varthabharthi


ಭೀಮ ಚಿಂತನೆ

ಬೌದ್ಧ ಧರ್ಮವು ಹಿಂದೂ ಧರ್ಮದ ಶಾಖೆ ಎಂಬುದು ಸತ್ಯವೇ!?

ವಾರ್ತಾ ಭಾರತಿ : 15 Feb, 2019

ಭಾಗ-1

‘‘ದಿನಾಂಕ 25ನೆಯ ನವೆಂಬರ್ 1956ರಂದು ಬೆಳಗ್ಗೆ 10 ಗಂಟೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾಶಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತನ್ನು ಉದ್ಘಾಟನೆ ಮಾಡಿದರು.
ಉದ್ಘಾಟನಾಪರವಾದ ತಮ್ಮ ಭಾಷಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದರು,
‘‘ಬೌದ್ಧ ಧರ್ಮವು ಉತ್ಪತ್ತಿಗೊಂಡ ಸಂಬಂಧವಾಗಿ ಹಲವಾರು ಅಜ್ಞಾನಗಳು ನಮಗೆ ಕಾಣಿಸುತ್ತವೆ. ಪಾಚೀನ ಭಾರತದ ಬಗೆಗೆ ಸಂಬಂಧಿಸದ ಮೂರನೆಯವನೊಬ್ಬನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗೆ ಬುದ್ಧಪೂರ್ವ ಕಾಲದ ಎರಡು ಸಂಘರ್ಷಗಳು ಕಾಣಸಿಗುತ್ತವೆ.

ಸದ್ಯ ಹಿಂದೂ ಎಂಬುದಾಗಿ ತಿಳಿದುಕೊಂಡಿರುವ ಬಹಳಷ್ಟು ಜನರು ನಾಗವಂಶೀಯರಾಗಿದ್ದಾರೆ. ಯಾವ ನಾಗಾ ಜನರು ಆರ್ಯಪೂರ್ವ ಭಾರತದಲ್ಲಿ ನೆಲೆಸಿದ್ದರೋ ಅವರು ಆರ್ಯರಿಗಿಂತಲೂ ಅಧಿಕ ಸುಸಂಸ್ಕೃತರಾಗಿದ್ದರು. ಅವರನ್ನು ಆರ್ಯರು ಜಯಿಸಿದರು. ಇಷ್ಟರಿಂದ ಆರ್ಯರ ಸಂಸ್ಕೃತಿಯೇನು ಅವರಿಗಿಂತಲೂ ಶ್ರೇಷ್ಠ ಎಂದು ಹೇಳುವಂತಿಲ್ಲ. ಆರ್ಯರ ವಿಜಯದ ಕಾರಣವೆಂದರೆ ಅವರ ವಾಹನಗಳು. ಆರ್ಯರು ಕುದುರೆಗಳ ಮೇಲೆ ಸವಾರಿ ಮಾಡುತ್ತಾ ಯುದ್ಧ ಮಾಡುತ್ತಿದ್ದರೆ, ನಾಗಾಗಳು ನೆಲದ ಮೇಲೆ ನಿಂತು ಯುದ್ಧ ಮಾಡುತ್ತಿದ್ದರು. ಆರ್ಯರು -ನಾಗಗಳ ನಡುವಣ ಯುದ್ಧವು ಪ್ರಾಣವನ್ನೇ ಪಣವಾಗಿಟ್ಟು ಭೀಕರವಾಗಿ ಹೋರಾಟ ಮಾಡಿದುದಾಗಿತ್ತು. ಮಹಾಭಾರತದಲ್ಲಿನ ಖಾಂಡವನ ಮತ್ತು ಸರ್ಪಸತ್ರ ಎಂಬ ಕಥೆಗಳಲ್ಲಿನ ಕಾಲ್ಪನಿಕತೆಯನ್ನು ತೆಗೆದು ಹಾಕಿದರೆ ಆರ್ಯ-ನಾಗಾಗಳ ಯುದ್ಧದ ಭಯಾನಕ ಸ್ವರೂಪವು ನಮ್ಮ ದೃಷ್ಟಿಗೆ ಬರತ್ತದೆ. ಆರ್ಯರು ಖಾಂಡವನ ದಹನದಂತಹ ಅಂದರೆ ಠ್ಚಟ್ಟ್ಚಛಿ ಛಿಚ್ಟಠಿ ಟ್ಝಜ್ಚಿಯಂತಹ ಕೃತ್ಯವನ್ನು ಮಾಡುವ ಮೂಲಕ ನಾಗಾಗಳನ್ನು ಸಂಪೂರ್ಣವಾಗಿ ನಾಶ ಮಾಡಿದರು. ಈ ವಿಧ್ವಂಸನದಿಂದ ಅಗಸ್ತ್ಯ ಮುನಿಯು ಒಬ್ಬ ನಾಗನನ್ನು ರಕ್ಷಿಸಿದ್ದನು ಎಂಬ ಕಥೆಯು ಇದೆ.

