varthabharthi


ವೈವಿಧ್ಯ

ಮೋದಿ ಭಾರತದಲ್ಲಿ ಜಾತಿ ತಾರತಮ್ಯದ ಬಲಿಪಶುಗಳು

ವಾರ್ತಾ ಭಾರತಿ : 30 Jun, 2019
ಪ್ರೊ. ಬಿ. ಪಿ. ಮಹೇಶ ಚಂದ್ರ ಗುರು

ಎಲ್ಲರ ಜೊತೆ, ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ಪೊಳ್ಳು ಭರವಸೆಗಳನ್ನು ನೀಡಿ ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಅಸಹಿಷ್ಣುತೆಯ ಕೂಪಕ್ಕೆ ದಬ್ಬುತ್ತಿರುವ ಕೋಮುವಾದಿಗಳು ಜಗತ್ತಿನಲ್ಲಿ ಶಾಂತಿಯ ತೋಟವೆಂದೇ ಹೆಸರಾಗಿರುವ ಭಾರತವನ್ನು ಆಳುವು ದಿರಲಿ, ಭಾರತದಲ್ಲಿ ಬದುಕುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಇದಕ್ಕಿಂತ ಮಿಗಿಲಾದ ಘನಘೋರ ಬದುಕು ದಮನಿತ ಸಮುದಾಯಗಳಿಗೆ ಇಲ್ಲ. ಆದರೂ ಕೂಡ ಈ ಸಮುದಾಯಗಳ ವಿಘಟನೆ ಮತ್ತು ಹೊಣೆಗೇಡಿತನಗಳಿಂದ ಭಾರತದ ಬಹುತ್ವ, ಜಾತ್ಯತೀತತೆ, ಸಮನ್ವಯತೆ, ಸಾಮೂಹಿಕ ಹಿತ ಮೊದಲಾದ ಮೌಲ್ಯಗಳ ಅವನತಿ ಆರಂಭವಾಗಿದೆ.

ಬುದ್ಧನ ನಾಡು ಭಾರತ ಕರುಣೆ, ಮೈತ್ರಿ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಮೊದಲಾದ ಮಾನವೀಯ ಮೌಲ್ಯಗಳಿಂದ ಜಗತ್ತನ್ನು ನೂರಾರು ವರ್ಷಗಳ ಕಾಲ ಧಮ್ಮಪಥದಲ್ಲಿ ಮುನ್ನಡೆಸಿದ ಖ್ಯಾತಿ ಹೊಂದಿದೆ. ಅನೇಕ ಸಂತರು, ಸಮಾಜ ಸುಧಾರಕರು, ಮುತ್ಸದ್ದಿಗಳು ಭಾರತದಲ್ಲಿ ಹುಟ್ಟಿ ಬೆಳೆದು ವಿಶ್ವಕ್ಕೆ ಶಾಂತಿ ಮತ್ತು ಸಮಾನತೆಗಳ ಸಂದೇಶ ನೀಡಿ ದೇಶದ ಹಿರಿಮೆ-ಗರಿಮೆಗಳನ್ನು ಹೆಚ್ಚಿಸಿದ್ದಾರೆ. ಬಲಪಂಥೀಯ ರಾಜಕಾರಣ ಇಡೀ ವಿಶ್ವವನ್ನು ವಿನಾಶದೆಡೆಗೆ ದಬ್ಬುತ್ತಿರುವ ಈ ಸಂದರ್ಭದಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದ ಮಧ್ಯ ಮಾರ್ಗವನ್ನು ಅನುಸರಿಸಿದ ಮಹನೀಯರ ಬದುಕು ಮತ್ತು ಸಂದೇಶಗಳು ಇಂದು ಪ್ರಸ್ತುತವಾಗಿವೆ. ಎಲ್ಲರ ಜೊತೆ, ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ಪೊಳ್ಳು ಭರವಸೆಗಳನ್ನು ನೀಡಿ ಮಹಿಳೆಯರು ಮತ್ತು ದುರ್ಬಲ ವರ್ಗಗಳನ್ನು ಅಸಹಿಷ್ಣುತೆಯ ಕೂಪಕ್ಕೆ ದಬ್ಬುತ್ತಿರುವ ಕೋಮುವಾದಿಗಳು ಜಗತ್ತಿನಲ್ಲಿ ಶಾಂತಿಯ ತೋಟವೆಂದೇ ಹೆಸರಾಗಿರುವ ಭಾರತವನ್ನು ಆಳುವು ದಿರಲಿ, ಭಾರತದಲ್ಲಿ ಬದುಕುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಇದಕ್ಕಿಂತ ಮಿಗಿಲಾದ ಘನಘೋರ ಬದುಕು ದಮನಿತ ಸಮುದಾಯಗಳಿಗೆ ಇಲ್ಲ. ಆದರೂ ಕೂಡ ಈ ಸಮುದಾಯಗಳ ವಿಘಟನೆ ಮತ್ತು ಹೊಣೆಗೇಡಿತನಗಳಿಂದ ಭಾರತದ ಬಹುತ್ವ, ಜಾತ್ಯತೀತತೆ, ಸಮನ್ವಯತೆ, ಸಾಮೂಹಿಕ ಹಿತ ಮೊದಲಾದ ಮೌಲ್ಯಗಳ ಅವನತಿ ಆರಂಭವಾಗಿದೆ. ಭಾರತದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸುರಕ್ಷಿತವಾಗಿಲ್ಲವೆಂಬ ಮಾತುಗಳು ಜಗತ್ತಿನ ಎಲ್ಲೆಡೆ ಕೇಳಿಬರುತ್ತಿರು ವುದು ಭಾರತೀಯರು ಅವನತಿಯೆಡೆಗೆ ಸಾಗುತ್ತಿರುವುದರ ದ್ಯೋತಕವಾಗಿದೆ.
ರೋಹಿತ್ ವೆಮುಲಾ
ಎರಡು ವರ್ಷಗಳ ಹಿಂದೆ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರತಿಭಾವಂತ ಸಂಶೋಧಕ ರೋಹಿತ್ ವೆಮುಲಾ (ಆಕಸ್ಮಿಕವಾಗಿ ದಲಿತ) ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಸ್ಥಿತಿ ಉಂಟಾಯಿತು. ಅಂದಿನ ಕೇಂದ್ರ ಮಂತ್ರಿ ಬಂಡಾರು ದತ್ತಾತ್ರೇಯ, ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ಸ್ಮತಿ ಇರಾನಿ, ಕುಲಪತಿ, ಡೀನ್ ಮೊದಲಾದವರ ಹೃದಯಹೀನ ಧೋರಣೆ ಮತ್ತು ವರ್ತನೆಗಳಿಂದ ರೋಹಿತ್ ವೆಮುಲಾ ಜಾತಿಗ್ರಸ್ಥ ಭಾರತಕ್ಕೆ ಅತ್ಯಂತ ನೋವಿನಿಂದ ವಿದಾಯ ಹೇಳಬೇಕಾಯಿತು. ಕೆಲವೇ ತಿಂಗಳ ಅಂತರದಲ್ಲಿ ಬಂಡಾರು ದತ್ತಾತ್ರೇಯರವರ ಮಗ ವೈದ್ಯಕೀಯ ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿ ತಂದೆ ತಾಯಿಗಳ ಕಣ್ಮುಂದೆ ಲೋಕಕ್ಕೆ ವಿದಾಯ ಹೇಳಿದ ಸಂಗತಿ ನಮ್ಮ ಕಣ್ಮುಂದೆ ಇದೆ. ಯಾರದೋ ಪಾಪಕ್ಕೆ ಅಮಾಯಕ ಮಕ್ಕಳು ಬಲಿಯಾಗುವುದನ್ನು ನಾವು ಸಹಿಸಲು ಸಾಧ್ಯವಿಲ್ಲ.
