varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಬೊಗಸೆಯೊಳಗೇ ಆಕಾಶವಾಗುವ

ವಾರ್ತಾ ಭಾರತಿ : 29 Oct, 2018
-ಕಾರುಣ್ಯ

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ದಿನಗಳಲ್ಲಿ, ಎಲ್ಲವೂ ತಕ್ಷಣವೇ ದಕ್ಕಬೇಕು ಎನ್ನುವ ಹಂಬಲಿಕೆ ಜನರಲ್ಲಿ ತೀವ್ರವಾಗಿದೆ. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತಿಳಿದುಕೊಳ್ಳುವ ಹಂಬಲ ತೀವ್ರವಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲೂ ಇದು ವ್ಯಾಪಿಸಿದೆ. ಸುದೀರ್ಘ ಬರಹಗಳಿಗೆ ಓದುಗರು ಕಡಿಮೆಯಾಗುತ್ತಿದ್ದಾರೆ. ಹೇಳಬೇಕಾದುದನ್ನು ಅತ್ಯಂತ ಕಡಿಮೆ ಪದಗಳಲ್ಲಿ ಹೇಳುವವರು ಸಾಹಿತ್ಯಾಸಕ್ತರಿಗೂ ಬೇಕಾಗಿದ್ದಾರೆ. ಇದೇ ಸಂದರ್ಭದಲ್ಲಿ ಬರೆಯುವವರೂ ಇದೇ ತಂತ್ರವನ್ನು ಪ್ರಯೋಗಿಸಿ ಓದುಗರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬರಹಗಳನ್ನು ತಲುಪಿಸುವ ಅತ್ಯುತ್ತಮ ಮಾಧ್ಯಮವಾಗಿ ಬದಲಾವಣೆಯಾದ ಬಳಿಕ ಸಣ್ಣ ಸಣ್ಣ ಬರಹಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರಕುತ್ತಿದೆ. ಯಾಕೆಂದರೆ, ಪುಸ್ತಕವನ್ನು ಬಿಡಿಸಿಟ್ಟು ಗಂಟೆಗಟ್ಟಲೆ ಓದುವಂತೆ, ಸಾಮಾಜಿಕ ತಾಣಗಳಲ್ಲಿ ಓದಲು ಸಾಧ್ಯವಿಲ್ಲ. ಸಾಧ್ಯವಿದ್ದರೂ ಅಂತಹ ಸಹನೆ ಓದುಗರಲ್ಲೂ ಇಲ್ಲ. ಈ ಹಿನ್ನೆಲೆಯಲ್ಲೇ ಇರಬೇಕು, ಕನ್ನಡ ಸಾಹಿತ್ಯದಲ್ಲಿ ನ್ಯಾನೋ ಕತೆಗಳ ಪ್ರಯೋಗ ಹೆಚ್ಚಾಗುತ್ತಿವೆ. ಅತಿ ಸಣ್ಣದರಲ್ಲಿ ದೊಡ್ಜ ಅನುಭವವನ್ನು ಕೊಡುವ ಕತೆಗಳು ಇವು. ಕೆಲವೊಮ್ಮೆ ನಾಲ್ಕೇ ಸಾಲುಗಳು ಇರಬಹುದು. ಆದರೆ ಅದು ಓದುಗರನ್ನು ಓದಿದ ಬಳಿಕವೂ ನಿರಂತರ ಕಾಡುವಂತಿರಬೇಕು. ಅಂತಹ ಬರಹಗಳನ್ನು ಕೆಲವು ಸೃಜನಶೀಲ ಲೇಖಕರು ಪರಿಣಾಮಕಾರಿಯಾಗಿ ಸಾಮಾಜಿಕ ತಾಣಗಳ ಮೂಲಕ ಹಂಚುತ್ತಿದ್ದಾರೆ. ಆಶಾ ರಘು ಅವರ ‘ಬೊಗಸೆಯಲ್ಲಿ ಕಥೆಗಳು’ ಇದೇ ಸ್ವರೂಪದವುಗಳು. ಒಂದು