ಕಥೆಯಲ್ಲಿ ಅತಿಶಯೋಕ್ತಿಯು ಏನೇ ಇದ್ದರೂ ನಾಗಾಗಳ ಮನಸ್ಸಿನಲ್ಲಿ ಆರ್ಯರ ವಿಷಯವಾಗಿ ದ್ವೇಷ ಭಾವನೆಯು ಬೇರೂರಿತು. ಪರೀಕ್ಷಿತನ ಪ್ರಾಣವನ್ನು ತೆಗೆಯಲು ಬಂದ ತಕ್ಷಕನು ಯಾವುದೋ ಒಂದು ಸರ್ಪವಾಗಿರದೆ ನಾಗವಂಶೀಯನಾದ ಒಬ್ಬ ನೇತಾರನಾಗಿದ್ದನು. ಆರ್ಯ ಜನರ ಮನಸ್ಸಿನಲ್ಲಿ ನಾಗಾಗಳ ವಿಷಯವಾಗಿ ಇದ್ದಂತಹ ದ್ವೇಷಕ್ಕೆ ಉದಾಹರಣೆಯಾಗಿ, ಕರ್ಣಾರ್ಜುನರ ಯುದ್ಧಕ್ಕೆ ಮೊದಲು ಕರ್ಣ ಮತ್ತು ಅನಂತ ಎಂಬವನ ನಡುವೆ ನಡೆದ ಸಂಭಾಷಣೆಯನ್ನು ಉಲ್ಲೇಖಿಸಬಹುದು. ಕರ್ಣಾರ್ಜುನರ ಯುದ್ಧವು ನಡೆಯುವುದಕ್ಕೆ ಮೊದಲು ಅನಂತ ಎಂಬ ನಾಗವಂಶೀಯನೊಬ್ಬನು ಕರ್ಣನನ್ನು ಭೇಟಿಯಾದನು. ತಾನು ಅರ್ಜುನನಿಗೆ ವಿರುದ್ಧವಾಗಿ ನಿನಗೆ ಸಹಾಯವನ್ನು ಮಾಡುವುದಾಗಿ ಆಶ್ವಾಸನೆ ಕೊಡುತ್ತಾನೆ. ಆದರೆ ಕರ್ಣನು ಆ ಸಹಾಯವನ್ನು ನಿರಾಕರಿಸಿದನು. ಕಾರಣ ಕರ್ಣನು ಆರ್ಯನಾಗಿದ್ದನು. ಇನ್ನು ಆ ಅನಂತನು ನಾಗಾ ವಂಶೀಯನಾಗಿದ್ದನು. ಆರ್ಯರು ತಮ್ಮ ತಮ್ಮ ನಡುವೆ ನಡೆಯುವ ಯುದ್ಧದಲ್ಲಿ ನಾಗಾಗಳ ಸಹಾಯವನ್ನು ಪಡೆಯುವುದು ನಿಷಿದ್ಧವಾಗಿತ್ತು.

