varthabharthi


ಬುಡಬುಡಿಕೆ

ಮತ ಹಾಕಿದರೆ ಮುಸ್ಲಿಮರು ಅಳಿವಿನಂಚಿನಲ್ಲಿರುವ ಪ್ರಾಣಿಗಳ ವ್ಯಾಪ್ತಿಗೆ....

ವಾರ್ತಾ ಭಾರತಿ : 14 Apr, 2019
ಚೇಳಯ್ಯ chelayya@gmail.com

ಗಿಳಿ, ಕರಡಿ, ಕಾಡುಬೆಕ್ಕು, ಗೂಬೆ ಇತ್ಯಾದಿಗಳ ಜೊತೆಗೆ ಸೇರಿಕೊಂಡು ಮೇನಕಾ ಗಾಂಧಿ ಚುನಾವಣೆ ಪ್ರಚಾರ ಮಾಡುತ್ತಿದ್ದಂತೆಯೇ, ಅದ್ಯಾವ ಮಾಯದಲ್ಲೋ ಪತ್ರಕರ್ತ ಎಂಜಲು ಕಾಸಿ ಅದರೊಳಗೆ ತೂರಿಕೊಂಡ.
‘‘ಮೇಡಂ...ಮುಸ್ಲಿಮರು ಓಟು ಹಾಕಿಲ್ಲ ಅಂದರೆ ನೀವು ಅವರ ಕೆಲಸ ಮಾಡಿಕೊಡಲ್ಲ ಅಂತೆ ಹೌದಾ?’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡ್ರೀ...ಅಂಗಡಿಯಲ್ಲಿ ದುಡ್ಡು ಕೊಟ್ಟರೆ ದಿನಸಿ ಕೊಡ್ತಾರೆ. ರಾಜಕಾರಣಿಗಳು ಓಟು ಕೊಡದೆ ಕೆಲಸ ಮಾಡಿಕೊಡಬೇಕು ಎಂದರೆ ಹೇಗೆ?’’ ಮೇನಕಾ ಗಾಂಧಿ ಪ್ರಶ್ನಿಸಿದರು.
‘‘ಮೇಡಂ...ಕರಡಿ, ಕೋತಿ ಮೊದಲಾದ ಪ್ರಾಣಿಗಳ ಹಕ್ಕುಗಳ ಬಗ್ಗೆ ನೀವು ಹೋರಾಡಿದ್ದೀರಿ....ಆದರೆ ಅವುಗಳು ನಿಮಗೆ ಮತ ಹಾಕಿವೆಯೇ?’’ ಕಾಸಿ ಅರ್ಥವಾಗದೇ ಕೇಳಿದ.
‘‘ನೋಡ್ರೀ...ಗೋವು ಒಂದು ಪ್ರಾಣಿ. ಆದರೆ ನಮ್ಮ ಪಕ್ಷಕ್ಕಾಗಿ ಅದು ಹಗಲು ರಾತ್ರಿ ದುಡಿಯುತ್ತಿದೆ. ಗೋವಿನಿಂದಾಗಿಯೇ ನಮಗೆ ಸಾಕಷ್ಟು ಮತಗಳು ಸಿಕ್ಕಿವೆ. ಆದುದರಿಂದ ನಾನೂ ಪ್ರಾಣಿ ದಯಾ ಸಂಘ ಸ್ಥಾಪಿಸಿ ಅವುಗಳಿಗಾಗಿ ಹೋರಾಡುತ್ತಿದ್ದೇನೆ....’’ ಮೇನಕಾ ಸಮರ್ಥಿಸಿಕೊಂಡರು.
‘‘ಕೋತಿ, ಕರಡಿಗಳಿಗಾಗಿಯೂ ನೀವು ಹೋರಾಟ ಮಾಡಿದ್ದೀರಿ...’’ ಕಾಸಿ ಪ್ರಶ್ನೆಯನ್ನು ಮುಂದುವರಿಸಿದ.
‘‘ನೋಡ್ರಿ...ನಮಗೆ ಮತ ಹಾಕಿದವರೆಲ್ಲರೂ ಕೋತಿ ಕರಡಿಗಳೆನ್ನುವುದನ್ನು ಸಾಬೀತು ಮಾಡಿದ್ದಾರೆ. ಇಲ್ಲವಾದರೆ ಅವರೇಕೆ ನಮಗೆ ಮತ ಹಾಕುತ್ತಿದ್ದರು? ಆದುದರಿಂದ ಅವರೆಲ್ಲರ ಯೋಗಕ್ಷೇಮ ನನ್ನ ಕರ್ತವ್ಯವಾಗಿದೆ. ಮುಸ್ಲಿಮರೂ ನನಗೆ ಮತ ಹಾಕುವ ಮೂಲಕ ಕೋತಿ ಕರಡಿಗಳ ಸಾಲಿನಲ್ಲಿ ಸೇರಿಕೊಂಡು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು....’’ ಮೇನಕಾ ಗಾಂಧಿ ಸ್ಪಷ್ಟಪಡಿಸಿದರು.
