varthabharthi


ನಿಮ್ಮ ಅಂಕಣ

1969ರ ಜುಲೈ 19ರಂದು 14 ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿರುವುದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿಸಿದ್ದರು.

ಬ್ಯಾಂಕ್ ರಾಷ್ಟ್ರೀಕರಣಕ್ಕೆ 50 ವರ್ಷ

ವಾರ್ತಾ ಭಾರತಿ : 20 Jul, 2019
ಜೈರಾಮ್ ರಮೇಶ್, ಮಾಜಿ ಕೇಂದ್ರ ಸಚಿವ

1969ರ ಜುಲೈ 12 ಹಾಗೂ ಜುಲೈ 15ರ ಮಧ್ಯೆ ಹಕ್ಸರ್ ಮತ್ತು ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಚರ್ಚೆ ನಡೆಸಿರಬೇಕು ಎಂಬುದು ನನ್ನ ಊಹೆ. 1969ರ ಜುಲೈ 16ರಂದು ದೇಶದ ಅತ್ಯಂತ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದ ಕೆ.ಎನ್. ರಾಜ್‌ರನ್ನು ಭೇಟಿಯಾಗಿ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವಂತೆ ಹಕ್ಸರ್‌ಗೆ ಇಂದಿರಾಗಾಂಧಿ ಸೂಚಿಸಿದ್ದರು.


ಬ್ಯಾಂಕ್ ರಾಷ್ಟ್ರೀಕರಣವಾದ ನಾಲ್ಕು ವರ್ಷಗಳ ಬಳಿಕ ಘೋಷ್ ಮತ್ತು ಹಕ್ಸರ್ ರೈಲಿನಲ್ಲಿ ಕೋಲ್ಕತಾಕ್ಕೆ ತೆರಳುತ್ತಿದ್ದರು. 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ನಿಟ್ಟಿನಲ್ಲಿ ಅಷ್ಟೊಂದು ರಹಸ್ಯವಾಗಿ ಮತ್ತು ತ್ವರಿತವಾಗಿ ತೆಗೆದುಕೊಂಡ ನಿರ್ಧಾರ ಸರಿಯಾದುದೇ ಎಂದು ಘೋಷ್ ಕೇಳಿದಾಗ ಹಕ್ಸರ್ ದೃಢವಾಗಿ ಉತ್ತರಿಸಿದ್ದರು- ಖಂಡಿತ. ಸಂಶಯವೇ ಇಲ್ಲ. ನಿರ್ಧಾರ ಕೈಗೊಂಡ ಸಮಯ ರಾಜಕೀಯ ಅವಶ್ಯಕತೆಯಿಂದ ಪ್ರೇರಿತವಾಗಿರಬಹುದು. ಆದರೆ ಈಗ ಅಲ್ಲವಾದರೆ ವಿಳಂಬವಾಗಿಯಾದರೂ ಈ ನಿರ್ಧಾರವನ್ನು ನಾವು ಕೈಗೊಳ್ಳಲೇ ಬೇಕಿತ್ತು.


