varthabharthi


ವೈವಿಧ್ಯ

ಡಿಗ್ರಿಗಳಿಗೆ ಬೆಲೆಯಿದೆಯೇ?

ವಾರ್ತಾ ಭಾರತಿ : 16 Jul, 2019
ಯುಗಾಂಕ್ ಗೋಯಲ್

ನೀವು ಪಡೆಯುವ ಡಿಗ್ರಿ ನೀವು ಕಲಿತ ಕಾಲೇಜಿನ ಗುಣಮಟ್ಟದ ಬಗ್ಗೆ ಸಂಕೇತ ನೀಡುತ್ತದೆಯೇ ಹೊರತು, ನಿಮ್ಮ (ಅಭ್ಯರ್ಥಿಯ)ಗುಣಮಟ್ಟದ ಬಗ್ಗೆ ಅಲ್ಲ. ಹಾಗಾದರೆ, ಒಂದು ಪದವಿಯು ಕಾಲೇಜಿನ ಕಳಪೆ ಗುಣಮಟ್ಟವನ್ನು ಸೂಚಿಸುತ್ತದಾದಲ್ಲಿ ಮೊದಲನೆಯದಾಗಿ, ಅಲ್ಲಿಗೆ ಹೋಗುವುದಾದರೂ ಯಾಕೆ? ಆದರೆ ಭಾರತದ ವಿದ್ಯಾರ್ಥಿಗಳಲ್ಲಿ ಬಹುಮಂದಿಗೆ ಇದು ಮುಖ್ಯವಾಗುವುದಿಲ್ಲ.

ಆರ್ಥಿಕ ಸಿದ್ಧಾಂತಗಳ ಕಡೆಗೆ ಕಣ್ಣು ಹೊರಳಿಸಿದರೆ ಸಮಾಜಕ್ಕೆ ಶಿಕ್ಷಣ ಯಾಕೆ ಮುಖ್ಯ ಎನ್ನುವುದಕ್ಕೆ ಮೂರು ಪ್ರಬಲವಾದ ಕಾರಣಗಳು ಕಾಣಿಸುತ್ತವೆ. ಮೊದಲನೆಯದಾಗಿ ಶಿಕ್ಷಣವು ಮಾನವರನ್ನು ಮಾನವ ಬಂಡವಾಳವಾಗಿ ‘ಬದಲಾಯಿಸುತ್ತದೆ’ (‘ಕನ್ವರ್ಟ್’ ಮಾಡುತ್ತದೆ). ಇದು ನಮ್ಮನ್ನು ಉತ್ಪಾದನಾ ಶಕ್ತಿಯುಳ್ಳವರನ್ನಾಗಿ ಹಾಗೂ ಸೃಜನಶೀಲರನ್ನಾಗಿ ಮಾಡುತ್ತದೆ. ಎರಡನೆಯದಾಗಿ, ಶಿಕ್ಷಣಕ್ಕೆ ಧನಾತ್ಮಕವಾದ ಇತರ ಪರಿಣಾಮಗಳನ್ನು ಬೀರುವ ಶಕ್ತಿ ಇದೆ; ಇದರಿಂದಾಗಿ ಶಿಕ್ಷಿತರಲ್ಲದವರಿಗೂ ಲಾಭವಾಗುತ್ತದೆ. ಉದಾಹರಣೆಗೆ, ಕಡಿಮೆ ಶಿಕ್ಷಿತ ಸಮಾಜದಲ್ಲಿರುವುದಕ್ಕಿಂತ ಹೆಚ್ಚು ಶಿಕ್ಷಿತ ಸಮಾಜದಲ್ಲಿ ಅಪರಾಧಗಳ ಸಂಖ್ಯೆ/ ದರ ಕಡಿಮೆ ಇರುವ ಸಾಧ್ಯತೆ ಹೆಚ್ಚು ಇರುತ್ತದೆ.