 ಬುದ್ಧ ಪೂರ್ವ ಕಾಲದಲ್ಲಿನ ಎರಡನೆಯ ಸಂಘರ್ಷವೆಂದರೆ, ಬ್ರಾಹ್ಮಣ -ಕ್ಷತ್ರಿಯರ ನಡುವಣದ್ದು. ಈ ಹೋರಾಟದ ವರ್ಣನೆಯು ಮುಂದೆ ಪುರಾಣದಲ್ಲಿಯೂ ಬಂದಿತು. ಅದರಂತೆ ಮನುವು ತನ್ನ ಸ್ಮತಿಯಲ್ಲಿ ಕ್ಷತ್ರಿಯರು ಬ್ರಾಹ್ಮಣರನ್ನು ಆದರದಿಂದ ಏಕೆ ನಡೆಸಿಕೊಳ್ಳಬೇಕು ಎಂಬುದರ ಕಾರಣಗಳನ್ನು ನೀಡುವಾಗ, ಪೂರ್ವಕಾಲೀನ ಬ್ರಾಹ್ಮಣ-ಕ್ಷತ್ರಿಯರ ಸಂಗ್ರಾಮದ ಉಲ್ಲೇಖನವನ್ನು ಮಾಡಿದ್ದಾನೆ.
ಆರ್ಯ ಮತ್ತು ನಾಗಾ, ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಣ ಹೋರಾಟಗಳು ನಡೆಯುತ್ತಿದ್ದುದನ್ನು ಬ್ರಾಹ್ಮಣರು ಋಗ್ವೇದದ ಪುರುಷಸೂಕ್ತದಲ್ಲಿ ಅಂತರ್ಭವಗೊಳಿಸಿದ್ದಾರೆ. ಪುರುಷಸೂಕ್ತಕ್ಕೆ ಪೂರ್ವದಲ್ಲಿನ ಚಾತುರ್ವರ್ಣ್ಯದಲ್ಲಿ ನಾಲ್ಕೂ ವರ್ಣಗಳವರು ಸಮಾನ ಪಾತಳಿಯನ್ನು ಹೊಂದಿದವರಾಗಿದ್ದರು. ಪುರುಷಸೂಕ್ತವು ಉಚ್ಚನೀಚತೆಯ ತತ್ತ್ವವನ್ನು ಸಮಾಜಕ್ಕ್ಕೂ ಚಾಲ್ತಿಗೊಳಿಸಿತು. ಈ ಸುಮಾರಿನಲ್ಲಿಯೇ ಬುದ್ಧನು ಭಾರತೀಯ ಜೀವನದಲ್ಲಿ ಪ್ರವೇಶ ಮಾಡಿದನು. ಯಾವ ಶಾಕ್ಯ ಕುಲದಲ್ಲಿ ಗೌತಮನ ಜನನವಾಗಿತ್ತೋ ಅವರ ಗಣರಾಜ್ಯವು ಪ್ರಜಾಪ್ರಭುತ್ವದ ಸ್ವರೂಪದಲ್ಲಿತ್ತು. ಪ್ರಜಾಪ್ರಭುತ್ವದ ಪರಂಪರೆಯಲ್ಲಿ ಬೆಳೆದ ಗೌತಮನಿಗೆ ಚಾತುರ್ವರ್ಣ್ಯವು ಅಮಾನ್ಯವಾಗಿತ್ತು. ಸದ್ಯದ ಸ್ವರೂಪದಲ್ಲಿನ ಬೌದ್ಧ ಧರ್ಮವು ನಾನಾ ವಿಧದ ಸಿದ್ಧಾಂತಗಳಿಂದ ಕೂಡಿದ ಮಹಾಸಾಗರವಾಗಿದೆ. ಆದರೆ ಬೌದ್ಧ ಧರ್ಮದ ಮಧ್ಯವರ್ತಿ ಸಿದ್ಧಾಂತ ಅಥವಾ ಬುದ್ಧಮತವು ಸಮಾನತೆಯನ್ನು ಆಧರಿಸಿರುವುದೇ ಆಗಿತ್ತು.

ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ ಜನರಲ್ಲಿ ಬಹುತೇಕ ನಾಗವಂಶೀಯರು ಮತ್ತು ಚಾತುರ್ವರ್ಣ್ಯದಲ್ಲಿ ಹೀನರೆಂಬುದಾಗಿ ಪರಿಗಣಿಸಲ್ಪಟ್ಟಿದ್ದ ಶೂದ್ರ ವರ್ಣದವರೇ ಇದ್ದರು. ನಾಗಾಗಳ ಯುದ್ಧಪ್ರೀತಿ ಮುಚಲಿಂದ ಎಂಬ ನಾಗಾನೊಬ್ಬನ ಕಥೆಯಿಂದ ಹೆಚ್ಚು ಪ್ರಸಿದ್ಧವಾಗಿದೆ. ಮುಚಲಿಂದನಿಗೆ ಅಗ್ನಿಹೋತ್ರಿ ಕಾಶ್ಯಪ ಎಂಬವನೊಡನೆ ವೈರವಿತ್ತು. ಆದರೆ ಕೊನೆಗೆ ಆತ ಕಶ್ಯಪನ ಹತ್ತಿರ ಆತಿಥ್ಯಕ್ಕಾಗಿ ಬಂದಿದ್ದ ಬುದ್ಧನಿಗೆ ಅವನು ಸೇವಕನಾದನು. ಬೌದ್ಧ ಧರ್ಮದ ಅಭಿವೃದ್ಧಿಯ ಕಾರಣವೇನೆಂದರೆ ಶೂದ್ರಾತಿಶೂದ್ರರು ಅದನ್ನು ಬಹುಸಂಖ್ಯೆಯಲ್ಲಿ ಸ್ವೀಕರಿಸುದುದು. ಬೌದ್ಧ ವಾಙ್ಮಯದಲ್ಲಿ ಮತ್ತು ವಿಶೇಷವಾಗಿ ಥೇರ ಮತ್ತು ಥೇರೀಗಾಥಗಳಲ್ಲಿನ ಆಧಾರದಿಂದ ಇದನ್ನು ಸಿದ್ಧಪಡಿಸುವುದಕ್ಕೆ ಸಾಧ್ಯವಾಗುತ್ತದೆ.

