varthabharthi


ಸಂಪಾದಕೀಯ

ಚಂದ್ರನ ಎತ್ತರ-ಮ್ಯಾನ್ ಹೋಲ್ ನ ಆಳ: ವಿಜ್ಞಾನ ಸಮನ್ವಯ ಸಾಧಿಸಲಿ

ವಾರ್ತಾ ಭಾರತಿ : 23 Jul, 2019

ಚಂದ್ರಯಾನ-2 ಸೋಮವಾರ ಶುಭಾರಂಭಗೊಂಡಿದೆ. ಆಂಧ್ರದ ಶ್ರಿಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚಂದ್ರಯಾನ-2 ಲಾಂಡರ್ ಹಾಗೂ ರೋವರ್ ನೌಕೆಗಳನ್ನ್ನು ಹೊತ್ತ ಜಿಎಸ್‌ಎಲ್‌ವಿ-3 ರಾಕೆಟ್ ಗಗನಕ್ಕೆ ಚಿಮ್ಮುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳ ಅವಿರತ ಶ್ರಮದಿಂದಾಗಿ ಕೋಟ್ಯಂತರ ಭಾರತೀಯರ ಕನಸು ಕೊನೆಗೂ ಸಾಕಾರಗೊಂಡ ಸುವರ್ಣ ಕ್ಷಣ ಇದಾಗಿದೆ. ಸ್ವದೇಶಿ ನಿರ್ಮಿತ ತಂತ್ರ ಜ್ಞಾನದೊಂದಿಗೆ ನಿರ್ಮಿಸಲಾಗಿರುವ ರೋವರ್ ನೌಕೆಯು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸೆಪ್ಟಂಬರ್‌ನಲ್ಲಿ ಇಳಿಯಲಿದೆ. ಚಂದ್ರಯಾನ-2ರ ಯಶಸ್ವಿ ಉಡಾವಣೆಯೊಂದಿಗೆ, ಚಂದ್ರಲೋಕದ ಅನ್ವೇಷಣೆಯ ಕುರಿತಾದ ಭಾರತದ ಭವಿಷ್ಯತ್ತಿನ ಯೋಜನೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಹಾಗೂ ಚಂದ್ರನ ಕುರಿತಾದ ನಮ್ಮ ತಿಳುವಳಿಕೆಯು ಗಣನೀಯವಾಗಿ ವಿಸ್ತಾರಗೊಳ್ಳಲಿದೆ.

ಹಲವಾರು ಕಾರಣಗಳಿಂದಾಗಿ ಚಂದ್ರಯಾನ-2 ಇತಿಹಾಸದ ಪುಟಗಳಿಗೆ ಸೇರ್ಪಡೆಗೊಳ್ಳಲಿದೆ. ಚಂದ್ರನಲ್ಲಿ ಇಳಿಯಲಿರುವ ಭಾರತದ ಪ್ರಪ್ರಥಮ ರೊಬೊಟ್ ಯೋಜನೆ ಇದಾಗಿದೆ. ಮಹಿಳೆಯೊಬ್ಬರ ನೇತೃತ್ವದಲ್ಲಿ ನಡೆದಿರುವ ಭಾರತದ ಪ್ರಪ್ರಥಮ ಬಾಹ್ಯಾಕಾಶ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಜೊತೆಗೆ ಭೂಮಿಯಿಂದ ಕಳುಹಿಸಲ್ಪಟ್ಟ ನೌಕೆಯೊಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುತ್ತಿರುವುದು ಇದೇ ಮೊದಲ ಸಲವಾಗಿದೆ.ಮಿತವ್ಯಯದಿಂದ ಚಂದ್ರಯಾನ 2 ಯೋಜನೆಯನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಇಸ್ರೋ ವಿಜ್ಞಾನಿಗಳು ಜಗತ್ತಿಗೆ ಮಾದರಿಯಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಚಂದ್ರಯಾನ-2ಕ್ಕೆ ತಗಲಿದ ಒಟ್ಟು ವೆಚ್ಚವು ಅದ್ದೂರಿಯಾದ ಹಾಲಿವುಡ್ ಚಿತ್ರಕ್ಕಿಂತಲೂ ಕಡಿಮೆಯಾಗಿದೆ. ಕ್ರಿಸ್ಟೋಫರ್ ನೊಲನ್ ನಿರ್ದೇಶನದ ವೈಜ್ಞಾನಿಕ ಕಥಾಹಂದರದ ಚಿತ್ರ ಇಂಟರ್‌ಸ್ಟೆಲ್ಲರ್‌ಗೆ ತಗಲಿದ ವೆಚ್ಟ ಸುಮಾರು 1,062 ಕೋಟಿ ರೂ. ಆಗಿದ್ದರೆ, ಚಂದ್ರಯಾನ 2ಕ್ಕೆ ಕೇವಲ 978 ಕೋಟಿ ರೂ.

