varthabharthi


ಬುಡಬುಡಿಕೆ

ಪೋಲಿಯೊ ನಿವಾರಣೆಗೆ ಗೋಮೂತ್ರ ಲಸಿಕೆ!

ವಾರ್ತಾ ಭಾರತಿ : 3 Feb, 2019
*ಚೇಳಯ್ಯ chelayya@gmail.com

 ಬಜೆಟ್ ಮಂಡನೆಯಾದದ್ದೇ ದೇಶಾದ್ಯಂತ ಮೋದಿ ಭಕ್ತರೆಲ್ಲ ‘‘ನೋಡಿ ಅಚ್ಛೇ ದಿನ್ ಬಂತಲ್ವಾ...ಅಚ್ಛೇ ದಿನ್ ಬಂತಲ್ವಾ...’’ ಎಂದು ಕೇಳ ತೊಡಗಿದರು. ‘‘ಎಲ್ಲಿ ಎಲ್ಲಿ...’’ ಎಂದು ಕಾಸಿಯೂ ಅಚ್ಚೇ ದಿನ್‌ಗಾಗಿ ಹುಡುಕಾಡ ತೊಡಗಿದ.
‘‘ಸಾರ್ ಬಜೆಟ್‌ನಲ್ಲಿ ಅಚ್ಛೇ ದಿನ್ ಘೋಷಣೆಯಾಯಿತಂತೆ....ಇನ್ನು ಮುಂದೆ ಸಿಲಿಂಡರ್ ದರ ಇಳಿಯತ್ತ?’’ ಕಾಸಿ ಭಕ್ತನಲ್ಲಿ ಕೇಳಿದ.
‘‘ನೋಡ್ರಿ ಬಜೆಟ್‌ನಲ್ಲಿ ಬಡವರಿಗೆ, ರೈತರಿಗೆ ಕೊಡುಗೆಗಳ ಸುರಿಮಳೆಯೇ ಆಗಿದೆ. ನೀವು ಸಿಲಿಂಡರ್ ದರದ ಬಗ್ಗೆ ಮಾತನಾಡುತ್ತಾ ಇದ್ದೀರಿ...ಮೋದಿಯನ್ನು ಟೀಕಿಸದೆ ನಿಮಗೆ ನಿದ್ದೆಯೇ ಬರಲ್ವಾ?’’
‘‘ಹಾಗಲ್ಲ ಸಾರ್...ಪೆಟ್ರೋಲ್ ಬೆಲೆ...’’
‘‘ನೋಡ್ರೀ....ಪೆಟ್ರೋಲ್ ಬೆಲೆ ಇಳಿಸದೆಯೇ ದೇಶದಲ್ಲಿ ಅಚ್ಛೇ ದಿನ್ ಜಾರಿಗೆ ತಂದರಲ್ಲಾ...ಅದೇ ನಮ್ಮ ಮೋದಿಯವರ ಹೆಗ್ಗಳಿಕೆ....’’
‘‘ಸಾರ್...ಜಿಎಸ್‌ಟಿ ತೆರಿಗೆ...’’ ಕಾಸಿ ಮತ್ತೆ ಕೇಳ ಹೊರಟ.
‘‘ನೋಡ್ರೀ...ಐದು ಲಕ್ಷದ ಒಳಗಿರುವವರು ತೆರಿಗೆ ಕಟ್ಟಬೇಕಾಗಿಲ್ಲ....’’ ಭಕ್ತ ಹೇಳಿದ.
‘‘ಆದರೆ ಕಿಸೆಯಲ್ಲಿ ಐವತ್ತು ರೂಪಾಯಿಯೂ ಇಲ್ಲ ಸಾರ್....ಐದು ಲಕ್ಷಕ್ಕೆ ಎಲ್ಲಿಗೆ ಹೋಗಲಿ...?’’ ಕಾಸಿ ಪ್ರಶ್ನಿಸಿದ.
