varthabharthi


ಸಂಪಾದಕೀಯ

ನಕಲಿ ಚೌಕಿದಾರನಿಂದ ಅಸಲಿ ಚೌಕಿದಾರನ ಅಮಾನತು

ವಾರ್ತಾ ಭಾರತಿ : 20 Apr, 2019

ಒಬ್ಬ ನಿಜವಾದ ಚೌಕಿದಾರನ ಕೆಲಸವೇನು? ಕಾವಲು ಕಾಯುವುದು. ಅನುಮಾನ ಬಂದರೆ ಆತ ಎಷ್ಟೇ ದೊಡ್ಡವನಿರಲಿ ಅವನನ್ನು ತಪಾಸಣೆ ಮಾಡುವುದು ಚೌಕಿದಾರನ ಕರ್ತವ್ಯ. ಇಂದು ದೇಶದಲ್ಲಿ ದೊಡ್ಡವರ ವೇಷ ಹಾಕಿಕೊಂಡವರಿಂದಲೇ ಭಾರೀ ವಂಚನೆಗಳು ನಡೆಯುತ್ತಿವೆ. ಲಲಿತ್ ಮೋದಿ, ನೀರವ್ ಮೋದಿ, ಮಲ್ಯರಂತಹ ದೊಡ್ಡ ಜನರನ್ನು ಈ ದೇಶದ ನಕಲಿ ಚೌಕಿದಾರ ತಪಾಸಣೆ ಮಾಡದೆ ಸ್ವತಂತ್ರವಾಗಿ ಅಡ್ಡಾಡಲು ಬಿಟ್ಟ ಕಾರಣದಿಂದಲೇ ಅವರು ದೇಶದ ಬ್ಯಾಂಕ್‌ಗಳನ್ನು ಮುಳುಗಿಸಿ ವಿದೇಶದಲ್ಲಿ ಅಡಗಿಕೊಂಡಿದ್ದಾರೆ. ಇಂದು ಅವರನ್ನು ಮರಳಿ ತರಲು ದೇಶ ಹರಸಾಹಸ ಪಡುತ್ತಿದೆ. ಇಂತಹ ದಿನಗಳಲ್ಲಿ ಈ ದೇಶದ ಎಲ್ಲಾ ತನಿಖಾ ಸಂಸ್ಥೆಗಳೂ ತಮ್ಮನ್ನು ತಾವು ‘ಚೌಕಿದಾರ್’ ಎಂದು ಭಾವಿಸಿ ಕೆಲಸ ನಿರ್ವಹಿಸಬೇಕಾಗಿದೆ. ದುರದೃಷ್ಟವಶಾತ್ ಇಂದು ದೇಶಾದ್ಯಂತ ಯಾರು ತನಿಖೆಗೊಳಪಡಬೇಕಾಗಿದೆಯೋ ಅವರೇ ತಮ್ಮನ್ನು ತಾವು ‘ಚೌಕಿದಾರರು’ ಎಂದು ಕರೆಯುತ್ತಾ ನಿಜವಾದ ಅರ್ಥದಲ್ಲಿ ಚೌಕಿದಾರರಾಗಿ ಕೆಲಸ ಮಾಡುತ್ತಿರುವವರ ಕೈ ಕಾಲು ಕಟ್ಟಿ ಹಾಕುತ್ತಿದ್ದಾರೆ. ಮಾಧ್ಯಮಗಳಲ್ಲಿ ಚೌಕಿದಾರ್ ವೇಷದಲ್ಲಿರುವ ಕಳ್ಳರು ವಿಜೃಂಭಿಸುತ್ತಿದ್ದರೆ, ನಿಜವಾದ ಚೌಕಿದಾರರು ಧ್ವನಿಕಳೆದುಕೊಂಡಿದ್ದಾರೆ. ಈ ದೇಶದ ಅತ್ಯುನ್ನತ ಚೌಕಿದಾರ ಸಂಸ್ಥೆಯೆಂದೇ ಗುರುತಿಸಲ್ಪಟ್ಟ ಸಿಬಿಐ ಸಂಸ್ಥೆಯೇ ‘ಅಪಹರಣ’ವಾದ ಮೇಲೆ, ಉಳಿದ ತನಿಖಾ ಸಂಸ್ಥೆಗಳ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನಿಲ್ಲ.

