varthabharthi


ಭೀಮ ಚಿಂತನೆ

ಹಕ್ಕುಗಳನ್ನು ಪಡೆಯಲು ಬೇರೆ ದಾರಿ ಇದೆಯೇ?

ವಾರ್ತಾ ಭಾರತಿ : 18 Jul, 2019

23ನೇಯ ಮಾರ್ಚ್ 1929ರಂದು ಬೆಳಗಾವಿಯಲ್ಲಿ ಸಾಯಂಕಾಲ 4 ಘಂಟೆಗೆ ಬೆಳಗಾವಿ ಜಿಲ್ಲಾ ಬಹಿಷ್ಕೃತ ವರ್ಗದ ಸಾಮಾಜಿಕ ಪರಿಷತ್ತನ್ನು ಆಯೋಜಿಸಲಾಗಿತ್ತು! ಅದರಲ್ಲಿ ಅಲ್ಲಿಯ ಅಧ್ಯಕ್ಷರಾದ ದಲಿತರ ಸುಪ್ರಸಿದ್ಧ ನಾಯಕರಾದ ಸೀತಾರಾಮ್, ನಾಮದೇವ್, ಶಿವತರ್ಕರ್ ಅವರು ಶ್ರೀ ಕೊಂಡದೇವ್ ಶ್ರೀರಾಮ್ ಖೋಲವಡೀಕರ್ ಅವರೊಡನೆ 22-3-1929ರಂದು ಬೆಳಗಿನ 10:15ರ ಮೇಲ್‌ನಲ್ಲಿ ಬೆಳಗಾವಿಗೆ ಬಂದಿಳಿದರು. 23ನೇ ಮಾರ್ಚ್ 1929ರಂದು ಶನಿವಾರ ಪರಿಷತ್ತಿನ ಕೆಲಸ ಬೆಳಗಾವಿಯ ವಿದ್ಯಾರ್ಥಿ ಆಶ್ರಮದ ಮಾವಿನ ತೋಪಿನಲ್ಲಾರಂಭವಾಯಿತು.

ಮೊದಲಿಗೆ ವಿಷಯ ನಿಯಾಮಕ ಮಂಡಳದ ಜನ ಮಸೂದೆಗಳಲ್ಲಿ ತಯಾರಿಸಿಕೊಂಡರು. ಈ ಸಂದರ್ಭದಲ್ಲಿ ದಲಿತರ ಅಭ್ಯುದಯಕ್ಕಾಗಿ ನೇಮಿಸಲಾಗಿದ್ದ ಸ್ಟಾರ್ಟ್ ಕಮಿಟಿಯ ಸದಸ್ಯರಾದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಡಾ.ಸೋಲಂಕಿ, ಮೆಸ್ಸರ್ಸ್ ಜಾನವೇಕರ್, ದೇಶಪಾಂಡೆ, ರಾವ್‌ಸಾಹೇಬ್ ಚಿಕ್ಕೋಡಿ, ರಾವ್‌ಸಾಹೇಬ್ ಥೋರಾತ್, ಹಾಗೆಯೇ ಬೆಳಗಾವ್‌ನ ಮೇಲ್ಜಾತಿಯ ನಾಯಕರುಗಳಾದ ರಾ. ಮರಾಠೆ, ರಾ. ಗಜೇಂದ್ರಗಡಕರ್, ನಾಗಗೌಡಾ ಇವರಲ್ಲದೆ ದಲಿತರ ನಾಯಕರಾದ ರಾ. ಕೊಂಡದೇವ್ ಖೋಲವಡೀಕರ್, ದತ್ತೊಪಂತ ಪವಾರ್, ಡಾ. ರಮಾಕಂತ್ ಕಾಂಬಳೆ, ರಾ. ಯಶವಂತವಾರ್ ಪೋಳ್, ರಾಮಪ್ಪಾ ಕಾಂಬಳೆ ಹಾಗೂ ಧರ್ಮಣ್ಣಾ ಸಾಂಬ್ರಾಣಿ ಹಾಜರಿದ್ದರು. ಸ್ವಾಗತಾಧ್ಯಕ್ಷರ ಭಾಷಣ ಪ್ರತಿಪಕ್ಷಕ್ಕೆ ಸರಿಯಾಗಿ ಉತ್ತರ ಕೊಡುವಂತಹ ಭಾಷಣವಾಗಿತ್ತು. ಈ ಭಾಷಣ ಜನರ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಮೇಲ್ಜಾತಿಯವರು ಕೂಡ ಈ ಭಾಷಣದಿಂದ ಸಾಕಷ್ಟು ಕಲಿತರಾದ್ದರಿಂದ ಅವರ ಮನಸ್ಸಿನ ಮೇಲೂ ಈ ಭಾಷಣ ಒಳ್ಳೆಯ ಪರಿಣಾಮ ಬೀರಿರಬಹುದು. ಅಧ್ಯಕ್ಷರ ಭಾಷಣ ಮುಗಿದ ಮೇಲೆ ಅಧ್ಯಕ್ಷರ ವಿನಂತಿ ಹಾಗೂ ಎಲ್ಲ ಸಭಿಕರ ವಿನಂತಿಯನ್ನು ಮನ್ನಿಸಿ ದಲಿತ್ತೋದ್ಧಾರಕರು ಹಾಗೂ ದಲಿತರ ನಾಯಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತನಾಡಲು ಎದ್ದು ನಿಂತರು. ಚಪ್ಪಾಳೆಯ ಕರತಾಡನದಲ್ಲಿ ಅವರು ತಮ್ಮ ಭಾಷಣವನ್ನಾರಂಭಿಸಿದರು. ಅಧ್ಯಕ್ಷರೇ ಹಾಗೂ ನನ್ನ ಮೆಚ್ಚಿನ ಸಭಿಕರೇ,