ಭಾರತ 2008ರಲ್ಲಿ ಕೈಗೊಂಡಿದ್ದ ಚಂದ್ರಯಾನ-1ರಲ್ಲಿ ಆರ್ಬಿಟರ್ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿತ್ತು ಹಾಗೂ ಚಂದ್ರನ ಅಂಗಳದಲ್ಲಿ ನೀರಿನ ಅಸ್ತಿತ್ವವಿರುವುದನ್ನು ಕಂಡುಹಿಡಿದಿತ್ತು. ಆ ಮೂಲಕ ಇಸ್ರೋ ವಿಜ್ಞಾನಿಗಳು ತಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿ ಕೊಟ್ಟಿದ್ದರು. ಚಂದ್ರಯಾನ-2ರ ಯಶಸ್ವಿ ಉಡಾವಣೆಯ ಬಳಿಕ ಭಾರತವು 2022ರಲ್ಲಿ ಬಾಹ್ಯಾಕಾಶಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದೆ.

 2013 ಹಾಗೂ 2014ರ ನಡುವೆ ಮಂಗಳಗ್ರಹದ ಕಕ್ಷೆಯಲ್ಲಿ ಭಾರತದ ಪ್ರಪ್ರಥಮ ಉಪಗ್ರಹವನ್ನು ಸ್ಥಾಪಿಸುವಲ್ಲಿಯೂ ಇಸ್ರೋ ಅಮೋಘ ಯಶಸ್ಸನ್ನು ಕಂಡಿತ್ತು. ಇದೀಗ ರಶ್ಯ, ಅಮೆರಿಕ ಹಾಗೂ ಚೀನಾ ದೇಶಗಳ ಬಳಿಕ ಚಂದ್ರನಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲಿರುವ ರಾಷ್ಟ್ರವಾಗಿ ಭಾರತ ಗುರುತಿಸುತ್ತಿದೆ. ಆಂಧ್ರದ ಶ್ರೀಹರಿಕೋಟಾದ ಬಾಹ್ಯಾಕಾಶನೌಕೆ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಬಾಹುಬಲಿ ರಾಕೆಟ್ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ನೌಕೆಗಳನ್ನು ಒಳಗೊಂಡಿದೆ. ಇವೆಲ್ಲವೂ ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲ್ಪಟ್ಟಿದೆಯೆಂಬುದು ಇಸ್ರೋದ ಇನ್ನೊಂದು ಹೆಗ್ಗಳಿಕೆಯಾಗಿದೆ. 2019ರ ಎಪ್ರಿಲ್‌ನಲ್ಲಿ ಚಂದ್ರನಲ್ಲಿ ನೌಕೆಯನ್ನು ಇಳಿಸುವ ಇಸ್ರೇಲ್‌ನ ಯತ್ನವು ತಾಂತ್ರಿಕ ಕಾರಣಗಳಿಂದಾಗಿ ವಿಫಲವಾಗಿತ್ತು.

