varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಕೊರಗರ ಕೊರಗು!

ವಾರ್ತಾ ಭಾರತಿ : 5 Dec, 2018
ದು.ಸರಸ್ವತಿ

ದು.ಸರಸ್ವತಿ

ಪೌರಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಾ ಬಂದಿರುವ ದು.ಸರಸ್ವತಿ ಅವರು ಹೋರಾಟಕ್ಕಾಗಿಯೇ ತಮ್ಮ ಕಾವ್ಯ, ಬರಹ, ನಾಟಕಗಳನ್ನು ದುಡಿಸಿಕೊಂಡು ಬರುತ್ತಿರುವವರು. ಹೆಣೆದರೆ ಜೇಡನಂತೆ, ಜೀವಸಂಪಿಗೆ ಇವರ ಕಾವ್ಯಸಂಕಲನ. ಈಗೇನ್ಮಾಡೀರಿ ಅನುಭವ ಕಥನ. ಮಹಿಳೆಯ ಹಕ್ಕುಗಳಿಗಾಗಿಯೂ ಸರಸ್ವತಿ ಧ್ವನಿಯೆತ್ತುತ್ತಾ ಬಂದವರು. ಒಂದು ರೀತಿಯಲ್ಲಿ ತಳಸ್ತರದ ಜನರ ಬದುಕಿನ ಹಕ್ಕಿಗಾಗಿ ಬಹುರೂಪಿಯಾಗಿ ಕೆಲಸ ಮಾಡುತ್ತಿರುವವರು.

ಮಂಗಳೂರಿನ ಕಿನ್ನಿಗೋಳಿಯಲ್ಲಿ ನವೆಂಬರ್ 6, 2011ರಂದು ರಾತ್ರಿ 9 ಗಂಟೆ ಹೊತ್ತಿಗೆ 45 ವರ್ಷ ವಯಸ್ಸಿನ ಕಿಟ್ಟ ಕೊರಗ ಅವರು ಮಲದ ಗುಂಡಿಯನ್ನು ಸ್ವಚ್ಛ ಮಾಡುವಾಗ ಗುಂಡಿಯೊಳಗೆ ಬಿದ್ದು ತೀರಿಕೊಂಡರು. ಜೊತೆಯಲ್ಲಿದ್ದವರು ಕೂಡಲೇ ಮೇಲೆತ್ತುವ ಪ್ರಯತ್ನ ಮಾಡಿದರೂ ಆಗಲಿಲ್ಲ. ದೇಹವನ್ನು ಮೇಲೆತ್ತಲು ಅಗ್ನಿಶಾಮಕ ದಳದವರು ಪ್ರಯತ್ನ ಮಾಡಿದರೂ ಸಾಧ್ಯವಾಗದೆ ಬೆಳಗಿನ ಜಾವದವರೆಗೂ ಹೆಣ ಕಕ್ಕಸು ಗುಂಡಿಯಲ್ಲೇ ಇತ್ತು. ಬೆಳಗಿನ ಜಾವ 5ರ ಹೊತ್ತಿಗೆ ಜೆಟ್ಟಿಂಗ್ ಮೆಷಿನ್ ತರಿಸಲಾಯಿತು. ಅದಕ್ಕೆ ಬೇಕಾಗುವಷ್ಟು ಡೀಸೆಲ್ ಇಲ್ಲದಿದ್ದರಿಂದ ಯಂತ್ರ ಕೆಲಸ ಮಾಡಲಿಲ್ಲ. ಪೊಲೀಸರಾಗಲಿ, ಅಗ್ನಿಶಾಮಕ ದಳದವರಾಗಲಿ ಏನೂ ಮಾಡಲಿಲ್ಲ. ಬದಲಿಗೆ ಹೆಣವನ್ನು ಮೇಲೆತ್ತಲು ಕೊರಗ ಸಮುದಾಯದ ಮತ್ತೊಬ್ಬ ಸದಸ್ಯ ಸುರೇಶನನ್ನು ಹಗ್ಗಕಟ್ಟಿ ಬಿಟ್ಟರು. ಮಲದ ಗುಂಡಿಯಲ್ಲಿನ ವಿಷಾನಿಲದಿಂದ ಉಸಿರು ಕಟ್ಟಿದಂತಾಗಿ ಆತ ಮೇಲೆ ಬಂದ. ಮತ್ತೆ ಎರಡನೇ ಬಾರಿ ಮಲದ ಗುಂಡಿಯಲ್ಲಿ ಮುಳುಗಿದಾಗ ಕಿಟ್ಟ ಅವರ ಕಾಲು ಕೈಗೆ ಸಿಕ್ಕಿತು. ಕಾಲಿಗೆ ಹಗ್ಗ ಕಟ್ಟಿ ಹೆಣವನ್ನು ಮೇಲೆ ಎತ್ತಲಾಯಿತು. ಅಷ್ಟೊತ್ತಿಗಾಗಲೇ 6 ಗಂಟೆಯಾಗಿತ್ತು. ಒಂಬತ್ತು ಗಂಟೆಗಳ ಕಾಲ ಕಿಟ್ಟ ಅವರ ಹೆಣ ಮಲದ ಗುಂಡಿಯಲ್ಲಿ ಮುಳುಗಿತ್ತು. ಹೆಂಡತಿ, ಎರಡು ಹೆಣ್ಣು ಮಕ್ಕಳಿರುವ ಕಿಟ್ಟ ಗಾರೆ ಕೆಲಸ ಮಾಡಿ ದಿನಕ್ಕೆ ರೂ.250 ಸಂಪಾದಿಸುತ್ತಿದ್ದರು. ಸಂಸಾರವನ್ನು ತೂಗಿಸಲು ಹೆಂಡತಿ ಬೀಡಿ ಕಟ್ಟಿ ಸಂಪಾದನೆ ಮಾಡುತ್ತಿದ್ದರು. ಗಾರೆ ಕೆಲಸ ಸಿಗದಿದ್ದಾಗ ಕಿಟ್ಟ ಅವರು ಕಕ್ಕಸು ಗುಂಡಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದರು. ಅಂದೂ ಸಹ ಅವರು ತಮ್ಮದೇ ಸಮುದಾಯದ ಇನ್ನೂ ನಾಲ್ವರೊಂದಿಗೆ ಕಿನ್ನಿಗೋಳಿಯ ಹೋಟೆಲೊಂದರ ಕಕ್ಕಸು ಗುಂಡಿಯನ್ನು ಸ್ವಚ್ಛ ಮಾಡಲು ಹೋಗಿದ್ದರು. ಹೋಟೆಲ್ ಮಾಲಕ ಮಧ್ಯಾಹ್ನವೇ ಕರೆಸಿ ಕಕ್ಕಸು ಗುಂಡಿ 6 ಅಡಿ ಇರುವುದಾಗಿಯೂ, ಸ್ವಚ್ಛ ಮಾಡಲು 6000ರೂ. ಕೊಡುವುದಾಗಿ ಹೇಳಿ ನಂತರ ಚೌಕಾಸಿ ಮಾಡಿ 5500 ರೂ.ಗೆ ಒಪ್ಪಿಸಿ ರಾತ್ರಿ ಬರಲು ಹೇಳಿದ್ದ. ರಾತ್ರಿ 7:30ಕ್ಕೆ ಬಂದವರು, 8:30ರ ಹೊತ್ತಿಗೆ ಕೆಲಸ ಆರಂಭಿಸಿದರು. ಅದು 6 ಅಡಿಯಲ್ಲ 20 ಅಡಿಯ ಗುಂಡಿಯಾಗಿತ್ತು. ಮೇಲೆ ನಿಂತ ಹೊಲಸು ನೀರನ್ನು ತೆಗೆದ ಮೇಲೆ 9 ಗಂಟೆ ಹೊತ್ತಿಗೆ ಬಕೆಟ್ ಮತ್ತು ಟಿನ್ ಡಬ್ಬದಲ್ಲಿ ಮಲವನ್ನು ತೆಗೆಯತೊಡಗಿದರು. ಆ ಸಂದರ್ಭದಲ್ಲಿ ಮೇಲಿನಿಂದ ಬಗ್ಗಿ ನೋಡುತ್ತಿದ್ದ ಕಿಟ್ಟ ಅವರು ಮಲದ ಗುಂಡಿಯಲ್ಲಿನ ವಿಷಾನಿಲದಿಂದಾಗಿ ಉಸಿರುಗಟ್ಟಿ ಗುಂಡಿಗೆ ಬಿದ್ದರು. ಪೊಲೀಸರು ಬಂದು ತಪಾಸಣೆ ನಡೆಸಿ ಅಲ್ಲಿದ್ದುದು ಮಬ್ಬಾದ ವಿದ್ಯುತ್ ದೀಪ ಹಾಗಾಗಿ ಕತ್ತಲೆಯಲ್ಲಿ ಕಾಣದೆ ಜಾರಿ ಬಿದ್ದಿದ್ದಾರೆ, ಹೋಟೆಲ್ ಮಾಲಕರು ಸೂಕ್ತ ಲೈಟ್ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ, ಸಾವು ಆಕಸ್ಮಿಕ ಎಂದು ದೂರು ದಾಖಲಿಸಿದರು. ಕೊರಗ ಸಮುದಾಯದವರು ಒತ್ತಡ ಹೇರಿದ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಮತ್ತು ಪ.ಜಾ./ಪ.ಪಂ. ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲಾಯಿತು. ಸರಕಾರದ ವತಿಯಿಂದ 2 ಲಕ್ಷ ರೂ. ಪರಿಹಾರ ದೊರೆಯಿತು. ಮಂಗಳೂರಿನಲ್ಲಿ ಮಲದ ಗುಂಡಿಗೆ ಇಳಿದು ಮಲವನ್ನು ಕೈಯಲ್ಲಿ ಬಾಚುವ ಕೆಲಸವನ್ನು ಕೊರಗರು ಕಾಲದಿಂದಲೂ ಮಾಡುತ್ತಲೇ ಬಂದಿದ್ದಾರೆ. ಪ್ರಾಚೀನ ಬುಡಕಟ್ಟಿಗೆ ಸೇರಿದ ಕೊರಗರಿಗೆ ವಿವಿಧ ರೀತಿಯ ಬುಟ್ಟಿಗಳನ್ನು ಹೆಣೆಯುವುದು ಮುಖ್ಯ ಕಸುಬಾಗಿತ್ತು. ಕಾಡಿನಿಂದ ಎಲಿಬೂರು, ಇಲ್ಲಬೂರು, ಮದಿರಬೂರು, ಪಂದಿಲಬೂರು ಎಂಬ ವಿವಿಧ ರೀತಿಯ ಬೇರು, ಬಿಳಲು, ಬಿದಿರುಗಳನ್ನು ಸಂಗ್ರಹಿಸಿ ತಂದು ಬುಟ್ಟಿಗಳನ್ನು ಹೆಣೆಯುತ್ತಿದ್ದರು. ಬೇಸಾಯದ ಬದುಕಿಗೆ ಅಗತ್ಯವಾಗಿ ಬೇಕಾಗಿದ್ದ ಧಾನ್ಯ ಸ್ವಚ್ಛಮಾಡುವ ಗೆರಸಿ/ತಡಪೆ, ಅನ್ನದ ಗಂಜಿ ಬಸಿಯುವ ಸಿಬ್ಲ, ಕುಡಾಯಿ, ಕುರ್ವೆ, ಹೆಡಿಗೆಯಂತಹ ವಿವಿಧ ಆಕಾರದ ಬುಟ್ಟಿಗಳನ್ನು ತಯಾರಿಸಿ ತಾವಿದ್ದ ಪ್ರದೇಶದ ಧಣಿಗಳಿಗೆ ಹಾಗೂ ಇತರೆ ರೈತರಿಗೆ ನೀಡಿ ಸಂಪಾದನೆ ಮಾಡುತ್ತಿದ್ದರು. ಮಕ್ಕಳ ತೊಟ್ಟಿಲುಗಳನ್ನೂ ಹೆಣೆಯುತ್ತಿದ್ದರು. ಮೀನು, ಆಮೆಗಳನ್ನಲ್ಲದೆ ಮೊಲ ಇತ್ಯಾದಿ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿಯುತ್ತಿದ್ದರು. ದನ ಮತ್ತು ಮೇಕೆಯ ಚರ್ಮ ಬಳಸಿ ವಿವಿಧ ರೀತಿಯ ಡೋಲು ಮತ್ತು ಚಂಡೆ, ತಾಳವನ್ನು, ಬಿದಿರಿನಲ್ಲಿ ಕೊಳಲನ್ನು ತಯಾರಿಸಿ ಬಾರಿಸುವುದು ಅವರಿಗೆ ರಕ್ತವಾಗಿ ಬಂದ ವಿದ್ಯೆ. ಅಲ್ಲದೆ ಹಲವಾರು ಔಷಧೀಯ ಸಸ್ಯಗಳನ್ನು ಗುರುತಿಸುವ ಮತ್ತು ಬಳಸುವ ಜ್ಞಾನವೂ ಅವರಿಗೆ ತಿಳಿದಿತ್ತು. ಮುಂದೆ ನಗರ ಬೆಳೆದಂತೆ ಜಮೀನ್ದಾರರು ಮುನಿಸಿಪಾಲಿಟಿಗಳ ಚುನಾಯಿತ ಪ್ರತಿನಿಧಿಗಳಾಗಿ ಪಟ್ಟಣಕ್ಕೆ ಬಂದಾಗ ಕೊರಗರನ್ನು ಕರೆತಂದರು. ಅವರಿಗೆ ಗೊತ್ತಿದ್ದ ಜ್ಞಾನವನ್ನು ಗುಡಿಸಿ ಹಾಕಿ ಮುನಿಸಿಪಾಲಿಟಿಯ ಕಸ ಮತ್ತು ಮಲ ಬಾಚುವ ಕೆಲಸಕ್ಕೆ ತಗುಲಿಸಿದರು. ಮನೆಗಳು, ಆಸ್ಪತ್ರೆಗಳು, ಕಾರ್ಖಾನೆಗಳು ಹಾಗೂ ಇತರ ಸ್ಥಳಗಳಲ್ಲಿನ ಶೌಚ ಮತ್ತು ಇತರೆ ತ್ಯಾಜ್ಯಗಳನ್ನು ಒಳಚರಂಡಿಯ ಮೂಲಕ ತೆರವು ಮಾಡಲಾಗುತ್ತದೆ. ನಗರದ ಹೊರವಲಯದವರೆಗೂ ತ್ಯಾಜ್ಯವನ್ನು ಒಯ್ಯುವ ಮಾರ್ಗವಾಗಿರುವ ಒಳಚರಂಡಿಗಳು ಅತಿ ಉದ್ದವಾಗಿದ್ದು ಕಟ್ಟಿಕೊಂಡಾಗ ತೆರವುಗೊಳಿಸಲು ಇಂತಿಷ್ಟು ಅಳತೆಯ ದೂರಕ್ಕೆ ಒಂದರಂತೆ ಮನುಷ್ಯರು ಇಳಿಯುವಷ್ಟು ಅಗಲದ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿರುತ್ತದೆ. ಮ್ಯಾನ್‌ಹೋಲ್ ಮೂಲಕ ಒಳಗೆ ಇಳಿದು ಕಟ್ಟಿಕೊಂಡಿರುವ ಕಸವನ್ನು ತೆರವು ಮಾಡುವ ಕೆಲಸವನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ. ಎಲ್ಲ ಕಡೆಯಲ್ಲಿಯೂ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸೆಪ್ಟಿಕ್ ಟ್ಯಾಂಕುಗಳೆಂದು ಕರೆಯುವ ಮಲ ಗುಂಡಿಗಳ ವ್ಯವಸ್ಥೆಯನ್ನು ಜನರು ಮಾಡಿಕೊಂಡಿದ್ದಾರೆ. ಈ ಗುಂಡಿಗಳು ತುಂಬಿದ ನಂತರ ತೆರವುಗೊಳಿಸುವ ಕೆಲಸವನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಒಟ್ಟು 12 ಲಕ್ಷ ಸಫಾಯಿ ಕರ್ಮಚಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಇವರಲ್ಲಿ ಶೇ.95ರಷ್ಟು ಪರಿಶಿಷ್ಟ ಜಾತಿಯವರಾಗಿದ್ದಾರೆ.

13 ಲಕ್ಷ ಮಲಬಾಚುವ ದಲಿತರಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು (ಇಂಟರ್ ನ್ಯಾಷನಲ್ ದಲಿತ್ ಸಾಲಿಡಾರಿಟಿ ನೆಟ್‌ವರ್ಕ್‌ನವರು ಪ್ರಕಟಿಸಿರುವ ಅಂಕಿ-ಅಂಶ)

ಅಡುಗೆ ಕೋಣೆ, ರಸ್ತೆ-ಸೇತುವೆ ನಿರ್ಮಾಣದಿಂದ ಹಿಡಿದು ಅಂತರಿಕ್ಷದವರೆಗೂ ಏನೆಲ್ಲಾ ಯಂತ್ರಗಳ ಆವಿಷ್ಕಾರಗಳಾದರೂ, ಅಪಾಯಕಾರಿ ಮಲಬಾಚುವ ಕೆಲಸಕ್ಕೆ ಯಂತ್ರಗಳು ಬರಲಿಲ್ಲ. ಇಂತಹ ಅಮಾನವೀಯ ಪದ್ಧತಿಯನ್ನು ನಿಷೇಧಿಸುವುದಕ್ಕೂ 1993ರವರೆಗೂ ಕಾಯ ಬೇಕಾಯಿತು. ಕಾಯ್ದೆಗೆ ತಿದ್ದುಪಡಿಯನ್ನು 10 ವರ್ಷಗಳ ನಂತರ 2013ರಲ್ಲಿ ತರಲಾಯಿತು. ಕಾಯ್ದೆಯ ಪ್ರಕಾರ ಮ್ಯಾನ್‌ಹೋಲ್‌ನಲ್ಲಾಗಲಿ, ಮಲದ ಗುಂಡಿಗಳಲ್ಲಾಗಲಿ ಮನುಷ್ಯರನ್ನು ಇಳಿಸಿ ಸ್ವಚ್ಛಮಾಡಿಸುವುದು ಅಪರಾಧವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 9ನೇ ಪಂಚವಾರ್ಷಿಕ ಯೋಜನೆಯಡಿ 9 ಪ್ರಾಜಕ್ಟ್‌ಗಳ ನೋಡಲ್ ಏಜನ್ಸಿಯಾಗಿ ಗುರುತಿಸಿದ್ದ ಅಹಮದಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಕ್ಯೂಪೇಷನಲ್ ಹೆಲ್ತ್ ಸಂಸ್ಥೆಯ ರಾಜ್‌ನಾರಾಯಣ್ ತಿವಾರಿಯವರು ಒಳಚರಂಡಿ ಕಾರ್ಮಿಕರು ಎದುರಿಸುವ ಅಪಾಯಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ 2006ರಲ್ಲಿ ಪ್ರಕಟಿಸಿರುವ ‘ಆಕ್ಯೂಪೇಷನಲ್ ಹೆಲ್ತ್ ಹಝಾರ್ಡ್ಸ್‌ ಇನ್ ಸಿವರೇಜ್ ಆ್ಯಂಡ್ ಸ್ಯಾನಿಟರಿ ವರ್ಕರ್ಸ್‌’’ ಎಂಬ ವರದಿಯಲ್ಲಿ ನೀಡಿರುವ ವಿವರಗಳು ಹೀಗಿವೆ:- ಮ್ಯಾನ್‌ಹೋಲ್ ಮತ್ತು ಮಲಗುಂಡಿಗಳು ಹೈಡ್ರೋಜನ್ ಸಲ್ಫೈಡ್, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಮಿಥೇನ್, ನೈಟ್ರೊಜನ್, ಅಮೋನಿಯಾ ಮತ್ತು ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುವ ಇತರೆ ಅಪಾಯಕಾರಿ ಅನಿಲಗಳ ಮಿಶ್ರಣಗಳಿಂದ ತುಂಬಿರುತ್ತವೆ. ಈ ಅನಿಲಗಳ ಪರಿಣಾಮದಿಂದ 5-6 ನಿಮಿಷಗಳಲ್ಲಿ ಉಸಿರುಗಟ್ಟಿ ಸಾಯಬಹುದು, ಪ್ರಜ್ಞೆ ತಪ್ಪಬಹುದು ಅಥವಾ ಪಾರ್ಶ್ವವಾಯು ಪೀಡಿತರಾಗಬಹುದು. ಅಲ್ಪ ಮಟ್ಟದ ವಿಷದ ಪ್ರಮಾಣವಾದ 10 ರಿಂದ 500 ಪಿಪಿಎಂನಷ್ಟು ಹೈಡ್ರೋಜನ್ ಸಲ್ಫೈಡ್ ಅನಿಲ ಒಳಸೇರಿದರೆ ಹಲವಾರು ಗಂಟೆಗಳ ಕಾಲ ತಲೆನೋವು ಉಂಟಾಗುತ್ತದೆ, ಕಾಲುಗಳಲ್ಲಿ ನೋವುಂಟಾಗುತ್ತದೆ, ಕೆಲವು ಸಂದರ್ಭದಲ್ಲಿ ಪ್ರಜ್ಞೆ ತಪ್ಪಬಹುದು. 500ರಿಂದ 700 ಪಿಪಿಎಂನಷ್ಟು ವಿಷದ ಪ್ರಮಾಣದಲ್ಲಿ ಪ್ರಜ್ಞೆ ತಪ್ಪುತ್ತದೆ ಆದರೆ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ. ತೀವ್ರವಾದ ವಿಷದ ಪ್ರಮಾಣ ದಲ್ಲಿ ಉಸಿರಾಟ ಮತ್ತೆ ಆರಂಭವಾಗುವವರೆಗೂ ಉಸಿರುಗಟ್ಟುವುದು, ಹೆಚ್ಚೆಚ್ಚು ಉಸಿರಾಡುವುದು, ನೀಲಿಗಟ್ಟುವುದರೊಂದಿಗೆ ಕೋಮಾದ ಸ್ಥಿತಿ ತಲುಪುತ್ತಾರೆ. ಎದೆ ಡವಗುಟ್ಟುತ್ತ ಬಡಿಯುವುದು, ಅಪಸ್ಮಾರ ಉಂಟಾಗಬಹುದು. ಬಹುಪ್ರಮಾಣದ ಹೈಡ್ರೋಜನ್ ಸಲ್ಫೈಡ್ ಉಸಿರಾಡುವುದರಿಂದ ಆಮ್ಲ ಜನಕ ಕೊರತೆ ಉಂಟಾಗಿ ಉಸಿರುಗಟ್ಟಿ ಸಾಯಬಹುದು. ಅಪಸ್ಮಾರ (ಫಿಟ್ಸ್) ಬರಬಹುದು, ಪ್ರಜ್ಞೆ ತಪ್ಪಿ ಅಲುಗಾಡದೆ ಹಾಗೇ ಸತ್ತುಹೋಗಬಹುದು. ವಿಷದ ಪ್ರಮಾಣ ತೀವ್ರವಾದರೆ ಕಣ್ಣು ರೆಪ್ಪೆ ಊದಿಕೊಳ್ಳುವುದು, ಕಣ್ಣು ಕೆಂಪಾಗುವುದು, ನೀರು ಸುರಿಯುವುದು, ಪಿಸಿರು ಬರುವುದರಿಂದ ರೆಪ್ಪೆಗಳು ಅಂಟಿಕೊಳ್ಳುವುದು, ಕಪ್ಪು ಗುಡ್ಡೆ ಹಾನಿಯಾಗಿ ದೃಷ್ಟಿ ಮಂದವಾಗುವುದು ಸಾಮಾನ್ಯ. ‘‘ಅನಿಲ ಕಣ್ಣುಗಳು’’ ಎಂದು ಕರೆಯುವ ಈ ಲಕ್ಷಣಗಳು ಒಳಚರಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ಕೆಲಸ ಮಾಡುವುದರಿಂದಾಗಿಯೇ ಸಫಾಯಿ ಕರ್ಮಚಾರಿಗಳು ಕಾಯಿಲೆಗೆ ತುತ್ತಾಗುವುದು, ಅಕಾಲಿಕವಾಗಿ ಮರಣಹೊಂದುವುದು ಸಾಮಾನ್ಯ.

ಅಡುಗೆ ಕೋಣೆ, ರಸ್ತೆ-ಸೇತುವೆ ನಿರ್ಮಾಣದಿಂದ ಹಿಡಿದು ಅಂತರಿಕ್ಷದವರೆಗೂ ಏನೆಲ್ಲಾ ಯಂತ್ರಗಳ ಆವಿಷ್ಕಾರಗಳಾದರೂ, ಅಪಾಯಕಾರಿ ಮಲಬಾಚುವ ಕೆಲಸಕ್ಕೆ ಯಂತ್ರಗಳು ಬರಲಿಲ್ಲ. ಇಂತಹ ಅಮಾನವೀಯ ಪದ್ಧತಿಯನ್ನು ನಿಷೇಧಿಸುವುದಕ್ಕೂ 1993ರವರೆಗೂ ಕಾಯಬೇಕಾಯಿತು. ಕಾಯ್ದೆಗೆ ತಿದ್ದುಪಡಿಯನ್ನು 10 ವರ್ಷಗಳ ನಂತರ 2013ರಲ್ಲಿ ತರಲಾಯಿತು. ಕಾಯ್ದೆಯ ಪ್ರಕಾರ ಮ್ಯಾನ್‌ಹೋಲ್‌ನಲ್ಲಾಗಲಿ, ಮಲದ ಗುಂಡಿಗಳಲ್ಲಾಗಲಿ ಮನುಷ್ಯರನ್ನು ಇಳಿಸಿ ಸ್ವಚ್ಛಮಾಡಿಸುವುದು ಅಪರಾಧವಾಗಿದೆ. ಯಂತ್ರಗಳನ್ನು ಬಳಸಿ ಸ್ವಚ್ಛಮಾಡಿಸಬೇಕು. ಆದರೆ ಒಳಚರಂಡಿ ವ್ಯವಸ್ಥೆಯನ್ನು ಎಲ್ಲಿಯೂ ಸಂಪೂರ್ಣವಾಗಿ ಜಾರಿ ಮಾಡಿಲ್ಲವಾದ್ದರಿಂದ ಮತ್ತು ಯಾಂತ್ರೀಕೃತ ಸ್ವಚ್ಛತೆ ಎಲ್ಲ ಕಡೆಯಲ್ಲೂ ಲಭ್ಯವಿಲ್ಲದೆ ಇರುವುದರಿಂದಾಗಿ ಈಗಲೂ ಸಫಾಯಿ ಕರ್ಮಚಾರಿಗಳೇ ಯಾವ ಸುರಕ್ಷಾ ಸಲಕರಣೆಗಳಿಲ್ಲದೆ ಬರಿಗೈಯಲ್ಲಿ ಮ್ಯಾನ್‌ಹೋಲ್ ಮತ್ತು ಮಲಗುಂಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಉದಾಹರಣೆಗೆ ಕೋಲಾರ ನಗರ ಸಭೆೆಯಲ್ಲಿರುವ ಸುಮಾರು 2000 ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡಲು ಇರುವುದು 2 ಯಂತ್ರಗಳು. ಎರಡನೇ ಯಂತ್ರವೂ ಸೇರ್ಪಡೆಯಾಗಿರುವುದು ಇತ್ತೀಚೆಗೆ. ‘‘ಸ್ವಚ್ಛಮಾಡುವ ಯಂತ್ರವಿರುವ ಒಂದು ಗಾಡಿಗೆ ಇಬ್ಬರು ಕಾರ್ಮಿಕರು ಇರುತ್ತಾರೆ. ಪ್ಲೇಟ್ (ಮುಚ್ಚಳ) ಎತ್ತಿ 60 ಮೀಟರ್ ಉದ್ದ ಇರೊ ಪೈಪ್ ಎಳೆದು ಅಂದಾಜಿನ ಮೇಲೆ ಪೈಪ್ ಫಿಕ್ಸ್ ಮಾಡ್ತೀವಿ. ಡ್ರೈವರ್ ಆಕ್ಸಿಲೇಟರ್ ಏರಿಸ್ತಾ ಹೋಗಬೇಕು. ಪೈಪ್ ಹಾಕೋರು ಡ್ರೈವರ್‌ಗೆ ಜಾಸ್ತಿ ಮಾಡಬೇಕಾ? ಕಡಿಮೆ ಮಾಡಬೇಕಾ? ಅಂತ ಸಿಗ್ನಲ್ ಕೊಡ್ತಾ ಇರ್ಬೇಕು. ಸಿಲ್ಟ್ ಗಟ್ಟಿ ಇದ್ರೆ ಕೊಂಗಾಣಿಯಲ್ಲಿ ಎತ್ತಿ ಹಾಕ್ತೀವಿ. ಪಿಟ್ ಗುಂಡಿಲಿ ಕಸ ಗಟ್ಟಿ ಆಗಿದ್ರೆ ನೀರು ಸೇರಿಸಿ ಕಲಸಿ, ಕಲಸಿ ಎಳೆಯ ಬೇಕು. ಪೈಪ್ ಆಪರೇಟ್ ಮಾಡೋಕೆ, ಪೈಪ್ ಎಳೆಯೋಕೆ ಮತ್ತು ಪ್ಲೇಟ್ ತಗ್ಯೋಕೆ ಅಂತ ಮೂರು ಜನ ಇದ್ರೆ ಕೆಲಸ ಮಾಡೋಕೆ ಅನುಕೂಲ, ಆದ್ರೆ ಇಬ್ರನ್ನೇ ಕೊಡೋದು. ಒಂದು ದಿನಕ್ಕೆ 15-20 ದೂರುಗಳು ಬರುತ್ತವೆ. ಕೆಲವು ಸಲ ಒಂದೊಂದಕ್ಕೂ 4-5 ಗಂಟೆ ಹಿಡಿಯುತ್ತದೆ. ಚೀಲ, ರೇಷ್ಮೆ ಗೂಡು, ಥರ್ಮೊಕೋಲು, ಗೋಣಿ ಚೀಲ, ಪ್ಲಾಸ್ಟಿಕ್, ಚಮಚ, ಲೋಟ, ಬಟ್ಟೆಯಂತಹ ವಸ್ತುಗಳು ಸಿಕ್ಕಿಕೊಂಡು ಜಾಮ್ ಆದಾಗ ತೆಗೆಯಲು ಹೆಚ್ಚು ಸಮಯ ಬೇಕು. ಮಾಮೂಲಿ ಕಂಪ್ಲೇಂಟ್ ಆದ್ರೆ 45 ನಿಮಿಷದಿಂದ ಒಂದು ಗಂಟೆ ಹಿಡಿಯುತ್ತದೆ’’ ಎಂದು ಕೋಲಾರದ ಕಾರ್ಮಿಕರು ಹೇಳಿದರು. 2011ರಿಂದ ಇಲ್ಲಿಯವರೆಗೂ 73 ಜನ ಸಫಾಯಿ ಕರ್ಮಚಾರಿಗಳು ಮಲದ ಗುಂಡಿಯಲ್ಲಿ ಬಿದ್ದು ತೀರಿಕೊಂಡಿದ್ದಾರೆ. ಈ ಕೆಲಸಕ್ಕೆ ಅಂಟಿರುವ ಕಳಂಕದಿಂದಾಗಿ ಬೇರೆ ಕೆಲಸಗಳು ಈ ಕಾರ್ಮಿಕರಿಗೆ ಸಿಗುವುದಿಲ್ಲ. ಬೇರೆ ಪರ್ಯಾಯಗಳೂ ಇಲ್ಲದೆ ಇರುವುದರಿಂದ ಹೊಟ್ಟೆಪಾಡಿಗಾಗಿ ಈ ಕೆಲಸವನ್ನು ಮಾಡುತ್ತಾರೆ. ಯಾವ ಸುರಕ್ಷಾ ಸಲಕರಣೆಗಳೂ ಇಲ್ಲದೆ ಆರರಿಂದ ಎಂಟೋ, ಒಂಬತ್ತೋ ಅಡಿ ಉದ್ದದ ಮ್ಯಾನ್‌ಹೋಲ್‌ಗಳ ಒಳಗೆ ಇಳಿದು ಕಟ್ಟಿಕೊಂಡಿರುವುದನ್ನು ತೆಗೆದು ಹಾಕಲು ಕಾರ್ಮಿಕರು ಮಲದ ನೀರಿನಲ್ಲಿ ಮುಳುಗಬೇಕಾಗುತ್ತದೆ. ಹತ್ತಕ್ಕಿಂತಲು ಹೆಚ್ಚಿನ ಅಡಿ ಆಳದ ಮಲದ ಗುಂಡಿಗಳಿಗೆ ಇಳಿದು ಬರಿಗೈಲಿ ಮಲವನ್ನು ತೆರವುಗೊಳಿಸಬೇಕಾಗುತ್ತದೆ.

ಈ ಕೆಲಸವನ್ನು ಇಷ್ಟೊಂದು ಅಮಾನವೀಯವಾಗಿ ಅಸ್ಪಶ್ಯ ದಲಿತರ ಕೈಯಲ್ಲೇ ಮಾಡಿಸುವುದಕ್ಕೆ ಜಾತಿ ವ್ಯವಸ್ಥೆ ಕಾರಣವಾಗಿದೆ. ಶುದ್ಧ-ಅಶುದ್ಧವೆಂದು ಮನುಷ್ಯರನ್ನು ವಿಭಜಿಸುವ ಈ ವ್ಯವಸ್ಥೆ ಧಾರ್ಮಿಕ ಮಾನ್ಯತೆ ಪಡೆದುಕೊಂಡಿದೆ. ಮನುಸ್ಮತಿಯ ನಾಲ್ಕನೇ ಅಧ್ಯಾಯದಲ್ಲಿ ಶೌಚ ಕುರಿತು ಬ್ರಾಹ್ಮಣರು ಪಾಲಿಸಬೇಕಾದ ನಿಯಮಗಳನ್ನು ನೀಡಲಾಗಿದೆ. ಬ್ರಾಹ್ಮಣನು ರಸ್ತೆಯಲ್ಲಿ, ಬೂದಿಯ ಮೇಲೆ ಅಥವಾ ದನದ ಕೊಟ್ಟಿಗೆಯಲ್ಲಿ, ಉತ್ತ ಭೂಮಿಯಲ್ಲಿ, ನೀರಿನಲ್ಲಿ, ಇಟ್ಟಿಗೆಯ ಪೀಠದ ಮೇಲೆ, ಬೆಟ್ಟದ ಮೇಲೆ, ದೇವಸ್ಥಾನದ ಅವಶೇಷದ ಮೇಲೆ ಅಥವಾ ಹುತ್ತದ ಮೇಲೆ ಮೂತ್ರ ವಿಸರ್ಜಿಸಬಾರದು; ಜೀವಜಂತುಗಳು ವಾಸಿಸುವ ಬಿಲಗಳಲ್ಲಿ, ನಡೆಯುತ್ತಿರುವಾಗ, ನದಿ ತೀರದಲ್ಲಿ, ವಿಸರ್ಜನೆ ಮಾಡುವಂತಿಲ್ಲ; ಗಾಳಿಗೆ ಎದುರಾಗಿ ಅಥವಾ ಬೆಂಕಿಗೆ ಎದುರಾಗಿ ಅಥವಾ ಬ್ರಾಹ್ಮಣನೆಡೆಗೆ, ಸೂರ್ಯನೆಡೆಗೆ, ನೀರಿನೆಡೆಗೆ ಅಥವಾ ಗೋವಿನೆಡೆಗೆ ನೋಡಿಕೊಂಡು ಮಲ ಅಥವಾ ಮೂತ್ರ ವಿಸರ್ಜಿಸಬಾರದು.

ಎಲ್ಲಿ ಮಾಡಬೇಕು ಮತ್ತು ಮಾಡಬಾರದು, ಹೇಗೆ ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ವಿವರಗಳಿರುವಂತೆಯೇ ಮಲ- ಮೂತ್ರಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಗಳು ಕಂಡು ಬಂದಿಲ್ಲ. ವಿಸರ್ಜಿಸಿದ ವಸ್ತುವಿನ ಬಗ್ಗೆ ಇರುವ ತಾತ್ಸಾರವನ್ನೆ ವಿಲೇವಾರಿ ಮಾಡುವವರ ಬಗ್ಗೆಯೂ ತೋರಲಾಗಿದೆ. ಗೌತಮ ಧರ್ಮಸೂತ್ರವು ‘‘ಉದ್ದೇಶ ಪೂರ್ವಕವಾಗಿ ವೇದೋಚ್ಚಾರಣೆಯನ್ನು ಕೇಳುವ ಶೂದ್ರನ ಕಿವಿಗೆ ಕಾದ ಸೀಸವನ್ನು ಸುರಿಯಬೇಕು, ವೇದವನ್ನು ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು, ಸ್ಮರಣೆ ಮಾಡಿದರೆ ಅವನ ದೇಹವನ್ನು ಸೀಳಬೇಕು’’ ಎಂದು ಹೇಳುತ್ತದೆ.

ನೆಲದ ಮೇಲೆ ಕಡ್ಡಿಗಳನ್ನು, ಮಣ್ಣಿನ ಹೆಂಟೆ, ಎಲೆಗಳು, ಹುಲ್ಲಿನಂತಹುದನ್ನು ಇರಿಸಿ, ಮಾತನಾಡದೆ, ತನ್ನನ್ನು ತಾನು ಶುದ್ಧವಾಗಿಟ್ಟುಕೊಂಡು, ದೇಹವನ್ನು ಬಟ್ಟೆಯಲ್ಲಿ ಸುತ್ತಿ, ತಲೆಯ ಮೇಲೆ ಹೊದ್ದು ಮಲ ವಿಸರ್ಜಿಸಬೇಕು; ಹಗಲಿನಲ್ಲಿ ಉತ್ತರಕ್ಕೆ ಮುಖ ಮಾಡಿ, ರಾತ್ರಿಯಲ್ಲಿ ದಕ್ಷಿಣಕ್ಕೆ ಮುಖ ಮಾಡಿ, ಮುಸ್ಸಂಜೆಯಲ್ಲಿ ಹಗಲಿನಂತೆಯೇ ಮಲ-ಮೂತ್ರ ವಿಸರ್ಜಿಸಬೇಕು; ಬ್ರಾಹ್ಮಣನು ತನ್ನ ಜೀವಕ್ಕೆ ಅಪಾಯವಿರುವಾಗ ನೆರಳಿನಲ್ಲಿ ಅಥವಾ ಕತ್ತಲಲ್ಲಿ ಹಗಲು ಮತ್ತು ರಾತ್ರಿಯಲ್ಲಿ ತನಗೆ ಇಷ್ಟ ಬಂದ ಭಂಗಿಯಲ್ಲಿ ಕುಳಿತು ಮಾಡಬಹುದು; ಬೆಂಕಿ, ಸೂರ್ಯ, ಚಂದ್ರ, ನೀರು, ಬ್ರಾಹ್ಮಣ, ಗೋವು, ಗಾಳಿಗೆ ಎದುರಾಗಿ ಮೂತ್ರ ಮಾಡುವ ವ್ಯಕ್ತಿಯ ಬುದ್ಧಿಶಕ್ತಿಯು ನಶಿಸುವುದು. (ಮನುಸ್ಮತಿ ಅಧ್ಯಾಯ 4, 44-56ರ ವರೆಗಿನ ಶ್ಲೋಕಗಳು) ಎಲ್ಲಿ ಮಾಡಬೇಕು ಮತ್ತು ಮಾಡಬಾರದು, ಹೇಗೆ ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ವಿವರಗಳಿರುವಂತೆಯೇ ಮಲ-ಮೂತ್ರಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಗಳು ಕಂಡು ಬಂದಿಲ್ಲ. ವಿಸರ್ಜಿಸಿದ ವಸ್ತುವಿನ ಬಗ್ಗೆ ಇರುವ ತಾತ್ಸಾರವನ್ನೆ ವಿಲೇವಾರಿ ಮಾಡುವವರ ಬಗ್ಗೆಯೂ ತೋರಲಾಗಿದೆ. ಗೌತಮ ಧರ್ಮಸೂತ್ರವು ‘‘ಉದ್ದೇಶಪೂರ್ವಕವಾಗಿ ವೇದೋಚ್ಚಾರಣೆಯನ್ನು ಕೇಳುವ ಶೂದ್ರನ ಕಿವಿಗೆ ಕಾದ ಸೀಸವನ್ನು ಸುರಿಯಬೇಕು, ವೇದವನ್ನು ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು, ಸ್ಮರಣೆ ಮಾಡಿದರೆ ಅವನ ದೇಹವನ್ನು ಸೀಳಬೇಕು’’ ಎಂದು ಹೇಳುತ್ತದೆ.

ದ್ವಿಜನೊಬ್ಬನನ್ನು ಬೈಯುವ ನೀಚ ಕುಲದವನ ನಾಲಿಗೆಯನ್ನು ಕತ್ತರಿಸಬೇಕು, ದ್ವಿಜನ ಹೆಸರು, ಜಾತಿ ಹಿಡಿದು ಅವಮಾನಿಸಿದರೆ ಹತ್ತು ಬೆರಳುದ್ದದ ಕಾದ ಕಬ್ಬಿಣವನ್ನು ಅವನ ಬಾಯಿಗೆ ತೂರಿಸಬೇಕು ಹಾಗೂ ಉನ್ಮಾದದಲ್ಲಿ ಪುರೋಹಿತರಿಗೆ ಅವರ ಕರ್ತವ್ಯದ ಬಗ್ಗೆ ಆದೇಶ ನೀಡಿದರೆ ರಾಜನು ಕುದಿಯುವ ಎಣ್ಣೆಯನ್ನು ಅವನ ಕಿವಿ ಮತ್ತು ಬಾಯಿಗೆ ಸುರಿಸಬೇಕು ಎಂದು ಹೇಳುತ್ತದೆ.

ಹುಟ್ಟಿನಿಂದ ಕೀಳಾದವನು ಯಾರೊಂದಿಗಾದರು ಸೇರಿಕೊಂಡು ಉತ್ತಮ ಕುಲದವರಿಗೆ ಹಾನಿಮಾಡಿದರೆ ಅವರೆಲ್ಲರನ್ನೂ ಕಡಿದು ಹಾಕಬೇಕು, ಕೈ ಎತ್ತಿದರೆ ಕೈಯನ್ನು, ಕೋಪದಿಂದ ಕಾಲೆತ್ತಿದರೆ ಕಾಲನ್ನು ಕಡಿದುಹಾಕಬೇಕು ಎಂದು ಮನುಸ್ಮತಿಯಲ್ಲಿ ಹೇಳಲಾಗಿದೆ.

ಹುಟ್ಟಿನಿಂದ ಕೀಳಾದವನು ಹುಟ್ಟಿನಿಂದ ಮೇಲಾದ ವ್ಯಕ್ತಿಯ ಪಕ್ಕ ಕುಳಿತುಕೊಂಡರೆ ಅವನ ಪೃಷ್ಠದ ಮೇಲೆ ಬಾರುಕೋಲಿನಿಂದ ಹೊಡೆಸಬೇಕು ಅಥವಾ ರಾಜನು ಅವನ ಪೃಷ್ಠವನ್ನು ಕತ್ತರಿಸಲು ಹೇಳಬೇಕು. ಉನ್ಮಾದದಲ್ಲಿ ಅವನ ಮೇಲೆ ಉಗಿದರೆ ರಾಜನು ಅವನ ಎರಡೂ ತುಟಿಗಳನ್ನು ಕತ್ತರಿಸಲು ಹೇಳಬೇಕು, ಉಚ್ಚೆ ಹುಯ್ದರೆ ಅವನ ಶಿಶ್ನವನ್ನು ಕತ್ತರಿಸಬೇಕು, ಹೂಸಿದರೆ ಅವನ ಗುದ ವನ್ನು ಕತ್ತರಿಸಲು ಹೇಳಬೇಕು. ತಲೆಗೂದಲು ಹಿಡಿದರೆ ಯಾವ ಮುಲಾಜೂ ನೋಡದೆ ರಾಜನು ಅವನ ಕೈಗಳನ್ನು ಕತ್ತರಿಸಲು ಹೇಳಬೇಕು. ಕಾಲಿನಿಂದ ಒದ್ದರೆ ಅವನ ಕತ್ತು ಅಥವಾ ವೃಷಣವನ್ನು ಕತ್ತರಿಸಲು ಹೇಳಬೇಕು.

ತಮ್ಮದೇ ದೇಹದಿಂದ ವಿಸರ್ಜನೆಯಾಗುವ ಮಲ- ಮೂತ್ರವು ತಮಗೆ ಅಸಹ್ಯವೆನಿಸುವುದಾದರೆ ಬಾಚುವ ಬೇರೆಯವರಿಗೆ ಎಷ್ಟು ಅಸಹ್ಯ ಹುಟ್ಟಿಸಬಹುದೆಂಬ ಸೂಕ್ಷ್ಮತೆಯನ್ನು ಜಾತಿ ವ್ಯವಸ್ಥೆಯ ಶುದ್ಧ-ಅಶುದ್ಧ ಪರಿಕಲ್ಪನೆಗಳು ಕೊಂದುಹಾಕಿವೆ. ಪರರನ್ನು ಹಿಂಸಿಸಿ, ಅಗೌರವಿಸಿಯಾದರೂ ಶುದ್ಧತೆಯನ್ನು ಕಾಪಾಡಿ ಕೊಳ್ಳಬೇಕೆನ್ನುವುದು ಅಮಾನವೀಯವಾದುದು ಎಂಬುದಕ್ಕೆ ಒಳಚರಂಡಿ ಸ್ವಚ್ಛತೆಯ ಕೆಲಸ ಮಾಡುವವರ ಪರಿಸ್ಥಿತಿಯು ಸಾಕ್ಷಿಯಾಗಿದೆ. ಎಲ್ಲರ ಹೊಲಸನ್ನು ಬಾಚಿ ಆರೋಗ್ಯ ಕಾಪಾಡುವ ಸಫಾಯಿ ಕರ್ಮಚಾರಿಗಳು ಪರಕೀಯರಂತೆ, ಕಳಂಕಿತರಂತೆ ಬದುಕುತ್ತಿದ್ದಾರೆ. ಹಿಂದೆ ಬುಟ್ಟಿಗಳಲ್ಲಿ ಮಲ ತುಂಬಿ ತಲೆಯ ಮೇಲೆ ಹೊರುತ್ತಿದ್ದವರು ಹೈಟೆಕ್ ಕಾಲದಲ್ಲಿ ಮಲದ ಗುಂಡಿಗಳಲ್ಲಿ ಮುಳುಗಿ, ಈಜುವಂತಾಗಿರುವುದೇ ಸಫಾಯಿ ಕರ್ಮಚಾರಿಗಳ ಪಾಲಿನ ಆಧುನಿಕತೆಯಾಗಿದೆ.

ಕಿನ್ನಿಗೋಳಿಯಂತಹ ಪುಟ್ಟ ಊರಿನ ಹೊಟೇಲ್‌ನಲ್ಲಷ್ಟೇ ಅಲ್ಲ ಬೆಂಗಳೂರಿನಂತಹ ಸಿಲಿಕಾನ್ ನಗರದ ಐಷಾರಾಮಿ ಹೊಟೇಲಿನ ಮಲ ವಿಲೇವಾರಿಯೂ ಇದಕ್ಕಿಂತ ಭಿನ್ನ ವಾಗಿಲ್ಲ. ಈ ಕುರಿತು, ಸಿ.ಎಸ್.ಶಾರದಾ ಪ್ರಸಾದ್ ಮತ್ತು ಇಶಾ ರೇ ಅವರು ಬರೆದಿರುವ ಲೇಖನ 2018, ಮೇ ತಿಂಗಳ ಇಪಿಡಬ್ಲ್ಯೂ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹೊಟೇಲ್‌ನಿಂದ ರಾತ್ರಿ ಹೊತ್ತಿನಲ್ಲಿ ಮಲ ಸಾಗಿಸುವ ಮೂವರು ಕೆಲಸಗಾರರನ್ನು ಆ ಕೆಲಸ ಮಾಡುವಾಗ ಮಾತನಾಡಿಸಿ ಆ ಲೇಖನವನ್ನು ಬರೆಯಲಾಗಿದೆ. ಸ್ವಚ್ಛಮಾಡುತ್ತಿದ್ದ ಕಾರ್ಮಿಕ ‘ಈ ಹೊಟೇಲ್‌ನಲ್ಲಿ ಉಳಿಯುವವರು ಅದಕ್ಕಾಗಿ ದಿನಕ್ಕೆ ಹತ್ತು ಸಾವಿರ ಕೊಡುತ್ತಾರೆ. ಆದರೆ ಅವರ ಹೇಲೂ ಎಲ್ಲರ ಹೇಲಿನಂತೆಯೇ ನಾತ ಹೊಡೆಯುತ್ತದೆ’ ಎಂದು ತಣ್ಣಗೆ ಹೇಳಿದ್ದಾರೆ. ಎಲ್ಲರ ಹೇಲು ನಾರುತ್ತದೆ ಎಂದು ಅರಿತಿರುವ ಮನುಷ್ಯರಷ್ಟೇ ಕಿಟ್ಟ ಕೊರಗ ಅವರು ಹೆಣವಾಗಿ ಒಂಬತ್ತು ಗಂಟೆಗಳ ಕಾಲ ಮಲದ ಗುಂಡಿಯಲ್ಲಿ ಮುಳುಗಿದ್ದಾಗ ಅವರ ಮನೆಯವರು ಯಾವ ಸಂಕಟ ಅನುಭವಿಸಿರಬಹುದೆಂದು, ಹೇಗೆ ಕಳೆದಿರಬಹುದೆಂದು ಊಹಿಸಿಕೊಳ್ಳಬಹುದು. (ಕ್ಷೇತ್ರಕಾರ್ಯದಲ್ಲಿ ಕೊರಗ ಸಮುದಾಯದವರ ಕುರಿತು ಮಾಹಿತಿ ನೀಡಿದವರು ಶ್ರೀ.ಕೊಗ್ಗ, ಶ್ರೀಮತಿ ರವಿತ, ಶ್ರೀ ಮನೋಜ್ ಕುಮಾರ್, ಶ್ರೀಮತಿ ಸಿದ್ದು, ಶ್ರೀಮತಿ ಸುಶೀಲಾ ನಾಡಾ, ಡಾ. ಸಬಿತಾ ಕೊರಗ, ಶ್ರೀಮತಿ ಸೂರು ಮತ್ತು ಶ್ರೀ ಕೊರಗ ದಂಪತಿಗಳು)

ಬೆಳಕಿನ ಬೀಜಾ

ನೀವು ಹುಟ್ಟಿದಂದಿನಿಂದ ಅನೇಕರನ್ನು ಹೊರಗಿನಿಂದ ನೋಡಿರುತ್ತೀರಿ, ಹಲವಾರು ಕತೆಗಳನ್ನು ಕೇಳಿರುತ್ತೀರಿ. ನೀವು ವ್ಯಕ್ತಿಗಳ ಬಗ್ಗೆ ಗಮನಿಸಿದ್ದೆಲ್ಲ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಇರುತ್ತದೆಯೇ ಹೊರತು ನೀವು ಗಮನಿಸಿದ ವ್ಯಕ್ತಿಯ ಅಂತರಾಳದಲ್ಲಿ ಏನೇನಾಗುತ್ತಿದೆಯೋ ಅದಕ್ಕೇ ತಕ್ಕಂತೆ ಇರುವುದಕ್ಕೆ ಸಾಧ್ಯವಿಲ್ಲ.

-ಪಿ. ಲಂಕೇಶ್

ಮನೆಗಳು, ಆಸ್ಪತ್ರೆಗಳು, ಕಾರ್ಖಾನೆಗಳು ಹಾಗೂ ಇತರ ಸ್ಥಳಗಳಲ್ಲಿನ ಶೌಚ ಮತ್ತು ಇತರೆ ತ್ಯಾಜ್ಯಗಳನ್ನು ಒಳಚರಂಡಿಯ ಮೂಲಕ ತೆರವು ಮಾಡಲಾಗುತ್ತದೆ. ನಗರದ ಹೊರವಲಯದವರೆಗೂ ತ್ಯಾಜ್ಯವನ್ನು ಒಯ್ಯುವ ಮಾರ್ಗವಾಗಿರುವ ಒಳಚರಂಡಿಗಳು ಅತಿ ಉದ್ದವಾಗಿದ್ದು ಕಟ್ಟಿಕೊಂಡಾಗ ತೆರವುಗೊಳಿಸಲು ಇಂತಿಷ್ಟು ಅಳತೆಯ ದೂರಕ್ಕೆ ಒಂದರಂತೆ ಮನುಷ್ಯರು ಇಳಿಯುವಷ್ಟು ಅಗಲದ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿರುತ್ತದೆ. ಮ್ಯಾನ್‌ಹೋಲ್ ಮೂಲಕ ಒಳಗೆ ಇಳಿದು ಕಟ್ಟಿಕೊಂಡಿರುವ ಕಸವನ್ನು ತೆರವು ಮಾಡುವ ಕೆಲಸವನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ.

ದಾರಿ...

ಆತ ರೈತ. ಹಳ್ಳಿಯ ಆ ದಾರಿಯಲ್ಲಿ ಸಾಗುವವರನ್ನೆಲ್ಲ ತಡೆದು ಹೇಳುತ್ತಿದ್ದ ‘‘ದಯವಿಟ್ಟು ಈ ದಾರಿಯಲ್ಲಿ ಹೋಗದಿರಿ. ಹೋದವರಾರೂ ತಿರುಗಿ ಬಂದಿಲ್ಲ’’

ಎಲ್ಲರಲ್ಲೂ ಹೀಗೆ ಗೊಗರೆಯುತ್ತಿರುವುದನ್ನು ಒಬ್ಬ ಯುವಕ ನೋಡಿ ಕೇಳಿದ ‘‘ನಿನಗೆ ಹೇಗೆ ಗೊತ್ತು...ಈ ದಾರಿ ಅಪಾಯಕಾರಿ ಎಂದು....?’’

ವೃದ್ಧ ರೈತ ಹೇಳಿದ ‘‘ಈ ದಾರಿಯಲ್ಲಿ ಹೋದ ನನ್ನ ಹರೆಯದ ಮಗ ಇಂದಿಗೂ ತಿರುಗಿ ಬಂದಿಲ್ಲ....’’

ಯುವಕ ಬೆದರಿ ಕೇಳಿದ ‘‘ಇಷ್ಟಕ್ಕೂ ಈ ದಾರಿ ಎಲ್ಲಿಗೆ ಹೋಗುತ್ತದೆ?’’

ರೈತ ನಿಟ್ಟುಸಿರಿಟ್ಟು ಹೇಳಿದ ‘‘ನಗರಕ್ಕೆ....’’  

-ಮಗು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)