varthabharthi


ಅನುಗಾಲ

ಚುನಾವಣೋತ್ತರ ಸಮೀಕ್ಷೆಯೆಂಬ ಶವಪರೀಕ್ಷೆ

ವಾರ್ತಾ ಭಾರತಿ : 30 May, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಯಾವುದೇ ಪಕ್ಷವೂ ಜನರ ಹಿತವನ್ನು ಕಾಯ್ದುಕೊಳ್ಳಲು, ಬದುಕಿನ ಮೌಲ್ಯಗಳನ್ನು ರಕ್ಷಿಸಲು, ಹೆಣಗಾಡುವ ಸ್ಥಿತಿಯಲ್ಲಿಲ್ಲ. ಪಕ್ಷದ ಅಳಿವು-ಉಳಿವು ಚುನಾವಣೆಯ ಸೋಲು-ಗೆಲುವಿನಲ್ಲಿ ಅಡಗಿರುವಾಗ ಇತರ ಅಂಶಗಳು ಗೌಣವಾಗುತ್ತವೆ. ಹೇಗಾದರೂ ಅಧಿಕಾರಕ್ಕೆ ಬರಬೇಕೆಂಬುದೇ ಮೂಲಮಂತ್ರವಾಗಿರುವಾಗ ನಡೆದದ್ದೇ ಹಾದಿಯೆಂದಾಗುವುದು ಸಹಜ. ಚಾಣಕ್ಯರಿಗಿಂತ ಅಮಾತ್ಯರಾಕ್ಷಸರೇ ಇಂದಿನ ರಾಜಕಾರಣದಲ್ಲಿ ಮೆರೆಯುವುದರಿಂದ ಒಳ್ಳೆಯದೆಂಬುದು ಒಂದು ನಿರೀಕ್ಷಿತ ಅಪಘಾತವೇ ಸರಿ.


ನಿರೀಕ್ಷೆಗೂ ಮೀರಿ ಮತ್ತು ವಿಶ್ಲೇಷಕರ ಎಲ್ಲ ಲೆಕ್ಕಾಚಾರಗಳನ್ನೂ ಸೋಲಿಸಿ ಮೋದಿ-ಶಾ ಜೋಡಿ ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ ಪಕ್ಷವು ತನ್ನ ವರ್ಚಸ್ಸನ್ನು ಮರಳಿ ಪಡೆಯುವಲ್ಲಿ ವಿಫಲವಾಗಿದೆ. ಎಡಪಕ್ಷಗಳೂ ಸೇರಿದಂತೆ ಬಹುತೇಕ ಇತರ ರಾಷ್ಟ್ರೀಯ ಪಕ್ಷಗಳು ತಮ್ಮ ಸ್ಥಾನ-ಮಾನಗಳನ್ನು ಕಳೆದುಕೊಂಡಿದೆ. ಕೆಲವೊಂದು ಪ್ರಾದೇಶಿಕ ಪಕ್ಷಗಳು ಅನಿರೀಕ್ಷಿತ ಗೆಲುವನ್ನು ಸಾಧಿಸಿದರೆ, ಇನ್ನು ಕೆಲವು ಪಕ್ಷಗಳು ತಮ್ಮ ಗೌರವವನ್ನು ಉಳಿಸಿಕೊಳ್ಳುವಷ್ಟು ಸಾಧನೆಯನ್ನು ಮಾಡಿವೆ; ತೆಲುಗು ದೇಶಂ, ಜೆಡಿಎಸ್ ನೆಲಕಚ್ಚಲು ಹತ್ತಿರವಾದವು. ಈಗ ಚುನಾವಣೋತ್ತರ ಸಮೀಕ್ಷೆಗಳು ಈ ಸೋಲು-ಗೆಲುವುಗಳಿಗೆ ವಿವಿಧ ನಿಲುವುಗಳನ್ನು, ಕಾರಣಗಳನ್ನು, ನೆಪಗಳನ್ನು ಹೇಳುತ್ತಿವೆ.

