varthabharthi


ಬುಡಬುಡಿಕೆ

ಹಾಲು ತೆಳುವಾಗಿದೆ ಎಂದರೆ ಗೋಮಾತೆಗೆ ಅವಮಾನ!

ವಾರ್ತಾ ಭಾರತಿ : 10 Mar, 2019
ಚೇಳಯ್ಯ chelayya@gmail.com

ಘಟನೆ -1
‘‘ಏನಪ್ಪಾ ? ಹಾಲು ಇತ್ತೀಚೆಗೆ ನೀರು ನೀರು....ಯಾಕೆ ಹೀಗೆ?’’
‘‘ಹಾಲು ನೀರು ನೀರು ಎಂದರೆ...? ’’
‘‘ಅದೇ ಕಣಪ್ಪಾ...ದನದ ಹಾಲು ಇಷ್ಟು ತೆಳುವಾಗಿದೆ ಯಾಕೆ?’’
‘‘ಅಮ್ಮಾ ಹಣೆಗೆ ಕುಂಕುಮ ಇಟ್ಟಿದ್ದೀರಾ? ನಮ್ಮ ಗೋಮಾತೆಯ ಮೇಲೆ ಅನುಮಾನ ಪಡುತ್ತಿದ್ದೀರಲ್ಲ? ನೀವೂ ಭಾರತೀಯರ? ’’
‘‘ನಾನು ಅನುಮಾನ ಪಡುತ್ತಿರುವುದು ನಿನ್ನ ಮೇಲೆ, ಗೋಮಾತೆಯ ಮೇಲೆ ಅಲ್ಲ? ’’
‘‘ನೋಡಿಯಮ್ಮ...ನೀವು ಈ ರೀತಿ ಪ್ರಶ್ನೆ ಮಾಡೋದರಿಂದ ನಮ್ಮ ಗೋಮಾತೆಗೆ ಅವಮಾನಿಸ್ತಾ ಇದ್ದೀರ. ಇದರಿಂದ ಭಾರತೀಯ ಸಂಸ್ಕೃತಿಯನ್ನು ನಿಂದಿಸುತ್ತಾ ಇದ್ದೀರಿ....ಇನ್ನು ಈ ಥರ ಪ್ರಶ್ನೆ ಕೇಳಿದರೆ ನಾನು ಗೋರಕ್ಷಕರಿಗೆ ದೂರು ನೀಡಬೇಕಾಗುತ್ತೆ. ಜೊತೆಗೆ ನಿಮ್ಮ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕಾಗುತ್ತದೆ’’
‘‘ಸರಿ ಕಣಪ್ಪ. ಹಾಲು ಚೆನ್ನಾಗಿಯೇ ಇದೆ. ಇನ್ನು ಮುಂದೆ ಈ ರೀತಿಯೆಲ್ಲ ಪ್ರಶ್ನೆ ಮಾಡಲ್ಲ’’ ಎಂದವರೇ ಕಮಲಮ್ಮ ಹಾಲಿನ ಜೊತೆ ಮನೆ ಸೇರಿ, ಬದುಕಿದೆಯಾ ಬಡಜೀವ ಎಂದು ನಿಟ್ಟುಸಿರು ಬಿಟ್ಟರು.
 ಘಟನೆ-2
‘‘ಲೋ ಗುಂಡಾ...ತೆಗಿಯೋ ಲೆಕ್ಕ ಪುಸ್ತಕ. ನಿನ್ನೆ ಕೊಟ್ಟ ಮನೆಕೆಲಸ ಮಾಡಿದ್ದೀಯೇನೋ?’’ ಮೇಷ್ಟ್ರು ಕೇಳಿದರು.
‘‘ಸಾರ್ ಪುಸ್ತಕ ಕಳೆದು ಹೋಗಿದೆ...’’ ಗುಂಡ ನಿರಾಳವಾಗಿ ಹೇಳಿ ಬಿಟ್ಟ.
‘‘ಎಲ್ಲಿ ಕಳೆದು ಹೋಯಿತು...? ’’ ಮೇಷ್ಟ್ರು ಸಿಟ್ಟಾದರು.

