varthabharthi


ನಿಮ್ಮ ಅಂಕಣ

ಗುಂಪು ಥಳಿತ: ಹೊಸ ಭಾರತದ ಹೊಸ ಸಾಮಾನ್ಯ ಸ್ಥಿತಿ

ವಾರ್ತಾ ಭಾರತಿ : 20 Jul, 2019
ಅಶ್ರಫ್ ಲೋನೆ

‘‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’’ ಎಂಬ ಆಶ್ವಾಸನೆಗಳ ನೆಲೆಯಲ್ಲಿ 2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂತು. ಇನ್ನೊಂದೆಡೆ ಕಾಶ್ಮೀರದಲ್ಲಿ ನಡೆದ ಪುಲ್ವಾಮ ಸ್ಫೋಟ ಮತ್ತು ಬಾಲಕೋಟ್ ವಾಯುದಾಳಿಯನ್ನಾಧರಿಸಿ ಅದು ದೇಶಭಕ್ತಿ ಮತ್ತು ಹೈಪರ್ ರಾಷ್ಟ್ರೀಯವಾದದ ಭೋರ್ಗರೆವ ಭಾಷಣಗಳಿಗೆ ಮೊರೆ ಹೋಯಿತು. ತನ್ನ ಮೊದಲ ಅಧಿಕಾರಾವಧಿಯ ಸೋಲುಗಳನ್ನು ಮುಚ್ಚಿಡಲು ಬಾಲಕೋಟ್ ವಾಯುದಾಳಿ ಕೇವಲ ಕಣ್ಣೊರೆಸುವ ಒಂದು ತಂತ್ರವಾಗಿತ್ತು. ಭಾರತ ಮಾತೆಯ ಗೌರವವನ್ನು ಕಾಪಾಡುವುದಕ್ಕಾಗಿ ಅಕ್ರಮ ವಲಸೆಗಾರರು ಕೊಲ್ಲಲ್ಪಡಲು ಯೋಗ್ಯರು ಎನ್ನುತ್ತಾ ಬಂಗಾಳದ ವಲಸಿಗರನ್ನು ಗೆದ್ದಲು ಹುಳಗಳೆಂದು ಕರೆಯುವಲ್ಲಿಂದ ಆರಂಭಿಸಿ ವಿಪಕ್ಷಗಳ ತಂತ್ರಗಳನ್ನು ಮಣಿಸಿ ಭಾರೀ ಬಹುಮತದೊಂದಿಗೆ ಮರಳಿ ಅಧಿಕಾರ ಪಡೆಯಲು ಬಿಜೆಪಿ ಎಲ್ಲ ತಂತ್ರಗಳನ್ನು ಬಳಸಿಕೊಂಡಿತು.

ಬಿಜೆಪಿ ತನ್ನ ಆಟವನ್ನು ಚೆನ್ನಾಗಿ ಆಡಿ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಅವಮಾನಿಸಲು ಪ್ರತಿಯೊಂದು ಅವಕಾಶವನ್ನೂ ಉಪಯೋಗಿಸಿಕೊಂಡಿತು. ನೋಟು ರದ್ದತಿಯಿಂದ ಆರಂಭಿಸಿ ಬಾಲಕೋಟ್ ದಾಳಿಗಳವರೆಗೆ ಅದು ರಾಜಕೀಯ ಲಾಭಗಳಿಸುವ ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲ. ‘‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’’ ಘೋಷಣೆಯೋ ಈ ಬಾರಿ ಖಂಡಿತವಾಗಿಯೂ ಅಚ್ಛೇ ದಿನ್ ಬರುತ್ತದೆಂದು ಎಲ್ಲರೂ ನಂಬುವಂತೆ ಮಾಡಿತು. ದುಃಖದ ವಿಷಯವೆಂದರೆ ಜನಸಾಮಾನ್ಯರ ಪಾಲಿಗೆ ಅಚ್ಛೇ ದಿನವೂ ಬರಲಿಲ್ಲ. ತಾನು ಸಬ್ ಕಾ ವಿಶ್ವಾಸ್ (ಎಲ್ಲರ ವಿಶ್ವಾಸ) ಗಳಿಸಲು ಬಯಸುತ್ತೇನೆ ಎಂಬುದಕ್ಕೆ ಬಿಜೆಪಿ ಯಾವ ಸಂಕೇತಗಳನ್ನೂ ನೀಡಿಲ್ಲ. ಭಾರತದ ಮುಸ್ಲಿಮರು ಪಾಡು ಪಡುತ್ತಲೇ ಇದ್ದಾರೆ. ಪ್ರತಿದಿನ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅವರನ್ನು ಹೊಡೆದು ಕೊಲ್ಲಲಾಗುತ್ತಿದೆ ಹಾಗೂ ಅವರ ಮೇಲೆ ಗುಂಪು ಹಲ್ಲೆ ನಡೆಸಲಾಗುತ್ತಿದೆ.

