varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ಜು-ಜಿತ್ಸುಗೆ ಜೀವ ತುಂಬಿದ ನಬೀಲಾ ಬಿರ್ಜಿಸ್

ವಾರ್ತಾ ಭಾರತಿ : 15 Dec, 2018
ಸೋಮಶೇಖರ್ ಪಡುಕರೆ

ಕೈಯಲ್ಲಿ ಆಯುಧವಿದ್ದರೇನೇ ಬಹಳ ಸುರಕ್ಷಿತವಾಗಿದ್ದೇವೆ ಎಂಬುದು ಹಲವರ ನಂಬಿಕೆ. ಆದರೆ ಕೈಯಲ್ಲಿ ಆಯುಧ ಇಲ್ಲದೆಯೂ ಸುರಕ್ಷತೆಯಿಂದ ಇರಬಹುದು. ಇದಕ್ಕಾಗಿ ನಮಗೆ ಗೊತ್ತಿರಬೇಕು ಮಾರ್ಷಲ್ ಆರ್ಟ್ಸ್. ಯಾವುದಾದರೂ ಮಾರ್ಷಲ್ ಆರ್ಟ್ಸ್ ಗೊತ್ತಿದ್ದವರನ್ನು ನೋಡಿದಾಗ ಅವರಲ್ಲಿ ನಮಗಿಂತ ಹೆಚ್ಚಿನ ಆತ್ಮವಿಶ್ವಾಸವಿರುವುದು ಕಂಡುಬರುತ್ತದೆ. ಬದುಕಿನ ಬಗ್ಗೆ ಧನಾತ್ಮಕ ನಿಲುವುಗಳು ಹೆಚ್ಚಾಗಿರುತ್ತವೆ. ಅಂಥ ಮಾರ್ಷಲ್ ಆರ್ಟ್ಸ್‌ಗಳಲ್ಲಿ ಜುಜಿತ್ಸು ಕೂಡ ಒಂದು. ಜಪಾನ್‌ನಲ್ಲಿ ಹುಟ್ಟಿದ ಈ ಕ್ರೀಡೆಗೆ ಕರ್ನಾಟಕದಲ್ಲಿ ಜೀವ ತುಂಬಿದವರು ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಜಿತೇಶ್ ಬಂಜನ್. ಅವರಲ್ಲಿ ಪಳಗಿರುವ ದೇಶದ ನಂ.1 ಜುಜಿತ್ಸು ತಾರೆ ನಬೀಲಾ ಬಿರ್ಜಿಸ್. ಆರ್ಕಿಟೆಕ್ಟ್ ಆಗಿದ್ದ ನಬೀಲಾ ಜುಜಿತ್ಸುಗಾಗಿ ಬೃಹತ್ ಕಂಪೆನಿಯೊಂದರಲ್ಲಿದ್ದ ಉದ್ಯೋಗವನ್ನು ತೊರೆದಿದ್ದರು, ಆದರೆ ಈಗ ತಮ್ಮದೇ ಆದ ಆರ್ಕಿಟೆಕ್ಟ್ ಕೆಲಸವನ್ನು ಮಾಡುತ್ತಾ ಜುಜಿತ್ಸು ಕ್ರೀಡೆಯಲ್ಲಿ ಪಳಗುತ್ತಿದ್ದಾರೆ. ‘ವಾರ್ತಾಭಾರತಿ’ ದಿನಪತ್ರಿಕೆಯ ವಾರ್ಷಿಕ ವಿಶೇಷಾಂಕಕ್ಕಾಗಿ ನೀಡಿದ ಸಂದರ್ಶನದಲ್ಲಿ ನಬೀಲಾ ಬಿರ್ಜಿಸ್ ತಮ್ಮ ಸಾಹಸ ಬದುಕಿನ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಸೋಮಶೇಖರ್ ಪಡುಕರೆ

ಕರ್ನಾಟಕ ಮಲ್ಲ, ಉದಯದೀಪ, ಕನ್ನಡ ಪ್ರಭ, ವಿಜಯಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದಿರುವ ಸೋಮಶೇಖರ್ ಪಡುಕರೆ, ಮುಂಬೈ ವಿ.ವಿ.ಯಲ್ಲಿ ಕೆಲ ಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡಿದವರು. ಪತ್ರಿಕೋದ್ಯಮದಲ್ಲಿ ಕ್ರೀಡಾ ಪತ್ರಕರ್ತರಾಗಿ ಗುರುತಿಸಿಕೊಂಡು ಹಲವು ಪ್ರಮುಖ ಬರಹಗಳನ್ನು ಬರೆದವರು. ಸಂದರ್ಶನಗಳನ್ನು ಮಾಡಿದವರು.