  ಈ ದೇಶದ ಪ್ರಧಾನಿ ತಮ್ಮನ್ನು ತಾವು ಚೌಕಿದಾರರು ಎಂದು ಕರೆದುಕೊಂಡಿದ್ದಾರೆ. ಅಂದರೆ ಈ ದೇಶವನ್ನು ಕಾವಲು ಕಾಯುವ ಕಾವಲುಗಾರ ಎಂದು ಈ ಮೂಲಕ ತಮ್ಮನ್ನು ಘೋಷಿಸಿಕೊಂಡಿದ್ದಾರೆ ಮಾತ್ರವಲ್ಲ, ದೇಶದ ಸರ್ವ ನಾಗರಿಕರು ತಮ್ಮನ್ನು ತಾವು ಚೌಕಿದಾರರು ಎಂದು ಗುರುತಿಸಿಕೊಳ್ಳಬೇಕು ಎಂದು ಬಯಸಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಹೋದ ಬಂದೆಡೆಯಲ್ಲೆಲ್ಲಾ ‘ಮೈ ಭೀ ಚೌಕಿದಾರ್ ಹೂಂ’ ಘೋಷಣೆಯನ್ನು ಕೂಗುತ್ತಿದ್ದಾರೆ. ಈ ದೇಶದ ಬಹುತೇಕ ಜನರು ಪ್ರಧಾನಿ ಕೂಗಿಗೆ ಧ್ವನಿಸೇರಿಸುತ್ತಿದ್ದಾರೆ. ಈ ಚೌಕಿದಾರನ ಸ್ಫೂರ್ತಿ ಪಡೆದು, ಒಬ್ಬ ‘ಚೌಕಿದಾರ’ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದರ ಪರಿಣಾಮ ಏನಾಗಬಹುದು? ಎನ್ನುವುದು ಒಡಿಶಾದಲ್ಲಿ ಬಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 16ರಂದು ಒಡಿಶಾದ ಸಾಂಬಾಲ್ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಹೆಲಿಕಾಪ್ಟರನ್ನು ತಪಾಸಣೆಗೊಳಪಡಿಸಲಾಗಿತ್ತು. ಪ್ರಧಾನಿಯ ಹೆಲಿಕಾಪ್ಟರ್ ಆಗಿದ್ದರೂ ಅದನ್ನು ತಪಾಸಣೆಗೊಳಪಡಿಸಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟ ಅಲ್ಲಿನ ಚುನಾವಣಾ ವೀಕ್ಷಕ ಮುಹಮ್ಮದ್ ಮುಹ್ಸಿನ್ ಅವರಿಗೆ ಈ ದೇಶದ ಸರ್ವೋನ್ನತ, ಸ್ವಘೋಷಿತ ‘ಚೌಕಿದಾರ್’ನಿಂದ ಶಹಭಾಶ್‌ಗಿರಿ ದೊರಕಬಹುದು ಎಂದು ದೇಶ ನಿರೀಕ್ಷಿಸಿತ್ತು. ಆತನಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಮೂಲಕ, ಈ ದೇಶದ ಎಲ್ಲ ತನಿಖಾಧಿಕಾರಿಗಳಿಗೂ ಚೌಕಿದಾರ್ ಮೋದಿ ಸ್ಫೂರ್ತಿ ನೀಡುತ್ತಾರೆ ಎಂದು ಭಾವಿಸಿದರೆ, ದೇಶದ ಜನರ ಲೆಕ್ಕಾಚಾರ ತಲೆಕೆಳಗಾಯಿತು. ‘ಚೌಕಿದಾರ್ ಮೋದಿ’ ಅವರ ಹೆಲಿಕಾಪ್ಟರ್‌ನ್ನು ತಪಾಸಣೆ ಮಾಡಿದ ಅಧಿಕಾರಿಯನ್ನು ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗ ಅಮಾನತುಗೊಳಿಸಿತು. ಆಯೋಗದ ಈ ಕ್ರಮದ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಈ ಶೋಧ ಕಾರ್ಯದಿಂದಾಗಿ ಪ್ರಧಾನಿಯವರ ನಿಗದಿತ ಕಾರ್ಯಕ್ರಮಕ್ಕೆ ತೆರಳಲು 20 ನಿಮಿಷ ವಿಳಂಬವಾಯಿತು ಎನ್ನುವುದು ತನಿಖಾಧಿಕಾರಿಯ ಮೇಲಿರುವ ದೂರು. ಸದ್ಯಕ್ಕೆ ದೇಶದಲ್ಲಿ ಚುನಾವಣೆಯ ಭರಾಟೆ. ಪ್ರಧಾನಿಯವರು ಹೊರಟಿದ್ದು ಚುನಾವಣಾ ಪ್ರಚಾರಕ್ಕೆ ಹೊರತು, ಯಾವುದೇ ದೇಶದ ಅಗತ್ಯ ಕಾರ್ಯಕ್ಕಾಗಿ ಅಲ್ಲ. ಚುನಾವಣೆಯ ಸಂದರ್ಭದಲ್ಲಿ ಭದ್ರತೆಯ ಕುರಿತಂತೆ ತನಿಖಾಧಿಕಾರಿಗಳು ವಿಶೇಷ ಕಾಳಜಿಯನ್ನು ವಹಿಸಬೇಕಾದುದು ಅತ್ಯಗತ್ಯ. ಪ್ರಧಾನಿಯ ವಾಹನಗಳನ್ನಂತೂ ಭದ್ರತಾ ಕಾರಣಗಳಿಗಾಗಿಯೂ ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ಪುಲ್ವಾಮದಲ್ಲಿ ಭದ್ರತಾ ವೈಫಲ್ಯ ಈ ದೇಶದ ನಲುವತ್ತು ಯೋಧರನ್ನು ಬಲಿ ತೆಗೆದುಕೊಂಡಿತು. ನಮ್ಮದೇ ನೆಲದ ಒಳಗೆ ಭಾರೀ ಪ್ರಮಾಣ ಸ್ಫೋಟಕಗಳೊಂದಿಗೆ ನುಗ್ಗಲು ಕಾರಣ ‘ಚೌಕಿದಾರ’ನ ಕರ್ತವ್ಯ ನಿಷ್ಠೆಯ ಕೊರತೆಯೇ ಆಗಿತ್ತು. ಇದೀಗ ಈ ದೇಶದ ಪ್ರಧಾನಿಯ ವಾಹನಗಳನ್ನು ಅಥವಾ ಹೆಲಿಕಾಪ್ಟರ್‌ಗಳ ತಪಾಸಣೆಯ ಸಂದರ್ಭದಲ್ಲಿಯೂ ಇದೇ ನಿಲುವನ್ನು ಅನುಸರಿಸಿದರೆ ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಆದರೆ ತನ್ನ ವಾಹನಗಳನ್ನು ತಪಾಸಣೆ ಮಾಡುವುದು ‘ಚೌಕಿದಾರ್ ಮೋದಿ’ಗೆ ಇಷ್ಟವಿಲ್ಲ. ಆದರೆ ಇದು ಪ್ರಧಾನಿ ಮೋದಿಯವರ ಇಷ್ಟಾನಿಷ್ಟಕ್ಕೆ ಸಂಬಂಧಿಸಿದ್ದಲ್ಲ. ಪಾರದರ್ಶಕ ಚುನಾವಣೆ ಮತ್ತು ಭದ್ರತೆಯ ದೃಷ್ಟಿಯಿಂದ ಚುನಾವಣಾ ವೀಕ್ಷಕರು ತಮ್ಮ ಕರ್ತವ್ಯವನ್ನು ನಡೆಸುವುದು ಅತ್ಯಗತ್ಯ. ಇದಕ್ಕೆ ಸಹಕರಿಸುವುದು ಪ್ರಧಾನಿಯ ಕರ್ತವ್ಯವಾಗಿದೆ. ಇದನ್ನು ತಡೆಯುವುದರಿಂದ ಮೋದಿಯವರ ನಡವಳಿಕೆಗಳನ್ನು ಜನರು ಅನಗತ್ಯವಾಗಿ ಅನುಮಾನಿಸುವಂತಾಗುತ್ತದೆ.