ಬಿಜೆಪಿ ಭಾರೀ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬಂದ ಬಳಿಕ ಮೊತ್ತ ಮೊದಲ ಗುಂಪು ಹಲ್ಲೆ ಜಾರ್ಖಂಡ್‌ನಲ್ಲಿ ತಬ್ರೇಝ್ ಅನ್ಸಾರಿಯ ಮೇಲೆ ನಡೆಯಿತು. ಗುಂಪು ಆತನನ್ನು ಸುತ್ತುವರಿದು ‘‘ಜೈ ಶ್ರೀರಾಮ್’’ ಎಂದು ಹೇಳುವಂತೆ ಬಲಾತ್ಕರಿಸುತ್ತಾ ಆತನನ್ನು ಲಾಠಿಗಳಿಂದ ಥಳಿಸಿದರು. ಥಳಿಸಿದವರನ್ನು ಬಂಧಿಸುವುದಕ್ಕೆ ಬದಲಾಗಿ ಪೊಲೀಸರು ತಬ್ರೇಝ್‌ನನ್ನೇ ಬಂಧಿಸಿದ್ದರು. ನಾಲ್ಕು ದಿನಗಳ ಬಳಿಕ ಆತನನ್ನು ಆಸ್ಪತ್ರೆಗೆ ಕೊಂಡೊಯ್ದೆಗ ಆತ ಮೃತಪಟ್ಟಿದ್ದಾನೆಂದು ಘೋಷಿಸಲಾಯಿತು. ಇನ್ನೊಂದು ಘಟನೆಯಲ್ಲಿ ಸನಾವುಲ್ಲಾ ಖಾನ್ ಎಂಬಾತನನ್ನು ಕಳ್ಳತನದ ಆಪಾದನೆಯ ಮೇರೆಗೆ ಹಿಡಿದು ಥಳಿಸಲಾಯಿತು. ಥಳಿಸಿದ ಬಳಿಕ ಕ್ರಿಮಿನಲ್‌ಗಳನ್ನು ಬಚಾವ್ ಮಾಡುವುದಕ್ಕಾಗಿ ಸಂತ್ರಸ್ತರ ಮೇಲೆಯೇ ಪೊಲೀಸರು ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಾರೆ ಮತ್ತು ಇದು ಕಳೆದ ಐದು ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಮಂದಿಯನ್ನು ‘ಗೋ ಮಾತಾ ಕೀ ಜೈ’ ಎಂದು ಹೇಳುವಂತೆ ಬಲಾತ್ಕರಿಸಿ ಬೆದರಿಕೆ ಹಾಕುವ ಮತ್ತು ಗುಂಪು ಹಲ್ಲೆ ನಡೆಸುವ ಈ ಚಕ್ರ ಯಾವುದೇ ತಡೆಯಿಲ್ಲದೆ ಮುಂದುವರಿಯುತ್ತಲೇ ಇದೆ.