2.4 ಟನ್ ಭಾರದ ಆರ್ಬಿಟರ್ ನೌಕೆಯು ಸುಮಾರು ಒಂದು ವರ್ಷದ ಕಾಲ ಚಂದ್ರಲೋಕವನ್ನು ಸುತ್ತುವರಿಯಲಿದೆ. ಚಂದ್ರನ ಮೇಲ್ಮೈಯ ಛಾಯಾಚಿತ್ರಗಳನ್ನು ಅದು ತೆಗೆಯಲಿದ್ದು, ಅಲ್ಲಿ ನೀರಿನ ಕುರುಹುಗಳಿಗಾಗಿ ವೀಕ್ಷಣೆ ನಡೆಸಲಿದೆ ಹಾಗೂ ಚಂದ್ರನ ವಾತಾವರಣದ ಅಧ್ಯಯನ ನಡೆಸಲಿದೆ. ಇನ್ನು ವಿಕ್ರಮ್ ಎಂ. ಸಾರಾಭಾಯಿ ಹೆಸರಿನ ಲ್ಯಾಂಡರ್ ನೌಕೆಯ, ರೋವರ್ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸಲಿದೆ. ಪ್ರಗ್ಯಾನ್ ಎಂದು ಹೆಸರಿಡಲಾದ ರೋವರ್ ನೌಕೆಯು ಚಂದ್ರನ ಅಂಗಳದಲ್ಲಿ ಸಂಚರಿಸುತ್ತಾ ವಿವಿಧ ಪ್ರಯೋಗಗಳನ್ನು ನಡೆಸಲಿದೆ. ಚಂದ್ರನ ಬಂಡೆಗಲ್ಲು ಹಾಗೂ ಚಂದ್ರನ ಮೇಲ್ಮೈ ಮಣ್ಣಿನ ಅಧ್ಯಯನ ನಡೆಸಿ,ಭೂಮಿಗೆ ದತ್ತಾಂಶಗಳನ್ನು ರವಾನಿಸಲಿದೆ.ಸೆಪ್ಟಂಬರ್ ತಿಂಗಳ ಆರಂಭದಲ್ಲಿ ವಿಕ್ರಮ್ ನೌಕೆಯು ಯಶಸ್ವಿಯಾಗಿ ಚಂದ್ರನ ನೆಲದಲ್ಲಿ ಇಳಿದಲ್ಲಿ, ಅದು ಪ್ರಗ್ಯಾನ್ ರೊಬೊಟಿಕ್ ರೋವರ್ ನೌಕೆಯನ್ನು ಹೊರಬಿಡಲಿದೆ. ಸೆಕೆಂಡ್‌ಗೆ 1 ಸೆಂ.ಮೀ. ವೇಗದಲ್ಲಿ ಚಲಿಸಲಿರುವ ರೋವರ್ ನೌಕೆಯು, ವಿಕ್ರಮ್ ನೌಕೆಯಿಂದ ಸುಮಾರು ಅರ್ಧ ಕಿ.ಮೀ. ದೂರದವರೆಗೆ ಚಲಿಸಲಿದೆ. ಚಂದ್ರನ ಒಂದು ದಿನದವರೆಗೆ ಅಂದರೆ ಭೂಮಿಯ 14 ದಿನಗಳ ಕಾಲ ಅದು ಚಂದ್ರನ ಮೇಲ್ಮೈಯಲ್ಲಿ ಸಂಚರಿಸಲಿದೆ.

ಚಂದ್ರನಲ್ಲಿ ನೀರಿನ ಅಸ್ತಿತ್ವದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುವ ಜೊತೆಗೆ ಚಂದ್ರಯಾನ-2 ಯೋಜನೆಯು, ಚಂದ್ರನ ವಿಕಸನ ಹಾಗೂ ಪ್ರಾಕೃತಿಕ ಉಪಗ್ರಹವಾಗಿ ಅದರ ಕಾರ್ಯನಿರ್ವಹಣೆಯ ಬಗ್ಗೆ ಆಳವಾದ ಅಧ್ಯಯನ ನಡೆಸಲಿದೆ.ಚಂದ್ರಯಾನ-2 ಭಾರತದ ಮಹಿಳಾಶಕ್ತಿಯ ಸಾಮರ್ಥ್ಯಕ್ಕೂ ಸಾಕ್ಷಿಯಾಗಿದೆ. ಅತ್ಯಂತ ಪ್ರತಿಭಾವಂತ ಮಹಿಳಾ ವಿಜ್ಞಾನಿಗಳು ಚಂದ್ರಯಾನ 2 ಯೋಜನೆಯ ಸಾರಥ್ಯ ವಹಿಸಿದ್ದಾರೆ. ಮಹಿಳಾ ಬಾಹ್ಯಾಕಾಶ ವಿಜ್ಞಾನಿ ಮುತ್ತಯ್ಯ ವನಿತಾ, ಚಂದ್ರಯಾನ -2 ಯೋಜನೆಯ ನಿರ್ದೇಶಕಿಯಾಗಿದ್ದರೆ, ಇನ್ನೋರ್ವ ಮಹಿಳಾ ವಿಜ್ಞಾನಿ ರಿತು ಕರಿಡಲ್ ಅವರು ಮಿಶನ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವನಿತಾ ಹಾಗೂ ರಿತು ಅವರಂತೆ ಇಸ್ರೋದ ಹಲವಾರು ಮಹಿಳಾ ವಿಜ್ಞಾನಿಗಳು ಕೂಡಾ ಭಾರತದ ಈ ದೈತ್ಯ ಸಾಧನೆಯಲ್ಲಿ ಭಾಗಿಗಳಾಗಿದ್ದಾರೆ. ಚಂದ್ರಯಾನ-2ರ ಯಶಸ್ವಿಯು ಭಾರತಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಲಿದೆ.