ಡಾ.ಪಾಯಲ್ ತಡ್ವಿ
ಇತ್ತೀಚೆಗೆ ಡಾ.ಪಾಯಲ್ ತಡ್ವಿ ಎಂಬ 26 ವರ್ಷದ ಪರಿಶಿಷ್ಟ ಪಂಗಡದ ಪ್ರತಿಭಾವಂತ ಹಾಗೂ ವಿವಾಹಿತ ವೈದ್ಯಕೀಯ ವಿದ್ಯಾರ್ಥಿನಿ ಮುಂಬೈನ ಪ್ರತಿಷ್ಠಿತ ಟಿ.ಎನ್.ಟೋಪಿವಾಲಾ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಕೈಗೊಂಡಿದ್ದಳು. ಹಿರಿಯ ಪ್ರಾಧ್ಯಾಪಕರು ಮತ್ತು ಸಹೋದ್ಯೋಗಿಗಳು ಈಕೆಯ ಸಾಮಾಜಿಕ ಹಿನ್ನೆಲೆಯನ್ನು ಅರಿತು ಬೇಕೆಂತಲೇ ಈಕೆಗೆ ಸಹಿಸಲಸಾಧ್ಯವಾದ ಮಾನಸಿಕ ಕಿರುಕುಳ ನೀಡಿದರು. ಸುಮಾರು 6 ತಿಂಗಳ ಕಾಲ ಸತತ ಮಾನಸಿಕ ಕಿರುಕುಳ, ಜಾತಿ ತಾರತಮ್ಯ, ವರ್ಣಬೇಧ ಮೊದಲಾದ ಅಮಾನವೀಯ ಪಿಡುಗುಗಳಿಗೆ ಅಮಾಯಕ ಹೆಣ್ಣುಮಗಳು ಗುರಿಯಾಗಿದ್ದಳು. ಈಕೆ ತನ್ನ ಪತಿಯೊಂದಿಗೆ ತೆರಳಿ ವಿಭಾಗದ ಮುಖ್ಯಸ್ಥರಿಗೆ ತಾನು ಅನುಭವಿಸಿದ ಕಿರುಕುಳವನ್ನು ವಿಸ್ತೃತವಾಗಿ ತಿಳಿಸಿದರೂ ಸಹ ಮನುವಾದಿ ಮುಖ್ಯಸ್ಥನಿಗೆ ಈಕೆಯ ಜೀವಕ್ಕೆ ಬೆಲೆ ಕೊಡಬೇಕು ಮತ್ತು ಈಕೆಯನ್ನು ಉಳಿಸಬೇಕು ಎಂಬ ಮನಸ್ಸು ಬಾರದಿರಲು ಕಾರಣ ನಮ್ಮ ದೇಶದ ಜಾತಿ ವ್ಯವಸ್ಥೆ.
ಸಾಯುವ 6 ತಿಂಗಳ ಮೊದಲೇ ಈ ಹೆಣ್ಣು ಮಗಳು ರೋಮಿಲ್ ಕಾಕಡ್ ಎಂಬ ಸಹಪಾಠಿಯೊಂದಿಗೆ ತನ್ನ ದುಃಖ ದುಮ್ಮಾನಗಳನ್ನು ಹೇಳಿಕೊಂಡು ತಾನು ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಮೇ 22, 2019ರಂದು ಡಾ.ಪಾಯಲ್ ತಡ್ವಿ ಹಿರಿಯ ಸಹೋದ್ಯೋಗಿಗಳಾದ ಡಾ.ಅಂಕಿತ ಖಂಡೇಲ್‌ವಾಲ್, ಡಾ.ಹೇಮಾ ಅಹುಜಾ ಮತ್ತು ಡಾ.ಭಕ್ತಿ ಮೆಹರೆ ಎಂಬವರ ಅಮಾನುಷ ದಮನಕಾರಿ ಪ್ರವೃತ್ತಿಗಳನ್ನು ಜೀರ್ಣಿಸಿಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾದಳು. ಇದಕ್ಕೆ ಕಾರಣರಾದ ಮೂವರು ರಕ್ಕಸರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಿದ್ದಾರೆ. ಈ ಘಟನೆ ದೇಶದ ಪ್ರಜ್ಞಾವಂತರ ಮನಸ್ಸನ್ನು ಘಾಸಿಗೊಳಿಸಿ ಮೋದಿ ಭಾರತದ ಅಸಲಿತನವನ್ನು ಜಗತ್ತಿನ ಮುಂದೆ ಮಂಡಿಸಿದೆ.
ಇತರ ಸಹೋದ್ಯೋಗಿಗಳಂತೆ ಮುಕ್ತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡುವ, ಪ್ರಾಯೋಗಿಕ ಜ್ಞಾನ ಗಳಿಸುವ ಮತ್ತು ಉನ್ನತ ಶಿಕ್ಷಣವನ್ನು ಮಾನವೀಯ ಪರಿಸರದಲ್ಲಿ ಪಡೆಯುವ ಅವಕಾಶದಿಂದ ವಂಚಿತಳಾಗಲು ಈ ಹೆಣ್ಣುಮಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎಂಬ ಕಾರಣವೇ ಪ್ರಮುಖವಾಗಿತ್ತು. ಹುಟ್ಟಿನಿಂದಲೂ ಆಶಾವಾದಿಯಾಗಿ ಯಾವುದೇ ತೊಡಕುಗಳಿಲ್ಲದೆ ಉನ್ನತ ಶಿಕ್ಷಣವನ್ನು ಮುಂದುವರಿಸಿದ ನನ್ನ ಮಗಳಿಗೆ ಏಕೆ ಇಂತಹ ಅನ್ಯಾಯ? ಎಂದು ಅವರ ತಾಯಿ ಅಬೇದ ಪ್ರಶ್ನಿಸುತ್ತಾರೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಮೊದಲಾದ ಅಲಕ್ಷಿತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ, ಉನ್ನತ ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಜಾತಿ ತಾರತಮ್ಯಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಉನ್ನತ ಶಿಕ್ಷಣದ ಕೇಸರಿಕರಣವೇ ಪ್ರಮುಖ ಕಾರಣವಾಗಿದೆ. ಇಂತಹ ಕೇಸರಿ ಪಡೆಗಳ ನಾಯಕ ಪ್ರಧಾನಿ ಮೋದಿಯವರು ಅಮಾಯಕ ದಮನಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಂಡೂ ಕಾಣದಂತಿರುವುದು ಶೋಷಿತರ ಬಹುದೊಡ್ಡ ದೌರ್ಭಾಗ್ಯವಾಗಿದೆ.
ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಮಾಜಿ ಮುಖ್ಯಸ್ಥ ಪ್ರೊ. ಸುಖದೇವ ಥೋರಟ್ ಸಮಿತಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜರುಗುವ ಜಾತಿ ಪ್ರೇರಿತ ದುರಾಚಾರಗಳನ್ನು ತಡೆಗಟ್ಟಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿ ನೀಡಿದ ವರದಿ ಅಂದಿನ ಮಂತ್ರಿ ಸ್ಮತಿ ಇರಾನಿ ಅವರ ನಿರ್ಲಕ್ಷದಿಂದಾಗಿ ಕಡೆಗಣಿಸಲ್ಪಟ್ಟಿತ್ತು. ಇವರ ದಿವ್ಯ ನಿರ್ಲಕ್ಷದಿಂದ ಇಂತಹ ಅಪಚಾರಗಳು ಮತ್ತಷ್ಟು ಹೆಚ್ಚಿ ಅಮಾಯಕ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಎಡೆಮಾಡಿಕೊಟ್ಟಿತು. ಅದೇ ಇರಾನಿ ಇಂದು ಅಮೇಠಿ ಕ್ಷೇತ್ರದಿಂದ ಗೆದ್ದು ಮತ್ತೊಮ್ಮೆ ಕೇಂದ್ರದ ಮಂತ್ರಿ ಸ್ಥಾನವನ್ನು ಅಲಂಕರಿಸಿರುವುದು ಭಾರತೀಯ ಪ್ರಜಾಸತ್ತೆ ಎತ್ತ ಸಾಗುತ್ತಿದೆ ಎಂಬುದರ ದ್ಯೋತಕವಾಗಿದೆ. 