varthabharthi


ಬುಡಬುಡಿಕೆ

ಈ ಬಾರಿಯಾದರೂ ಬೀಳತ್ತ!?

ವಾರ್ತಾ ಭಾರತಿ : 7 Jul, 2019
ಚೇಳಯ್ಯ, chelayya@gmail.com

ಹಿರಿಯರೊಬ್ಬರು ಆಕಾಶ ನೋಡುತ್ತಾ ಹತಾಶೆಯಿಂದ ಹೇಳಿದರು ‘‘ಕಾದು ಕಾದು ಸಾಕಾಯಿತು. ಈ ಬಾರಿಯಾದರೂ ಬೀಳತ್ತ?’’

ಪತ್ರಕರ್ತ ಎಂಜಲು ಕಾಸಿ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ ‘‘ಸಾರ್...ಗುಜರಾತ್, ಒರಿಸ್ಸಾದಲ್ಲಿ ಚಂಡಮಾರುತ ಇದೆ....ಅದರ ಪರಿಣಾಮವಾಗಿ ಈ ಬಾರಿ ಬೀಳುವ ಸಾಧ್ಯತೆಗಳಿವೆ. ಹವಾಮಾನ ಇಲಾಖೆಯವರೂ ಭರವಸೆ ಕೊಟ್ಟಿದ್ದಾರೆ....’’

 ‘‘ಈ ಹವಾಮಾನ ಇಲಾಖೆಯವರ ಮಾತುಗಳನ್ನು ನಂಬಿ ಪದೇ ಪದೇ ಅವಮಾನವಾಗುತ್ತಿದೆ ಕಣಪ್ಪ...ಗುಜರಾತ್‌ನಲ್ಲಿ ಚಂಡಮಾರುತ ಬಂದರೆ ಕರ್ನಾಟಕದಲ್ಲಿ ಅದು ಪರಿಣಾಮ ಬೀರುತ್ತೆ ಅಂತನ್ನಿಸಲ್ಲ....ಬೀಳುವುದಿದ್ದರೆ ದಿಲ್ಲಿಯಲ್ಲಿ ಚಂಡ ಮಾರುತ ಬಂದಾಗಲೇ ಬೀಳಬೇಕಾಗಿತ್ತು....’’ ವೃದ್ಧರು ನಿರಾಶೆಯ ಧ್ವನಿಯಲ್ಲಿ ಹೇಳಿದರು.

‘‘ದಿಲ್ಲಿಯಲ್ಲಿ ಚಂಡ ಮಾರುತ ಯಾವಾಗ ಬಂದಿರುವುದು ಸಾರ್...’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಅದೇ ಕಣ್ರೀ...ಮೇ 23 ಚುನಾವಣಾ ಫಲಿತಾಂಶ ಮೋದಿ ಚಂಡಮಾರುತ ಬಂದಾಗಲೇ ಬೀಳಬೇಕಾಗಿತ್ತು....ಆಗ ಬಿದ್ದಿಲ್ಲ...ಅಂದರೆ ಈಗ ಬೀಳುವುದೆಲ್ಲಿಂದ ಬಂತು...’’

‘‘ಆಕಾಶದಲ್ಲಿ ಕಪ್ಪು ಮೋಡಗಳಿವೆ ಸಾರ್...ಹೆದರಬೇಡಿ...ಬೀಳಬಹುದು....’’ ಕಾಸಿ ಸಮಾಧಾನಿಸಿದ. ಆದರೆ ಅವನಿಗೆ ಮೋದಿ ಪ್ರಧಾನಿಯಾದುದಕ್ಕೂ ಮಳೆ ಬೀಳುವುದಕ್ಕೂ ಏನು ಸಂಬಂಧ ಎಂದು ಅರ್ಥವಾಗಲಿಲ್ಲ. ‘‘ಮೋದಿ ಚಂಡ ಮಾರುತದಿಂದ ಮಳೆ ಬೀಳತ್ತೆ ಅಂತೀರಾ?’’ ಕಾಸಿ ಕೇಳಿದ.

