varthabharthi


ಬುಡಬುಡಿಕೆ

ಫೆವಿಕಾಲ್ ಜಾಹೀರಾತಿನಲ್ಲಿ ಮೋದಿ!

ವಾರ್ತಾ ಭಾರತಿ : 22 Dec, 2018
*ಚೇಳಯ್ಯ chelayya@gmail.com

 ಕೈಗಾರಿಕೆಗಳು ಕುಸಿಯುತ್ತಿವೆ, ವ್ಯವಹಾರ ಇಳಿಮುಖವಾಗುತ್ತಿದೆ ಎನ್ನುವುದರ ಕಾರಣವನ್ನು ನಮ್ಮ ರಾಜಕೀಯ ನಾಯಕರು ಕೊನೆಗೂ ಕಂಡು ಹುಡುಕಿದ್ದಾರೆ. ಸರಕುಗಳ ಮಾರಾಟಕ್ಕೆ ಬಳಸುವ ಮಾಡೆಲ್‌ಗಳ ವರ್ಚಸ್ಸು ಕುಸಿದಿದೆ. ಆದುದರಿಂದಲೇ ಜನರು ವಸ್ತುಗಳನ್ನು ತೆಗೆದುಕೊಳ್ಳಲು ಆಸಕ್ತಿ ಕಳೆದುಕೊಂಡಿದ್ದಾರೆ. ಆದುದರಿಂದ ಈ ಮಾಡೆಲ್‌ಗಳ ಬದಲಾಗಿ ರಾಜಕಾರಣಿಗಳೇ ಮೋಡೆಲ್‌ಗಳಾಗಿ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ದೇಶದ ಮಾರುಕಟ್ಟೆಯನ್ನು ಚುರುಕಾಗಿಸಿದರೆ ಹೇಗೆ ಎಂಬ ಉಪಾಯವನ್ನು ಆರ್‌ಬಿಐ ನಾಯಕರು ಮೋದಿಯ ಕಿವಿಗೆ ಹಾಕಿ ಬಿಟ್ಟರು. ಇದು ಗೊತ್ತಾದದ್ದೇ, ಕಂಪೆನಿಗಳು ಅತ್ಯುತ್ಸಾಹದಿಂದ ರಾಜಕಾರಣಿಗಳ ಮನೆಬಾಗಿಲನ್ನು ತಟ್ಟ ತೊಡಗಿದವು. ವಿವಿಧ ನಾಯಕರು ಕಾಣಿಸಿಕೊಳ್ಳಬಹುದಾದ ಜಾಹೀರಾತುಗಳು ಯಾವುವು ಎನ್ನುವ ಪಟ್ಟಿಯೊಂದು ಈಗಾಗಲೇ ಪತ್ರಕರ್ತ ಎಂಜಲುಕಾಸಿಗೆ ಸಿಕ್ಕಿದ್ದು, ಅದರಲ್ಲಿ ಆಯ್ದ ಕೆಲವು ಜಾಹೀರಾತುಗಳಿಗೆ ಬಳಸಿಕೊಳ್ಳಬಹುದಾದ ನಾಯಕರ ಪಟ್ಟಿ ಇಲ್ಲಿದೆ.