ಈ ಕೂಡಲೇ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸ ಲಾಗುತ್ತದೆ ಎಂದು 1969ರ ಜುಲೈ 9ರವರೆಗೂ ಪಿ. ಎನ್. ಹಕ್ಸರ್ (ಇಂದಿರಾ ಗಾಂಧಿಯವರ ಪ್ರಧಾನ ಕಾರ್ಯದರ್ಶಿ)ಗೆ ಸಂಪೂರ್ಣ ಮನವರಿಕೆಯಾಗಿರಲಿಲ್ಲ. ಮುಂದಿನ ಮೂರನೇ ದಿನದಲ್ಲಿ ಇಂದಿರಾಗಾಂಧಿಯವರ ಪ್ರಭುತ್ವಕ್ಕೆ ಹೊಡೆತ ಬೀಳುವಂತಹ ಘೋಷಣೆ ಹೊರಬಿದ್ದಿತ್ತು. ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್‌ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಮುಂದಿನ ನಾಲ್ಕನೇ ದಿನದಲ್ಲಿ ಮೊರಾರ್ಜಿ ದೇಸಾಯಿಯವರ ರಾಜೀನಾಮೆಯನ್ನು ಪಡೆದುಕೊಳ್ಳಲಾಯಿತು. 1969ರ ಜುಲೈ 12 ಹಾಗೂ ಜುಲೈ 15ರ ಮಧ್ಯೆ ಹಕ್ಸರ್ ಮತ್ತು ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಚರ್ಚೆ ನಡೆಸಿರಬೇಕು ಎಂಬುದು ನನ್ನ ಊಹೆ. 1969ರ ಜುಲೈ 16ರಂದು ದೇಶದ ಅತ್ಯಂತ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದ ಕೆ.ಎನ್. ರಾಜ್‌ರನ್ನು ಭೇಟಿಯಾಗಿ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವಂತೆ ಹಕ್ಸರ್‌ಗೆ ಇಂದಿರಾಗಾಂಧಿ ಸೂಚಿಸಿದ್ದರು. ಕೆ.ಎನ್. ರಾಜ್ ಹಾಗೂ ಪಿ.ಎನ್. ಹಕ್ಸರ್ ಭೇಟಿ ಸಂದರ್ಭ ಅಲ್ಲಿ ಮತ್ತೋರ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಿ. ಎನ್. ಧಾರ್ ಕೂಡಾ ಉಪಸ್ಥಿತರಿದ್ದರು. ರಾಷ್ಟ್ರೀಕರಣಕ್ಕೆ ರಾಜ್ ಸಂಪೂರ್ಣ ಒಲವು ಸೂಚಿಸಿದರು, ಆದರೆ ಅದನ್ನು ಕಾರ್ಯಗತಗೊಳಿಸಲು ಕನಿಷ್ಠ 6 ತಿಂಗಳು ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು ಎಂದು ಧಾರ್ ಆ ಬಳಿಕ ಬರೆದ ಪತ್ರದಲ್ಲಿ ತಿಳಿಸಿದ್ದರು. ಆದರೆ ಕೇವಲ 3 ದಿನದ ಬಳಿಕ, ಅಂದರೆ 1969ರ ಜುಲೈ 19ರಂದು, 14 ಖಾಸಗಿ ಬ್ಯಾಂಕ್‌ಗಳನ್ನು ವಾಸ್ತವವಾಗಿ ರಾಷ್ಟ್ರೀಕರಣ ಮಾಡುವ ಮೂಲಕ, ಇಂದಿರಾಗಾಂಧಿಯವರ ಅಕಸ್ಮಾತ್ ಚಿಂತನೆಯನ್ನು ತಕ್ಷಣ ವಾಸ್ತವ ರೂಪಕ್ಕೆ ತರಲಾಯಿತು. ಆಗ ವಿತ್ತ ಸಚಿವಾಲಯದ ಬ್ಯಾಂಕಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿದ್ದ, ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಡಿ.ಎನ್. ಘೋಷ್ ಅವರು ಹೀಗೆ ಹೇಳುತ್ತಾರೆ-‘‘1969ರ ಜುಲೈ 17ರ ರಾತ್ರಿ ವೇಳೆ ನನ್ನನ್ನು ಹಕ್ಸರ್ ತಮ್ಮ ನಿವಾಸಕ್ಕೆ ಕರೆಸಿಕೊಂಡರು.


 


 

ಅಲ್ಲಿಗೆ ಹೋದಾಗ ಹಕ್ಸರ್ ಒಂದು ರಾಶಿ ಕಾಗದಪತ್ರಗಳ ರಾಶಿಯನ್ನು ಎದುರಲ್ಲಿ ಇಟ್ಟುಕೊಂಡು ಏನನ್ನೋ ಹುಡುಕುತ್ತಿದ್ದರು. ಅಲ್ಲಿದ್ದ ಒಂದು ಪತ್ರ ರಿಸರ್ವ್ ಬ್ಯಾಂಕ್ ಭಾರತದ ಬ್ಯಾಂಕ್‌ಗಳ ಕುರಿತು ಪ್ರಕಟಿಸಿದ್ದ ಅಂಕಿಅಂಶಗಳ ಮಾಹಿತಿಯ ಪ್ರಕಟನೆಯಾಗಿತ್ತು. ಬ್ಯಾಂಕಿಂಗ್ ವ್ಯವಸ್ಥೆಯ ಒಟ್ಟು ಸಂಪನ್ಮೂಲಗಳಲ್ಲಿ ಎಷ್ಟು ಬ್ಯಾಂಕ್‌ಗಳು ಶೇ. 80ರಿಂದ ಶೇ.85ರವರೆಗಿನ ಪ್ರಮಾಣ ಹೊಂದಿದೆ ಎಂದವರು ಹುಡುಕುತ್ತಿದ್ದರು. ಆಗ ಮೆಲ್ಲನೆ ಕೆಮ್ಮಿ ನಾನು ಹೇಳಿದೆ- ಬಹುಷಃ 10ರಿಂದ 12 ಬ್ಯಾಂಕ್‌ಗಳಾಗಿರಬಹುದು ಎಂದು. ಅಷ್ಟರಲ್ಲೇ ಕಂಪೆನಿ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಕೆವಿ ರಘುನಾಥ ರೆಡ್ಡಿ ಅಲ್ಲಿಗೆ ಬಂದರು ಮತ್ತು ನಮ್ಮ ಮಾತುಕತೆ ಯನ್ನು ಕೇಳುತ್ತಾ ಅಲ್ಲೇ ನಿಂತರು. ದೇಶದ ಎಲ್ಲಾ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲು ಇದೊಂದು ಸುವರ್ಣಾವಕಾಶವಿದ್ದು ಈ ದಿಟ್ಟ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದವರು ಹೇಳಿದರು. ಅವರ ಸಲಹೆಯನ್ನು ನಯವಾಗಿ ಬದಿಗೆ ಸರಿಸಿದ ಹಕ್ಸರ್, ನಿಮ್ಮ ಆತುರದ ತೀವ್ರವಾದವನ್ನು ನಿಮ್ಮಲ್ಲೇ ಇರಿಸಿಕೊಳ್ಳಿ ಎಂದು ಅವರನ್ನು ಕೋರಿದರು. ತನಗೆ ಸಂಪೂರ್ಣ ಅಪರಿಚಿತವಾಗಿರುವ ವಿಷಯ ಸಂಪೂರ್ಣ ಮನವರಿಕೆಯಾಗುವವರೆಗೆ ತನ್ನನ್ನು ಏಕಾಂಗಿಯಾಗಿರಲು ಬಿಡಬೇಕು ಎಂಬುದು ಹಕ್ಸರ್‌ರ ಆಶಯವಾಗಿತ್ತು. ಬ್ಯಾಂಕ್ ರಾಷ್ಟ್ರೀಕರಣಗೊಳಿಸುವ ಬಗ್ಗೆ ಪ್ರಧಾನಿ ನಿರ್ಧಾರಕ್ಕೆ ಬಂದಾಗಿದೆಯೇ ಎಂದು ನಾನು ಕೇಳಿದಾಗ, ‘‘ಇನ್ನೂ ಇಲ್ಲ, ನಾಳೆ ಬೆಳಗ್ಗೆ ಈ ಬಗ್ಗೆ ಚರ್ಚಿಸಲಿದ್ದೇವೆ’’ ಎಂದು ಹಕ್ಸರ್ ಉತ್ತರಿಸಿದರು. ಕಾನೂನಿನ ಜಟಿಲತೆಯನ್ನು ಬಗೆಹರಿಸಿ, ಜುಲೈ 19ರ ವೇಳೆಗೆ ಅಧಿಸೂಚನೆ(ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ)ಯನ್ನು ಸಿದ್ಧಪಡಿಸಲು ಸಾಧ್ಯವೇ ಎಂಬ ಬಗ್ಗೆ ಹಕ್ಸರ್‌ಗೆ ಇನ್ನೂ ಖಾತರಿ ಇರಲಿಲ್ಲ. ಈ ದಿನಾಂಕ ಎರಡು ಕಾರಣಗಳಿಗಾಗಿ ಮಹತ್ವದ್ದಾಗಿತ್ತು. ಹಂಗಾಮಿ ರಾಷ್ಟ್ರಪತಿ ವಿ.ವಿ. ಗಿರಿ ಜುಲೈ 20ರ ಬೆಳಗ್ಗೆ ತನ್ನ ಹುದ್ದೆ ತ್ಯಜಿಸಬೇಕಿತ್ತು ಮತ್ತು ಜುಲೈ 21ರಂದು ಲೋಕಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿತ್ತು.’’ ಆಗ ಆರ್‌ಬಿಐಯ ಉಪ ಗವರ್ನರ್ ಆಗಿದ್ದ ಎ. ಬಕ್ಷಿ 1950ರ ದಶಕದ ಆರಂಭದಲ್ಲಿ ಲಂಡನ್‌ನಲ್ಲಿ ಹಕ್ಸರ್ ಜತೆ ಕಾರ್ಯ ನಿರ್ವಹಿಸಿದ್ದರು. ಇಬ್ಬರ ಚಿಂತನೆಯಲ್ಲಿ ಸಾಮ್ಯವಿತ್ತು ಮತ್ತು ಇಬ್ಬರೂ ಆತ್ಮೀಯ ಮಿತ್ರರಾಗಿದ್ದರು. ಹಕ್ಸರ್ ಅವರ ಶಿಫಾರಸಿನಂತೆ ಬಕ್ಷಿ ಶೀಘ್ರದಲ್ಲೇ ವಿತ್ತ ಸಚಿವಾಲಯದಲ್ಲಿ ರಚನೆಯಾಗಲಿರುವ ಬ್ಯಾಂಕಿಂಗ್ ವಿಭಾಗದಲ್ಲಿ ಸೇರ್ಪಡೆಯಾಗಲಿದ್ದರು. ಮುಂದೆ 1972ರಲ್ಲಿ ಅವರು ಭಾರತದ ಸಿಎಜಿ (ಮಹಾಲೆಕ್ಕಪಾಲ)ಯಾಗಿ ನಿಯುಕ್ತರಾದರು. ಬಕ್ಷಿಯ ಸಲಹೆಯಂತೆ ಘೋಷ್‌ರನ್ನು ಬ್ಯಾಂಕ್ ರಾಷ್ಟ್ರೀಕರಣದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ವ್ಯಕ್ತಿಯಾಗಿ ಆಯ್ಕೆ ಮಾಡಲಾಯಿತು. ಮರುದಿನ ಬೆಳಗ್ಗೆ, ಪ್ರಧಾನಿ ಇಂದಿರಾ ಗಾಂಧಿಯರಿಂದ ಘೋಷ್‌ಗೆ ಕರೆ ಬಂದಿದೆ. 24 ಗಂಟೆಯೊಳಗೆ ಬ್ಯಾಂಕ್ ರಾಷ್ಟ್ರೀಕರಣದ ಶಾಸಕಾಂಗ ಕರಡು ಪ್ರತಿಯನ್ನು ತಯಾರಿಸಬೇಕು ಎಂದವರು ಬಯಸಿದ್ದರು. 1963ರಲ್ಲಿ, ಐದು ಬ್ಯಾಂಕ್‌ಗಳ ಬಗ್ಗೆ ಪ್ರಥಮವಾಗಿ ಶಿಪಾರಸು ಮಾಡಿದಾಗ ಇಂತಹ ಕರಡು ಪ್ರತಿಯನ್ನು ರೂಪಿಸಲಾಗಿತ್ತು ಎಂದು ಇಂದಿರಾ ಗಾಂಧಿ ತಿಳಿಸಿದರು. ಅತ್ಯಂತ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಪ್ರಧಾನಿ, ಘೋಷ್‌ರನ್ನು ಹತ್ತಿರ ಕರೆದು