‘‘ನೋಡ್ರೀ...ಐದು ಲಕ್ಷ ನಿಮ್ಮಲ್ಲಿ ಇಲ್ಲದೇ ಇರುವುದು ಮೋದಿಯ ತಪ್ಪಾ? ನೀವು ಐದು ಲಕ್ಷ ದುಡಿಯುತ್ತಿದ್ದರೆ ಈಗ ತೆರಿಗೆ ವಿನಾಯಿತಿ ಸಿಕ್ಕಿ ಅಚ್ಛೇ ದಿನ್ ಅನುಭವಿಸಬಹುದಿತ್ತು....’’
 ‘‘ಸಾರ್...ಪೋಲಿಯೊ ಲಸಿಕೆಗೆ ಸರಕಾರದ ಬಳಿ ದುಡ್ಡಿಲ್ಲ ಅಂತೆ....ಹೌದಾ?’’
‘‘ನೋಡ್ರೀ....ಪೋಲಿಯೋ ಲಸಿಕೆಗಾಗಿ ವಿದೇಶಕ್ಕೆ ಕೋಟ್ಯಂತರ ರೂಪಾಯಿ ಸುರಿಯುವ ಬದಲು, ಗೋಮೂತ್ರ ಲಸಿಕೆಯನ್ನು ಹಾಕಲು ಸರಕಾರ ವ್ಯವಸ್ಥೆ ಮಾಡುತ್ತಿದೆ. ಪ್ರತಿ ವರ್ಷ ಗೋಮೂತ್ರ ಹನಿಯನ್ನು ಹಾಕುವ ಆಂದೋಲನವನ್ನು ಸರಕಾರ ಹಮ್ಮಿಕೊಳ್ಳುತ್ತಿದೆ....’’ ಭಕ್ತ ಸಮಜಾಯಿಶಿ ನೀಡಿದ.
‘‘ಸಾರ್...ಕಾಶ್ಮೀರದಲ್ಲಿ ಹಿಂಸೆ ಹೆಚ್ಚುತ್ತಿದೆ. ಉಗ್ರವಾದಿಗಳು ನುಸುಳುತ್ತಿದ್ದಾರೆ....’’ ಕಾಸಿ ಆತಂಕದಿಂದ ಕೇಳಿದ.
‘‘ಅದಕ್ಕೇನ್ರೀ....ಭಾರೀ ಬಜೆಟ್‌ನಲ್ಲಿ ಇನ್ನೊಂದು ಸಿನೆಮಾ ಸಿದ್ಧವಾಗುತ್ತಿದೆ. ಆ ಸಿನೆಮಾದಲ್ಲಿ ನಮ್ಮ ಸೇನೆ ನೇರವಾಗಿ ಇಸ್ಲಾಮಾಬಾದಿಗೆ ನುಗ್ಗಿ ಅಲ್ಲಿರುವ ಉಗ್ರರ ಶಿಬಿರನ್ನು ನಾಶ ಮಾಡಿ ಬರತ್ತೆ....ಕಾಯ್ತೆ ಇರಿ....ಈ ಬಾರಿ ಬಜೆಟ್‌ನಲ್ಲಿ ಭಯೋತ್ಪಾದಕ ವಿರೋಧಿ ಸಿನೆಮಾ ತಯಾರಿಸಲು ಕೋಟ್ಯಂತ ಹಣ ಮೀಸಲಿಟ್ಟಿದ್ದಾರೆ....ಇದರಿಂದ ಪಾಕಿಸ್ತಾನ ಹೆದರಿ ಬಿಟ್ಟಿದೆ ಗೊತ್ತಾ?’’ ಭಕ್ತ ಹೆಮ್ಮೆಯಿಂದ ಹೇಳಿದ.
‘‘ಸಾರ್....ವಿರೋಧ ಪಕ್ಷದೋರು ಸರ್ಜಿಕಲ್ ಸ್ಟ್ರೈಕ್ ನಡೆಯಲೇ ಇಲ್ಲ ಎನ್ನುತ್ತಾರಲ್ಲ?’’ ಕಾಸಿ ಅನುಮಾನ ಮುಂದಿಟ್ಟ.
