varthabharthi


ವೈವಿಧ್ಯ

ಸರಕಾರದ ಘೋಷಿತ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿದರವು ಅದರ ಪರಿಕಲ್ಪನೆಯನ್ನೇ ವಿಫಲಗೊಳಿಸುವಂತಿದೆ.

ದುಡಿಮೆಯ ಅಣಕ

ವಾರ್ತಾ ಭಾರತಿ : 23 Jul, 2019
ಕೃಪೆ: Economic and Political Weekly

 ಒಂದು ಕನಿಷ್ಠ ಕೂಲಿಯನ್ನು ನಿಗದಿ ಮಾಡುವ ಚರ್ಚೆಗಳಲ್ಲಿ ಕಾರ್ಮಿಕರ ಕುಟುಂಬದ ಅಗತ್ಯಗಳ ಜೊತೆಗೆ ಸಾರ್ವತ್ರಿಕ ಕೂಲಿಯ ಮಟ್ಟ, ಅದರ ವಿತರಣೆ, ಜೀವನ ಮಟ್ಟ, ಕಾರ್ಮಿಕ ಉತ್ಪಾದಕತೆಯ ಮಟ್ಟ, ಆರ್ಥಿಕ ಪ್ರಗತಿಯ ದರ ಮೊದಲಾವುಗಳನ್ನು ಸಹ ಪರಿಗಣಿಸಲಾಗುತ್ತದೆ. ಆದರೆ ಕಾರ್ಮಿಕ ಮಂತ್ರಿಗಳು ಘೋಷಿಸಿರುವ ಈ ದಿನಕ್ಕೆ ರೂ. 178 ಎಂಬ ಕೂಲಿ ದರದ ಲೆಕ್ಕಾಚಾರದಲ್ಲಿ ಇಂತಹ ಯಾವ ಚರ್ಚೆಗಳೂ ನಡೆದ ಸೂಚನೆಯಿಲ್ಲ. ಹೀಗಾಗಿ ಈ ದರವನ್ನು ಬೇಕಾಬಿಟ್ಟಿಯಾಗಿ ನಿಗದಿ ಮಾಡಲಾಗಿದೆ.

 ಕೇಂದ್ರ ಸರಕಾರವು ಇತ್ತೀಚೆಗೆ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿದರವನ್ನು ರೂ. 178 ಎಂದು ನಿಗದಿಗೊಳಿಸಿದೆ. ಇದು ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿಯನ್ನು ನಿಗದಿಗೊಳಿಸಲು ಅಳವಡಿಸಿಸಬೇಕಾಗಿದ್ದ ಮಾನದಂಡಗಳನ್ನು ಮಾತ್ರವಲ್ಲದೆ ಅನುಸರಿಸಬೇಕಾದ ಆಡಳಿತಾತ್ಮಕ ಪ್ರಕ್ರಿಯೆಗಳನ್ನೂ ಉಲ್ಲಂಘಿಸಿದೆ. 2015ರಲ್ಲಿ ಇದನ್ನು ರೂ.160 ಎಂದು ನಿಗದಿಗೊಳಿಸಲಾಗಿತ್ತು. ಆನಂತರ 2017ರಲ್ಲಿ ಆಗ ಚಾಲ್ತಿಯಲ್ಲಿದ್ದ ಕೈಗಾರಿಕಾ ಕಾರ್ಮಿಕರ ಗ್ರಾಹಕ ಸೂಚ್ಯಂಕ ಏರಿಕೆಯನ್ನು ಆಧರಿಸಿ ಶೇ.10ರಷ್ಟು ಏರಿಸಿ ಕನಿಷ್ಠ ಕೂಲಿಯನ್ನು ದಿನಕ್ಕೆ ರೂ. 176 ಎಂದು ನಿಗದಿ ಮಾಡಲಾಯಿತು. ಆದರೆ ಹಾಲಿ ಚಾಲ್ತಿಯಲ್ಲಿರುವ ಹಣದುಬ್ಬರ ದರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ನಿಗದಿ ಪಡಿಸಿರುವ ಈ ರಾಷ್ಟ್ರೀಯ ಕನಿಷ್ಠ ತಳಮಟ್ಟದ ಕೂಲಿದರವು ವಾಸ್ತವ ದರದಲ್ಲಿ ಏರಿಕೆಯಾಗದೆ ಇಳಿಕೆಯಾಗಿದೆ. ಹಾಗಿದ್ದಲ್ಲಿ ಕನಿಷ್ಠ ಕೂಲಿ ದರನ್ನು ನಿಗದಿ ಮಾಡುವ ಔಚಿತ್ಯವಾದರೂ ಏನಿದೆ?

