varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಪ್ರತಿಭಟನೆಯ ಕಲಾಕ್ಷೇತ್ರ

ವಾರ್ತಾ ಭಾರತಿ : 7 Dec, 2018
ಮಂಜುನಾಥ ಅದ್ದೆ

ಮಂಜುನಾಥ ಅದ್ದೆ

ಅಗ್ನಿ ಪತ್ರಿಕೆ ಎಂದಾಗ ಮೊದಲು ನೆನಪಾಗುವುದೇ ಮಂಜುನಾಥ ಅದ್ದೆ. ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯ ಈ ಮೂರು ಕ್ಷೇತ್ರಗಳ ಕುರಿತಂತೆ ಆಳವಾಗಿ ಬರೆಯಬಲ್ಲ, ವಿಶ್ಲೇಷಣೆ ಮಾಡಬಲ್ಲ ಲೇಖಕ ಅದ್ದೆ. ಅಂಕಣಕಾರರಾಗಿಯೂ ಅಗ್ನಿ ಪತ್ರಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಾಟಕ, ಸಿನೆಮಾ ಕ್ಷೇತ್ರಗಳಲ್ಲೂ ಇವರು ದುಡಿಯುತ್ತಿರುವವರು.

ಕರ್ನಾಟಕ ಹಾಗೂ ಕೇಂದ್ರ ಸರಕಾರಗಳು ಕಾಲದಿಂದ ಕಾಲಕ್ಕೆ ತೆಗೆದುಕೊಂಡ ಸಾಂಸ್ಕೃತಿಕ-ಸಾಹಿತ್ಯಿಕ ನಿಲುವು-ನೀತಿ ಕಾರ್ಯ ಕ್ರಮಗಳು ಏಕಮುಖವಾಗಿದ್ದು ಜನತೆಯ ಒಟ್ಟಾರೆ ಆಶಯಗಳಿಗೆ ವಿರುದ್ಧವಾಗಿ ಇದ್ದಾಗಲೆಲ್ಲ ಕಲಾಕ್ಷೇತ್ರದ ಆವರಣ ಚುರುಕುಗೊಂಡಿದೆ. ಇಂಥ ನಿಲುವುಗಳನ್ನು ಖಂಡಿಸಿ, ಪ್ರತಿಭಟಿಸಿದ್ದೂ ಕೂಡಾ ಇಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ನಾಡಿನ ನೆಲ, ಜಲ, ಸಂಪನ್ಮೂಲ, ಜನರ ಉದ್ಯೋಗ ಇತ್ಯಾದಿಗಳ ಹಿತಾಸಕ್ತಿಯ ವಿಚಾರಗಳು ಬಂದಾಗ ಗೋಕಾಕ್ ಚಳವಳಿ ಹಾಗೂ ಕಾವೇರಿ ನೀರಿನ ಚಳವಳಿಗಳ ಸಂದರ್ಭದಲ್ಲೂ ಕಲಾಕ್ಷೇತ್ರದ ಆವರಣ ಕಾವು ಪಡೆದುಕೊಂಡು ಪ್ರತಿಭಟನೆ, ಅಭಿಪ್ರಾಯ ರೂಪಣೆಗಳಿಗೆ ಮುಂದಾದಂತಹ ಹಲವಾರು ಸಂದರ್ಭಗಳು ಇವೆ. ಗೋಕಾಕ್ ಚಳವಳಿಯ ಸಂದರ್ಭದಲ್ಲಂತೂ ರವೀಂದ್ರ ಕಲಾಕ್ಷೇತ್ರ ಆ ಚಳವಳಿಯ ಉಪ ಮುಖ್ಯ ಕೇಂದ್ರದಂತೆ ಕಾರ್ಯನಿರ್ವಹಿಸಿದ್ದನ್ನು ಈಗಲೂ ನೆನಪಿಸುವ ರಂಗಕರ್ಮಿಗಳು, ನಟ-ನಟಿಯರು, ರಂಗ ಪರಿಚಾರಕರು ಇದ್ದಾರೆ.

ಯಾವುದೇ ವ್ಯವಸ್ಥೆಯ ಆಳುವ ವರ್ಗ ಒಟ್ಟಾರೆ ಸಮುದಾಯದ ಹಿತಕ್ಕೆ ಧಕ್ಕೆ ತಂದಾಗ, ಇಡೀ ಜನರ ಹಿತಾಸಕ್ತಿಗಳಿಗೆ ವಂಚಿಸಿದಾಗ, ಒಂದು ನಿರ್ದಿಷ್ಟ ಗುಂಪಿನ ಲಾಭದಾಯಕತೆಗೆ ನೀತಿಗಳನ್ನು ರೂಪಿಸುವ ಕೆಲಸಕ್ಕೆ ಇಳಿದಾಗ ಅಂಥ ಸಮಾಜದಲ್ಲಿ ಪ್ರತಿರೋಧ, ಚಳವಳಿಗಳು ಹುಟ್ಟಿಕೊಳ್ಳುತ್ತವೆ. ಜನರ ಮನಸ್ಸಿನಲ್ಲಿ ಹುರಿಗೊಂಡ ಇಂಥ ಪ್ರತಿರೋಧ ಮೊದಲಿಗೆ ವ್ಯಕ್ತವಾಗುವುದು ಅಲ್ಲಿಯ ಕಲೆ, ಸಾಹಿತ್ಯ, ನಾಟಕ, ಚಿಂತನೆಗಳಲ್ಲಿ. ಇಲ್ಲಿ ಮೊಳೆತ, ಅಭಿವ್ಯಕ್ತಗೊಂಡ ಚಿಂತನೆಗಳೆ ಮುಂದೆ ಪ್ರತಿಭಟನೆಗಳ, ಚಳವಳಿಯ ರೂಪ ತಾಳುವುದು. ಜಗತ್ತಿನ ಎಲ್ಲ ಜನಚಳವಳಿಗಳು ರೂಪು ತಳೆದು ಬದಲಾವಣೆಗಳಿಗೆ ಕಾರಣವಾಗಿರುವುದು ಸಮುದಾಯದ ಸಾಂಸ್ಕೃತಿಕ ಅಭಿವ್ಯಕ್ತಿಯಿಂದ ಹುಟ್ಟಿದ ಗ್ರಹಿಕೆ ಮತ್ತು ಪಲಕುಗಳಿಂದಾಗಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಈ ನಿಟ್ಟಿನಲ್ಲಿ ಇಡೀ ರಾಜ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಹೆಗ್ಗುರುತುಗಳಲ್ಲಿ ರವೀಂದ್ರ ಕಲಾಕ್ಷೇತ್ರ ಕೂಡಾ ಒಂದು ಎಂಬುದು ಸುಸ್ಪಷ್ಟವಾದ ಸಂಗತಿ. 1963ರಿಂದ ಈಚೆಗೆ ರವೀಂದ್ರ ಕಲಾಕ್ಷೇತ್ರ ನಾಡಿನ, ದೇಶದ ಬಹಳಷ್ಟು ಆಗುಹೋಗುಗಳಿಗೆ ಅಭಿವ್ಯಕ್ತಿಯ, ಪ್ರತಿರೋಧದ, ಖಂಡನೆಯ, ವಿಡಂಬನೆಯ ವೇದಿಕೆಯಾಗಿ ಮಿಡಿದಿದೆ. ಜನರ ಹಿತದ ಸಂಗತಿಗಳು ಜರುಗಿದಾಗ ಅದನ್ನು ಸ್ವಾಗತಿಸುವ ವೇದಿಕೆಯೂ ಇದಾಗಿದ್ದು ಇದೆ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಒಳಗಿದ್ದು ಸಾಂಸ್ಕೃತಿಕ ತರಂಗಗಳನ್ನು ಇಡೀ ರಾಜ್ಯದ ಉದ್ದಗಲಕ್ಕೆ ಹಬ್ಬುವಂತೆ ಮಾಡಿದ ಇಲ್ಲಿಯ ಪ್ರಮುಖ ಕೇಂದ್ರಗಳ ಪೈಕಿ ರವೀಂದ್ರ ಕಲಾಕ್ಷೇತ್ರದ್ದು ಪ್ರಮುಖ ಪಾತ್ರವಿದೆ. ಕಳೆದ ಅರ್ಧ ಶತಮಾನವನ್ನು ಮೀರಿ ಇಂಥ ಮಹತ್ವವನ್ನು ಕಲಾಕ್ಷೇತ್ರ ಉಳಿಸಿಕೊಂಡಿದೆ. ಬೆಂಗಳೂರಿನಲ್ಲಿ ಈ ತನಕ ನಡೆದಿರುವ ಪ್ರತಿಭಟನೆಯ ಅಂಶಗಳನ್ನು ನಾವು ಎರಡು ರೀತಿಯಲ್ಲಿ ವರ್ಗೀಕರಿಸಬಹುದಾಗಿದೆ.

ಇದರಲ್ಲಿ ಒಂದು ಕಲೆ, ಸಾಹಿತ್ಯ, ನಾಟಕದಂತಹ ಸಾಂಸ್ಕೃತಿಕ ಪ್ರತಿರೋಧವಾದರೆ, ಇನ್ನೊಂದು ಘಟನೆ, ನೀತಿಗಳ ವಿರುದ್ಧ ನಡೆದಂತಹ ನೇರ ಪ್ರತಿಭಟನೆಗಳು ಹಿಂದೆಲ್ಲ ಅಭಿವ್ಯಕ್ತಿ ರೂಪದ ಚಿಂತನೆ, ಆಲೋಚನೆ, ವಾಗ್ವಾದ, ಪ್ರತಿರೋಧಗಳಿಗೆ ಬೆಂಗಳೂರಿನಲ್ಲಿ ಕೇಂದ್ರಸ್ಥಾನವಾಗಿದ್ದಂಥದ್ದು ಸೆಂಟ್ರಲ್ ಕಾಲೇಜು. ಜನರ ಸಾಂಸ್ಕೃತಿಕ ಆಗುಹೋಗುಗಳಿಗೆ 1963ರಲ್ಲೇ ಕಲಾಕ್ಷೇತ್ರ ಸ್ಥಾಪನೆಗೊಂಡು ಚಟುವಟಿಕೆಗಳು ಶುರುವಾದ ನಂತರವೂ ಸೆಂಟ್ರಲ್ ಕಾಲೇಜು ಎಮರ್ಜೆನ್ಸಿಯ ತನಕವೂ ತನ್ನ ಮಹತ್ವವನ್ನು ಉಳಿಸಿಕೊಂಡಿತ್ತು. ಎಮರ್ಜೆನ್ಸಿಯ ನಂತರದ ದಿನಗಳಲ್ಲಿ ಅಂಥ ಚಟುವಟಿಕೆಗಳೆಲ್ಲ ಶಿಫ್ಟ್ ಆಗಿದ್ದು ರವೀಂದ್ರ ಕಲಾಕ್ಷೇತ್ರದ ಕಡೆಗೆ. ಇನ್ನು ನೇರ ಪ್ರತಿಭಟನೆಗಳಿಗೆ ಹಿಂದೆಲ್ಲ ಬೆಂಗಳೂರಿನಲ್ಲಿ ಪ್ರಮುಖ ತಾಣವಾಗಿದ್ದಂಥದ್ದು ವಿಧಾನಸೌಧದ ಎದುರಿಗಿರುವ ಈಗಿನ ಶಾಂತವೇರಿ ಗೋಪಾಲಗೌಡರ ಸರ್ಕಲ್. ವಿವಿಧ ಜನಪರ ಚಳವಳಿಗಳ ಪ್ರತಿಭಟನೆ, ಸಮಾವೇಶ, ಬಂದ್‌ಗಳಿಗೆಲ್ಲ ಪ್ರಮುಖ ಕೇಂದ್ರವಾಗಿದ್ದಂಥದ್ದು ಕಬ್ಬನ್ ಪಾರ್ಕ್‌ನ ತುದಿಗೆ ಇರುವಂಥ ಗೋಪಾಲಗೌಡ ಸರ್ಕಲ್ಲೇ ಆಗಿತ್ತು. ಉಳಿದಂತೆ ಮೈಸೂರು ಬ್ಯಾಂಕ್ ಸರ್ಕಲ್, ಚಿಕ್ಕ ಲಾಲ್‌ಬಾಗ್ (ತುಳಸಿ ತೋಟ) ಬನ್ನಪ್ಪ ಪಾರ್ಕ್, ಟೌನ್ ಹಾಲ್‌ಗಳು ವಿವಿಧ ಚಳವಳಿಗಳ ಎರಡನೆಯ ಕೇಂದ್ರಗಳಂತೆ ಇದ್ದಂಥವು. ಈಗ ಇಂಥ ಎಲ್ಲ ಪ್ರತಿಭಟನೆಗಳ ಕೇಂದ್ರ ಸ್ಥಾಪನೆಯ ಮಹತ್ವವನ್ನು ಫ್ರೀಡಂ ಪಾರ್ಕ್ ಪಡೆದುಕೊಂಡಿದ್ದರೆ ಟೌನ್ ಹಾಲ್‌ನ ಮೆಟ್ಟಿಲುಗಳು, ಮೈಸೂರು ಬ್ಯಾಂಕ್ ಸರ್ಕಲ್ ಎರಡನೆಯ ಸ್ಥಾನದಲ್ಲಿ ತಮ್ಮ ಮಹತ್ವವನ್ನು ಇನ್ನೂ ಉಳಿಸಿಕೊಂಡಿವೆ. ಅದಿರಲಿ; ಸಾಂಸ್ಕೃತಿಕ ಅಭಿವ್ಯಕ್ತಿಯ ರೂಪದ ಪ್ರತಿಭಟನೆ ಹಾಗೂ ಹಲವಾರು ಬಾರಿ ನೇರವಾದ ಜನಸಂಘಟಿತ ಪ್ರತಿಭಟನೆಗಳೆರಡಕ್ಕೂ ಸಾಕ್ಷಿಯಾಗಿ, ನೆಲೆಯಾಗಿ ಪಾತ್ರ ವಹಿಸಿರುವಂಥದ್ದು ರವೀಂದ್ರ ಕಲಾಕ್ಷೇತ್ರ. ಇಲ್ಲೂ ಕೂಡಾ ನಾವು ನಮ್ಮ ತಿಳಿವಿನ ಸ್ಪಷ್ಟತೆಗಾಗಿ ಎರಡು ಬಗೆಯ ವರ್ಗೀಕರಣಗಳನ್ನು ಮಾಡಿಕೊಳ್ಳಬೇಕಿದೆ. ಅದರಲ್ಲಿ ಒಂದು ಇಡೀ ನಾಡಿನ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ನೀತಿ, ಸಮಸ್ಯೆ, ಮುನ್ನೋಟಗಳಿಗೆ ನಡೆದಂಥ ಪ್ರತಿರೋಧವಾದರೆ, ಇನ್ನೊಂದು ಕಲಾಕ್ಷೇತ್ರದ ರಿಪೇರಿ, ಲೈಟಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಮೈಕ್, ಕುರ್ಚಿ-ಇತ್ಯಾದಿಗಳಿಗೆ ಸಂಬಂಧಿಸಿದಂಥವು.

ಇಲ್ಲಿ ನಾವು ಈ ಎರಡನೆಯ ಬಗೆಯ ಅಂಶಗಳನ್ನು ಚರ್ಚಿಸುವುದಕ್ಕಿಂತ ಇಡೀ ನಾಡಿನ ಜನಸಮುದಾಯದ ಹಿತವನ್ನು ಕುರಿತು ನಡೆದಂಥ ಪ್ರತಿರೋಧಗಳ ಕುರಿತು ವಿಸ್ತೃತವಾಗಿ ಚರ್ಚಿಸುವುದು ಮುಖ್ಯವಾದುದಾಗಿದೆ. ಕರ್ನಾಟಕದ ಸಾಂಸ್ಕೃತಿಕ ವಾತಾವರಣದಲ್ಲಿ ಜಾತ್ಯತೀತ ನೆಲೆಗೊಳ್ಳುವಲ್ಲಿ ಕಲಾಕ್ಷೇತ್ರದ ಪಾತ್ರ ದೊಡ್ಡದಿದೆ. ಕರ್ನಾಟಕದ ರಂಗಭೂಮಿಯಲ್ಲಿ ಕೋಮುವಾದಿ ಶಕ್ತಿಗಳು, ಶೋಷಕ ಶಕ್ತಿಗಳು, ಫ್ಯೂಡಲಿಸಂ ವೈಭವೀಕರಣಕ್ಕೆ ಒಳಗಾದದ್ದು ಬಹಳ ಕಡಿಮೆ. ಪ್ರಗತಿಪರ, ಜಾತ್ಯತೀತ, ಜನಪರ ವಿಚಾರಗಳು ಇಲ್ಲಿಯ ರಂಗಭೂಮಿಯಲ್ಲಿ ವಿಶಾಲವಾದ ಜಾಗ ಪಡೆದು ಅವುಗಳ ಅಲೆ ನಾಡಿನ ಉದ್ದಗಲಕ್ಕೆ ಪಸರಿಸಿದ್ದು ಇದೆ. ಇಂಥದ್ದೊಂದು ಪರಿಣಾಮ ರಂಗಭೂಮಿ, ಸಾಹಿತ್ಯದಲ್ಲಿ ಕಾಣಿಸಿಕೊಂಡ ತರಂಗಗಳ ರೂಪ ಪಡೆಯಲು ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಕೊಡುಗೆ ಅಪಾರವಾದದ್ದು. ಹಿಂದೆಲ್ಲ ಕಲಾಕ್ಷೇತ್ರದ ಮೆಟ್ಟಿಲುಗಳು ಬೆಂಗಳೂರಿನಲ್ಲಿದ್ದ ಚಿಂತಕ-ಬರಹಗಾರ-ಕಲಾವಿದರ ಚರ್ಚೆ, ವಾಗ್ವಾದ, ಹೊಸ ಆಲೋಚನೆ-ಯೋಜನೆಗಳನ್ನು ರೂಪಿಸುವ ತಾವು ಎಂಬಂತೆ ಸಂಜೆಯ ಹೊತ್ತಿಗೆ ಬದಲಾಗುತ್ತಿದ್ದದ್ದು ಉಂಟು. ಹಾಗೆಯೇ ಮೈಸೂರು, ಧಾರವಾಡ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬೆಳಗಾವಿ- ಹೀಗೆ ನಾಡಿನ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುತ್ತಿದ್ದಂತಹ ಸಾಹಿತಿ-ಹೋರಾಟಗಾರರು ಪರಸ್ಪರ ಭೇಟಿ ಮಾಡುವ, ಚರ್ಚೆಗಳಲ್ಲಿ ತೊಡಗುವ ತಾಣ ಕೂಡಾ ಈ ಮೆಟ್ಟಿಲುಗಳಾಗಿದ್ದವು. ಒಂದು ಕಾಲದಲ್ಲಿ ಲಂಕೇಶ್, ಕಂಬಾರ, ಕಾರ್ನಾಡ್, ಕೆ.ಎಂ.ಮರುಳಸಿದ್ದಪ್ಪ, ಕೆ.ವಿ.ನಾರಾಯಣ್, ಡಿ.ಆರ್.ನಾಗರಾಜ್, ಶೂದ್ರ, ಅಗ್ರಹಾರ, ಸಿಜಿಕೆ, ಪ್ರಸನ್ನ, ಶಿವಪ್ರಸಾದ್, ಸಿದ್ದಲಿಂಗಯ್ಯನವರಂಥ ದೈತ್ಯ ಪ್ರತಿಭೆಗಳೂ ದಶಕಗಟ್ಟಲೆ ಈ ಮೆಟ್ಟಿಲುಗಳ ಮೇಲೆ ಕುಳಿತು ಚರ್ಚಿಸಿದ್ದು ಉಂಟು. ಇವರೊಂದಿಗೆ ಆಗಾಗ್ಗೆ ಅನಂತಮೂರ್ತಿ, ಪ್ರೊ. ಚಂಪಾ, ಚನ್ನಣ್ಣ ವಾಲೀಕಾರ್, ದೇವನೂರು.. (ಬರೆದರೆ ಪಟ್ಟಿ ದೊಡ್ಡದಾಗುತ್ತದೆ) ಇಂಥವರೆಲ್ಲ ಬೆಂಗಳೂರಿಗೆ ಬಂದಾಗಲೆಲ್ಲ ಇಲ್ಲಿ ನೆರೆದು ಹಿರಿಕಿರಿಯ ಸಾಹಿತಿಗಳು- ನಾಟಕಕಾರರೊಂದಿಗೆ ಚರ್ಚಿಸುತ್ತಿದ್ದದ್ದು ಉಂಟು. ಇಂಥ ಚರ್ಚೆಗಳು ಅನೇಕ ಬಾರಿ ವಿವಿಧ ಬಗೆಯ ಚಳವಳಿ, ಪ್ರತಿಭಟನೆಗಳು ರೂಪುಗೊಳ್ಳಲು ಪ್ರತ್ಯೇಕವಾಗಿ-ಪರೋಕ್ಷವಾಗಿ ಕಾರಣವಾಗಿದ್ದು ಉಂಟು. ಇಂದಿಗೂ ಕರ್ನಾಟಕದ ಸಾಂಸ್ಕೃತಿಕ ವಾತಾವರಣದ ಮೈಲಿಗಲ್ಲಿನಂತೆ ಇರುವ ‘‘ಸಮುದಾಯ ಸಾಂಸ್ಕೃತಿಕ ಜಾಥಾ’’ದ ಬೀಜಗಳು ಮೊಳೆತು ಅದು ನಾಡಿನ ಉದ್ದಗಲಕ್ಕೆ ಕಂಪನವನ್ನು ಸೃಷ್ಟಿಸಲು ಇರುವ ಅನೇಕ ಕಾರಣಗಳಲ್ಲಿ ಕಲಾಕ್ಷೇತ್ರದ ಮೆಟ್ಟಿಲುಗಳ ಪಾತ್ರವೂ ದೊಡ್ಡದಿದೆ. ನಾಡಿನ ನಾಲ್ಕೂ ದಿಕ್ಕುಗಳಿಂದ ಹೊರಟಂತಹ ಈ ಜಾಥಾ ಹೋದಲ್ಲೆಲ್ಲ ಬಿತ್ತಿದ ವೈಚಾರಿಕ ಬೀಜಗಳಿಂದ ಹುಟ್ಟಿಬಂದ ಹೊಸ ತಲೆಮಾರಿನ ಕವಿಗಳು, ಬರಹ ಗಾರರು, ನಟ-ನಟಿಯರು, ನಿರ್ದೇಶಕರು, ಹಾಡುಗಾರರು, ನಾಟಕಕಾರರು ಅಪಾರ ಸಂಖ್ಯೆಯಲ್ಲಿ ಇಂದಿಗೂ ನಮ್ಮ ಕಣ್ಣ ಮುಂದಿದ್ದಾರೆ.

