varthabharthi


ಕಾಲಂ 9

ಸಾಧ್ವಿಯ ಭಯೋತ್ಪಾದನೆ ಮತ್ತು ಮೋದಿಯವರ ‘ಅಭಿನವ ಭಾರತ’

ವಾರ್ತಾ ಭಾರತಿ : 20 Apr, 2019
ಶಿವಸುಂದರ್

ಶಂಕಿತ ಭಯೋತ್ಪಾದಕಳನ್ನು ಸಂಸದಳನ್ನಾಗಿಸುವ ಈ ಪ್ರಯತ್ನವು ಇಂದು ಮುಸ್ಲಿಮರ ಮತ್ತು ದಲಿತರ ವಿರುದ್ಧ ರಾಜಾರೋಷವಾಗಿ ನಡೆದಿರುವ ‘ಸಂಘೀ ಭಯೋತ್ಪಾದನೆ’ಯನ್ನು ಶಾಸನಾತ್ಮಕಗೊಳಿಸಿ ಅಧಿಕೃತ ಪ್ರಭುತ್ವ ಭಯೋತ್ಪಾದನೆಯನ್ನಾಗಿಸುವ ದೊಡ್ಡ ಹುನ್ನಾರದ ಭಾಗವೇ?


ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ‘ಸಾಧ್ವಿ’ ಪ್ರಜ್ಞಾ ಸಿಂಗ್ ಠಾಕೂರನ್ನು ಬಿಜೆಪಿ ಪಕ್ಷವು ಭೋಪಾಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕಿಳಿಸುವ ಮೂಲಕ ಉಳಿದಿರುವ ಚುನಾವಣೆ ಮತ್ತು ಬರಲಿರುವ ಸರಕಾರ ಯಾವ ದಿಕ್ಕು ಹಿಡಿಯಲಿದೆ ಎಂಬುದರ ಸ್ಪಷ್ಟ ಸೂಚನೆ ನೀಡಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಭಯೋತ್ಪಾದನೆಯ ಆರೋಪ ಹೊತ್ತಿರುವ ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ಚುನಾವಣಾ ಕಣಕ್ಕಿಳಿಸಿದ್ದರೆ ಸಂಘಪರಿವಾರ, ಅವರ ಸಾಕು ಮಾಧ್ಯಮಗಳು ಮತ್ತು ತಟಸ್ಥ ‘ಬುದ್ಧಿಜೀವಿಗಳು’ ಭಾರತವನ್ನು ಇಷ್ಟು ತಣ್ಣಗಿರಲು ಬಿಡುತ್ತಿದ್ದರೇ? ಅಥವಾ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದೇ ತನ್ನ ಸರಕಾರದ ಪ್ರಧಾನ ಸಾಧನೆಯೆಂದು ಕೊಚ್ಚಿಕೊಳ್ಳುತ್ತಿರುವ ಬಿಜೆಪಿಯು ಈ ಮೂಲಕ 2003-2008ರ ನಡುವೆ ಭಾರತದಾದ್ಯಂತ ಈ ಸಾಧು-ಸಾಧ್ವಿಗಳು ಮಸೀದಿ ಹಾಗೂ ಮುಸ್ಲಿಮರನ್ನು ಗುರಿಯಾಗಿರಿಸಿ ನಡೆಸಿದ ಬಾಂಬ್ ದಾಳಿಗಳೆಲ್ಲವೂ ‘‘ಭಯೋತ್ಪಾದನೆಯ ವಿರುದ್ಧ’’ ಸಮರದ ಭಾಗವೇ ಆಗಿದೆಯೆಂದು ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆಯೇ?

ಶಂಕಿತ ಭಯೋತ್ಪಾದಕಳನ್ನು ಸಂಸದಳನ್ನಾಗಿಸುವ ಈ ಪ್ರಯತ್ನವು ಇಂದು ಮುಸ್ಲಿಮರ ಮತ್ತು ದಲಿತರ ವಿರುದ್ಧ ರಾಜಾರೋಷವಾಗಿ ನಡೆದಿರುವ ‘ಸಂಘೀ ಭಯೋತ್ಪಾದನೆ’ಯನ್ನು ಶಾಸನಾತ್ಮಕಗೊಳಿಸಿ ಅಧಿಕೃತ ಪ್ರಭುತ್ವ ಭಯೋತ್ಪಾದನೆಯನ್ನಾಗಿಸುವ ದೊಡ್ಡ ಹುನ್ನಾರದ ಭಾಗವೇ? ದುರದೃಷ್ಟಕರವಾದ ವಿಷಯವೇನೆಂದರೆ ಈ ಯಾವ ಪ್ರಶ್ನೆಗಳು ಉತ್ಪ್ರೇಕ್ಷೆಯಲ್ಲ. ಕಳೆದ ದಶಕದಲ್ಲಿ ಈ ದೇಶವನ್ನು ನಡುಗಿಸಿದ ಈ ‘ಸಾಧು-ಸಾಧ್ವಿ’ಗಳ ಬಾಂಬ್ ಭಯೋತ್ಪಾದನೆಯ ಬೆಚ್ಚಿಬೀಳಿಸುವ ತನಿಖಾ ವಿವರಗಳನ್ನು ನೋಡಿದರೆ ಈ ವಾಸ್ತವ ಅರ್ಥವಾಗುತ್ತದೆ. 2008ರ ಮಾರ್ಚ್ 29ನೇ ತಾರೀಕಿನಂದು ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ ಮುಸ್ಲಿಮರೇ ಹೆಚ್ಚಿರುವ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಬಲವಾದ ಬಾಂಬೊಂದು ಸ್ಫೋಟವಾಗಿ ಏಳು ಜನ ಸ್ಥಳದಲ್ಲೇ ಸತ್ತು ಎಂಬತ್ತಕ್ಕೂ ಹೆಚ್ಚು ಜನ ಮಾರಣಾಂತಿಕವಾಗಿ ಗಾಯಗೊಂಡರು. ಆ ಪ್ರಕರಣದ ತನಿಖೆಯನ್ನು ನಡೆಸಿದ್ದು ಮಹಾರಾಷ್ಟ್ರದ ಆಗಿನ ‘ಭಯೋತ್ಪಾದನಾ ನಿಗ್ರಹ ದಳ-ಎಟಿಎಸ್’ನ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆಯವರು. ಸೈನ್ಯದಲ್ಲಿ ಮಾತ್ರ ಸಿಗುವ ಆರ್‌ಡಿಎಕ್ಸ್ ಸ್ಫೋಟಕವನ್ನು (ಫುಲ್ವಾಮ ದಾಳಿಯಲ್ಲೂ ಬಳಸಿದ್ದು ಆರ್‌ಡಿಎಕ್ಸ್ ಸ್ಫೋಟಕವನ್ನೇ) ಒಂದು ಎಲ್‌ಎಂಎಲ್ ಫ್ರೀಡಂ ಬೈಕಿಗೆ ಅಳವಡಿಸಿ ಸ್ಫೋಟಿಸಲಾಗಿದೆಯೆಂಬುದನ್ನು ಅವರು ತನಿಖೆಯಲ್ಲಿ ಪತ್ತೆ ಹಚ್ಚಿದರು.