 ಕನಿಷ್ಠ ಕೂಲಿ ಮತ್ತು ಸಾಮೂಹಿಕ ಚೌಕಾಸಿ ವ್ಯವಸ್ಥೆಗಳು ಕೂಲಿದರದ ಮಟ್ಟ ಮತ್ತು ವಿತರಣೆಯ ಮೇಲೆ ಪ್ರಭಾವ ಬೀರಬಲ್ಲ ಕಾರ್ಮಿಕ ಮಾರುಕಟ್ಟೆ ಸಂಬಂಧಿ ಸಾಂಸ್ಥಿಕ ಏರ್ಪಾಟುಗಳಾಗಿವೆ. ಹೀಗಾಗಿ, ಸಾಧಾರಣವಾಗಿ, ಒಂದು ಕಾರ್ಮಿಕ ನೀತಿಯ ಭಾಗವಾಗಿಯೇ ಬಡತನ ಸುಧಾರಣೆ ಹಾಗೂ ಆದಾಯ ಮತ್ತು ಕಾರ್ಮಿಕ ಮಾರುಕಟ್ಟೆ ಅಸಮಾನತೆಗಳನ್ನು ಮೀರುವ ಒಂದು ಸಾಧನವಾಗಿ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿ ದರವನ್ನು ನಿಗದಿ ಮಾಡಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ಕನಿಷ್ಠ ಕೂಲಿಯನ್ನು ಕಾರ್ಮಿಕರ ಮತ್ತವರ ಕುಟುಂಬಗಳ ಅಗತ್ಯವನ್ನೂ ಪೂರೈಸುವ ಮಾನದಂಡಗಳ ಜೊತೆಜೊತೆಗೆ ಹಣದುಬ್ಬರ ದರವನ್ನೂ ಗಮನದಲ್ಲಿಟ್ಟುಕೊಂಡು ಲೆಕ್ಕಾಚಾರ ಮಾಡಲಾಗುತ್ತದೆ. ಇದು ಸಾಮೂಹಿಕ ಚೌಕಾಸಿ ವ್ಯವಸ್ಥೆಗಿಂತ ಭಿನ್ನ. ಸಾಮೂಹಿಕ ಚೌಕಾಸಿ ವ್ಯವಸ್ಥೆಯ ಮೂಲಕ, ವಿಶೇಷವಾಗಿ ಸಂಘಟಿತ ಕ್ಷೇತ್ರದ ಕಾರ್ಮಿಕರು ಅಸ್ತಿತ್ವದಲ್ಲಿರುವ ಕೂಲಿ ದರಕ್ಕಿಂತ ಹೆಚ್ಚಿನ ದರವನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಸಮಾಜದಲ್ಲಿ ಅತ್ಯಂತ ತಳಮಟ್ಟದ ಹಾಗೂ ಅತಂತ್ರ ಕೂಲಿಯನ್ನು ಪಡೆಯುವವರನ್ನು ಉದ್ದೇಶಿಸಿ ನಿಗದಿ ಮಾಡುವ ಪರಿಣಾಮಕಾರಿ ಕನಿಷ್ಠ ಕೂಲಿಯು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದಲ್ಲದೆ, ಮಧ್ಯಮ ವರ್ಗವನ್ನು ಹುಟ್ಟುಹಾಕಿ ಗಟ್ಟಿಗೊಳಿಸುತ್ತದೆ ಮತ್ತು ಆ ಮೂಲಕ ಸುಸ್ಥಿರವಾದ ಹಾಗೂ ಎಲ್ಲರನ್ನೂ ಒಳಗೊಳ್ಳುವಂತಹ ಅಭಿವೃದ್ಧಿಯನ್ನು ಕೂಡಾ ಸಾಧಿಸಬಹುದು.