ಗೆಲುವಿಗೆ ನೂರೆಂಟು ತಂದೆಗಳು. ಪ್ರತಿಯೊಬ್ಬನೂ ಗೆಲುವಿಗೇ ತನಗೆ ಅನುಕೂಲವಾದ ಕಾರಣಗಳನ್ನು ಹುಡುಕುತ್ತಾನೆ. ಪರೀಕ್ಷೆಯಲ್ಲಿ ಉತ್ತೀರ್ಣನಾದವರ ಪೈಕಿ ಒಬ್ಬನು ತಾನು ಅಹರ್ನಿಶಿ ಓದಿ ಉತ್ತೀರ್ಣನಾದೆ ಎಂದರೆ ಇನ್ನೊಬ್ಬನು ತಾನು ಓದಿಲ್ಲವಾದರೂ ಉತ್ತೀರ್ಣನಾದೆ ಎಂದು ಬಡಾಯಿ ಕೊಚ್ಚಿಕೊಳ್ಳಬಹುದು; ಇನ್ನೂ ಒಬ್ಬ ತನ್ನ ಶಿಕ್ಷಕರನ್ನು ಮತ್ತೊಬ್ಬ ತನ್ನ ಹೆತ್ತವ ರನ್ನು ಹೀಗೆ ಗೆಲುವಿಗೆ ಸಾವಿರ ಕಾರಣಗಳನ್ನು ಹೇಳಬಹುದು. ಸ್ಪರ್ಧೆಗಳಲ್ಲಿ ಗೆದ್ದವರೂ ಹೀಗೆಯೇ ವಿವಿಧ ಕಾರಣಗಳನ್ನು ಹೇಳುತ್ತಾರೆ. ಚುನಾವಣೆಯಲ್ಲಿ ಗೆದ್ದವರೂ ಅವರ ಬೆಂಬಲಿಗರೂ ಗೆಲುವಿನ ಕಾರಣಗಳನ್ನು ಭಿನ್ನ ರುಚಿಯಲ್ಲಿ ಹೇಳುತ್ತಾರೆ. ಅವರು ಗೆಲ್ಲುತ್ತಾರೆಂದು ನನಗೆ ಮೊದಲೇ ಗೊತ್ತಿತ್ತು ಎನ್ನುವವರು ಸಾಕಷ್ಟಿದ್ದಾರೆ. ಇವನ್ನು ಒಪ್ಪುವುದು ಬಿಡುವುದು ಇತರರ ಇಷ್ಟ. ಆದರೆ ಇದು ಸರಿಯಿರಬಹುದು ಎಂಬವರ ಸಂಖ್ಯೆಯೇ ಹೆಚ್ಚು. ಸೋಲು ಅನಾಥ. ಸೋಲಿನ ಹೊಣೆ ಹೊರುವವರು ಯಾರೂ ಇರುವುದಿಲ್ಲ. ಫೇಲಾದರೆ ಅವನು ಓದಿರಲಿಕ್ಕಿಲ್ಲ ಎಂಬವರೇ ಹೆಚ್ಚು. ಮೋಟರ್ ಸೈಕಲ್ ಅಪಘಾತದಲ್ಲಿ ಜೀವಕಳೆದುಕೊಂಡರೆ ಅದು ಹೇಗಾಯಿತು ಎಂಬ ವಿವರಗಳನ್ನು ಪಡೆಯುವ ಮೊದಲೇ ಆತ ಪಾನಮತ್ತನಾಗಿರಬಹುದು; ಹೆಲ್ಮೆಟ್ ಹಾಕಿರಲಿಕ್ಕಿಲ್ಲ; ವೇಗವಾಗಿ ತನ್ನ ವಾಹನವನ್ನು ಚಲಾಯಿಸಿರಬಹುದು ಎಂದೆಲ್ಲ ಅಭಿಪ್ರಾಯಗಳು ಮೂಡುತ್ತವೆ.