ಬೌದ್ಧ ಧರ್ಮವು ಹಿಂದೂ ಧರ್ಮದ್ದೇ ಒಂದು ಶಾಖೆಯಾಗಿದೆ ಎಂಬ ಅಭಿಪ್ರಾಯವು ಇತ್ತೀಚೆಗೆ ಬಹಳ ಕಡೆಯಲ್ಲಿ ಹರಿದಾಡುತ್ತಿದೆ. ವಸ್ತುತಃ ಬೌದ್ಧಪ್ರಣೀತ ಧರ್ಮವು ಸಮಕಾಲೀನವಾಗಿತ್ತು. ಅದು ವೈದಿಕ ಅಥವಾ ಬ್ರಾಹ್ಮಣ ಧರ್ಮಕ್ಕಿಂತಲೂ ಬುದ್ಧನು ಅವುಗಳಿಗೆ ವಿರೋಧವಾಗಿದ್ದನು. ಕಲಾಮ ಸೂಕ್ತದಲ್ಲಿ ಬುದ್ಧನು ಮನುಷ್ಯನಿಗೆ ವಿಚಾರ ಸ್ವಾತಂತ್ರವು ಇರಬೇಕು ಎಂಬುದಾಗಿಯೂ ಮತ್ತು ವೇದಗಳು ಮನುಷ್ಯರಿಗಾಗಿ ಸದಾಸರ್ವಕಾಲವು ಬೇಕಾಗುವಂತಹ ವಿಚಾರಗಳನ್ನು ಸಿದ್ಧಪಡಿಸಿಕೊಟ್ಟಿಲ್ಲ ಎಂಬುದಾಗಿ ಪ್ರತಿಪಾದನೆ ಮಾಡಿದ್ದಾನೆ. ಬುದ್ಧನ ವೇದ ಪ್ರಮಾಣಗಳ ಮೇಲಿನ ಆಘಾತವು ಮುಂದೆ ಬಂದಂತಹ ಹಿಂದೂಗಳ ಭಗವದ್ಗೀತೆಯಂತಹ ಗ್ರಂಥದ ಮೇಲೆಯೂ ಪ್ರಭಾವವನ್ನು ಬೀರಿದೆ. ವೇದಪಾಠಕರು ಗೀತೆಯನ್ನು ಒಂದೆಡೆಯಲ್ಲಿ ಪೊಳ್ಳು ಎಂಬುದಾಗಿ ಸಂಬೋಧಿಸಿದ್ದಾರೆ. ಬುದ್ಧನು ವೇದಗಳನ್ನು ಮರಳುಗಾಡು ಎಂದು ಉಲ್ಲೇಖಿಸಿದ್ದಾನೆ.

ವೇದಗಳಲ್ಲಿ ಪ್ರಧಾನವಾಗಿ ಇಂದ್ರಾದಿ ದೇವತೆಗಳಿಗೆ ಉತ್ಕೃಷ್ಟವಾದ ಕುದುರೆಗಳು, ತೇಜಸ್ವಿಯಾದ ಶಸ್ತ್ರಾಸ್ತ್ರಗಳು, ಶತ್ರುವಿನ ಮೇಲೆ ವಿಜಯ ಇತ್ಯಾದಿ ಐಹಿಕ ಸುಖೋಪಭೋಗಗಳಿಗಾಗಿ ಮಾಡಿದಂತಹ ಪ್ರಾರ್ಥನೆಗಳಿವೆ. ಅದರಲ್ಲಿ ಉದಾತ್ತ ನೀತಿತತ್ವಗಳ ಬೋಧನೆಗಳು ಇಲ್ಲ. ಹಾಗಾಗಿ ಬುದ್ಧನು ಅವುಗಳನ್ನು ಧಿಕ್ಕರಿಸುತ್ತಾನೆ. ಬುದ್ಧನು ತನ್ನ ಸಮಕಾಲೀನ ಧರ್ಮದ ಮೇಲೆ ಮಾಡಿದ ಮತ್ತೊಂದು ಆಘಾತವೆಂದರೆ ಯಜ್ಞಸಂಸ್ಥೆಯನ್ನು ಕುರಿತದ್ದು. ಹಸು ಎತ್ತುಗಳನ್ನು ಬಲಿಕೊಟ್ಟರೆ ನಿಮಗೆ ಯಾವ ಉಚ್ಚ ಶ್ರೇಯಸ್ಸು ಬರುತ್ತದೆ? ಎಂಬುದಾಗಿ ಆ ಯಾಜ್ಞಿಕರಿಗೆ ಪ್ರಶ್ನೆ ಮಾಡಿದ್ದಾನೆ. ಯಜ್ಞಸಂಸ್ಥೆಯ ಬಗೆಗಿನ ಬುದ್ಧನ ಟೀಕೆಗಳಿಂದಾಗಿ ಹಿಂದೂಗಳಿಗೆ ಇಂದ್ರ, ವರುಣಾದಿ ದೇವತೆಗಳನ್ನೆಲ್ಲ ಕೈಬಿಡಬೇಕಾಗಿ ಬಂದಿತು. ಬುದ್ಧನು ಪಶುಹತ್ಯೆಯನ್ನು ನಿರ್ಭತ್ಸನ ಮಾಡಿದನು ಮತ್ತು ಯಜ್ಞದ ವೈಫಲ್ಯಗಳನ್ನು ಜನರಿಗೆ ತಿಳಿಸಿಕೊಟ್ಟನು. ಹಾಗಾಗಿ ಬ್ರಾಹ್ಮಣರಿಗೆ ತಮ್ಮ ಪ್ರಾಚೀನ ಆಚಾರ - ವಿಚಾರಗಳನ್ನಲ್ಲಾ ಕೈಬಿಡಬೇಕಾಗಿ ಬಂದಿತು.

ಆಶ್ರಮ ವ್ಯವಸ್ಥೆಯ ಸಂಬಂಧವಾಗಿಯೂ ಬುದ್ಧನ ವಿಚಾರಗಳು ಪ್ರಚಲಿತ ವೈಧಿಕ ಧರ್ಮಕ್ಕಿಂತಲೂ ಬೇರೆಯೇ ಆಗಿದ್ದವು. ಬ್ರಾಹ್ಮಣರ ಅಭಿಪ್ರಾಯದಲ್ಲಿ ಬ್ರಹ್ಮಚರ್ಯದ ನಂತರ ಸನ್ಯಾಸವನ್ನು ಸ್ವೀಕರಿಸಲು ಯಾವುದೇ ಅಡ್ಡಿಯಲ್ಲ. ಆದರೆ ಬುದ್ಧನ ಅಭಿಪ್ರಾಯದಲ್ಲಿ ಬ್ರಹ್ಮಚರ್ಯದ ಮೂಲ ಅರ್ಥವೇ ಜ್ಞಾನರ್ಜನದ ಅವಸ್ಥೆ. ಅವಿವಾಹಿತ ಅವಸ್ಥೆ ಎಂಬುದನ್ನು ಅದಕ್ಕೆ ಆನಂತರದಲ್ಲಿ ಆರೋಪಿಸಿದ ಅರ್ಥವಾಗಿದೆ. ಬ್ರಾಹ್ಮಣರು ಗೃಹಸ್ಥಾಶ್ರಮದ ಕಾಲವನ್ನು ಬೆಳೆಸುವುದಕ್ಕಾಗಿ ಅದಕ್ಕೆ ವಾನಪ್ರಸ್ಥಾಶ್ರಮ ಎಂಬುದೊಂದು ಜೋಡಿಸಿದರು. ಬ್ರಹ್ಮ ಚರ್ಯೆ ನಂತರ ಸನ್ಯಾಸ ಸ್ವೀಕರಿಸುವುದಕ್ಕೆ ಬ್ರಾಹ್ಮಣರಿಗೆ ಅಡ್ಡಿಯಾಗಿತ್ತು. ಸಾವಿರದ ಒಂದು ನೂರು ವರ್ಷಗಳ ಹಿಂದೆ ಕುಮಾರಿಲ ಭಟ್ಟನು ಬುದ್ಧನ ಮೇಲೆ ಮಾಡಿದ ಆಕ್ಷೇಪದಲ್ಲಿ ಬುದ್ಧನ ಸನ್ಯಾಸದ ವಿಷಯದ ಮೇಲೆಯೇ ಹೆಚ್ಚು ಒತ್ತು ನೀಡಿದ್ದಾನೆ. ವೈದಿಕ ಧರ್ಮದ ಬಗೆಗೆ ಬುದ್ಧನ ನಾಲ್ಕನೇ ವಿರೋಧವು ಚಾತುರ್ವಣ್ಯವನ್ನು ಕುರಿತಾಗಿತ್ತು. ಅವನ ಶಿಷ್ಯರಲ್ಲಿ ಉಚ್ಚ- ನೀಚವೆಂದು ಭಾವಿಸಿದ್ದ ಎಲ್ಲಾ ಜಾತಿಯವರೂ ಇದ್ದರು.