‘‘ಮೋದಿಯ ಹೆಸರಿನಲ್ಲಿ ಕೋತಿ ಕರಡಿಗಳನ್ನು ನಿಲ್ಲಿಸಿದರೂ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ....’’ ಅಂಜುತ್ತಾ ಕೇಳಿದ.
‘‘ಹಾಗೇನಿಲ್ಲ...ಕೆಲವು ಕಡೆ ಮನುಷ್ಯ ಅಭ್ಯರ್ಥಿಗಳನ್ನೂ ನಿಲ್ಲಿಸಿದ್ದಾರೆ....ಆದರೆ ಒಂದಿಷ್ಟು ಕ್ಷೇತ್ರಗಳಲ್ಲಿ ಕೆಲವು ಪ್ರಾಣಿಗಳಿಗೆ ಮೀಸಲಾತಿಯನ್ನು ನೀಡಬೇಕು ಎಂದು ನಾನು ಪ್ರಾಣಿದಯಾ ಸಂಘದ ಪರವಾಗಿ ಒತ್ತಾಯಿಸಿದ್ದೇ....’’ ಮೇನಕಾ ಉತ್ತರಿಸಿದರು.
‘‘ಆ ಮೀಸಲಾತಿಯಲ್ಲೇ ನಿಮಗೆ ಟಿಕೆಟ್ ಕೊಡಲಾಗಿದೆ ಎಂಬ ವದಂತಿಗಳಿವೆ....ನಿಜವೇ ಮೇಡಂ...’’ ಕಾಸಿ ಮೆಲ್ಲಗೆ ಚಿವುಟಿದ.
‘‘ಅದು ವದಂತಿ ಮಾತ್ರ. ನನಗೆ ಗಾಂಧಿ ಫ್ಯಾಮಿಲಿಯ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿಯೊಳಗೆ ಮೀಸಲಾತಿ ಇದೆ. ಹಾಗೆ ನೋಡಿದರೆ ಬಿಜೆಪಿಯೊಳಗೆ ದೊಡ್ಡ ಸಂಖ್ಯೆಯಲ್ಲಿ ಪ್ರಾಣಿಗಳು ಅಭ್ಯರ್ಥಿಗಳಾಗಿ ಈಗಾಗಲೇ ಇವೆ. ಬಿಜೆಪಿ ಪ್ರಾಣಿಗಳ ಮೇಲೆ ಹೊಂದಿರುವ ದಯೆಯನ್ನು ಇದು ತೋರಿಸುತ್ತದೆ. ಬಹುತೇಕ ನಮ್ಮ ಕಾರ್ಯಕರ್ತರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿ ಪ್ರಾಣಿಗಳ ಚಿತ್ರಗಳನ್ನು ಬಳಸುವುದೂ ಇದೇ ಕಾರಣಕ್ಕಾಗಿ. ಪ್ರಾಣಿಗಳ ಮೇಲಿನ ಪ್ರೀತಿಯೇ ನಮ್ಮ ಗೆಲುವಿಗೆ ಕಾರಣ....’’ ಮೇನಕಾ ವಿವರಿಸಿದರು.
‘‘ನಿಮ್ಮ ಮಗ ಯಾವ ಪ್ರಾಣಿಗೆ ಸೇರಿದ್ದಾನೆ....ಮೇಡಂ...’’ ಕಾಸಿ ಕೇಳಿದ.
‘‘ಅದು ಮಿಶ್ರ ತಳಿಗೆ ಸೇರಿದ ಪ್ರಾಣಿ. ಒಮ್ಮಾಮ್ಮೆ ಅಳಿವಿನಂಚಿನಲ್ಲಿರುವ ಸಿಂಹವೋ ಹುಲಿಯೋ ಎಂಬಂತೆ ವರ್ತಿಸುತ್ತಾನೆ. ಮಗದೊಮ್ಮೆ ಗೋವಿನಂತೆ ವರ್ತಿಸುತ್ತಾನೆ....ಆಗಾಗ ಗಾಂಧಿ ತಳಿಗೆ ಸೇರಿದ ಮನುಷ್ಯನಂತೆಯೂ ವರ್ತಿಸುತ್ತಾನೆ....ಈ ಚುನಾವಣೆ ಮುಗಿಯುವವರೆಗೆ ಯಾವುದನ್ನೂ ಸ್ಪಷ್ಟವಾಗಿ ಹೇಳುವಂತಿಲ್ಲ....’’ ಮೇನಕಾ ಅವರು ತಿಳಿಸಿದರು.