ಅತ್ಯಂತ ಗೌಪ್ಯವಾದ ವಿಷಯವಿದು. ಯಾವುದೇ ಅಡ್ಡಿ ಎದುರಾದರೂ ತಕ್ಷಣ ತನಗೆ ತಿಳಿಸುವಂತೆ ಹೇಳಿದರು. ಮುಂದಿನ ಕೆಲವು ಗಂಟೆಗಳ ಕಾಲ ಹಕ್ಸರ್, ಬಕ್ಷಿ, ಘೋಷ್ ಹಾಗೂ ಇತರ ಕೆಲವರನ್ನು ಈ ಕಾರ್ಯಕ್ಕಾಗಿ ವಿಶೇಷವಾಗಿ ನಿಯೋಜಿಸಲಾಯಿತು. ಆಗಿನ ಆರ್‌ಬಿಐ ಅಧಿಕಾರಿ ಆರ್.ಕೆ. ಶೇಷಾದ್ರಿ, ಅಟಾರ್ನಿ ಜನರಲ್ ನೀರೇನ್ ಡೇ ಅಧಿಸೂಚನೆ(ಸುಗ್ರೀವಾಜ್ಞೆ) ತಯಾರಿಸುವಲ್ಲಿ ಮಗ್ನರಾಗಿದ್ದರು. 1969ರ ಜುಲೈ 19ರಂದು ರಾತ್ರಿ 8:30 ಗಂಟೆಗೆ ಪ್ರಧಾನಿ ಇಂದಿರಾ ಗಾಂಧಿ ರೇಡಿಯೋದಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಘೋಷಿಸಿದರು. ಈ ಭಾಷಣವನ್ನು ಹಕ್ಸರ್ ಬರೆದಿರಲಿಲ್ಲ ಅಥವಾ ಸಿದ್ಧಪಡಿಸಿರಲಿಲ್ಲ. ಕಡೆಯ ವಾಕ್ಯ, ಫುಲ್‌ಸ್ಟಾಪ್‌ನವರೆಗೂ ಇದು ಐ.ಜಿ. ಪಟೇಲರು ಬರೆದಿದ್ದ ಭಾಷಣವಾಗಿತ್ತು. ವಿಪರ್ಯಾಸವೆಂದರೆ, ಪಟೇಲ್ ಮೊರಾರ್ಜಿ ದೇಸಾಯಿಯವರ ಆತ್ಮೀಯ ವಲಯದಲ್ಲಿದ್ದವರಷ್ಟೇ ಅಲ್ಲ, ಸಮಾಜವಾದದ ಬೆಂಬಲಿಗರಾಗಿದ್ದರು. ಇಂದಿರಾ ಗಾಂಧಿಯವರ ಈ ಐತಿಹಾಸಿಕ ಭಾಷಣದ ಸ್ವಲ್ಪ ಶ್ರೇಯ ಪಟೇಲ್‌ಗೂ ಸಂದಿರುವುದರಲ್ಲಿ ತಪ್ಪೇನೂ ಇಲ್ಲ. ಸಂಪುಟ ಸಭೆಯ ಕಾಗದ ಪತ್ರ ಹಾಗೂ ಇಂದಿರಾ ಗಾಂಧಿ ಮಾಡಬೇಕಿದ್ದ ಭಾಷಣವನ್ನು ಘೋಷ್ ಸಿದ್ಧಪಡಿಸಿದರು. ಇದರ ಒಂದು ಶಬ್ದವನ್ನೂ ಹಕ್ಸರ್ ಬದಲಿಸಿಲ್ಲ ಎಂದು ಘೋಷ್ ಹೇಳಿದ್ದಾರೆ. ಹಕ್ಸರ್‌ಗೆ ಸಚಿವಾಲಯದಲ್ಲಿ ಅಪರಿಮಿತ ಅಧಿಕಾರವಿತ್ತು. ಅವರ ಬುದ್ಧಿವಂತಿಕೆ, ಇಂದಿರಾ ಗಾಂಧಿಯವರ ತಂತ್ರಗಾರಿಕೆ ಹಾಗೂ ರಾಜಕೀಯ ನಡೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂದಿರಾ ಗಾಂಧಿಯವರ ಅಹಂ ಅನ್ನು ಬದಲಾಯಿಸಿದವರು, ಇಂದಿರಾ ಗಾಂಧಿಯವರ ಮಾರ್ಗದರ್ಶಕ ಎಂದೇ ಪರಿಚಿತರಾಗಿದ್ದರು. ಅವರೊಬ್ಬ ಅನುಭವಿ, ಸಮರ್ಥ, ನಿಷ್ಪಕ್ಷಪಾತಿ, ವಿವೇಕವುಳ್ಳ ಹಾಗೂ ದೇಶಭಕ್ತ ವ್ಯಕ್ತಿ ಎಂದು ಘೋಷ್ ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಅವರು ಕಟ್ಟುಬಿದ್ದವರಲ್ಲ. ಅವರ ಮಿತ್ರವಲಯದಲ್ಲಿ ಎಡಪಂಥೀಯರೂ ಇದ್ದರು ಬಲಪಂಥೀಯರೂ ಇದ್ದರು. ಆದರೆ ವ್ಯಾವಹಾರಿಕವಾಗಿ ಯಾರೊಡನೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆ ಅವರಲ್ಲಿತ್ತು. ನಿಕ್ಸನ್ ಹಾಗೂ ಕಿಸಿಂಜರ್ ಆಡಳಿತಾವಧಿಯಲ್ಲಿ ಹಕ್ಸರ್ ಅಮೆರಿಕನ್ನರನ್ನು ಇಷ್ಟಪಡುತ್ತಿರಲಿಲ್ಲ ಎಂದು ಘೋಷ್ ಹೇಳಿದ್ದಾರೆ. 3 ವರ್ಷದ ಬಳಿಕ, 1972ರ ಜುಲೈ 6ರಂದು ಪಟೇಲ್ ಪರವಾಗಿ ಹಕ್ಸರ್ ಮತ್ತೊಮ್ಮೆ ಸರಕಾರದ ಬಳಿ ವಕಾಲತ್ತು ಮಾಡುವ ಸಂದರ್ಭ ಒದಗಿ ಬಂದಿತು. ಪಟೇಲ್ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್‌ಡಿಪಿ)ಯ ಉಪ ಅಧಿಕಾರಿಯಾಗಿ ನಿಯುಕ್ತರಾದಾಗ ಸರಕಾರದ ಕೆಲ ಅಧಿಕಾರಿಗಳಿಂದ ಅಡ್ಡಿ ಬಂದಿತ್ತು. ಆಗ ಪಟೇಲ್ ಪರವಾಗಿ ಇಂದಿರಾ ಗಾಂಧಿಯವರೊಂದಿಗೆ ಮಾತನಾಡಿದ್ದರು ಹಕ್ಸರ್. ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳು ತಮ್ಮ ಸಾಮಾಜಿಕ- ಆರ್ಥಿಕ ಗುರಿ ಸಾಧಿಸುವ ನಿಟ್ಟಿನಲ್ಲಿ ಆರ್‌ಬಿಐನಲ್ಲಿ ಕೆಲವೊಂದು ‘ಅಸಾಂಪ್ರದಾಯಿಕ’ ನೇಮಕಾತಿ ನಡೆಯಲೂ ಹಕ್ಸರ್ ಕಾರಣರಾಗಿದ್ದರು. ಆರ್‌ಬಿಐ ಹುದ್ದೆಗಳಿಗೆ ಅಧಿಕಾರಿಗಳು ಅಥವಾ ಬ್ಯಾಂಕರ್‌ಗಳ ನೇಮಕವಾಗಬೇಕು ಎಂಬುದು ಆರ್‌ಬಿಐ ಗವರ್ನರ್ ಎಲ್.ಕೆ. ಝಾ ಅವರ ಆಶಯವಾಗಿತ್ತು. ಆದರೆ ಝಾ ಪ್ರಧಾನಿ ಇಂದಿರಾರ ಮುಂದಿಟ್ಟ ಹೆಸರನ್ನು ಬದಲಿಸಿ, 39 ವರ್ಷದ ಕೈಗಾರಿಕಾ ಅರ್ಥಶಾಸ್ತ್ರಜ್ಞ ಆರ್‌ಕೆ ಹಝಾರಿಯನ್ನು ಆರ್‌ಬಿಐ ಉಪ ಗವರ್ನರ್ ಆಗಿ ಬಕ್ಷಿಯವರ ಸ್ಥಾನದಲ್ಲಿ ನೇಮಿಸಿದರು.

ಕೃಪೆ:  scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)