ರೀತಿಯಲ್ಲಿ ಟೈಂಪಾಸ್ ಕತೆಗಳೂ ಹೌದು. ಎಲ್ಲಿ, ಯಾವಾಗ ಬೇಕಾದರೂ ಈ ಪುಸ್ತಕವನ್ನು ಬಿಡಿಸಿ ಒಂದೊಂದನ್ನೇ ತಮ್ಮದಾಗಿಸುತ್ತಾ ಹೋಗಬಹುದು. ಇದೇ ಸಂದರ್ಭದಲ್ಲಿ, ಇದರ ಒಳಧ್ವನಿಯನ್ನು ಗ್ರಹಿಸಿದರೆ, ಅದು ನಮ್ಮಾಳಗೇ ಇನ್ನಷ್ಟು ಬೆಳೆಯುತ್ತಾ ಸುದೀರ್ಘ ಕತೆಯಾಗಬಹುದು. ಆದರೆ ಲೇಖನ ಮತ್ತು ಓದುಗ ಜೊತೆಗೂಡಿ ಈ ಸಣ್ಣ ಕತೆಗಳನ್ನು ಬೆಳೆಸಬೇಕು. ಈ ಕೃತಿಯಲ್ಲಿ ಸುಮಾರು 160 ಕತೆಗಳಿವೆ. ರೂಪಕಗಳಲ್ಲಿ, ಒಗಟುಗಳಲ್ಲಿ, ಕೆಲವೊಮ್ಮೆ ಸಣ್ಣ ಪುಟ್ಟ ತಮಾಷೆಗಳಲ್ಲಿ ಈ ಕತೆಯ ಆತ್ಮ ಬಚ್ಚಿಟ್ಟುಕೊಂಡಿವೆ. ಕೆಲವು ಕತೆಗಳು ಝೆನ್ ಅನುಭವವನ್ನು ನೀಡಿದರೆ, ಹಲು ಕಾವ್ಯದ ಲಯಗಳನ್ನು ಹೊಂದಿವೆ.
ಅವ್ಯಕ್ತ ಎನ್ನುವ ಕತೆಯನ್ನೇ ತೆಗೆದುಕೊಳ್ಳೋಣ. ‘‘ಯುವಕರ ಗುಂಪೊಂದು ಸಮುದ್ರದ ತೀರದಲ್ಲಿ ಕುಳಿತಿದ್ದ ಅವನನ್ನು ವಿಚಾರಿಸಿಕೊಂಡು ಹೋದ ಮೇಲೆ, ವಯಸ್ಕನೊಬ್ಬ ಸಮೀಪಿಸಿ ಕೂತ. ‘ಅವರು ಹುಡುಕುತ್ತಿದ್ದುದು ತಂದೆಯ ಹೆಣವನ್ನೋ? ತಂದೆಯನ್ನೋ?’ ಎಂದು ಕೇಳಿದ ಆತ, ಉತ್ತರ ಮೊದಲನೆಯದೆಂದು ಬಾಯಿಯಿಂದ ಹೊರ ಬರುತ್ತಿದ್ದಂತೆ ಮುಖ ಕಪ್ಪಿಟ್ಟು, ಅವ್ಯಕ್ತ ವೇದನೆಯೊಂದಿಗೆ ದುಡುದುಡನೆದ್ದು ನಡೆದು ಬಿಟ್ಟ’. ಇಲ್ಲಿಗೆ ಒಂದು ಕತೆ ಮುಗಿಯುತ್ತದೆ. ಆದರೆ ಅದು ತೆರೆದಿಡುವ ವಾಸ್ತವ, ವಿಷಾದ ಮಾತ್ರ ಬೆಳೆಯುತ್ತದೆ. ಇಂತಹ ವಿಷಾದಭರಿತ ಹಲವು ಕತೆಗಳಿವೆ. ಹಾಗೆಯೇ, ಆಧ್ಯಾತ್ಮ, ಮಹಿಳಾ ಅಸ್ಮಿತೆಗಳನ್ನಿಟ್ಟು ಬರೆದ ಸಾಲುಗಳೂ ಇವೆ. ಇಲ್ಲಿ ಹೆಚ್ಚಿನವುಗಳು ಏನು ಎನ್ನುವುದು ಅರ್ಥವಾಗುವುದರೊಳಗೆ ಮನದೊಳಗೆ ನುಗ್ಗಿ ಆವರಿಸಿಕೊಳ್ಳುತ್ತವೆ. ಇದುವೇ ಇಲ್ಲಿರುವ ಹೆಚ್ಚಿನ ಕತೆಗಳ ಹೆಚ್ಚುಗಾರಿಕೆ.
ಸಾಹಿತ್ಯ ಲೋಕ ಪಬ್ಲಿಕೇಶನ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 196. ಬೆಲೆ 195. ಆಸಕ್ತರು 99459 39436 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)