‘‘ಬೀಳಬೇಕಾಗಿತ್ತು...ಬೀಳುತ್ತೆ ಎಂದು ನಾನು ಬಟ್ಟೆ ಬರೆ ಹೊಲಿಸಿ ಇಟ್ಟಿದ್ದೆ. ಆದರೆ ಬೀಳಲೇ ಇಲ್ಲ....ಇದೀಗ ಮತ್ತೆ ಬೀಳುವ ಥರಾ ಕಾಣುತ್ತೆ... ಬಟ್ಟೆ ಇಸ್ತ್ರಿ ಹಾಕಿ ಇಡುವುದಕ್ಕೆ ಕೆರಂದ್ಲಾಜೆ ಅವರಿಗೆ ಹೇಳಿದ್ದೇನೆ....ಬಿದ್ದರೆ ಬಿದ್ದೀತು....’’ ವೃದ್ಧರು ಗೊಣಗತೊಡಗಿದರು.

ಮಾತಿಗೆ ಪರಸ್ಪರ ತಾಳೆ ಇರಲಿಲ್ಲ. ‘‘ಸಾರ್...ಮಳೆ ಬಿದ್ದರೆ ಗದ್ದೆಯಲ್ಲಿ ಬೀಜ ಬಿತ್ತಬೇಕು. ಅದು ಬಿಟ್ಟು ಬಟ್ಟೆಗೆ ಇಸ್ತ್ರಿ ಹಾಕಿಟ್ಟಿದ್ದೀರಲ್ಲ....ಇದೇನು ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ. ವೃದ್ಧರು ಒಮ್ಮೆಲೆ ಅಸಹನೆಯಿಂದ ತಲೆಯೆತ್ತಿ ಹೇಳಿದರು ‘‘ಮಳೆ ಯಾರಿಗೆ ಬೇಕ್ರಿ? ಸರಕಾರ ಬೀಳತ್ತಾ ಎಂದು ಕೇಳಿದೆ. ಈ ಬಾರಿ ಬೀಳದೇ ಇದ್ರೆ...ನಾನಂತೂ ಸುಮ್ಮನಿರುವವನಲ್ಲ. ಇನ್ನೇನು ಬಿತ್ತು ಎಂದು ಪ್ರಮಾಣವಚನಕ್ಕೆ ಸಿದ್ಧ ಆದ್ರೆ....ಈ ಬಾರಿ ಬೀಳಲ್ಲ ಮುಂದಿನ ಬಾರಿ....ಎಂದು ಭಿನ್ನಮತೀಯರು ಆಸೆ ತೋರಿಸೋದು....ಈ ಬಾರಿ ಬೀಳಲೇ ಬೇಕು....’’

ಕಾಸಿ ಬೆಚ್ಚಿ ವೃದ್ಧರ ಮುಖವನ್ನು ನೋಡಿದರೆ ಯಡಿಯೂರಪ್ಪ! ‘‘ಸಾರ್...ಬಿದ್ದೇ ಬೀಳತ್ತೆ ಸಾರ್....ಬಟ್ಟೆ ಹಾಕ್ಕೊಂಡು, ಬುಟ್ಟಿ ಹಿಡ್ಕೊಂಡು ರೆಡಿಯಾಗಿರಿ ಸಾರ್....’’ ಎಂದವನೇ ಮೆಲ್ಲಗೆ ಅಲ್ಲಿಂದ ಕಾಲು ಕಿತ್ತ.

***

ಕಾಸಿ ನೇರವಾಗಿ ಕೆರಂದ್ಲಾಜೆ ಅವರ ಮನೆಗೆ ನಡೆದ ‘‘ಮೇಡಂ...ಕೇಂದ್ರ ಬಜೆಟ್ ಬಗ್ಗೆ ನಿಮ್ಮ ಅಭಿಪ್ರಾಯ?’’

ಕಾಸಿ ಕೇಳಿದ್ದೇ ತಡ ‘‘ಏಕೀ ಮಿನಿಟ್...ಏಕೀ ಮಿನಿಟ್....ಈ ಎರಡು ಬಟ್ಟೆಗಳಿಗೆ ಇಸ್ತ್ರಿ ಹಾಕಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ದೇನೆ...ನಿಮಗೆ ಗೊತ್ತಲ್ಲ ಈ ಬಾರಿ ಬಿದ್ದೇ ಬೀಳತ್ತೆ....’’ ಎನ್ನುತ್ತಾ ಅವಸರವಸರವಾಗಿ ಇಸ್ತ್ರಿ ಹಾಕಿ ಮುಗಿಸಿ ಕಾಸಿ ಮುಂದೆ ಬಂದು ಕೂತರು.