ಆದರೆ, ಹಣದುಬ್ಬರವನ್ನು ಗಣನೆಗೇ ತೆಗೆದುಕೊಳ್ಳದೆ ಕನಿಷ್ಠ ಕೂಲಿಯನ್ನು ರೂ.178 ಎಂದು ನಿಗದಿ ಮಾಡಿರುವುದರಿಂದ ಅದು ವಾಸ್ತವದಲ್ಲಿ ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಹಾಗೂ ಅದು ಹಲವಾರು ಕಾರ್ಮಿಕ ಅಧಿವೇಶನಗಳ ಮತ್ತು 1992ರ ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಯೂ ಆಗಿದೆ. ಅಷ್ಟುಮಾತ್ರವಲ್ಲ. ಶಾಸನಬದ್ಧವಾದ ಕನಿಷ್ಠ ಕೂಲಿ ಸಲಹಾ ಸಮಿತಿಯ ಸಭೆಯಲ್ಲಿ ಇದರ ಬಗ್ಗೆ ಅನುಮೋದನೆಯನ್ನು ಕೂಡಾ ತೆಗೆದುಕೊಳ್ಳದೆ ಈ ತಳಮಟ್ಟದ ಕನಿಷ್ಠ ಕೂಲಿಯನ್ನು ಘೋಷಿಸಲಾಗಿದೆ. ರಾಜ್ಯ ಸರಕಾರಗಳು ಇದಕ್ಕಿಂತ ತಳಮಟ್ಟದ ಕೂಲಿಯನ್ನು ನಿಗದಿ ಮಾಡದ ಹಾಗೆ ಮಾಡುವ ಮತ್ತು ಕೇವಲ ಸಲಹಾತ್ಮಕವಾಗಿರುವ ಈ ಕೂಲಿದರವು ಮಾಸಿಕ 26 ದಿನಗಳ ಕೂಲಿಯ ಲೆಕ್ಕದಲ್ಲಿ ತಿಂಗಳಿಗೆ ಕೇವಲ ರೂ. 4,628 ಅನ್ನು ಮಾತ್ರ ಒದಗಿಸುತ್ತದೆ.

  ಒಂದು ಕನಿಷ್ಠ ಕೂಲಿಯನ್ನು ನಿಗದಿ ಮಾಡುವ ಚರ್ಚೆಗಳಲ್ಲಿ ಕಾರ್ಮಿಕರ ಕುಟುಂಬದ ಅಗತ್ಯಗಳ ಜೊತೆಗೆ ಸಾರ್ವತ್ರಿಕ ಕೂಲಿಯ ಮಟ್ಟ, ಅದರ ವಿತರಣೆ, ಜೀವನ ಮಟ್ಟ, ಕಾರ್ಮಿಕ ಉತ್ಪಾದಕತೆಯ ಮಟ್ಟ, ಆರ್ಥಿಕ ಪ್ರಗತಿಯ ದರ ಮೊದಲಾವುಗಳನ್ನು ಸಹ ಪರಿಗಣಿಸಲಾಗುತ್ತದೆ. ಆದರೆ ಕಾರ್ಮಿಕ ಮಂತ್ರಿಗಳು ಘೋಷಿಸಿರುವ ಈ ದಿನಕ್ಕೆ ರೂ. 178 ಎಂಬ ಕೂಲಿ ದರದ ಲೆಕ್ಕಾಚಾರದಲ್ಲಿ ಇಂತಹ ಯಾವ ಚರ್ಚೆಗಳೂ ನಡೆದ ಸೂಚನೆಯಿಲ್ಲ. ಹೀಗಾಗಿ ಈ ದರವನ್ನು ಬೇಕಾಬಿಟ್ಟಿಯಾಗಿ ನಿಗದಿ ಮಾಡಲಾಗಿದೆ. ಮೇಲಾಗಿ ಕಾರ್ಮಿಕ ಇಲಾಖೆಯೇ ರಚಿಸಿದ ಪರಿಣಿತರ ಸಮಿತಿಯೂ ಸಹ ತಿಂಗಳಿಗೆ ರೂ.9,750-11,622 ಲೆಕ್ಕದಲ್ಲಿ ರಾಷ್ಟ್ರೀಯ ಕನಿಷ್ಠ ಕೂಲಿಯನ್ನು ದಿನಕ್ಕೆ ಕನಿಷ್ಠ ರೂ.375-447 ಎಂದು ನಿಗದಿ ಮಾಡಬೇಕೆಂದು ಶಿಫಾರಸು ಮಾಡಿತ್ತು. ಸರಕಾರವು ತಾನೇ ರಚಿಸಿದ್ದ ಈ ಸಮಿತಿ ನೀಡಿದ ಶಿಫಾರಸುಗಳನ್ನೂ ಸಹ ಮೂಲೆಗುಂಪು ಮಾಡಿದೆ. ಹಾಗೆ ನೋಡಿದರೆ ಆ ಸಮಿತಿಯೂ ಸಹ ಕಾರ್ಮಿಕರೊಬ್ಬರ ದೈನಂದಿನ ಜೈವಿಕಶಕ್ತಿಯ ಅಗತ್ಯಗಳನ್ನು 2,700ರಿಂದ 2,400ಕ್ಕೆ ಇಳಿಸಿತ್ತು ಹಾಗೂ ದರಗಳನ್ನು ಹಾಲಿ ಲೆಕ್ಕದಲ್ಲಿ ಅಲ್ಲದೆ 2012ರ ದರಗಳಲ್ಲಿ ಲೆಕ್ಕ ಮಾಡಿ ಮುಂದಿಟ್ಟಿತ್ತು. ಆ ರೀತಿಯಲ್ಲಿ ಅದು ಅತ್ಯಂತ ಯಥಾಸ್ಥಿತಿವಾದಿ ಶಿಫಾರಸಾಗಿತ್ತು. ಆದರೆ ಅದನ್ನೂ ಸಹ ಸರಕಾರ ತಿರಸ್ಕರಿಸಿದೆ. ಅಷ್ಟು ಮಾತ್ರವಲ್ಲ. ಈ ಕೂಲಿ ದರವು 7ನೇ ವೇತನ ಆಯೋಗವು 2016ರಲ್ಲಿ ಶಿಫಾರಸು ಮಾಡಿದ ಕೂಲಿ ದರದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.

ದೇಶದ ಶೇ.93ರಷ್ಟು ದುಡಿಯುವ ಜನ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದು ಈಗ ನಿಗದಿಯಾಗಿರುವ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿಯು ಕಾರ್ಮಿಕರ ಕೂಲಿ ಮಟ್ಟವನ್ನು ಹೆಚ್ಚಿಸುವ ಅಥವಾ ಕಾರ್ಮಿಕರ ಕುಟುಂಬವನ್ನು ಆರ್ಥಿಕ ಅತಂತ್ರ ಸ್ಥಿತಿಯಿಂದ ಮೇಲೆತ್ತುವಂತಹ ಯಾವುದೇ ಸಕಾರಾತ್ಮಕ-ಆದಾಯ ಪರಿಣಾಮಗಳನ್ನು ಬೀರುವುದಿಲ್ಲ. ಅತ್ಯಂತ ಅತಂತ್ರ ಸ್ಥಿತಿಯಲ್ಲಿರುವ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಅತ್ಯಂತ ಅಸಂಬದ್ಧವೆನ್ನುವಷ್ಟು ಕಡಿಮೆ ಕೂಲಿಯನ್ನು ಪಡೆದುಕೊಳ್ಳುತ್ತಿರುವ ಕಾರ್ಮಿಕರ ಸಹಾಯಕ್ಕೆ ಬರದಿದ್ದ ಮೇಲೆ ಈ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿಯನ್ನು ರಚಿಸುವುದರ ಔಚಿತ್ಯವಾದರೂ ಏನು? ವಿಪರ್ಯಾಸವೆಂದರೆ ದೇಶದ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಕನಿಷ್ಠ ಕೂಲಿ ದರವು ಈ ರಾಷ್ಟ್ರೀಯ ಕೂಲಿ ದರಕ್ಕಿಂತ ಹೆಚ್ಚಾಗಿದೆ. ಆದ್ದರಿಂದ ಈ ಹೊಸ ರಾಷ್ಟ್ರೀಯ ಕೂಲಿ ದರವು ರಾಜ್ಯಗಳು ಅದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಪರಿಷ್ಕರಿಸದಿರಲು ಕಾರಣವನ್ನಷ್ಟೇ ಒದಗಿಸುತ್ತದೆ.

ನವ ಉದಾರವಾದಿ ವ್ಯವಸ್ಥೆಯಡಿಯಲ್ಲಿ ಭಾರತದ ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಪರಿಸ್ಥಿತಿಯು ಬಿಕ್ಕಟ್ಟಿಗೀಡಾಗಿ, ರೈತಾಪಿಯು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೊರಟಿರುವಾಗ ಈ ರಾಷ್ಟ್ರೀಯ ಕನಿಷ್ಠ ಕೂಲಿಯ ಘೋಷಣೆ ಅವರ ಭವಿಷ್ಯದ ಮೇಲೆ ಸಿಡಿಲು ಬಡಿದಂತಾಗಿದೆ. ಈ ರಾಷ್ಟ್ರೀಯ ಕನಿಷ್ಠ ಕೂಲಿಯ ಘೋಷಣೆಯು ಕನಿಷ್ಠಕೂಲಿಯೆಂಬ ವ್ಯವಸ್ಥೆಯ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಮಾತ್ರವಲ್ಲದೆ ಕಾರ್ಮಿಕ ಸುಧಾರಣೆಯ ಹೆಸರಲ್ಲಿ ಹೆಚ್ಚೆಚ್ಚು ದಾಳಿಗೀಡಾಗುತ್ತಿರುವ ಕಾರ್ಮಿಕರ ಮೇಲಿನ ದಾಳಿಯೂ ಆಗಿದೆ. ಹಲವಾರು ಹೋರಾಟಗಳಿಂದ ಗಳಿಸಿಕೊಂಡಿದ್ದ ಹಕ್ಕುಗಳನ್ನು ಮತ್ತು ಕಾರ್ಮಿಕ ರಕ್ಷಣಾ ನೀತಿಗಳನ್ನು ಸಡಿಲಗೊಳಿಸುತ್ತಿರುವ ಸರಕಾರ ಅದೇ ವೇಳೆಯಲ್ಲಿ ಮಾಲಕರ ಪರವಾದ ಕಾನೂನುಗಳನ್ನು ಮಾಡುತ್ತಾ ಸಾರಾಂಶದಲ್ಲಿ ಕನಿಷ್ಠ ಕೂಲಿಯೆಂಬ ಸಾಧನದ ಮೇಲೆ ದಾಳಿ ಮಾಡುತ್ತಿದೆ. ಬೇಕಾಬಿಟ್ಟಿಯಾಗಿ ಮತ್ತು ರಹಸ್ಯವಾಗಿ ರೂಪಿಸಲಾಗಿರುವ ಈ ರಾಷ್ಟ್ರೀಯ ತಳಮಟ್ಟದ ಕನಿಷ್ಠ ಕೂಲಿ ದರವು ಕೂಲಿ ಅಸಮಾನತೆಯನ್ನು, ಹೆಚ್ಚಿಸುವುದಲ್ಲದೆ ಆದಾಯಗಳಲ್ಲಿ, ಜೀವನದ ಸ್ಥಿಗತಿ ಮತ್ತು ಶ್ರೇಯೋಭಿವೃದ್ಧಿಗಳಲ್ಲಿ ಅಂತರವನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)