ಈ ಹೊಸ ಫಸಲಿನ ಪ್ರತಿಭಾವಂತರ ಪಡೆ ಮುಂದೆ ರೈತ, ದಲಿತ, ಬಂಡಾಯ ಚಳವಳಿಗಳ ಜೀವಸೆಲೆಗಳಂತೆ ಕೆಲಸ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರಂತೆಯೇ ಸೆಂಟ್ರಲ್ ಕಾಲೇಜಿನ ಅಂಗಳದಲ್ಲಿ ಜೀವ ತಳೆದಂಥ ಬೂಸಾ ಚಳವಳಿ, ಮೌಢ್ಯ ವಿರೋಧಿ ಯಾದ ಪೆರಿಯಾರ್ ಚಳವಳಿಗಳೆರಡೂ ದುಂಡಗಾಗಿದ್ದು, ರೆಂಬೆ-ಕೊಂಬೆಗಳ ಟಿಸಿಲನ್ನು ಮೂಡಿಸಿಕೊಂಡು ಪುಷ್ಟಿ ಪಡೆದದ್ದು ಕಲಾಕ್ಷೇತ್ರ ಹಾಗೂ ಟೌನ್ ಹಾಲ್‌ನ ಮೆಟ್ಟಿಲು ಹಾಗೂ ಒಳ ವೇದಿಕೆಗಳಲ್ಲಿ. ಇದೇ ಬೂಸಾ ಚಳವಳಿ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯಂಥ ಮಹತ್ವದ ಸಂಘಟನೆಯೊಂದು ವ್ಯವಸ್ಥಿತ ರೂಪ ಪಡೆ ಯಲು ಕಾರಣವಾದದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಡಿಎಸ್‌ಎಸ್ ಮೂಲಕ ತಳಸಮುದಾಯಗಳ ಸಂವೇದನೆ, ಹಾಡು, ನಾಟಕಗಳ ರೂಪದಲ್ಲಿ ಅಭಿವ್ಯಕ್ತಿಗೊಳ್ಳಲು ಕಲಾಕ್ಷೇತ್ರ ನೆಲೆಯಾದದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಇದಕ್ಕಾಗಿ ಮೊದಲು ಇಂದಿರಾ ಗಾಂಧಿಯವರ ನೇತೃತ್ವದ ಕೇಂದ್ರ ಸರಕಾರ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಇಡೀ ದೇಶದ ಉದ್ದಗಲಕ್ಕೆ ತೀವ್ರ ಖಂಡನೆ ಮತ್ತು ಪ್ರತಿಭಟನೆಗಳು ರೂಪುಗೊಂಡಿದ್ದು ಈಗ ಇತಿಹಾಸ. ಇಂಥ ತುರ್ತು ಪರಿಸ್ಥಿತಿಯ ವಿರೋಧಿ ಯೋಜನೆಗಳು ಕಾರ್ಯರೂಪಕ್ಕೆ ಬಂದದ್ದು ರವೀಂದ್ರ ಕಲಾಕ್ಷೇತ್ರ, ಮೈಸೂರು ಬ್ಯಾಂಕ್ ಸರ್ಕಲ್ ಹಾಗೂ ಟೌನ್ ಹಾಲ್‌ನ ಮೆಟ್ಟಿಲುಗಳ ಮೇಲೆ. ಅಂದಹಾಗೆ ತುರ್ತು ಪರಿಸ್ಥಿತಿಯ ವಿರುದ್ಧವಾಗಿ ಪ್ರದರ್ಶನ ಕಂಡಂಥ ಎಂ.ಎಸ್.ಸತ್ಯುರವರ ‘‘ಕುರಿ’’ ಹಾಗೂ ಕೆ.ವಿ.ನಾರಾಯಣ್ ಅವರ ‘‘ಹುತ್ತವ ಬಡಿದರೆ?’’ ನಾಟಕಗಳು ಹೋರಾಟಕ್ಕೆ ತಂದುಕೊಟ್ಟಂಥ ವೇಗವನ್ನು ಇಂದಿಗೂ ನೆನೆಯುವವರು ಇದ್ದಾರೆ. ಇಂಥ ನಾಟಕಗಳ ಪ್ರದರ್ಶನದ ನೆಲೆಯಾಗುವುದರೊಂದಿಗೆ ಕಲಾಕ್ಷೇತ್ರ ವೈಚಾರಿಕ ಸಭೆ, ಗೋಷ್ಠಿ, ಚರ್ಚೆಗಳಿಗೂ ಪೀಠಿಕೆಯಾದದ್ದು ಉಂಟು. ಆಗೆಲ್ಲ ಆಳುವ ಸರಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಕೆಂಗಣ್ಣು ಕಲಾಕ್ಷೇತ್ರದ ಸುತ್ತಮುತ್ತ ಗಿರಕಿ ಹೊಡೆದದ್ದೂ ಇದೆ.

ಕರ್ನಾಟಕ ಹಾಗೂ ಕೇಂದ್ರ ಸರಕಾರಗಳು ಕಾಲದಿಂದ ಕಾಲಕ್ಕೆ ತೆಗೆದುಕೊಂಡ ಸಾಂಸ್ಕೃತಿಕ-ಸಾಹಿತ್ಯಿಕ ನಿಲುವು-ನೀತಿ ಕಾರ್ಯಕ್ರಮಗಳು ಏಕಮುಖವಾಗಿದ್ದು ಜನತೆಯ ಒಟ್ಟಾರೆ ಆಶಯಗಳಿಗೆ ವಿರುದ್ಧವಾಗಿ ಇದ್ದಾಗಲೆಲ್ಲ ಕಲಾಕ್ಷೇತ್ರದ ಆವರಣ ಚುರುಕುಗೊಂಡಿದೆ. ಇಂಥ ನಿಲುವುಗಳನ್ನು ಖಂಡಿಸಿ, ಪ್ರತಿಭಟಿಸಿದ್ದೂ ಕೂಡಾ ಇಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ನಾಡಿನ ನೆಲ, ಜಲ, ಸಂಪನ್ಮೂಲ, ಜನರ ಉದ್ಯೋಗ ಇತ್ಯಾದಿಗಳ ಹಿತಾಸಕ್ತಿಯ ವಿಚಾರಗಳು ಬಂದಾಗ ಗೋಕಾಕ್ ಚಳವಳಿ ಹಾಗೂ ಕಾವೇರಿ ನೀರಿನ ಚಳವಳಿಗಳ ಸಂದರ್ಭದಲ್ಲೂ ಕಲಾಕ್ಷೇತ್ರದ ಆವರಣ ಕಾವು ಪಡೆದುಕೊಂಡು ಪ್ರತಿಭಟನೆ, ಅಭಿಪ್ರಾಯ ರೂಪಣೆಗಳಿಗೆ ಮುಂದಾದಂತಹ ಹಲವಾರು ಸಂದರ್ಭಗಳು ಇವೆ. ಗೋಕಾಕ್ ಚಳವಳಿಯ ಸಂದರ್ಭದಲ್ಲಂತೂ ರವೀಂದ್ರ ಕಲಾಕ್ಷೇತ್ರ ಆ ಚಳವಳಿಯ ಉಪ ಮುಖ್ಯ ಕೇಂದ್ರದಂತೆ ಕಾರ್ಯನಿರ್ವಹಿಸಿದ್ದನ್ನು ಈಗಲೂ ನೆನಪಿಸುವ ರಂಗಕರ್ಮಿಗಳು, ನಟ-ನಟಿಯರು, ರಂಗ ಪರಿಚಾರಕರು ಇದ್ದಾರೆ. ಕರ್ನಾಟಕದ ಸಾಹಿತ್ಯ ಹಾಗೂ ರಂಗಭೂಮಿಯ ನಡಿಗೆ ಮತ್ತು ದೃಷ್ಟಿಕೋನಗಳಲ್ಲಿ ಗುಣಾತ್ಮಕತೆ, ಪ್ರಜಾಸತ್ತೆಯ ಮೌಲ್ಯಗಳನ್ನು ತರುವಲ್ಲಿ, ಒಗ್ಗಿಸುವಲ್ಲಿ ಕೂಡಾ ಕಲಾಕ್ಷೇತ್ರದ ಕೊಡುಗೆಯಿದೆ. ಈ ನಿಟ್ಟಿನಲ್ಲಿ ಎರಡು ಪ್ರಮುಖ ಸಂಗತಿಗಳನ್ನು ನಾವು ಇಲ್ಲಿ ನೋಡಬಹುದಾಗಿದೆ. ಹಿಂದೆಲ್ಲ ನಾಟಕಗಳನ್ನು ವಿಶ್ಲೇಷಣೆಗೆ, ವಿಮರ್ಶೆಗೆ ಒಳಪಡಿಸುವಾಗ ‘‘ಕಲೆಗಾಗಿ ಕಲೆ’’ ಎಂಬ ವಾದವನ್ನು ಮುಂದಿಡುವ ‘‘ಇಸಂ’’ನ ಗುಂಪೊಂದು ದೊಡ್ಡದಾಗಿ ಇತ್ತು. ‘‘ನಾಟಕ ಎಂಬುದು ಜನರ ಒಟ್ಟಾರೆ ಅಭಿವ್ಯಕ್ತಿಯ ಒಂದು ಪಲಕು. ಅದು ಹುಟ್ಟಿರುವುದು ಜನರ ಸಂವೇದನೆಗಳನ್ನು ಕಲಾತ್ಮಕವಾಗಿ ಹೇಳಲೇ ಹೊರತು ಕೇವಲ ಕಲೆಯನ್ನು ಸೃಜಿಸಲಿಕ್ಕೆ ಅಲ್ಲ.ಕೆಲವೇ ಕೆಲವು ಹಿತಾಸಕ್ತಿಗಾಗಿ ನಾಟಕವನ್ನು ಕಲೆಗಾಗಿ ಕಲೆ ಎಂದು ನೋಡುವ ಪರಿಪಾಠ ಹೋಗಬೇಕು. ಜನರಿಗಾಗಿ ಕಲೆ ಎಂಬುದು ಮುಖ್ಯವಾದ ಸಂಗತಿ’’ ಎಂಬ ದೃಷ್ಟಿಕೋನವೇ ಮುಖ್ಯ ಎಂಬುದನ್ನು ನಿರೂಪಿಸಿ, ಇದರ ಭಾಗವಾಗಿ ಹಲವಾರು ನಾಟಕಗಳನ್ನು, ನಾಟಕೋತ್ಸವವನ್ನು, ಸೆಮಿನಾರ್‌ಗಳನ್ನು ನಡೆಸಿದಂಥ ವ್ಯಕ್ತಿಗಳ ದೊಡ್ಡ ದಂಡೇ ಕರ್ನಾಟಕದಲ್ಲಿದೆ. ಆಗೆಲ್ಲ ಇಂಥ ನಿಲುವಿನ ವ್ಯಕ್ತಿಗಳ ಕಾರ್ಯಸ್ಥಾನವಾಗಿ , ವೇದಿಕೆಯಾಗಿ ಇದ್ದದ್ದು ರವೀಂದ್ರ ಕಲಾಕ್ಷೇತ್ರ. ಇನ್ನು ಸಾಹಿತ್ಯದ ವಿಚಾರ ಬಂದಾಗಲೂ ಅಷ್ಟೆ. ‘‘ಸಾಹಿತ್ಯ ಸಮ್ಮೇಳನಗಳು ದುಡಿಯುವ ಜನರು ಇರುವಂಥ ಸೆಕ್ಯುಲರ್ ಸ್ಥಳಗಳಲ್ಲಿ ನಡೆಯಬೇಕು. ಇವು ಯಾರೋ ರಾಜನ ಆಶ್ರಯದಲ್ಲಿ, ಬಂಡವಾಳಿಗನ ಮರ್ಜಿಯಲ್ಲಿ, ಧಾರ್ಮಿಕ ಕೇಂದ್ರದ ಮುಖ್ಯಸ್ಥರ ಗುಡಾರದ ಆತಿಥ್ಯದಲ್ಲಿ ನಡೆಯಬಾರದು. ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಜನ ಸಮ್ಮೇಳನವನ್ನಾಗಿ ಮಾಡಬೇಕು. ಅದರಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳೆ, ಕುಶಲಕರ್ಮಿ- ಹೀಗೆ ಎಲ್ಲ ವರ್ಗದ ದುಡಿಯುವ ಜನರ ಹಿತಾಪರವನ್ನು ಚರ್ಚಿಸುವ ಗೋಷ್ಠಿಗಳು ಇರಬೇಕು’’ ಎಂಬುದು ನಾಡಿನ ಬಹುತೇಕರ ಆಶಯವಾಗಿತ್ತು. ಈ ಆಶಯವನ್ನು ಧಿಕ್ಕರಿಸಿ ಆಗ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ಡಾ. ಹಂಪಾ ನಾಗರಾಜಯ್ಯನವರು, ‘‘ಸಾಹಿತ್ಯದಲ್ಲಿ ದಲಿತ-ಬಲಿತ ಅಂತೆಲ್ಲೂ ಇರುವುದಿಲ್ಲ. ಇನ್ನು ಧರ್ಮ ಸಂಸ್ಥೆ, ರಾಜಾಶ್ರಯಗಳ ಪ್ರಶ್ನೆಯೂ ಇಲ್ಲಿ ಬರುವುದಿಲ್ಲ. ನಾವು ಧರ್ಮಸ್ಥಳದಲ್ಲೇ ಸಾಹಿತ್ಯ ಸಮ್ಮೇಳನ ನಡೆಸುವುದು’’ ಎಂಬ ಹೇಳಿಕೆ ಕೊಟ್ಟು ಅದರಂತೆ ಸಮ್ಮೇಳನಕ್ಕೆ ಗೋಪಾಲಕೃಷ್ಣ ಅಡಿಗರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಕಾರ್ಯಕ್ರಮಕ್ಕೆ ಮುಂದಾಗಿದ್ದು ಈಗ ಇತಿಹಾಸ. ಆಗ ಜನಪರ ಹಾಗೂ ಪ್ರಜಾಪ್ರಭುತ್ವದ ಪರವಿದ್ದ ಸಾಹಿತ್ಯ, ಕಲೆ, ಹೋರಾಟದ ಹಿನ್ನೆಲೆಯ ಬಹುಜನರು ಸಿಡಿದೆದ್ದು ಪರ್ಯಾಯ ಸಮ್ಮೇಳನವನ್ನು ನಡೆಸಿದ್ದು, ಅದರಿಂದ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಿದ್ದು ಎಲ್ಲರಿಗೂ ತಿಳಿದಿದೆ. ಈ ಬಗೆಯ ನಿಲುವು, ಆಲೋಚನೆಗಳ ಹುಟ್ಟುವಿಕೆ, ಪರ್ಯಾಯ ಸಮ್ಮೇಳನದ ಕಾರ್ಯರೂಪಣೆಗಳಲ್ಲಿ ಅಂದಿಗೆ ಸೆಂಟ್ರಲ್ ಕಾಲೇಜಿನಷ್ಟೇ ಪ್ರಮುಖ ಪಾತ್ರವನ್ನು ರವೀಂದ್ರ ಕಲಾಕ್ಷೇತ್ರ ಕೂಡಾ ವಹಿಸಿದೆ. ಮುಂದೆ ಪರ್ಯಾಯ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯ, ಕಲೆ, ರಂಗಭೂಮಿಯ ವ್ಯಾಪಕ ಸಾಧ್ಯತೆಗಳನ್ನು ಇಲ್ಲಿ ವಿವರಿಸಿದರೆ ಅದು ದೊಡ್ಡದೊಂದು ಸಾಂಸ್ಕೃತಿಕ ಚರಿತ್ರೆಯಾಗಿಬಿಡುತ್ತದೆ. ಇರಲಿ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೇರ ಪ್ರತಿಭಟನೆಗಳ ವಿಚಾರದಲ್ಲಿ ಪಿ.ವಿ.ನಾರಾಯಣ್ ಅವರ ‘ಧರ್ಮಕಾರಣ’ ಪುಸ್ತಕವನ್ನು ಬ್ಯಾನ್ ಮಾಡಿದ್ದರ ವಿರುದ್ಧ ನಡೆದ ಪ್ರತಿಭಟನೆಯ ಸಂಗತಿಯನ್ನು ಇಲ್ಲಿ ನೆನಪು ಮಾಡಿಕೊಳ್ಳಲೇಬೇಕಿದೆ. ಈ ಪುಸ್ತಕಕ್ಕೆ ಸರಕಾರ ನಿಷೇಧ ಹೇರಿದಾಗ ಲಂಕೇಶ್ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಸಾಹಿತಿಗಳು, ನಾಟಕಕಾರರು, ಸಾಮಾಜಿಕ ಆರೋಗ್ಯವನ್ನು ಕನಸುವ ಪ್ರಗತಿಪರರು, ಹೋರಾಟಗಾರರು ಸೇರಿ ಪ್ರತಿಭಟಿಸಿದ್ದು ಉಂಟು. ಹಾಗೆಯೇ ಎಚ್.ಎಸ್.ಶಿವಪ್ರಕಾಶ್ರವರ ‘ಮಹಾಚೈತ್ರ’ ನಾಟಕದ ಬ್ಯಾನ್ ವಿಚಾರದಲ್ಲೂ ಇಲ್ಲಿ ಪ್ರತಿಭಟನೆಗಳು ನಡೆದದ್ದು ಇದೆ. ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿಯವರ ಕೊಲೆ ನಾಗಮಂಗಲದಲ್ಲಿ ನಡೆದಾಗ, ‘‘ಇದು ಜನರ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಆಳುವ ಜನರು ನಡೆಸಿದ ದಮನಕಾರಿ ಕೃತ್ಯ’’ ಎಂದು ಪ್ರಜ್ಞಾವಂತರೆಲ್ಲರೂ ರವೀಂದ್ರ ಕಲಾಕ್ಷೇತ್ರದಲ್ಲಿ ನೆರೆದು ಬೃಹತ್ ಪ್ರತಿಭಟನೆಯನ್ನು ಮಾಡಿ ಜನಪ್ರತಿನಿಧಿಗಳ, ರಾಜಕಾರಣಿಗಳ ಅಟ್ಟಹಾಸವನ್ನು ಖಂಡಿಸಿದ್ದು ಉಂಟು.