‘‘ಮೇಡಂ ಬಜೆಟ್....’’

‘‘ಏಕೀ ಮಿನಿಟ್...ಏಕೀ ಮಿನಿಟ್...’’ ಎಂದು ತಮ್ಮ ಸೀರೆ ಸರಿಪಡಿಸಿಕೊಂಡವರೇ ‘‘ನಮ್ಮ ಗೋಮಾತೆಯನ್ನು ಕದ್ದುಕೊಂಡು ಹೋಗುತ್ತಾ ಇದ್ದಾರೆ....ಅವರ ಕೈ ಕಡಿತೇವೆ...ಕಾಲು ಕಡಿತೇವೆ...ನಾಲಗೆ ಕಡಿತೇವೆ....ಟೆರರಿಸಂಕೋ ಕನಕ್ಷನ್ ಹೇ...ಬಹುತ್ ಬಡಾ ಗೊಟಾಲಾ ಹೇ...’’

‘‘ಮೇಡಂ ಬಜೆಟ್...’’ ಕಾಸಿ ನೆನಪಿಸಿದ.

‘‘ಏಕೀ ಮಿನಟ್...ಏಕೀ ಮಿನಟ್...’’ ಕೆರಂದ್ಲಾಜೆಯವರು ಮುಂದುವರಿಸಿದರು.

‘‘ಮೇಡಂ...ಕೇಂದ್ರ ಸರಕಾರ ಬ್ಯಾಂಕ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಆದೇಶಿಸಿದೆ. ನೀವು ನೋಡಿದರೆ ಹಿಂದಿಯ ಹಿಂದೆ ಬಿದ್ದಿದ್ದೀರಿ....’’ ಕಾಸಿ ಮೆಲ್ಲಗೆ ತಿವಿದ.

 ‘‘ನೋಡ್ರೀ...ಸದನದಲ್ಲಿ ನನ್ನ ಹಿಂದಿ ನೋಡಿ ಕಂಗಾಲಾಗಿ, ಹಿಂದಿಯ ಮಾನ ಉಳಿಸುವುದಕ್ಕೋಸ್ಕರ ಕನ್ನಡಿಗರು ಯಾವ ಕಾರಣಕ್ಕೂ ಹಿಂದಿಯಲ್ಲಿ ಮಾತನಾಡಬಾರದು, ಹಿಂದಿಯಲ್ಲಿ ಬರೆಯಬಾರದು ಎಂದು ಮೋದಿಯವರು ಶಾಸನವನ್ನು ಮಾಡಿದ್ದಾರೆ. ಇದು ಹಿಂದಿ ಹೇರಿಕೆಯ ವಿರುದ್ಧ ನನ್ನ ಪ್ರಯತ್ನಕ್ಕೆ ಸಿಕ್ಕಿದ ಜಯವಾಗಿದೆ...’’

‘‘ಅಂದರೆ ಇನ್ನು ಮುಂದೆ ಬ್ಯಾಂಕ್‌ನಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆದು ಕನ್ನಡಿಗರು ಉದ್ಯೋಗ ಪಡೆಯಬಹುದೇ?’’ ಕಾಸಿ ಆಸೆಯಿಂದ ಕೇಳಿದ.

‘‘ಬ್ಯಾಂಕ್‌ಗಳೆಲ್ಲ ಮುಳುಗುತ್ತಿರುವಾಗ ಕನ್ನಡದಲ್ಲಿ ಬರೆದರೇನು, ಹಿಂದಿಯಲ್ಲಿ ಬರೆದರೇನು? ಬ್ಯಾಂಕ್‌ಗಳು ಇದ್ರೆ ತಾನೆ ಉದ್ಯೋಗ?’’ ಕೆರಂದ್ಲಾಜೆ ಎಲ್ಲ ಹಲ್ಲು ಬಿಟ್ಟು ನಕ್ಕರು.

‘‘ಮೇಡಂ ಪುತ್ತೂರಿನಲ್ಲಿ....’’

‘‘ಪುತ್ತೂರಿನಲ್ಲಿ ಗೋಹತ್ಯೆ ಹೆಚ್ಚುತ್ತಿದೆ....ಇದಕ್ಕೆ ರಾಜ್ಯ ಸರಕಾರ ಹೊಣೆ....’’

‘‘ಅದಲ್ಲ ಪುತ್ತೂರಿನಲ್ಲಿ.....’’