‘‘ನಾವು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಖಚಿತವಾಗಿತ್ತು, ಏಕೆಂದರೆ ಏಷ್ಯಾದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ತರಬೇತಿ ಹಾಗೂ ಸಾಧನೆಯ ಮಟ್ಟ ಉತ್ತಮವಾಗಿತ್ತು. ಆದರೆ ಕೇಂದ್ರ ಕ್ರೀಡಾ ಸಚಿವರಿಗೆ ಈ ಕ್ರೀಡೆಯ ಬಗ್ಗೆ ಅಷ್ಟು ಅರಿವಿರಲಿಲ್ಲ, ಪದಕ ಗೆಲ್ಲುವುದು ಅಸಾಧ್ಯ ಎಂದು ಸಂಶಯಿಸಿ ನಮ್ಮ ತಂಡವನ್ನು ಜಕಾರ್ತಕ್ಕೆ ಕಳುಹಿಸಲು ನಿರಾಕರಿಸಿದರು, ಇದು ಬೇಸರದ ಸಂಗತಿ’’

- ನಬೀಲಾ ಬಿರ್ಜಿಸ್

ಪ್ರೋತ್ಸಾಹ ಅಗತ್ಯ

ಅಂತರ್‌ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಲು ಸರಕಾರ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇಲಾಖೆಯಲ್ಲಿರುವವರಿಗೆ ಈ ಕ್ರೀಡೆಯ ಬಗ್ಗೆ ಅರಿವಿಲ್ಲ ಎಂಬ ಕಾರಣಕ್ಕೇ ಈ ಕ್ರೀಡೆ ಪ್ರಸಿದ್ಧಿ ಪಡೆದಿಲ್ಲ ಎಂದರ್ಥವಲ್ಲ. ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳು ಜುಜಿತ್ಸು ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿವೆ. ಹೆಚ್ಚೆಚ್ಚು ಮಹಿಳಾ ಸ್ಪರ್ಧಿಗಳು ಪಾಲ್ಗೊಳ್ಳುವಂತೆ ಮಾಡುತ್ತಿವೆ. ಅಲ್ಲದೆ ಮಹಿಳೆಯರ ಪಾಲಿನ ಪ್ರಮುಖ ರಕ್ಷಣಾ ಅಸ್ತ್ರವಾಗಿ ಈ ಕ್ರೀಡೆ ಬೆಳೆಯುತ್ತಿದೆ. ‘‘ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಾವು ನಮ್ಮದೇ ಖರ್ಚಿನಲ್ಲಿ ಪಾಲ್ಗೊಳ್ಳಬೇಕಾಗಿರುವುದು ಈ ದೇಶದ ಕ್ರೀಡಾ ದುರಂತ. ಕೇವಲ ಹಣ ಗಳಿಸುವ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಒಬ್ಬ ದೇಶೀಯ ಕ್ರಿಕೆಟಿಗನಿಗೆ ಸಿಗುವ ಗೌರವ ಇತರ ಕ್ರೀಡೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸಿಗುತ್ತಿಲ್ಲ, ಏಕೆಂದರೆ ಈ ಕ್ರೀಡೆಗಳಿಂದ ಹಣ ಹರಿದುಬರುವುದಿಲ್ಲ. ಪ್ರತಿಯೊಂದು ಕ್ರೀಡೆಯಿಂದಲೂ ಹಣವನ್ನೇ ನಿರೀಕ್ಷಿಸುವುದಾದರೆ ಒಲಿಂಪಿಕ್ಸ್ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಹೇಗೆ?, ನಮಗೆ ಒಲಿಂಪಿಕ್ಸ್‌ನಲ್ಲಿ ಪದಕ ಸಿಗುವುದಾದರೂ ಹೇಗೆ?, 2024ರ ಒಲಿಂಪಿಕ್ಸ್‌ನಲ್ಲಿ ಜುಜಿತ್ಸು ಕ್ರೀಡೆಯಿಂದ ಭಾರತಕ್ಕೆ ಪದಕ ಸಿಗಲಿದೆ ಎಂದು ಈಗಾಗಲೇ ಭವಿಷ್ಯ ನುಡಿಯುತ್ತೇನೆ’’ ಎಂದು ನಬೀಲಾ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. ಜತೆಯಲ್ಲಿ ಭಾರತದಲ್ಲಿನ ಕ್ರೀಡಾ ಅವ್ಯವಸ್ಥೆಯ ಮೇಲೂ ಬೆಳಕು ಚೆಲ್ಲಿದ್ದಾರೆ.

ಅಮ್ಮನ ಪ್ರೋತ್ಸಾಹ

ಮೈಸೂರಿನಲ್ಲಿ ಪ್ರೊಫೆಸರ್ ಆಗಿರುವ ನೂರ್ ಫಾತಿಮಾ ಖಾನ್ ಅವರು ನಬೀಲಾ ಅವರ ಸಾಧನೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಮಗಳ ರಕ್ಷಣೆಗೆ ಅದು ಅಗತ್ಯವಿದೆ ಎಂಬ ಅರಿವೂ ಅವರಿಗಿದ್ದಿತ್ತು. ‘‘ತಾಯಿ ಹಾಗೂ ಸಹೋದರ ಇರುವುದು ಮೈಸೂರಿನಲ್ಲಿ. ನಾನು ಬದುಕನ್ನು ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದೆ. ಪ್ರಸಿದ್ಧ ಕಂಪೆನಿಯಲ್ಲಿ ಆರ್ಕಿಟೆಕ್ಟ್ ಆಗಿದ್ದರೂ ಈ ಜುಜಿತ್ಸು ಕ್ರೀಡೆ ನನ್ನನ್ನು ಆಕರ್ಷಿಸಿತು. ಮಂಗಳೂರು ಮೂಲದ ಜಿತೇಶ್ ಅವರಲ್ಲಿ ಪಳಗಿದೆ. ಈ ಕ್ರೀಡೆಯನ್ನು ಕಲಿಯಬೇಕಾದರೆ ಸಂಪೂರ್ಣ ದೇಹ ಸಂಪರ್ಕ ಬೇಕಾಗುತ್ತದೆ. ಆರಂಭದಲ್ಲಿ ಮುಜುಗರ ಎನಿಸಿದರೂ ನಮ್ಮ ಬದುಕಿಗೆ ಇದು ಅಗತ್ಯವಿದ್ದ ಕಾರಣ, ಕ್ರೀಡಾ ಮನೋಭಾವದಿಂದ ಪಾಲ್ಗೊಂಡ ಕಾರಣ ಆ ಮುಜುಗರ ದಿನ ಕಳೆದಂತೆ ದೂರವಾಯಿತು. ರಾಷ್ಟ್ರೀಯ ಮಟ್ಟದಲ್ಲಿ ತೋರಿದ ಸಾಧನೆ, ಮಾಧ್ಯಮಗಳಲ್ಲಿ ಸಿಕ್ಕ ಪ್ರಚಾರದಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಕ್ರೀಡೆಯತ್ತ ವಾಲುತ್ತಿದ್ದಾರೆ. ಚಿಕ್ಕ ಮಕ್ಕಳು ಕೂಡ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿತೇಶ್ ಬಂಜನ್ ಅವರ ಇಂಡಿಯನ್ ಕಂಬ್ಯಾಟ್ ಅಕಾಡಮಿ ಇಂದು ದೇಶದಲ್ಲೇ ಉತ್ತಮ ಜುಜಿತ್ಸು ತರಬೇತಿ ಕೇಂದ್ರವಾಗಿದೆ’’ ಎಂದು ಹೇಳುವ ನಬೀಲಾ ಅವರ ಮಾತಿನಲ್ಲಿ ಈ ಕ್ರೀಡೆ ಮಹಿಳೆಯರಿಗೆ ಎಷ್ಟು ಪ್ರಮುಖವಾಗಿದೆ ಎಂಬುದು ತಿಳಿಯುತ್ತದೆ.

                            ಜಿತೇಶ್ ಜಂಬನ್

ಮಹಿಳೆಯರಿಗೆ ಅಗತ್ಯವಾದ ಮಾರ್ಷಲ್ ಆರ್ಟ್ಸ್

ಕರಾಟೆ, ಕುಂಗ್ಫು, ಜೂಡೋ, ಟೆಕ್ವಾಂಡೋ ಇವುಗಳೆಲ್ಲದಕ್ಕಿಂತ ಜುಜಿತ್ಸು ಮಹಿಳೆಯರ ರಕ್ಷಣೆಗೆ ಅಗತ್ಯವಾಗಿ, ಅತ್ಯಂತ ಸುಲಭವಾಗಿ ಕಲಿತುಕೊಳ್ಳಬಹುದಾದ ಡಿಫೆನ್ಸ್ ಗೇಮ್. ನಮಗಿಂತ ಎಷ್ಟೇ ತೂಕದ ವ್ಯಕ್ತಿ ಇದ್ದರೂ, ನಾವು ನೆಲದ ಮೇಲೆ ಅಂಗಾತ ಬಿದ್ದರೂ ಎದುರಾಳಿಯ ಕಾಲು, ಕೈಗಳನ್ನು ಮುರಿಯುವ ತಂತ್ರವನ್ನು ಹೇಳಿ ಕೊಡುತ್ತದೆ ಈ ಕ್ರೀಡೆ. ಇದು ಮಾರ್ಷಲ್ ಆರ್ಟ್ಸ್‌ನಲ್ಲಿ ಜಂಟಲ್ ಆರ್ಟ್ಸ್. ಈ ಮಾರ್ಷಲ್ ಆರ್ಟ್ಸ್ ಕಲಿತವರು ಎದುರಾಳಿಯ ಯಾವುದೇ ಮೂಳೆಯ ಸಂದನ್ನು ಮುರಿಯಬಹುದು. ಈ ಮಾರ್ಷಲ್ ಆರ್ಟ್ಸ್ ಬಗ್ಗೆ ಮಹಿಳೆಯರು ಈಗ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ.

ರಾಷ್ಟ್ರೀಯ ಚಾಂಪಿಯನ್

2017ರಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಜುಜಿತ್ಸು ಚಾಂಪಿಯನ್‌ಷಿಪ್‌ನಲ್ಲಿ ನಬೀಲಾ ಎರಡು ಚಿನ್ನದ ಪದಕಗಳನ್ನು ಗೆದ್ದು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ್ದಿದರು. ನಂತರ 2018ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಡಬಲ್ ಗೋಲ್ಡ್ ಮೆಡಲ್ ಗೆದ್ದು ಏಶ್ಯನ್ ಗೇಮ್ಸ್‌ಗೆ ಆಯ್ಕೆಯಾದರು. ಮುಂಬೈಯಲ್ಲಿ ನಡೆದ ಬಾಡಿ ಪವರ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದರು. ಒಂದು ವರ್ಷದ ಅವಧಿಯಲ್ಲಿ 5 ಚಿನ್ನದ ಪದಕಗಳನ್ನು ಗೆದ್ದ ನಬೀಲಾ ಅವರ ಸಾಧನೆಯನ್ನು ಕೇಂದ್ರ ಸರಕಾರ ಗುರುತಿಸುವಲ್ಲಿ ವಿಫಲವಾಯಿತು. ಏಶ್ಯನ್ ಗೇಮ್ಸ್‌ನಲ್ಲಿ ಜುಜಿತ್ಸು ಕ್ರೀಡೆ ಇದ್ದು, ಅದರಲ್ಲಿ ಭಾರತ ತಂಡವನ್ನು ಕಳುಹಿಸಲು ಸ್ವತಃ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರೇ ನಿರಾಕರಿಸಿದರು. ‘‘ನಾವು ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಖಚಿತವಾಗಿತ್ತು, ಏಕೆಂದರೆ ಏಶ್ಯದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ತರಬೇತಿ ಹಾಗೂ ಸಾಧನೆಯ ಮಟ್ಟ ಉತ್ತಮವಾಗಿತ್ತು. ಆದರೆ ಕೇಂದ್ರ ಕ್ರೀಡಾ ಸಚಿವರಿಗೆ ಈ ಕ್ರೀಡೆಯ ಬಗ್ಗೆ ಅಷ್ಟು ಅರಿವಿರಲಿಲ್ಲ, ಪದಕ ಗೆಲ್ಲುವುದು ಅಸಾಧ್ಯ ಎಂದು ಸಂಶಯಿಸಿ ನಮ್ಮ ತಂಡವನ್ನು ಜಕಾರ್ತಕ್ಕೆ ಕಳುಹಿಸಲು ನಿರಾಕರಿಸಿದರು, ಇದು ಬೇಸರದ ಸಂಗತಿ’’ ಎಂದು ನಬೀಲಾ ನಿರಾಸೆಯಿಂದ ನುಡಿದರು.

