varthabharthi


ಸಂಪಾದಕೀಯ

ಎನ್‌ಆರ್‌ಸಿ ಪ್ರವಾಹಕ್ಕೆ ಸಿಕ್ಕ ಅಸ್ಸಾಂ ಕಾರ್ಮಿಕರು

ವಾರ್ತಾ ಭಾರತಿ : 22 Jul, 2019

‘ಅತ್ತ ಧರೆ-ಇತ್ತ ಪುಲಿ!’ ಇದು ಅಸ್ಸಾಂ ಸೇರಿದಂತೆ ಅದರ ನೆರೆ ಹೊರೆ ರಾಜ್ಯಗಳ ಜನರ ಸ್ಥಿತಿ. ಒಂದೆಡೆ ಮುನಿದ ಪ್ರಕೃತಿ. ಇನ್ನೊಂದೆಡೆ ಮುನಿದ ಸರಕಾರ. ಕಳೆದ ಕೆಲವು ದಿನಗಳಿಂದ ಅಸ್ಸಾಂ ಭಾರೀ ಮಳೆ ಮತ್ತು ನೆರೆಯ ಮೂಲಕ ಸುದ್ದಿಯಾಗುತ್ತಿದೆ. ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ. ನೂರಕ್ಕೂ ಅಧಿಕ ಜನರು ಈ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ತಮ್ಮ ಮನೆ, ವಸತಿಯನ್ನು ಕಳೆದುಕೊಂಡಿದ್ದಾರೆ. ಮಾಡಿದ ಕೃಷಿಗಳೆಲ್ಲ ನಾಶವಾಗಿವೆ. ಅಲ್ಲಿನ ಕೂಲಿ ಕಾರ್ಮಿಕರ ಸ್ಥಿತಿಯಂತೂ ಭೀಕರವಾಗಿದೆ. ದುಡಿಯಲು ಕೆಲಸವೂ ಇಲ್ಲದೆ ಅವರು ನಿರುದ್ಯೋಗಿಗಳಾಗಿ ಬರಿ ಗೈಯಲ್ಲಿ ನಿಂತಿದ್ದಾರೆ. ಸರಕಾರ ‘ಕಟ್ಟಿಕೊಟ್ಟ ಬುತ್ತಿ’ ಅವರ ಹೊಟ್ಟೆಗೆ ಸಾಲುತ್ತಿಲ್ಲ. ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸ್ಥಿತಿಯಂತೂ ಹೃದಯವಿದ್ರಾವಕ. ವಿಪರ್ಯಾಸವೆಂದರೆ ಈ ನೆರೆ ಅವರ ದೈನಂದಿನ ಬದುಕನ್ನಷ್ಟೇ ಅಸ್ತವ್ಯಸ್ತಗೊಳಿಸಿರುವುದಲ್ಲ. ಅವರು ಅಲ್ಲಿ ಈವರೆಗೆ ಬಾಳಿ ಬದುಕಿದ ಕುರುಹನ್ನೇ ಅಳಿಸಿ ಹಾಕಲು ಹೊರಟಿದೆ. ಈ ನೆರೆ ಇಳಿದ ಬಳಿಕವೂ ಅಲ್ಲಿನ ಜನರ ಅಸ್ತಿತ್ವ ಅತಂತ್ರವಾಗಿಯೇ ಇರಲಿದೆ. ಬಹುಶಃ ನೆರೆಯಿಂದಾಗಿರುವ ಅನಾಹುತಕ್ಕಿಂತಲೂ ಭವಿಷ್ಯದಲ್ಲಿ ಸರಕಾರದಿಂದ ಎದುರಿಸಬೇಕಾಗಿರುವ ಅನಾಹುತಗಳನ್ನು ಊಹಿಸಿ ಅವರು ಕಂಗಾಲಾಗಿದ್ದಾರೆ.

ಈ ನೆರೆ ಅಸ್ಸಾಂ ಜನರ ಮನೆಗಳ ಜೊತೆಗೆ ಅವರ ಅಸ್ತಿತ್ವವನ್ನು ಸಾಬೀತು ಪಡಿಸುವ ಬಹುಮುಖ್ಯ ದಾಖಲೆಗಳನ್ನೇ ಕೊಚ್ಚಿಕೊಂಡು ಹೋಗಿವೆ. ಅದು ಮನೆ, ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲ. ಬದಲಿಗೆ, ಅವರು ಅಸ್ಸಾಮಿನ ನಾಗರಿಕರು ಎನ್ನುವುದನ್ನು ನಿರೂಪಿಸುವ ದಾಖಲೆಗಳು. ಹೌದು, ಈ ಪ್ರವಾಹ ಅಸ್ಸಾಮಿನ ಜನರ ಎನ್‌ಆರ್‌ಸಿ ಅಥವಾ ನಾಗರಿಕತ್ವಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನೂ ನಾಶ ಪಡಿಸಿವೆ. ಈ ದಾಖಲೆಗಳನ್ನು ಸೂಕ್ತ ಸಂದರ್ಭದಲ್ಲಿ ಒದಗಿಸಲು ಅವರು ವಿಫಲರಾದರೆ, ಅಸ್ಸಾಮಿನಲ್ಲಿ ಉಳಿದುಕೊಳ್ಳುವ ಹಕ್ಕುಗಳನ್ನೇ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಎನ್‌ಆರ್‌ಸಿಯಿಂದ ಅಧಿಕಾರಿಗಳು ಸುಮಾರು 41 ಲಕ್ಷ ಜನರನ್ನು ಕೈ ಬಿಟ್ಟಿದ್ದಾರೆ. ಅವರಲ್ಲಿ ಸುಮಾರು 25 ಲಕ್ಷ ಜನರು ಮತ್ತೆ ಮರು ಪರಿಶೀಲನೆಗೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವಿವಿಧ ಎನ್‌ಆರ್‌ಸಿ ಕೇಂದ್ರಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲೇ ಅಸ್ಸಾಮನ್ನು ಕಾಡಿರುವ ನೆರೆ, ಹಲವರ ಅಳಿದುಳಿದ ದಾಖಲೆಗಳನ್ನು ನಾಶ ಪಡಿಸಿವೆ. ದಾಖಲೆಗಳನ್ನು ಕಳೆದುಕೊಂಡವರಲ್ಲಿ ಬಹುತೇಕ ಕೂಲಿ ಕಾರ್ಮಿಕರ ಕುಟುಂಬಗಳಾಗಿವೆ. ಸರಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ತಮ್ಮ ದಾಖಲೆಗಳನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲದ ಅನಕ್ಷರಸ್ಥ ಜನರಾಗಿದ್ದಾರೆ. ಇದೀಗ ಈ ಬಡವರು ‘ಆ ದಾಖಲೆಗಳ ಜೊತೆಗೆ ತಮ್ಮನ್ನೂ ನೆರೆ ಕೊಚ್ಚಿಕೊಂಡು ಹೋಗಬಾರದಾಗಿತ್ತೇ?’ ಎಂದು ಪರಿತಪಿಸುವಂತಹ ಸ್ಥಿತಿಯಲ್ಲಿದ್ದಾರೆ. ಈ ಪೌರತ್ವ ನೋಂದಣಿ ಒಂದು ಬೃಹತ್ ಹತ್ಯಾಕಾಂಡಕ್ಕೆ ಪೀಠಿಕೆ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹತ್ತು ಹಲವು ಭೀಕರ ಪ್ರಾಕೃತಿಕ ವಿಕೋಪಗಳ ಸವಾಲುಗಳನ್ನು ಅಸ್ಸಾಮಿನ ಜನರು ಎದುರಿಸಿ ಗೆದ್ದಿದ್ದರು. ಆದರೆ ಇದೀಗ ಸರಕಾರದ ಪ್ರಾಯೋಜಕತ್ವದಲ್ಲಿ ಎದುರಾಗಿರುವ ‘ಪೌರತ್ವ ನೋಂದಣಿ’ ಎನ್ನುವ ವಿಕೋಪವನ್ನು ಎದುರಿಸುವ ದಾರಿ ತಿಳಿಯ ಕಂಗಾಲಾಗಿದ್ದಾರೆ.

