕೆಂದರೆ ತಮಗೆ ಪ್ರಿಯವೆನಿಸುವ ಸಚಿವನನ್ನು ಹಾಡಿ ಹೊಗಳಿ ಜನರಲ್ಲಿ ಅವನ ಒಣ ಪ್ರತಿಷ್ಠೆಯನ್ನು ಬೆಳೆಸುವುದಿರುತ್ತದೆ. ಅಲ್ಲದೆ ಅವುಗಳಿಗೆ ಅಪ್ರಿಯವೆನಿಸುವ ಸಚಿವರನ್ನು ಕುರಿತು ಅತಿರಂಜಿತವಾದ ವರ್ಣನೆಗಳನ್ನು ಮಾಡಿ ಜನರ ಕಣ್ಣಲ್ಲಿ ಆ ಸಚಿವರು ಇಳಿಯುವಂತೆ ಮಾಡುತ್ತವೆ!. ಸಚಿವ ಸಂಪುಟದಿಂದ ಹೊರಬೀಳುವ ಮುನ್ನ ನಾನು ಲೋಕಸಭೆಯಲ್ಲಿ ಮಂಡಿಸಬೇಕು ಎಂದಿರುವ ನಿರೂಪಣೆಯ ಕಾರಣಗಳು ಹೀಗಿವೆ.

ನಾನು ಕಾನೂನು ಸಚಿವನಾಗಬೇಕೆಂಬ ಪ್ರಧಾನ ಮಂತ್ರಿಯವರು ನನಗೆ ಸೂಚಿಸಿ ಇಂದಿಗೆ ನಾಲ್ಕು ವರ್ಷ ಒಂದು ತಿಂಗಳು ಮತ್ತು ಇಪ್ಪತ್ತಾರು ದಿನಗಳಾದವು. ನನ್ನೆದುರು ಸಚಿವ ಪದದ ಸೂಚನೆಯನ್ನು ಮಂಡಿಸಲಾದಾಗ ನನಗೆ ತುಂಬಾ ಅಚ್ಚರಿಯಾಗಿತ್ತು. ನಾನು ಪ್ರತಿಪಕ್ಷದ ಮನುಷ್ಯ. ಅದರಲ್ಲೂ 1946ರ ಆಗಸ್ಟ್‌ನಲ್ಲಿ ತಾತ್ಕಾಲಿಕ ಸರಕಾರ ಬಂದಾಗಲಂತೂ ನಾನು ಅದರಲ್ಲಿ ಕುಳಿತುಕೊಳ್ಳಲು ಪೂರ್ತಿ ಯೋಗ್ಯನಲ್ಲ ಎಂದು ನನ್ನ ಬಗೆಗೆ ನಾಲ್ದೆಸೆಗಳಲ್ಲೂ ಡಂಗುರವನ್ನು ಸಾರಲಾಗಿತ್ತು. ಪರಿಸ್ಥಿತಿ ಹೀಗಿರುವಾಗ ಪ್ರಧಾನಮಂತ್ರಿಯವರು ನನಗೆ ಸಚಿವ ಸಂಪುಟಕ್ಕೆ ಬರಲು ಆಹ್ವಾನಿಸುವುದನ್ನು ಕಂಡು ನನಗೆ ಅಚ್ಚರಿಯಾಯಿತು. ಆದರೆ ಪ್ರಧಾನಮಂತ್ರಿಗಳು ಹೀಗೆ ಮಾಡಲು ಯಾವ ಕಾರಣದಿಂದ ಉದ್ಯುಕ್ತರಾದರು ಎಂಬುದನ್ನು ಕುರಿತು ತರ್ಕ ವಿತರ್ಕ ಮಾಡಲು ನನಗೆ ಒಂದು ವಿಷಯ ಸಿಕ್ಕಿತು. ಪ್ರಧಾನಮಂತ್ರಿಯವರ ಮನದಲ್ಲಿ ಇಷ್ಟೊಂದು ಮಾರ್ಪಾಟು ಆದದ್ದು ಹೇಗೆ ಎಂಬ ಈ ಸಂಗತಿಯ ಬಗೆಗೆ ನಾನು ಸಂದೇಹಕ್ಕೆ ಒಳಗಾದೆ. ನನ್ನೊಡನೆ ಎಂದಿಗೂ ಸ್ನೇಹಭಾವದಿಂದ ನಡೆದುಕೊಳ್ಳದ ಸಚಿವರೊಡನೆ ಹೇಗೆ ಹೊಂದಿಕೊಳ್ಳಬಲ್ಲೆ ಎಂಬುದು ನನಗೆ ಅರ್ಥವಾಗಲಿಲ್ಲ.

ಇದಲ್ಲದೆ ನನಗಿಂತ ಮೊದಲು ಕಾನೂನು ಸಚಿವರಾಗಿದ್ದ ವ್ಯಕ್ತಿಯಲ್ಲಿ ಅಪಾರ ಜ್ಞಾನವಿತ್ತು. ಅವರು ಕಾನೂನು ಇಲಾಖೆಯ ಕಾರ್ಯದಲ್ಲಿ ಒಂದು ಉಚ್ಚ ಮಟ್ಟವನ್ನು ತಯಾರಿಸಿದ್ದರು. ಅವರೆದುರು ನನ್ನ ಗತಿಯೇನು! ಆದರೆ ನನ್ನ ಸಂದೇಹ ಹಾಗೂ ನನ್ನೆಲ್ಲ ತರ್ಕ ವಿತರ್ಕಗಳನ್ನೆಲ್ಲ ನನ್ನ ಬಳಿಯೇ ಇರಿಸಿಕೊಂಡೆ. ತಾನಾಗಿಯೇ ನಡೆದು ಬಂದ ಕಾನೂನು ಸಚಿವ ಹುದ್ದೆಯನ್ನು ಸ್ವೀಕರಿಸಿದೆ. ಈ ಹುದ್ದೆಯನ್ನು ಸ್ವೀಕರಿಸುವಲ್ಲಿ ನನ್ನ ಮುಖ್ಯ ಉದ್ದೇಶವೆಂದರೆ, ಈ ಜನರು ರಾಷ್ಟ್ರಾಭಿವೃದ್ಧಿ ಕೆಲಸದಲ್ಲಿ ಸಹಕಾರದ ಕೈಯನ್ನು ನನ್ನೆದುರು ಬಿಚ್ಚಿ ಇಟ್ಟಿದ್ದಾರೆ ಎಂದ ಬಳಿಕ ಆ ಕೈಯನ್ನು ಹಿಡಿದುಕೊಳ್ಳದೇ ಇರುವುದು ಸೂಕ್ತವಲ್ಲ. ಸಚಿವ ಸಂಪುಟದ ಸದಸ್ಯ ಹಾಗೂ ಕಾನೂನು ಸಚಿವ ಎಂಬ ಎರಡು ಬಗೆಯ ಸ್ವರೂಪದಲ್ಲಿ ನನ್ನ ಕರ್ತವ್ಯವನ್ನು ಆದಷ್ಟು ಮಟ್ಟಿಗೆ ಚೊಕ್ಕಟವಾಗಿ ನಿಭಾಯಿಸಿದ್ದೇನೆ ಎನ್ನುವುದನ್ನು ತೀರ್ಮಾನಿಸುವುದು ನನ್ನ ಕೈಯಲ್ಲಿಲ್ಲ. ಅದು ಜನರ ಕೈಯಲ್ಲಿದೆ. ಜನ ತಪ್ಪದೆ ಅದನ್ನು ಕುರಿತು ನಿರ್ಧರಿಸದಿರರು.

ನಾನು ಸಹಕಾರದಿಂದ ಹರಿದುಕೊಂಡು ದೂರಾಗಲು ಕಾರಣಗಳೇನು ಎಂಬುದನ್ನು ಕುರಿತು ಇನ್ನು ಮುಂದೆೆ ಹೇಳುವೆನು. ಸಚಿವ ಸಂಪುಟದಿಂದ ಹೊರ ಬೀಳಬೇಕೆಂಬ ಚಿಂತೆಯು ಬಹಳ ದಿನಗಳಿಂದ ನನ್ನನ್ನು ಪೀಡಿಸುತ್ತಿತ್ತು. ಹೀಗೆ ಚಿಂತೆ ಎನ್ನಿಸಲು ಒಂದರ ಹಿಂದೊಂದು ಹಲವು ಕಾರಣಗಳಾದವು.