‘‘ಸಾರ್...ಚೀಲದಲ್ಲೇ ಇಟ್ಟಿದ್ದೆ. ಕಳೆದು ಹೋಯಿತು...’’ ‘‘ಚೀಲದಲ್ಲಿಟ್ಟಿದ್ರೆ ಕಳೆದು ಹೋಗೋದು ಹೇಗೆ....ಮರ್ಯಾದೆಯಲ್ಲಿ ಲೆಕ್ಕ ಪುಸ್ತಕ ತೋರಿಸು. ಸುಳ್ಳು ಹೇಳಬೇಡ’’
‘‘ಸಾರ್ ನೀವು ನಮ್ಮ ಪ್ರಧಾನಿಯನ್ನು ಅವಮಾನಿಸ್ತಾ ಇದ್ದೀರ....’’
‘‘ಏನೋ ತಲೆ ಕೆಟ್ಟಿದೆಯೋ? ’’
‘‘ಸಾರ್...ಪ್ರಧಾನಿಯವರೂ ರಕ್ಷಣಾ ಇಲಾಖೆಗೆ ಸಂಬಂಧ ಪಟ್ಟ ದಾಖಲೆ ಕಳೆದುಕೊಂಡಿದ್ದಾರೆ. ಅದನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಇನ್ನು ನಿಮ್ಮದೇನು ಸಾರ್? ’’
‘‘ಅದಕ್ಕೂ ಇದಕ್ಕೂ ಸಂಬಂಧ ಏನೋ? ’’ ಮೇಷ್ಟ್ರು ಆತಂಕದಿಂದ ಕೇಳಿದರು.
‘‘ಸಾರ್...ರಕ್ಷಣಾ ಇಲಾಖೆಯಲ್ಲಿರುವ ದಾಖಲೆಗಳೇ ಕಳವಾಗುತ್ತದೆ. ಇನ್ನು ನನ್ನ ಹರಿದ ಚೀಲದಲ್ಲಿರುವ ದಾಖಲೆ ಕಳವಾದರೆ ಏನು ಮಹಾ. ಸುಮ್ನೆ ಮುಚ್ಕೊಂಡು ಪಾಠ ಮಾಡಿ ಸಾರ್...ಇಲ್ಲ ಮೋದಿ ಅಭಿಮಾನಿಗಳನ್ನು ಕರೆಸಿ ೇರಾವ್ ಹಾಕಬೇಕಾಗುತ್ತದೆ’’
‘‘ಸರಿ ಕಣಪ್ಪ....ಇರಲಿ....ನಾಳೆ ಬರೋವಾಗ ಆ ಲೆಕ್ಕ ಪುಸ್ತಕದ ಜೆರಾಕ್ಸ್ ಕಾಪಿಯನ್ನಾದರೂ ಹಿಡ್ಕೊಂಡು ಬಾ....’’
‘‘ನೋಡೋಣ ಸಾರ್....ಮೋದಿ ಸಾಹೇಬರು ಏನು ಹೇಳ್ತಾರೆ ಅನ್ನೋದನ್ನು ನೋಡಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ...’’
 ಘಟನೆ-3
‘‘ನೋಟು ನಿಷೇಧದಿಂದ ದೇಶಕ್ಕೆ ಲಾಭವಾಗಿದೆ’’ ನಗರದ ಮಧ್ಯದಲ್ಲಿ ನಿಂತು ಭಕ್ಕ ಚೀರಿದ.
‘‘ಏನು ಲಾಭವಾಗಿದೆ?’’ ಯಾರೋ ಕೇಳಿದರು.
‘‘ಪಾಕಿಸ್ತಾನ ಪಾಠ ಕಲಿತಿದೆ’’
‘‘ಯಾವ ಪಾಠ ಕಲಿತಿದೆ? ’’
‘‘ಅದು ಹೆದರಿದೆ’’
‘‘ಹೆದರಿದ್ದಕ್ಕೆ ಸಾಕ್ಷಿ ಏನು? ’’
‘‘ನೀನು ದೇಶದ ಸೈನಿಕರ ವಿರುದ್ಧ ಮಾತನಾಡುತ್ತಿದ್ದೀಯ.... ಪಾಕಿಸ್ತಾನಕ್ಕೆ ನಡೆ...’’ ಎಲ್ಲರೂ ಸೇರಿ ಪ್ರಶ್ನೆ ಕೇಳಿದವರನ್ನು ತದುಕಿದರು.
‘‘ಜಿಎಸ್‌ಟಿಯಿಂದ ವ್ಯವಹಾರ ಸುಲಭವಾಗಿದೆ. ಬೆಲೆ ಇಳಿಕೆಯಾಗಿದೆ....ಜನ ಖುಷಿಯಲ್ಲಿದ್ದಾರೆ’’ ಭಕ್ತ ಮುಂದುವರಿಸಿದ.
‘‘ಯಾರು ಖುಷಿಯಲ್ಲಿದ್ದಾರೆ? ’’
‘‘ನಾವೆಲ್ಲ ಖುಷಿಯಲ್ಲಿದ್ದೇವೆ’’ ಭಕ್ತ ತನ್ನ ಸಮೂಹವನ್ನು ತೋರಿಸಿದ.
‘‘ಆದರೆ ನಾನು ಖುಷಿಯಲ್ಲಿಲ್ಲ’’ ಯಾರೋ ಒಬ್ಬ ಹೇಳಿದ.

