varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ನಮ್ಮ ಕಣ್ಣ ಮುಂದಿನ ಬೆಳಕು

ಗಾಂಧೀಜಿ

ವಾರ್ತಾ ಭಾರತಿ : 14 Dec, 2018
ಎನ್.ಆರ್.ವಿಶುಕುಮಾರ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಗುವನಹಳ್ಳಿಯಲ್ಲಿ 1958ರಲ್ಲಿ ಜನಿಸಿದ ಇವರು, ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನಗುವನಹಳ್ಳಿಯಲ್ಲಿ ಪೂರೈಸಿದರು. ಪಿಯುಸಿಯನ್ನು ಕನಕಪುರದಲ್ಲಿ, ಬಿಬಿಎಂ ಅನ್ನು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಮತ್ತು ಬಿಎಸ್, ಎಂಎಸ್ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದವರು. ನಂತರ ‘ಲಂಕೇಶ್ ಪತ್ರಿಕೆ’ಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು, ರಾಜಕೀಯ ವರದಿಗಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ಆರಂಭದಲ್ಲಿ ಕವಿತೆಗಳನ್ನು ಕೂಡ ಬರೆಯುತ್ತಿದ್ದರು. ಆನಂತರ ಮಂಡ್ಯಕ್ಕೆ ತೆರಳಿ, ‘ಕನ್ನಂಬಾಡಿ’ ಎಂಬ ಜಿಲ್ಲಾ ವಾರಪತ್ರಿಕೆಯನ್ನು ಪ್ರಾರಂಭಿಸಿ, ಸಂಪಾದಕ-ಪ್ರಕಾಶಕರಾಗಿ ಹೆಸರು ಮಾಡಿದವರು. ಪತ್ರಕರ್ತ ವೃತ್ತಿಯ ನಂತರ, 1990ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಸರಕಾರಿ ಸೇವೆಗೆ ಸೇರಿದ ಇವರು, ಮೈಸೂರು ಜಿಲ್ಲಾ ವಾರ್ತಾಧಿಕಾರಿಯಾಗಿ, ‘ಜನಪದ’ ಮಾಸಿಕದ ಸಂಪಾದಕರಾಗಿ, ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ರಾಜ್ಯ ಬಜೆಟ್ ಮೇಲಿನ ಭಾಷಣವನ್ನು 15ಕ್ಕೂ ಹೆಚ್ಚು ಬಾರಿ ಅನುವಾದಿಸಿರುವ ಇವರು, ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ವಾರ್ತಾ ಇಲಾಖೆಯ ಮೂಲಕ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದವರು. ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘‘ನಾನು ಜಗತ್ತಿಗೆ ಯಾವುದೇ ಹೊಸ ವಿಚಾರಗಳನ್ನು ಹೇಳುತ್ತಿಲ್ಲ. ನಮ್ಮ ಧರ್ಮ, ಸಂಸ್ಕೃತಿ ಜನಜೀವನಗಳಲ್ಲಿ ಹೇಳಿರುವುದನ್ನೇ ಜಗತ್ತಿಗೆ ಪುನಃ ಹೇಳುತ್ತಿದ್ದೇನೆ’’. ಇದು ಗಾಂಧೀಜಿಯವರ ನೇರವಾದ ಮರೆ ಮಾಚದಿರುವ ಸತ್ಯ ಸಂಗತಿಗಳ ವಿರಾಟ ಸ್ವರೂಪ. ಜಗತ್ತಿಗೆ ನಿಮ್ಮ ಸಂದೇಶವೇನು ಎಂದು ಎಲ್ಲರೂ ಕೇಳುವಾಗ ಅವರು ‘‘ನನ್ನ ಜೀವನವೇ ನನ್ನ ಸಂದೇಶ’’ ಎಂದು ಹೇಳಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ನಾನು ಅನುಸರಿಸದಿರುವ ಆಚಾರ ವಿಚಾರಗಳನ್ನು ನಾನು ಜಗತ್ತಿಗೆ ಹೇಳಲಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಅದನ್ನು ನೋಡಿ ನಿಮಗೆ ಒಳಿತು ಎನ್ನುವುದನ್ನು ನೀವು ಒಪ್ಪಿಕೊಂಡು ಅನುಸರಿಸಬಹುದು ಎನ್ನುವ ಸರಳ ಸಂಗತಿಗಳನ್ನು ಅವರು ಹೇಳುತ್ತಾರೆ.