‘ಪಾಪ!’ ಎಂದು ಉದ್ಗರಿಸುವವರು ಕಡಿಮೆ. ಸ್ಪರ್ಧೆಯಲ್ಲಿ ಸೋತರೆ ಅವರಿಗೇಕೆ ಬೇಕಿತ್ತು ಸ್ಪರ್ಧಿಸುವ ಕೆಲಸ ಎಂಬಲ್ಲಿಂದ ಅವರ ಕರ್ಮಫಲ, ಅವರು ಸೋತದ್ದು ಒಳ್ಳೆಯದಾಯ್ತು, ಮುಂದೆ ಅವರ ಗತಿಯೇನು ಎನ್ನುವ ಟೀಕೆಗಳೇ ಬಹಳ. ಅದರಲ್ಲೂ ಪ್ರತಿಷ್ಠಿತರು ಸೋತರೆ ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಬೀಳುತ್ತದೆ! ಸೋಲೇ ಗೆಲುವಿನ ಸೋಪಾನ ಎನ್ನುವವರೂ ಸೋಲಿಗೆ ಸಿದ್ಧರಿರುವುದಿಲ್ಲ. ಆದರೂ ಸೋತವರು ತನಗೆ ಗೆಲ್ಲಲು ಇನ್ನೊಂದು ಅವಕಾಶವಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಸೋಲಿಗೆ ಕಾರಣಗಳನ್ನು ಹುಡುಕುವವರು ಒಂದು ತಂಡವಾದರೆ ನೆಪಗಳನ್ನು ಸೃಷ್ಟಿಸುವವರು ಅಪಾರ. ಅವರು ಹೀಗೆ ಮಾಡಿದ್ದರೆ ಗೆಲ್ಲಬಹುದಿತ್ತು; ಅವರು ಸೋಲುತ್ತಾರೆಂದು ನಾನು ಊಹಿಸಿದ್ದೆ ಎಂಬವರ ಸಂಖ್ಯೆ ಕಡಿಮೆಯೇನಲ್ಲ. ಲಲಿತ ಪ್ರಬಂಧಕ್ಕೂ ಗ್ರಾಸವಾಗಬಹುದಾದ ಇಂತಹ ಅಂಶಗಳನ್ನು ಹೊರತುಪಡಿಸಿ ಮೊನ್ನೆ ಮೊನ್ನೆ ಮುಗಿದ 2019ರ ಸಂಸದೀಯ ಚುನಾವಣೆಯ ಸಂದರ್ಭದಲ್ಲಿ ಸೋಲು-ಗೆಲುವಿನ ಕಾರಣಗಳನ್ನು, ಪ್ರಭಾವಗಳನ್ನು, ಪರಿಣಾಮಗಳನ್ನು, ಗಂಭೀರವಾಗಿ ಯೋಚಿಸಬಹುದು:

ಕಳೆದ 5 ವರ್ಷಗಳಲ್ಲಿ ದೇಶ ಹೇಗೆ ನಡೆದಿದೆ? ಮುನ್ನಡೆದಿದೆಯೋ ಹಿನ್ನಡೆದಿದೆಯೋ ಎಂಬ ಬಗ್ಗೆ ಜನ ಚಿಂತಿಸಿದಂತಿಲ್ಲ. ಘೋಷಣೆಗಳ ಮತ್ತು ಟೀಕೆಗಳ ಅಬ್ಬರದಲ್ಲಿ ಮುಖ್ಯ ವಿಚಾರಗಳು ಮೌನವಾದವು. ರಾಜಕಾರಣಿಗಳು ಮಾತ್ರವಲ್ಲ, ಜನರೂ ಮುಂದಿನ ತಲೆಮಾರಿನ ಬಗ್ಗೆ ಯೋಚಿಸಿದಂತಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಜಾತಂತ್ರ ಸೋಲುವಷ್ಟು ಕಳಪೆ ಮಟ್ಟದ ರಾಜಕೀಯವನ್ನು ದೇಶ ಕಂಡಿತು. ಆಝಮ್ ಖಾನ್‌ರಿಂದ ಸಾಧ್ವಿ ಪ್ರಜ್ಞಾ ಠಾಕೂರ್ ಅವರವರೆಗೆ ಕ್ರಿಮಿನಲ್‌ಗಳ ಮೆರವಣಿಗೆಗೆ ಜನರು ಕೆಂಪು ಜಮಖಾನ ಹಾಸಿದರು. ಸ್ಪರ್ಧಿಯ ಹಿನ್ನೆಲೆ, ಅನುಭವ, ಇವ್ಯಾವುದೂ ಜನರಿಗೆ ಚಿಂತನೆಯ ಮೌಲ್ಯವಾಗಿ ಕಾಣಲೇ ಇಲ್ಲ. ದೇಶವು ಪಕ್ಷ ರಾಜಕಾರಣಕ್ಕಿಂತ ದೊಡ್ಡದು ಎಂದು ಜನರಿಗೆ ಅನ್ನಿಸಲೇ ಇಲ್ಲ. ಪರಿಣಾಮವಾಗಿ ಯಾರು ಊದಿದ ಪುಂಗಿ ಹೆಚ್ಚು ಆಕರ್ಷಕವಾಗಿತ್ತೋ ಅವರ ಕಡೆಗೆ ಜನರು ಹೆಡೆಯಾಡಿಸಿದರು.