ದ್ವೇಷ ಅಪರಾಧಗಳು ವಿಶೇಷವಾಗಿ ಚಿಕ್ಕಪುಟ್ಟ ಕಾರಣಗಳಿಗಾಗಿ ಗುಂಪು ಹಲ್ಲೆ ಕಳೆದ ಐದು ವರ್ಷಗಳಲ್ಲಿ ಹೆಚ್ಚುತ್ತಾ ಹೋಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹಲ್ಲೆಗಳಿಗೆ ಬೆಂಬಲ ದೊರಕಿದಂತಾಗಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಬೆದರಿಸಲು ಮತಾಂಧರಿಗೆ ಮತ್ತು ಪೊಲೀಸರಿಗೆ ಸರಕಾರ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಕೆಲವು ಸಚಿವರು ನೀಡಿರುವ ಕೋಮುವಾದಿ ಹೇಳಿಕೆಗಳು ಬಹುಸಂಖ್ಯಾತ ಸಮಾಜದಲ್ಲಿರುವ ಅತಿ ರಾಷ್ಟ್ರೀಯವಾದಿಗಳಿಗೆ ಮತಾಂಧರಿಗೆ ಮತ್ತು ಪೊಲೀಸರಿಗೆ ಮುಸ್ಲಿಮರ ಮೇಲೆ ದಾಳಿ ನಡೆಸಲು ಪ್ರೋತ್ಸಾಹ ನೀಡಿದೆ. ಇತ್ತೀಚೆಗೆ ಅಸ್ಸಾಂನಲ್ಲಿ ಕೆಲವು ಮುಸ್ಲಿಂ ಪುರುಷರನ್ನು ಥಳಿಸಲಾಯಿತು. ಮುಂಬೈಯಲ್ಲಿ ಓರ್ವ ಮುಸ್ಲಿಂ ಚಾಲಕ ಫೈಝಲ್ ಉಸ್ಮಾನ್ ಎಂಬಾತನನ್ನು ಬೈದು ಅವಮಾನಿಸಿ ಥಳಿಸಿ ‘ಜೈ ಶ್ರೀರಾಮ್’ ಎಂದು ಹೇಳುವಂತೆ ಬಲಾತ್ಕರಿಸಿತು. ಕೋಲ್ಕತಾದಲ್ಲಿ ಓರ್ವ ಮುಸ್ಲಿಂ ಶಿಕ್ಷಕ ಶಾರುಖ್ ಹಲ್ದಾರ್ ಎಂಬಾತನನ್ನು ದೂಷಿಸಿ ರೈಲಿನಿಂದ ಹೊರಗೆ ತಳ್ಳಲಾಯಿತು. ಇಂತಹದೇ ವರದಿಗಳು ಭಾರತದ ಇತರ ರಾಜ್ಯಗಳಿಂದಲೂ ಬರುತ್ತಿವೆ. ಭಾರತ ತನ್ನ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಭಾವಪುಂಜಗಳನ್ನು, ಮೌಲ್ಯಗಳನ್ನು ಹಿಂದುತ್ವ ಗುಂಪುಗಳಿಂದಾಗಿ ಕಳೆದುಕೊಂಡಿದೆ. ಆದರೆ ದ್ವೇಷ ಮತ್ತು ಗುಂಪು ಹಲ್ಲೆ ಪ್ರಕರಣಗಳು ಎಲ್ಲೋ ನಡೆಯುವ ಅಪರೂಪದ ಘಟನೆಗಳಲ್ಲ. ಈ ಹಿಂದುತ್ವ ಗುಂಪುಗಳಿಗೆ ಸಂಪೂರ್ಣವಾಗಿ ಸರಕಾರದ ಬೆಂಬಲ ಇದೆ. ಹಲ್ಲೆಕೋರರು ಒಂದು ಅಪರಾಧ ಮಾಡಿದಾಗ ಪೊಲೀಸರು ಅವರ ಪರವಾಗಿ ನಿಲ್ಲುತ್ತಾರೆ ಮತ್ತು ಭಾರತದ ನ್ಯಾಯಾಂಗವನ್ನು ಈಗ ಒಂದು ಅಣಕು ವ್ಯವಸ್ಥೆಗೆ ಇಳಿಸಲಾಗಿದೆ.

