varthabharthi


ಕರಾವಳಿ

‘ಪೂಜಾರಿಯ ದ್ವಂದ್ವ ನಿಲುವು ವಿಚಿತ್ರ’

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಸಲ್ಲದು: ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ

ವಾರ್ತಾ ಭಾರತಿ : 15 Dec, 2018

ಮಂಗಳೂರು, ಡಿ.15: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರಕಾರದ ನೀತಿ ಸರಿಯಲ್ಲ. ಇದಕ್ಕೆ ಜಿಲ್ಲಾ ಜೆಡಿಎಸ್ ಘಟಕ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕರ್ನಾಟಕದಲ್ಲಿ ವಿಮಾನ ನಿಲ್ದಾಣಕ್ಕಾಗಿಯೇ ರಾಜ್ಯ ಸರಕಾರ 586 ಎಕರೆ ಪ್ರದೇಶವನ್ನು ಬಿಟ್ಟು ಕೊಟ್ಟಿದೆ. ವಿಮಾನ ನಿಲ್ದಾಣ ರಾಜ್ಯ ಸರಕಾರದ ಸೊತ್ತಾಗಿದೆ. ಕೇಂದ್ರ ಸರಕಾರವು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಖಾಸಗೀಕರಣ ಮಾಡುವುದಿದ್ದರೆ ರಾಜ್ಯ ಸರಕಾರದ ಗಮನಕ್ಕೆ ತರಬೇಕಾಗಿತ್ತು. ಆದರೆ ಇಂತಹ ಯಾವುದೇ ಕ್ರಮವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಹೇಳಿದರು.

ರಾಜಕೀಯಕ್ಕಾಗಿ ಮಂದಿರ ವಿಷಯ ಬಳಕೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ಹಾಗೂ ಸಂಘಪರಿವಾರದಿಂದ ದೇಶಾದ್ಯಂತ ಸಭೆ, ಸಮಾವೇಶ, ಪ್ರತಿಭಟನೆಗಳು ನಡೆಯುತ್ತಿವೆ. ಮಂದಿರ ನಿರ್ಮಾಣಕ್ಕಾಗಿ ಇವರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕೇಂದ್ರದಲ್ಲೂ ಬಿಜೆಪಿ ಸರಕಾರವಿದ್ದು, ಉತ್ತರಪ್ರದೇಶದಲ್ಲೂ ಬಿಜೆಪಿ ಸರಕಾರವಿದೆ. ಆದಾಗ್ಯೂ ಮಂದಿರ ನಿರ್ಮಾಣವಾಗುತ್ತಿಲ್ಲ. ರಾಜಕೀಯಕ್ಕಾಗಿ ರಾಮಮಂದಿರ ನಿರ್ಮಾಣದ ವಿಷಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದರು.

ಸಾಲಮನ್ನಾ: ರಾಜ್ಯ ಸಮ್ಮಿಶ್ರ ಸರಕಾರವು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ್ದು, ಈ ಬಗ್ಗೆ ಎಲ್ಲ ಜಿಲ್ಲೆಗಳ ಬ್ಯಾಂಕ್‌ಗಳಿಗೆ ಆದೇಶಗಳನ್ನು ಹೊರಡಿಸಲಾಗಿದೆ. ಇದು ಸ್ವಾಗತಾರ್ಹ ಯೋಜನೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಯೋಜನೆಯಿಂದ ಬಹಳಷ್ಟು ಉಪಕಾರವಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಿದರೂ ಬಹುಮತದಿಂದ ಆಯ್ಕೆಯಾಗುತ್ತಾರೆ. ಎರಡೂ ಪಕ್ಷಗಳಲ್ಲಿ ಸಾಕಷ್ಟು ಮುಖಂಡರಿದ್ದಾರೆ. ಗೆಲುವು ಸಾಧಿಸಲು ಪೂರಕವಾದ ಪರಿಸರವೂ ಜಿಲ್ಲೆಯಲ್ಲಿದೆ. ಜೊತೆಗೆ ಕಾಂಗ್ರೆಸ್ ಪಕ್ಷವು ನಿದ್ದೆಯಿಂದ ಎದ್ದು ಚಟುವಟಿಕೆಯಿಂದ ಇರುವುದು ಸದ್ಯದ ಅನಿವಾರ್ಯ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಸಂತ ಪೂಜಾರಿ, ಗೋಪಾಲಕೃಷ್ಣ ಅತ್ತಾವರ, ರಾಮ ಗಣೇಶ್, ಸುಶೀಲ್ ನರೋನ್ಹ, ಅಝೀಝ್ ಕುದ್ರೋಳಿ, ರಮಿಜಾಬಾನು ಮತ್ತಿತರರು ಉಪಸ್ಥಿತರಿದ್ದರು.

‘ಪೂಜಾರಿಯ ದ್ವಂದ್ವ ನಿಲುವು ವಿಚಿತ್ರ’

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದಾಗ ಧ್ವಂಸ ಪ್ರಕರಣವನ್ನು ಖಂಡಿಸಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಇತ್ತೀಚೆಗೆ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದು ಹೇಳುವ ಮೂಲಕ ದ್ವಂದ್ವ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಇದೊಂದು ವಿಚಿತ್ರ ಸಂಗತಿಯಾಗಿದೆ ಎಂದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಬೇಸರ ವ್ಯಕ್ತಪಡಿಸಿದರು.

‘ಸಂಸದ ನಳಿನ್‌ಕುಮಾರ್ ಪಲಾಯನವಾದಿ’

ದೇಶದಲ್ಲಿ ರೂಪಾಯಿ ಮೌಲ್ಯ ಕುಸಿತಗೊಂಡಿದ್ದು, ಡಾಲರ್‌ಗೆ 80 ರೂ. ಇರುವ ಆರ್ಥಿಕ ಸ್ಥಿತಿಯನ್ನು ಡಾಲರ್‌ಗೆ ಕೇವಲ 15 ರೂ. ಮೌಲ್ಯ ಪಡೆದುಕೊಳ್ಳಲಿದೆ. ಇದು ಕೇವಲ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯ ಎಂದು ಕಳೆದ ಲೋಕಸಭಾ ಚುನಾವಣೆ ಮೊದಲು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದರೂ ಪ್ರತಿಕ್ರಿಯಿಸಿದೆ ಸಂಸದರು ಪಲಾಯನವಾದ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಆಕ್ರೋಶ ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)