ಯಾವುದೇ ಪಕ್ಷವೂ ಜನರ ಹಿತವನ್ನು ಕಾಯ್ದುಕೊಳ್ಳಲು, ಬದುಕಿನ ಮೌಲ್ಯಗಳನ್ನು ರಕ್ಷಿಸಲು, ಹೆಣಗಾಡುವ ಸ್ಥಿತಿಯಲ್ಲಿಲ್ಲ. ಪಕ್ಷದ ಅಳಿವು-ಉಳಿವು ಚುನಾವಣೆಯ ಸೋಲು-ಗೆಲುವಿನಲ್ಲಿ ಅಡಗಿರುವಾಗ ಇತರ ಅಂಶಗಳು ಗೌಣವಾಗುತ್ತವೆ. ಹೇಗಾದರೂ ಅಧಿಕಾರಕ್ಕೆ ಬರಬೇಕೆಂಬುದೇ ಮೂಲಮಂತ್ರ ವಾಗಿರುವಾಗ ನಡೆದದ್ದೇ ಹಾದಿಯೆಂದಾಗುವುದು ಸಹಜ. ಚಾಣಕ್ಯರಿಗಿಂತ ಅಮಾತ್ಯರಾಕ್ಷಸರೇ ಇಂದಿನ ರಾಜಕಾರಣದಲ್ಲಿ ಮೆರೆಯುವುದರಿಂದ ಒಳ್ಳೆಯದೆಂಬುದು ಒಂದು ನಿರೀಕ್ಷಿತ ಅಪಘಾತವೇ ಸರಿ.

ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮೋದಿ-ಶಾ ಜೋಡಿಯಿಂದಾಗಿಯೇ ಉಳಿಯಿತು. ಎಲ್ಲ ಸ್ಪರ್ಧಿಗಳೂ ಮೋದಿಯ ಹೆಸರಿನಲ್ಲಿ ಮತಬೇಡುವ ಪ್ರಸಂಗ ಎದುರಾಯಿತು. ಯಾರೊಬ್ಬರೂ ತಾವು ಇಂತಹ ಸಾಧನೆಯನ್ನು ಮಾಡಿದ್ದೇವೆ, ಈ ಶ್ರಮಕ್ಕಾಗಿ ತಮಗೆ ಮತ ನೀಡಿ ಎಂದು ಹೇಳುವ ಸ್ಥಿತಿಯಿರಲಿಲ್ಲ. ಹೀಗಾಗಿ ಭಾರತೀಯ ಜನತಾ ಪಕ್ಷದಲ್ಲಿ ಯಾರೇ ಸ್ಪರ್ಧಿಸಿದರೂ ಗೆಲ್ಲಬಹುದಿತ್ತು. ಉದಾಹರಣೆಯನ್ನು ನೀಡುವುದಾದರೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಮತ್ತು ಅಜೇಯರೂ ಬಲಾಢ್ಯರೂ ಎಂದು ನಂಬಲಾದ ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆಯವರನ್ನು ಅವರ ಪಕ್ಷದ ಶಾಸಕರಾಗಿದ್ದ ಮತ್ತು ಚುನಾವಣಾ ನಿಕಟಪೂರ್ವದಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾಜಪ ಸೇರಿದ್ದ ಉಮೇಶ್ ಜಾಧವ್ ಸೋಲಿಸಿದರು. ಜನರಿಗೆ ಅವರ ಹಿನ್ನೆಲೆ ಕಾಂಗ್ರೆಸ್ ಎಂಬುದಾಗಲೀ ಅವರು ಈಗಷ್ಟೇ ಪಕ್ಷಾಂತರ ಮಾಡಿ ಬಂದವರೆಂಬುದಾಗಲೀ ಅವಕಾಶವಾದಿ ರಾಜಕಾರಣಿಯಿರಬಹುದೇನೋ ಎಂಬ ಸಂಶಯವಾಗಲೀ ಚರ್ಚೆಯ, ಚಿಂತನೆಯ ಭಾಗವಾಗಲೇ ಇಲ್ಲ. ಅವರು ಭಾಜಪದ ಅಭ್ಯರ್ಥಿ, ಮೋದಿ ಪ್ರಧಾನಿಯಾಗಬೇಕಾದರೆ ಈತ ಗೆಲ್ಲಬೇಕು ಎಂಬುದಷ್ಟೇ ವಸ್ತುವಾಯಿತು. ತಮಾಷೆಯೆಂದರೆ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸುತ್ತಲೇ ಭಾಜಪವು ಈ ಜಾಧವ್ ಅವರ ಮಗನನ್ನು ಶಾಸಕರಾಗಿ ಆಯ್ಕೆ ಮಾಡಿತು ಮತ್ತು ಜನರು ಅವರನ್ನು ಗೆಲ್ಲಿಸಿದರು. ಇದು ತೋರಿಸಿಕೊಡುವ ಮೌಲ್ಯವೆಂದರೆ ರಾಜಕೀಯದಲ್ಲಿ ಅಥವಾ ಜನಸಾಮಾನ್ಯರಲ್ಲಿ ಚಿಂತನಶೀಲ ಮೌಲ್ಯಗಳಿಗೆ, ತರ್ಕಗಳಿಗೆ, ಜಾಗವಿಲ್ಲವೆಂಬ ಒಂದೇ ಅಂಶ.

ಕಾಂಗ್ರೆಸ್ ವಸ್ತುಶಃ ರಾಹುಲ್ ಗಾಂಧಿಯೆಂಬ ಒಂಟೆತ್ತಿನ ಗಾಡಿಯ ಮೇಲೆ ಸವಾರಿ ಮಾಡಿತು. ರಾಹುಲ್ ಗಾಂಧಿ ಮೋದಿಯನ್ನು ಟೀಕಿಸಿದರೂ ಅದರಲ್ಲಿ ಆಕರ್ಷಣೆಯನ್ನು ಜನರು ಕಳೆದುಕೊಳ್ಳುವಷ್ಟು ಚರ್ವಿತಚರ್ವಣ ವಾಗಿ (ಯುವ ಭಾಷೆಯಲ್ಲಿ ಹೇಳುವುದಾದರೆ ‘ಚ್ಯೂಯಿಂಗ್ ಗಮ್’ ಆಗಿ) ‘ಚೌಕಿದಾರ್ ಚೋರ್ ಹೈ’ ಘೋಷಣೆ ಬಳಕೆಯಾಯಿತು. ಪ್ರಚಾರದಲ್ಲಿ ವೈವಿಧ್ಯವು ಬರಲೇ ಇಲ್ಲ. ಜೊತೆಗೆ ಇತರ ನಾಯಕರು ತಮ್ಮ ಪೀಠವನ್ನು ಭದ್ರಗೊಳಿಸುವತ್ತ ಮಾತ್ರ ಗಮನ ನೀಡಿದರು. ಮೊದಲು ದೇಶ, ಆನಂತರ ಪಕ್ಷ ಕೊನೆಗೆ ತಾನು ಎಂಬ ತತ್ವವು ಉಲ್ಟಾ ಪಲ್ಟಾ ಆಗಿ ವ್ಯಕ್ತಿ-ಪಕ್ಷ-ದೇಶ ಎಂದಿದ್ದರೂ ಪರವಾಗಿರಲಿಲ್ಲ. ಆದರೆ ಕಾಂಗ್ರೆಸಿನ ಒಂದು ವೈಶಿಷ್ಟ್ಯವೆಂದರೆ ಅಲ್ಲಿ ಬಹುತೇಕ ಹಿರಿಯ ಮತ್ತು ಕಿರಿಯ ನಾಯಕರಿಗೆ ತಾವು ಮೊದಲು ಮತ್ತು