2019ರ ಮಹಾಚುನಾವಣೆಯಲ್ಲಿ ಜಯಶೀಲರಾಗಿರುವ ಶೇ.42ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂಬ ಇತ್ತೀಚಿನ ಸಮೀಕ್ಷಾ ವರದಿ ಆಘಾತಕಾರಿಯಾಗಿದೆ. ಗಾಂಧಿ ನಾಡಿನಲ್ಲಿ ಗೋಡ್ಸೆಗಳು ಮೋದಿಯವರ ನೇತೃತ್ವದಲ್ಲಿ ರಾಜಕೀಯವಾಗಿ ವಿಜೃಂಭಿಸುತ್ತಿರುವುದು ಇಂತಹ ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಓಂಕಾರ್ ಬರಿದಾಬಾದ್
ಇತ್ತೀಚೆಗೆ ಹುಬ್ಬಳ್ಳಿಯ ನಿವಾಸಿ ಹರ್ಯಾಣದ ರೋಹ್ತಕ್ ವೈದ್ಯಕೀಯ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಹಲವಾರು ಕನಸುಗಳೊಂದಿಗೆ ಅಧ್ಯಯನ ನಡೆಸುತ್ತಿದ್ದ ಡಾ.ಓಂಕಾರ್ ಬರಿದಾಬಾದ್ ಎಂಬ ಮತ್ತೋರ್ವ ಶೋಷಿತ ಸಮುದಾಯದ ವ್ಯಕ್ತಿಯನ್ನು ಆತನ ಜಾತಿಯ ಕಾರಣಕ್ಕಾಗಿ ಡಾ.ಗೀತ ಗಥವಾಲ ಎಂಬ ವಿಭಾಗದ ಮುಖ್ಯಸ್ಥೆ ಆತ್ಮಹತ್ಯೆಗೆ ದಬ್ಬಿದ ಪ್ರಕರಣ ಅಮಾನುಷವಾದುದು. ದಲಿತನೆಂಬ ಕಾರಣಕ್ಕಾಗಿ ಸರಿಯಾಗಿ ಮಾರ್ಗದರ್ಶನ ಮಾಡದೇ ಆತನಿಗೆ ಸಂಶೋಧನೆಯನ್ನು ಸಮರ್ಪಕವಾಗಿ ಮುಂದುವರೆಸಲು ಮುಖ್ಯಸ್ಥೆ ಅವಕಾಶ ನೀಡಲಿಲ್ಲ. ಕಾಲೇಜಿನ ಪ್ರಾಚಾರ್ಯರನ್ನು ಭೇಟಿ ಮಾಡಿ ತನಗೆ ಉಂಟಾಗುತ್ತಿದ್ದ ಅನ್ಯಾಯವನ್ನು ಹೇಳಿಕೊಂಡರೂ ಸಹ ದಲಿತ ವೈದ್ಯನೊಬ್ಬ ಸತ್ತರೆ ತನಗೇನೂ ನಷ್ಟವಿಲ್ಲ ಎಂಬ ಧೋರಣೆಯಿಂದ ಕಿರುಕುಳ ಹೆಚ್ಚಲು ನೇರವಾಗಿ ಕಾರಣರಾದರು.
ಇದಕ್ಕೂ ಮುನ್ನ ವಿಭಾಗದ ಮುಖ್ಯಸ್ಥೆ ಮತ್ತಿತರ ಕೋಮುವಾದಿ ಮನಸ್ಸಿನ ಸಹೋದ್ಯೋಗಿಗಳು ಬರಿದಾಬಾದ್‌ರವರ ಮೇಲೆ ಮಗುವೊಂದನ್ನು ಆಸ್ಪತ್ರೆಯಲ್ಲಿ ಅಪಹರಿಸಿದ ಪ್ರಕರಣದಲ್ಲಿ ಅಪರಾಧಿಯೆಂದು ಬಿಂಬಿಸಿದರು. ವಾರ್ಡ್‌ನಲ್ಲಿರುವ ಮಕ್ಕಳನ್ನು ಜೋಪಾನವಾಗಿ ರಕ್ಷಿಸುವ ಜವಾಬ್ದಾರಿ ಆಡಳಿತಾತ್ಮಕ ಸಿಬ್ಬಂದಿಗೆ ಸೇರಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುವ ಅನಿವಾರ್ಯತೆ ಇಲ್ಲವೆಂಬ ಕನಿಷ್ಟ ಸತ್ಯ ಮೇಲ್ಜಾತಿ ವೈದ್ಯರು ಮತ್ತು ಅಧಿಕಾರಿಗಳಿಗೆ ಮನವರಿಕೆಯಾಗದಿರುವುದು ನಮ್ಮ ವ್ಯವಸ್ಥೆಯ ಮೇಲೆ ಹಿಡಿದಿರುವ ಜಾತಿ ಭೂತಕ್ಕೆ ಸಾಕ್ಷಿಯಾಗಿದೆ. ಇಂತಹ ಅಮಾಯಕ ವಿದ್ಯಾರ್ಥಿಯ ಮೇಲೆ ಮಗು ಅಪಹರಣ ನೆಪವೊಡ್ಡಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿರುವುದರ ಹಿಂದೆ ಜಾತಿವಾದಿಗಳ ಬಹುದೊಡ್ಡ ಹುನ್ನಾರ ಎದ್ದು ಕಾಣುತ್ತದೆ.
ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿ ಅಮಾನವೀಯತೆಯನ್ನು ಪ್ರದರ್ಶಿಸಿದ ವಿಭಾಗದ ಮುಖ್ಯಸ್ಥೆಯನ್ನು ತನ್ನ ಆತ್ಮಹತ್ಯೆಗೆ ನೇರವಾಗಿ ಕಾರಣರೆಂದು ಡೆತ್‌ನೋಟ್ ಬರೆದಿಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ತನ್ನ ಸಹೋದರಿಯ ವಿವಾಹದ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಂದಿದ್ದ ಸೂಟಿನ ಬಟ್ಟೆಯನ್ನೇ ಈತ ಆತ್ಮಹತ್ಯೆಗೆ ಬಳಸಿಕೊಂಡದ್ದು ವಿಪರ್ಯಾಸವಾಗಿದೆ. ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗದ ಅಂತಿಮಘಟ್ಟವಾದ ಪ್ರೌಢಪ್ರಬಂಧ ಮಂಡನೆಗೆ ಡಾ.ಗೀತ ಗಥವಾಲ ಅವಕಾಶ ನೀಡದ ಕಾರಣ ತೀವ್ರವಾಗಿ ಹತಾಶೆಗೊಂಡ ಬರಿದಾಬಾದ್‌ನನ್ನು ಅಮಾನುಷವಾಗಿ ಆತ್ಮಹತ್ಯೆಗೆ ದಬ್ಬಿದ ಬಗೆಯನ್ನು ನಾಗರಿಕ ಸಮಾಜ ಮನ್ನಿಸುವುದಿಲ್ಲ. ಈತನ ಸಹಪಾಠಿಗಳು ಬರಿದಾಬಾದ್ ಜಾತಿ ವ್ಯವಸ್ಥೆಯ ಹುನ್ನಾರಗಳ ಬಲಿಪಶುವಾದನೆಂದು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಭಾರತೀಯ ದಂಡಸಂಹಿತೆ ಸೆಕ್ಷನ್306 ರೀತ್ಯ ಗೀತ ಗಥವಾಲ ಮೇಲೆ ಪೊಲೀಸರು ಹಲವಾರು ಸರಣಿ ಸತ್ಯಾಗ್ರಹಗಳು ಮತ್ತು ಒತ್ತಡಗಳ ಕಾರಣ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಮತ್ತು ಸುರೇಶ್ ಅಂಗಡಿ ಅವರ ಗಮನಕ್ಕೆ ಈ ವಿಚಾರ ಬಂದಿದ್ದರೂ ಸಹ ಅಧಿಕಾರದ ಅಮಲಿನಲ್ಲಿ ನೊಂದವರ ಕಣ್ಣೀರನ್ನು ಒರೆಸುವ ಕೆಲಸಕ್ಕೆ ಅವರು ಇಂದಿಗೂ ಕೂಡ ಮುಂದಾಗಿಲ್ಲ.