 ಮೊದಲು, ನನ್ನ ವೈಯಕ್ತಿಕ ಕಾರಣಗಳತ್ತ ಹೊರಳುವೆನು. ಆದರೆ ಈ ವೈಯಕ್ತಿಕ ಸಂಗತಿಗಳು ನನ್ನ ರಾಜೀನಾಮೆಗೆ ಸಂಪೂರ್ಣ ಕಾರಣಗಳಾಗಲಿಲ್ಲ ಎಂದು ಮಾತ್ರ ಮೊದಲೇ ಹೇಳುತ್ತೇನೆ. ಈ ಮೊದಲು ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಯಲ್ಲಿ ಸದಸ್ಯನಾಗಿದ್ದೆ. ಹೀಗಾಗಿ ಕಾನೂನು ಸಚಿವ ಹುದ್ದೆಯು ಅನುಷ್ಠಾನದ ದೃಷ್ಟಿಯಿಂದ ಮಹತ್ವದ ಹುದ್ದೆ ಅಲ್ಲವೆಂಬುದನ್ನು ಚೆನ್ನಾಗಿ ಬಲ್ಲವನಾಗಿದ್ದೆ. ಭಾರತ ಸರಕಾರದ ನೀತಿಗಳನ್ನು ನಿರ್ಧರಿಸುವ ಅವಕಾಶವೂ ಕಾನೂನು ಇಲಾಖೆಗೆ ಎಂದಿಗೂ ಲಭಿಸಿಲ್ಲ, ಲಭಿಸದು. ಈ ಇಲಾಖೆಯೆಂದರೆ ಮುದಿ ವಕೀಲನೊಬ್ಬನ ಮನರಂಜನೆಗಾಗಿ ನೀಡಲಾದ ಒಂದು ಪೊಳ್ಳು ಆಟಿಕೆಯೇ ಸರಿ ಎಂದು ನಾವು ಕಾನೂನು ಇಲಾಖೆಯನ್ನು ಕುರಿತಾದ ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದೆವು. ಹೀಗಾಗಿ ಪ್ರಧಾನಮಂತ್ರಿಯವರು ನನ್ನೆದುರು ಸಚಿವ ಪದದ ಕೊಡುಗೆಯನ್ನು ಇರಿಸಿದಾಗ ನಾನವರಿಗೆ, ‘‘ವೃತ್ತಿಯಿಂದ ನಾನು ವಕೀಲನೇನೋ ಹೌದು. ಆದರೆ ನಾನು ಪಡೆದ ಉಚ್ಚ ಮಟ್ಟದ ಶಿಕ್ಷಣ ಹಾಗೂ ಕಾರ್ಯಕಲಾಪಗಳ ನೇರ ಅನುಭವ ನನಗಿರುವುದರಿಂದ, ಎರಡೆರಡು ಇಲಾಖೆಗಳನ್ನು ನಿಭಾಯಿಸಲು ಸಮರ್ಥನಾಗಿದ್ದೇನೆ. ವೈಸ್‌ರಾಯ್ ಅವರ ಕಾರ್ಯ ಕಾಲದಲ್ಲಿ ನಾನು ಅನುಷ್ಠಾನಕ್ಕೆ ಸಂಬಂಧಪಟ್ಟ ಎರಡು ಇಲಾಖೆಗಳನ್ನು ನಡೆಸುತ್ತಿದ್ದೆ. ಒಂದು ಕಾರ್ಮಿಕ ಇಲಾಖೆ, ಎರಡನೆಯದು ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್. ಹೀಗಾಗಿ ಕಾನೂನು ಇಲಾಖೆಯ ಜೊತೆಗೆ ಅನುಷ್ಠಾ ನಕ್ಕೆ ಸಂಬಂಧಿಸಿದ ಇನ್ನೊಂದು ಇಲಾಖೆಯನ್ನು ನನಗೆ ಕೊಡಿ’’ ಎಂದೆ.

ಪ್ರಧಾನ ಮಂತ್ರಿಗಳು ನನ್ನ ಬೇಡಿಕೆಯನ್ನು ಒಪ್ಪಿಕೊಂಡು, ‘‘ಇಷ್ಟರಲ್ಲೇ ಯೋಜನೆ ಇಲಾಖೆಯನ್ನು ನಿರ್ಮಿಸಲಾಗುವುದು, ಅದನ್ನು ನಿಮಗೆ ಒಪ್ಪಿಸಲಾಗುವುದು’’ ಅಂದರು. ದುರದೃಷ್ಟದಿಂದ ಈ ಇಲಾಖೆಯನ್ನು ಬಹು ತಡವಾಗಿ ನಿರ್ಮಿಸಲಾಯಿತು. ಅಲ್ಲದೆ, ಅದನ್ನು ನನ್ನನ್ನು ಬಿಟ್ಟು ಇನ್ನೊಬ್ಬ ಸಚಿವರಿಗೆ ನೀಡಲಾಯಿತು. ನಾನು ಸಚಿವನಾಗಿರುವ ಕಾಲದಲ್ಲಿ, ಹಲವು ಇಲಾಖೆಗಳನ್ನು ಒಬ್ಬ ಸಚಿವನಿಂದ ಇನ್ನೊಬ್ಬ ಸಚಿವನ ಕೈಗೆ ದಾಟಿಸಲಾಯಿತು. ಆ ದಾಟಿಸುವ ಕ್ರಿಯೆ ನಡೆದಾಗಲೆಲ್ಲಾ ಅವರು ಒಂದು ಹೆಚ್ಚಿನ ಇಲಾಖೆಯನ್ನು ನನ್ನ ಕೈಗೆ ಕೊಡಬಹುದೆಂದು ಅನ್ನಿಸಿತು. ಆದರೆ ಇದೆಲ್ಲ ಗೊಂದಲದಲ್ಲಿ ಅವರು ನನ್ನ ಕೈ ಬಿಟ್ಟಿದ್ದು ನನ್ನ ಗಮನಕ್ಕೆ ಬಂದಿತು.

ಸಾಕಷ್ಟು ಜನ ಸಚಿವರಿಗೆ ಎರಡು ಇಲ್ಲವೇ ಮೂರು ಇಲಾಖೆಗಳನ್ನು ಕೊಡಲಾಗಿದೆ. ಈ ಇಲಾಖೆಗಳ ಕೆಲಸಗಳು ಅವರಿಗೆ ಹೊರೆಯಾಗಿವೆ. ನನ್ನ ಹಾಗೆಯೇ ಇನ್ನು ಕೆಲವು ಸಚಿವರಿಗೆ ಕೈತುಂಬಾ ಕೆಲಸವಿಲ್ಲ. ತಮಗೆ ಕೈತುಂಬ ಕೆಲಸ ದೊರೆಯಲೆಂದು ಹೆಚ್ಚಿನ ಇಲಾಖೆಗಳನ್ನು ಕೊಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಯಾವನೊಬ್ಬ ಸಚಿವನು ವಿದೇಶಗಳಿಗೆ ಹೋದಾಗಲೂ ಅವನ ಇಲಾಖೆಯನ್ನು ಅಷ್ಟು ದಿನಗಳ ಕಾಲದ ಮಟ್ಟಿಗೆ ನನಗೆ ನೀಡಬೇಕೆಂಬ ಸಂಗತಿಯು ಪ್ರಧಾನ ಮಂತ್ರಿಯವರಿಗೆ ಹೊಳೆಯಲಿಲ್ಲ. ಪ್ರಧಾನ ಮಂತ್ರಿಯವರು ಸಚಿವರಿಗೆ ಬೇರೆ ಬೇರೆ ಇಲಾಖೆಗಳನ್ನು ಹಂಚುವಾಗ ಯಾವ ತತ್ವವನ್ನು ಅವಲಂಬಿಸುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಸಚಿವರ ಯೋಗ್ಯತೆಯೇ? ನಂಬಿಕಸ್ಥತನವೇ? ಸ್ನೇಹವೇ? ಇಲ್ಲವೇ ಉದುರಿ ಬೀಳುವ ಹಣ್ಣಿನಂತೆ ತಮಗೆ ಅನುಕೂಲಕರವಾದ ಅಪ್ಪಣೆಯನ್ನು ಪಾಲಿಸುವ ಪ್ರವೃತ್ತಿಯನ್ನು ಗಮನಿಸಿಯೇ ಪ್ರಧಾನಮಂತ್ರಿಗಳು ಅವರಿಗೆ ವಿಶಿಷ್ಟವಾದ ಇಲಾಖೆಗಳನ್ನು ಕೊಡುತ್ತಿದ್ದರೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)