‘‘ಪುತ್ತೂರಿನಲ್ಲಿ ಲವ್‌ಜಿಹಾದ್ ಹೆಚ್ಚುತ್ತಿದೆ...ಇದಕ್ಕಾಗಿ ರಕ್ತಪಾತ ಹರಿಸುತ್ತೇವೆ...’’

‘‘ಅದಲ್ಲ ಮೇಡಂ...ಪುತ್ತೂರಿನಲ್ಲಿ ಸಾಮೂಹಿಕ ಅತ್ಯಾಚಾರ...’’

‘‘ಏಕೀ ಮಿನಟ್...ಏಕೀ ಮಿನಟ್...’’ ಎಂದವರೇ ಕೆರಂದ್ಲಾಜೆ ಮೊಬೈಲ್‌ನಲ್ಲಿ ಯಾರ ಜೊತೆಗೋ ಮಾತನಾಡತೊಡಗಿದರು.

ಈಗ ಕಾಸಿ ವಿಷಯಾಂತರ ಮಾಡಿದ.

‘‘ಮೇಡಂ...ಕೇಂದ್ರದ ಬಜೆಟ್...’’ ‘‘ನೋಡ್ರೀ...ಸೂಟ್‌ಕೇಸ್ ಬಜೆಟ್ ಕಾಲ ಮುಗಿಯಿತು. ಈಗ ಏನಿದ್ರೂ ರೇಷ್ಮೆ ಸೀರೆ ಬಜೆಟ್. ರೇಷ್ಮೆ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮ ವಿತ್ತ ಸಚಿವರು ಬಜೆಟ್‌ನ್ನು ರೇಷ್ಮೆ ಸೀರೆಯಲ್ಲಿ ಸುತ್ತಿ ಮಂಡಿಸಿದ್ದಾರೆ. ಅಂತಹದೇ ರೇಷ್ಮೆ ಸೀರೆ ಉಟ್ಟು ರಾಜ್ಯದಲ್ಲಿ ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶ ನನಗಿದೆ...’’ ಕೆರಂದ್ಲಾಜೆಯವರು ತಮ್ಮ ಬದುಕಿನ ಆಸೆಯನ್ನು ಮುಂದಿಟ್ಟರು.

‘‘ಪೆಟ್ರೋಲ್ ಡೀಸೆಲ್‌ಬೆಲೆ ಹೆಚ್ಚಾಗಿದೆ...’’ ಕಾಸಿ ತಕರಾರು ತೆಗೆದ.

 ‘‘ನೋಡ್ರೀ...ಯಾವುದು ಹೆಚ್ಚಾದರೂ ಜನಗಳು ಅದನ್ನು ಪ್ರೀತಿಯಿಂದ ಮೋದಿಯ ಪ್ರಸಾದ ಎಂದು ಸ್ವೀಕರಿಸಿದ್ದಾರೆ. ಮುಖ್ಯವಾಗಿ ರೇಷ್ಮೆ ಸೀರೆಯಲ್ಲಿ ಸುತ್ತಿ ಜನರಿಗೆ ಕೊಟ್ಟಿರುವುದರಿಂದ ಈ ಬಾರಿಯ ಆರ್ಥಿಕತೆ ಹೆಚ್ಚುವುದರಲ್ಲಿ ಸಂಶಯವಿಲ್ಲ....ಅದೇನೇ ಇರಲಿ...ಈ ಬಾರಿ ಬೀಳತ್ತ?’’ ಕೊನೆಯಲ್ಲಿ ತಮ್ಮ ಅನುಮಾನ ಮುಂದಿಟ್ಟರು.

‘‘ಯಡಿಯೂರಪ್ಪ ಅವರ ತಲೆಯ ಮೇಲೇ ಬೀಳುವ ಸಾಧ್ಯತೆಯಿದೆ ಮೇಡಂ. ಯಾವುದಕ್ಕೂ ತಲೆ ಜಾಗೃತೆ...’’ ಎಂದವನೇ ಅಲ್ಲಿಂದ ಕಾಲ್ಕಿತ್ತ. ‘‘ಏಕೀ ಮಿನಟ್...ಏಕೀ ಮಿನಟ್....’’ ಕೆರಂದ್ಲಾಜೆಯವರ ಆರ್ತನಾದ ಕಾಸಿಯನ್ನು ಹಿಂಬಾಲಿಸುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)