varthabharthi


ನಿಮ್ಮ ಅಂಕಣ

ಮಕ್ಕಳ ಮರಣಗಳಲ್ಲೂ ಜಾತಿಭೇದ!

ವಾರ್ತಾ ಭಾರತಿ : 24 Jul, 2019
ಮಲ್ಲೆಪಲ್ಲಿ ಲಕ್ಷ್ಮಯ್ಯ, ಕನ್ನಡಕ್ಕೆ: ಕಸ್ತೂರಿ

ಅನಾರೋಗ್ಯಕ್ಕೆ, ಆದಾಯಕ್ಕೆ, ಸಂಪನ್ಮೂಲಗಳಿಗೂ ಈ ದೇಶದಲ್ಲಿ ಜಾತಿ ಇದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಇನ್ನೂ ಹೇಳಬೇಕೆಂದರೆ ಇಡೀ ವರ್ಷಕ್ಕೆ ಅನ್ವಯಿಸುವಂತೆ ಸರಕಾರಗಳು ಮಾಡುವ ಆರ್ಥಿಕ ಯೋಜನೆಗಳಲ್ಲೂ, ಬಜೆಟ್ ವಿತರಣೆಯಲ್ಲೂ ಜಾತಿ ಸ್ಫುಟವಾಗಿ ಕಾಣಿಸುತ್ತದೆ ಎಂದರೆ ಆಶ್ಚರ್ಯಗೊಳ್ಳುವ ಅಗತ್ಯವಿಲ್ಲ. ಅದಕ್ಕಾಗಿಯೇ ಬಜೆಟ್‌ಗೆ ಸಹ ಜಾತಿ ಇದೆ ಎಂದು ಈಗ ಹೇಳಿದರೆ ತಪ್ಪಾಗಲಾರದು. ನೂರಕ್ಕೆ 80ರಷ್ಟು ಇರುವ ಜಾತಿಗಳಲ್ಲಿ ಬಹಳಷ್ಟಕ್ಕೆ ಸಂಪನ್ಮೂಲಗಳಿಲ್ಲ. ಹೀಗಾಗಿಯೇ ಭಾರತ ಆರ್ಥಿಕ ರಂಗ ಚೇತರಿಕೆ ಕಾಣುತ್ತಿಲ್ಲವೆಂಬುದು ಸತ್ಯ.

ಹರಿವಂಶಪುರ- ಬಿಹಾರದ ಮುಝಫ್ಫರ್‌ಪುರ ಪ್ರಾಂತದಲ್ಲಿನ ವೈಶಾಲಿ ಜಿಲ್ಲೆಯಲ್ಲಿನ ಒಂದು ಕುಗ್ರಾಮ. ಚಾತುರಿ ಸಾಹ್ನಿ ತನಗೆ ಅತ್ಯಂತ ಪ್ರಿಯರಾದ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾನೆ. ದೊಡ್ಡಮಗ ಪ್ರಿನ್ಸ್‌ಗೆ ಏಳು ವರ್ಷಗಳಾದರೆ ಕಿರಿಮಗ ಚೋಟುಗೆ ಎರಡು ವರ್ಷ ತುಂಬಿರಲಿಲ್ಲ. ಆ ಇಬ್ಬರು ಪುಟಾಣಿಗಳು ಮೆದುಳು ಜ್ವರದಿಂದ ಮೃತರಾದರು. ಚಂದಮಾಮನ ಮೇಲೆ ಕಾಲನಿಗಳ ಕನಸು ಕಾಣುತ್ತಿರುವ ಈ ದಿನಗಳಲ್ಲಿ, ಹೃದಯವನ್ನು ಬದಲಿಸಿ ಬೇರೆ ಹೃದಯವನ್ನು ಅಳವಡಿಸುತ್ತಿರುವ ಈ ಕಾಲದಲ್ಲಿ ಮೆದುಳು ಜ್ವರದಂತಹ ಸಾಮಾನ್ಯ ವ್ಯಾದಿಗಳಿಂದ ಕೂಡ ಏಳೆಮಕ್ಕಳ ಪ್ರಾಣಗಳು ಹೋಗುವುದನ್ನು ಹೇಗೆ ಜೀರ್ಣಿಸಿಕೊಳ್ಳಬೇಕು? ಆದರೆ ಇದು ಒಂದು ಹರಿವಂಶಪುರಕ್ಕೆೆ ಸೀಮಿತವಾದ ವಿಷಯವಲ್ಲ. ಸಾಹ್ನಿಗೆ ಮಾತ್ರವೇ ಸಂಬಂಧಿಸಿದ್ದು ಕೂಡ ಅಲ್ಲ. ಕಳೆದ ಎರಡು ತಿಂಗಳಲ್ಲಿ ಮುಝಫ್ಫರ್ ಪುರ ಪ್ರಾಂತದಲ್ಲಿ 161 ಮಕ್ಕಳು ಸತ್ತುಹೋದರು. 842 ಮಂದಿ ಈ ರೋಗದಿಂದ ಆಸ್ಪತ್ರೆ ಪಾಲಾದರು.

ತೀರಿಹೋದವರಲ್ಲಿ ಅತ್ಯಧಿಕ ಮಂದಿ ಅತ್ಯಂತ ಕೆಳವರ್ಗಗಳಾದ ದಲಿತ ಕುಟುಂಬಗಳಿಂದ ಬಂದವರು. ಅವರಲ್ಲಿ ದಲಿತರು 101 ಮಂದಿ, 47 ಮಂದಿ ಹಿಂದುಳಿದ ಜಾತಿಯವರು, 20 ಮಂದಿ ಮುಸ್ಲಿಮರು ಇದ್ದಾರೆ. ಈ ಅಂಕಿ-ಸಂಖ್ಯೆಗಳನ್ನು ಮುಝಫ್ಫರ್‌ಪುರದ ದಲಿತ ಸಂಘಗಳ ಕಾರ್ಯಕರ್ತರು ಸೆಂಟರ್ ಫಾರ್ ದಲಿತ ಸ್ಟಡೀಸ್ ಸಹಕಾರದಿಂದ ಮನೆ ಮನೆಗೆ ತಿರುಗಿ ಸಂಗ್ರಹಿಸಿದ್ದಾರೆ. ಸರಕಾರಗಳು ಕೇವಲ ಮಕ್ಕಳ ವಿವರಗಳನ್ನು ತಿಳಿಸಿದವೇ ಹೊರತು, ಅವರ ಸಾಮಾಜಿಕ ವರ್ಗದ ವಿವರಗಳನ್ನು ತಿಳಿಸಲಿಲ್ಲ, ಬಿಹಾರದಲ್ಲಿ ಮಕ್ಕಳು ತೀರಿಹೋಗುತ್ತಿರುವ ಸಮಯದಲ್ಲಿ ಅಲ್ಲಿಯ ಕಾರ್ಯಕರ್ತರೊಂದಿಗೆ ಸೆಂಟರ್ ಫಾರ್ ದಲಿತ್ ಸ್ಟಡೀಸ್ ಕೈಜೋಡಿಸಿ ಈ ಅಧ್ಯಯನ ಮಾಡಿತು. ಅದರಲ್ಲಿನ ಭಾಗವಾಗಿಯೇ ಒಂದು ಗ್ರಾಮಕ್ಕೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ವಿವರಗಳನ್ನು ಸಂಗ್ರಹಿಸಿತು.

ಬಿಹಾರದಲ್ಲಿ ಮಕ್ಕಳ ಮರಣಗಳಿಗೂ, ಸರಕಾರಗಳು ಅನುಸರಿಸುತ್ತಿರುವ ನೀತಿಗಳಿಗೂ ಸಂಬಂಧ ಇರುತ್ತದೆ ಎಂಬ ಊಹೆಯೇ ಈ ಅಧ್ಯಯನಕ್ಕೆ ನಾಂದಿಯಾಯಿತು. ಮುಖ್ಯವಾಗಿ ಸರಕಾರಗಳು ಬಜೆಟ್‌ನಲ್ಲಿ ನೀಡುತ್ತಿರುವ ಹಣದ ಮೊತ್ತಗಳು, ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳತ್ತ, ಮುಖ್ಯವಾಗಿ ಸಾಮಾಜಿಕ ಅಸಮಾನತೆಗಳನ್ನು ತೊಲಗಿಸುವ ಪ್ರಯತ್ನಗಳತ್ತ ಅವರ ಧೋರಣೆಗಳನ್ನು ಸ್ಪಷ್ಟಪಡಿಸುತ್ತವೆ. ಸರಕಾರಗಳ ಜಾತಿತಾರತಮ್ಯ ಧೋರಣೆಗೆ ಈ ಬಜೆಟ್‌ಗಳು ಕನ್ನಡಿ ಹಿಡಿಯುತ್ತಿವೆ. ಅದಕ್ಕೆ ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ವಿಶ್ಲೇಷಣೆಯನ್ನು ಈ ಘಟನೆಯ ಬೆಳಕಿನಲ್ಲಿ ಮಾಡಬೇಕಾಗಿರುತ್ತದೆ.