ಆ ಬೈಕಿನ ಚಾಸಿ ಇತ್ಯಾದಿ ಸಂಖ್ಯೆಗಳ ಜಾಡು ಹಿಡಿದು ಹೋದಾಗ ಅದು ಈ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಸೇರಿದ್ದೆಂದು ತಿಳಿಯುತ್ತದೆ. ಆ ನಂತರದಲ್ಲಿ ಆಕೆಯ ಫೋನ್, ಓಡಾಟ ಮತ್ತು ಒಡನಾಟಗಳ ವಿವರಗಳನ್ನೂ ಮತ್ತು ಆಕೆಯ ಮತ್ತು ಇತರ ಆರೋಪಿಗಳ ಲ್ಯಾಪ್‌ಟಾಪಿನಲ್ಲಿದ್ದ ಧ್ವನಿ ಹಾಗೂ ವೀಡಿಯೊ ಮುದ್ರಿಕೆಗಳೆನ್ನೆಲ್ಲಾ ಅಧ್ಯಯನ ಮಾಡಿದ ಕರ್ಕರೆಯವರು ಇದರ ಹಿಂದೆ ಇದ್ದ ಸಂಘ ಪರಿವಾರಿದ ದೇಶದ್ರೋಹೀ ಭಯೋತ್ಪಾದಕ ಷಡ್ಯಂತ್ರಗಳ ಭಯಾನಕ ವಿವರಗಳನ್ನು ಬಯಲು ಮಾಡಿದರು. ಅದೇ ವೇಳೆಗೆ 2007ರಲ್ಲಿ ನಡೆದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ತನಿಖೆಯೂ ಸಹ ಹರ್ಯಾಣ ಪೊಲೀಸರನ್ನು ಮಧ್ಯಪ್ರದೇಶದ ಅರೆಸ್ಸೆಸ್ ಕಾರ್ಯಕರ್ತರ ಮನೆ ಬಾಗಿಲಿಗೆ ತಂದು ನಿಲ್ಲಿಸಿತ್ತು. ಇವೆಲ್ಲದರ ಮೂಲಕ 2003-2008ರ ನಡುವೆ ನಾಸಿಕ್, ನಾಂದೇಡ್, ಪರ್‌ಭಣಿ, ತೆನ್‌ಕಾಶಿ, ಕಾನ್ಪುರ್, ಅಜ್ಮೀರ್ ದರ್ಗಾ, ಹೈದರಾಬಾದ್ ಮಕ್ಕಾ ಮಸೀದಿ ಬಾಂಬ್ ಸ್ಫೋಟಗಳೆಲ್ಲದರ ಹಿಂದೆ ಸಾಧ್ವಿ ಪ್ರಜ್ಞಾ ಸಿಂಗ್ ಸಕ್ರಿಯ ಸದಸ್ಯಳಾಗಿರುವ ‘ಅಭಿನವ್ ಭಾರತ್’ ಎಂಬ ಸಂಘಟನೆಯ ಷಡ್ಯಂತ್ರವಿರುವುದು ಪತ್ತೆಯಾಯಿತು. ಹಾಗೂ ಇದಕ್ಕೆ ಬೇಕಾಗಿರುವ ಹಣವನ್ನು ಒದಗಿಸುವ ಜವಾಬ್ದಾರಿಯನ್ನು ಪುಣೆಯ ಶಾಮ್ ಅಪ್ಟ್ಟೆಯೆಂಬ ಹಿರಿಯ ಆರೆಸ್ಸೆಸ್ ನಾಯಕರು ವಹಿಸಿಕೊಂಡಿರುವುದಾಗಿ ಆರೋಪಿಗಳ ನಡುವೆ ನಡೆದ ಸಂಭಾಷಣೆಯು ಸ್ಪಷ್ಟಪಡಿಸುತ್ತದೆ.

ಈ ಹಂತದಲ್ಲಿ ಇದು ನಿಜವೇ ಅಥವಾ ಸುಳ್ಳೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹಾಗೆಯೇ ನಿಷ್ಪಕ್ಷಪಾತ ತನಿಖೆಯಾಗದೆ ಸತ್ಯವೂ ಹೊರಬರದೆ ಮುಚ್ಚಿಹೋಗುವ ಸಾಧ್ಯತೆಯೇ ಹೆಚ್ಚು. ಇದೆಲ್ಲಕ್ಕಿಂತ ಗಂಭೀರವಾದ ಮತ್ತೊಂದು ವಿಷಯವೆಂದರೆ ಈ ದಾಳಿಗಳಿಗಾಗಿ ಬೇಕಾದ ಆರ್‌ಡಿಎಕ್ಸ್ ಸ್ಫೋಟಕವನ್ನು ಒದಗಿಸುವ ಮತ್ತು ಒಟ್ಟಾರೆ ಆ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಸೈನ್ಯದಲ್ಲಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ವಹಿಸಿಕೊಂಡಿದ್ದ ಅಂಶವನ್ನು ಈ ಸಂಚು ಸಭೆಗಳಲ್ಲಿ ಭಾಗವಹಿಸಿದ್ದ ಇತರ ಸದಸ್ಯರು ಮತ್ತು ಲ್ಯಾಪ್‌ಟಾಪಿನಲ್ಲಿ ಸಿಕ್ಕ ವೀಡಿಯೊ ಮುದ್ರಿಕೆಗಳು ಸಾಬೀತು ಮಾಡುತ್ತವೆ. ಅದರಂತೆ ಎಟಿಎಸ್ ಈ ಸಾಧ್ವಿಯನ್ನು ಅಕ್ಟೋಬರ್‌ನಲ್ಲಿಯೂ ಮತ್ತು ಆ ಕರ್ನಲ್ ಪುರೋಹಿತ್ ಹಾಗೂ ಸಂಚುಕೂಟದ ಮತ್ತೊಬ್ಬ ಸಕ್ರಿಯ ನೇತಾರನಾಗಿದ್ದ ನಿವೃತ್ತ ಸೇನಾಧಿಕಾರಿ ಉಪಾಧ್ಯಾಯರನ್ನು ನವೆಂಬರ್‌ನಲ್ಲಿ ಕರ್ಕರೆಯವರು ಬಂಧಿಸುತ್ತಾರೆ.

ಆ ಕಾರಣಕ್ಕಾಗಿಯೇ ಅರೆಸ್ಸೆಸ್ ಮತ್ತು ಶಿವಸೇನಾ ಹಾಗೂ ಇನ್ನಿತರ ಹಿಂದುತ್ವವಾದಿ ಸಂಘಟನೆಗಳು ಕರ್ಕರೆ ಮೇಲೆ ಮತ್ತವರ ಕುಟುಂಬದವರ ಮೇಲೆ ನಂಜುಪೂರಿತ ಹಾಗೂ ನೆಮ್ಮದಿಗೆಡಿಸುವ ತೀವ್ರ ದಾಳಿಯನ್ನು ಮಾಡಲು ಪ್ರಾರಂಭಿಸುತ್ತಾರೆ. 2008ರ ನವೆಂಬರ್ 26ರಂದು ಕರ್ಕರೆಯವರು ಮಾನವ ಹಕ್ಕು ಕಾರ್ಯಕರ್ತೆಯಾಗಿರುವ ತೀಸ್ತಾ ಸೆಟಲ್‌ವಾಡ್ ಅವರಿಗೆ ನೀಡಿದ 45 ನಿಮಿಷಗಳ ಸಂದರ್ಶನದಲ್ಲಿ ಈ ಬಗೆಯ ವೈಯಕ್ತಿಕ ಮಟ್ಟದ ಕೀಳು ಹಲ್ಲೆ ನಡೆಯುತ್ತಿರುವಾಗ ಒಬ್ಬ ಅಧಿಕಾರಿ ತನಿಖೆ ನಡೆಸುವುದು ಎಷ್ಟು ಕಷ್ಟವೆಂದು ವಿವರಿಸಿದ್ದಾರೆ. ಅದರೆ ದುರದೃಷ್ಟವಶಾತ್ ಅಂದೇ ಅಜ್ಮಲ್ ಕಸಬ್‌ನ ನೇತೃತ್ವದಲ್ಲಿ ಒಂದು ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕ ತಂಡ ಮುಂಬೈ ಮೇಲೆ ದಾಳಿ ನಡೆಸುತ್ತದೆ ಮತ್ತು ಅವರ ಮೇಲೆ ಪ್ರತಿಕಾರ್ಯಾಚರಣೆ ನಡೆಸಲು ಹೋದ ಹೇಮಂತ ಕರ್ಕರೆಯವರು ಆ ರಾತ್ರಿಯೇ ಆ ಭಯೋತ್ಪಾದಕರ ದಾಳಿಗೆ ಸುಲಭ ತುತ್ತಾಗಿ ನಿಗೂಢವಾಗಿ ಸಾವನ್ನಪ್ಪುತ್ತಾರೆ.

  ಆದರೆ ಆ ವೇಳೆಗಾಗಲೇ ಅವರು ಕೂಡಿಹಾಕಿದ್ದ ದಾಖಲೆಗಳು ಮತ್ತು ಪುರಾವೆಗಳು ಎಷ್ಟು ಗಟ್ಟಿಯಾಗಿದ್ದವೆಂದರೆ ಆ ನಂತರವೂ ಎಟಿಎಸ್ ತನಿಖೆಯನ್ನ್ನು ಅದೇ ಜಾಡಿನಲ್ಲಿ ಮುಂದುವರಿಸಲೇಬೇಕಾಯಿತು ಹಾಗೂ ಅವರು ಕಲೆಹಾಕಿದ್ದ ಸಾಕ್ಷ್ಯಾಧಾರಗಳ ಗಟ್ಟಿತನದಿಂದಾಗಿಯೇ 2017ರ ವರೆಗೆ ಈ ಆರೋಪಿಗಳಿಗೆ ಯಾವ ನ್ಯಾಯಾಲಯಗಳು ಜಾಮೀನು ಕೂಡ ಕೊಟ್ಟಿರಲಿಲ್ಲ. ಆದರೆ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸಂಘೀ ಭಯೋತ್ಪಾದಕ ಪ್ರಕರಣಗಳನ್ನು ತುಂಬಾ ಯೋಜಿತವಾಗಿ ಒಳಗಿನಿಂದಲೇ ಸಡಿಲಗೊಳಿಸಲು ಪ್ರಾರಂಭಿಸಿತು. 2010ರಲ್ಲಿ ಅಮೆರಿಕದ ಎಫ್‌ಬಿಐ ಮಾದರಿಯಲ್ಲಿ ಭಾರತದಲ್ಲು ಭಯೋತ್ಪಾದಕ ಕೃತ್ಯಗಳ ತನಿಖೆಗೆಂತಲೇ ಕೇಂದ್ರ ಸರಕಾರದ ನೇತೃತ್ವದಲ್ಲಿ ನ್ಯಾಷನಲ್ ಇನ್‌ವೆಸ್ಟಿಗೇಟೀವ್ ಏಜೆನ್ಸಿ (ಎನ್‌ಐಎ) ಯನ್ನು ಸ್ಥಾಪಿಸಲಾಯಿತು ಮತ್ತು ದೇಶಾದ್ಯಂತ ಎಲ್ಲೇ ಭಯೋತ್ಪಾದನಾ ಕೃತ್ಯಗಳು ನಡೆದರೂ ಅದರ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಯಿತು. ಹೀಗೆ ಸಂಘೀಗಳು ನಡೆಸಿದ ಎಲ್ಲಾ ಭಯೋತಾದನೆಯ ಕೃತ್ಯಗಳ ತನಿಖೆಯೂ ಸಹ 2014ನಂತರ ಅಧಿಕಾರಕ್ಕೇರಿದ ಮೋದಿ-ಸಂಘೀ ಸರಕಾರದ ಸುಪರ್ದಿಗೆ ಸಹಜವಾಗಿಯೇ ಬಂದುಬಿಟ್ಟಿತು.