ಗಾಂಧೀಜಿ-ಮಹಾತ್ಮಾ ಗಾಂಧೀಜಿಯವರು ಹುಟ್ಟಿ 2018ರ ಅಕ್ಟೋಬರ್ 2ಕ್ಕೆ 150 ವರ್ಷಗಳಾಗುತ್ತಿವೆ. ಭಾರತ ದೇಶಾದ್ಯಂತ ಅವರ ಜನ್ಮಾಚರಣೆಯ ವರ್ಷವನ್ನು ಸಂಭ್ರಮ-ಸಡಗರಗಳಿಂದ ಆಚರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುತ್ತೋಲೆಯನ್ನು ಹೊರಡಿಸಿವೆ. ಆದರೆ ನಮ್ಮ ಮಹಾತ್ಮರ ಜನ್ಮವರ್ಷಾಚರಣೆ ಸುತ್ತೋಲೆ ಸಂಸ್ಕೃತಿಯನ್ನು ಮೀರಬೇಕಾಗಿರುವ ಸಂದರ್ಭ ಇದು. ಭಾರತೀಯರಾದ ನಮಗೆ ನಮ್ಮ ಮಹತೃಗಳ ಅರಿವೇ ಇಲ್ಲದಿರುವುದು ಒಂದು ವಿಷಾದದ ಸಂಗತಿ. ಇಡೀ ವಿಶ್ವವೇ ಮಾನ್ಯ ಮಾಡಿರುವ ಧರ್ಮ, ಸಂಸ್ಕೃತಿ, ವಿಚಾರಗಳನ್ನು ನಾವು ಕಾಲ ಬುಡದಲ್ಲಿ ಹಾಕಿ ಕುಳಿತಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಇಡೀ ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ; ಮಾನವ ಜನಾಂಗದ ಒಳಿತಿಗಾಗಿ ಒಂದು ಧರ್ಮವನ್ನೇ ಆವಿಷ್ಕರಿಸಿ ನೀಡಿದ ಗೌತಮ ಬುದ್ಧನನ್ನೇ ನಾವು ಮರೆತು ಮೆರೆಯುತ್ತಿದ್ದೇವೆ. ಹುಸಿ ಸಂಸ್ಕೃತಿಗಳನ್ನು ಹೆಗಲ ಮೇಲೇರಿಸಿಕೊಂಡು ಹುಚ್ಚು ಉನ್ಮಾದದಿಂದ ಕುಣಿಯುತ್ತಿದ್ದೇವೆ. ಇದು ಮಹಾತ್ಮಾ ಗಾಂಧೀಜಿಯವರಿಗೂ ಅನ್ವಯಿಸುವ ವಿಚಾರ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅಧ್ಯಕ್ಷಗಿರಿಯ ಪದಗ್ರಹಣ ಸಮಾರಂಭದಲ್ಲಿ ನಮ್ಮ ಮಹಾತ್ಮಾ ಗಾಂಧೀಜಿಯವರನ್ನು ನೆನಪಿಸಿಕೊಂಡು ‘‘ನನ್ನ ಹೋರಾಟದ ಸ್ಫೂರ್ತಿಯ ನೆಲೆ ಮಹಾತ್ಮಾ ಗಾಂಧೀಜಿ’’ ಎಂದು ಬಣ್ಣಿಸಿದ್ದರು. ಇಡೀ ಜಗತ್ತು ಇಂದು ಗಾಂಧೀಜಿಯವರ ತತ್ವ ವಿಚಾರಗಳನ್ನು ಒಪ್ಪಿಕೊಂಡಿದೆ. ಅವರು ಪ್ರತಿಪಾದಿಸಿದ ಅಹಿಂಸಾ ಮಾರ್ಗದ ಹೋರಾಟವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ. ಭಾರತದಂತಹ ಬೃಹತ್ ರಾಷ್ಟ್ರದ ದಾಸ್ಯವನ್ನು ರಕ್ತಪಾತವಿಲ್ಲದೆ ಮುಕ್ತಿಗೊಳಿಸಿದ ಮಹಾನ್ ವ್ಯಕ್ತಿ ನಮ್ಮ ಗಾಂಧೀಜಿ. ಕೇವಲ ಅಹಿಂಸಾ ಮಾರ್ಗದಿಂದಲೇ ಆಂಗ್ಲರ ಮನವೊಲಿಸಿ ಸ್ವಾತಂತ್ರ ಪಡೆದುಕೊಂಡ ಈ ಅಚ್ಚರಿಯ ಘಟನೆಯನ್ನು ಜಗತ್ತಿನ ಅದ್ಭುತ ಚರಿತ್ರೆ ಎಂದು ಒಪ್ಪಿಕೊಳ್ಳಲಾಗಿದೆ. ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಇಡೀ ವಿಶ್ವವೇ ಮಾನ್ಯತೆ ನೀಡಿ ಅವರ ಜನ್ಮ ದಿನಾಚರಣೆಯಾದ ಅಕ್ಟೋಬರ್ 2ನ್ನು ವಿಶ್ವ ಸಂಸ್ಥೆಯು ವಿಶ್ವ ಅಹಿಂಸಾ ದಿನವೆಂದು ಘೋಷಿಸಿದೆ.

 ಗಾಂಧೀಜಿಯವರು ಮೇಲ್ನೋಟಕ್ಕೆ ಬಹಳ ಸರಳ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಅವರು ನಾವು ನೀವಂದುಕೊಂಡಷ್ಟು ಸರಳ ವ್ಯಕ್ತಿಯಲ್ಲ. ಅವರ ವಿಚಾರಗಳೂ ಸಹ ಸರಳವಲ್ಲ. ಮೇಲ್ನೋಟಕ್ಕೆ ಬಹಳ ಸರಳವಾಗಿ ಕಾಣುವ ಅವರ ಆಚಾರ-ವಿಚಾರಗಳ ಅಡಿಯಲ್ಲಿ ಸಾವಿರಾರು ವರ್ಷಗಳ ವೈಚಾರಿಕ ಸಂಘರ್ಷವಿದೆ. ಜಗತ್ತಿನ ಎಲ್ಲ ಪುರಾತನ ಸಂಸ್ಕೃತಿಗಳ ಒಳಿತು ಕೆಡುಕುಗಳ ಅಧ್ಯಯನದ ಸೆಲೆಯಿದೆ. ಜಗತ್ತಿನ ಎಲ್ಲ ಘನ ವಿಚಾರಗಳು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅದರ ಹಿಂದೆ ಸಹಸ್ರ ವರ್ಷಗಳ ಕಲೆ, ಸಂಸ್ಕೃತಿ, ಧರ್ಮ, ಜನಜೀವನಗಳ ಅಧ್ಯಯನ ಹಾಗೂ ಅದರಿಂದ ಕಂಡುಕೊಂಡ ಸತ್ಯದ ತಂಬೆಳಕಿದೆ. ಬುದ್ಧನ ವಿಚಾರಗಳು ಸಾವಿರಾರು ವರ್ಷಗಳ ನಂತರವೂ ತನ್ನ ವೈಚಾರಿಕ ಹೊಳಪನ್ನು ಕಳೆದುಕೊಂಡಿಲ್ಲದಿರುವುದೇ ಇದಕ್ಕೆ ಸಾಕ್ಷಿ. ಕ್ರಿಸ್ತಪೂರ್ವದಲ್ಲಿಯೇ ಗೌತಮ ಬುದ್ಧರು ಹೇಳಿದ ವಿಚಾರಗಳನ್ನೇ ಮಹಾತ್ಮಾ ಗಾಂಧೀಜಿಯವರು 20ನೇ ಶತಮಾನದಲ್ಲಿ ಹೊಸ ರೂಪದಲ್ಲಿ ಹೇಳಿದ್ದಾರೆ. ಗಾಂಧೀಜಿ ಯವರೇ ಹೇಳಿಕೊಂಡಿರುವಂತೆ ‘‘ನಾನು ಜಗತ್ತಿಗೆ ಯಾವುದೇ ಹೊಸ ವಿಚಾರಗಳನ್ನು ಹೇಳುತ್ತಿಲ್ಲ. ನಮ್ಮ ಧರ್ಮ, ಸಂಸ್ಕೃತಿ ಜನಜೀವನಗಳಲ್ಲಿ ಹೇಳಿರುವುದನ್ನೇ ಜಗತ್ತಿಗೆ ಪುನಃ ಹೇಳುತ್ತಿದ್ದೇನೆ’’. ಇದು ಗಾಂಧೀಜಿಯವರ ನೇರವಾದ ಮರೆ ಮಾಚದಿರುವ ಸತ್ಯ ಸಂಗತಿಗಳ ವಿರಾಟ ಸ್ವರೂಪ. ಜಗತ್ತಿಗೆ ನಿಮ್ಮ ಸಂದೇಶವೇನು ಎಂದು ಎಲ್ಲರೂ ಕೇಳುವಾಗ ಅವರು ‘‘ನನ್ನ ಜೀವನವೇ ನನ್ನ ಸಂದೇಶ’’ ಎಂದು ಹೇಳಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ನಾನು ಅನುಸರಿಸದಿರುವ ಆಚಾರ ವಿಚಾರಗಳನ್ನು ನಾನು ಜಗತ್ತಿಗೆ ಹೇಳಲಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಅದನ್ನು ನೋಡಿ ನಿಮಗೆ ಒಳಿತು ಎನ್ನುವುದನ್ನು ನೀವು ಒಪ್ಪಿಕೊಂಡು ಅನುಸರಿಸಬಹುದು ಎನ್ನುವ ಸರಳ ಸಂಗತಿಗಳನ್ನು ಅವರು ಹೇಳುತ್ತಾರೆ.

 ಇಂದಿನ ಆಧುನಿಕ ಜಗತ್ತಿನಲ್ಲಿ ಮಹಾತ್ಮಾ ಗಾಂಧೀಜಿಯವರ ವಿಚಾರಗಳು ಅನ್ವಯಿಸುತ್ತವೆಯೇ ಎಂದು ಹಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಜಗತ್ತು ಒಂದು ಒಪ್ಪಿತ ವಿಚಾರದ ಸುತ್ತವೇ ಸುಳಿದಾಡಬೇಕು. ಅದನ್ನು ಒಪ್ಪಿಕೊಂಡೇ ಬದುಕಬೇಕು. ಇದು ಜಗದ ನಿಯಮ. ಗಾಂಧೀಜಿ ಹೇಳಿರುವ ಸತ್ಯ, ಶಾಂತಿ, ಅಹಿಂಸೆಗಳು ಇಂದಿನ ವಿಚಾರಗಳೇನಲ್ಲ. ಮಾನವನ ಉಗಮದ ಜೊತೆ ಜೊತೆಯಲ್ಲೇ ಉಳಿದು ಬೆಳೆದು ಬರುತ್ತಿರುವ ಸತ್ಯ ವಿಚಾರಗಳು. ಸತ್ಯವನ್ನು ಮರೆತು ನಾವು ಬದುಕಲು ಸಾಧ್ಯವೇ? ಶಾಂತಿಯನ್ನು ಬಿಟ್ಟು ನಾವು ಮುನ್ನಡೆಯಲು ಸಾಧ್ಯವೇ? ಅಹಿಂಸೆಯನ್ನು ತೊರೆದು ಜೀವಿಸಲು ಸಾಧ್ಯವೇ? ಇವೆಲ್ಲವೂ ಜಗತ್ತು ಒಪ್ಪಿಕೊಂಡಿರುವ ಮೂಲ ವಿಚಾರಗಳು. ಇದನ್ನು ಆಧರಿಸಿಯೇ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಇವುಗಳನ್ನು ಬಿಟ್ಟು ನಾವು ನಡೆಯುತ್ತೇವೆ ಎಂದರೆ ಅದು ವಿನಾಶದ ಕಡೆಗಿನ ನಡಿಗೆಯೇ ಹೊರತು ಮತ್ತೇನಲ್ಲ.

ಗಾಂಧೀಜಿಯವರ 150ನೇ ವರ್ಷಾಚರಣೆ ನಮ್ಮ ಬದುಕಿನ ರೀತಿ ರಿವಾಜುಗಳನ್ನು ಮರು ಪರಿಶೀಲಿಸಿಕೊಳ್ಳಲು ಬಂದಿರುವ ಒಂದು ಸುಸಂದರ್ಭ ಎಂದೇ ನಾವು ಈಗ ಪರಿಭಾವಿಸಬೇಕು. ಭಾರತದಂತಹ ಬೃಹತ್ ಜನಸಂಖ್ಯೆಯ ದೇಶಕ್ಕೆ ಗಾಂಧಿಮಾರ್ಗದ ಹೊರತು ಅನ್ಯ ಮಾರ್ಗವೇ ಇಲ್ಲ. ಗಾಂಧಿ ಪ್ರಣೀತ ಗ್ರಾಮೋದ್ಯೋಗಗಳು ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಹಳ್ಳಿಗಳ ಬದುಕನ್ನು ಮರೆತಿರುವ ಈ ಸಂದರ್ಭದಲ್ಲಿ ನಗರೀಕರಣದ ದುಷ್ಪರಿಣಾಮಗಳು ನಮ್ಮ ಕಣ್ಣಮುಂದೆಯೇ ಕುಣಿಯುತ್ತಿವೆ. ಕುಡಿಯಲು ನೀರಿಲ್ಲದ, ನಡೆದಾಡಲು ಜಾಗವಿಲ್ಲದ, ಉಸಿರಾಡಲು ಶುದ್ಧ ಗಾಳಿಯಿಲ್ಲದ ನಗರಗಳು ನಾವೇ ಸೃಷ್ಟಿಸಿಕೊಳ್ಳುತ್ತಿರುವ ನಮ್ಮ ಪಾಲಿನ ನರಕಗಳು. ನೂರು ನಗರಗಳನ್ನು ಸೃಷ್ಟಿಸಲು ಸಾವಿರ, ಲಕ್ಷ ಹಳ್ಳಿಗಳನ್ನು ಬಲಿಕೊಡುವುದು ನಮಗೆ ಥರವಲ್ಲದ ಸಂಸ್ಕೃತಿ ಎಂದು ಗಾಂಧೀಜಿಯವರು ನೆಹರೂರವರ ನಗರೀಕರಣ ಮತ್ತು ಕೈಗಾರೀಕರಣದ ನೀತಿಯ ಬಗ್ಗೆ ಬಹಳ ಹಿಂದೆಯೇ ಟೀಕಿಸಿದ್ದರು. ಇಂದು ಗಾಂಧೀಜಿಯವರ ಮಾತುಗಳು ನಿಜವಾಗುತ್ತಿವೆ. ನೆಹರೂರವರ ನೀರಾವರಿ ಕ್ರಾಂತಿಗೆ ಮುನ್ನುಡಿ ಬರೆದ ಪಂಜಾಬ್ ಇಂದು ಮಾದಕ ವ್ಯಸನಿಗಳ ಮತ್ತು ಕ್ಯಾನ್ಸರ್ ಪೀಡಿತರ ಕೇಂದ್ರವಾಗಿದೆ. ಕೈಗಾರೀಕರಣ, ಬೃಹತ್ ಉದ್ಯೋಗೀಕರಣದ ಹುಚ್ಚಿನಲ್ಲಿ ಮಿಂದೇಳುತ್ತಿರುವ ನಮ್ಮ ಬೃಹತ್ ನಗರಗಳು ಅಶಾಂತಿಯ, ಅಸಹನೆಯ, ಅಮಾನವೀಯತೆಯ, ಅಶುಚಿಯ ಕೊಂಪೆಗಳಾಗುತ್ತಿವೆ.

