varthabharthi


ಬುಡಬುಡಿಕೆ

ಮಂತ್ರ ಬೀಜಗಳನ್ನು ಬಿತ್ತಿ ಬೆಳೆ....!

ವಾರ್ತಾ ಭಾರತಿ : 25 Nov, 2018
ಚೇಳಯ್ಯ chelayya@gmail.com

ಎಣ್ಣೆ ಹಾಕಿ ಒಂದಿಷ್ಟು ಕಾಲ ಒತ್ತಡ ಮರೆಯೋಣ ಎಂದು ಗೋವಾ ರಾಜ್ಯಕ್ಕೆ ಹೋದ ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿ ಕಾದಿತ್ತು. ಎಲ್ಲ ಗದ್ದೆಗಳು ಹಸಿರಿನಿಂದ ತುಂಬಿ ತುಳುಕುತ್ತಿತ್ತು. ಭಾರೀ ಪ್ರಮಾಣದಲ್ಲಿ ಭತ್ತದ ತೆನೆಗಳು ಕಣ್ಣಿಗೆ ರಾಚುತ್ತಿದ್ದವು. ದಾರಿ ಹೋಕನಲ್ಲಿ ಕಾಸಿ ಅಚ್ಚರಿಯಿಂದ ಕೇಳಿದ ‘‘ಸ್ವಾಮಿ, ನೀವು ಯಾವ ಗೊಬ್ಬರ ಬಳಸುತ್ತೀರಿ....’’
‘‘ವೇದಮಂತ್ರ....’’ ರೈತ ಹೇಳಿದ.
‘‘ಅದ್ಯಾವ ಹೊಸ ಕಂಪೆನಿ....’’ ಕಾಸಿ ಗೊಂದಲದಿಂದ ಕೇಳಿದ.
‘‘ನೋಡ್ರೀ ಅದು ಗೊಬ್ಬರ ಅಲ್ಲ. ನಿಜಕ್ಕೂ ವೇದ ಮಂತ್ರವೇ. ಸರಕಾರದ ಆದೇಶದ ಅನುಗುಣವಾಗಿ ವೇದಮಂತ್ರ ಪಠಿಸಿ ಬೀಜಗಳನ್ನು ಬಿತ್ತಿದೆವು. ಮಳೆ ಇಲ್ಲ. ಗೊಬ್ಬರ ಇಲ್ಲ. ಉಳುವ ಅಗತ್ಯ ಇಲ್ಲ. ನೋಡಿ....ಯಥೇಚ್ಛ ಫಸಲು ಬಂದಿದೆ...ಮೋದಿಯವರ ಎರಡನೇ ಹಸಿರು ಕ್ರಾಂತಿಯ ಫಲ ಇದು. ಭಾರತೀಯ ವೇದಮಂತ್ರಗಳು ಪುರಾತನ ಕಾಲದಲ್ಲಿ ಹೇಗೆ ಕೃಷಿಕರಿಗೆ ಉಪಕಾರವಾಗುತ್ತಿತ್ತು ಎನ್ನುವುದನ್ನು ಇವು ಹೇಳುತ್ತವೆೆ. ಇದೀಗ ರಾಜ್ಯದಲ್ಲಿ ಎಲ್ಲ ರೈತರಿಗೆ ಕಡ್ಡಾಯವಾಗಿ ಕೃಷಿ ಇಲಾಖೆಗಳಲ್ಲಿ ವೇದ ಮಂತ್ರ ಪಠಣ ತರಬೇತಿಯನ್ನು ನೀಡುತ್ತಿದೆ. ಕೃಷಿ ಆರಂಭಕ್ಕೆ ಮುನ್ನ ಇಪ್ಪತ್ತು ದಿನ ಗದ್ದೆಯಲ್ಲಿ ಕೂತು ವೇದ ಪಠಣ ಮಾಡಿ ಬಳಿಕ ಬೀಜಗಳನ್ನು ಬಿತ್ತಿದರೆ ಸಾಕು....ದುಪ್ಪಟ್ಟು ಫಲ ಸಿಗುತ್ತದೆ...’’ ಎಂದು ಅದ್ಯಾವುದೋ ಮಂತ್ರವನ್ನು ಗುನುಗುತ್ತಾ ಅಲ್ಲಿಂದ ಹೊರಟ.
  ಕಾಸಿಗೆ ರೋಮಾಂಚನವಾಯಿತು. ನೇರವಾಗಿ ಗೋವಾದ ಕೃಷಿ ಸಚಿವರನ್ನು ಸಂದರ್ಶನ ಮಾಡಿ ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಒತ್ತಾಯಿಸುವುದು ಎಂದು ತೀರ್ಮಾನಿಸಿದವನೇ, ಕೃಷಿ ಸಚಿವಾಲಯಕ್ಕೆ ಧಾವಿಸಿದ.
ಅಲ್ಲಿ ನೋಡಿದರೆ ವೇದ ಮಂತ್ರ ಪಠಣ ಮುಗಿಲು ಮುಟಿತ್ತು. ‘‘ನೋಡಿ, ಒಳಗೆ ವೈದಿಕರಿಂದ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಆದುದರಿಂದ ನಾವು ತುಸು ದೂರ ಹೋಗಿ ಮಾತನಾಡುವ’’ ಎಂದು ಕೃಷಿ ಸಚಿವರು ಕಾಸಿಯನ್ನು ತನ್ನ್ನ ಖಾಸಗಿ ಕೊಠಡಿಗೆ ಕರೆದುಕೊಂಡು ಹೋದರು.
ಸಚಿವರು ಆಸೀನರಾದದ್ದೇ ಕಾಸಿ ಪ್ರಶ್ನೆಗಳನ್ನು ಕೇಳ ತೊಡಗಿದ ‘‘ವೇದ ಪಠಣದಿಂದ ಕೃಷಿ ಬೆಳೆಯಲ್ಲಿ ಹೆಚ್ಚಳ ಆಗುವುದು ನಿಜವೇ?’’
‘‘ನೋಡ್ರೀ...ಮಂತ್ರ ಬೀಜಗಳು ಎಂದು ಕರೆಯುವುದು ಯಾಕೆ? ಬೀಜಗಳೆಂದ ಮೇಲೆ ಅದು ಫಲಕೊಡಲೇ ಬೇಕು...ಆದುದರಿಂದ ಬಿತ್ತನೆ ಬೀಜ ಬಿತ್ತುವ ಮೊದಲು ಮಂತ್ರ ಬೀಜಗಳನ್ನು ಬಿತ್ತಬೇಕು. ಈ ಮೂಲಕ ರಾಜ್ಯದಲ್ಲಿ ಗೊಬ್ಬರದ ಬದಲಿಗೆ ಮಂತ್ರಗಳನ್ನು ಯಶಸ್ವಿಯಾಗಿ ಬಳಸಲಿದ್ದೇವೆ....’’
‘‘ಸಾರ್...ರೈತರಿಗೂ ವೇದ ಪಠಣಕ್ಕೂ ಎತ್ತಣಿಂದೆತ್ತ ಸಂಬಂಧ....ಅವರಿಗೆ ಅಕ್ಷರವೇ ಸರಿಯಾಗಿ ಬರಲ್ಲ....’’ ಕಾಸಿ ಅನುಮಾನ ವ್ಯಕ್ತಪಡಿಸಿದ.