ಪ್ರಧಾನಮಂತ್ರಿ ಮೋದಿ:
ಫೆವಿಕಾಲ್ ಜಾಹೀರಾತಿಗೆ ಅತ್ಯುತ್ತಮ ಮಾಡೆಲ್. ಯಾಕೆಂದರೆ ಪ್ರಧಾನಿಯಾಗಿ ಅವರ ಅಂಟಿಕೊಂಡ ತುಟಿಗಳನ್ನು ಬೇರ್ಪಡಿಸಲು ಈವರೆಗೆ ಯಾವ ಪತ್ರಕರ್ತರಿಗೂ ಸಾಧ್ಯವಾಗಿಲ್ಲ. ಇದಕ್ಕಾಗಿ ನರೇಂದ್ರ ಮೋದಿಯವರು ಫೆವಿಕಾಲ್‌ನ್ನು ಬಳಸುತ್ತಾರೆ ಎನ್ನುವ ವದಂತಿಯೂ ಇದೆ. ಮೋದಿಯವರು ಫೆವಿಕಾಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅದರ ಮಾರಾಟ ದುಪ್ಪಟ್ಟಾಗಲಿದೆ.
ಬಟ್ಟೆ ಜಾಹೀರಾತುಗಳಿಗೂ ಇವರನ್ನು ಬಳಸಿಕೊಳ್ಳಬಹುದು. ಇವರು ಬದಲಿಸುವ ಬಗೆ ಬಗೆಯ ಬಟ್ಟೆಗಳಿಂದಲೇ ದೇಶದ ಖ್ಯಾತಿ ವಿಶ್ವಾದ್ಯಂತ ಹರಡಿದೆ. ಅಂಬಾನಿ ಬಳಗವು ಇವರನ್ನು ಮಾಡೆಲ್ ಮಾಡಿಕೊಂಡು ಬಟ್ಟೆ ವ್ಯಾಪಾರ ಶುರು ಮಾಡುವ ಸಾಧ್ಯತೆಗಳಿವೆ.
ಚಹಾ ಕಂಪೆನಿಗಳೂ ಮೋದಿಯವರನ್ನು ಬಳಸಿಕೊಳ್ಳುವುದು ಈಗಾಗಲೇ ಶತಃಸಿದ್ಧವಾಗಿದೆ. ಈಗಾಗಲೇ ಹಲವು ಚಹಾ ಕಂಪೆನಿಗಳ ಜೊತೆಗೆ ಮೋದಿಯವರು ಒಪ್ಪಂದ ಮಾಡಿಕೊಂಡಿದ್ದು ಇದರಿಂದ ದೇಶದ ಖಜಾನೆಗೆ ಅಪಾರ ಲಾಭವಾಗಲಿದೆ.
ಬುಲ್ಡೋಜರ್‌ಗಳ ಜಾಹೀರಾತುಗಳಿಗೂ ಮೋದಿಯವರನ್ನು ಬಳಸಿಕೊಳ್ಳಬಹುದಾಗಿದೆ. 70 ವರ್ಷಗಳಲ್ಲಿ ಕಟ್ಟಿನಿಲ್ಲಿಸಿದ ಭಾರತದ ಅರ್ಥವ್ಯವಸ್ಥೆಯನ್ನು ಒಂದೇ ದಿನದಲ್ಲಿ ಉರುಳಿಸಿದ ಖ್ಯಾತಿ ಇವರಿಗಿದೆ. ಜೊತೆಗೆ ಸಿಬಿಐ, ಆರ್‌ಬಿಐ, ನ್ಯಾಯವ್ಯವಸ್ಥೆ ಎಲ್ಲವನ್ನೂ ಕೆಲವೇ ಕ್ಷಣಗಳಲ್ಲಿ ನಾಶ ಮಾಡಿದ ಹಿರಿಮೆಯೂ ಇವರದು. ಬೃಹತ್ ಬುಲ್ಡೋಜರ್‌ಗಳನ್ನು ನಿರ್ಮಿಸುವ ಕಂಪೆನಿಗಳು ಮೋದಿಯ ವರ್ಚಸ್ಸನ್ನು ಬಳಸಿ ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ಯಥೇಚ್ಛವಾಗಿ ಮಾರಾಟ ಮಾಡಬಹುದಾಗಿದೆ. ಇದರಿಂದ ದೇಶದ ವಿದೇಶ ವಿನಿಮಯ ಹೆಚ್ಚಳವಾಗಲಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್:
ಇವರ ತಲೆಯೊಳಗಿರುವ ವಸ್ತುವಿಗಿಂತಲೂ ಪರಿಣಾಮಕಾರಿ ಬೋಳು ತಲೆ ಕೆಲಸ ಮಾಡುತ್ತಿದೆ. ಆದುದರಿಂದ, ಸೋಲಾರ್ ಉತ್ಪನ್ನಗಳಿಗೆ ಇವರ ಹೊಳೆಯುವ ಬೋಳು ತಲೆಯನ್ನು ಜಾಹೀರಾತಿಗೆ ಬಳಸಬಹುದು.
ದನ ಆಮ್ಲಜನಕ ಸೇವಿಸಿ, ಆಮ್ಲಜನಕವನ್ನು ಹೊರಬಿಡುತ್ತಿರುವುದನ್ನು ಶೋಧಿಸಿದ ಮಹಾ ವಿಜ್ಞಾನಿ ಇವರಾಗಿರುವುದರಿಂದ, ಉಜಾಲ ಸಿಲಿಂಡರ್ ಯೋಜನೆಗಳಿಗೆ ಇವರನ್ನು ಮಾಡೆಲ್ ಆಗಿಸಬಹುದು.
ಸೆಗಣಿಯಿಂದ ಹಪ್ಪಳ, ಸಂಡಿಗೆ, ಬಿಸ್ಕೆಟ್ ಮೊದಲಾದ ತಿಂಡಿಗಳನ್ನು ಮಾಡಿ ಇವರ ಫೋಟೊ ಹಾಕಿ ಮಾರಬಹುದು. ಇದರಿಂದಾಗಿ ದೇಶಾದ್ಯಂತ ಗೋಶಾಲೆಗಳ ಸದುಪಯೋಗವಾಗುತ್ತದೆ. ಸೆಗಣಿಗೆ ಬೇಡಿಕೆ ಹೆಚ್ಚುತ್ತದೆ. ಇವರ ಭಕ್ತರು ಬೆಳಗಿನ ಮತ್ತು ಸಂಜೆಯ ತಿಂಡಿಗೆ ಇದನ್ನೇ ಬಳಸುವ ಎಲ್ಲ ಸಾಧ್ಯತೆಗಳಿರುವುದರಿಂದ ಗುಡಿ ಕೈಗಾರಿಕೆಗಳು ಹೆಚ್ಚುತ್ತವೆ.
ಚಾಕು, ಚೂರಿ, ತಲವಾರುಗಳ ಜಾಹೀರಾತುಗಳಿಗೂ ಆದಿತ್ಯನಾಥ್ ಅವರನ್ನು ಬಳಸಬಹುದು. ಸಂಸ್ಕೃತಿ ರಕ್ಷಣೆಗಾಗಿ ಚಾಕು, ಚೂರಿಗಳ ಅಗತ್ಯ ಸದ್ಯದ ದಿನಗಳಲ್ಲಿ ವ್ಯಾಪಕವಾಗಿವೆ. ಈ ಸದವಕಾಶವನ್ನು ಯುವಕರು ಬಳಸಿಕೊಳ್ಳಲು ಚಾಕು, ಚೂರಿಗಳ ಕೈಗಾರಿಕೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಕೊಡುವುದರಿಂದ ನಿರುದ್ಯೋಗ ಕಡಿಮೆಯಾಗಬಹುದು. ಪ್ರತಿ ಚಾಕು ಚೂರಿಗಳಲ್ಲಿ ಆದಿತ್ಯನಾಥರ ಫೋಟೊ ಮುದ್ರಿಸುವ ಕುರಿತಂತೆ ವಿವಿಧ ಕಂಪೆನಿಗಳು ಒಪ್ಪಂದಕ್ಕೆ ಅವರಿಂದ ಸಹಿ ಹಾಕಿಸಿವೆ.
ಅಮಿತ್ ಶಾ:
