varthabharthi


ಅನುಗಾಲ

ಚುನಾವಣೆಯ ಕುರಿತಂತೆ ಒಂದು ‘ರಾಷ್ಟ್ರೀಯ’ ವಿಚಾರ ಸಂಕಿರಣ!

ವಾರ್ತಾ ಭಾರತಿ : 14 Mar, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರಾಷ್ಟ್ರೀಯತೆಯೆಂದರೇನು ಎಂಬುದನ್ನು ಈ ಚುನಾವಣೆ ನಿರ್ಧರಿಸೀತೆಂದು ನಿರೀಕ್ಷಿಸುವಂತಿಲ್ಲ. ಅದು ಜನಸಾಮಾನ್ಯರ ಮನಸ್ಸಿನಲ್ಲಿ ಸೌಹಾರ್ದದ, ವೈಶಾಲ್ಯದ ಗುಪ್ತಗಾಮಿನಿಯಾಗಿ ಹಬ್ಬುವ ಹರಡುವ ಒಂದು ಉದಾತ್ತ ನೀತಿಯಾಗಿ ಉಳಿದರೆ ದೇಶ ಉಳಿದೀತು. ಈ ಕೆಲಸವನ್ನು ಅನುದಿನ ಮಹಾ ನಗರಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಕಿಸೆ ತುಂಬಿಸಿಕೊಳ್ಳುವ ಚಿಂತಕರು, ಸಾಹಿತಿಗಳು ಮಾಡುತ್ತಾರೆಂದು ನಂಬಲಾಗದು. ಅದನ್ನು ಜನರೊಂದಿಗೆ ನೇರ ಸಂಭಾಷಿಸುವವರಷ್ಟೇ ಮಾಡಬಲ್ಲರು. ಅಂತಹವರನ್ನು ಈ ಚುನಾವಣೆ ತಯಾರು ಮಾಡಿದರೆ ಅದು ಭವಿಷ್ಯಕ್ಕೆ ಪೂರಕವಾದೀತು.


1977ರ ಆನಂತರ ಇಷ್ಟೊಂದು ಮಹತ್ವದ ಚುನಾವಣೆ ನಡೆದಿರಲಿಕ್ಕಿಲ್ಲ. ವ್ಯತ್ಯಾಸವೆಂದರೆ ಆಗ ಸರ್ವಾಧಿಕಾರವನ್ನು ಭಜಿಸುತ್ತಿದ್ದವರು ಈಗ ಪ್ರಜಾಪ್ರಭುತ್ವದ ಮಂತ್ರವನ್ನು ಪಠಿಸುತ್ತಿದ್ದಾರೆ; ಆಗ ಪ್ರಜಾಪ್ರಭುತ್ವದ ಮಂತ್ರವನ್ನು ಪಠಿಸುತ್ತಿದ್ದವರು ಈಗ ಸರ್ವಾಧಿಕಾರವನ್ನು ಭಜಿಸುತ್ತಿದ್ದಾರೆ. ಹೌದು; ಹೌದಿನಿ ಮ್ಯಾಜಿಕ್ ಸರ್ಕಸ್‌ನಲ್ಲಿ ಮಾತ್ರವಲ್ಲ ನಿಜಜೀವನದಲ್ಲಿ ಅದರಲ್ಲೂ ರಾಜಕೀಯದಲ್ಲಿ ನಡೆಯುತ್ತಿದೆ! ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಹಜ; ಪಕ್ಷಗಳಿಗೆ ಸದಾ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಅದಮ್ಯ ಬಯಕೆಯಿರುತ್ತದೆ. ಆದರೆ ಮತದಾರರ ಪಾಲಿಗೆ ಬದಲಾವಣೆಯು ಅಪೇಕ್ಷಣೀಯ. ಪ್ರಭುತ್ವಕ್ಕೆ ತಾನು ಶಾಶ್ವತವೆಂಬ ವಿಶ್ವಾಸ ಬಂದರೆ ಪ್ರಜೆಗಳ ಪಾಡು ಗೋಳು. ಆಗಾಗ ಸ್ಥಾನಪಲ್ಲಟವಾಗುತ್ತದೆಂದು ಗೊತ್ತಿದ್ದರೆ ಅಧಿಕಾರಸ್ಥರು ಸ್ವಲ್ಪಜಾಗೃತರಾಗುತ್ತಾರೆ. ಆದರೆ ಪಕ್ಷಾಂತರವೆಂಬ ವೇಶ್ಯಾವೃತ್ತಿಯಿಂದಾಗಿ (ನನಗೆ ವೇಶ್ಯೆಯರನ್ನು ಅವಮಾನಿಸುವ ಉದ್ದೇಶವಿಲ್ಲ; ಅವರಿಗೆ ಒಂದಿರುಳಿನ ಅಥವಾ ಒಪ್ಪಂದದ ಅವಧಿಯ ಪಾತಿವ್ರತ್ಯವಾದರೂ ಇದ್ದೀತು; ಪ್ರಾಸಂಗಿಕ ಅಗತ್ಯಕ್ಕಾಗಿ ಮಾತ್ರ ಈ ಹೋಲಿಕೆ!) ಈಗ ಸೋಲು ಗೆಲುವುಗಳು ಕೆಲವೇ ರಾಜಕಾರಣಿಗಳನ್ನು ಬಾಧಿಸತೊಡಗಿದೆ.

