varthabharthi


ಭೀಮ ಚಿಂತನೆ

ಆ ಸ್ವಾತಂತ್ರ್ಯಕ್ಕಾಗಿ ನಾನು ಯಾವ ಕ್ಷಣಕ್ಕೂ ಹೋರಾಡಲು ಸಿದ್ಧ

ವಾರ್ತಾ ಭಾರತಿ : 16 May, 2019

ಶುಕ್ರವಾರ, ದಿನಾಂಕ 22 ಡಿಸೆಂಬರ್ 1944ರ ಸಾಯಂಕಾಲ ಮದ್ರಾಸಿನ ಮುನ್ಸಿಪಲ್ ಕಾರ್ಪೊರೇಶನ್ ಪರವಾಗಿ ಬೆಳ್ಳಿಯ ಕರಂಡಿಗೆಯಲ್ಲಿ ಮೇಯರ್ ಡಾ. ಸೈಯದ್ ನಿಯಾಮತುಲ್ಲಾರ ಹಸ್ತದಿಂದ ಡಾ.ಬಾಬಾಸಾಹೇಬ ಅಂಬೇಡ್ಕರರಿಗೆ ಸನ್ಮಾನ ಪತ್ರವನ್ನು ಭವ್ಯ ಸಮಾರಂಭದಲ್ಲಿ ರಿಪನ್ ಬಿಲ್ಡಿಂಗ್‌ನಲ್ಲಿ ಅರ್ಪಿಸಲಾಯಿತು. ಈ ಸಮಾರಂಭಕ್ಕೆ ಹಲವು ಪ್ರತಿಷ್ಠಿತ ನಾಗರಿಕರು, ಸರಕಾರಿ ಅಧಿಕಾರಿಗಳು ಮತ್ತು ಕಾರ್ಪೊರೇಟರ್‌ಗಳು ಹಾಜರಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್‌ಗಳು ಸನ್ಮಾನ ಪತ್ರ ನೀಡಲು ವಿರೋಧಿಸಿದ್ದರು. ಹೀಗಾಗಿ ಅವರು ಸಮಾರಂಭಕ್ಕೆ ಹಾಜರಾಗಲಿಲ್ಲ.

ಸನ್ಮಾನ ಪತ್ರಕ್ಕೆ ಉತ್ತರಿಸುವಾಗ ಡಾ.ಬಾಬಾಸಾಹೇಬ ಅಂಬೇಡ್ಕರರು ಹೀಗೆ ಹೇಳಿದರು:
ನಿಮ್ಮ ನಗರದ ಪರವಾಗಿ ನನ್ನನ್ನು ಸನ್ಮಾನಿಸುತ್ತಿರುವುದು ನಿಮ್ಮ ದೊಡ್ಡಸ್ತಿಕೆಯನ್ನು ತೋರಿಸುತ್ತದೆ. ನಾನು ಮದ್ರಾಸ್ ನಗರದ ನಿವಾಸಿಯಲ್ಲ ಮತ್ತು ನಾಗರಿಕ ಜೀವನದ ಬಗೆಗೂ ನಾನು ಅಂಥ ವಿಶೇಷವಾದುದನ್ನು ಏನೂ ಮಾಡಲಿಲ್ಲ. ಹೀಗಾಗಿ ನಿಮ್ಮ ಅತಿಥಿ ಸತ್ಕಾರದ ಮೇಲೆ ನನ್ನ ಯಾವ ಹಕ್ಕೂ ಇಲ್ಲ. ಹೀಗಿದ್ದರೂ ನೀವು ನನ್ನನ್ನು ಸ್ವಾಗತ ಮಾಡುತ್ತಿರುವುದಕ್ಕೆ ನಿಮಗೆ ಕೃತಜ್ಞತೆಗಳು. ಬೇರೆಯವರನ್ನು ಕೆಣಕಲಾಗಲಿ, ಟೀಕಿಸಲಾಗಲಿ ನಾನು ಈ ಮುಂದಿನ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ. ನಡೆದ ಒಂದು ಸತ್ಯ ಘಟನೆಯನ್ನು ಹೇಳುತ್ತಲಿದ್ದೇನೆ. ನನಗೆ ನೀಡುವ ಸನ್ಮಾನ ಪತ್ರವು ಸರ್ವಾನುಮತದಿಂದ ಪಾಸ್‌ಆಗಲಿಲ್ಲವೆನ್ನುವುದನ್ನು ನಾನು ಪತ್ರಿಕೆಯಲ್ಲಿ ಓದಿದೆ. ಕೆಲವರು ಅದನ್ನು ವಿರೋಧಿಸಿದರು. (ನಗು)ಅದನ್ನು ಉಲ್ಲೇಖಿಸಲು ಕಾರಣವೇನೆಂದರೆ, ಸರ್ವಾನುಮತದಿಂದ ಸನ್ಮಾನ ಪತ್ರ ಸಿಗುವುದಕ್ಕಿಂತ ಈ ಬಗೆಯಲ್ಲಿ ಸಿಕ್ಕಿದ್ದು ನನಗೆ ಹಿಡಿಸುತ್ತದೆ. ಸರ್ವಾನುಮತದಿಂದ ನಾವು ಹಲವು ಸಂಗತಿಗಳನ್ನು ಔಪಚಾರಿಕವಾಗಿ ಮಾಡುತ್ತಿರುತ್ತೇವೆ. ಅದಕ್ಕೆ ಆಧುನಿಕ ಸಮಾಜದಲ್ಲಿಯ ಕೆಲ ಪರಂಪರಾಗತ ಹುಸಿರೂಢಿಯ ಆಚೆ ಏನೂ ಅರ್ಥವಿರುವುದಿಲ್ಲ.(ಚಪ್ಪಾಳೆ) ಆದರೂ ನಡೆದ ಈ ಘಟನೆಯು ಏನು ವ್ಯಕ್ತಮಾಡುತ್ತದೆ ಎಂದರೆ, ಕಾರ್ಪೊರೇಶನ್ನಿನ ಒಂದು ಭಾಗದವರಾದರೂ ನನಗೆ ಸನ್ಮಾನ ಪತ್ರ ನೀಡುವ ಪ್ರಮಾಣಿಕ ಹಠ ತೋರಿಸಿದ್ದು.

ನನ್ನ ವಿಶ್ವವಿದ್ಯಾನಿಲಯದ ಜೀವನ ಮತ್ತು ಶಿಕ್ಷಕ, ವಕೀಲ ಮತ್ತು ಮುಂಬೈ ವರಿಷ್ಠ ಕಾಯ್ದೆಮಂಡಳದ ಸದಸ್ಯನಾಗಿ ನಾನು ಮಾಡಿದ ಸಾಧನೆಯನ್ನು ಯೋಗ್ಯವಾಗಿ, ಆದರೆ ಸ್ವಲ್ಪ ಅತಿಶಯೋಕ್ತಿಯ ಮಾತಿನಲ್ಲಿ ಉಲ್ಲೇಖಿಸಿದ್ದೀರಿ. ನೀವು ನನ್ನ ಬಗ್ಗೆ ಹೇಳಿದ ಮಾತುಗಳೆಲ್ಲ ಸತ್ಯವೆಂದು ಭಾವಿಸುವಷ್ಟು ಅಹಂಕಾರ ನನ್ನಲ್ಲಿ ಬರಲಿಲ್ಲ. ಯಾವ ಉದ್ದೇಶಕ್ಕಾಗಿ ನಾನು ಈವರೆಗೆ ದುಡಿಯುತ್ತಿದ್ದೆನೋ ಆ ಸಹಾನುಭೂತಿಗಾಗಿಯೇ ನೀವು ನನ್ನನ್ನು ಗೌರವಿಸಿದ್ದೀರಿ. ಅದು ನನ್ನ ಗೌರವಕ್ಕಿಂತ, ನನ್ನ ಉದ್ದೇಶಕ್ಕೆ ನೀವು ನೀಡಿದ ಬೆಂಬಲವೆಂದೇ ನಾನು ಭಾವಿಸುತ್ತೇನೆ.