ದಿನ ಕಳೆದಂತೆ ಭಾರತದ ಮುಸ್ಲಿಮರನ್ನು ಹೆಚ್ಚು ಹೆಚ್ಚಾಗಿ ಸಮಾಜದ ಅಂಚಿಗೆ ತಳ್ಳಲಾಗುತ್ತಿದೆ. ಬೆದರಿಕೆಗಳು ಹಾಗೂ ಗುಂಪು ಹಲ್ಲೆಗಳ ಮೂಲಕ ಭಾರತ ಮತ್ತು ಅಲ್ಲಿರುವ ಅಲ್ಪಸಂಖ್ಯಾತರನ್ನು ಭಯದ ವಾತಾವರಣ ಆವರಿಸುತ್ತಿದೆ. ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್‌ಆ್ಯಪ್ ಮುಸ್ಲಿಮರು ಸುಲಭವಾಗಿ ಹಿಂಸೆಗೆ ಗುರಿಯಾಗುವ ಹಾಗೆ ಮಾಡಿವೆ. ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಹಿಂಸೆಗಾಗಿ ವಿಶ್ವಸಂಸ್ಥೆ ಮತ್ತು ವಿಶ್ವದ ಬಲಿಷ್ಠ ರಾಷ್ಟ್ರಗಳು ಭಾರತವನ್ನು ಟೀಕಿಸಿವೆ. ಆದರೆ ಭಾರತ ಈ ಹಿಂಸೆ ಮತ್ತು ಗುಂಪು ಹಲ್ಲೆಗಳು ನಡೆಯಿತು ಎಂಬುದನ್ನು ಅಲ್ಲಗಳೆದಿದೆ. ಈ ಹುಚ್ಚನ್ನು, ಮತಾಂಧತೆ ಹಾಗೂ ದ್ವೇಷವನ್ನು ಹೇಗೆ ತಡೆಹಿಡಿಯುವುದು? ಎಂಬುದೇ ಇಂದಿನ ತುರ್ತು ಪ್ರಶ್ನೆ ಹಾಗೂ ಕಾಳಜಿಯಾಗಿದೆ. ಈ ಉನ್ಮಾದದ ಸಾಮೂಹಿಕ ಸನ್ನಿಯ ಹಾಗೂ ಹಿಂದುತ್ವದ ವಿರುದ್ಧ ಕನಿಷ್ಠ ರಾಜಕೀಯ ಮಟ್ಟದಲ್ಲಾದರೂ ಎಲ್ಲಾ ಪಕ್ಷಗಳು ಒಂದಾಗಿ ಹೋರಾಡಬೇಕಾಗಿದೆ. ಇದು ಇಂದಿನ ಅತ್ಯಂತ ಅವಶ್ಯಕವಾದ ಹೆಜ್ಜೆಯಾಗಬೇಕು. ಪ್ರತಿಯೊಂದು ಮಟ್ಟದಲ್ಲಿ, ಪ್ರತಿಯೊಂದು ರಂಗದಲ್ಲಿ ನಾವು ಈ ಹಿಂಸೆ ಮತ್ತು ಗುಂಪು ಹಲ್ಲೆ ವಿಷಯವನ್ನು ಎತ್ತಿ ಭಾರತದ ಜಾತ್ಯತೀತತೆಯನ್ನು ಮತ್ತು ಅಲ್ಪಸಂಖ್ಯಾತರನ್ನು ಹಿಂದುತ್ವ ಶಕ್ತಿಗಳ ಕೋಪಾಗ್ನಿಯಿಂದ ರಕ್ಷಿಸಬೇಕಾಗಿದೆ.

ಕೃಪೆ: countercurrents    

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)