ಬಹುಪಾಲು ರಾಜಕಾರಣಿಗಳು ಬಿಸ್ಕೆಟು ಎಸೆದವರ ಹಿಂದೆ ಓಡುವುದನ್ನು ರೂಢಿಮಾಡಿಕೊಂಡು ಡೊಂಕುಬಾಲದ ನಾಯಕರಾಗುತ್ತಿದ್ದಾರೆ. ಇಂತಹ ಹಲವು ಪ್ರಸಂಗಗಳು ಕಳೆದ ಕೆಲವು ದಶಕಗಳಿಂದ ಪ್ರಚಲಿತವಿದ್ದರೂ ಈಗ ಕೆಲವು ವರ್ಷಗಳಿಂದ ವಿಷದಂತೆ ಏರಿದೆ. ಪ್ರಧಾನಿ ಮೋದಿ ಮತ್ತು ಅನುಯಾಯಿಗಳು ಸದಾ ಹಳಿಯುತ್ತಿರುವ ನೆಹರೂ ಯುಗದಲ್ಲಿ ಈ ಪಕ್ಷಾಂತರವೆಂಬ ಜಾಡ್ಯವಿರಲಿಲ್ಲ. ಅಷ್ಟರ ಮಟ್ಟಿಗೆ ರಾಜಕೀಯಕ್ಕೂ ಒಂದು ನೀತಿಯಿತ್ತು. ಜನರ ಮತ್ತು ಪಕ್ಷದ ವಿಶ್ವಾಸವನ್ನು ಗಳಿಸಿದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಬಹುದೆಂಬ ವಾತಾವರಣವಿತ್ತು. ಸ್ಪರ್ಧೆಯಿತ್ತೇ ವಿನಾ ದ್ವೇಷವಿರಲಿಲ್ಲ. ಸಂಸತ್ತು ಮತ್ತು ಶಾಸನ ಸಭೆಗಳು ಗಣ್ಯತೆಯನ್ನೂ ಸೌಹಾರ್ದವನ್ನೂ ಉಳಿಸಿಕೊಂಡು ಬಂದಿದ್ದವು. ನೇಪಥ್ಯದಲ್ಲಿ ನಡೆಯುವ ಯಾವ ರಾಜಕೀಯ ತಂತ್ರಗಳೂ ವ್ಯಕ್ತಿ ಚಾರಿತ್ರ್ಯವನ್ನು ನಾಶಮಾಡುವ ಹಂತಕ್ಕೆ ಬಂದಿರಲಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ಅನೇಕ ಹೊಸತನ್ನು ತಂದ ಅಪಾರ ಕೀರ್ತಿಯಿದೆ. 1975ರಲ್ಲಿ ಇಂದಿರಾ ಗಾಂಧಿ ತುರ್ತುಸ್ಥಿತಿಯನ್ನು ತಂದಾಗ ನಿಜಕ್ಕೂ ಬೇರುಬೇರಿಗೆ ಪ್ರತಿಭಟನೆಯ ಕಾವನ್ನು ಮೂಡಿಸಿದ ಖ್ಯಾತಿ ಸಂಘಪರಿವಾರಕ್ಕೆ ಸಲ್ಲುತ್ತದೆ. ಎಲ್ಲೆಡೆ ನಾಯಕರಿದ್ದರೂ ಕಾರ್ಯಕರ್ತರ ಪಡೆಯನ್ನು ನಡೆಸಿದ್ದು ಬಲಪಂಥೀಯ ತಂಡಗಳು.

ಜನತಾ ಪಕ್ಷದೊಂದಿಗೆ ಮಿಶ್ರಣದಂತೆ ಸೇರಿಕೊಂಡು ಆನಂತರ ಅಲ್ಲೂ ಇಲ್ಲೂ ಸಲ್ಲದೆ ಬೇರೆಯಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡ ಪಕ್ಷ. ರಾಷ್ಟ್ರೀಯತೆಯ ಹೆಸರಿನಲ್ಲಿ ಅಧಿಕಾರದತ್ತ ನಡೆಯಲು ಹವಣಿಸಿದರೂ ಸಾಧ್ಯವಾಗದಾಗ ಧಾರ್ಮಿಕ ಮೂಲಭೂತವಾದವೇ ಅನಿವಾರ್ಯವಾಗಿ ಹೊರಹೊಮ್ಮಿತು. ಕೊನೆಗೆ ಅಧಿಕಾರ ಸಿಕ್ಕಿದಾಗ ಕಾಂಗ್ರೆಸ್‌ಗೆ ತಾನೇನೂ ಕಡಿಮೆಯಿಲ್ಲವೆಂಬಂತೆ ಎಲ್ಲ ಹಗರಣಗಳ ಜಾಲವನ್ನು ಮೈಗೆಳೆದುಕೊಂಡೂ ಧಾರ್ಮಿಕತೆಯ ಸೋಗಿನಿಂದ ರಾಷ್ಟ್ರೀಯವಾಗಿ ಬದಲಾದದ್ದು ಈಗ ಇತಿಹಾಸ. ಭಾರತೀಯತೆಯನ್ನು ಉಳಿಸಿ ಬೆಳೆಸುವ ಹೊಸ ವಿನ್ಯಾಸವನ್ನು ಆಕರ್ಷಕವಾಗಿ ಸೃಷ್ಟಿಸಿದ ಸಾಧನೆ ಭಾಜಪದ್ದು. ಇದರ ಅಪಾಯವನ್ನು ಅದು ಇನ್ನೂ ಗುರುತಿಸಿಲ್ಲ. ಅಧಿಕಾರ ದಕ್ಕುವುದಾದರೆ ಯುದ್ಧ ಮತ್ತು ಪ್ರೇಮದಂತೆ ಯಾವ ತಂತ್ರವೂ ಸರಿಯೆಂಬ ವ್ಯಾಖ್ಯಾನ ಅದರದ್ದು.

ಈಗಷ್ಟೇ ರಾಮಮಾಧವ ಎಂಬ ಭಾಜಪದ ನಾಯಕ (ಈತ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸಂಸ್ಕಾರಗೊಂಡ ದೃಢೀಕೃತ ದೇಶಭಕ್ತರು!) ಮೋದಿಯಿಲ್ಲದಿದ್ದರೆ ಈ ದೇಶಕ್ಕೊದಗಬಹುದಾದ ನಷ್ಟಗಳ ಪಟ್ಟಿ ಕೊಟ್ಟರು. ನಾಳೆಯೆಂಬುದೇ ಅನಿಶ್ಚಿತವಾಗಿರುವಾಗ ಒಬ್ಬ ವ್ಯಕ್ತಿಯ ಸುತ್ತ ಇಷ್ಟೊಂದು ಗಿರಕಿ ಹೊಡೆಯುವ ಮತ್ತು ಇಂತಹ ದಾಸಾನುದಾಸ್ಯದ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆಯೊಂದಿಗೆ ಇದು ಒಳ್ಳೆಯ ಮಾದರಿಯೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ತತ್ವ, ಸಿದ್ಧಾಂತ ಇವು ಮುಖ್ಯವಾಗಬೇಕೇ ವಿನಾ ವ್ಯಕ್ತಿಯಲ್ಲ ಎಂದೇ ನಿತ್ಯ ಬಾಯಿಬಡಿದುಕೊಳ್ಳುತ್ತಿರುವ ಸಂಘ ಪರಿವಾರ ಅದೇ ಕಾರಣಕ್ಕಾಗಿ ವ್ಯಕ್ತಿಯ ಬದಲು ಭಗವಾಧ್ವಜವನ್ನು ಪೂಜಿಸುವ ತನ್ನ ವೈಖರಿಯನ್ನು ಬಲಿಕೊಟ್ಟು ಆಗಲೇ ಎರಡು ದಶಕಗಳಾದವು. ಈಗ ಏನಿದ್ದರೂ ಶಿವನೆದುರು ಮುಖಮಾಡಿ ಕುಳಿತ ನಂದಿಯಂತೆ ಏಕಾಗ್ರತೆಯಿಂದ ಅಧಿಕಾರದತ್ತ ಮುಖ ನೋಡುವುದನ್ನೇ ರೂಢಿಸಿಕೊಂಡ ಭಕ್ತರಷ್ಟೇ ಉಳಿದಿದ್ದಾರೆ! ಬಹಳಷ್ಟು ದಿನಗಳಿಂದ ಬ್ರಹ್ಮಚಾರಿಯಾಗಿ ಉಳಿದವನಿಗೆ ಕಾಮವಾಸನೆ ಬಂದಂತೆ ಈ ಎಲ್ಲ ತ್ಯಾಗಿಗಳೂ ಯೋಗಿಗಳೂ ಅಧಿಕಾರದ ತೀಟೆಯಿಂದ ತಮ್ಮ ಎಲ್ಲ ಶ್ರದ್ಧಾ ಸಂಗಾತಗಳನ್ನು, ತತ್ವ ಸಂಕೇತಗಳನ್ನು ಗಂಗೆಯಲ್ಲಿ ಮುಳುಗಿಸಿ ಹೊಸ ಬದುಕಿಗೆ ಮುಖಮಾಡಿದಂತೆ ಕಾಣುತ್ತದೆ. ರಾಮಮಾಧವರು ದೇವಕಾಂತ ಬರುವಾ ಎಂಬ ಕಾಂಗ್ರೆಸ್ ನಾಯಕನ ಇಂದಿರಾ ಭಕ್ತಿಯನ್ನು ಹೊಸ ಅವತಾರದಲ್ಲಿ ತಂದದ್ದಕ್ಕಾಗಿ ಅಭಿನಂದನೀಯರು.

ಮೊನ್ನೆ ಅಂದರೆ ಮಾರ್ಚ್ 7ರಂದು ಗುಜರಾತಿನ ಕಾಂಗ್ರೆಸ್ ಶಾಸಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ತಮ್ಮ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಉಲ್ಲೇಖನೀಯ. ಏಕೆಂದರೆ ಅಧಿಕಾರಕ್ಕೆ ಅಂಟಿಕೊಂಡರೆಂಬ ಅಪಖ್ಯಾತಿಯಿಂದ ಈ ರಾಜಕಾರಣಿ ದೂರವುಳಿದರು. ಆದರೆ ಈ ಬಣ್ಣ ಒಂದೇ ಒಂದು ದಿನದಲ್ಲಿ ಮಾಸಿತು ಅಥವಾ ಬದಲಾಯಿತು. ಅವರು ಭಾರತೀಯ ಜನತಾ ಪಕ್ಷ ಸೇರಿದರು. ಮಾತ್ರವಲ್ಲ, ಮರುದಿನ ಅಂದರೆ 8ನೇ ತಾರೀಕಿನಂದು ಗುಜರಾತಿನ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಊಸರವಳ್ಳಿ ಬಿಡಿ, ಪೀಕದಾನಿಯಲ್ಲಿರುವ ವೀಳ್ಯದ ಉಚ್ಚಿಷ್ಟ ಕೂಡಾ ನಾಚಿಕೊಳ್ಳಬೇಕು ಈ ಬಣ್ಣಕ್ಕೆ!

ಆಪರೇಷನ್ ಕಮಲ ಎಂಬ ಹೆಸರಿನಿಂದ ಈಗಾಗಲೇ ವಿಪಕ್ಷಗಳ ವಿವಾಹಿತರನ್ನು ಎಳೆದುಕೊಂಡದ್ದು ಭಾಜಪದ ಇನ್ನೊಂದು ಮಹತ್ಸಾಧನೆ. ಮೌಲ್ಯ ರಾಜಕೀಯವನ್ನು ನೆಹರೂ ಕಾಲದಿಂದಲೇ ಮಾತನಾಡುತ್ತಿದ್ದ ವಾಜಪೇಯಿ, ಅಡ್ವಾಣಿಗಳು ತಮ್ಮ ಬೆಂಬಲಿಗರ ಮೂಲಕ ಈ ವ್ಯಾಪಾರವನ್ನು ನೋಡಿಯೂ ನೋಡದವರಂತೆ ಇದ್ದು, ಬೆಲೆ ನಿಗದಿಯಾಗುವುದನ್ನೇ ಕಾದವರಂತೆ ಇನ್ನೊಂದು ಪಕ್ಷದಿಂದ ನೆಗೆಯುವ ರಾಜಕಾರಣಿಗಳನ್ನು ಬಿಗಿದಪ್ಪುವ ಮತ್ತು ಆ ಮೂಲಕ ಸರಕಾರಗಳನ್ನುರುಳಿಸುವ ಪ್ರೀತಿಯ ಭಲ್ಲೂಕತನವನ್ನು ಬೆಳೆಸಿಕೊಂಡರು. ಪ್ರಾಯಃ ಇನ್ಯಾವ ಪಕ್ಷವೂ ಈ ಹಂತಕ್ಕೆ ಇಳಿದದ್ದನ್ನು ಕಾಣಲಾರೆವು. ಕಾಂಗ್ರೆಸನ್ನು ಯಾವ ಭ್ರಷ್ಟತೆಯ ಕಾರಣಕ್ಕೆ ಹಳಿಯುತ್ತೇವೆಯೊ ಅದೊಂದು ಕಾರಣದ ಹೊರತಾಗಿ ಇನ್ನೆಲ್ಲ ಸೋಂಕನ್ನು ತಗುಲಿಸಿಕೊಂಡ ಇನ್ನೊಂದು ಪಕ್ಷವೆಂದರೆ ನಾವೇ ಎಂದು ಎದೆತಟ್ಟಿ ಹೇಳಬಲ್ಲ ರಾಷ್ಟ್ರೀಯ ಪಕ್ಷವೆಂದರೆ ಭಾಜಪ ಮಾತ್ರ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಅಗತ್ಯವು ಸೃಷ್ಟಿಸಿದ ಭಾಜಪ-ಪಿಡಿಪಿ ದಾಂಪತ್ಯದಿಂದ ಹೊರಬರುವುದಕ್ಕೆ ಯಾವ ದಾರ್ಶನಿಕ ತಳಹದಿಯೂ ಇಲ್ಲದಿದ್ದರೂ ರಾಜಕೀಯ ಕಾರಣಕ್ಕಾಗಿ ಹೊರಬಂದ ತಕ್ಷಣ ಭಾರತಮಾತೆಯ ವೀರಪುತ್ರರಾಗಿ ಪ್ರತ್ಯಕ್ಷವಾದ ರೂಪಾಂತರವು ಸಮಕಾಲೀನ ರಾಜಕೀಯದ ವಿಕೃತಿಗಳಲ್ಲೊಂದು. ಭಾರತೀಯ ಸೇನೆ ಎಂದೂ ರಾಜಕೀಯಗೊಂಡಿರಲಿಲ್ಲ; ಇನ್ನೂ ರಾಜಕೀಯದ ಮಸಿಯನ್ನು ಬಳಿದುಕೊಳ್ಳಲಾರದೆಂಬ ನಿರೀಕ್ಷೆಯಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರದ ಮಹತ್ಸಾಧನೆಯೆಂದರೆ ಸೇನೆಯನ್ನು ರಾಜಕೀಯಗೊಳಿಸಲು ಅಹರ್ನಿಶಿ ಪ್ರಯತ್ನಿಸಿದ್ದು. 1960ರ ದಶಕದಲ್ಲಿ ಆಗಿನ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿಯವರು ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ಪ್ರಚಾರಕ್ಕೆ ತಂದಾಗ ಅದು ಕಾಂಗ್ರೆಸಿನ ಘೋಷಣೆಯೆಂದು ಯಾರಿಗೂ ಅನ್ನಿಸಲಿಲ್ಲ; ಅನ್ನಿಸುವಂತಿರಲಿಲ್ಲ. ಅದು ಒಂದು ರಾಷ್ಟ್ರೀಯ ವಿಚಾರಧಾರೆಯಾಗಿಯೇ ಉಳಿಯಿತು. ರೈತಾಪಿ ಜನರನ್ನು, ಗಡಿಕಾಯುವ ಯೋಧರನ್ನು ನೆನಪಿಸಿಕೊಂಡು ಬದುಕುವ ಒಂದು ವಿಧಾನವಾಗಿ ಬೆಳೆಯಿತು. ಹಾಗೆ ನೋಡಿದರೆ 1971ರಲ್ಲಿ ಬಾಂಗ್ಲಾ ವಿಮೋಚನೆಯನ್ನೂ ಇಂದಿರಾ ಗಾಂಧಿ ಪಕ್ಷ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬಡತನದ ವಿಮೋಚನೆಯ ಭರವಸೆ ಕಾರಣವಾಗಿತ್ತೇ ಹೊರತು ಬಾಂಗ್ಲಾ ವಿಮೋಚನೆ ಕಾರಣವಾಗಿರಲಿಲ್ಲ. ತುರ್ತುಸ್ಥಿತಿಯ ಹೊರತಾಗಿ ಇಂದಿರಾ ಗಾಂಧಿ ಪ್ರಜಾಪ್ರಭುತ್ವದ ಹೊಕ್ಕಳುಬಳ್ಳಿಯನ್ನು ಕಡಿದಿರಲಿಲ್ಲ.

ಆದರೆ ಈಗ ಪರಿಸ್ಥಿತಿ ವಿಷಮಿಸಿದೆ. ಏನನ್ನಾದರೂ ರಾಜಕೀಯಕ್ಕೆ ಬಳಸಿಕೊಳ್ಳುವ ಮಂತ್ರವನ್ನು ಕಳೆದ ಒಂದು ಅವಧಿಯಲ್ಲಿ ದೇಶ ಕಂಡಿದೆ. ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಬೇಕಾದಾಗಲೆಲ್ಲ ಕಾಂಗ್ರೆಸಿನ ಭ್ರಷ್ಟಾಚಾರವನ್ನು ಗುಮ್ಮನಂತೆ ಚಿತ್ರಿಸುವ ಕಲೆಯನ್ನು ಕರಗತ ಮಾಡಿಕೊಂಡ ಕೇಂದ್ರ ಸರಕಾರವು ಜನರನ್ನು ಒಂದು ಹಂತದವರೆಗೆ ನಂಬಿಸಿದೆ. ಇದು ಎಷ್ಟು ಎತ್ತರಕ್ಕೇರಿದೆಯೆಂದರೆ ಪ್ರಾಕೃತಿಕ ವಿಕೋಪಕ್ಕೂ ನೆಹರೂ ಆಡಳಿತವೇ ಕಾರಣವೆಂದು ನಂಬುವ ಜನರೂ ಇದ್ದಾರೆ. ಇದರಿಂದಾಗಿ ನಿಜಕ್ಕೂ ಲಾಭವಾದದ್ದು ಕಾಂಗ್ರೆಸಿಗೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕಾದಾಗಲೆಲ್ಲ ಪ್ರಧಾನಿಯಿಂದ ಮೊದಲ್ಗೊಂಡು ಎಲ್ಲ ಭಾಜಪ ನಾಯಕರೂ ಕಾಂಗ್ರೆಸನ್ನು ಹಳಿಯುತ್ತಾರೆ. ಆ ಪದವು ಜನರಿಂದ ಮರೆಯಾಗದಂತೆ ಜಾಗ್ರತೆ ವಹಿಸುತ್ತಾರೆ. ವಿಷಾದದ ಸಂಗತಿಯೆಂದರೆ ಹಿಂದೆಲ್ಲ ಅಜ್ಞಾನಕ್ಕೆ ಬಹುಪಾಲು ಕೊಡುಗೆ ಮೂಢನಂಬಿಕೆ ಮತ್ತು ಅನಕ್ಷರತೆಯದ್ದಾಗಿತ್ತು.