ಪ್ರತಾಪ್ ಬೆತ್ತಲೆ ಪ್ರಕರಣ
ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೆಕಟ್ಟೆಯಲ್ಲಿ ಪ್ರತಾಪ್ ಎಂಬ ದಲಿತ ಯುವಕನನ್ನು ಅಸ್ಪಶ್ಯನೊಬ್ಬ ಶನಿ ದೇವಾಲಯ ಪ್ರವೇಶ ಮಾಡಿದನೆಂಬ ಕಾರಣಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆತನನ್ನು ಮನಸಾರೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿರುವುದು ಮತ್ತೊಂದು ಆಘಾತಕಾರಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣವಾಗಿದೆ. ಪ್ರತಾಪ್ ಉನ್ನತ ಅಧಿಕಾರಿಯಾಗಿ ಜನ ಸೇವೆ ಮಾಡಬೇಕೆಂಬ ಕನಸನ್ನು ಕಂಡು ಅತ್ಯಂತ ಜವಾಬ್ದಾರಿಯುತವಾಗಿ ಪ್ರವೇಶ ಪರೀಕ್ಷೆಗೆ ಸಿದ್ಧನಾಗಿದ್ದನು. ಜೂನ್ 2, 2019ರ ಸ್ಪರ್ಧಾತ್ಮಕ ಪರೀಕ್ಷೆಗೆ ಅನಿವಾರ್ಯ ಕಾರಣದಿಂದಾಗಿ ತಡವಾಗಿ ಹೋದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಅಲ್ಲದೆ ಹತಾಶೆಗೊಂಡು ರಾತ್ರಿ ವೇಳೆ ತನ್ನ ಮೋಟಾರ್ ಸೈಕಲಿನಲ್ಲಿ ಮೈಸೂರಿನಿಂದ ಗುಂಡ್ಲುಪೇಟೆಗೆ ಪ್ರಯಾಣಿಸುತ್ತಿದ್ದಾಗ ರಾಘವಾಪುರ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಲವರು ಈತನ ಮೇಲೆ ದಾಳಿ ನಡೆಸಿ ಹಣ, ಕೈಗಡಿಯಾರ, ಉಂಗುರ ಮೊದಲಾದವುಗಳನ್ನು ದೋಚಿದರು. ಅಲ್ಲದೇ ಈತನ ಮೋಟಾರ್ ಸೈಕಲನ್ನು ಬೇಕಂತಲೇ ಜಖಂಗೊಳಿಸಿ ಈತನನ್ನು ಅಸಹಾಯಕ ಸ್ಥಿತಿಗೆ ದಬ್ಬಿದರು. ಈತ ಕಷ್ಟಪಟ್ಟು ಕೆಬ್ಬೆಕಟ್ಟೆಯವರೆಗೂ ಗಾಡಿಯನ್ನು ತಳ್ಳಿಕೊಂಡು ಮುಂದೆ ಒಂದು ಹೆಜ್ಜೆ ಇಡದಷ್ಟು ನಿಶ್ಯಕ್ತಿ ಹೊಂದುತ್ತಾನೆ. ರಸ್ತೆ ಎಡಬದಿಯಲ್ಲಿ ಶನಿ ದೇಗುಲ ನೋಡಿ ಇದೊಂದು ಸಾರ್ವಜನಿಕ ಸ್ಥಳವಾದ್ದರಿಂದ ಹೇಗಾದರೂ ಮಾಡಿ ಒಂದು ರಾತ್ರಿ ಕಷ್ಟಪಟ್ಟು ಕಳೆದು ಮರುದಿವಸ ಮುಂಜಾನೆ ತನ್ನ ಊರಿಗೆ ತೆರಳುವ ಆಸೆಯಿಂದ ಅಲ್ಲಿ ಆಶ್ರಯಪಡೆಯುತ್ತಾನೆ. ಊಟ, ನಿದ್ರೆ, ನೀರು ಯಾವುದೂ ಇಲ್ಲದೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ಪ್ರತಾಪನನ್ನು ದೇವಾಲಯದ ಪೂಜಾರಿ ದಲಿತನ ಪ್ರವೇಶದಿಂದ ದೇಗುಲದ ಪರಿಸರ ಮಾಲಿನ್ಯಗೊಂಡಿತು ಎಂದು ಕೋಪಗೊಂಡು ಸ್ಥಳೀಯರ ಸಹಾಯದಿಂದ ಮನಸೋ ಇಚ್ಛೆ ಥಳಿಸಿ ಈತನ ಬಟ್ಟೆ ಬಿಚ್ಚಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಅಮಾನುಷ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಕನಸುಗಾರ ಪ್ರತಾಪನಿಗೆ ಮಾನಸಿಕ ಅಸ್ವಸ್ಥನೆಂಬ ಹಣೆಪಟ್ಟಿ ನೀಡಿ ಆತನನ್ನು ಜಾತಿ ಕಾರಣಕ್ಕಾಗಿ ಹೀನಾಯವಾಗಿ ನಡೆಸಿಕೊಂಡ ಜನರು ನಿಜವಾಗಿಯೂ ಸವರ್ಣೀಯರಲ್ಲ, ಅವರ್ಣಿಯರು ಮತ್ತು ಮಾನಸಿಕ ಅಸ್ವಸ್ಥರು.