ಹರಿವಂಶಪುರ ಹಳ್ಳಿಯ ಮಕ್ಕಳು ಸಾಯುವುದಕ್ಕೆ, ಆ ಹಳ್ಳಿಯ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಗೂ ಸಂಬಂಧ ಇದೆ. ಮೊದಲು ಮಕ್ಕಳ ಮರಣಗಳಿಗೆ ಲಿಚಿ ಹಣ್ಣು ತಿನ್ನುವುದೇ ಕಾರಣ ಎಂದು ಪ್ರಚಾರ ಮಾಡಿದರು. ಆದರೆ ಅನೇಕ ತಜ್ಞವೈದ್ಯರು, ವೈದ್ಯರ ತಂಡಗಳು ಈ ವಾದವನ್ನು ತಳ್ಳಿಹಾಕಿದ್ದಾರೆ. ಕೊನೆಗೆ ಸರಕಾರ ನೇಮಿಸಿದ ಸಮಿತಿ ಸಹ ಮಕ್ಕಳ ಮರಣಗಳಿಗೆ ಲಿಚಿ ಹಣ್ಣು ತಿನ್ನುವುದು ಕಾರಣವಲ್ಲ ಎಂದು ಖಚಿತ ಪಡಿಸಿತು.

ಮೆದುಳು ಜ್ವರದಿಂದ ಆಸ್ಪತ್ರೆಯಲ್ಲಿ ಸೆರಿದವರಲ್ಲಿ ಶೇ. 90ರಷ್ಟು ಮಂದಿ 7ವರ್ಷದೊಳಗಿನ ವಯಸ್ಸಿನವರೇ ಎಂದು ತಿಳಿದುಬಂದಿದೆ. ಇವರಲ್ಲಿ 135 ಮಂದಿ 3 ವರ್ಷಗಳ ಒಳಗಿನ ಮಕ್ಕಳೇ ಆಗಿದ್ದಾರೆ. ಅವರು ಸಹ ಈ ಮರಣಗಳಿಗೆ ಪೌಷ್ಟಿಕಾಹಾರದ ಕೊರತೆ, ದಟ್ಟ ದ್ರಾರಿದ್ರ ಕಾರಣ ಎಂದು ತಿಳಿಸಿದ್ದಾರೆ. ಹರಿವಂಶ್‌ಪೂರ್ ಗ್ರಾಮದಲ್ಲಿ 2,000 ಕುಟುಂಬಗಳಿವೆ. ಈ ಗ್ರಾಮದಲ್ಲಿ 15 ಮಂದಿ ಭೂಮಾಲಕರ ಹೊರತು ಮತ್ತೆ ಯಾರಿಗೂ ವ್ಯವಸಾಯ ಭೂಮಿಗಳಿಲ್ಲ. ಈ ಗ್ರಾಮದಲ್ಲಿನ ಎಲ್ಲರೂ ಈ 15 ಮಂದಿ ಭೂ ಮಾಲಕರ ಭೂಮಿಗಳಲ್ಲಿ ಕೆಲಸ ಮಾಡಿ ಬದುಕಬೇಕು. ಈ ಗ್ರಾಮದಲ್ಲಿನ ಕೂಲಿಗಳೆಲ್ಲರಿಗೆ ತಿಂಗಳಿಗೆ 10ರಿಂದ 12 ದಿನಗಳ ಕೆಲಸ ಹೊರತು ಬೇರೆ ಉದ್ಯೋಗ ಇಲ್ಲ. ಈ ಗ್ರಾಮದಲ್ಲಿನ ಸುಮಾರು ಶೇ. 30ರಷ್ಟು ಮಂದಿ ಯುವಕರು ದಿಲ್ಲಿ, ಹರ್ಯಾಣ, ಪಂಜಾಬ್, ಮುಂಬೈಗಳಿಗೆ ವಲಸೆ ಹೋಗಿ ಬದುಕು ಸಾಗಿಸುತ್ತಿರುತ್ತಾರೆ. ಭಾರತ ಸರಕಾರ ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದಕ್ಕೆ ಹೆಮ್ಮೆ ಪಡುತ್ತಿದೆ. ಆದರೆ ಕೋಟ್ಯಂತರ ಭಾರತದ ಪ್ರಜೆಗಳು ಹಸಿವಿನಿಂದ ಒದ್ದಾಡುತ್ತಿದ್ದಾರೆ ಎಂಬ ವಿಷಯವನ್ನು ಮರೆಮಾಚಲಾಗುತ್ತದೆ. 2018ರ ಗ್ಲೋಬಲ್ ಹಂಗರ್ ಇಂಡೆಕ್ಸ್ ಪ್ರಕಾರ, 119 ದೇಶಗಳ ವಿವರಗಳ ಸಂಗ್ರಹಿಸಿದ್ದು, ಅದರಲ್ಲಿ ಭಾರತ 103ನೇ ಸ್ಥಾನದಲ್ಲಿದೆ.