 ಮದ್ರಾಸ್ ಕಾರ್ಪೊರೇಶನ್ ಬಡವಸತಿಗಳ ಸುಧಾರಣೆ ಮತ್ತು ಕಾರ್ಮಿಕರ ಮಕ್ಕಳಿಗೆ ಅನ್ನ ಪೂರೈಸಿದ ಉಲೇಖವನ್ನು ನೀವು ಮಾಡಿದ್ದೀರಿ. ಈ ವಿಷಯದಲ್ಲಿ ಹಿಂದಿ ಸರಕಾರ ಮಾಡಿದ್ದೇನು ಎಂದು ಹೇಳುವುದು ಇಲ್ಲಿ ಅಪ್ರಸ್ತುತವಾಗಬಹುದು. ಆದರೂ ಹಿಂದಿ ಸರಕಾರವು ತೀರ ಮಂದಗತಿಯಿಂದ ಸಾಗುವ ಒಂದು ಯಂತ್ರವಾಗಿದೆ ಎಂದು ಸದಾಕಾಲ ಟೀಕಿಸುವ ಮಾತಿಗೆ ನಾನಿಲ್ಲಿ ಉತ್ತರಿಸಬೇಕು. ಪ್ರತಿಯೊಂದು ಸರಕಾರವು ಕೈಗೆತ್ತಿಕೊಳ್ಳಲೇಬೇಕಾದ ಸುಧಾರಣೆಯನ್ನೂ ಸಹ ಕೈಬಿಟ್ಟು ಆರಾಮಾಗಿ ಕೂತುಕೊಳ್ಳುವ ನಿರುಪಯೋಗಿ ಸಂಸ್ಥೆಯೆಂದು, ಮಧ್ಯಸ್ಥ ಸರಕಾರವನ್ನು ವರ್ಣಿಸುವಂತಿಲ್ಲ.

ಸರಕಾರವು ಕಳೆದ ಕೆಲವು ವರ್ಷಗಳಿಂದ ಮಾಡಿದ ಕಾರ್ಯವನ್ನು ನೋಡಿ ವೃತ್ತಿಪರ ಶಿಕ್ಷಣ ನೀಡುವ ಯೋಜನೆಯತ್ತ ನಾನು ನಿಮ್ಮ ಗಮನಸೆಳೆಯುತ್ತೇನೆ.ಸುಮಾರು 68,000 ಜನರಿಗೆ ಅದರ ಲಾಭವಾಯಿತು. ಹಿಂದೂಸ್ಥಾನದಲ್ಲಿ ಇಂಥ ಶಿಕ್ಷಣ ನೀಡುವ 300-400 ಕೇಂದ್ರಗಳಿವೆ. ಯಾರಿಗೆ ವಿಶ್ವವಿದ್ಯಾನಿಲಯದ ಶಿಕ್ಷಣ ಪಡೆಯುವ ಸಾಮರ್ಥ್ಯವಿಲ್ಲವೋ ಅಂತಹ ಕಾರ್ಮಿಕರ ಮಕ್ಕಳು ತಮ್ಮ ಕಾರ್ಯಕುಶಲತೆಯನ್ನು ಬೆಳೆಸಿಕೊಂಡು ಹೆಚ್ಚು ಹಣಗಳಿಸಬಹುದಾದಂಥ ಈ ಶಿಕ್ಷಣವನ್ನು ಯುದ್ಧದ ಬಳಿಕ ಸ್ಥಗಿತಗೊಳಿಸದೆ, ಬದಲಿಗೆ ಅದು ದೇಶದ ಶಿಕ್ಷಣ ಪದ್ಧತಿಯ ಒಂದು ಮಹತ್ವದ ಅಂಗವಾಗುತ್ತದೆ ಎಂಬ ಆಶೆ ನನಗಿದೆ.

 ಅದೂ ಅಲ್ಲದೆ ಕೆಲಸದ ದೃಷ್ಟಿಯಿಂದ ಸರಕಾರ ಮಾಡಿದ ಕೆಲವು ಕಾನೂನುಗಳಿವೆ. ಉದಾಹರಣೆಗಾಗಿ ಉದ್ಯೋಗ ದಂಧೆಯ ತಂಟೆಯಲ್ಲಿ ಕಡ್ಡಾಯವಾಗಿ ಪಂಚರನ್ನು ನೇಮಿಸುವ ಕಾಯ್ದೆ ಈವರೆಗೆ ಕಾರ್ಮಿಕರ ನೌಕರಿಯ ವಿಷಯದಲ್ಲಿ ಯಾವ ಕರಾರನ್ನು ಹಾಕುವ ಅಧಿಕಾರ ಹಂಗಾಮಿ ಸರಕಾರಕ್ಕಿರಲಿಲ್ಲ. ನೌಕರಿಯ ಕರಾರು ಮತ್ತು ವೇತನದ ನಿರ್ಧಾರವು ಕೇವಲ ಕಾರ್ಮಿಕ ಮತ್ತು ಮಾಲಕರ ಖಾಸಗಿ ವಿಷಯವಾಗಿತ್ತು. ಇಂದು ಎಂಥ ಕಾಯ್ದೆ ಬಂದಿದೆ ಎಂದರೆ, ಆ ಕರಾರು ಸಮಾಧಾನಕಾರಕವಾಗಿಲ್ಲ ಎಂದು ಸರಕಾರಕ್ಕೆ ಅನಿಸಿದರೆ, ಸರಕಾರವು ಯೋಗ್ಯವಾದ ಕರಾರನ್ನು ರೂಪಿಸುವ ಅಧಿಕಾರವನ್ನು ಪಡೆದಿದೆ. ಈ ಕಾನೂನನ್ನು ಯುದ್ಧಜನ್ಯ ಪರಿಸ್ಥಿತಿಯಿಂದಾಗಿ ಮಾಡಿದರೂ, ಯುದ್ಧದ ಜೊತೆಗೆ ಅದು ಅಂತ್ಯಗೊಳ್ಳುವಂತಿಲ್ಲ. ನಮ್ಮ ಶಾಶ್ವತ ಕಾಯ್ದೆಯೊಳಗೆ ಅದನ್ನು ಸೇರಿಸಲಾಗುವುದು ಎಂಬ ಆಶೆ ನನಗಿದೆ. ನಾವು ಮಾಡಿರುವುದು ತೀರಾ ಕಡಿಮೆ ಎಂಬರಿವು ನನಗಿದೆ. ಕಾಯ್ದೆಯನ್ನು ರೂಪಿಸುವ ವಿಷಯದಲ್ಲಿ ಮಧ್ಯಸ್ಥ ಸರಕಾರದ ಸ್ಥಿತಿಯೂ ಅಷ್ಟೊಂದು ಸಮಾಧಾನಕಾರಕವಾಗಿಲ್ಲ ಎನ್ನುವುದನ್ನು ಜನರು ಗಮನಿಸಬೇಕು.ಮೂಲತಃ ಕಾರ್ಮಿಕರ ವಿಷಯದಲ್ಲಿ ಕಾಯ್ದೆ ಮಾಡುವ ಅಧಿಕಾರವು ಪ್ರಾಂತೀಯ ಸರಕಾರದ ಕಡೆಗಿದೆ. ಅರ್ಥಾತ್ ಪ್ರಾಂತೀಯ ಸರಕಾರದ ಜೊತೆಗೆ ಈ ಅಧಿಕಾರವನ್ನು ಮಧ್ಯಸ್ಥ ಸರಕಾರಕ್ಕೂ ನೀಡಲಾಗಿದೆ. ಆದರೆ 1935ರ ಘಟನೆಯ ಕಾನೂನಿನಲ್ಲಿ ಎಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರೆ, ಕಾನೂನು ಯಾರೇ ಮಾಡಲಿ ಅದನ್ನು ಜಾರಿಗೊಳಿಸುವ, ಆಡಳಿತ ನಡೆಸುವ ಅಧಿಕಾರ ಮಾತ್ರ ಪ್ರಾಂತೀಯ ಸರಕಾರದ ಕಡೆಗೆ ವಹಿಸಿಕೊಡಲಾಗಿದೆ. ಹೀಗಾಗಿ ಏನೇ ಕಾನೂನು ಮಾಡಬೇಕೆಂದು ಹಂಗಾಮಿ ಸರಕಾರ ಅಂದುಕೊಂಡರೂ, ಮೊದಲು ಅದು ಪ್ರಾಂತೀಯ ಸರಕಾರವನ್ನು ಕೇಳಿಯೇ ಕಾನೂನು ಮಾಡಬೇಕಾಗುತ್ತದೆ. ಕೊನೆಗೆ ಆಡಳಿತವೆಲ್ಲ ಪ್ರಾಂತೀಯ ಸರಕಾರದ ಬಳಿಗೇ ಇರುತ್ತದೆ. ಆಡಳಿತ ನಡೆಸುವವರೇ ಯಾವ ಕಾನೂನಿನ ಕಡೆಗೆ ನೋಡಲು ಸಿದ್ಧರಿಲ್ಲವೋ, ಅಂತಹ ಕಾನೂನನ್ನು ಹಂಗಾಮಿ ಸರಕಾರವು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಇದು ನಮ್ಮ ಅಡಚಣೆಯಾಗಿದೆ. ಎಲ್ಲರ ಗಮನ ನಮ್ಮ ಕಡೆ ಅಷ್ಟೊಂದು ಇರದಿದ್ದರೂ, ಸರಕಾರದ ಅಂತಃಕರಣ ಹಾಗೇನೂ ಪಾಷಣದ್ದಲ್ಲ. ಕಾರ್ಮಿಕರಿಗೆ ಸಂಬಂಧಿಸಿದ ಕಾನೂನಿಗೆ ಬೇರೆಯೇ ರೂಪ ನೀಡುವ ವಿಚಾರ ನಡೆದಿದೆ.

ಸಾಕಷ್ಟು ಜನರು ಹಂಗಾಮಿ ಸರಕಾರವನ್ನು ಟೀಕಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಏನಾದರೂ ಅರ್ಥವಿದೆಯೇ? ಹಂಗಾಮಿ ಸರಕಾರವು ಅಷ್ಟೊಂದು ಕಾರ್ಯ ಮಾಡಿರಲಿಕ್ಕಿಲ್ಲ. ಅದಕ್ಕೇನೂ ಅಂಥ ಮಹತ್ವವಿಲ್ಲ ಎಂದು ನನ್ನ ಅಭಿಪ್ರಾಯ. ಕೊನೆಗೆ ಇಂದಿನ ಹಂಗಾಮಿ ಸರಕಾರವು ಏನು ಮಾಡುತ್ತದೆ, ಏನು ಮಾಡಲಿಕ್ಕಿಲ್ಲ ಎನ್ನವುದೇ ಬಹುಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆ ಎಂಥದ್ದು ಎಂದರೆ, ಯಾವುದಕ್ಕೆ ನಾವು ರಾಷ್ಟ್ರೀಯ ಸರಕಾರ ಎನ್ನುತ್ತೇವೆಯೋ ಅದು ಅದಕ್ಕಿಂತ ಹೆಚ್ಚಿಗೇನಾದರೂ ಮಾಡಲಿದೆಯೇ? ನನ್ನ ನಮ್ರ ಅಭಿಪ್ರಾಯವೇನೆಂದರೆ, ಇಂದು ಅನ್ನಿಸುವುದಕ್ಕಿಂತಲೂ ಅದು ಹೆಚ್ಚು ಮಹತ್ವದ ಪ್ರಶ್ನೆಯಾಗಿದೆ. ವಾದಕ್ಕಾಗಿ ನಾನು, ಇಂದಿನ ಹಂಗಾಮಿ ಸರಕಾರವು ಕೇವಲ ತಾತ್ಕಾಲಿಕ ಸರಕಾರ ಎಂದು ಒಪ್ಪಿಕೊಳ್ಳಲು ಸಿದ್ಧ. ನಾವೆಲ್ಲಾ ರಾಷ್ಟ್ರೀಯ ಸರಕಾರವನ್ನು ಬಯಸುತ್ತಿದ್ದೇವೆ. ನನ್ನನ್ನು ಹೆಚ್ಚು ಕಾಡುತ್ತಿರುವ ಚಿಂತೆಯೆಂದರೆ ಈ ರಾಷ್ಟ್ರೀಯ ಸರಕಾರವು ಇಂದಿನ ಸರಕಾರಕ್ಕಿಂತ ಹೆಚ್ಚಿಗೇನಾದರೂ ಮಾಡುತ್ತದೆಯೇ? ಈ ಬಗೆಗೆ ನನಗೆ ಶಂಕೆಯಿದೆ.

ನಾವೆಲ್ಲ ಅಂದುಕೊಳ್ಳುವುದೇನೆಂದರೆ, ಒಮ್ಮೆ ನಮ್ಮ ಕೈಗೆ ಸತ್ತೆ ಬಂತೆಂದರೆ, ವಯಸ್ಕ ಸ್ತ್ರೀ-ಪುರುಷರಿಗೆ ಮತದಾನದ ಹಕ್ಕು ಸಿಕ್ಕಿತೆಂದರೆ, ಸಕಲ ದುಃಖ ಕೊನೆಗೊಳ್ಳುತ್ತದೆ ಮತ್ತು ಎಲ್ಲವೂ ಅಚ್ಚುಕಟ್ಟಾಗಿ ನಡೆದು, ಪ್ರತಿಯೊಬ್ಬ ವ್ಯಕ್ತಿಯೂ ಮನುಷ್ಯನೆಂದು ಎದೆಯುಬ್ಬಿಸಿ ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡುತ್ತಾನೆಯೇ?! ನನಗೆ ಈ ಬಗೆಗೆ ದೊಡ್ಡ ಶಂಕೆಯಿದೆ. ನಾನು ಯೂರೋಪಿಯನ್ ಶಾಸಕಾಂಗ ಪದ್ಧತಿ ಮತ್ತು ಪಾರ್ಲಿಮೆಂಟರಿ ರಾಜ್ಯವ್ಯವಸ್ಥೆಯ ಬಗೆಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಸಾರ್ವತ್ರಿಕ ಮತದಾನವು ಜಾರಿಗೆ ಬಂದು ಪಾರ್ಲಿಮೆಂಟರಿ ಸರಕಾರವು ಸ್ಥಾಪನೆಯಾದ ಕೂಡಲೇ ಸರ್ವಮನುಷ್ಯ ದುಃಖವೆಲ್ಲ ಕೊನೆಗೊಳ್ಳುತ್ತದೆಂದು ಹೇಳಿದಾಗಲೆಲ್ಲ, ನನಗೆ ಕಿಂಚಿತ್ತೂ ನಂಬಿಕೆ ಹುಟ್ಟುವುದಿಲ್ಲ. ಇಂತಹ ತಿಳುವಳಿಕೆಗೆ ಚರಿತ್ರೆಯ ಯಾವ ಆಧಾರವೂ ಇಲ್ಲ. ಸತ್ಯವೇನೆಂದರೆ, ಸಾರ್ವಜನಿಕ ಮತದಾನ ಇರಲಿ ಅಥವಾ ಇಲ್ಲದಿರಲಿ, ಜನರ ಇಚ್ಛೆಯ ಸರಕಾರವಿರಲಿ ಅಥವಾ ಬೇರೆಯಾವುದೇ ಬಗೆಯ ಸರಕಾರವಿರಲಿ, ಪ್ರತಿಯೊಂದು ದೇಶ-ಸಮಾಜದಲ್ಲಿ ಎರಡು ವರ್ಗಗಳಿರುತ್ತವೆ. ಒಂದು ಆಡಳಿತ ವರ್ಗ ಮತ್ತು ಎರಡನೆಯದು ಬಹುಜನ ಸಮಾಜ. ಈ ಭೇದ ಸ್ಪಷ್ಟವಾಗಿರಲಿ ಅಥವಾ ಅಸ್ಪಷ್ಟವಾಗಿರಲಿ, ಅದಕ್ಕೆ ಅಷ್ಟೇನೂ ಮಹತ್ವವಿಲ್ಲ. ನೀವು ಸಾರ್ವಜನಿಕ ಮತದಾನ ಜಾರಿಗೆ ತನ್ನಿ-ಕೊನೆಗೆ ಆಡಳಿತ ವರ್ಗವೇ ಅಧಿಕಾರ ಹುದ್ದೆಗೆ ಆಯ್ಕೆ ಆಗುತ್ತದೆ! ಬಹುಜನ ಸಮಾಜವು ಗೆದ್ದು ಬರುವ ಆಶೆಯು ಎಂದಿಗೂ ಇಲ್ಲ. ಈ ಹೇಳಿಕೆಯನ್ನು ನಾನು ಬೇಜವಾಬ್ದಾಯಿಂದ ನೀಡುತ್ತಿಲ್ಲ. \ಅದಕ್ಕೆ ಐತಿಹಾಸಿಕವಾದ ಆಧಾರವಿದೆ.