ನಾವು ಬೇರೆ ಬೇರೆ ಜಾಗಗಳಲ್ಲಿ ಸಭೆಗಳನ್ನು ಆಯೋಜಿಸುತ್ತೇವೆ, ಭಾಷಣ ಮಾಡುತ್ತೇವೆ ಹಾಗೂ ಮಸೂದೆಗಳನ್ನು ಮಂಡಿಸುತ್ತೇವೆ. ದೊಡ್ಡ ದೊಡ್ಡ ಭಾಷಣಕಾರರನ್ನು ಕರೆಯಿಸಿ ಭಾಷಣಗಳನ್ನು ಮಾಡಿಸುತ್ತೇವೆ. ನನ್ನ ದೃಷ್ಟಿಯಲ್ಲಂತೂ ಇದು ಅಸ್ಪಶ್ಯತೆಯನ್ನು ತೊಲಗಿಸುವ ಮಾರ್ಗವಲ್ಲ. ನಮ್ಮ ಮೇಲಾಗುತ್ತಿರುವ ಅನ್ಯಾಯ ಅತ್ಯಾಚಾರಗಳ ಬಗ್ಗೆ ಮಸೂದೆ ತಯಾರಿಸಿ ಸರಕಾರಕ್ಕೆ ಕಳುಹಿಸಿದೆವು ಅಂದಿಟ್ಟುಕೊಳ್ಳಿ, ಒಂದು ಪಕ್ಷ ಸರಕಾರ ನಮ್ಮ ಅಸ್ಪಶ್ಯತೆಯನ್ನು ನಾಶ ಮಾಡಲು ಕಾನೂನಿನ ಮೂಲಕ ನಮಗಾಗಿ ಸಾರ್ವಜನಿಕ ಭಾವಿ, ಕೆರೆ, ಚಹಾದ ಅಂಗಡಿ, ದೇವಾಲಯಗಳನ್ನು ತೆರವುಮಾಡಿಕೊಟ್ಟರೂ ಆ ಕಾನೂನನ್ನು ನಾವೇ ಜಾರಿಗೆ ತರದೆ ಬೇರೆ ಮಾರ್ಗವಿಲ್ಲ. ನಾವು ಹಾಗೆ ಜಾರಿಗೆ ತರಲು ಅಸಮರ್ಥರಾಗಿದ್ದರೆ ಎಷ್ಟೇ ಒಳ್ಳೆಯ ಕಾಯ್ದೆಗಳು ಬಂದರೂ ಉಪಯೋಗವಿಲ್ಲ.