ಆದರೆ ಹಸಿವಿಗೆ, ಅನಾರೋಗ್ಯಕ್ಕೆ, ಆದಾಯಕ್ಕೆ, ಸಂಪನ್ಮೂಲಗಳಿಗೂ ಈ ದೇಶದಲ್ಲಿ ಜಾತಿ ಇದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಇನ್ನೂ ಹೇಳಬೇಕೆಂದರೆ ಇಡೀ ವರ್ಷಕ್ಕೆ ಅನ್ವಯಿಸುವಂತೆ ಸರಕಾರಗಳು ಮಾಡುವ ಆರ್ಥಿಕ ಯೋಜನೆಗಳಲ್ಲೂ, ಬಜೆಟ್ ವಿತರಣೆಯಲ್ಲೂ ಜಾತಿ ಸ್ಫುಟವಾಗಿ ಕಾಣಿಸುತ್ತದೆ ಎಂದರೆ ಆಶ್ಚರ್ಯಗೊಳ್ಳುವ ಅಗತ್ಯವಿಲ್ಲ. ಅದಕ್ಕಾಗಿಯೇ ಬಜೆಟ್‌ಗೆ ಸಹ ಜಾತಿ ಇದೆ ಎಂದು ಈಗ ಹೇಳಿದರೆ ತಪ್ಪಾಗಲಾರದು. ನೂರಕ್ಕೆ 80ರಷ್ಟು ಇರುವ ಜಾತಿಗಳಲ್ಲಿ ಬಹಳಷ್ಟಕ್ಕೆ ಸಂಪನ್ಮೂಲಗಳಿಲ್ಲ. ಹೀಗಾಗಿಯೇ ಭಾರತ ಆರ್ಥಿಕ ರಂಗ ಚೇತರಿಕೆ ಕಾಣುತ್ತಿಲ್ಲವೆಂಬುದು ಸತ್ಯ.