ಇನ್ನು ರಂಗ ನಿರ್ದೇಶಕರು, ಕರ್ನಾಟಕ ಸಾಂಸ್ಕೃತಿಕ ವಲಯದಲ್ಲಿ ಪ್ರಮುಖ ಹೆಸರು ಉಳ್ಳವರೂ ಆಗಿರುವ, ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಹಾಗೂ ಪ್ರಸನ್ನರವರು ತಮ್ಮ ಕ್ರಿಯಾಶೀಲತೆ, ಪ್ರೀತಿ, ಸಿಟ್ಟು ಎಲ್ಲವಕ್ಕೂ ರವೀಂದ್ರ ಕಲಾಕ್ಷೇತ್ರವನ್ನೇ ವೇದಿಕೆ ಮಾಡಿಕೊಂಡು ದುಡಿದವರು. ರಾಷ್ಟ್ರೀಯ ನಾಟಕ ಶಾಲೆಯನ್ನು ಬೆಂಗಳೂರಿಗೆ ತರುವುದರಿಂದ ಮೊದಲ್ಗೊಂಡು ಇತ್ತೀಚೆಗೆ ಕೈಮಗ್ಗದ ವಸ್ತ್ರಗಳ ಬಳಕೆ, ಉತ್ತೇಜನ, ಕರ ನಿರಾಕರಣೆಯ ಉಪವಾಸ ಸತ್ಯಾಗ್ರಹಗಳ ತನಕ ಪ್ರಸನ್ನರವರು ಕಲಾಕ್ಷೇತ್ರದಲ್ಲಿ ನಡೆಸಿದ್ದು ಇದೆ. ಹಿಂದೆ ಸಿಜಿಕೆಯವರೂ ಕೂಡಾ ಇದೇ ರೀತಿ ಹತ್ತಾರು ಪ್ರತಿಭಟನೆಗಳನ್ನು ಇಲ್ಲಿ ನಡೆಸಿದ್ದು ಉಂಟು. ನಾಡಿನ ಸಾಂಸ್ಕೃತಿಕ ನೀತಿಗಳ ಲೋಪ ಹಾಗೂ ನಿರ್ಲಕ್ಷದ ವಿರುದ್ಧ ಸಿಜಿಕೆಯವರು ನಡೆಸಿದ ನೂರೈವತ್ತು ದಿನಗಳ ನಿರಂತರ ನಾಟಕೋತ್ಸವ ಪ್ರತಿಭಟನೆ ತೀರಾ ಗಮನಾರ್ಹ ಸಂಗತಿಯಾಗಿತ್ತು. ತನ್ನ ಅಸ್ತಿತ್ವದ ಐವತ್ತು ಚಿಲ್ಲರೆ ವರ್ಷಗಳಲ್ಲಿ ರವೀಂದ್ರ ಕಲಾಕ್ಷೇತ್ರ ಇಂಥವೆ ನೂರಾರು ಬಗೆಯ ಪ್ರತಿಭಟನೆ, ಖಂಡನೆ, ಧಿಕ್ಕಾರಗಳಿಗೆ ವೇದಿಕೆಯಾದದ್ದೂ ಇದೆ. ಅವನ್ನೆಲ್ಲ ಇಲ್ಲಿ ದಾಖಲಿಸಲು ಸ್ಥಳಾವಕಾಶದ ಮಿತಿಯೂ ಇದೆ. ರವೀಂದ್ರ ಕಲಾಕ್ಷೇತ್ರ ಕೇವಲ ಸರಕಾರದ ಕಾರ್ಯಕ್ರಮಗಳು ಹಾಗೂ ರಂಗಭೂಮಿಯ ಚಟುವಟಿಕೆಗಳಿಗಷ್ಟೇ ಸೀಮಿತವಲ್ಲ. ಇದು ಜನರ ಹಿತಗಳಿಗೆ ಧಕ್ಕೆಯಾದಾಗ ಮೈಕೊಡವಿ ಪ್ರತಿಭಟಿಸಿದಂಥ ವಿಶಿಷ್ಟ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೆ ಕಲಾಕ್ಷೇತ್ರ ಸರಕಾರದ ಸಾಂಸ್ಥಿಕ ಘಟಕವಾಗಿದ್ದರೂ ಅದು ಜನಪರ ಹೋರಾಟಗಳಿಗೆ ವೇದಿಕೆಯಾಗಿರುವುದು ಅದರ ನಿಜವಾದ ಹೆಗ್ಗಳಿಕೆ. ಇದರ ಹಿಂದೆ ಸಾಹಿತಿಗಳು, ಚಿಂತಕರು, ರಂಗಕರ್ಮಿಗಳು, ಹೋರಾಟಗಾರರು, ನಟ-ನಟಿಯರು, ಹಾಡುಗಾರರು, ಪ್ರಗತಿಪರರು ಇತ್ಯಾದಿ ವರ್ಗಗಳಿಗೆ ಸೇರಿದ ಹಲವಾರು ಸೃಜನಶೀಲ ಹಾಗೂ ಪ್ರಜಾ ಪ್ರಭುತ್ವಾದಿ ಮನಸ್ಸುಗಳು ನಿರಂತರವಾಗಿ ಕೆಲಸ ಮಾಡಿವೆ ಎಂಬುದನ್ನು ವಿವರಿಸುವು ದಷ್ಟೇ ಈ ಲೇಖನದ ಉದ್ದೇಶ.

ತನ್ನ ಅಸ್ತಿತ್ವದ ಐವತ್ತು ಚಿಲ್ಲರೆ ವರ್ಷಗಳಲ್ಲಿ ರವೀಂದ್ರ ಕಲಾಕ್ಷೇತ್ರ ನೂರಾರು ಬಗೆಯ ಪ್ರತಿಭಟನೆ, ಖಂಡನೆ, ಧಿಕ್ಕಾರಗಳಿಗೆ ವೇದಿಕೆಯಾದದ್ದೂ ಇದೆ. ರವೀಂದ್ರ ಕಲಾಕ್ಷೇತ್ರ ಕೇವಲ ಸರಕಾರದ ಕಾರ್ಯಕ್ರಮಗಳು ಹಾಗೂ ರಂಗ ಭೂಮಿಯ ಚಟುವಟಿಕೆಗಳಿಗಷ್ಟೇ ಸೀಮಿತವಲ್ಲ. ಇದು ಜನರ ಹಿತಗಳಿಗೆ ಧಕ್ಕೆಯಾದಾಗ ಮೈಕೊಡವಿ ಪ್ರತಿಭಟಿಸಿದಂಥ ವಿಶಿಷ್ಟ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೆ ಕಲಾಕ್ಷೇತ್ರ ಸರಕಾರದ ಸಾಂಸ್ಥಿಕ ಘಟಕವಾಗಿದ್ದರೂ ಅದು ಜನಪರ ಹೋರಾಟಗಳಿಗೆ ವೇದಿಕೆಯಾಗಿರುವುದು ಅದರ ನಿಜವಾದ ಹೆಗ್ಗಳಿಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)