varthabharthi


ಸಂಪಾದಕೀಯ

ಹಸಿವನ್ನೇ ರೋಗವಾಗಿಸಿಕೊಂಡ ಬಿಹಾರದ ಮಕ್ಕಳು

ವಾರ್ತಾ ಭಾರತಿ : 27 Jun, 2019

ಇತ್ತೀಚಿನ ದಿನಗಳಲ್ಲಿ ದೇಶದ ಅನಾರೋಗ್ಯ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಮೆದುಳು ರೋಗಕ್ಕೆ ಮಕ್ಕಳು ಸಾಲು ಸಾಲಾಗಿ ಬಲಿಯಾಗುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಸಾವುಗಳನ್ನು ಇನ್ನೂ ಗಂಭೀರವಾಗಿ ಸ್ವೀಕರಿಸಿಲ್ಲ. ನ್ಯಾಯಾಲಯಗಳು ಈ ಕಾರಣಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರಿಗೆ ನೋಟಿಸು ಜಾರಿ ಮಾಡಿದೆ. ಈ ಮಾರಣಹೋಮಕ್ಕೆ ಸ್ಪಂದಿಸದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳದ ಮಾಧ್ಯಮಗಳು, ಆಸ್ಪತ್ರೆಗಳಿಗೆ ತೆರಳಿ, ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ರೋಗದ ಜೊತೆಗೆ ಸೆಣಸಾಡುತ್ತಿರುವ ವೈದ್ಯರನ್ನು ಪ್ರಶ್ನಿಸುತ್ತಿವೆ. ಸಂಸತ್ತಿನ ಪ್ರತಿಜ್ಞಾವಿಧಿಯ ಸಂದರ್ಭದಲ್ಲಿ ಮೊಳಗಿದ ಜೈಶ್ರೀರಾಮ್, ಅಲ್ಲಾಹು ಅಕ್ಬರ್, ಜೈ ಭೀಮ್, ಭಾರತ್ ಮಾತಾಕಿ ಜೈ ಮೊದಲಾದ ಘೋಷಣೆಗಳು ಬಿಹಾರದಲ್ಲಿ ಸಂಭವಿಸುತ್ತಿರುವ ಮಕ್ಕಳ ಮಾರಣ ಹೋಮಗಳನ್ನು ತಡೆಯಲು ವಿಫಲವಾಗಿವೆ.

ವಿಪರ್ಯಾಸವೆಂದರೆ, ಈ ರೋಗಕ್ಕೆ ‘ಲಿಚಿ ಹಣ್ಣನ್ನು’ ತಳಕು ಹಾಕಿರುವುದು. ಈ ಹಣ್ಣಿನಿಂದಾಗಿ ರೋಗ ಹರಡಿದೆ ಎಂದು ಬಿಂಬಿಸುವ ಪ್ರಯತ್ನವನ್ನೂ ಕೆಲವು ಮಾಧ್ಯಮಗಳು ಮಾಡುತ್ತಿವೆ. ಆದರೆ ಮಕ್ಕಳ ಸಾವಿಗೆ ನಿಜವಾದ ಕಾರಣ ಏನು? ಎನ್ನುವುದಕ್ಕೆ ಉತ್ತರ ಪಡೆಯಬೇಕಾದರೆ ಆ ಮಕ್ಕಳ ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ಗಮನಿಸಬೇಕು. ಮೃತಮಕ್ಕಳಲ್ಲಿ ಬಹುತೇಕರು ಬಡವರ್ಗಕ್ಕೆ ಸೇರಿದವರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಅದರಲ್ಲೂ ಬಡತನದ ರೇಖೆಗಿಂತ ಕೆಳಗಿರುವವರು. ರೋಗ ‘ಬಡವ’ರನ್ನೇ ಗುರಿಯಿಟ್ಟು ಯಾಕೆ ದಾಳಿ ಮಾಡಿದೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ರೋಗದ ಕಾರಣ ಸ್ಪಷ್ಟವಾಗುತ್ತಾ ಹೋಗುತ್ತದೆ. ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಮಕ್ಕಳ ಸಾವಿನ ಹಿಂದಿರುವ ಮುಖ್ಯ ಕಾರಣ ಹಸಿವು. ಅಪೌಷ್ಟಿಕತೆಯೇ ಇವರನ್ನು ರೋಗಕ್ಕೆ ಬಲಿಯಾಗಿಸಿದೆ.

ಹಸಿದ ಹೊಟ್ಟೆಯಲ್ಲಿ ಸ್ಥಳೀಯ ಲಿಚಿ ಹಣ್ಣನ್ನು ಸೇವಿಸಿದವರೂ ಆಸ್ಪತ್ರೆ ಸೇರಿದ್ದಾರೆ. ಈ ಹಸಿವಿಗೆ ಔಷಧಿಯನ್ನು ಹುಡುಕದೇ ರೋಗಕ್ಕೆ ಔಷಧಿ ಹುಡುಕುತ್ತಿರುವುದೇ ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಾಯಕರು ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ಘಂಟಾಘೋಷವಾಗಿ ಭಾಷಣ ಬಿಗಿಯುತ್ತಿದ್ದಾರೆ. ಆದರೆ ಬ್ಯಾಂಕ್‌ಗಳು ನಷ್ಟಗಳನ್ನು ತೋರಿಸುತ್ತಿವೆ. ಆರ್‌ಬಿಐ ಮುಖ್ಯಸ್ಥರು ಒಬ್ಬೊಬ್ಬರಾಗಿ ಗಂಟು ಮೂಟೆ ಕಟ್ಟಿಕೊಂಡು ಸ್ಥಳ ಖಾಲಿ ಮಾಡುತ್ತಿದ್ದಾರೆ. ಬಡತನ ಮತ್ತು ನಿರುದ್ಯೋಗ ಹೆಚ್ಚುತ್ತಿವೆ ಎಂದು ಆರ್ಥಿಕ ತಜ್ಞರು ಪದೇ ಪದೇ ಘೋಷಣೆ ಮಾಡುತ್ತಿದ್ದಾರೆ. ಬಡವರು ಇನ್ನಷ್ಟು ಬಡತನಕ್ಕೆ ತಳ್ಳಲ್ಪಡುತ್ತಿರುವುದನ್ನು ಮತ್ತು ಕಾರ್ಪೊರೇಟ್ ಶಕ್ತಿಗಳು ಇನ್ನಷ್ಟು ಶ್ರೀಮಂತವಾಗುತ್ತಿರುವುದನ್ನೇ ಸಂಘಪರಿವಾರ ಅಭಿವೃದ್ಧಿಯ ಸಂಕೇತವಾಗಿ ಗುರುತಿಸುತ್ತಿದೆ. ದಲಿತರು, ಶೋಷಿತರು, ದುರ್ಬಲರ ಪರವಾಗಿ ರೂಪಿಸುವ ಯೋಜನೆಗಳಿಗೆ ಕಡಿವಾಣ ಬಿದ್ದಿರುವುದನ್ನು ಮೇಲ್ಜಾತಿಯ ನಾಯಕರು ಸಂಭ್ರಮಿಸುತ್ತಿದ್ದಾರೆ.

ಎಲ್ಲ ಸಮಸ್ಯೆಗಳಿಗೆ ಭಾವನಾತ್ಮಕ ರಾಜಕೀಯದ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಮೋದಿ, ಜೈ ಶ್ರೀರಾಮ್, ರಾಮಾಯಣ, ಪಟೇಲ್ ಎಂಬಿತ್ಯಾದಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ನಡೆಸುತ್ತಿರುವ ಉತ್ತರ ಭಾರತ ಆರೋಗ್ಯ, ಶಿಕ್ಷಣಗಳಲ್ಲಿ ದಿನೇ ದಿನೇ ಹಿಂದಕ್ಕೆ ಚಲಿಸುತ್ತಿದೆ. ಯಾವ ರಾಮನ ಘೋಷಣೆಯೂ ಅಲ್ಲಿನ ಬಡವರ ಬದುಕನ್ನು ಉದ್ಧರಿಸುವಂತೆ ಕಾಣುತ್ತಿಲ್ಲ. ಆದರೆ ಇವೆಲ್ಲವನ್ನೂ ಮುಚ್ಚಿಟ್ಟು, ಕೇಂದ್ರ ಸರಕಾರ ದಕ್ಷಿಣ ಭಾರತದ ಕುರಿತಂತೆ ತಲೆಕೆಡಿಸಿಕೊಳ್ಳುತ್ತಿದೆ. ಕೇರಳದಲ್ಲಿ ನಡೆಯುತ್ತಿರುವ ಹಿಂಸೆ, ಹಿಂದಿಗೆ ಕೇಳಿ ಬರುತ್ತಿರುವ ವಿರೋಧ, ಮೋದಿ ಮತ್ತು ಸಂಘಪರಿವಾರದ ಕೋಮು ರಾಜಕಾರಣಕ್ಕೆ ಎದುರಾಗುತ್ತಿರುವ ತೀವ್ರ ಪ್ರತಿರೋಧ ಇವುಗಳಿಂದ ಹತಾಶೆಗೊಂಡಿರುವ ಕೇಂದ್ರ ಸರಕಾರ, ದಕ್ಷಿಣ ಭಾರತದ ರಾಜ್ಯಗಳ ಕುರಿತಂತೆ ಋಣಾತ್ಮಕ ಮಾತುಗಳನ್ನು ಆಡುತ್ತಿವೆ. ಆದರೆ ಇಂದು ಆರ್ಥಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಯಾವುದೇ ವರದಿಗಳನ್ನು ಅಧ್ಯಯನ ಮಾಡಿದರೂ ದಕ್ಷಿಣ ಭಾರತ ಮುಂಚೂಣಿಯಲ್ಲಿದೆ.