ಆದರೆ ತನ್ನ ಶಿಷ್ಯರಲ್ಲಿ ಮಾತ್ರ ಉಚ್ಚ- ನೀಚ ಎಂಬ ಭಾವನೆಗೆ ಜಾಗವೇ ಇರಬಾರದು ಎಂಬ ವಿಷಯದಲ್ಲಿ ಆತ ಬಹಳ ದಕ್ಷತೆಯನ್ನು ತೋರಿಸುತ್ತಿದ್ದನು. ತನ್ನ ಚಿಕ್ಕಪ್ಪನ ಮಕ್ಕಳಿಗೆ ತಮ್ಮ ಕ್ಷತ್ರಿಯತ್ವದ ಅಭಿಮಾನವೂ ಇರಬಾರದು ಎಂಬ ಕಾರಣದಿಂದ ಅವನು ಅವರ ಜೊತೆಯಲ್ಲಿಯೇ ಬಂದಿದ್ದ ‘ಉಪಾಲಿ’ ಎಂಬಾತನಿಗೆ ಪ್ರಥಮವಾಗಿ ದೀಕ್ಷೆಯನ್ನು ಕೊಟ್ಟಿದ್ದನು. ಯಾರ ದೀಕ್ಷೆಯು ಮೊದಲು ಆಯಿತೋ ಅದರ ನಂತರ ದೀಕ್ಷೆಯನ್ನು ತೆಗೆದು ಕೊಳ್ಳುವವರನ್ನು ವಂದ್ಯರೆಂದು ಭಾವಿಸಬೇಕಾಗುತ್ತದೆ. ಹಾಗಾಗಿ ಕ್ಷತ್ರಿಯರಾಗಿದ್ದ ಶಾಕ್ಯರಿಗೆ ತಮ್ಮ ಪೂರ್ವಾಶ್ರಮದಲ್ಲಿ ತಮಗೆ ನಾಪಿತ ಸೇವಕನಾಗಿದ್ದ ಉಪಾಲಿಗೆ ಅಭಿನಂದನೆ ಸಲ್ಲಿಸಬೇಕಾಗಿ ಬಂದಿತು. ತನ್ನ ಜೀವನದ ಕೊನೆಯದಿನದಂದು ಕೂಡ ಚುಂದ ಎಂಬ ಹೀನ ಜಾತಿಯವನೆಂದು ತಿಳಿಯಲಾಗಿದ್ದ ಕಮ್ಮಾರನ ಮನೆಯ ಅನ್ನವನ್ನು ತನ್ನ ಆರೋಗ್ಯಕ್ಕೆ ಅನಿಷ್ಟವಾದುದು ಎಂಬುದನ್ನು ತಿಳಿದಿದ್ದರೂ ಅವನು ಸೇವಿಸಿದನು. ಈ ಮೂಲಕ ಸಾಮಾಜಿಕ ಸಮಾನತೆಗಾಗಿ ತನ್ನ ಪ್ರಾಣವನ್ನೇ ಪಣವಾಗಿ ಕೊಡಬೇಕಾಯಿತು. ಹೀಗೆ ಚಾತುರ್ವರ್ಣ್ಯ ವಿರೋಧಿಯಾದ ಹಲವಾರು ಪ್ರಸಂಗಗಳನ್ನು ಬುದ್ಧನ ಜೀವನದಿಂದ ಉಲ್ಲೇಖಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)