ಅದರ ಪರಿಣಾಮವಾಗಿಯೇ ಈ ಪ್ರಜ್ಞಾ ಠಾಕೂರ್ ಮತ್ತು ಪುರೋಹಿತರಂತಹ ಸಂಘೀ ಭಯೋತ್ಪಾದಕರ ವಿರುದ್ಧ ವಿಚಾರಣೆಯ ಹಂತದಲ್ಲಿದ್ದ ವಿವಿಧ ಪ್ರಕರಣಗಳಲ್ಲಿ ಸಾಕ್ಷಿಗಳು ಉಲ್ಟಾ ಹೊಡೆಯುವುದು ಹಾಗೂ ಪುರಾವೆಗಳು ಕಡತದಿಂದ ಮಾಯವಾಗುವುದು ಪ್ರಾರಂಭವಾಯಿತು. ಕಲೆ ಹಾಕಿದ್ದ ಸಾಕ್ಷ್ಯಗಳನ್ನು ಸಹ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಇರಿಸದೆ ಬಚ್ಚಿಡಲಾಯಿತು. ಅಷ್ಟೂ ಸಾಲದಿದ್ದಾಗ ಈ ಸಂಘೀ ಆರೋಪಿಗಳ ವಿರುದ್ಧ ಸರಕಾರಿ ವಕೀಲರು ಮೃದು ಧೋರಣೆ ಅನುಸರಿಸಬೇಕೆಂಬ ಒತ್ತಡಗಳು ‘ಮೇಲಿನಿಂದ’ ಬರಲಾರಂಭಿಸಿದವು. ಇದನ್ನು ಸರಕಾರಿ ವಕೀಲರಾಗಿದ್ದ ರೋಹಿಣಿ ಸಲ್ಯಾನ್ ಅವರೇ ಬಹಿರಂಗವಾಗಿ ಹೇಳಿರುವುದಲ್ಲದೆ ಹಾಗೆ ಒತ್ತಡ ಹಾಕುತ್ತಿದ್ದ ಅಧಿಕಾರಿ ಯಾರೆಂಬುದನ್ನೂ ಸಹ ಅವರು ಸಲ್ಲಿಸಿದ ಅಫಿದಾವಿತ್‌ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ಷಡ್ಯಂತ್ರಗಳೆಲ್ಲಾ ರಾಜಾರೋಷವಾಗಿ ಹಾಡಹಗಲಲ್ಲೇ ನಡೆದವು. ಇದಕ್ಕೆ ಸಂಜೋತಾ ಸ್ಫೋಟ ಪ್ರಕರಣದಲ್ಲಿ ದೋಷಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಬೇಕಾಗಿ ಬಂದ ದುರದೃಷ್ಟಕರ ಸನ್ನಿವೇಶದ ಬಗ್ಗೆ ನ್ಯಾಯಾಧೀಶರು ಎನ್‌ಐಎಯ ಬೇಜವಾಬ್ದಾರಿ ಮತ್ತು ಅದರ ನಿಯತ್ತಿನ ಕೊರತೆಗಳ ಬಗ್ಗೆ ಮಾಡಿರುವ ಟಿಪ್ಪಣಿಗಳೇ ಸಾಕ್ಷಿ.

ಸಂಚಿನ ಭಾಗವಾಗಿಯೇ ಎನ್‌ಐಎಯು 2017ರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಾನು ಸಲ್ಲಿಸಿದ ಚಾರ್ಜ್ ಶೀಟಿನಲ್ಲಿ ಈ ಸಾಧ್ವಿ ಪ್ರಜ್ಞಾ ಠಾಕೂರ್‌ರ ಮೇಲಿದ್ದ ಎಲ್ಲಾ ಆರೋಪಗಳನ್ನು ಕೈಬಿಡಲು ಮುಂದಾಗಿತ್ತು. ಆದರೆ ಕೋರ್ಟು ಅದಕ್ಕೆ ಅವಕಾಶ ಕೊಡಲಿಲ್ಲ. ಮೊದಲನೆಯದಾಗಿ ಸ್ಫೋಟಕ್ಕೆ ಬಳಸಿದ ಬೈಕು ಪ್ರಜ್ಞಾ ಠಾಕೂರಳ ಒಡೆತನಕ್ಕೆ ಸೇರಿರುವುದು, ಮತ್ತದನ್ನು ಆಕೆ ಬಳಸುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ನಂಬಲರ್ಹ ಪುರಾವೆಯನ್ನು ಆಕೆ ಒದಗಿಸದಿರುವುದು, ಸ್ಫೋಟ ಮಾಡಿದ ಆರೋಪಿಗಳ ಜೊತೆ ಆಕೆ ಸ್ಫೋಟದ ಹಿಂದಿನ ದಿನ, ಸ್ಫೋಟ ನಡೆದ ದಿನ ಮತ್ತು ಸ್ಫೋಟದ ಮರು ದಿನ ನಿರಂತರ ಸಂಪರ್ಕದಲ್ಲಿದ್ದದ್ದನ್ನು ಆಕೆಯ ಮೊಬೈಲ್ ಕಾಲ್ ವಿವರಗಳು ಸ್ಪಷ್ಟಪಡಿಸುತ್ತಿರುವುದು, ಆಕೆಯು ಈ ಸಾಲು ಸ್ಫೋಟಗಳ ಸಂಚಿನ ಸಭೆಗಳಲ್ಲಿ ಖುದ್ದು ಹಾಜರಿದ್ದುದನ್ನು ಇತರ ಸಾಕ್ಷಿಗಳು ದೃಢೀಕರಿಸುತ್ತಿರುವುದು ಮತ್ತು ಸ್ಫೋಟ ನಡೆದ ನಂತರ ಆಕೆ ‘‘ಕೇವಲ ಏಳೇ ಸಾವುಗಳೇ’’ ಎಂದು ಸಿಟ್ಟಿನಿಂದ ಕೇಳಿರುವುದು- ಇವುಗಳೆಲ್ಲಾ ಆಕೆಯು ಅಮಾಯಕಳಲ್ಲವೆಂದು ಹೇಳುತ್ತಿರುವುದರಿಂದ ಆಕೆಯ ವಿರುದ್ಧ ದೋಷಾರೋಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ನ್ಯಾಯಾಲಯವೇ ಖುದ್ದು ಎನ್‌ಐಎಗೆ ತಾಕೀತು ಮಾಡುತ್ತದೆ! ಹೀಗಾಗಿ 2018ರ ಅಕ್ಟೋಬರ್‌ನಲ್ಲಿ ಆಕೆಯ ಮೇಲೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ದೋಷಾರೋಪವನ್ನು ನ್ಯಾಯಾಲಯ ಹೊರಿಸಿದೆ. ಅದರ ವಿಚಾರಣೆ ಇನ್ನು ಪ್ರಾರಂಭವಾಗಬೇಕಿದೆ. ಮೇಲಾಗಿ ಆಕೆಯ ಜಾಮೀನು ರದ್ದಾಗಬೇಕೆಂಬ ಅಹವಾಲೊಂದು ಸುಪ್ರೀಂ ಕೋರ್ಟಿನಲ್ಲಿ ವಿಲಾವಾರಿಯಾಗಬೇಕಿದೆ. ಆಕೆಗೆ ನ್ಯಾಯಾಲಯ ಜಾಮೀನು ನೀಡಿದ್ದು ಆಕೆಯ ಆರೋಗ್ಯ ಸರಿಯಿಲ್ಲವೆಂಬ ಮನವಿಯ ಕಾರಣಕ್ಕೆ ಮಾತ್ರ. ಆದರೆ ಜೈಲಿನಲ್ಲಿರಲು ಆರೋಗ್ಯ ಸರಿಯಿಲ್ಲವೆಂದ ಈ ಸಾಧ್ವಿಗೆ ಈಗ ಚುನಾವಣೆಯಲ್ಲಿ ಸ್ಪರ್ಧಾಳು ಆಗಲು ಮಾತ್ರ ಆರೋಗ್ಯ ಅಡ್ಡಿ ಬರುತ್ತಿಲ್ಲ!

ಅದೇನೇ ಇರಲಿ. ಈ ಶಂಕಿತ ಭಯೋತ್ಪಾದಕಳು ಹಾಗೂ ಆಕೆಯನ್ನು ಸೇರಿಸಿಕೊಂಡ ಬಿಜೆಪಿ ಹಾಗೂ ಕೆಲವು ಸಾಕು ಮಾಧ್ಯಮಗಳು ಹೇಳುತ್ತಿರುವಂತೆ ಈ ಸಾಧ್ವಿ ದೋಷ ಮುಕ್ತಳೂ ಆಗಿಲ್ಲ. ಕೋರ್ಟು ಕ್ಲೀನ್‌ಚಿಟ್ ಕೂಡಾ ಕೊಟ್ಟಿಲ್ಲ. ಕ್ಲೀನ್‌ಚಿಟ್ ಕೊಡಲು ಪ್ರಯತ್ನಿಸಿದ್ದು ಮೋದಿ ಸರಕಾರದ ನಿಯಂತ್ರಣದಲ್ಲಿರುವ ಎನ್‌ಐಎ. ಆದರೆ ನ್ಯಾಯಾಲಯವೇ ಅದಕ್ಕೆ ಅವಕಾಶ ಕೊಡದೆ ಆಕೆಯ ಮೇಲೆ ಭಯೋತ್ಪಾದನೆಯ ದೋಷಾರೋಪವನ್ನು ಹೊರಿಸಿದೆ.

ಅಷ್ಟು ಮಾತ್ರವಲ್ಲ. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಪ್ರಧಾನ ರೂವಾರಿಯಾಗಿದ್ದ ಸುನಿಲ್ ಜೋಷಿಯನ್ನು ಹತ್ಯೆ ಮಾಡಿದ ಆರೋಪವೂ ಈಕೆಯ ಮೇಲಿತ್ತು. ಏಕೆಂದರೆ ಗುಜರಾತ್ ನರಸಂಹಾರದ ಆರೋಪಿಗಳಾಗಿದ್ದ ಹಲವು ಹಂತಕರಿಗೆ ಇಂದೋರಿನ ಸಕ್ರಿಯ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಅನ್ನೂ ಒಳಗೊಂಡಂತೆ ಆ ಹಿಂದಿನ ಎಲ್ಲಾ ಭಯೋತ್ಪಾದಕ ಕೃತ್ಯಗಳಲ್ಲೂ ಭಾಗವಹಿಸಿದ್ದ ಸುನಿಲ್ ಜೋಷಿ ಆಶ್ರಯ ಕೊಟ್ಟಿದ್ದ. ಆಗ ಆತ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಲ್ಲದೆ ಈ ಸಾಧ್ವಿಯ ಜೊತೆಯೂ ಆತ ಸರಿಯಾಗಿ ನಡೆದುಕೊಂಡಿರಲಿಲ್ಲ. ಅಲ್ಲದೆ ಸಂಜೋತಾ ಪ್ರಕರಣದಲ್ಲಿ ಈತನು ಭಾಗಿಯಾಗಿರುವುದು ಪೊಲೀಸರಿಗೆ ಪತ್ತೆಯಾಗಿದ್ದಲ್ಲದೆ ಸಂಘಟನಾ ಒಳಜಗಳದ ಕಾರಣಗಳಿಗಾಗಿಯೂ ಆತ ಅದನ್ನು ಬಾಯಿ ಬಿಡುವವನಿದ್ದ. ಈ ಎಲ್ಲಾ ಕಾರಣಗಳಿಗಾಗಿ ಸುನಿಲ್ ಜೋಷಿ 2008ರಲ್ಲಿ ನಿಗೂಢವಾಗಿ ಕೊಲೆಯಾಗುತ್ತಾನೆ. ಅದರ ಆರೋಪದ ಮೇಲೆ ಮಧ್ಯಪ್ರದೇಶದ ಪೊಲೀಸರಿಂದ 2009ರಲ್ಲಿ ಒಮ್ಮೆ ಮತ್ತು 2011ರಲ್ಲಿ ಇನ್ನೊಮ್ಮೆ ಬಂಧನಕ್ಕೊಳಗಾದ ಹಿನ್ನೆಲೆಯೂ ಈ ಸಾಧ್ವಿಗಿದೆ. ಆಕೆಯ ಬಂಧನವಾದ ಎರಡೂ ಸಂದರ್ಭಗಳಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರಕಾರವೇ ವಿನಃ ಕಾಂಗ್ರೆಸ್ ಸರಕಾರವಲ್ಲ.

ಅಷ್ಟು ಮಾತ್ರವಲ್ಲ. ಈ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಈ ‘ಸಾಧ್ವಿ’ಯ ಪಾತ್ರವನ್ನು ಸಾಬೀತು ಮಾಡುವ ಮತ್ತೊಂದು ಪುರಾವೆಯನ್ನೂ ಸಹ ಸಂಘವೇ ಒದಗಿಸಿದೆ. ಈ ಎಲ್ಲಾ ಭಯೋತ್ಪಾದಕ ಪ್ರಕರಣಗಳ ರೂವಾರಿ ಸೇನೆಯಲ್ಲಿ ಇನ್ನೂ ಕೆಲಸ ಮಾಡುತ್ತಿರುವ ಕರ್ನಲ್ ಪುರೋಹಿತ್. ಆದರೆ ತನ್ನ ಸುತ್ತ ಆರೋಪಗಳು ಗಟ್ಟಿಯಾಗುತ್ತಿರುವುದನ್ನು ಕಂಡ ಆತ ತನ್ನ ಹೇಳಿಕೆಯನ್ನು ನಂತರದ ದಿನಗಳಲ್ಲಿ ಬದಲಿಸಿದ್ದಾನೆ. ಬದಲಾದ ಹೇಳಿಕೆಯ ಪ್ರಕಾರ ಆತ ಅಭಿನವ್ ಭಾರತ್ ಸಂಘಟನೆಯ ಸಂಚು ಸಭೆಗಳಲ್ಲಿ ಭಾಗವಹಿಸುತ್ತಿದ್ದದು ಮತ್ತು ಪ್ರಜ್ಞಾ ಠಾಕೂರಳನ್ನು ಒಳಗೊಂಡಂತೆ ಎಲ್ಲಾ ಆರೋಪಿಗಳು ಅದರಲ್ಲಿ ಭಾವಹಿಸುತ್ತಿದ್ದದು ನಿಜವೇ ಎಂದು ಒಪ್ಪಿಕೊಳ್ಳುವ ಕರ್ನಲ್ ಪುರೋಹಿತ್, ತಾನು ಅಲ್ಲಿ ಭಾಗವಹಿಸುತ್ತಿದ್ದದು ಭಾರತ ಸೇನೆಯ ಪರವಾಗಿ ಅವರ ಬಗ್ಗೆ ಗೂಢಚರ್ಯೆ ನಡೆಸಲು ಎಂದು ಹೇಳಿದ್ದಾನೆ. ಅದರ ಸತ್ಯಾಸತ್ಯತೆ ಏನೇ ಇರಲಿ ಬದಲಾದ ಹೇಳಿಕೆಯೂ ಸಹ ಒಂದು ವಿಷವನ್ನಂತೂ ಸ್ಪಷ್ಟಪಡಿಸುತ್ತದೆ. ಅದು ಅಭಿನವ್ ಭಾರತ್ ಸಂಘಟನೆ ಸಂಚು ಸಭೆಗಳನ್ನೂ ನಡೆಸುತ್ತಿದ್ದದ್ದು, ಬಾಂಬ್ ಸ್ಫೋಟಗಳನ್ನು ಮಾಡಿದ್ದು ಮತ್ತು ಪ್ರಜ್ಞಾ ಠಕೂರ್ ಅದರಲ್ಲಿ ಭಾಗವಹಿಸಿದ್ದನ್ನಂತೂ ನೇರವಾಗಿಯೇ ಧೃಢಪಡಿಸುತ್ತದೆ. ಇದರ ಮಧ್ಯೆಯೂ ಆಕೆಯಿನ್ನೂ ಆರೋಪಿಯೇ ಹೊರತು ಅಪರಾಧಿಯಲ್ಲ ಎನ್ನುವುದು ನಿಜ. ಆದರೆ ಆಕೆ ಆರೋಪಿಯೆನ್ನುವುದಕ್ಕೆ ಬಲವಾದ ಪುರಾವೆಗಳಿರುವ ಮತ್ತು ಅಮಾನುಷವಾದ ಅಪರಾಧಗಳನ್ನು ಮತ್ತು ದೇಶದ್ರೋಹಿ ಭಯೋತ್ಪಾದನೆಯನ್ನು ಹೊತ್ತಿರುವ ಆರೋಪಿಯಾಗಿದ್ದಾಳೆ. ಅಂತ ಆರೋಪಿಯನ್ನೂ ಬಿಜೆಪಿ ಸಂಸದಳನ್ನಾಗಿಸಹೊರಟಿದೆ. ಇದು ಎಂತಹ ಮೇಲ್ಪಂಕ್ತಿ ಹಾಕಿಕೊಡಬಹುದು?

