varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಹರೆಯದ ಉಲ್ಲಾಸಗಳಲ್ಲಿ ಅರಳಿದ ‘ಗೀಚಿಟ್ಟೆ’ಗಳು

ವಾರ್ತಾ ಭಾರತಿ : 21 Jul, 2019
-ಕಾರುಣ್ಯಾ

ಯೌವನವು ಕಾವ್ಯದ ಲಹರಿಯ ಜೊತೆ ಜೊತೆಗೆ ಹುಡುಗ ಹುಡುಗಿಯರನ್ನು ಪ್ರವೇಶಿಸುತ್ತದೆ. ಅಕ್ಷರ ಅರಿಯದವನೂ ಕವಿಯಾಗುವ ಸಮಯ ಅದು. ಆ ಹಂತದಲ್ಲಿ ಆತ ಪ್ರೇಮಕವಿಯಾಗಿಲ್ಲ ಎಂದರೆ, ಕಮ್ಯುನಿಷ್ಟರ ಸಹವಾಸದಲ್ಲಿ ಕ್ರಾಂತಿಕಾರಿಯಾಗಿ ಕಳೆದು ಹೋಗಿದ್ದಾನೆಂದೇ ಅರ್ಥ. ಹರೆಯವೆನ್ನುವುದು ನಮ್ಮಾಳಗಿನ ಜಡತ್ವವೆನ್ನುವ ಬಂಡೆಯನ್ನು ಸೀಳಿ ಅಲ್ಲಿ ಹೂ ಅರಳಿಸುತ್ತದೆ. ಆಶಿಕ್ ಮುಲ್ಕಿ ಅವರ ‘ಗೀಚಿಟ್ಟೆ’ ಕವನಗಳು ಈ ಹರೆಯದ ಉಲ್ಲಾಸಗಳಲ್ಲಿ ಅರಳಿದವುಗಳು.
ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಬದುಕಿನ ಸಂಕಟಗಳ ಬೆಂಕಿಯನ್ನು ತನಗೆ ಪೂರಕವಾಗಿ ಬಳಸಿಕೊಂಡು ಪತ್ರಕರ್ತನಾಗಿ ಬೆಳೆದ ಆಶಿಕ್‌ನ ಯೌವನದ ಬೆಳಕಿಗೆ ಸುಟ್ಟುಕೊಳ್ಳಲು ಬಂದ ಚಿಟ್ಟೆಗಳಂತಿವೆ ಇಲ್ಲಿರುವ ಕಿರು ಪದ್ಯಗಳು. ರವಿಬೆಳಗರೆಯಂತಹ ಹಿರಿಯ ಪತ್ರಕರ್ತರು ಈ ಕವಿತೆಗಳ ಕುರಿತಂತೆ ಹಿರಿದಾದ ಮಾತುಗಳನ್ನು ಆಡಿದಾಗಲೂ ಮೈಮರೆಯದೇ ತನ್ನ ಮಿತಿಗಳನ್ನು ಒಪ್ಪಿಕೊಳ್ಳುವ ಆಶಿಕ್‌ನ ವಿನಯ ಮುಂದೊಂದು ದಿನ ಆತನನ್ನು ಇನ್ನಷ್ಟು ಒಳ್ಳೆಯ ಕವಿಯಾಗಿ ಬೆಳೆಸಬಹುದು. ‘‘ಸದ್ಯಕ್ಕೆ ಪ್ರೇಮದ ಜೊತೆ ಎದುರಾಗ ಬಯಸುವವರು ತೀರಾ ಕಡಿಮೆ. ಬಹುತೇಕರು ದ್ವೇಷ ಹಾಗೂ ಸೇಡಿನ ಜೊತೆಗೇ ಮುಖಾಮುಖಿಯಾಗಬಸುವವರೇ... ಕೆಲವೊಂದು ಕಡೆ ಧರ್ಮದ ಡಾಂ  ಭಿಕತೆ ಯನ್ನು ಬೊಟ್ಟು ಮಾಡುತ್ತಾ ಹಲವು ಜನರ ಕೆಂಗಣ್ಣಿಗೂ ಗುರಿಯಾಗಿದ್ದೇನೆ. ಇಲ್ಲಿ ಧರ್ಮಕ್ಕಾಗಿ ನಾನು ಬೇಡವೇ ಹೊರತು, ಧರ್ಮ ನನಗಾಗಿ ಬೇಕು ಅಂತ ನಂಬಿಕೊಂಡಿರೋನು ನಾನು. ಅದರ ಸುತ್ತಲೂ ಗಿರಕಿ ಹೊಡೆಯುತ್ತಾ ಕೂತಿದ್ದೇನೆ ಹಲವು ಬಾರಿ. ಹೀಗೆ ಹಲವು ಬಾರಿ ಹಲವು ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಾ ಕೂತಾಗ ಮನಬಂದಂತೆ ಗೀಚಿದ್ದೇ ಈ ‘ಗೀಜಿಟ್ಟೆ’...’’ಎಂದು ಕವಿ ಆಶಿಕ್ ಮುಲ್ಕಿ ಹೇಳಿಕೊಳ್ಳುತ್ತಾರೆ. ಸಂಕಲನದ ಕುರಿತಂತೆ ರವಿ ಬೆಳಗೆರೆಯವರು ಬರೆಯುತ್ತಾ ‘‘...ಎಲ್ಲ ಕಣ್ಣ ಹನಿಗಳ ತೂಕ ಒಂದೆ. ಆಶಿಕ್ ನನ್ನನ್ನು ಅಳಿಸಿದ್ದಾನೆ. ಗೀಚಿಟ್ಟು ನಗಿಸಿದ್ದಾನೆ. ಅವನು ಅಪ್ಪಟ ಪ್ರೇಮಿ. ನನ್ನ ಹಾಗೆ ಅಮ್ಮನನ್ನು ಪ್ರೀತಿಸಿದ್ದಾನೆ. ನಮ್ಮಿಬ್ಬರಲ್ಲಿ ತುಂಬಾ ಸಾಮ್ಯವಿದೆ...’’ ಎಂದು ಅಭಿನಂದಿಸುತ್ತಾರೆ.
 ‘ಗಾಳಿಯ ಮಾತಿಗೆ ಆಗಾಗ ಕಿವಿ ಕೊಡಿ....’’ ಎನ್ನುವ ಆಶಿಕ್, ಆ ಗಾಳಿಯ ಮೂಲಕವೇ ರೋಚಕ, ಸುಂದರ ಕವಿತೆಗಳನ್ನು ಆಲಿಸಿದ್ದಾರೆ. ‘ನಿರ್ಗತಿಕನೊಬ್ಬ ಒಂದೊತ್ತಿನ ಹಿಟ್ಟಿಗೆ ಚಡಪಡಿಸಿದಂತೆ....’ ಕವಿತೆಯ ಸಾಲು ಬರೆಯಲು ಚಡಪಡಿಸಿದ್ದೇನೆ ಎನ್ನುವ ಆಶಿಕ್, ಕನ್ನಡ ಕಾವ್ಯಲೋಕದ ಲಹರಿಗಳನ್ನು ತನ್ನೊಳಗೆ ಇನ್ನಷ್ಟು ತುಂಬಿಕೊಳ್ಳಬೇಕು. ಹರೆಯದ ಭಾವಾವೇಶದಲ್ಲಿ ಮುಳುಗಿ ಹೋಗದೆ ತೇಲುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಇನ್ನಷ್ಟು ‘ಾಧನೆ’ ಬೇಕು. ಅನುಭವದ ಅರದಲ್ಲಿ ಪದಗಳು ಇನ್ನಷ್ಟು ಸಾಣೆಗೊಳ್ಳುವ ಅಗತ್ಯವಂತೂ ಇದೆ. ಅದನ್ನು ಆಶಿಕ್ ಸಾಧಿಸುತ್ತಾರೆ ಎನ್ನುವ ಭರವಸೆಯನ್ನು ಈ ಸಂಕಲನ ನಮಗೆ ನೀಡುತ್ತದೆ.
ಭಾವನಾ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 75 ರೂ. ಆಸಕ್ತರು 080-26790804 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)