ಈ ವಿಕೋಪಕ್ಕೆ ಅಸ್ಸಾಮಿನಲ್ಲಿ ಬಲಿಯಾಗುತ್ತಿರುವವರು ಯಾವುದೋ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಜನರಲ್ಲ. ಕಳೆದ ಐದಾರು ದಶಕಗಳಿಂದ ತಮ್ಮ ಹಿರಿಯರ ಜೊತೆಗೆ ಅಸ್ಸಾಮ್ ಜನಜೀವನದಲ್ಲಿ ಒಂದಾಗಿ ಬೆಸೆದು ಹೋಗಿದ್ದ ಕೂಲಿ ಕಾರ್ಮಿಕರು, ರೈತಾಪಿ ಜನರು ಸರಕಾರದ ಈ ಎನ್‌ಆರ್‌ಸಿ ಎಂಬ ಬ್ರಹ್ಮಾಸ್ತ್ರಕ್ಕೆ ಬಲಿಯಾಗುತ್ತಿರುವ ಸಂತ್ರಸ್ತರಾಗಿದ್ದಾರೆ. ಈ ಜನರನ್ನು ಸರಕಾರ ‘ಅಕ್ರಮ ವಲಸಿಗರು’ ಎಂದು ಕರೆಯುತ್ತಿದೆ. ಇವರು, ‘ತಾವು ಅಜ್ಜರ ಕಾಲದಿಂದಲೂ ಇಲ್ಲೇ ವಾಸಿಸುತ್ತಾ ಬದುಕು ಕಟ್ಟಿಕೊಂಡಿದ್ದೇವೆ’ ಎನ್ನುವುದನ್ನು ಕಾಗದ ಪತ್ರಗಳ ಮೂಲಕ ಸರಕಾರಕ್ಕೆ ಸಾಬೀತು ಮಾಡಬೇಕಾಗಿದೆ. ಹಾಗೆ ಸಾಬೀತು ಮಾಡಲಾಗದ ಸುಮಾರು 30 ಲಕ್ಷಕ್ಕೂ ಅಧಿಕ ಜನರು ಸರಕಾರದಿಂದ ಗಡಿಪಾರು ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಎನ್‌ಆರ್‌ಸಿ ಎನ್ನುವ ಪ್ರಹಸನದ ಅತಿ ದೊಡ್ಡ ವ್ಯಂಗ್ಯವೆಂದರೆ, ಈ ದೇಶಕ್ಕಾಗಿ ಗಡಿಯಲ್ಲಿ ಶತ್ರುಗಳ ಜೊತೆಗೆ ಹೋರಾಡಿ ಬದುಕನ್ನು ಸವೆಸಿದ ಯೋಧರು ಕೂಡ, ಅಕ್ರಮ ವಲಸಿಗರ ಪಟ್ಟಿಯಲ್ಲಿ ಸೇರಿಕೊಂಡಿರುವುದು. ಇಂತಹ ಅಕ್ಷರಸ್ಥರ ಸ್ಥಿತಿಯೇ ಹೀಗೆಂದ ಮೇಲೆ, ತೋಟ,ಎಸ್ಟೇಟ್‌ಗಳಲ್ಲಿ ಕೂಲಿ ಕಾರ್ಮಿಕರಾಗಿ ಬದುಕುತ್ತಾ ಬಂದವರ ಸ್ಥಿತಿ ಇನ್ನೆಷ್ಟು ಹೀನಾಯವಾಗಬಹುದು.

ಎನ್‌ಆರ್‌ಸಿ ಹೆಸರಿನಲ್ಲಿ ಈಗಾಗಲೇ ಅಸ್ಸಾಮನ್ನು ವಲಸಿಗರು ಮತ್ತು ಸ್ಥಳೀಯರು ಎಂದು ಸರಕಾರ ಭಾಗಶಃ ಇಬ್ಭಾಗಿಸಿದೆ. ಈ ಎನ್‌ಆರ್‌ಸಿಯ ಅಂತಿಮ ಗುರಿ ಇಲ್ಲಿರುವ ಮುಸ್ಲಿಮ್ ಕಾರ್ಮಿಕರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಆದರೆ ಎನ್‌ಆರ್‌ಸಿಯಿಂದ ಮುಸ್ಲಿಮೇತರರೂ ತಮ್ಮ ದಾಖಲೆಗಳನ್ನು ಒದಗಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ತಲೆ ತಲಾಂತರದಿಂದ ತಮ್ಮ ನೆಲ ಎಂಬ ಭರವಸೆಯಿಂದ ಬದುಕುತ್ತಾ ಬಂದವರು ಏಕಾಏಕಿ ‘ಅಕ್ರಮ ವಲಸಿಗರು’ ಎಂದು ಹಣೆಪಟ್ಟಿ ಕಟ್ಟಿಸಿಕೊಂಡ ಆಘಾತದಿಂದ ಹಲವರು ಮೃತಪಟ್ಟಿದ್ದಾರೆ. ವೃದ್ಧರಿಗೆ ಹೃದಯಾಘಾತವಾಗಿದೆ. ಕೆಲವರು ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ರಾಜಕೀಯ ದುರುಳರ ಕೆಂಗಣ್ಣಿಗೆ ಮುಸ್ಲಿಮ್ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ವಲಸಿಗರ ವಿರುದ್ಧ ಸ್ಥಳೀಯರನ್ನು ಎತ್ತಿಕಟ್ಟಲು, ಅವರ ಮೇಲೆ ದೌರ್ಜನ್ಯ ಎಸಗಲು, ಕೋಮು ಉದ್ವಿಗ್ನ ವಾತಾವರಣವನ್ನು ನಿರ್ಮಿಸಲು ಈ ಎನ್‌ಆರ್‌ಸಿಯನ್ನು ಈಗಾಗಲೇ ಬಳಸಲಾರಂಭಿಸಿದ್ದಾರೆ. ಪರಿಣಾಮವಾಗಿ ಅಲ್ಲಲ್ಲಿ ವಲಸಿಗರು ಎನ್ನುವ ಹಣೆಪಟ್ಟಿ ಕಟ್ಟಿ ಗುಂಪು ಥಳಿತಗಳು ಆರಂಭವಾಗಿವೆ. ಅಂದರೆ ಮುಂದೊಂದು ದಿನ ಅಸ್ಸಾಂನಲ್ಲಿ ಗುಂಪು ಥಳಿತವನ್ನು ಈ ‘ಎನ್‌ಆರ್‌ಸಿ’ ಕಾನೂನು ಬದ್ಧವಾಗಿಸಲಿದೆ. ಒಂದು ಮೂಲದ ಪ್ರಕಾರ, 25 ಲಕ್ಷಕ್ಕೂ ಅಧಿಕ ಜನರು ಅಕ್ರಮವಲಸಿಗರು ಎಂದು ಕರೆಸಿಕೊಂಡು ಸರಕಾರದ ಅನಧಿಕೃತ ಬಂಧನ ಕೇಂದ್ರವನ್ನು ಸೇರಲಿದ್ದಾರೆ. ಈಗಾಗಲೇ ಸೇರ್ಪಡೆಗೊಳಿಸುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ, ಈ ಅಕ್ರಮವಲಸಿಗರು ಎಂದು ಗುರುತಿಸಲ್ಪಟ್ಟವರನ್ನು ಸ್ವೀಕರಿಸಲು ಬಾಂಗ್ಲಾ ದೇಶ ಸ್ಪಷ್ಟವಾಗಿ ನಿರಾಕರಿಸಿದೆ.