ಈ ಎಲ್ಲ ಘಟನೆಗಳ ಹಿಂದೆ ಪ್ರಭುತ್ವದ ಮಾನಸಿಕ ಅಸ್ವಸ್ಥತೆ ಮತ್ತು ಹೊಣೆಗೇಡಿತನಗಳು ಪ್ರಮುಖ ಕಾರಣಗಳಾಗಿವೆ. ಕಳೆದ ನಾಲ್ಕಾರು ವರ್ಷಗಳಿಂದ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮೊದಲಾದ ಅಲಕ್ಷಿತ ಜನವರ್ಗಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳಿಗೆ ಪ್ರೇರಣೆ ನೀಡುತ್ತಿರುವವರು ನಮ್ಮ ನಡುವೆಯೇ ಇರುವ ಕೋಮುವಾದಿಗಳೆಂದರೆ ತಪ್ಪಾಗಲಾರದು. ಈ ಎಲ್ಲ ಬಗೆಯ ಜಾತಿ ಪ್ರೇರಿತ ಆತ್ಮಹತ್ಯೆಗಳು, ಹಲ್ಲೆಗಳು, ಸುಲಿಗೆಗಳು ಮತ್ತು ಕೊಲೆಗಳ ಹಿಂದೆ ಹಿಂದೂ ಧರ್ಮದ ಪರಮ ರಕ್ಷಕರೆಂದು ಬೊಬ್ಬೆ ಹೊಡೆಯುವ ಅಬ್ಬರದ ದೇಶಪ್ರೇಮಿಗಳಾದ ಮನುವಾದಿಗಳೇ ಇದ್ದಾರೆ. ಮೋದಿಯವರು ಮೇಲ್ಜಾತಿ ಪ್ರಭುತ್ವದ ನಾಯಕರಾಗಿಯಷ್ಟೇ ಉಳಿಯದೇ ಸಮಸ್ತ ಭಾರತೀಯರ ರಕ್ಷಕರಾಗಿ ಜವಾಬ್ದಾರಿಯುತವಾಗಿ ಪ್ರಧಾನಿ ಹುದ್ದೆಯನ್ನು ನಿರ್ವಹಿಸಬೇಕು. ಮೋದಿಯವರು ನಮ್ಮ ಹಿಂದಿದ್ದಾರೆ ಎಂಬ ಭ್ರಮೆಯಿಂದ ಕೋಮುವಾದಿಗಳು ಮತ್ತು ಜಾತಿವಾದಿಗಳು ಇಂತಹ ದಬ್ಬಾಳಿಕೆಗಳನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಗೆಲ್ಲಲೇ ಬೇಕಾದವರು ಚುನಾವಣೆಯಲ್ಲಿ ಸೋತಿದ್ದಾರೆ, ಸೋಲಲೇ ಬೇಕಾದವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ಮಾನವೀಯತೆಗಳ ಅವನತಿಯ ಸಂಕೇತವಾಗಿದೆ. ಇನ್ನು ಮುಂದಾದರೂ ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಹೃದಯವಂತಿಕೆಗಳು ಭಾರತವನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)