ನಂತರವೂ. ಟಿಕೆಟು ಸಿಗದಿದ್ದರೆ ಪಕ್ಷವನ್ನು ತ್ಯಜಿಸಲು ಸಾಕಷ್ಟು ಹಳಬರೂ ತಯಾರಾಗಿರುವ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ ಮತ್ತು ಇಂತಹ ಬ್ಲಾಕ್‌ಮೈಲಿಂಗ್ ರಾಜಕೀಯಕ್ಕೆ ಹೆದರುವ ಪಕ್ಷವೂ ಅದೇ. (ಮಂತ್ರಿ ಮತ್ತಿತರ ಪದವಿ ಸಿಗದ ಕಾರಣಕ್ಕೇ ಬಿಡುವ, ಮತ್ತು ಏನಾದರಾಗಲೀ, ಇಂತಹ ಪದವಿಗಳನ್ನು ಬಿಡೆವೆಂಬ ಛಲತ್ರಿವಿಕ್ರಮ ಕಾಂಗ್ರೆಸಿಗರ ಮನಸ್ಥಿತಿಯನ್ನು ಮನೋವಿಜ್ಞಾನ ಅಥವಾ ರಾಜನೀತಿ ಶಾಸ್ತ್ರದ ಪಿಎಚ್‌ಡಿ ಅಧ್ಯಯನದ ವಿಷಯವಾಗಿಸಬಹುದು!) ಪರಿಣಾಮವಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಹಾಗೂ ಮಾಜಿ ವಿತ್ತ ಸಚಿವ ಚಿದಂಬರಂ ತಮ್ಮ ಮಕ್ಕಳಿಗೆ ಟಿಕೆಟು ಪಡೆಯುವಲ್ಲಿ ಯಶಸ್ವಿಯಾದರು. ಈ ಪೈಕಿ ಗೆಹ್ಲೊಟ್ ಪುತ್ರ ಮಾತ್ರ ಸೋತರೂ ಈ ಸ್ಪರ್ಧೆಯಿಂದಾಗಿ ಪ್ರಚಾರದ ಯಶಸ್ಸು ಬುಡಮೇಲಾಯಿತು. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಶೂನ್ಯ ಮತ್ತು ಶೂನ್ಯಕ್ಕೆ ಬಲುಹತ್ತಿರದ ಸಂಪಾದನೆಯನ್ನು ಮಾಡುವಲ್ಲಿ ಯಶಸ್ವಿಯಾಯಿತು.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೂ ಮತ್ತೆ ಕಾಂಗ್ರೆಸಿಗೆ ನಿರಾಶೆಯೇ ಆಗಿದೆ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸಿನ ಮೈತ್ರಿ ಪರಸ್ಪರ ಸಂಶಯ ಮಾತ್ರವಲ್ಲ, ನಿಂದನೆಯ ಹಂತಕ್ಕೆ ಇಳಿದದ್ದು ಮಾತ್ರವಲ್ಲ, ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೂ ಸರಿ, ಪರಸ್ಪರ ಕಚ್ಚಾಡಲೇಬೇಕೆಂಬ ನಿಯಮಬದ್ಧತೆ ಈ ಪಕ್ಷಗಳ ಸೋಲಿಗೆ ಮುಖ್ಯ ಕಾರಣವಾಯಿತು. ನಾಯಕರು ಹೇಳಿಕೊಳ್ಳದಿದ್ದರೂ ಮೈತ್ರಿಯೆಂದರೆ ವಿಶ್ವಾಸದ್ರೋಹವೆಂಬ ಹಂತಕ್ಕೆ ಈ ಎರಡೂ ಪಕ್ಷಗಳು ಮತ್ತು ಅವರ ಬೆಂಬಲಿಗರು ಇಳಿದರು. ಜೆಡಿಎಸ್ ಹಿರಿಯ ದೇವೇಗೌಡರಂತೂ ತಮ್ಮ ಕುಟುಂಬವನ್ನೇ ವಿಶ್ವವೆಂದು ತಿಳಿದು ವಿಶ್ವ ಕುಟುಂಬಿಯಾಗಿ ಮನೆಯನ್ನು ವಿಸ್ತರಿಸಹೋದರೇ ವಿನಾ ದೇಶದ ಬಗ್ಗೆ ಒಂದಿಷ್ಟೂ ಯೋಚಿಸಿದಂತೆ ಕಾಣಲಿಲ್ಲ. ಒಂದೇ ಕುಟುಂಬದಲ್ಲಿ ಈಗಾಗಲೇ ಮೂರು ಶಾಸಕರಿದ್ದರೂ (ಆ ಪೈಕಿ ಒಬ್ಬರು ಮುಖ್ಯಮಂತ್ರಿ, ಇನ್ನೊಬ್ಬರು ಲೋಕೋಪಯೋಗಿ ಸಚಿವರು!) ಮಾಜಿ ಪ್ರಧಾನಿಗಳಾದ ತಾವೂ (ಅವರ ವಯಸ್ಸಿಗೆ ಭಾಜಪದ ಧುರೀಣರು ವಿಶ್ರಾಂತ ಜೀವನ ನಡೆಸುತ್ತಿರುವುದನ್ನು ಗಮನಿಸಿಯೂ) ತಮ್ಮ ಇಬ್ಬರು ಮೊಮ್ಮಕ್ಕಳೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ಈ ಪ್ರಾತಿನಿಧ್ಯವನ್ನು ಇಮ್ಮಡಿಗೊಳಿಸಲು ಯತ್ನಿಸಿದರೇ ವಿನಾ ಇತರರೂ ಮುನ್ನಡೆಯಲಿ ಎಂದು ಯೋಚಿಸಲೇ ಇಲ್ಲ. ಉಳಿದವರೂ ಜಾತಿ ಲೆಕ್ಕಾಚಾರ ಹಾಕಿ ಕೊನೆಗೆ ತಾವೂ ಸೋತು, ಕಾಂಗ್ರೆಸನ್ನೂ ಸೋಲಿಸಿ ಹುತಾತ್ಮರಾದರು. ಮಂಡ್ಯ, ತುಮಕೂರು ಮುಂತಾದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡಾ ಇದೇ ಆತ್ಮಹತ್ಯಾ ದಾಳಿಯ ನೀತಿಯನ್ನು ನಡೆಸಿದ್ದು ರಹಸ್ಯವೇನಲ್ಲ!

ಇಂತಹದ್ದು ದೇಶದೆಲ್ಲೆಡೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೂ ಕಾಂಗ್ರೆಸ್ ಪಕ್ಷವೂ ಮಮತಾ ದೀದಿಯನ್ನು ಸೋಲಿಸುವ ಹುನ್ನಾರದಲ್ಲಿ ಭಾಜಪವನ್ನು ಬೆಂಬಲಿಸಿದಂತೆ ಕಾಣುತ್ತದೆ.

ಅನುಕೂಲಕ್ಕಾಗಿ ಹಾಸಿಗೆ ಹಂಚಿಕೊಂಡ ಇತರ ಉದಾಹರಣೆಗಳೆಂದರೆ ಉತ್ತರ ಪ್ರದೇಶದಲ್ಲಿ ಪ್ರಮುಖವೆನಿಸಿದ ಸಮಾಜವಾದಿ ಮತ್ತು ಬಹುಜನಸಮಾಜವಾದಿ ಪಕ್ಷಗಳು. ಇವು ಕೆಲವೇ ಸಮಯದ ಹಿಂದೆ ಮೈತ್ರಿ ಬೆಳೆಸಿ ಉಪಚುನಾವಣೆಯ ಎರಡು ಲೋಕಸಭಾ ಸ್ಥಾನಗಳನ್ನು ಭಾಜಪದಿಂದ ಕಸಿದುಕೊಂಡಿದ್ದವು. ಆದರೆ ರಾಷ್ಟ್ರೀಯ ಪ್ರಶ್ನೆ ಎದುರಾದಾಗ ಇವು ಮತದಾರರಿಗೆ ಮುಖ್ಯವಾಗಲೇ ಇಲ್ಲ. ಇದಕ್ಕೆ ಬದಲಾಗಿ ಭಾಜಪದ ಬೆಂಬಲಿಗರು ತದೇಕದೃಷ್ಟಿಯಿಂದ ಮೋದಿಯನ್ನು ಬೆಂಬಲಿಸುವ ಏಕಮೇವ ಉದ್ದೇಶವನ್ನು ಹೊಂದಿ ಇರಬಹುದಾದ ಉಳಿದೆಲ್ಲ ಭಿನ್ನಾಭಿಪ್ರಾಯಗಳನ್ನು, ವೈಯಕ್ತಿಕತೆಯನ್ನು ಮೂಲೆಗೆಸೆದರು. ಉಳಿದ ಪಕ್ಷಗಳಿಗೆ ಹೋಲಿಸಿದರೆ ಟಿಕೆಟು ಪಡೆಯದವರು ಪಕ್ಷ ಬಿಟ್ಟ ಉದಾಹರಣೆ ಭಾಜಪದಲ್ಲಿ ಕಡಿಮೆ. ಈ ಶಿಸ್ತನ್ನು ಇತರರು ಅನುಸರಿಸಿದರೆ ಹಿತ.

ಚುನಾವಣೆಯ ಆನಂತರ ದೇಶಕ್ಕೆ ಹಿತವಾಗುತ್ತದೆಯೋ ಇಲ್ಲವೊ ಬಂಧು-ಬಳಗ, ಸ್ನೇಹಿತರು ರಾಜಕೀಯವನ್ನು ಪರಸ್ಪರ ದ್ವೇಷಿಸುವುದಕ್ಕೆ ಬಳಸಿಕೊಂಡ ಚುನಾವಣೆ ಇದೆಂದು ಚರಿತ್ರೆಯಲ್ಲಿ ದಾಖಲಾಗಬಹುದು. ಇದರ ಸೂಚನೆ ಕಾಣಲು ಶುರುವಾಗಿದೆ. ಬಹುಸಂಖ್ಯಾತ-ಅಲ್ಪಸಂಖ್ಯಾತ ದ್ವೇಷ ಎಂದಿನಂತೆಯೇ ಇದ್ದರೂ, ಬೆಳೆಯದಿದ್ದರೂ ಬಹುಸಂಖ್ಯಾತರೊಳಗೇ ಜಾತಿ-ವರ್ಗಾಧಾರಿತ ದ್ವೇಷ ಬೆಳೆಯುತ್ತಿದೆ; ಪರಸ್ಪರ ವಿಶ್ವಾಸ ಕಡಿಮೆಯಾಗುತ್ತಿದೆ. ಚುನಾವಣೆಯ ಬಳಿಕದ ಕೆಲವೇ ದಿನಗಳ ನಡೆನುಡಿಗಳು ಮುಂದಿನ ದಿನಗಳನ್ನು ಕಟ್ಟಿಕೊಡುವಂತಿದೆ. ಕುತೂಹಲದಿಂದ, ಆತಂಕದಿಂದ ಕಾಯೋಣ. ಹೇಗಿದ್ದರೂ ಅಗಲಿದ ಜೀವ ಮರಳಿಬಾರದಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)