ಮೋದಿಯ ನಡವಳಿಕೆಗಳನ್ನು ಶಂಕಿಸಲು ಇನ್ನೊಂದು ಮುಖ್ಯ ಕಾರಣವಿದೆ. ಇತ್ತೀಚೆಗೆ ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯೊಂದನ್ನು ಅವರ ಬೆಂಗಾವಲಿಗರು ಹೊತ್ತು ಹತ್ತಿರದಲ್ಲಿದ್ದ ವಾಹನವೊಂದಕ್ಕೆ ತುರ್ತಾಗಿ ಸಾಗಿಸಿದರು. ಅವಸರವಸರವಾಗಿ ಹೆಲಿಕಾಪ್ಟರ್‌ನಿಂದ ಬೃಹತ್ ಪೆಟ್ಟಿಗೆಯೊಂದನ್ನು ಇಳಿಸಿ ವಾಹನವೊಂದಕ್ಕೆ ಸಾಗಿಸುತ್ತಿರುವುದು, ವಾಹನ ಅಲ್ಲಿಂದ ಅಷ್ಟೇ ಅವಸರವಾಗಿ ನಿರ್ಗಮಿಸಿರುವುದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಇಂದಿಗೂ ಆ ಪೆಟ್ಟಿಗೆಯೊಳಗೆ ಏನಿತ್ತು? ಅದನ್ನು ಎಲ್ಲಿಗೆ ಸಾಗಿಸಲಾಯಿತು? ಎನ್ನುವುದರ ಕುರಿತಂತೆ ಸ್ಪಷ್ಟ ವಿವರಗಳು ಸಿಕ್ಕಿಲ್ಲ. ಚುನಾವಣಾ ಆಯೋಗವೂ ಇದರ ಕುರಿತಂತೆ ಸ್ಪಷ್ಟನೆಯನ್ನೂ ನೀಡಿಲ್ಲ. ಬಿಜೆಪಿಗೆ ಈ ಕುರಿತಂತೆ ಯಾವ ನೋಟಿಸನ್ನೂ ಜಾರಿಗೊಳಿಸಿಲ್ಲ. ಇದೀಗ ಒಡಿಶಾದಲ್ಲಿ ಹೆಲಿಕಾಪ್ಟರ್ ಒಂದನ್ನು ತಪಾಸಣೆ ಮಾಡಿದಾಕ್ಷಣ ಚೌಕಿದಾರ್ ಮೋದಿ ಗರಂ ಆಗಿ ತಕ್ಷಣ ಅಧಿಕಾರಿಯನ್ನು ಅಮಾನತು ಗೊಳಿಸಿರುವುದಕ್ಕೂ, ಚಿತ್ರದುರ್ಗದಲ್ಲಿ ಹೆಲಿಕಾಪ್ಟರ್‌ನೊಳಗಿದ್ದ ನಿಗೂಢ ಪೆಟ್ಟಿಗೆಗೂ ಜನರು ಸಂಬಂಧಕಲ್ಪಿಸುತ್ತಿದ್ದಾರೆ. ಅಕ್ರಮ ಹಣ ಅಥವಾ ಇನ್ನಿತರ ವ್ಯವಹಾರಗಳಿಗೆ ಪ್ರಧಾನಿಯ ಹೆಲಿಕಾಪ್ಟರ್‌ನ್ನೇ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಾತ್ರವಲ್ಲ, ಈ ಮೂಲಕ ಇತರ ಅಧಿಕಾರಿಗಳಿಗೂ ನರೇಂದ್ರ ಮೋದಿಯವರು ಚುನಾವಣಾ ಆಯೋಗದ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ಬಳಿಕ ಯಾವುದೇ ಅಧಿಕಾರಿ ಪ್ರಧಾನಿ ಅಥವಾ ಬಿಜೆಪಿ ನಾಯಕರ ವಾಹನಗಳನ್ನು ತಪಾಸಣೆಗೈಯುವ ಧೈರ್ಯ ತೋರಿಸಲು ಸಾಧ್ಯವೇ?