1937ರ ಚುನಾವಣೆಯ ಫಲಿತಾಂಶ ಏನಾಯ್ತು ನೋಡಿ.ಮತದಾನದ ಅಧಿಕಾರವು ತುಂಬ ವ್ಯಾಪಕವಾಗಿತ್ತು. ಚುನಾವಣೆಯೂ ತುಂಬ ತುರುಸಿನಿಂದ ನಡೆಯಿತು. ಮತವೂ ಸಾಕಷ್ಟು ಹಾಕಲಾಯಿತು.ಆದರೆ ಕೊನೆಗೆ ಆಗಿದ್ದೇನು? ಈಗ ಅದರ ಬಗೆಗೆ ನನಗೇನೂ ಹೇಳುವ ಇಚ್ಛೆಯಿಲ್ಲ. ಆದರೆ ಕಾಂಗ್ರೆಸ್‌ನ ಏಳು ಪ್ರಾಂತಗಳಲ್ಲಿ ನಾನು ಹೇಳಿದಂತೆಯೇ ಜರುಗಿತು. ಅದೇನೆಂದರೆ, ಈ ದೇಶದಲ್ಲಿ ನೀವು ಏನೇ ಮಾಡಿದರೂ ಆಡಳಿತವನ್ನು ಬ್ರಾಹ್ಮಣ ಜಾತಿಯವರೇ ನಡೆಸುತ್ತಾರೆ! ಏಳೂ ಪ್ರಾಂತದಲ್ಲಿ ಮುಖ್ಯಸ್ಥರು ಬ್ರಾಹ್ಮಣರಾಗಿದ್ದರು. ಮಂತ್ರಿ ಮಂಡಳದಲ್ಲಿ ಅರ್ಧದಷ್ಟು ಜನರೂ ಬ್ರಾಹ್ಮಣರೇ. ನಾನಿದನ್ನೂ ಟೀಕಿಸಲೆಂದು ಹೇಳುತ್ತಿಲ್ಲ. ಇದು ಪ್ರತ್ಯಕ್ಷದಲ್ಲಿ ಜರುಗಿದ ಘಟನೆಯಾಗಿದೆ. ಚುನಾವಣೆಯಿಂದ ಏನಾದರೂ ಖಚಿತಗೊಂಡಿರುವುದೇನೆಂದರೆ, ಈ ದೇಶದಲ್ಲಿ ಆಡಳಿತ ಜಮಾತಿ ಒಂದೇ.ಕೊನೆಗೆ ಅದೇ ಮೇಲೆ ಬಂತು. ಪ್ರತಿಯೊಂದು ದೇಶದಲ್ಲಿ ಸ್ವರಾಜ್ಯ ಇರಬೇಕೇ ಎಂಬ ಪ್ರಶ್ನೆಯೂ ತಪ್ಪು. ನಿಜವಾದ ಪ್ರಶ್ನೆಯೇನೆಂದರೆ, ಈ ದೇಶದ ಆಡಳಿತ ಜಮಾತಿಗೆ ರಾಜ್ಯಾಧಿಕಾರವನ್ನು ನೀಡುವಷ್ಟು ತಿಳುವಳಿಕೆ ಶಾಸಕಾಂಗ ಜಮಾತಿಗೆ ಇದೆಯೇ? ಈ ಪ್ರಶ್ನೆಯ ಉತ್ತರದ ಮೇಲೆಯೇ ಸ್ವರಾಜ್ಯದ ಹಕ್ಕು ಅವಲಂಬಿಸಿದೆ ಎಂಬುದನ್ನು ನಾವು ಮರೆಯುತ್ತಲಿದ್ದೇವೆ. ಯಾವುದೇ ಒಂದು ಆಡಳಿತ ಜಮಾತಿಯ ಕೈಗೆ ಅಧಿಕಾರ ನೀಡುವುದೇ ಆಗಿದ್ದರೆ, ಉದ್ಭವಗೊಳ್ಳುವ ಪ್ರಶ್ನೆ ಏನೆಂದರೆ, ಆ ಜಮಾತಿಯ ದೃಷ್ಟಿಕೋನವೇನು, ಅದಕ್ಕೆ ಏನೆನಿಸುತ್ತದೆ? ಒಂದು ವೇಳೆ ನಿಮ್ಮ ಆಡಳಿತ ವರ್ಗಕ್ಕೆ ವಿಷಮತೆಯಿರಲೇಬೇಕು, ಸಮತೆಯ ಮೇಲೆ ನಂಬಿಕೆಯಿರಲಿಕ್ಕಿಲ್ಲ, ಕೆಲವು ಜನರಿಗೆ ಮನುಷ್ಯರೆಂದು ಕರೆಯುವ ಇಚ್ಛೆಯಿರಲಿಕ್ಕಿಲ್ಲ. ಅವರನ್ನು ಮುಟ್ಟಬಾರದು, ಶಿಕ್ಷಣದ ಮತ್ತು ಸಂಪತ್ತಿನ ಹಕ್ಕು ಕೇವಲ ಒಂದೇ ವಿಶಿಷ್ಟ ವರ್ಗಕ್ಕೆ ಮಾತ್ರವಿದೆ. ಉಳಿದವರಿಗಿಲ್ಲ, ಉಳಿದವರು ಗುಲಾಮರಾಗೇ ಬದುಕಬೇಕು. ಗುಲಾಮರಾಗೇ ಸಾಯಬೇಕು ಎಂದು ಆ ಜಮಾತಿಗೆ ಅನಿಸುವುದಾದರೆ, ನಾನು ಕೇಳಬಯಸುವುದೇನೆಂದರೆ, ರಾಷ್ಟ್ರೀಯ ಸರಕಾರವು ಇವತ್ತಿನ ಮಧ್ಯಸ್ಥ ಸರಕಾರಕ್ಕಿಂತಲೂ ಹೆಚ್ಚು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆಯೇ?

ನಾನು ರಾಷ್ಟ್ರೀಯ ಸರಕಾರದ ವೈರಿಯಲ್ಲ. ನಾನು ಸ್ವರಾಜ್ಯವನ್ನಾಗಲಿ, ಸ್ವಾತಂತ್ರವನ್ನಾಗಲಿ ವಿರೋಧಿಸುವುದಿಲ್ಲ. ದೇಶಕ್ಕೆ ನೀಡಲಾದ ಆಶ್ವಾಸನೆಯಂತೆ ಆ ಸ್ವಾತಂತ್ರ ಶಿಕ್ಷಣ ಮತ್ತು ಸಮೃದ್ಧಿಯೂ ನನ್ನ ಪಾಲಿಗೆ ಬರುವ ಖಾತ್ರಿಯಿರುವುದಾದರೆ, ಆ ಸ್ವಾತಂತ್ರಕ್ಕಾಗಿ, ಆ ರಾಷ್ಟ್ರೀಯ ವೃತ್ತಿಗಾಗಿ ನಾನು ಯಾವ ಕ್ಷಣಕ್ಕೂ ಹೋರಾಡಲು ಸಿದ್ಧ. ಆದರೆ ಈ ತತ್ವಜ್ಞಾನದ ಪರಿಣಾಮವು ಇದೇ ಆಗುವುದಿದ್ದರೆ ಅದರ ತೊಂದರೆ ಕೇವಲ ಒಂದೇ ಆಡಳಿತ ಜಮಾತಿಗಾಗಿ ಮಾತ್ರ ಉಳಿಯುತ್ತದೆ. ಈ ರಾಜ್ಯಾಧಿಕಾರವು ಆ ಜಮಾತಿಯ ಬಲವನ್ನು ಹೆಚ್ಚಿಸಿ, ಉಳಿದವರ ಹಕ್ಕನ್ನೂ ಕಸಿದುಕೊಳ್ಳಲೆಂದೇ ಇರುವುದಾದರೆ,ಇಂದು ಹಂಗಾಮಿ ಸರಕಾರದ ಬಗೆಗೆ ಎಂಥ ಟೀಕೆ ಕೇಳಿ ಬರುತ್ತಿದೆಯೋ, ಅಂಥ ಟೀಕೆಯನ್ನು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.(ಚಪ್ಪಾಳೆ)

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)