ಈಗಾಗಲೇ 104 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆಗೊಳಿಸುವ ಮೂಲಕ ವಿಶ್ವದ ಗಮನವನ್ನು ಸೆಳೆದಿರುವ ಇಸ್ರೋ, ಚಂದ್ರಯಾನ-2ರ ಬಳಿಕ ವಿಶ್ವದ ಬಾಹ್ಯಾಕಾಶಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಉಜ್ವಲವಾಗಿವೆ. ಅಷ್ಟೇ ಅಲ್ಲದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಬಗ್ಗೆಯೂ ಯುವಜನಾಂಗದಲ್ಲಿ ಹೆಚ್ಚು ಆಸಕ್ತಿ ಮೂಡುವ ಸಾಧ್ಯತೆಯೂ ಇದೆ. ಇದೇ ಸಂದರ್ಭದಲ್ಲಿ, ಅಪೌಷ್ಟಿಕತೆ, ಬಡತನ, ನಿರುದ್ಯೋಗ, ರೋಗರುಜಿನ, ಅನಕ್ಷರತೆಗಳಿಂದ ನರಳುತ್ತಿರುವ ಭಾರತದಂತಹ ದೇಶಕ್ಕೆ ಈ ಯೋಜನೆಗಳ ಅಗತ್ಯವಿದೆಯೇ ? ಎನ್ನುವ ಚರ್ಚೆಗಳೂ ನಡೆಯುತ್ತಿವೆ. ಚಂದಿರನ ಕಡೆಗೆ ಧಾವಿಸಲು ಸಾಧ್ಯವಾಗುವ ನಮಗೆ, ಮ್ಯಾನ್‌ಹೋಲ್‌ಗೆ ಇಳಿಯಲು ಯಂತ್ರವೊಂದನ್ನು ಕಂಡುಹಿಡಿಯಲು ಯಾಕೆ ಸಾಧ್ಯವಾಗುತ್ತಿಲ್ಲ? ಎಂಬಂತಹ ಪ್ರಶ್ನೆಗಳು ನಿರ್ಲಕ್ಷಿಸುವಂತಹದ್ದಲ್ಲ. ಇಸ್ರೋ ಸಾಧನೆಗಳ ಫಲ ಈ ದೇಶದ ತಳಸ್ತರದ ಜನರನ್ನೂ ತಲುಪಿದಾಗಷ್ಟೇ ನಮ್ಮ ಸಾಧನೆಗಳು ಅರ್ಥಪೂರ್ಣವಾಗುತ್ತದೆ. ಈ ದೃಷ್ಟಿಯಿಂದ ಇಸ್ರೋ ಸೇರಿದಂತೆ ದೇಶದ ಎಲ್ಲ ವಿಜ್ಞಾನ, ತಂತ್ರಜ್ಞಾನ ಸಂಸ್ಥೆಗಳು ತಮ್ಮ ಸಂಶೋಧನೆಗಳಿಗೆ ಆದ್ಯತೆಗಳನ್ನು ನೀಡಬೇಕು. ಚಂದ್ರನ ಎತ್ತರ ಮತ್ತು ಮ್ಯಾನ್‌ಹೋಲ್‌ನ ಆಳ ಇವುಗಳ ನಡುವೆ ಸಮನ್ವಯ ಇಲ್ಲವಾದರೆ ನಮ್ಮ ಸಾಧನೆಗಳೆಲ್ಲ ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ’ ಎಂಬಂತಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)