 ಕೇರಳವನ್ನು ಬಿಜೆಪಿ ಸೇರಿದಂತೆ ಸಂಘಪರಿವಾರ ಹಿಂಸಾತಾಂಡವವಾಡುತ್ತಿರುವ ರಾಜ್ಯ ಎಂದು ಬಿಂಬಿಸಲು ಯತ್ನಿಸುತ್ತಾ ಬಂದಿದೆ. ಬಹುಶಃ ಆರೆಸ್ಸೆಸ್‌ನ ಹಿಂಸಾ ರಾಜಕಾರಣವನ್ನು ಇಲ್ಲಿನ ಎಡಪಂಥೀಯರು ಅಷ್ಟೇ ತೀವ್ರವಾಗಿ ಪ್ರತಿರೋಧಿಸುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಕೇರಳ ಎಂದಿಗೂ ಗುಂಪುಹಲ್ಲೆ, ನಕಲಿ ಗೋರಕ್ಷಕರ ಗೂಂಡಾಗಿರಿ ಇತ್ಯಾದಿಗಳಿಗಾಗಿ ಸುದ್ದಿಯಾಗಿಲ್ಲ. ಭಾವನಾತ್ಮಕ ರಾಜಕೀಯವನ್ನು ಬದಿಗಿಟ್ಟು ಅಭಿವದ್ಧ್ದಿಯ ರಾಜಕಾರಣದ ಮೂಲಕ ಗುರುತಿಸುತ್ತಾ ಬಂದ ಕಾರಣಕ್ಕಾಗಿಯೇ ಕೇರಳ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದೆ. ಬಿಜೆಪಿ ಹೇಳುವಂತೆ ಕೇರಳ ಉಗ್ರಗಾಮಿಗಳ ನಾಡೇ ಆಗಿದ್ದಿದ್ದರೆ ಅದು ಶೈಕ್ಷಣಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತಿತ್ತೇ? ಇತ್ತೀಚೆಗಷ್ಟೇ ನೀತಿ ಆಯೋಗವು ತನ್ನ ಎರಡನೇ ಆರೋಗ್ಯ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2015-16ರಿಂದ 2017-18ರ ವರೆಗಿನ ಅವಧಿಯಲ್ಲಿನ ಸಾಧನೆಗಳನ್ನು ಇಲ್ಲಿ ಪರಿಗಣಿಸಲಾಗಿದೆ. ಕೇರಳದ ಕುರಿತಂತೆ ಅಪಪ್ರಚಾರವನ್ನು ಹರಡುತ್ತಿರುವ ಕೇಂದ್ರ ಸರಕಾರಕ್ಕೆ ಈವರದಿಯಲ್ಲಿ ಉತ್ತರವಿದೆ. ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಕಟ್ಟಕಡೆಯ ಸ್ಥಾನದಲ್ಲಿದೆ. ಗೋಮೂತ್ರದಿಂದ ಕ್ಯಾನ್ಸರ್ ವಾಸಿ ಮಾಡುವ, ಗೋವುಗಳಿಂದ ಆಮ್ಲಜನಕ ಹೊರಬರುತ್ತದೆ ಎಂದು ಪ್ರತಿಪಾದಿಸುವ, ಗೋಶಾಲೆಗಳನ್ನು ತೆರೆದು ಕೋಟ್ಯಂತರ ರೂಪಾಯಿಗಳನ್ನು ಬೀದಿಗೆ ಚೆಲ್ಲಿರುವ, ಗೋವುಗಳಿಗಾಗಿಯೇ ಆ್ಯಂಬುಲೆನ್ಸ್‌ಗಳನ್ನು ಹೊರಡಿಸಿರುವ ಆದಿತ್ಯನಾಥ್ ಸರಕಾರ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ ಎನ್ನುವುದೇ ಎಲ್ಲವನ್ನೂ ಹೇಳುತ್ತದೆ. ಹಿಂದುತ್ವ, ಯೋಗ, ಗೋರಕ್ಷಣೆ, ಗೋಶಾಲೆ, ಗೋಪೂಜೆ, ಜೈ ಶ್ರೀರಾಮ್ ಮೊದಲಾದವುಗಳನ್ನೇ ಬಡಬಡಿಸುತ್ತಾ ರಾಜಕೀಯ ನಡೆಸುತ್ತಿರುವ ಆದಿತ್ಯನಾಥ್ ತನ್ನ ರಾಜ್ಯವನ್ನು ಯಾವ ಕಡೆಗೆ ಮುನ್ನಡೆಸುತ್ತಿದ್ದಾರೆ ಎನ್ನುವುದು ನೀತಿ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಿಂದ ಬಹಿರಂಗವಾಗಿದೆ. ತಳಸ್ತರದ ಜನರನ್ನು ಸಂಪೂರ್ಣ ಕೈ ಬಿಟ್ಟು ಮೇಲ್‌ಸ್ತರದ ಜನರನ್ನು ಇನ್ನಷ್ಟು ಪ್ರಬಲರನ್ನಾಗಿಸುತ್ತಾ ಹೋಗುವ ಮೋದಿ ಸರಕಾರದ ಅಭಿವೃದ್ಧಿ ಭವಿಷ್ಯದಲ್ಲಿ ಹಸಿವನ್ನೇ ರೋಗವೆಂದು ಘೋಷಿಸುವ ದಿನಗಳು ದೂರವಿಲ್ಲ. ಬಿಹಾರದಲ್ಲಿ ಮೆದುಳು ರೋಗಕ್ಕೆ ಮಕ್ಕಳು ಬಲಿಯಾಗುವುದನ್ನು ತಡೆಯಬೇಕಾದರೆ ಮೋದಿ ಸರಕಾರಕ್ಕೆ ಅಂಟಿಕೊಂಡಿರುವ ಮೆದುಳು ರೋಗಕ್ಕೆ ಮೊದಲು ಔಷಧಿ ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)