ವಿದೇಶಗಳಿಗೆ ಭಾರತವೆಂದರೆ ಹಾವಾಡಿಗರ, ಭಂಗಿ ಸೇದುವ ಸಾಧುಗಳ, ಒರಟು ಸೂಲಗಿತ್ತಿಯರ, ವೈಧವ್ಯದಿಂದಾಗಿ ತಲೆಬೋಳಿಸಿಕೊಂಡ ಯುವತಿಯರ, ದೇವರ ಹೆಸರಿನಲ್ಲಿ ಪ್ರಾಣಿಬಲಿ ಮಾತ್ರವಲ್ಲ ನರಬಲಿಕೊಡುವ, ಅಸ್ಪಶ್ಯತೆಯ ಕ್ರೂರ ಜೀವನದ, ಒಂದು ಅನಾಗರಿಕ ದೇಶವೆಂಬಂತಾಗಿತ್ತು. ಮೆಕಾಲೆಯ ದೃಷ್ಟಿಯೇನೇ ಇರಲಿ, ಬೆಂಟಿಂಕ್, ರಾಜಾರಾಮ ಮೋಹನರಾಯ್‌ರಂತಹ ಸಮಾಜ ಸುಧಾರಕರಿಂದಾಗಿ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳು ಬಲಗೊಂಡವು. ಅನಾಗರಿಕತೆಯ, ಮೂಢ ನಂಬಿಕೆಯ ಆರೋಪಗಳು ಕಡಿಮೆಯಾದವು ಮಾತ್ರವಲ್ಲ ಭಾರತವೂ ಬೆಳೆಯಬಲ್ಲುದು ಎಂಬ ಅಭಿಪ್ರಾಯವು ಜಾಗತಿಕವಾಗಿ ನೆಲೆಗೊಂಡಿತು. ಭಾರತವೂ ಬೆಲೆಕಂಡಿತು.

 ಆದರೆ ಈಗ ಮತ್ತೆ ಜನರನ್ನು ಭಾರತೀಯತೆಗೆ, ರಾಷ್ಟ್ರೀಯತೆಯ ಹೆಸರಿನಲ್ಲಿ ಮೌಢ್ಯಕ್ಕೆ ತಳ್ಳುವ ವ್ಯವಸ್ಥಿತ ಕಾರ್ಯಾಗಾರ ನಡೆಯುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಡೈನಾಮಿಕ್ ಆಗುವ ಬದಲು ಡೈನಾಮೈಟ್ ಹಿಡಿದುಕೊಂಡು ಸುತ್ತುತ್ತಿದ್ದಾರೆ. ದ್ವೇಷವನ್ನು- ಅದರಲ್ಲೂ ಕೋಮು ದ್ವೇಷವನ್ನು-ಎಲ್ಲೆಡೆ ಬಿತ್ತುತ್ತಿದ್ದಾರೆ. ಇದರ ತಳಮಟ್ಟ ನಮ್ಮ ಕೊಳಚೆಗುಂಡಿಗಳಿಗಿಂತಲೂ ಅಸಹ್ಯವಾಗುತ್ತಿದೆ. ಒಂದು ಉದಾಹಹರಣೆಯನ್ನು ಕೊಡಬಹುದಾದರೆ ಬಟ್ಟೆಗಳನ್ನು ಶುಭ್ರವಾಗಿ ತೊಳೆಯುವ ಸಾಧನದ ‘ಸರ್ಫ್ ಎಕ್ಸೆಲ್’ ಎಂಬ ಕಂಪೆನಿಯ ಜಾಹೀರಾತೊಂದು ಕೋಮು ಸೌಹಾರ್ದವನ್ನು ಉತ್ತೇಜಿಸುವ ವಿಚಾರವನ್ನೊಳಗೊಂಡಿತು. ಹೋಳಿಯನ್ನು ಆಚರಿಸುವ ಹುಡುಗಿಯೊಬ್ಬಳು ಮಸೀದಿಗೆ ಹೋಗುವ ಹುಡುಗನೊಬ್ಬನನ್ನು ತನ್ನ ಬೈಸಿಕಲ್ಲಿನಲ್ಲಿ ಕರೆದುಕೊಂಡು ಹೋಗಿ ಆತನನ್ನು ಅಲ್ಲಿ ಬಿಟ್ಟು ಆನಂತರ ಹೋಳಿಯ ಆಚರಣೆಗೆ ಹೋಗುವ ಪುಟ್ಟ ದೃಶ್ಯ. ನಿಜಕ್ಕೂ ಮನಸೆಳೆಯುವ ಪುಟ್ಟ ಮಕ್ಕಳ ಜಾಹೀರಾತು. ಪ್ರೀತಿಯು, ಸ್ನೇಹವು ಜಾತಿ-ಧರ್ಮಗಳ ಗಡಿಯನ್ನು ಮೀರುವ ಉದಾರ ಜಾಹೀರಾತು. ಆದರೆ ನಮ್ಮ ಬಹುಸಂಖ್ಯಾತ ಸಮುದಾಯದ ಕೆಲವು ಮತಾಂಧರು ಇದನ್ನು ಕಟುವಾಗಿ ವಿರೋಧಿಸಿದರು. ಇದು ಲವ್ ಜಿಹಾದ್‌ನ್ನು ಪ್ರಚಾರ ಮಾಡುವ ಉತ್ತೇಜಿಸುವ ಪ್ರೇರಕ ಜಾಹೀರಾತೆಂದೂ ಭಾರತೀಯತೆಗೆ ಒದಗಿದ ಕಂಟಕವೆಂದೂ ಬಣ್ಣಿಸಿದರು. ಈ ಪೈಕಿ ಬಹಳಷ್ಟು ವಿದ್ಯಾವಂತರಿದ್ದರು!

ಹಿಂದೆಲ್ಲ ಹಿಂದೂ, ಕ್ರೈಸ್ತ, ಮುಸಲ್ಮಾನ ಮಕ್ಕಳನ್ನು ಎಲ್ಲ ಪ್ರಾಥಮಿಕ ಪಠ್ಯಗಳಲ್ಲೂ ಕಾಣಬಹುದಾಗಿತ್ತು. ಆದರೆ ಈಗಿನ ಸ್ಥಿತಿಯಲ್ಲಿ ಈ ದೇಶ ಯಾರದ್ದು ಎಂಬುದನ್ನು ತಾನೇ ನಿರ್ಧರಿಸುವ ಒಂದು ಮೂಲಭೂತವಾದವು ಭಯೋತ್ಪಾದನೆಯಂತೆ ಬೆಳೆಯಲು ಪ್ರಚೋದನೆ ನೀಡುವ ವಿಕ್ಷಿಪ್ತ ವಾತಾವರಣ ನಿರ್ಮಾಣಗೊಂಡಿದೆ.

ರಾಷ್ಟ್ರೀಯತೆಯೆಂದರೇನು ಎಂಬುದನ್ನು ಈ ಚುನಾವಣೆ ನಿರ್ಧರಿಸೀತೆಂದು ನಿರೀಕ್ಷಿಸುವಂತಿಲ್ಲ. ಅದು ಜನಸಾಮಾನ್ಯರ ಮನಸ್ಸಿನಲ್ಲಿ ಸೌಹಾರ್ದದ, ವೈಶಾಲ್ಯದ ಗುಪ್ತಗಾಮಿನಿಯಾಗಿ ಹಬ್ಬುವ ಹರಡುವ ಒಂದು ಉದಾತ್ತ ನೀತಿಯಾಗಿ ಉಳಿದರೆ ದೇಶ ಉಳಿದೀತು. ಈ ಕೆಲಸವನ್ನು ಅನುದಿನ ಮಹಾ ನಗರಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಕಿಸೆ ತುಂಬಿಸಿಕೊಳ್ಳುವ ಚಿಂತಕರು, ಸಾಹಿತಿಗಳು ಮಾಡುತ್ತಾರೆಂದು ನಂಬಲಾಗದು. ಅದನ್ನು ಜನರೊಂದಿಗೆ ನೇರ ಸಂಭಾಷಿಸುವವರಷ್ಟೇ ಮಾಡಬಲ್ಲರು. ಅಂತಹವರನ್ನು ಈ ಚುನಾವಣೆ ತಯಾರು ಮಾಡಿದರೆ ಅದು ಭವಿಷ್ಯಕ್ಕೆ ಪೂರಕವಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)