ಐದು ದಶಕಗಳ ಹಿಂದೆ ಬಾಂಗ್ಲಾದಿಂದ ವಲಸೆಹೋಗಿದ್ದಾರೆ ಎನ್ನಲಾದವರನ್ನು ಮತ್ತೆ ತನ್ನ ಪ್ರಜೆಯಾಗಿ ಸ್ವೀಕರಿಸುವುದು ಅಸಾಧ್ಯ ಎಂದು ಈಗಾಗಲೇ ಹೇಳಿಕೆಯನ್ನು ನೀಡಿದೆ. ಅಂದರೆ ಮುಂದಿನ ದಿನಗಳಲ್ಲಿ, ಈ ಅಕ್ರಮ ವಲಸಿಗರೆಂದು ಗುರುತಿಸಲ್ಪಟ್ಟವರು ಎರಡು ದೇಶಗಳ ನಡುವೆಯೂ ಉದ್ವಿಗ್ನತೆಯನ್ನು ಬಿತ್ತಲಿದ್ದಾರೆ. ಅಂತಿಮವಾಗಿ ಸರಕಾರ, ಅಸ್ಸಾಮಿನಲ್ಲಿ ಇನ್ನೊಂದು ರೋಹಿಂಗ್ಯಾವನ್ನು ಸೃಷ್ಟಿಸಲು ಹೊರಟಿದೆ ಎಂದು ಮಾನವ ಹಕ್ಕು ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬೆಂಕಿ ಕುಲುಮೆಯಾಗಿರುವ ಈಶಾನ್ಯ ಭಾರತವನ್ನು ಎನ್‌ಆರ್‌ಸಿ ಹೆಸರಲ್ಲಿ ಸರಕಾರ ಇನ್ನಷ್ಟು ಹದಗೆಡಿಸಲು ಮುಂದಾಗಿದೆ. ಇದರ ರಾಜಕೀಯ ಲಾಭವನ್ನು ಪಕ್ಕದ ಚೀನಾ ತನ್ನದಾಗಿಸಿಕೊಂಡರೆ ಅಚ್ಚರಿಯೇನೂ ಇಲ್ಲ. ಎನ್‌ಆರ್‌ಸಿ ಎನ್ನುವ ಈ ಪ್ರವಾಹಕ್ಕೆ ಇಡೀ ಈಶಾನ್ಯ ಭಾರತವೇ ಕೊಚ್ಚಿ ಹೋದರೆ ಅದರ ಸಂಪೂರ್ಣ ಹೆಗ್ಗಳಿಕೆ ಮೋದಿ ನೇತೃತ್ವದ ತಂಡಕ್ಕೇ ಸಲ್ಲುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)