ಕಳೆದ 5 ವರ್ಷಗಳಲ್ಲಿ ಮೋದಿ ಸರಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳನ್ನು ಪಾತಾಳದ ಅಂಚಿಗೆ ತಳ್ಳಿ ಹಾಕಿವೆ. ಇಡೀ ಬಜೆಟ್‌ನಲ್ಲಿ ಎಸ್ಸಿಗಳ ವಿಷಯಕ್ಕೆ ಬಂದರೆ, 2014-2015ರಿಂದ 2019-2020ರ ವರೆಗಿನ ಕೇಂದ್ರ ಸರಕಾರದ ವಿತರಣೆಗಳನ್ನು ನೋಡಿದರೆ, 2014-2015ರಲ್ಲಿ ಶೇ. 2.82 ಇದ್ದರೆ, ಅದನ್ನು 2015-2016ರಲ್ಲಿ ಶೇ. 1.72ಕ್ಕೆ ತಗ್ಗಿಸಿ ಮತ್ತೆ 2019-2020ರಲ್ಲಿ 2.92ಕ್ಕೆ ಹೆಚ್ಚಿಸಿದೆ. ಇದು ಎಸ್ಸಿಗಳ ಮೇಲಿನ ತಾರತಮ್ಯ ಧೋರಣೆಗೆ ಕನ್ನಡಿ ಹಿಡಿಯುತ್ತಿದೆ. ಎಸ್ಟಿಗಳಿಗೆ ಕೂಡಾ 2014-2015ರಲ್ಲಿ ಶೇ. 1.80 ಇದ್ದರೆ 2015-2016ರಲ್ಲಿ ಶೇ. 1.12ಕ್ಕೆ ತಗ್ಗಿಸಿ ಮತ್ತೆ 2019-2020ರಲ್ಲಿ ಶೇ. 1.89ಕ್ಕೆ ಹೆಚ್ಚಿಸಲಾಗಿದೆ. ಇದು ಸಹ ಅದೇ ತಾರತಮ್ಯ, ಉದಾಸೀನಗಳಿಗೆ ಸಾಕ್ಷಿಯಾಗಿದೆ. ಎಸ್ಸಿ, ಎಸ್ಟಿಗಳ ಕಲ್ಯಾಣಕ್ಕೋಸ್ಕರ ಉದ್ದೇಶಿಸಲಾದ ಎಸ್ಸಿ ಸಬ್ ಪ್ಲಾನ್, ಎಸ್ಟಿ ಸಬ್ ಪ್ಲಾನ್ ಜಾರಿ ಕೂಡಾ ಅದೇ ಧೋರಣೆಯಲ್ಲಿ ಸಾಗುತ್ತಿದೆ. ಎಸ್ಸಿ ವೆಲ್ಫೇರ್ ವಿತರಣೆ 2017-2018ರಲ್ಲಿ ಶೇ. 5.58, 2019-2020ರಲ್ಲಿ ಶೇ. 6.76ರಂತೆ ಇವೆ. ನಿಜವಾಗಿ ಶೇ. 16 ನಿಧಿಗಳನ್ನು ಎಸ್ಸಿ ವೆಲ್ಫೇರ್‌ಗೆ ವಿತರಿಸಬೇಕು. ಯಾವ ವರ್ಷ ಕೂಡಾ ಅವು ಅರ್ಧಕ್ಕೆ ಕೂಡಾ ತಲುಪಲಿಲ್ಲ. ಎಸ್ಟಿ ವೆಲ್ಫೇರ್‌ಗೆ ಶೇ. 8 ವಿತರಿಸಬೇಕಾಗಿರುವಾಗ, 2017-2018ರಲ್ಲಿ ಶೇ. 3.38, 2018-2019ರಲ್ಲಿ ಶೇ. 3.85, 2019-2020ರಲ್ಲಿ ಶೇ. 4.4 ಮಾತ್ರವೇ ಬಜೆಟ್ ವಿತರಣೆ ಮಾಡಿದ್ದಾರೆ. ಎಸ್ಸಿ, ಎಸ್ಟಿಗಳ ಕಲ್ಯಾಣದಲ್ಲಿ ಪ್ರಧಾನ ಅಂಶವಾದ ಶಿಕ್ಷಣಕ್ಕೆ ಪ್ರೋತ್ಸಾಹ ಶೂನ್ಯ. ಇದರಲ್ಲಿ ಸ್ಕಾಲರ್‌ಶಿಪ್ ಅತ್ಯಂತ ಮುಖ್ಯವಾದುದು. ಎಸ್ಸಿಗಳಿಗೆ ಸಂಬಂಧಿಸಿ ಪ್ರಿ. ಮೆಟ್ರಿಕ್ ಸ್ಕಾಲರ್‌ಶಿಪ್ ಅತ್ಯಂತ ಮುಖ್ಯವಾದುದು. ಎಸ್ಸಿಗಳಿಗೆ ಸಂಬಂಧಿಸಿ ಪ್ರಿ ಮೆಟ್ರಿಕ್ ಸ್ಕಾಲರ್‌ಶಿಪ್ 2014-2015ರಲ್ಲಿ 499 ಕೋಟಿಗಳಾಗಿದ್ದರೆ, 2019-2020 ಬರುವಷ್ಟರಲ್ಲಿ 355 ಕೋಟಿಗಳಿಗೆ ತಗ್ಗಿಸಿದ್ದಾರೆ. 2016-17, 2017-18, 2018-2019ರ ವಿತರಣೆಗಳನ್ನು ನೋಡಿದರೆ ಆಶ್ಚರ್ಯ ಉಂಟಾಗದಿರದು. 2016-2017 ರಲ್ಲಿ 50ಕೋಟಿಗಳು, 2017-2018ರಲ್ಲಿ 50ಕೋಟಿಗಳು, 2018-2019ರಲ್ಲಿ 125 ಕೋಟಿಗಳು, 2019-2020ರಲ್ಲಿ ಇದು ಮತ್ತೂ ಇಳಿದು 109 ಕೋಟಿಗಳಿಗೆ ತಗ್ಗಿಸಿದ್ದು ಯಾವ ಕಲ್ಯಾಣಕ್ಕೆ ಸೂಚಕವೋ ಅರ್ಥವಾಗದು. ನ್ಯಾಷನಲ್ ಎಸ್ಸಿ ಫೈನಾನ್ಸ್ ಕಾರ್ಪೊರೇಶನ್‌ಗೆ ವಿತರಣೆ ಸಹ ಹೆಚ್ಚಿಸಿದ್ದು ನಾಮ ಮಾತ್ರವೇ.

ಏಕಲವ್ಯ ಮಾದರಿ ಪಾಠ ಶಾಲೆಗಳನ್ನು ