varthabharthi


ನಿಮ್ಮ ಅಂಕಣ

ಸ್ವಚ್ಛ ಕಾರ್ಮಿಕರ ಬದುಕು ಬದಲಿಸುವ ವ್ಯವಸ್ಥೆಯಾಗಲಿ

ವಾರ್ತಾ ಭಾರತಿ : 12 Oct, 2018
-ಯೋಗಿನಿ, ಮಾಲಾಡಿ

ಮಾನ್ಯರೇ,

ದೇಶದಲ್ಲಿ ಅದೆಷ್ಟೋ ಬದಲಾವಣೆಗಳಾದರೂ, ಇನ್ನೂ ಬದಲಾವಣೆಯ ಗಾಳಿಗೆ ಮುಖಮಾಡದ ಅನಿಷ್ಟ ಪದ್ಧತಿ ಎಂದರೆ ಅದು ಮಲ ಹೊರುವ ಪದ್ಧತಿ. ಸುಪ್ರೀಂ ಕೋರ್ಟ್‌ನ ಆದೇಶ ಮೀರಿಯೂ ಮ್ಯಾನ್‌ಹೋಲ್ಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮನುಷ್ಯ ಶ್ರಮದಿಂದಲೇ ಈಗಲೂ ಮುಂದುವರಿಸಲಾಗುತ್ತಿದೆ. ವಿಪರ್ಯಾಸ ಎಂದರೆ, ಈ ಅನಿಷ್ಟ ಪದ್ಧತಿಗೆ ಒಂದೇ ಸಮುದಾಯವನ್ನೇ ಹೊಣೆಯಾಗಿಸಿದ್ದು!.

ಹೊಟ್ಟೆಪಾಡಿಗಾಗಿ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ದಲಿತ ಸಮುದಾಯದ ಪುರುಷ ಮತ್ತು ಮಹಿಳೆಯರೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಶಾಲೆಯ ಮೆಟ್ಟಿಲುಗಳನ್ನೇರದ ಅನಕ್ಷರಸ್ಥ ಯುವಕರೂ ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಬಡಕಾರ್ಮಿಕರು ಮ್ಯಾನ್‌ಹೋಲ್ಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಂತಹ ಸಾವಿನ ಪ್ರಕರಣಗಳನ್ನು ಪ್ರತ್ಯಕ್ಷವಾಗಿ ಕಂಡರೂ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನಹರಿಸುತ್ತಿಲ್ಲ. ಮಲಹೊರುವ ಕಾರ್ಮಿಕರ ಬದುಕು ಅಪಾಯದಲ್ಲಿರುವಾಗ ಪ್ರಧಾನಿಯವರು ‘‘ಸ್ವಚ್ಛತಾ ಹೀ ಸೇವಾ’’ ಎಂಬ ಘೋಷಣೆ ಹೇಳಿ ಯಾರ್ಯಾರಿಗೋ ‘ಸ್ವಚ್ಛ ಭಾರತ’ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಇಂತಹ ಪ್ರಶಸ್ತಿಗಳನ್ನು ನೀಡುವ ಕಾರ್ಯಕ್ರಮಗಳಿಗಿಂತ, ಮಲಹೊರುವ ಕಾರ್ಮಿಕರಿಗೆ ಅದರಿಂದ ಮುಕ್ತಿ ನೀಡಿ ಅವರಿಗೆ ಒಳ್ಳೆಯ ಬದುಕು ನೀಡುವಲ್ಲಿ ನೆರವಾಗಲು ಏಕೆ ಸಾಧ್ಯವಾಗುತ್ತಿಲ್ಲ? ಮಲ ಹೊರುವ ಪದ್ಧತಿ ಅಪರಾಧವೆಂದು ತಿಳಿದಿದ್ದರೂ ಗುತ್ತಿಗೆದಾರರು ಬಲವಂತವಾಗಿ ದಲಿತರನ್ನು ಈ ಕೆಲಸದಲ್ಲಿ ತೊಡಗಿಸುತ್ತಿದ್ದಾರೆ. ಇಂತಹ ಅಪರಾಧಕ್ಕೆ ಕಠಿಣ ಶಿಕ್ಷೆ ಇಲ್ಲವೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)