varthabharthi


ಸಂಪಾದಕೀಯ

ಗುಂಪುಹಲ್ಲೆ, ಹಿಂಸಾಚಾರಗಳ ಹಿಂದಿರುವುದು ಮಾಂಸಸೇವನೆಯಲ್ಲ, ಮದ್ಯ ಸೇವನೆ

ವಾರ್ತಾ ಭಾರತಿ : 18 Jul, 2019

ಅಪೌಷ್ಟಿಕತೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿರುವ ದಿನಗಳಲ್ಲಿ ಭಾರತ ದೇಶ, ಉಪಲಬ್ದವಿರುವ ಆಹಾರಗಳನ್ನೇ ನಿಷೇಧಿಸುವ ಕುರಿತ ಚರ್ಚೆಯಲ್ಲಿ ಆಸಕ್ತಿ ತೋರಿಸುತ್ತಿದೆ. ಒಂದೆಡೆ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಷ್ಟು ಸುಪುಷ್ಟವಾಗಿರುವ ಭಾರತ, ಮಗದೊಂದೆಡೆ ಮನೆಯೊಳಗೆ ಗೋಮಾಂಸವಿದೆ ಎಂಬ ಆರೋಪಹೊರಿಸಿ ಈ ದೇಶದ ನಾಗರಿಕರನ್ನು ಗುಂಪು ದಾಳಿ ನಡೆಸಿ ಬಹಿರಂಗವಾಗಿ ಥಳಿಸಿ ಕೊಂದು ಹಾಕುತ್ತದೆ. ವಿದೇಶಕ್ಕೆ ಸಹಸ್ರಾರು ಟನ್ ಗೋಮಾಂಸ ರಫ್ತಾಗುತ್ತಿರುವಾಗ ಅದನ್ನು ತಡೆಯಲು ಯಾವ ಕಾನೂನನ್ನೂ ರೂಪಿಸದಿರುವ ಸರಕಾರಕ್ಕೆ, ದೇಶವಾಸಿಗಳು ಮಾಂಸಾಹಾರ ಸೇವಿಸಿದಾಗ ಅದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ ಕಾಣುತ್ತದೆ. ಈ ದೇಶವಾಸಿಗಳಿಗೆ ಪೌಷ್ಟಿಕ ಆಹಾರ ಸೇವಿಸುವ ಯಾವ ಹಕ್ಕೂ ಇಲ್ಲ ಎಂದು ನಮ್ಮ ಸರಕಾರ ಭಾವಿಸಿದಂತಿದೆ. ಗೋಮಾಂಸ ಸೇವನೆ ಈ ದೇಶದ ಒಂದು ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತರುವುದು ನಿಜವೇ ಆಗಿದ್ದರೆ, ಬಹಿರಂಗವಾಗಿಯೇ ರಫ್ತಾಗುತ್ತಿರುವ ಗೋಮಾಂಸವನ್ನು ಯಾಕೆ ಸರಕಾರ ತಡೆಯುತ್ತಿಲ್ಲ? ರಫ್ತು ನಿಷೇಧಕ್ಕೆ ಕಾನೂನು ತರುವಷ್ಟು ಸಂಖ್ಯಾ ಬಲ ಕೇಂದ್ರದಲ್ಲಿ ಇಲ್ಲ ಎಂದು ಜನರು ಭಾವಿಸಬೇಕೆ? ಸರಕಾರದ ಈ ದ್ವಂದ್ವ ನಿಲುವಿನಿಂದಾಗಿಯೇ ಈ ದೇಶದಲ್ಲಿ ಅಪೌಷ್ಟಿಕತೆ ಉಲ್ಬಣಿಸಿದೆ. ಜನರಿಗೆ ಅಗ್ಗವಾಗಿ ದೊರಕುತ್ತಿರುವ ಗೋಮಾಂಸವೂ ಇದೀಗ ದುಬಾರಿಯಾಗಿದೆ. ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಗೋಮಾಂಸದ ಲಭ್ಯತೆಯ ಕೊರತೆಯಿಂದಾಗಿ ಇತರ ಕೋಳಿ, ಕುರಿ, ಮೀನು ಮಾಂಸಗಳ ದರ ಹೆಚ್ಚಳವಾಗಿವೆ. ಇದೇ ಸಂದರ್ಭದಲ್ಲಿ ತರಕಾರಿಯನ್ನು ಬಡವರು ಮುಟ್ಟುವಂತೆಯೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