‘‘ಅವನು ತೆರಿಗೆ ವಂಚಕ. ದೇಶದ್ರೋಹಿ. ಹಿಡಿಯಿರಿ, ಬಡಿಯಿರಿ’’ ಎಲ್ಲರೂ ಸೇರಿ ಆತನನ್ನು ತದುಕಿದರು. ‘‘ಭಾರತ ವಿಶ್ವಗುರುವಾಗಿದೆ. ಇಡೀ ವಿಶ್ವ ಭಾರತದ ಸಾಧನೆಯನ್ನು ನೋಡಿ ವಿಸ್ಮಯ ಪಡುತ್ತಿದೆ....’’ ಭಕ್ತ ಮುಂದುವರಿಸಿದ.
‘‘ಯಾಕೆ ವಿಸ್ಮಯದಿಂದ ನೋಡುತ್ತಿದೆ? ’’ ಅಮಾಯಕನೊಬ್ಬ ಕೇಳಿದ.
‘‘ಭಾರತದಲ್ಲಿ ಮೋದಿ ಮಾಡಿದ ಸಾಧನೆಗಾಗಿ...’’
‘‘ಯಾವ ಸಾಧನೆ? ’’
‘‘ಗೋಮೂತ್ರದಿಂದ ಕ್ಯಾನ್ಸರ್‌ಗೆ ಔಷಧಿ ಕಂಡು ಹುಡುಕಿದೆ. ಚರಂಡಿಯಿಂದ ಗ್ಯಾಸ್ ಉತ್ಪಾದನೆ ಮಾಡುತ್ತಿದೆ. ಗೊಬ್ಬರದ ಬದಲು ಮಂತ್ರಗಳನ್ನು ಬಳಸಿ ಕೃಷಿ ಉತ್ಪಾದನೆ ಮಾಡುತ್ತಿದೆ...’’
‘‘ಭಾರತ ವಿಶ್ವದ ಹುಚ್ಚರ ಗುರುವಾಗಿರುವುದನ್ನು ನೋಡಿ ವಿಶ್ವ ವಿಸ್ಮಯ ಪಡುತ್ತಿರಬೇಕು’’ ಯಾರೋ ಉತ್ತರಿಸಿದರು.
‘‘ಯಾರದು ಹಿಡಿಯಿರಿ, ಕೊಲ್ಲಿರಿ...ದೇಶದ್ರೋಹಿಯನ್ನು....’’ ಭಕ್ತರ ಪಡೆ ಒಂದಾಗಿ ಘೋಷಿಸಿತು. ಪತ್ರಕರ್ತ ಎಂಜಲು ಕಾಸಿ ಅಲ್ಲಿಂದ ಓಡತೊಡಗಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)