varthabharthi


ಸಿನಿಮಾ

25 ವರ್ಷಗಳ ನಂತರ ಪೊಲೀಸ್ ಪಾತ್ರದಲ್ಲಿ ರಜನಿ 'ದರ್ಬಾರ್'

ವಾರ್ತಾ ಭಾರತಿ : 14 Apr, 2019

ರಜನಿಕಾಂತ್ ಸಿನೆಮಾ ಸೆಟ್ಟೇರುತ್ತಿದೆ ಎಂದರೆ ಅವರ ಅಭಿಮಾನಿಗಳು ಅಂದಿನಿಂದಲೇ ಹಬ್ಬ ಆಚರಿಸಲು ಆರಂಭಿಸುತ್ತಾರೆ. ಸದ್ಯ ರಜನಿ ಅಭಿಮಾನಿಗಳ ಮತ್ತೊಂದು ಸುತ್ತಿನ ಹಬ್ಬಕ್ಕೆ ದಿನ ನಿಗದಿಯಾಗಿದೆ. ರಜನಿಕಾಂತ್ ಮುಂದಿನ ಸಿನೆಮಾ ಸೆಟ್ಟೇರಲು ಸಿದ್ಧವಾಗಿದೆ.

ಸಿನೆಮಾದ ಹೆಸರು ದರ್ಬಾರ್. ದರ್ಬಾರ್ ಸಿನೆಮಾದ ಮೂಲಕ ರಜನಿ ಇದೇ ಮೊದಲ ಬಾರಿ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಅಂದಹಾಗೆ ಈ ಸಿನೆಮಾದಲ್ಲಿ ರಜನಿ ಬರೋಬ್ಬರಿ 25 ವರ್ಷಗಳ ನಂತರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1992ರಲ್ಲಿ ರಜನಿಕಾಂತ್ ಪಾಂಡಿಯನ್ ಎಂಬ ಪೊಲೀಸ್ ಅಧಿಕಾರಿ ಪಾತ್ರ ನಿಭಾಯಿಸಿದ್ದರು. ಅದಕ್ಕೂ ಮೊದಲು 1982ರಲ್ಲಿ ಮೂಂಡ್ರ್ ಮುಗಮ್ ಸಿನೆಮಾದಲ್ಲಿ ಅಲೆಕ್ಸ್ ಪಾಂಡಿಯನ್ ಎಂಬ ಪೊಲೀಸ್ ಪಾತ್ರದಲ್ಲಿ ರಜನಿ ಮಿಂಚಿದ್ದರು. ದರ್ಬಾರ್ ಪೋಸ್ಟರ್ ಕಂಡಾಗ ಇದೊಂದು ಕಾಮಿಡಿ ಸಿನೆಮಾದಂತೆ ಕಾಣುತ್ತದೆ.

ಇಲ್ಲಿ ರಜನಿ ಎಂದಿನಂತೆ ಸ್ಟೈಲಿಶ್ ಆಗಿ ಕಂಡರೂ ತಮಾಷೆಯ ಭಾವ ವ್ಯಕ್ತಪಡಿಸಿದ್ದಾರೆ. ಚಿತ್ರದ ನಾಯಕಿ ಪಾತ್ರಕ್ಕೆ ನಯನತಾರಾ ಅವರನ್ನು ಆಯ್ಕೆ ಮಾಡಲಾಗಿದ್ದರೆ ಇತರ ಪಾತ್ರಗಳಿಗೆ ಇನ್ನಷ್ಟೇ ನಟರ ಆಯ್ಕೆಯಾಗಬೇಕಿದೆ. ದರ್ಬಾರ್ ಸಿನೆಮಾಕ್ಕೆ ಸಂತೋಷ್ ಸಿವನ್ ಛಾಯಾ ಗ್ರಹಣವಿದ್ದರೆ ಅನಿರುದ್ಧ ರವಿಚಂದ್ರನ್ ಸಂಗೀತವಿದೆ. ಶ್ರೀಕರ್ ಪ್ರಸಾದ್ ಸಂಕಲನ ಮಾಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)