  ವಿದೇಶಿಯರಿಗೆ ಯಥೇಚ್ಛವಾಗಿ ಗೋಮಾಂಸವನ್ನು ರಫ್ತು ಮಾಡುತ್ತಲೇ, ಗೋಮಾಂಸ ಸೇವನೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಹಾನಿಗಳ ಬಗ್ಗೆ ‘ರಾಜಕಾರಣಿಗಳು’ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾರೆ. ಆದರೆ ವಿಜ್ಞಾನ, ಆರೋಗ್ಯ, ವೈದ್ಯಕೀಯ ವಿಷಯಗಳಲ್ಲಿ ಸಾಧನೆಗಳನ್ನು ಮಾಡಿರುವ ಹೊರ ದೇಶಗಳ ಜನರು ಗೋಮಾಂಸವನ್ನು ಸೇವಿಸುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಗೋಮಾಂಸ ಪೌಷ್ಟಿಕ ಆಹಾರವೆಂದು ಅವರು ಬಲವಾಗಿ ನಂಬಿದ್ದಾರೆ. ಈ ದೇಶ ಜನರ ಕೈಯಲ್ಲಿರುವ ಆಹಾರವನ್ನು ಕಸಿದುಕೊಳ್ಳುತ್ತಿರುವ ರಾಜಕಾರಣಿಗಳು ಪರ್ಯಾಯ ಆಹಾರವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ದೇಶದಲ್ಲಿ ಹಸಿವು ಹೆಚ್ಚತೊಡಗಿದೆ. ಹಸಿವು ರೋಗಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಮಾಂಸಾಹಾರಿಗಳು ಈವರೆಗೆ ಹೈನೋದ್ಯಮದ ಒಂದು ಭಾಗವಾಗಿದ್ದರು. ಆದರೆ ಜಾನುವಾರು ವ್ಯಾಪಾರಕ್ಕೆ ನಕಲಿ ಗೋರಕ್ಷಕರ ಅಡ್ಡಿ ಮತ್ತು ಗೋಮಾಂಸದ ವಿರುದ್ಧ ನಡೆಯುತ್ತಿರುವ ದಾಂಧಲೆಗಳು ಹೈನೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎತ್ತುಗಳು ಸೇರಿದಂತೆ ಅನುತ್ಪಾದಕ ಜಾನುವಾರುಗಳನ್ನು ಹಟ್ಟಿಯಲ್ಲಿಟ್ಟು ಸಾಕಬೇಕಾಗಿರುವುದರಿಂದ ಹೈನೋದ್ಯಮ ವೆಚ್ಚ ದುಬಾರಿಯಾಗುತ್ತಿದೆ. ಗ್ರಾಮೀಣ ರೈತರು ನಕಲಿ ಗೋರಕ್ಷಕರ ಕಾಟ ತಾಳಲಾರದೆ ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಸಹಜವಾಗಿಯೇ ಇದು ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಗಳನ್ನು ಹೆಚ್ಚಿಸಿದೆ. ವಿಪರ್ಯಾಸವೆಂದರೆ ಆಹಾರದ ಕುರಿತ ನಿಷೇಧ ಬರೇ ಗೋಮಾಂಸಕ್ಕೆ ಮಾತ್ರವಲ್ಲ, ನೀರುಳ್ಳಿ ಬೆಳ್ಳುಳ್ಳಿಗಳಿಗೂ ಅನ್ವಯವಾಗತೊಡಗಿವೆ. ಮುಂದಿನ ದಿನಗಳಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಫ್ರಿಜ್‌ನಲ್ಲಿದೆ ಎನ್ನುವ ಕಾರಣಕ್ಕೆ ಹಲ್ಲೆಗಳು ನಡೆದರೆ ಅಚ್ಚರಿಯೇನೂ ಇಲ್ಲ.