ನಾವು ಎದುರಿಸುತ್ತಿರುವ ನಮ್ಮ ಇಂದಿನ ಹಲವಾರು ಸಮಸ್ಯೆಗಳಿಗೆ ಪರಿಹಾರಗಳು ಗಾಂಧಿ ಮಾರ್ಗದಲ್ಲಿ ದೊರೆಯುತ್ತವೆ. ಹಳ್ಳಿಗಳ ಬದುಕು ಹಸನಾಗದೇ ಭಾರತದ ಬದುಕು ಹಸನಾಗದು ಎಂದು ಗಾಂಧೀಜಿ ಗಾಢವಾಗಿ ನಂಬಿದ್ದರು. ಚರಕದಂತಹ ಸರಳ ಯಂತ್ರದ ಮೂಲಕ ಭಾರತದ ಲಕ್ಷಾಂತರ ಹಳ್ಳಿಗಳಿಗೆ ಸ್ವಉದ್ಯೋಗ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಟ್ಟಿದ್ದರು. ಉದ್ಯೋಗ, ಆಡಳಿತ, ವಿಜ್ಞಾನ, ತಂತ್ರಜ್ಞಾನ, ಪರಿಸರ, ಕೃಷಿ, ನೀರಾವರಿ ಹೀಗೆ ನಮ್ಮ ಬದುಕಿನ ಯಾವುದೇ ಪುಟಗಳನ್ನು ತೆರೆದರೂ ಅಲ್ಲಿ ಗಾಂಧೀಜಿ ವಿಚಾರಗಳನ್ನು ಅನ್ವಯಿಸಿಕೊಳ್ಳಬಹುದು. ಆದರೆ ಅವುಗಳನ್ನು ಅನ್ವಯಿಸಿಕೊಳ್ಳುವ ವಿವೇಕ ಮತ್ತು ಬದ್ಧತೆ ನಮಗೆ ಮತ್ತು ನಮ್ಮನ್ನಾಳುತ್ತಿರುವ ನಾಯಕರಿಗೆ ಇರಬೇಕು. ಅದಿಲ್ಲದ ಹೊರತು ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳಲ್ಲಿ ಪೊಳ್ಳು ಪೋಷಣೆಗಳಾಗುತ್ತವೆ ಮತ್ತು ಹುಸಿ ಸೌಧದ ಹೆಸರಿನ ಡಂಬಾಚಾರದ ಬದುಕಾಗುತ್ತದೆ. ಹನ್ನೆರಡನೇ ಶತಮಾನದಲ್ಲಿ ‘‘ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ’’ ಎಂದು ಬಸವಣ್ಣನವರು ಹೇಳಿದ ಮಾತುಗಳೇ 20ನೇ ಶತಮಾನದಲ್ಲಿ ಗಾಂಧೀಜಿಯವರ ‘‘ಆಚಾರಕ್ಕೆ ಅಳಿವುಂಟು ವಿಚಾರಕ್ಕೆ ಅಳಿವಿಲ್ಲ’’ ಎನ್ನುವ ವಿಚಾರದಲ್ಲಿ ಪ್ರತಿಧ್ವನಿಸುತ್ತವೆ. ಪ್ರಕೃತಿ ಮಾನವನ ಆಸೆಗಳನ್ನು ಪೂರೈಸಬಲ್ಲದೆ ಹೊರತು ಅವನ ದುರಾಸೆಗಳನ್ನು ಈಡೇರಿಸಲಾರದು ಎನ್ನುವ ಗಾಂಧೀಜಿಯವರ ವಿವೇಕದ ಮಾತುಗಳು ಎಂದಾದರೂ ಸುಳ್ಳಾಗಲು ಸಾಧ್ಯವೇ? ‘‘ಅಹಿಂಸೆ’’ ನಮ್ಮ ಶಕ್ತಿ ಸಾಮರ್ಥ್ಯದ ಅತ್ಯುನ್ನತ ಶಿಖರ. ಅಹಿಂಸೆಯೇ ಮಾನವನ ಅಭಿವೃದ್ಧಿಗೆ ಅಡಿಗಲ್ಲು?. ಹೀಗೆ ಗಾಂಧೀಜಿಯವರ ವಿಚಾರಗಳ ಸರಣಿ ಸಾಗುತ್ತಲೇ ಇರುತ್ತದೆ. ಆದರೆ ಇದಾವುದೂ ಗಾಂಧೀಜಿಯವರೇ ಹೇಳಿರುವಂತೆ ಅವರು ಹುಟ್ಟು ಹಾಕಿದ ವಿಚಾರಗಳಲ್ಲ. ಮಾನವನ ಉಗಮದ ಜೊತೆ ಜೊತೆಯಲ್ಲೇ ಬೆಳೆದು ಬಂದಿರುವ ನಿತ್ಯ ಸತ್ಯಗಳು. ಈ ಮಾರ್ಗದಲ್ಲಿ ನಾವು ನಡೆದರಷ್ಟೇ ನಮ್ಮ ಉಳಿವು. ಇಲ್ಲದಿದ್ದರೆ ಅದೇ ನಮ್ಮ ಅಳಿವು?? ಅಂತೆಯೇ ಗಾಂಧೀಜಿ ನಮ್ಮ ಕಣ್ಣ ಮುಂದಿನ ಬೆಳಕು. ಗಾಂಧಿ ಮಾರ್ಗವೇ ನಮ್ಮ ಮುಂದಣ ಹಾದಿ?...

ಗಾಂಧೀಜಿಯವರು ಮೇಲ್ನೋಟಕ್ಕೆ ಬಹಳ ಸರಳ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಅವರು ನಾವು ನೀವಂದುಕೊಂಡಷ್ಟು ಸರಳ ವ್ಯಕ್ತಿಯಲ್ಲ. ಮೇಲ್ನೋಟಕ್ಕೆ ಬಹಳ ಸರಳವಾಗಿ ಕಾಣುವ ಅವರ ಆಚಾರ-ವಿಚಾರಗಳ ಅಡಿಯಲ್ಲಿ ಸಾವಿರಾರು ವರ್ಷಗಳ ವೈಚಾರಿಕ ಸಂಘರ್ಷವಿದೆ. ಜಗತ್ತಿನ ಎಲ್ಲ ಪುರಾತನ ಸಂಸ್ಕೃತಿಗಳ ಒಳಿತು ಕೆಡುಕುಗಳ ಅಧ್ಯಯನದ ಸೆಲೆಯಿದೆ. ಜಗತ್ತಿನ ಎಲ್ಲ ಘನ ವಿಚಾರಗಳು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅದರ ಹಿಂದೆ ಸಹಸ್ರ ವರ್ಷಗಳ ಕಲೆ, ಸಂಸ್ಕೃತಿ, ಧರ್ಮ, ಜನಜೀವನಗಳ ಅಧ್ಯಯನ ಹಾಗೂ ಅದರಿಂದ ಕಂಡುಕೊಂಡ ಸತ್ಯದ ತಂಬೆಳಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)