varthabharthi


ರಾಷ್ಟ್ರೀಯ

ಡಾ. ವೀರೇಂದ್ರ ಕುಮಾರ್ ಲೋಕಸಭೆಯ ಹಂಗಾಮಿ ಸ್ಪೀಕರ್

ವಾರ್ತಾ ಭಾರತಿ : 11 Jun, 2019

ಹೊಸದಿಲ್ಲಿ, ಜೂ.11: ಮಧ್ಯಪ್ರದೇಶದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ವೀರೇಂದ್ರ ಕುಮಾರ್‌ರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ 17ನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ವೀರೇಂದ್ರ ಕುಮಾರ್ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಹಾಗೂ ಲೋಕಸಭೆಯ ಸ್ಪೀಕರ್ ಆಯ್ಕೆಗೆ ನಡೆಯಲಿರುವ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸದರ ಅನುಭವದ ಆಧಾರದಲ್ಲಿ ಹಂಗಾಮಿ ಸ್ಪೀಕರ್‌ರನ್ನು ರಾಷ್ಟ್ರಪತಿ ಭವನ ನೇಮಕ ಮಾಡುತ್ತದೆ. 1996ರ ಬಳಿಕದ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯಲ್ಲೂ ಗೆದ್ದಿರುವ ವೀರೇಂದ್ರ ಕುಮಾರ್ , ಹಾಲಿ ಲೋಕಸಭೆಯ ಮೂರನೇ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಪಿಎಚ್‌ಡಿ ಪದವೀಧರರಾಗಿರುವ ಕುಮಾರ್, 1977ರಲ್ಲಿ ಎಬಿವಿಪಿ ಸಂಚಾಲಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಬಾಲ್ಯದಿಂದಲೇ ಆರೆಸ್ಸೆಸ್ ಒಡನಾಡಿಯಾಗಿದ್ದ ಕುಮಾರ್ ತುರ್ತುಪರಿಸ್ಥಿತಿ ಸಂದರ್ಭ ಜೈಲು ಸೇರಿದ್ದರು.

2017ರ ಸೆಪ್ಟೆಂಬರ್‌ನಿಂದ 2019ರ ಮೇವರೆಗೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದು ವಿವಿಧ ಸ್ಥಾಯಿ ಸಮಿತಿಯಲ್ಲೂ ಸದಸ್ಯರಾಗಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಸಂತೋಷ್ ಕುಮಾರ್ ಗಂಗ್ವಾರ್ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಎರಡನೇ ಅತ್ಯಂತ ಹಿರಿಯ ಸದಸ್ಯೆಯಾಗಿದ್ದಾರೆ. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಪ್ರಪ್ರಥಮ ಬಾರಿ ಲೋಕಸಭೆ ಪ್ರವೇಶಿಸಿದ್ದ ಮೇನಕಾ ಗಾಂಧಿಗೆ ಈ ಬಾರಿಯ ಮೋದಿ ಸಂಪುಟದಲ್ಲಿ ಅವಕಾಶ ದೊರಕದ ಹಿನ್ನೆಲೆಯಲ್ಲಿ ಅವರು ಹಂಗಾಮಿ ಸ್ಪೀಕರ್ ಆಗಿ ನೇಮಕವಾಗುವ ನಿರೀಕ್ಷೆಯಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)