ಜನರನ್ನು ಆರೋಗ್ಯವಾಗಿಡುವ ಮಾಂಸಾಹಾರದ ವಿರುದ್ಧ ಬೀದಿ ದಾಂಧಲೆಗಳು ಹೆಚ್ಚುತ್ತಿರುವ ದಿನಗಳಲ್ಲೇ, ಜನಸಾಮಾನ್ಯರನ್ನು ಬೀದಿ ಪಾಲು ಮಾಡುತ್ತಿರುವ, ಅವರ ಆರೋಗ್ಯದ ಮೇಲೆ ಮಾರಕ ಪರಿಣಾಮಗಳನ್ನು ಬೀರುತ್ತಿರುವ ಮದ್ಯದ ಕುರಿತಂತೆ ಸರಕಾರ ಮತ್ತು ಸಮಾಜ ಹೆಚ್ಚು ಹೆಚ್ಚು ವೌನ ತಾಳತೊಡಗಿವೆ. ಇಂದು ಒಬ್ಬ ಒಂದು ಕೆಜಿ ಮಾಂಸವನ್ನು ಮನೆಗೆ ಒಯ್ಯುತ್ತಿದ್ದರೆ ಆತನ ಮೇಲೆ ಗುಂಪು ದಾಳಿಗಳು ನಡೆಯಬಹುದು. ಇದೇ ಸಂದರ್ಭದಲ್ಲಿ ಬಹಿರಂಗವಾಗಿ ಒಬ್ಬ ಮದ್ಯ ಸಾಗಿಸುತ್ತಿದ್ದರೆ ಅದನ್ನು ಸಮಾಜ ವೌನವಾಗಿ ಒಪ್ಪಿಕೊಳುತ್ತದೆ. ಮದ್ಯ ಒಬ್ಬ ವ್ಯಕ್ತಿಯ ಆರೋಗ್ಯದ ಜೊತೆಗೆ ಇಡೀ ಸಮಾಜದ ಆರೋಗ್ಯವನ್ನೇ ಕೆಡಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಈ ದೇಶದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಕೃತ್ಯಗಳು ನಡೆಯುತ್ತಿರುವುದು ಮಾಂಸ ಸೇವಿಸಿದವರಿಂದಲ್ಲ, ಮದ್ಯ ಸೇವಿಸಿದವರಿಂದ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ. ಬಿಹಾರದಲ್ಲಿ ಮದ್ಯ ನಿಷೇಧದ ಬಳಿಕ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿರುವುದನ್ನು ಅಲ್ಲಿನ ಅಂಕಿ ಅಂಶಗಳು ಹೇಳುತ್ತವೆ. ಭಾರತದ ಮಾನವ ಸಂಪನ್ಮೂಲ ವ್ಯರ್ಥವಾಗುವುದರ ಹಿಂದೆ ಮದ್ಯದ ಕೊಡುಗೆ ಬಹುದೊಡ್ಡದಿದೆ. ದೊಡ್ಡ ಪ್ರಮಾಣದಲ್ಲಿ ಯುವಕರು ಮದ್ಯಕ್ಕೆ ಬಲಿಯಾಗುತ್ತಿದ್ದರೆ, ಈ ಪಾನಮತ್ತ ಯುವಕರ ಚಟುವಟಿಕೆಗಳಿಗೆ ಸಮಾಜವೂ ಸಾಕಷ್ಟು ಬೆಲೆಯನ್ನು ತೆರುತ್ತಾ ಬಂದಿದೆ.