‘‘ಅದಿರಲಿ ಮೇಡಂ...ಸ್ಮತಿ ಇರಾನಿ ಯಾವುದೇ ಪದವಿಯನ್ನು ಪಡೆದಿಲ್ಲ ಎಂದು ಒಪ್ಪಿಕೊಂಡಿದ್ದಾರಲ್ಲ.....’’ ಕಾಸಿ ಪ್ರಶ್ನೆಯನ್ನು ತಿರುಗಿಸಿದ.
‘‘ಹಾಗೇನಿಲ್ಲ...ಅವರು ಹಲವು ಧಾರಾವಾಹಿಗಳಲ್ಲಿ ಪದವಿ ಶಿಕ್ಷಣ ಪಡೆದ ಪಾತ್ರಗಳನ್ನು ನಿರ್ವಹಿಸಿ ಅನುಭವವನ್ನು ಹೊಂದಿದ್ದಾರೆ. ಅದರ ಆಧಾರದಲ್ಲಿ ಅವರು ಈ ಹಿಂದೆ ಮಾಹಿತಿ ನೀಡಿದ್ದರು. ಈಗ ಟಿವಿ ಧಾರಾವಾಹಿಗಳಲ್ಲಿ ನಟಿಸುವುದು ಬಿಟ್ಟು ಸಂಸತ್ ಧಾರಾವಾಹಿ ನಟನೆಯಲ್ಲಿ ಬಿಝಿಯಾಗಿರುವುದರಿಂದ...ಆ ಪದವಿಯನ್ನು ಮರಳಿಸಿರಬೇಕು...ನಕಲಿ ಅರ್ಹತೆಗಳೇ ಚೌಕಿದಾರನಾಗಲು ಇರುವ ಅತ್ಯುತ್ತಮ ಅರ್ಹತೆಯಾಗಿರುವುದರಿಂದ ಸ್ಮತಿ ಇರಾನಿಯವರು ನಮ್ಮ ಉತ್ತಮ, ಪ್ರತಿಭಾವಂತ ಅಭ್ಯರ್ಥಿಯಾಗಿದ್ದಾರೆ....’’
‘‘ಮೇಡಂ...ಪ್ರಾಣಿಗಳ ಮೇಲೆ ತೋರಿಸುವ ದಯೆಯನ್ನು ಮನುಷ್ಯರ ಮೇಲೆ ಯಾಕೆ ನೀವು ತೋರಿಸುತ್ತಿಲ್ಲ....’’ ಕಾಸಿ ಮತ್ತೆ ಮೊದಲ ಪ್ರಶ್ನೆಗೆ ಬಂದ.
‘‘ಪ್ರಾಣಿಗಳ ದೆಸೆಯಿಂದ ನಾನು ಈವರೆಗೆ ಜೀವನ ಮಾಡುತ್ತಾ ಬಂದಿದ್ದೇನೆ....ಈ ಮನುಷ್ಯರನ್ನು ನಂಬಿದ್ದಿದ್ದರೆ ....’’ ಎಂದು ಮಾತು ಅರ್ಧಕ್ಕೆ ನಿಲ್ಲಿಸಿದರು.
‘‘ಮುಸ್ಲಿಮರು ನಿಮಗೆ ಮತ ಹಾಕಿದರೆ ಅವರಿಗೆ ಏನೇನು ಸವಲತ್ತು ನೀಡುತ್ತೀರಿ....’’ ಕಾಸಿ ಕೇಳಿದ.
‘‘ನೋಡಿ....ಅವರನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಸಾಲಿಗೆ ಸೇರಿಸಿ, ವಿವಿಧ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ. ಪ್ರಾಣಿದಯಾ ಸಂಘದಿಂದ ಅವರಿಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೋರಾಡುತ್ತೇನೆ....’’ ಮೇನಕಾ ಗಾಂಧಿ ಭರವಸೆಗಳ ಮಳೆಯನ್ನು ಸುರಿಸತೊಡಗಿದರು.
‘‘ಒಂದು ವೇಳೆ ನಿಮಗೆ ಮತ ಹಾಕದೇ ಇದ್ದರೆ....’’ ಕಾಸಿ ಸಾಲು ಹಾಕಿದ.
‘‘ಹಾಕದೇ ಇದ್ದರೆ ಬಿಜೆಪಿಯೊಳಗಿರುವ ಹಸಿದ ಕ್ರೂರ ಪ್ರಾಣಿಗಳಿಗೆ ಒಬ್ಬೊಬ್ಬರನ್ನೇ ಆಹಾರವಾಗಿ ಕೊಟ್ಟು ನನ್ನ ಪ್ರಾಣಿ ದಯೆಯನ್ನು ವಿಶ್ವಕ್ಕೆ ಸಾಬೀತು ಪಡಿಸುತ್ತೇನೆ....’’ ಎಂದವರೇ ಕರಡಿ, ಕೋತಿ, ನರಿ, ನಾಯಿಗಳ ಜೊತೆಗೆ ಅವರು ತಮ್ಮ ಚುನಾವಣಾ ಪ್ರಚಾರವನ್ನು ಮುಂದುವರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)