 ‘‘ನೋಡ್ರೀ...ಸರ್ಜಿಕಲ್ ಸ್ಟ್ರೈಕ್ ನಡೆಯದೇ ಇದ್ದಿದ್ದರೆ ‘ಉರಿ’ ಸಿನೆಮಾ ಯಾಕೆ ಜನ ನೋಡ್ತಾ ಇದ್ರು? ಉರಿ ಸಿನೆಮಾವನ್ನು ನೋಡಲು ಜನರು ಥಿಯೇಟರ್ ಕಡೆಗೆ ಸಾಲು ಸಾಲಾಗಿ ಬರುತ್ತಿದ್ದಾರೆ. ಜನಮತ ಸರ್ಜಿಕಲ್‌ಸ್ಟ್ರೈಕ್ ಪರವಾಗಿ ಇದೆ. ಮುಂದಿನ ದಿನಗಳಲ್ಲಿ ಉರಿ -1, ಉರಿ-2 ಚಿತ್ರಗಳನ್ನು ಮಾಡಿ ಪಾಕಿಸ್ತಾನವನ್ನು ಮತ್ತು ವಿರೋಧ ಪಕ್ಷಗಳನ್ನು ಉರಿಸಲಾಗುತ್ತದೆ....’’ ಭಕ್ತ ವಿವರಿಸಿದ.
‘‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಸೋತಿತಲ್ಲ ಸಾರ್...ಇದು ಮೋದಿಯ ಸೋಲು ಎಂದು ಹೇಳುತ್ತೀರಾ...’’ ಕಾಸಿ ಕೇಳಿದ.
‘‘ನೋಡ್ರೀ...ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸೋತಿರುವುದು ಏನನ್ನು ಸೂಚಿಸುತ್ತದೆ? ಮನಮೋಹನ್ ಸಿಂಗ್ ಕಾಲದಲ್ಲಿ ಯುಪಿಎ ಆಡಳಿತದ ವೈಫಲ್ಯವನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಮೋದಿಯವರನ್ನು ಇಟ್ಟುಕೊಂಡು ಸಿನೆಮಾ ತೆಗೆಯಲಿದ್ದೇವೆ. ಇದರಲ್ಲಿ ಮೋದಿಯ ಪಾತ್ರವನ್ನು ಮೋದಿಯವರೇ ಅಭಿನಯಿಸಲಿದ್ದಾರೆ...ಅಭಿನಯದಲ್ಲಿ ಮೋದಿಯವರಿಗೆ ಹಾಲಿವುಡ್‌ನಿಂದ ಆಫರ್ ಬಂದಿದೆ ಗೊತ್ತಾ?’’
‘‘ಸಾರ್...ಬಜೆಟ್‌ನಲ್ಲಿ ಒಂದು ಮುಖ್ಯ ಆಫರ್‌ನ್ನು ಮತದಾರರಿಗೆ ನೀಡಿದ್ದಿದ್ದರೆ ಅವರು ಖಂಡಿತ ಖುಷಿಯಾಗುತ್ತಿದ್ದರು...’’ ಕಾಸಿ ಸಲಹೆ ನೀಡಿದ.
‘‘ಅದೇನದು?’’ ಭಕ್ತ ಕುತೂಹಲದಿಂದ ಕೇಳಿದ.
‘‘ಅದೇ ಸಾರ್....ಮುಂದಿನ ಪ್ರಧಾನಿಯಾಗಿ ಮೋದಿಯ ಬದಲಿಗೆ ಬೇರೆ ಅಭ್ಯರ್ಥಿಯನ್ನು ಬಜೆಟ್‌ನಲ್ಲಿ ಘೋಷಿಸಿದ್ದರೆ ಸಾಕಿತ್ತು....’’
ಎಂದದ್ದೇ ಕಾಸಿ ಅಲ್ಲಿಂದ ಓಡತೊಡಗಿದ. ಭಕ್ತರೆಲ್ಲ ಸೇರಿ ಫೇಸ್‌ಬುಕ್‌ನಲ್ಲಿ ಕಾಸಿಯನ್ನು ಟ್ರೋಲ್ ಮಾಡತೊಡಗಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)