‘‘ಇದಕ್ಕಾಗಿ ಸರಕಾರ ಎಲ್ಲ ಕೃಷಿ ಇಲಾಖೆಗಳ ವೇದ ಪಠಣ ಅಧಿಕಾರಿಗಳನ್ನು ನೇಮಿಸಲು ಯೋಜನೆ ರೂಪಿಸಿದೆ. ರಾಜ್ಯಾದ್ಯಂತ ಇದರಿಂದ ವೇದ ಕಲಿತ ಸಾವಿರಾರು ವೈದಿಕರಿಗೆ ಕೃಷಿ ಇಲಾಖೆಯಲ್ಲಿ ಕೆಲಸ ಸಿಗಲಿದೆ. ಮುಂಗಾರು ಆರಂಭವಾಗುವ ಸಂದರ್ಭದಲ್ಲಿ ಇಲಾಖೆಯಿಂದ ಎಲ್ಲ ರೈತರು ಕಡ್ಡಾಯವಾಗಿ ಈ ವೇದ ಪಠಣ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ರೈತರಿಗೆ ವಿಶೇಷವಾದ ವೇದ ಪಠಣ ಗೊಬ್ಬರ ತೆರಿಗೆಯನ್ನು ವಿಧಿಸಲಾಗುತ್ತದೆ....ಜೊತೆಗೆ ವೇದ ಪಠಣದ ಮೂಲಕ ಬೆಳೆ ಬೆಳೆಯುವುದರಿಂದ ರೈತರಿಗೆ ಗೊಬ್ಬರವನ್ನು ಒದಗಿಸುವ ಅಗತ್ಯವಿರುವುದಿಲ್ಲ. ಕೃಷಿ ವೆಚ್ಚವೂ ರೈತರಿಗೆ ಕಡಿಮೆಯಾಗುತ್ತದೆ....ಮಂತ್ರ ಬೀಜಗಳ ಮೇಲಿನ ಕಾಪಿರೈಟ್ ವೈದಿಕರ ಕೈಯಲ್ಲಿರುವುದರಿಂದ ಕೃಷಿ ಸಚಿವಾಲಯದಿಂದ ವೈದಿಕರಿಗೆ ಅದರ ಹಣ ಪಾವತಿ ಮಾಡುತ್ತದೆ’’ ಸಚಿವರು ತಮ್ಮ ಕೃಷಿ ಯೋಜನೆಗಳನ್ನು ವಿವರಿಸಿದರು.
‘‘ಸಾರ್...ವೇದ ಪಠಣದ ಮೂಲಕ ಇನ್ನೇನೇನು ಯೋಜನೆ ಇವೆ?’’ ಕಾಸಿ ಉತ್ಸಾಹದಿಂದ ಕೇಳಿದ.
 ‘‘ಯಾವ ಯಾವ ಬೆಳೆಗೆ ಯಾವ ಯಾವ ಮಂತ್ರ ಪಠಣ ಹೊಂದಿಕೆಯಾಗುತ್ತದೆ, ಯಾವ ಕೃಷಿಗೆ ಯಾವ ಮಂತ್ರ ಇಷ್ಟ ಎನ್ನುವುದನ್ನು ಸಂಶೋಧನೆ ಮಾಡಲು ಕೃಷಿ ವಿಜ್ಞಾನಿಗಳಿಗೆ ನೂರು ಕೋಟಿ ರೂಪಾಯಿಯನ್ನು ಅನುದಾನವಾಗಿ ನೀಡಿದ್ದೇವೆ. ಕೃಷಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ವೇದಮಂತ್ರಗಳನ್ನು ಕಲಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ನೂರಾರು ವೇದ ಪಠಣ ಗೊತ್ತಿರುವ ಪ್ರೊಫೆಸರ್‌ಗಳನ್ನು ನಾವು ಆಹ್ವಾನಿಸಿದ್ದೇವೆ....’’
‘‘ಮಂತ್ರದಿಂದ ಕೃಷಿಗೆ ಬೇರೆ ಪ್ರಯೋಜನಗಳು...’’ ಕಾಸಿ ಕೇಳಿದ.
‘‘ನೋಡಿ...ಕೃಷಿಕರ ಪಂಪ್‌ಸೆಟ್‌ಗಳಿಗೆ ಡೀಸೆಲ್, ವಿದ್ಯುತ್‌ಗಳನ್ನು ಸಬ್ಸಿಡಿಯಾಗಿ ನೀಡುತ್ತಿದ್ದೇವೆ. ಸಾಧಾರಣವಾಗಿ ಒಂದು ಗಂಟೆ ವೇದಪಠಣ ಮಾಡಿದರೆ ಅದರಲ್ಲಿ ಸಣ್ಣದಾಗಿ ವಿದ್ಯುತ್ ಎನರ್ಜಿ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಈಗಾಗಲೇ ನಮ್ಮ ವೈದಿಕ ವಿಜ್ಞಾನಿಗಳು ಕಂಡು ಹುಡುಕಿದ್ದಾರೆ. ರೈತರೆಲ್ಲ ಡೀಸೆಲ್, ವಿದ್ಯುತ್ ಬಳಸದೆ ವೇದ ಪಠಣಗಳ ಮೂಲಕವೇ ತಮ್ಮ ತಮ್ಮ ಪಂಪ್‌ಸೆಟ್‌ಗಳನ್ನು ಬಳಕೆ ಮಾಡಬೇಕು. ಇದರಿಂದ ಸರಕಾರಕ್ಕೆ ಸಾಕಷ್ಟು ವಿದ್ಯುತ್ ಉಳಿತಾಯವಾದಂತಾಗುತ್ತದೆ...’’