 ಮೋದಿಯವರು ಪದೇ ಪದೇ ನೀತಿ ಸಂಹಿತೆಗಳನ್ನು ಉಲ್ಲಂಘಿಸುತ್ತಿರುವುದರಿಂದ ಅವರ ವಾಹನಗಳ ತಪಾಸಣೆಗಳು ಅತ್ಯಗತ್ಯವಾಗಿ ನಡೆಯಬೇಕಾಗಿದೆ. ಆದರೆ ಚುನಾವಣಾ ಆಯೋಗ ಈ ಉಲ್ಲಂಘನೆಯ ಕುರಿತಂತೆ ದಿವ್ಯ ವೌನ ವಹಿಸಿದೆ. ತಾನೂ ಈ ಬಗ್ಗೆ ಕ್ರಮತೆಗೆದುಕೊಳ್ಳದೆ, ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳ ಕೈಗಳನ್ನ್ನೂ ಕಟ್ಟಿ ಹಾಕುತ್ತಿದೆ. ಚುನಾವಣಾ ಆಯೋಗ ತಕ್ಷಣ ತನ್ನ ನಿಲುವಿನಿಂದ ಹಿಂದೆ ಸರಿದು, ಹೆಲಿಕಾಪ್ಟರ್‌ನ್ನು ತಪಾಸಣೆಗೈದ ಅಧಿಕಾರಿಯ ಅಮಾನತನ್ನು ಹಿಂದೆಗೆದು ಅವರನ್ನು ಮರುನೇಮಕಗೊಳಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದನ್ನು ಸಮರ್ಪಕವಾಗಿ ಪಾಲಿಸಿದ ಈ ಅಸಲಿ ಚೌಕಿದಾರನನ್ನು ಆಯೋಗ ಅಭಿನಂದಿಸಬೇಕು ಮತ್ತು ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲು ಹಿಂಜರಿಯಬಾರದು. ಒಟ್ಟಿನಲ್ಲಿ ಈ ಪ್ರಕರಣ ಈ ದೇಶದ ಅಸಲಿ ಮತ್ತು ನಕಲಿ ಚೌಕಿದಾರರು ಯಾರು ಎನ್ನುವುದನ್ನು ಬಹಿರಂಗಗೊಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)