ಜುಜಿತ್ಸು ಬಗ್ಗೆ...

ಮಾರ್ಷಲ್ ಆರ್ಟ್ಸ್‌ಗಳಲ್ಲೇ ಅತ್ಯಂತ ಪ್ರಮುಖ ವೆನಿಸಿರುವುದು ಜುಜಿತ್ಸು. ಇದು ಜಪಾನ್ ಮೂಲ. ಒಂದು ಕಾಲದಲ್ಲಿ ಬ್ರೆಝಿಲ್‌ನಲ್ಲೂ ಇದೇ ಮಾದರಿಯ ಕ್ರೀಡೆ ಇದ್ದಿತ್ತು ಎನ್ನಲಾಗುತ್ತಿದೆ. ಸಶಸ್ತ್ರ ಎದುರಾಳಿಯನ್ನು ಅಸ್ತ್ರ ಇಲ್ಲದೆ ಹೇಗೆ ಎದುರಿಸಬಹುದು, ಅಥವಾ ದೊಡ್ಡ ಅಸ್ತ್ರ ಇರುವ ಎದುರಾಳಿಯನ್ನು ಚಿಕ್ಕ ಅಸ್ತ್ರದಿಂದ ಹೇಗೆ ಹಿಮ್ಮೆಟ್ಟಿಸಬಹುದು ಎಂಬುದನ್ನು ಜುಜಿತ್ಸು ಹೇಳಿಕೊಡುತ್ತದೆ. 17ನೇ ಶತಮಾನದಲ್ಲೇ ಈ ಕ್ರೀಡೆ ಜಪಾನಿನಲ್ಲಿ ಕಂಡು ಬಂದಿತ್ತು. ಸಾಮಾನ್ಯವಾಗಿ ಯುದ್ಧಭೂಮಿಯಲ್ಲಿ ಇದು ಹೆಚ್ಚು ಬಳಕೆಯಾಗುತ್ತಿತ್ತು. ಎದುರಾಳಿಯನ್ನು ತಂತ್ರದ ಮೂಲಕ ನಿಶಸ್ತ್ರಗೊಳಿಸುವುದು ಹಾಗೂ ಬ್ಲಾಕ್ ಮಾಡುವುದು ಈ ಕ್ರೀಡೆಯ ಪ್ರಮುಖ ಲಕ್ಷಣ. ಅಲ್ಲದೆ ಜೀವಕ್ಕೆ ಅಪಾಯವೆನಿಸಿದಾಗ ಎದುರಾಳಿಯ ಸಂದುಮೂಳೆಯನ್ನು ಮುರಿಯುವುದು ಜುಜಿತ್ಸು ಮಾರ್ಷಲ್ ಆರ್ಟ್ಸ್‌ನ ಪ್ರಮುಖ ರಣತಂತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)