‘‘ಸಾರ್...ರೈತರ ಸಾಲಮನ್ನಾ....’’ ಕಾಸಿ ಇನ್ನೇನೋ ಕೇಳಲು ಹೋದ.

‘‘ಒಳ್ಳೆಯ ಪ್ರಶ್ನೆ. ವೈದಿಕರೆಲ್ಲ ಕೃಷಿಯ ಭಾಗವಾಗಿರುವುದರಿಂದ ಅವರು ವೇದಪಠಣಕ್ಕಾಗಿ ಮಾಡಿರುವ ಸಾಲಗಳನ್ನೆಲ್ಲ ಮನ್ನಾ ಮಾಡಲಾಗುತ್ತದೆ. ಹಾಗೆಯೇ, ಅವರಲ್ಲಿರುವ ಮಂತ್ರಬೀಜಗಳನ್ನು ಅಭಿವೃದ್ಧಿ ಪಡಿಸಲು ಅವರಿಗೆ ಅನುದಾನಗಳನ್ನು ನೀಡುವ ಯೋಜನೆಯೂ ಇದೆ. ಈ ಮೂಲಕ ನಮ್ಮ ಸರಕಾರ ಕೃಷಿಕ ಪರ, ರೈತರ ಪರ ಸರಕಾರ ಎನ್ನುವುದನ್ನು ನಾವು ಸಾಬೀತು ಪಡಿಸುತ್ತಿದ್ದೇವೆ’’. ‘‘ಸಾರ್....ಈ ವೇದಪಠಣದಲ್ಲಿ ಬೆಳೆದ ಅಕ್ಕಿಯಿಂದ ಅನ್ನ ಮಾಡಿ ಉಣ್ಣುವುದಕ್ಕೆ ಆಗುತ್ತದೆಯೋ....’’ ಕಾಸಿ ಅನುಮಾನದಿಂದ ಕೇಳಿದ.
‘‘ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿದೆ ಎಂಬ ಆರೋಪಗಳಿವೆ. ವೇದ ಪಠಣಗಳ ಮೂಲಕವೇ ಗ್ಯಾಸ್‌ನ್ನು ಉರಿಸುವ ಕುರಿತಂತೆ ಚಿಂತನೆಗಳು ನಡೆದಿವೆ. ವೇದಪಠಣಗಳಿಂದ ಬೆಳೆದ ಅಕ್ಕಿಯನ್ನು ನಾವು ಮಾಮೂಲಿ ಗ್ಯಾಸ್ ಸಿಲಿಂಡರ್‌ಗಳಿಂದ ಬೇಯಿಸಲು ಆಗುವುದಿಲ್ಲ. ವೇದಪಠಣಗಳಿಂದ ಬೆಳಗಿದ ಸ್ಟೌನಲ್ಲೇ ಬೇಯಿಸಬೇಕಾಗುತ್ತದೆ. ಅಲ್ಲಿಯವರೆಗೆ ರೈತರು ಮಂತ್ರ ಪಠಣದಿಂದ ಕೃಷಿಯನ್ನು ಮಾಡಲಿ. ಅಡುಗೆಗೆ ಮಾತ್ರ ಅಂಗಡಿಯಿಂದ ಅಕ್ಕಿಯನ್ನು ತಂದರೆ ಸಾಕು....ಅಚ್ಛೇ ದಿನ್ ಆನೇ ವಾಲಾ ಹೇ....’’
ಎಂದು ಸಚಿವರು ಸಂದರ್ಶನ ಮುಗಿಸಿದರು. ಗೋವಾಕ್ಕೆ ಬಂದು ಎಣ್ಣೆ ಕುಡಿಯದೆಯೇ ಕಾಸಿಗೆ ತೂರಾಡುವಂತಾಯಿತು. ತೂರಾಡುತ್ತಲೇ ಆತ ಕರ್ನಾಟಕವನ್ನು ತಲುಪಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)