varthabharthi


ಚಿತ್ರ ವಿಮರ್ಶೆ

ಕನ್ನಡ ಸಿನೆಮಾ

ಗರ: ಇದು ಸಿಹಿ ಕಹಿಗಳ ಸಂಕರ

ವಾರ್ತಾ ಭಾರತಿ : 5 May, 2019
ಶಶಿಕರ ಪಾತೂರು

 ಕನ್ನಡದಲ್ಲಿ ವಿಭಿನ್ನ ಕತೆಯ ಚಿತ್ರಗಳು ಬರುತ್ತಿಲ್ಲ ಎನ್ನುವವರಿಗೆ ಉತ್ತರವಾಗಿ ಬಂದಿರುವ ಚಿತ್ರವೇ ಗರ.

 ಗಂಗಸ್ವಾಮಿ ಎನ್ನುವ ಗರ ಹಾಕಿ ಭವಿಷ್ಯ ನುಡಿಯುವ ವ್ಯಕ್ತಿಯೊಬ್ಬನ ಬದುಕಿನ ಕತೆಯನ್ನು ಫ್ಲ್ಯಾಶ್ ಬ್ಯಾಕ್ ಜೊತೆಯಲ್ಲೇ ತೆರೆದಿಡುತ್ತಾ ಹೋಗುತ್ತದೆ ಚಿತ್ರ. ಗರಗಳನ್ನು ಮನಸ್ಸಿಗೆ ಬಂದಂತೆ ತಿರುಗಿಸಿ ತನಗೆ ಬೇಕಾದ ರೀತಿಯಲ್ಲಿ ದಾಳ ಹಾಕಿ ಶಕುನಿಯಂತೆ ಪಂದ್ಯ ಗೆಲ್ಲುವ ವ್ಯಕ್ತಿ ಗಂಗಸ್ವಾಮಿ. ಡಿಜಿಟಲ್ ಗೌಡ ಎನ್ನುವ ಆಧುನಿಕ ರಾಜನ ಜೊತೆಗೆ ಸೇರಿ ಎಲ್ಲವನ್ನು ತನ್ನ ದಾಳದ ಮೂಲಕ ಸೆಳೆಯುವ ಪ್ರಯತ್ನ ನಡೆಸುತ್ತಾನೆ. ಆದರೆ ಸುಬ್ಬಯ್ಯ ಎನ್ನುವ ವ್ಯಕ್ತಿಯ ವಿಚಾರದಲ್ಲಿ ಆತನ ಗರದಾಟ ಗರ ಬಡಿಸುವ ರೀತಿಯಲ್ಲಿ ಬದಲಾಗುತ್ತದೆ. ಹಾಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡ ಗಂಗಸ್ವಾಮಿಗೆ ಡಿಜಿಟಲ್ ಗೌಡನ ಸಾಲಗಳನ್ನು ತೀರಿಸಲು ಒಂದು ದಾರಿ ಗೋಚರವಾಗುತ್ತದೆ. ಅದುವೇ ಭಗೀರಥನಿಗೆ ಮಾಡುವ ಮೋಸ. ಹಾಗೆ ಭಗೀರಥನನ್ನು ಬಾವಿಗೆ ತಳ್ಳಿ ಆತನಿಂದ ದೋಚಿದ ಹಣದ ಮೂಲಕ ಸೋಲಿನಿಂದ ಪಾರಾಗುತ್ತಾನೆ ಗಂಗಸ್ವಾಮಿ. ಆದರೆ ಅಂದು ಸತ್ತನೆಂದುಕೊಂಡ ಭಗೀರಥ ಮತ್ತೆ ಎದುರಾದಾಗ ನಡೆಯುವುದೇನು? ಎನ್ನುವುದೇ ಗರ ಚಿತ್ರದ ರೋಚಕ ಕತೆ. ಚಿತ್ರದಲ್ಲಿ ಗರದ ಮೂಲಕ ಬದಲಾಗುವ ಹಣದ ಬಗ್ಗೆ ಮಾತ್ರವಲ್ಲ ಗುಣದ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ಗಂಗಸ್ವಾಮಿ ಮತ್ತು ಭಗೀರಥನ ಮಧ್ಯೆ ಬರುವ ನಾಯಕಿಯ ಪಾತ್ರ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕೇಂದ್ರ ಪಾತ್ರವಾದ ಗಂಗಸ್ವಾಮಿಯಾಗಿ ಬಣ್ಣ ಹಚ್ಚುವ ಮೂಲಕ ರೆಹಮಾನ್ ಗಮನ ಸೆಳೆದಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ರೆಹಮಾನ್ ಅವರನ್ನು ಜನಪ್ರಿಯ ವಾರ್ತಾವಾಚಕನ ಶೈಲಿಯಿಂದ ಹೊರಗೆ ತರುವಲ್ಲಿ ನಿರ್ದೇಶಕ ಮುರಳೀಕೃಷ್ಣ ಯಶಸ್ವಿಯಾಗಿದ್ದಾರೆ. ಗಂಗಸ್ವಾಮಿಯ ಜೊತೆಯಲ್ಲೇ ನಿಶಾಂತ್ ಎನ್ನುವ ಮತ್ತೊಂದು ಶೇಡ್ ನಲ್ಲಿಯೂ ರೆಹಮಾನ್ ಕಾಣಿಸಿಕೊಂಡಿದ್ದಾರೆ. ಎರಡನ್ನೂ ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ಗೆದ್ದಿದ್ದಾರೆ. ಅವರ ಜೋಡಿಯಾಗಿ ಆಕಸ್ಮಿಕ ಮತ್ತು ತುಂಗ ಎನ್ನುವ ಪಾತ್ರದ ಮೂಲಕ ಆವಂತಿಕಾ ಮೋಹನ್ ಕೂಡ ಸಾಥ್ ನೀಡಿದ್ದಾರೆ. ಉಳಿದಂತೆ ಭಗೀರಥನಾಗಿ ಆರ್ಯನ್ ಶರ್ಮ, ಡಿಜಿಟಲ್ ಗೌಡನ ಪಾತ್ರ ಮತ್ತು ಅತಿಥಿ ನಟಿಯಾಗಿ ಕಾಣಿಸಿರುವ ನೇಹಾ ಪಾಟೀಲ್ ಪಾತ್ರಗಳು ಉಲ್ಲೇಖನೀಯ. ಆದರೆ ಆರ್ಯನ್ ಶರ್ಮ ಮತ್ತು ಡಿಜಿಟಲ್ ಗೌಡ ಪಾತ್ರಗಳ ಸಂಭಾಷಣೆಗಳು ಹಲವೆಡೆ ಲಿಪ್ ಸಿಂಕ್ ಆಗಿಲ್ಲ. ಮಾತ್ರವಲ್ಲ ಹಲವು ಪಾತ್ರಗಳ ಸಂಭಾಷಣೆಗಳು ನೀರಸವಾಗಿವೆ. ಬಾಲಿವುಡ್ ನ ಖ್ಯಾತ ನಟ ಜಾನಿ ಲಿವರ್ ಪ್ರಥಮ ಬಾರಿ ಕನ್ನಡದಲ್ಲಿ ನಟಿಸಿರುವ ಚಿತ್ರ ಎನ್ನುವ ಕಾರಣಕ್ಕೆ ಸಿನೆಮಾ ಸುದ್ದಿ ಮಾಡಿತ್ತು. ಆದರೆ ಜಾನಿಲಿವರ್ ಅವರನ್ನು ಕೂಡ ಸರಿಯಾಗಿ ಬಳಸಿಕೊಂಡಿಲ್ಲ ಎನ್ನಬಹುದು. ಅವರ ಸಹೋದರನಾಗಿ ಸಾಧುಕೋಕಿಲ ಸಹ ನಗಿಸುವಲ್ಲಿ ವಿಫಲರಾಗಿದ್ದಾರೆ. ಪ್ರಥಮಾರ್ಧದಲ್ಲಿ ನಗಿಸುವ ಈ ವಿಫಲ ಪ್ರಯತ್ನಗಳು ಚಿತ್ರದ ಬಗ್ಗೆ ನೆಗೆಟಿವ್ ಧೋರಣೆ ತಳೆಯುವಂತೆ ಮಾಡುತ್ತದೆ. ಆದರೆ ಮಧ್ಯಂತರದ ಬಳಿಕ ಚಿತ್ರದ ಕತೆ ವೇಗ ಮತ್ತು ವಿಭಿನ್ನತೆಯೊಂದಿಗೆ ಸಾಗುತ್ತದೆ.

ಹಿರಿಯ ಕಲಾವಿದರಾದ ರೂಪಾದೇವಿ, ರಾಮಕೃಷ್ಣ , ಸುಚಿತ್ರಾ ಮೊದಲಾದವರ ತಾರಾ ಬಳಗವಿದೆ. ಲವಲವಿಕೆಯ ನಟನೆ ಮಾತ್ರವಲ್ಲ ನೃತ್ಯದಲ್ಲಿಯೂ ಅವರು ಗಮನ ಸೆಳೆದಿದ್ದಾರೆ. ಕುಡುಕ ಚಾಲಕನಾಗಿ ತಬಲಾ ನಾಣಿ, ವ್ಯಾಪಾರಿ ಬಶೀರನಾಗಿ ಮನದೀಪ್ ರಾಯ್, ಸೇಠುವಾಗಿ ಎಂ. ಎಸ್. ಉಮೇಶ್, ಚಹಾ ಮಾರಾಟಗಾರ್ತಿಯಾಗಿ ಸೋನು ಪಾಟೀಲ್ ನಟಿಸಿದ್ದಾರೆ. ಪ್ರಶಾಂತ್ ಸಿದ್ದಿಯ ಪಾತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಸಾಗರ್ ಗುರುರಾಜ್ ನೀಡಿರುವ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಗೀತ ಸಂಯೋಜನೆ ಚೆನ್ನಾಗಿದೆ. ಅದರೊಂದಿಗೆ ವೇಣು ಅವರ ಛಾಯಾಗ್ರಹಣ ಸೇರಿಕೊಂಡು ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಎಲ್ಲೋ ಒಂದು ಕಡೆ ರವಿಚಂದ್ರನ್ ಶೈಲಿಯ ಚಿತ್ರಕತೆ ಇರುವಂತೆ ಕಂಡರೂ, ಸ್ವತಃ ನಿರ್ದೇಶಕರೇ ಹೇಳಿರುವಂತೆ ಆರ್. ಕೆ. ನಾರಾಯಣ್ ಅವರ ‘ಎನ್ ಆಸ್ಟ್ರಾಲಾಜರ್ಸ್ ಡೇ’ ಕತೆಯ ಪ್ರಭಾವ ಚಿತ್ರಕ್ಕೆ ಪಾಸಿಟಿವ್ ಆಗಿದೆ. ಒಟ್ಟಿನಲ್ಲಿ ಕತೆಯಲ್ಲಿನ ವೈವಿಧ್ಯತೆ ಮೆಚ್ಚುವವರು ಮತ್ತು ಯುವ ಪ್ರತಿಭೆಗಳ ಹೊಸ ಪ್ರಯೋಗಕ್ಕೆ ಪ್ರೋತ್ಸಾಹ ನೀಡುವ ಮನೋಭಾವದವರು ಖಂಡಿತವಾಗಿ ನೋಡಿ ಮೆಚ್ಚಬಹುದಾದ ಚಿತ್ರ ಇದು.

ತಾರಾಗಣ: ರೆಹಮಾನ್, ಆವಂತಿಕಾ ಮೋಹನ್, ರಾಮಕೃಷ್ಣ, ಜಾನಿಲಿವರ್, ಸಾಧು ಕೋಕಿಲ

ನಿರ್ದೇಶನ: ಮುರಳೀಕೃಷ್ಣ

ನಿರ್ಮಾಣ: ನಾಗ ಪ್ರಸಾದ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)