ನಮ್ಮ ಅಸ್ಪಶ್ಯತೆಯನ್ನು ನಾವೇ ನಾಶ ಮಾಡಬೇಕು! ಆ ದೃಷ್ಟಿಯಲ್ಲಿ ನಾವು ಪ್ರಬಲ ಹಾಗೂ ದಿಟ್ಟರಾದರೆ ಮಾತ್ರ ನಮ್ಮ ಅಸ್ಪಶ್ಯತೆ ನಾಶವಾದೀತು. ಇದಕ್ಕಾಗಿ ನಾವು ಸಾಕಷ್ಟು ಕಷ್ಟ ಪಡಬೇಕಿದೆ ಹಾಗೂ ಅಗತ್ಯ ಬಿದ್ದರೆ ಮೇಲ್ವರ್ಗದವರೊಡನೆ ಒಂದು ಕೈ ನೋಡಿಕೊಳ್ಳುವ ಪ್ರಸಂಗ ಬಂದರೂ ಧೈರ್ಯಗೆಡದೆ ಮುನ್ನಡೆಯಬೇಕಿದೆ. ದಲಿತ ಸಮಾಜ ಮೇಲ್ವರ್ಗದ ಸಮಾಜದೊಡನೆ ಸಹಕಾರ್ಯದಿಂದ ವರ್ತಿಸದೆ ಬೇರೆ ಮಾರ್ಗವಿಲ್ಲ. ದಲಿತ ಸಮಾಜ ಪರಾವಲಂಬಿಯಾಗಿದೆ, ಅದು ತಪ್ಪು ಅಂತ ಕೂಡ ನಾನು ಹೇಳುತ್ತಿಲ್ಲ. ದಲಿತ ಸಮಾಜ ಮೇಲ್ಜಾತಿಯವರೊಡನೆ ಸಹಕರಿಸದೆ ಬದುಕುವುದು ಕಷ್ಟ! ಇಷ್ಟೊಂದು ತಾಕತ್ತಿರುವ ಸಮಾಜದ ವಿರುದ್ಧ ಅಸಹಕಾರ ಘೋಷಿಸಿದರೆ ನಮ್ಮ ಕೆಲಸವಾಗುವುದಾದರೂ ಹೇಗೆ? ಎಂದು ಕೆಲವು ಚಿಂತಿಸುತ್ತಾರೆ. ಆದರೆ ಸ್ವಾವಲಂಬನೆಯ ದಾರಿಯೊಂದನ್ನು ಬಿಟ್ಟರೆ ಉಳಿದೆಲ್ಲಾ ದಾರಿಗಳು ಘಾತಕ ಹಾಗೂ ಉಪಯೋಗವಿಲ್ಲದ ದಾರಿಗಳಾಗಿರುವುದರಿಂದ ಆ ದಾರಿಗೆ ಹೋಗುವುದನ್ನು ಬಿಟ್ಟು ಬಿಡಬೇಕು ಅನ್ನುವುದನ್ನು ದಲಿತ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅರ್ಥಮಾಡಿಕೊಳ್ಳಬೇಕು. ದಲಿತ ಸಮಾಜದ ಮನುಷ್ಯ ಹೇಗೇ ಇರಲಿ, ಆತ ಎಷ್ಟೇ ಸರ್ವಗುಣ ಸಂಪನ್ನನಿರಲಿ! ಎಷ್ಟೇ ದೊಡ್ಡ ವಿದ್ವಾಂಸನಿರಲಿ! ಆತ ಕೇವಲ ಒಂದು ವಿಶಿಷ್ಟ ಜಾತಿಯಲ್ಲಿ ಹುಟ್ಟಿರುವುದರಿಂದ ಆತನ ಗುಣಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗಾಗಿ ನಾವು ನಮ್ಮ ಹಕ್ಕುಗಳನ್ನು ಪಡೆಯಲು ದಬ್ಬಾಳಿಕೆಯ ಧೋರಣೆ ಸ್ವೀಕರಿಸಲೇ ಬೇಕಿದೆ ಹಾಗೂ ಸ್ವೀಕರಿಸದೆ ಈ ನೂಕುನುಗ್ಗಲಿನ ಜೀವನದಲ್ಲಿ ಬದುಕುವುದು ಕಷ್ಟ.

ನಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ದೂರ ಮಾಡಬೇಕಾದ ನಮಗಿರುವ ಎರಡನೆಯ ಉಪಾಯವೆಂದರೆ ಸರಕಾರದಲ್ಲಿ ಅಧಿಕಾರ ಸ್ಥಾನ ಗಳಿಸುವುದು! ವರ್ಣಾಶ್ರಮದ ಚೌಕಟ್ಟಿನಿಂದ ನಮಗೆಂದೂ ಹೊರಗೇ ಉಳಿದುಕೊಳ್ಳಬೇಕಾಗುತ್ತದೆ. ಈ ಚೌಕಟ್ಟನ್ನು ಮುರಿದು ಒಳಗೆ ಹೋಗಲು ರಾಜಕೀಯ ಅಧಿಕಾರ ನಮಗೆ ಬೇಕೇ ಬೇಕು. ಅದಿಲ್ಲದೆ ಸಮಾಜದಲ್ಲಿ ನಾವು ವರ್ಚಸ್ಸು ಸಾಧಿಸಲಾರೆವು. ಮಹಾರಾಷ್ಟ್ರದಲ್ಲಿ ಇಂದು ಬ್ರಾಹ್ಮಣರ ವರ್ಚಸ್ಸೇಕೆ ಇಷ್ಟೊಂದಿದೆ? ಅನ್ನುವುದಕ್ಕೆ ಉತ್ತರ ಒಂದೆ. ಬೇರೆ ಏನೇ ಇರಲಿ ಇರದಿರಲಿ ಅವರ ಕೈಯಲ್ಲಿ ರಾಜಕೀಯ ಅಧಿಕಾರವಿದೆ ಅನ್ನುವುದನ್ನು ಮರೆಯುವಂತಿಲ್ಲ.

ಇಂದು ಮಹಾರಾಷ್ಟ್ರದಲ್ಲಿ ಬ್ರಾಹ್ಮಣರ ವರ್ಚಸ್ಸೇಕಿದೆ ಅನ್ನುವುದಕ್ಕೆ ಒಂದು ಇತಿಹಾಸ ಪ್ರಸಿದ್ಧ ಕತೆ ಹೇಳುತ್ತೇನೆ. ನನ್ನ ಪ್ರಾಂತದಲ್ಲಿರುವ ಬಾಳಾಜಿ ವಿಶ್ವನಾಥ್ ಹಾಗೂ ಅವರ ಜಾತಿ ಬಾಂಧವರಾದ ಚಿತ್ಪಾವನ ಬ್ರಾಹ್ಮಣರು ಪೇಶ್ವೆಗಳ ಆಳ್ವಿಕೆಯ ಮೊದಲು ಬಹಳ ಕಷ್ಟದಿಂದ ದಿನ ಕಳೆಯುತ್ತಿದ್ದರು. ಆದರೆ ಪೇಶ್ವೆಕಾಲದಲ್ಲಿ ರಾಜಕೀಯ ಅಧಿಕಾರ ಅವರ ಕೈಗೆ ಬಂದ ಕೂಡಲೇ ಮಹಾರಾಷ್ಟ್ರದಲ್ಲಿ ತಮ್ಮ ವರ್ಚಸ್ಸನ್ನವರು ಸ್ಥಾಪಿಸಿದರು. ಇಂದು ಸರಕಾರಿ ಕಚೇರಿಗಳಿಂದ ಬ್ರಾಹ್ಮಣರನ್ನು ತೆಗೆದು ಹಾಕಿದರೆ ಅವರ ವರ್ಚಸ್ಸೂ ಇರುವುದಿಲ್ಲ. ಉಳಿದ ಪ್ರಾಂತಗಳಲ್ಲಿ ಬ್ರಾಹ್ಮಣರಿಗೆ ಯಾವುದೇ ಮಹತ್ವವಿಲ್ಲ. ಒಟ್ಟಿನಲ್ಲಿ ನಮ್ಮ ಹಕ್ಕುಗಳನ್ನು ಪಡೆಯಲು ದಬ್ಬಾಳಿಕೆ ನಡೆಸುವುದು ಹಾಗೂ ರಾಜಕೀಯ ಅಧಿಕಾರ ದೊರಕಿಸಿಕೊಳ್ಳುವುದರ ಮೂಲಕವೇ ನಾವು ಅಸ್ಪಶ್ಯತೆಯನ್ನು ಹೋಗಲಾಡಿಸಬಹುದು ಹಾಗೂ ಉಳಿದ ಸಮಾಜದೊಂದಿಗೆ ಸಮಾನ ದರ್ಜೆ ಗಳಿಸಬಹುದು. ಇಷ್ಟು ಹೇಳಿ ನೀವು ನನ್ನ ಎರಡು ಮಾತುಗಳನ್ನು ಶಾಂತಚಿತ್ತರಾಗಿ ಕೇಳಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನರ್ಪಿಸಿ ಭಾಷಣ ಮುಗಿಸುತ್ತೇನೆ.