ಒಂದು ಬಹುಪಕ್ಷೀಯ ಪ್ರಜಾತಂತ್ರದಲ್ಲಿ ಇಂತಹ ಅಮಾನುಷ ಕೃತ್ಯಗಳ ಆರೋಪ ಹೊತ್ತಿರುವವರನ್ನು ಯಾವ ಪಕ್ಷಗಳು ಚುನಾವಣೆಗೆ ನಿಲ್ಲಿಸದ ರೀತಿ ಕಾನೂನು ತರಬೇಕೆಂದು ಸುಪ್ರೀಂ ಕೋರ್ಟು ಸಂಸತ್ತಿಗೆ 2018ರಲ್ಲಿ ಒಂದು ಮಹತ್ವದ ಸಲಹೆಯನ್ನಿತ್ತಿತ್ತು. ಅದರ ಹಿಂದೆ ಈ ಪ್ರಜಾತಂತ್ರದ ಬಗ್ಗೆ ಕುಸಿಯುತ್ತಿದ್ದ ಬಹುಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವಿತ್ತು. ಆದರೆ ಬಿಜೆಪಿ ಅದಕ್ಕೆ ತದ್ವಿರುದ್ಧವಾದದ್ದನ್ನು ಮಾಡುತ್ತಿದೆ. ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಮತ್ತು ಪನ್ಸಾರೆಯನ್ನು ಕೊಂದ ಆರೋಪವನ್ನು ಹೊತ್ತಿರುವ ಸನಾತನ ಸಂಸ್ಥೆಯೂ ಸಹ ಇದೇ ಉದ್ದೇಶ ಮತ್ತು ಕಾರ್ಯಾಚರಣೆಗಳನ್ನು ಹೊಂದಿದೆ. ಅವರ ಪಟ್ಟಿಯಲ್ಲಿ ಇನ್ನೂ ಹಲವಾರು ವಿಚಾರವಾದಿಗಳ ಹೆಸರಿವೆ. ಅವರಿಗೂ ಸಹ ಗೋವಾ ಮತ್ತು ಕೇಂದ್ರದ ಬಿಜೆಪಿ ಸರಕಾರದ ಶ್ರೀರಕ್ಷೆ ಇದೆ. ಅರೆಸ್ಸೆಸ್ ವಿರೋಧಿಗಳನ್ನು ಅಥವಾ ಮುಸ್ಲಿಮರನ್ನು ಕೊಂದರೆ ಶಿಕ್ಷೆಯಾಗುವುದಿಲ್ಲ. ಬದಲಿಗೆ ಸಂಸದರಾಗಬಹುದೆಂಬ ಮೇಲ್ಪಂಕ್ತಿಯು ಇಂತಹ ಭಯೋತ್ಪಾದಕ ಸಂತಾನವನ್ನು ಹೆಚ್ಚಿಸುತ್ತದೆ. ಹೀಗೆ ಮಾಲೆಗಾಂವ್ ಸ್ಫೋಟವನ್ನೂ ಒಳಗೊಂಡಂತೆ ದೇಶದಲ್ಲಿ ನಡೆದ ಬಹುಪಾಲು ಭಯೋತ್ಪಾದಕ ದಾಳಿಗಳ ಹಿಂದೆ ಸಂಘಪರಿವಾರದ ಭಯೋತ್ಪಾದಕ ಘಟಕವಾದ ಸಾಧ್ವಿ, ಪುರೋಹಿತ್‌ಗಳಂತಹವರು ಸಕ್ರಿಯವಾಗಿರುವ ‘ಅಭಿನವ್ ಭಾರತ್’ ಸಂಘಟನೆಯಿರುವುದು ದೃಢಪಟ್ಟಿದೆ.

ಏನಿದು ಅಭಿನವ್ ಭಾರತ್?
ಈ ಸಂಘಟನೆಯನ್ನು ಮೊದಲು ಸ್ಥಾಪಿಸಿದ್ದು ಹಿಂದೂ ಮಹಾ ಸಭಾದ ಸಂಸ್ಥಾಪಕ ಸಾವರ್ಕರ್ ಅವರು. ಆಗ ಅದರ ಉದ್ದೇಶವೇ ‘‘ಹಿಂದೂಗಳನ್ನು ಸೈನ್ಯೀಕರಿಸುವ ಮತ್ತು ಸೈನ್ಯವನ್ನು ಹಿಂದುವೀಕರಿಸುವ ಮೂಲಕ ಈ ದೇಶವನ್ನು ಹಿಂದೂ ರಾಷ್ಟವನ್ನಾಗಿಸುವುದು.’’ ಆದರೆ ಅದು ಸ್ವಾತಂತ್ರ್ಯಾನಂತರದಲ್ಲಿ ಸಕ್ರಿಯವಾಗಲಿಲ್ಲ. ಆದರೆ 2002ರ ಗುಜರಾತ್ ನರಸಂಹಾರದ ನಂತರ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯ ಸೋದರ ಸೊಸೆಯಾದ ಹಿಮಾನಿ ಸಾವರ್ಕರ್ ಮತ್ತು ಈ ಕರ್ನಲ್ ಪುರೋಹಿತ್, ದಯಾನಂದ ಪಾಂಡೆ, ನಿವೃತ್ತ ಸೇನಾಧಿಕಾರಿ ಉಪಾಧ್ಯಾಯ ಇನ್ನಿತರರು ಸೇರಿ ‘ಅಭಿನವ್ ಭಾರತ್’ಅನ್ನು ಪುನರುಜ್ಜೀವಗೊಳಿಸುತ್ತಾರೆ.

ಅದರ ಉದ್ದೇಶಗಳು ಮೂರು:

1. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು. 2. ಈ ದೇಶವನ್ನು ಸಂವಿಧಾನದಿಂದ ಮತ್ತು ತಿವ್ರರ್ಣ ಧ್ವಜದಿಂದ ಮುಕ್ತಗೊಳಿಸಲು ಇಸ್ರೇಲ್ ಅಥವಾ ಥಾಯ್ಲೆಂಡ್‌ನಲ್ಲಿ ಒಂದು ಗಡಿಪಾರು ಸರಕಾರವನ್ನು ರಚಿಸಿ ಭಾರತದ ಮೇಲೆ ಯುದ್ಧ ಸಾರುವುದು. 3. ಈ ದೇಶವನ್ನು ಮುಸ್ಲಿಮರಿಂದ ಮತ್ತು ಕ್ರಿಶ್ಚಿಯನ್ನರಿಂದ ಮುಕ್ತಗೊಳಿಸಲು ಅವರು ವಾಸಿಸುವ ಪ್ರದೇಶಗಳಲ್ಲಿ ಬಾಂಬ್ ದಾಳಿ ಮಾಡಿ ಭಯಭೀತರನ್ನಾಗಿಸುವುದು.

ಇದು ಭಯೋತ್ಪಾದನೆಯಲ್ಲವೆಂದರೆ ಇನ್ಯಾವುದು ಭಯೋತ್ಪಾದನೆಯಾದೀತು? ಇದು ದೇಶದ್ರೋಹವಲ್ಲದಿದ್ದರೆ ಮತ್ಯಾವುದು ದೇಶದ್ರೋಹವಾದೀತು? ಆದರೆ ‘ಅಭಿನವ್ ಭಾರತ್’ ಅಥವಾ ‘ಸನಾತನ ಸಂಸ್ಥೆ’ ಮಾಡುತ್ತಿರುವ ಭಯೋತ್ಪಾದನೆಯನ್ನು ಹಿಂದೂ ಭಯೋತ್ಪಾದನೆಯೆನ್ನುವುದು ತಪ್ಪಾದೀತು. ಹಾಗೆಯೇ ಜೈಶೆ ಮುಹಮ್ಮದ್‌ನಂತಹ ಕೆಲವು ಸಂಘಟನೆಗಳು ಮಾಡುವ ಭಯೋತ್ಪಾದನೆಯನ್ನು ಮುಸ್ಲಿಂ ಭಯೋತ್ಪಾದನೆಯೆನ್ನುವುದು ಕೂಡಾ ತಪ್ಪು. ಇದು ದೇಶದ್ರೋಹಿ ಮನುವಾದಿ ಸಂಘೀ ಭಯೋತ್ಪಾದನೆಯೇ ಹೊರತು ಬೇರೇನಲ್ಲ. ಒಂದು ಜೈಶೆ ಮುಹಮ್ಮದ್ ಆದರೆ ಮತ್ತೊಂದರದ್ದು ಜೋಶ್-ಎ-ಮನುವಾದ್.

ಆದರೆ ಭಾರತದ ಸಂದರ್ಭದಲ್ಲಿ ಈ ಮನುವಾದಿ ಭಯೋತ್ಪಾದನೆಯ ಪರಿಣಾಮ ಜೈಶ್‌ಗಿಂತ ಇನ್ನೂ ಭೀಕರವಾಗಿರುತ್ತದೆ. ಇಲ್ಲಿ ಜೈಶ್ ಅಥವಾ ಲಷ್ಕರ್ ಭಯೋತ್ಪಾದಕನೊಬ್ಬನಿಂದ ಫೋನ್ ಕರೆ ಬಂದಿತ್ತು ಎಂಬ ಕಾರಣವನ್ನು ಬಿಟ್ಟು ಬೇರೇನೂ ಪುರಾವೆ ಇಲ್ಲದಿದ್ದರೂ ಅಫ್ಝಲ್‌ಗುರುವನ್ನು ಮುಸ್ಲಿಮ್ ಎನ್ನುವ ಏಕೈಕ ಕಾರಣಕ್ಕೆ ನೇಣಿಗೇರಿಸಲಾಗುತ್ತದೆ. ತನ್ನ ಕಾರನ್ನು ಭಯೋತ್ಪಾದಕನಿಗೆ ಕೊಟ್ಟಿದ್ದನೆಂಬ ಕಾರಣಕ್ಕೆ ಒಬ್ಬ ಮೆಮನ್‌ಗೆ ಗಲ್ಲು ಶಿಕ್ಷೆಯಾಗುತ್ತದೆ.

ಆದರೆ ನೂರಕ್ಕೂ ಹೆಚ್ಚು ಮುಸ್ಲಿಮರನ್ನು ಕೊಂದು ಹಾಕಲು ನೇತೃತ್ವ ವಹಿಸಿದ್ದು ನ್ಯಾಯಾಲಯ ದಲ್ಲಿ ಸಾಬೀತಾಗಿ ಶಿಕ್ಷೆಯಾದರೂ ಮಾಯ ಕೋಡ್ನಾನಿ ಕೇವಲ ಹಿಂದೂ ಎನ್ನುವ ಕಾರಣಕ್ಕಾಗಿ ಶಿಕ್ಷೆಯಿಂದ ಮುಕ್ತಳಾಗುತ್ತಾಳೆ. ಬಾಂಬ್ ಸ್ಫೋಟದ ಭಯೋತ್ಪಾದನೆಯಲ್ಲಿ ನೇರವಾಗಿ ಭಾಗವಹಿಸಿದ್ದಕ್ಕೆ ಸಾವಿರ ಸಾಕ್ಷಿಯಿದ್ದರೂ ಒಬ್ಬ ಪ್ರಜ್ಞಾ ಠಾಕೂರ್ ಸಾಧ್ವಿಯ ಉಡುಪು ತೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ... ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಭೋಪಾಲ್ ಟಿಕೆಟನ್ನು ಕೊಡುವ ಮೂಲಕ ಸಂಘೀ ಭಯೋತ್ಪಾದನೆಗೆ ಮೋದಿ ಸರಕಾರ ಪ್ರತ್ಯಕ್ಷ ಪ್ರಭುತ್ವ ಸಹಕಾರ ಕೊಡುತ್ತಿದೆ ಅಥವಾ ಸಂಘೀ ಭಯೋತ್ಪಾದನೆಯನ್ನೇ ಪ್ರಭುತ್ವನ್ನಾಗಿಸುತ್ತಿದೆ.

ಆದ್ದರಿಂದಲೇ ಮೋದಿಭಾರತವೆಂದರೆ ಸಂವಿಧಾನವನ್ನು ನಾಶ ಮಾಡಿ ದಲಿತ-ಮುಸ್ಲಿಮರನ್ನು ಕೊಂದು ಬ್ರಾಹ್ಮಣ್ಯವನ್ನು ಮೆರೆಸುವ ‘ಅಭಿನವ ಭಾರತವೇ’ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ. ಈ ಮೋದಿ ಭಯೋತ್ಪಾದನೆ ಮತ್ತು ಸಂಘೀ ಭಯೋತ್ಪಾದನೆ ಎರಡನ್ನೂ ಸೋಲಿಸದೆ ಈ ದೇಶದ ಗಾಳಿಯಲ್ಲಿ ಸುಟ್ಟ ದೇಹಗಳ ಕರಕಲು ವಾಸನೆ ಬರುವುದು, ಕುಡಿಯುವ ನೀರಿನಲ್ಲಿ ಹಸುಕಂದಮ್ಮಗಳ ರಕ್ತ ಹರಿಯುವುದೂ ತಪ್ಪುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)