2001ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೈಕೆಲ್ ಸ್ಪೆನ್ಸರ್‌ನ ಪ್ರಕಾರ, ಮೂರನೆಯದಾಗಿ, ಶಿಕ್ಷಣವು ಸಂಕೇತಗಳನ್ನು (ಸಿಗ್ನಲಿಂಗ್) ನೀಡುವ ಕೆಲಸ ಮಾಡುತ್ತದೆ. ನಾವು ಶಿಕ್ಷಣ ಪಡೆಯುತ್ತೇವೆ, ಯಾಕೆಂದರೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನೌಕರಿ ಕೊಡುವವರಿಗೆ ನಾವು ಒಂದು ಸಂಕೇತ ನೀಡಲು ಬಯಸುತ್ತೇವೆ. ಉದ್ಯೋಗ ಮಾರುಕಟ್ಟೆಯಲ್ಲಿ ಮಾಹಿತಿಯ ಒಂದು ಅಂತರ (ಗ್ಯಾಪ್) ಇದೆ. ಸಂದರ್ಶನದ ಮೇಜಿನ ಮುಂದೆ ಕುಳಿತಾಗ, ನನ್ನ ಸಾಮರ್ಥ್ಯಗಳೇನು ಎಂದು ನನ್ನ ಉದ್ಯೋಗದಾತನಿಗಿಂತ ಹೆಚ್ಚಾಗಿ ನನಗೆ ಗೊತ್ತಿದೆ. ಅವರಿಗೆ ತಾನು ಸರಿಯಾದ ಅಭ್ಯರ್ಥಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆಂದು ಏನು ಖಾತರಿ? ಇತರ ಹಲವು ವಿಷಯಗಳ ನಡುವೆ ನನ್ನ ಶೈಕ್ಷಣಿಕ (ಡಿಗ್ರಿ) ಪ್ರಮಾಣ ಪತ್ರಗಳನ್ನು ನೋಡಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನೀವು ಯಾವ ವಿಶ್ವವಿದ್ಯಾನಿಲಯಕ್ಕೆ ಹೋಗಿ ಡಿಗ್ರಿ ಪಡೆದಿದ್ದೀರೋ ಆ ವಿಶ್ವವಿದ್ಯಾನಿಲಯ ನೀವು ಸಂದರ್ಶನ ಮೇಜಿಗೆ ಯಾವ ರೀತಿಯ ಮತ್ತು ಯಾವ ಮಟ್ಟದ (ಗುಣವನ್ನು) ಕ್ವಾಲಿಟಿಯನ್ನು ತಂದಿದ್ದೀರಿ ಎಂಬ ಬಗ್ಗೆ ಅವರಿಗೆ ಸಂಕೇತ ನೀಡುತ್ತದೆ. ಅದು ಒಂದು ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿದ್ದಲ್ಲಿ ನಿಮಗೆ ನೌಕರಿ ಸಿಗುವ ಸಾಧ್ಯತೆ ಮತ್ತು ಹೆಚ್ಚು ಸಂಬಳ ಸಿಗುವ ಸಾಧ್ಯತೆ ಹೆಚ್ಚು ಇರುತ್ತದೆ. ತಾವು ಹೀಗೆ ತಮ್ಮ ಗುಣಮಟ್ಟದ ಬಗ್ಗೆ ಸಂಕೇತ, ಸಿಗ್ನಲ್ ನೀಡಬಹುದೆಂಬ ಕಾರಣಕ್ಕಾಗಿ ಜನರು ತಮಗೆ ಡಿಗ್ರಿಗಳು ಬೇಕು ಎನ್ನುತ್ತಾರೆ.
ಆದರೆ ಇಲ್ಲೊಂದು ಸಮಸ್ಯೆ ಇದೆ. ನೀವು ಪಡೆಯುವ ಡಿಗ್ರಿ ನೀವು ಕಲಿತ ಕಾಲೇಜಿನ ಗುಣಮಟ್ಟದ ಬಗ್ಗೆ ಸಂಕೇತ ನೀಡುತ್ತದೆಯೆ ಹೊರತು, ನಿಮ್ಮ (ಅಭ್ಯರ್ಥಿಯ)ಗುಣಮಟ್ಟದ ಬಗ್ಗೆ ಅಲ್ಲ. ಹಾಗಾದರೆ, ಒಂದು ಪದವಿಯು ಕಾಲೇಜಿನ ಕಳಪೆ ಗುಣಮಟ್ಟವನ್ನು ಸೂಚಿಸುತ್ತದಾದಲ್ಲಿ ಮೊದಲನೆಯದಾಗಿ, ಅಲ್ಲಿಗೆ ಹೋಗುವುದಾದರೂ ಯಾಕೆ? ಆದರೆ ಭಾರತದ ವಿದ್ಯಾರ್ಥಿಗಳಲ್ಲಿ ಬಹುಮಂದಿಗೆ ಇದು ಮುಖ್ಯವಾಗುವುದಿಲ್ಲ. ಪದವಿಗಳಿಗೆ ಒಂದು ಯಾದಿ ಇದೆ. ಶಿಕ್ಷಣಕ್ಕಲ್ಲ; ಬದಲಾಗಿ ಡಿಗ್ರಿಗಳಿಗೆ ಒಂದು ಯಾದಿ (ಲಿಸ್ಟ್) ಇದೆ.


 ಈಗ ಸಮಸ್ಯೆಗಳನ್ನು ಸ್ವಲ್ಪ ಗಮನಿಸಿ. 2001ರಿಂದ ದೇಶದಲ್ಲಿ ವಿವಿಗಳ ಸಂಖ್ಯೆ 250ರಿಂದ 800ಕ್ಕೆ ಏರಿದೆ, ಕಾಲೇಜುಗಳ ಸಂಖ್ಯೆ 1300ರಿಂದ 40,000ಕ್ಕೆ ಏರಿದೆ. ಶಾಲಾ ಶಿಕ್ಷಣ ಮುಗಿಸಿದ ಬಳಿಕ ಪ್ರತಿ 100 ವಿದ್ಯಾರ್ಥಿಗಳಲ್ಲಿ, 2000-2001ರಲ್ಲಿ ಶೇ. 8.1 ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದರೆ, ಈಗ ಇದು ಶೇ. 25ಕ್ಕೆ ತಲುಪಿದೆ. ಭಾರತದಲ್ಲಿ ಪ್ರತಿವರ್ಷ ಕಾಲೇಜಿಗೆ ಸೇರುವವರ ಸಂಖ್ಯೆ ಅಫ್ಘಾನಿಸ್ತಾನದ ಜನಸಂಖ್ಯೆಗೆ ಸಮಾನವಾಗಿದೆ! ಇದೊಂದು ದುರಂತವೇ ಸರಿ; ಶಿಕ್ಷಣ ಪಡೆದು ಭವಿಷ್ಯದ ಕನಸು ಕಾಣುವ ಬಹುಪಾಲು ಭಾರತೀಯರ ದುರಂತವೆಂದರೆ ಅವರು ಬಯಸುವುದು ಶಿಕ್ಷಣವನ್ನು, ಆದರೆ ಅವರಿಗೆ ಅಂತಿಮವಾಗಿ ಸಿಗುವುದು ಪದವಿಗಳು. (ನೌಕರಿ ಪಡೆಯಲು ಉಪಯೋಗವಾಗುವ ಶಿಕ್ಷಣವಲ್ಲ).