ಪರಿಷತ್ತಿನಲ್ಲಿ ಮಂಜೂರಾದ ಮಸೂದೆಗಳ ಮೇಲೆ ಮೆಸ್ಸರ್ಸ್ ಮಾನೆ, ವರಾಳೆ, ಅಸೋದೆ, ಇಂಗಳೆ, ಕೊಂಡದೇವ್, ಶ್ರೀರಾಮ್ ಖೋಲವಡೀಕರ್, ಕೋಲ್ಹಾಪುರದ ಪೋಳ್(ಢೋರ್) ಹಾಗೂ ಧಾರವಾಡದ ಸಾಂಬ್ರಾಣೆ (ಢೋರ್) ಈ ಪ್ರಸಿದ್ಧ ನಾಯಕರ ಭಾಷಣಗಳಾದವು.

ಬೆಳಗಾವಿ ಜಿಲ್ಲೆ ಬಹಿಷ್ಕೃತ ವರ್ಗದ ಸಾಮಾಜಿಕ ಪರಿಷತ್ತಿನ 1ನೆಯ ಅಧಿವೇಶನದಲ್ಲಿ ಮಂಜೂರಾದ ಮಸೂದೆಗಳು   

ಮೊದಲನೆಯ ಮಸೂದೆ
(ಅ) ಅಸ್ಪಶ್ಯತೆಯನ್ನು ನಂಬುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿ ಪರಿಗಣಿಸತಕ್ಕದ್ದು.
(ಆ) ಸರಕಾರದ ಪಟ್ಟಿಯಿಂದ ಜಾತಿ ಅನ್ನುವ ಕಾಲಂನ್ನು ತೆಗೆದುಹಾಕಬೇಕು.

ಎರಡನೆಯ ಮಸೂದೆ 
(ಅ) ಹುಟ್ಟುತ್ತಲೇ ಯಾರನ್ನೂ ಶ್ರೇಷ್ಠ ಅಥವಾ ಕನಿಷ್ಠ ಎಂದು ತಿಳಿಯಬಾರದು. ವೇದ, ಪುರಾಣ, ಶಾಸ್ತ್ರ ಹಾಗೂ ಇತರ ಧರ್ಮಗ್ರಂಥಗಳಲ್ಲಿ ಹುಟ್ಟಾ ಉಚ್ಚನೀಚತೆಯನ್ನು ಪ್ರತಿಪಾದಿಸಲಾಗಿರುವುದರಿಂದ ಈ ಗ್ರಂಥಗಳನ್ನು ನಂಬಬಾರದು.
(ಬ) ವರ್ಣಾಶ್ರಮ ಧರ್ಮವು ಹಿಂದೂ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಅನ್ನುವ ಭೇದ ಭಾವ ಮೂಡಿಸಿದೆ. ಹಾಗಾಗಿ ವರ್ಣಾಶ್ರಮದ ಘಾತಕ ತತ್ವಗಳನ್ನು ಈ ಪರಿಷತ್ತು ನಿಷೇಧಿಸುತ್ತದೆ. ತಮ್ಮ ಜಾತಿಯನ್ನು ಎತ್ತಿತೋರಿಸುವ ಶಬ್ದಗಳನ್ನು ತಮ್ಮ ಹೆಸರಿನ ಮುಂದೆಯಾಗಲಿ ಹಿಂದೆಯಾಗಲಿ ಬರೆಯತಕ್ಕದ್ದಲ್ಲ.
(ಕ) ರಾಷ್ಟ್ರದ ಪ್ರಗತಿಗಾಗಿ ಹಾಗೂ ಸಮಾನತೆ ಸ್ಥಾಪಿಸುವುದಕ್ಕಾಗಿ ಅಸ್ಪಶ್ಯತೆಯ ರೂಢಿಯನ್ನು ಆದಷ್ಟು ಬೇಗ ಹೋಗಲಾಡಿಸುವುದು ಅಗತ್ಯವಾಗಿದೆ. ಹಾಗಾಗಿ ಸಮಾಜದ ಅಥವಾ ಕಾಯ್ದೆಯ ದೃಷ್ಟಿಯಿಂದ ಯಾವುದೇ ಜಾತಿಯನ್ನು ಉಚ್ಚ ಇಲ್ಲವೆ ನೀಚವೆಂದು ಪರಿಗಣಿಸುವುದು ತಪ್ಪು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಸಾರ್ವಜನಿಕ ಸ್ಥಳಗಳಿಗೆ ಹೋಗುವ ಹಕ್ಕಿದ್ದು ಆ ಹಕ್ಕನ್ನು ಆತ ಪಡೆದುಕೊಳ್ಳಲೇ ಬೇಕು.

ಮೂರನೆಯ ಮಸೂದೆ
ಸರಕಾರ ತಾಳುವ ಕೆಲವು ಧಾರ್ಮಿಕ ಧೋರಣೆಯಿಂದಾಗಿ ಅಸಂಖ್ಯ ಬಹುಜನ ಸಮಾಜಕ್ಕೆ ಅವಮಾನ ಸಹಿಸಿಕೊಳ್ಳಬೇಕಾಗುತ್ತಿದೆ. ಈ ಜನರ ಸಾಮಾಜಿಕ ಹಕ್ಕುಗಳು ಕಸಿಯಲ್ಪಟ್ಟಿವೆ ಹಾಗೂ ಅವರ ಏಳಿಗೆಗೆ ಪೆಟ್ಟು ಬಿದ್ದಿದೆ. ಹಾಗಾಗಿ ಇನ್ನು ಮುಂದೆಯಾದರೂ ಸರಕಾರ ಧಾರ್ಮಿಕತೆಯ ಬಗ್ಗೆ ತಟಸ್ಥ ಧೋರಣೆಯನ್ನು ಬಿಟ್ಟು ಬಹುಜನ ಸಮಾಜದ ಸಾಮಾಜಿಕ ಸ್ವಾತಂತ್ರವನ್ನು ಕಾಪಾಡುವ ಪ್ರಯತ್ನ ಮಾಡಬೇಕು. ಹಾಗೆಯೇ ಈ ವಿಷಯದಲ್ಲಿ ಸಮಾಜ ಸುಧಾರಕರ ವತಿಯಿಂದ ಪ್ರಚಲಿತ ಕಾಯ್ದೆಯಲ್ಲಿ ಬದಲಾವಣೆ ತರಬೇಕು.

ನಾಲ್ಕನೆಯ ಮಸೂದೆ
ಅ) ಸರಕಾರ ಇನ್ನು ಮುಂದೆ ವಾರಸುದಾರರೇ ಇಲ್ಲದಂತಹ ಜಮೀನುಗಳನ್ನು ಅತ್ಯಂತ ಬಡವರಿಗೆ ಕೊಡತಕ್ಕದ್ದು. ಎಲ್ಲಕ್ಕೂ ಮೊದಲು ಈ ಜಮೀನುಗಳನ್ನು ದಲಿತರಿಗೆ ಕೊಡತಕ್ಕದ್ದು. ಸರಕಾರ ಇಂತಹ ಜನರಿಗೆ ಹೆಚ್ಚು ಮೊತ್ತದ ಗ್ರಾಂಟ್‌ಗಳನ್ನು ಕೊಡಮಾಡಿ ಇಂತಹ ಜಮೀನುಗಳನ್ನು ಸಮತಟ್ಟು ಮಾಡಿಕೊಳ್ಳುವುದಕ್ಕೆ ಉತ್ತೇಜನ ನೀಡಬೇಕು ಎಂದು ಈ ಪರಿಷತ್ತು ವಿನಂತಿಸುತ್ತದೆ. ಅಷ್ಟೇ ಅಲ್ಲದೆ ಸರಕಾರಿ ಕೆಲಸಗಳಲ್ಲಿ ದಲಿತ ಉಮೇದುವಾರರನ್ನು ಸೇರಿಸಿಕೊಳ್ಳುವ ಉದಾರತೆಯನ್ನು ತೋರಿಸಬೇಕು.
ಬ) ದಲಿತ ಸಮಾಜದ ಸಾಕ್ಷರತೆಯು ಉಳಿದ ಸಮಾಜದ ಸಾಕ್ಷರತೆಯ ಮಟ್ಟಕ್ಕೆ ತಲುಪುವ ತನಕ ಸರಕಾರ ದಲಿತ ವಿದ್ಯಾರ್ಥಿಗಳಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ನೂರು ಮಕ್ಕಳಿಗಾಗುವಷ್ಟು ಬೋರ್ಡಿಂಗ್ ಕಟ್ಟಡಗಳ ವ್ಯವಸ್ಥೆ ಮಾಡಬೇಕು.