ಇಷ್ಟಾದರೂ, ಮದ್ಯ ನಿಷೇಧ ಚರ್ಚೆ ಮುನ್ನೆಲೆಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಮದ್ಯ ನಿಷೇಧವಾದರೆ ಸರಕಾರದ ಖಜಾನೆಗೆ ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗುತ್ತದೆ ಎನ್ನುವ ವಾದವೊಂದಿದೆ. ಆದರೆ ಗೋಮಾಂಸ ನಿಷೇಧದಿಂದಲೂ ಸರಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತದೆ ಎನ್ನುವುದನ್ನು ಮರೆಮಾಚಲಾಗಿದೆ. ಈ ಕಾರಣಕ್ಕಾಗಿಯೇ ವಿದೇಶಕ್ಕೆ ಗೋಮಾಂಸ ರಫ್ತನ್ನು ಪ್ರೋತ್ಸಾಹಿಸಲಾಗುತ್ತಿದೆ. ಆದರೆ ಮದ್ಯ ಸರಕಾರಕ್ಕೆ ಎಷ್ಟು ಆದಾಯವನ್ನು ಕೊಡುತ್ತಿದೆಯೋ ಅದರ ದುಪ್ಪಟ್ಟು ನಷ್ಟವನ್ನುಂಟು ಮಾಡುತ್ತಿದೆ. ಮದ್ಯದಿಂದಾದ ಹಾನಿಯನ್ನು ತುಂಬಿಸುವುದಕ್ಕೆ ಅದು ಕೊಡುವ ಆದಾಯ ಸಾಕಾಗುವುದಿಲ್ಲ ಎನ್ನುವುದನ್ನು ಈಗಾಗಲೇ ಅಂಕಿಅಂಶಗಳು ಬಹಿರಂಗಪಡಿಸಿವೆ. ಅಧ್ಯಯನದ ಪ್ರಕಾರ ದೇಶದಲ್ಲಿ 2050ರೊಳಗೆ 25.8 ಕೋಟಿ ಮಂದಿ ಆಲ್ಕೋಹಾಲ್ ಸಂಬಂಧಿ ರೋಗಗಳಿಂದ ಪ್ರಾಣ ಕಳೆದುಕೊಳ್ಳಲಿದ್ದಾರೆ. ದೇಶದ ಜಿಡಿಪಿಗೆ ಪ್ರತಿ ವರ್ಷ ಇದರಿಂದ 1.45ರಷ್ಟು ನಷ್ಟವಾಗುವ ನಿರೀಕ್ಷೆಯಿದೆ. ಆಲ್ಕೋಹಾಲ್ ಸೇವನೆಯಿಂದ ಸೃಷ್ಟಿಯಾಗುವ ರೋಗಗಳ ಹಿನ್ನೆಲೆಯಲ್ಲಿ 5.7 ಕೋಟಿ ಮಂದಿಗೆ ತುರ್ತು ನೆರವಿನ ಅಗತ್ಯವಿದೆ ಎನ್ನುವುದು ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಇಂದು ದೇಶಾದ್ಯಂತ ಗುಂಪು ಹಲ್ಲೆಗಳು ಚರ್ಚೆಗೊಳಗಾಗುತ್ತಿವೆ. ಗೋಮಾಂಸವೇ ಈ ಹಲ್ಲೆಗಳಿಗೆ ಕಾರಣ ಎಂದು ಈಗಾಗಲೇ ನಂಬಿಸಲಾಗಿದೆ. ಆದರೆ, ಈ ಗುಂಪುಹಲ್ಲೆಗಳಲ್ಲಿ ಭಾಗವಹಿಸಿದವರ ಹಿನ್ನೆಲೆಯನ್ನು ಗಮನಿಸಿದರೆ ಅವರೆಲ್ಲರೂ ಪಾನಮತ್ತರಾಗಿಯೇ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಗೋಮಾಂಸಾಹಾರ ನಿಷೇಧದ ಬದಲಿಗೆ ಮದ್ಯವನ್ನು ನಿಷೇಧಿಸಿದರೆ, ಇಂತಹ ಗುಂಪುಹಲ್ಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿವೆ. ಯಾವುದೇ ಕೋಮು ಮತ್ತು ರಾಜಕೀಯ ಹಿಂಸಾಚಾರಗಳ ಹಿಂದೆ ಮದ್ಯಸೇವನೆಯ ಕೊಡುಗೆಗಳು ದೊಡ್ಡದು. ಆದುದರಿಂದ ಮಾಂಸ ನಿಷೇಧದ ಬದಲಿಗೆ, ಮದ್ಯ ನಿಷೇಧ ನಮ್ಮ ಚರ್ಚೆಯ ವಿಷಯವಾಗಬೇಕಾಗಿದೆ. ಆ ಮೂಲಕ ನಾವು ಹಿಂಸಾಚಾರ ರಹಿತ ಭಾರತವನ್ನು ನಿರ್ಮಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)