 ಈ ಪದವಿಗಳು ನಿಮ್ಮನ್ನು ಮುಂದಿನ ಹಂತಕ್ಕೆ ತಳ್ಳುತ್ತವೆ. ಮುಂದಿನ ಹಂತದಲ್ಲಿ ಈ ಡಿಗ್ರಿಗಳಿಂದ ಉದ್ಯೋಗದಾತರಿಗೆ ಪ್ರಾಯಶಃ ನಿಮ್ಮ ಅರ್ಹತೆಯ ಗುಣಮಟ್ಟ ಅಳೆಯುವುದು ಕಷ್ಟವಾಗುತ್ತದೆ. ಆಗ ಅವರು ಇತರ ಅಂಶಗಳನ್ನು ಗಮನಿಸುತ್ತಾರೆ: ಹಲವು ವಿಷಯಗಳಲ್ಲಿ ನೀವು ಪಡೆದಿರುವ ಅಂಕಗಳು, ನಿಮ್ಮ ಸಂವಹನ ಕೌಶಲಗಳು, ಆಸಕ್ತಿಗಳು, ಮನೋಧರ್ಮ ಇತ್ಯಾದಿ. ಈಗ ಹಲವು ಕಂಪೆನಿಗಳು ಕಾಲೇಜುಗಳು ನೀಡುವ ಪದವಿಗಳಿಗಿಂತ ಹೆಚ್ಚಾಗಿ ಉದ್ಯೋಗಾಕಾಂಕ್ಷಿಗಳಿಗೆ ತಾವೇ ನಡೆಸುವ ಪರೀಕ್ಷೆಗಳನ್ನು ಹೆಚ್ಚು ಅವಲಂಬಿಸುತ್ತವೆ.
ಆದ್ದರಿಂದ ಭಾರತದಲ್ಲಿ ಶಿಫಾರಸುಗಳು, ವಶೀಲಿಗಳು ತುಂಬಾ ಮುಖ್ಯವಾಗುತ್ತವೆ. ಸರಕಾರ ನಡೆಸುವ ಅರ್ಹತಾ ಪರೀಕ್ಷೆಗಳ ಮೂಲಕ ಹಲವಾರು ಹುದ್ದೆಗಳನ್ನು ತುಂಬಲಾಗುತ್ತದೆ. ಕಾಲೇಜುಗಳಿಂದ ಪದವಿ ಪಡೆದವರು ಈ ಪರೀಕ್ಷೆಗಳಲ್ಲಿ ತಮ್ಮ ಅರ್ಹತೆಯನ್ನು ಸಾಬೀತು ಪಡಿಸಬೇಕಾಗುತ್ತದೆ. ಉದ್ಯೋಗಕ್ಕಾಗಿ ಲಂಚ ನೀಡಬೇಕಾಗುವ ಪ್ರಕರಣಗಳು ಸರ್ವೇ ಸಾಮಾನ್ಯವಾಗುತ್ತವೆ. ಕಾಲೇಜಿನಲ್ಲಿ ಪಡೆದ ಪದವಿ ವೌಲ್ಯ ಕಳೆದುಕೊಳ್ಳುತ್ತದೆ. ಕೈಯಲ್ಲಿ ಪದವಿ ಪ್ರಮಾಣ ಪತ್ರ ಹಿಡಿದುಕೊಂಡ ಮಿಲಿಯಗಟ್ಟಲೆ ಕಾಲೇಜು ಪದವೀಧರರನ್ನು ಅನಿಶ್ಚಿತ ಭವಿಷ್ಯ ಕಾಡುತ್ತದೆ.
ಹಾಗಾದರೆ ಪದವಿಗೆ ಬೆಲೆಯಿರುವ ಒಂದು ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಹೇಗೆ? ಮಾರುಕಟ್ಟೆಗಳು ತಮ್ಮ ಛಲಬಿಡದೆ ತಮ್ಮದೇ ಆದ ಒಂದು ಪರಿಹಾರವನ್ನು, ಮಾರ್ಗೋಪಾಯವನ್ನು ಕಂಡುಕೊಳ್ಳುತ್ತವೆ. ಒಂದು ಪದವಿಯು ಶಿಕ್ಷಕರ, ಪಠ್ಯಕ್ರಮದ, ಸಂಶೋಧನೆಯ ಗುಣಮಟ್ಟದ ಸಂಕೇತ ನೀಡಲೇಬೇಕಾದಲ್ಲಿ, ನಾನ್ಯಾಕೆ ಇದೆಲ್ಲವೂ ಇರುವ ಒಂದು ವ್ಯವಸ್ಥೆಯನ್ನು ಆರಂಭಿಸಿ, ಪದವಿ ನೀಡುವುದನ್ನು ಯಾಕೆ ನಿಲ್ಲಿಸಬಾರದು? ಅಂತಹ ವ್ಯವಸ್ಥೆಯಲ್ಲಿ ಇರುವ ವ್ಯಕ್ತಿಗಳ ಅರ್ಹತೆಗಳನ್ನು ನೋಡಿ ಉದ್ಯೋಗಾಕಾಂಕ್ಷಿಯ ಗುಣಮಟ್ಟ ಅಳೆಯಬಹುದಾದಾಗ ಉದ್ಯೋಗ ನೀಡುವ ಸಂಸ್ಥೆಗಳು ಡಿಗ್ರಿ ಬೇಕೆಂದು ಯಾಕಾದರೂ ಹೇಳುತ್ತವೆ? ಇಂತಹ ಬದಲಾವಣೆ ಈಗ ನಡೆಯುತ್ತಿದೆ.
ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಪದವಿ ನೀಡುವುದಿಲ್ಲ. ಹಾಗೆಯೇ ಮುಂಬೈಯ ಇಂಡಿಯನ್ ಸ್ಕೂಲ್ ಆಫ್ ಮ್ಯಾನೆಜ್‌ಮೆಂಟ್ ಆ್ಯಂಡ್ ಎಂಟರ್‌ಪ್ರೂನರ್ ಶಿಪ್, ದಿಲ್ಲಿಯ ಇಂಡಿಯನ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ-ಇವು ಯಾವುವೂ ಕೂಡ ಪದವಿ ನೀಡುವ ಸಂಸ್ಥೆಗಳಲ್ಲ. ಆದರೂ ಉದ್ಯೋಗದಾತರು ಈ ಸಂಸ್ಥೆಗಳಿಗೆ ಲಗ್ಗೆ ಇಡುತ್ತಾರೆ. ಯಾಕೆಂದರೆ ಅಲ್ಲಿ ತಮಗೆ ಕೌಶಲ್ಯಹೊಂದಿದ ಪದವೀಧರರು ಸಿಗುತ್ತಾರೆಂದು ಅವರಿಗೆ ಗೊತ್ತಿದೆ. ಅಲ್ಲಿಗೆ ಪದವೀಧರರು ಬರುತ್ತಾರೆ, ಯಾಕೆಂದರೆ ಅಲ್ಲಿಗೆ ಮಾರುಕಟ್ಟೆ ಬರುತ್ತದೆಂದು ಅವರಿಗೆ ಗೊತ್ತಿದೆ.
ಮುಂದಿನ ದಶಕದಲ್ಲಿ ಉನ್ನತ ಶಿಕ್ಷಣದ ಪ್ರಪಂಚ ಪ್ರಮುಖವಾದ ಅಸ್ತವ್ಯಸ್ತತೆಗೆ ತೆರೆದುಕೊಳ್ಳಲಿದೆ. ಇದರಿಂದ ಮೊದಲ ಅಪಾಯ ಬರುವುದು ಸಾಂಪ್ರದಾಯಿಕ, ಪಾರಂಪರಿಕ ಪದವಿಗೇ ಇರಬಹುದು.
 
(ಲೇಖಕರು ಒಪಿ ಜಿಂದಾಲ್ ಗ್ಲೋಬಲ್ ಯುನಿವರ್ಸಿಟಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ಆಡಳಿತ ಮಂಡಳಿಯ ಸದಸ್ಯರು)

ಕೃಪೆ : ಡೆಕ್ಕನ್ ಹೆರಾಲ್ಡ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)