ಈಗಾಗಲೇ ತನ್ನ ಮೈಮೇಲೆ ಅಂಟಿಕೊಂಡಿದ್ದ ರಕ್ತದ ಕಲೆಗಳನ್ನೇ ಅನ್ಯಾಯ ವ್ಯವಸ್ಥೆಯ ಮೂಲಕ ಶುಚಿ ಮಾಡಿಕೊಂಡಿರುವ ಅಮಿತ್ ಶಾರನ್ನು ಜಾಹೀರಾತಿಗೆ ಬಳಸಿಕೊಳ್ಳಲು ಸರ್ಫ್, ಏರಿಯಲ್‌ನಂತಹ ಸಂಸ್ಥೆಗಳು ಮುಗಿ ಬಿದ್ದಿವೆಯಂತೆ. ಸಾಧಾರಣವಾಗಿ ರಕ್ತಕಲೆಗಳು ಯಾವುದೇ ಸಾಬೂನು ಹುಡಿಗಳಿಂದ ಅಳಿಯುವುದಿಲ್ಲ. ಆದರೆ ಅಮಿತ್ ಶಾ ಅವರು ಆ ಸಂಶೋಧನೆಯಲ್ಲಿ ಈಗಾಗಲೇ ಯಶಸ್ಸು ಕಂಡಿರುವುದರಿಂದ, ಅವರು ಜಾಹೀರಾತುದಾರರಾಗುವ ಸಾಬೂನುಗಳನ್ನು ಹೆಚ್ಚು ಬಳಸುವ ಸಾಧ್ಯತೆಗಳಿವೆ. ಸಾಬೂನು ಕಂಪೆನಿಗಳು ತೀವ್ರ ಸ್ಪರ್ಧೆಗೆ ಬಿದ್ದಿರುವುದರಿಂದ ಅಮಿತ್ ಶಾ ಅವರನ್ನು ಹರಾಜು ಹಾಕಲಾಗುತ್ತದೆಯಂತೆ. ಅತಿ ಹೆಚ್ಚು ಹಣವನ್ನು ಕೂಗಿದ ಕಂಪೆನಿಗೆ ಅವರು ಮಾಡೆಲ್ ಆಗಿ ಕೆಲಸ ಮಾಡಲಿದ್ದಾರೆ. ಇದರಿಂದ ಬಂದ ಹಣವನ್ನು ನ್ಯಾಯಾಲಯಗಳ ಕಟ್ಟಡಗಳ ದುರಸ್ತಿಗಾಗಿ ಬಳಸಲಾಗುವುದಂತೆ.
ಮುಖ್ಯಮಂತ್ರಿ ಕುಮಾರಸ್ವಾಮಿ:
 ಅವರ ಕಣ್ಣಲ್ಲಿ ಆಗಾಗ ದಳ ದಳ ನೀರು ಸುರಿಯುತ್ತಿರುವುದರಿಂದ ನೀರಾವರಿ ಪಂಪ್‌ಗಳಿಗೆ ಕುಮಾರಸ್ವಾಮಿಯವರನ್ನು ಜಾಹೀರಾತಿಗೆ ಬಳಸುವ ಯೋಜನೆಗಳಿವೆಯಂತೆ. ಹಾಗೆಯೇ ವಿವಿಧ ಗ್ಲಿಸರಿನ್ ಕಂಪೆನಿಗಳೂ ಕೂಡ ಕುಮಾರಸ್ವಾಮಿಯವರನ್ನು ಸಂಪರ್ಕಿಸಿವೆೆ. ಆದರೆ ಸದ್ಯಕ್ಕೆ ತನಗೆ ರೈತರೇ ಮುಖ್ಯ ಎಂದು, ನೀರಾವರಿ ಪಂಪ್‌ಗಳ ಜಾಹೀರಾತುಗಳಲ್ಲಿ ಬಿಜಿಯಾಗಿದ್ದಾರಂತೆ.
ಕಡಿಮೆ ಶಾಸಕರಿದ್ದೂ ಮುಖ್ಯಮಂತ್ರಿಯಾಗಿ ಬಂಪರ್ ಲಾಟರಿ ಹೊಡೆದಿರುವುದರಿಂದ ವಿವಿಧ ರಾಜ್ಯಗಳ ಲಾಟರಿ ಟಿಕೆಟ್‌ಗಳಿಗೆ ಅವರ ಭಾವಚಿತ್ರ ಅಂಟಿಸುವ ಬಗ್ಗೆ ಹಲವು ಮುಖ್ಯಮಂತ್ರಿಗಳು ಸಂಪರ್ಕದಲ್ಲಿದ್ದಾರಂತೆ.

ಯಡಿಯೂರಪ್ಪ:

ಸದನದ ಬಾವಿಗೆ ಪದೇ ಪದೇ ಹಾರಿರುವ ಅನುಭವ ಇರುವುದರಿಂದ ಇವರನ್ನು ಕೆಲವು ಬೋರ್‌ವೆಲ್ ಕಂಪೆನಿಗಳು ಸಂಪರ್ಕಿಸಿವೆ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಈಗಷ್ಟೇ ಸಿಕ್ಕಿದ ಸುದ್ದಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)