ಐದನೆಯ ಮಸೂದೆ
ಚಮ್ಮಾರರ ವ್ಯಾಪಾರ ಸಾಕಷ್ಟು ಕಷ್ಟ ಅನುಭವಿಸುತ್ತಿದೆ. ಹಾಗಾಗಿ ಅವರಿಗೆ ಶಿಕ್ಷಣ ತರಗತಿಗಳನ್ನು ಆರಂಭಿಸಬೇಕು ಹಾಗೂ ಈ ಸಮಾಜದ ಜನ ಸಹಕಾರತತ್ವದ ಮೇಲೆ ಆರಂಭಿಸುವ ಸಂಸ್ಥೆಗಳಿಗೆ ಸರಕಾರ ಉದಾರತೆಯಿಂದ ಸಹಾಯಮಾಡಿ ಅವರಲ್ಲಿರುವ ಯೋಗ್ಯ ವಿದ್ಯಾರ್ಥಿಗಳಿಗಾಗಿ ಹಣ ಖರ್ಚು ಮಾಡಿ ಅವರು ತಮ್ಮ ವ್ಯಾಪಾರದ ಶಿಕ್ಷಣ ಪಡೆಯುವಂತಾಗಲು ವಿದೇಶಕ್ಕೆ ಕಳಿಸಬೇಕು ಎಂದು ಪರಿಷತ್ತಿಗೆ ಅನಿಸುತ್ತದೆ.

ಆರನೆಯ ಮಸೂದೆ
ಅ) ಹುಡುಗರಿಗೆ 20 ವರ್ಷ ಹಾಗೂ ಹುಡುಗಿಯರಿಗೆ 16ವರ್ಷ ವಯಸ್ಸಾಗುವ ತನಕ ಮದುವೆ ಮಾಡಬಾರದು.
ಬ) ಯಾವುದೇ ಸಮಾಜದ, ಜಾತಿಯ ಇಲ್ಲವೆ ವರ್ಗದ ಹೆಣ್ಣು ಗಂಡಿಗೆ ಅಂತರ್ಜಾತಿಯ ವಿವಾಹವಾಗಲು ಸ್ವಾತಂತ್ರವಿರಬೇಕು.
ಕ) ಮದುವೆ ಇಲ್ಲವೆ ಇತರ ಉತ್ಸವಗಳಲ್ಲಿ ದಲಿತರು ಆದಷ್ಟು ಕಡಿಮೆ ಖರ್ಚು ಮಾಡಬೇಕು ಹಾಗೆಯೇ ಸಾರ್ವಜನಿಕ ಮದುವೆಗಳಲ್ಲಿ ಒಂದೇ ಊಟ ಹಾಕಿಸುವುದನ್ನು ಬಿಟ್ಟರೆ ಹೆಚ್ಚು ಖರ್ಚು ಮಾಡಬಾರದು. ಉಳಿದ ಹಣವನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಬೇಕು.

ಏಳನೆಯ ಮಸೂದೆ
 ದಲಿತರಿಗೆ ಪ್ರವೇಶ ನಿಷಿದ್ಧವಿರುವಂತಹ ಹೊಟೇಲ್ ಇಲ್ಲವೆ ಖಾನಾವಳಿಗಳನ್ನು ತೆರೆಯಲು ಸರಕಾರ ಅನುಮತಿ ಕೊಡಬಾರದು. ಹಾಗೆಯೇ ರೈಲ್ವೆಯವರ ಅಧಿಕಾರದಲ್ಲಿರುವ ಹೊಟೇಲ್ ಹಾಗೂ ಖಾನಾವಳಿಗಳಲ್ಲಿ ದಲಿತರನ್ನು ಸಮನಾಗಿ ಕಾಣುವಂತೆ ರೈಲಿನ ಅಧಿಕಾರಿಗಳು ಪ್ರಯತ್ನಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)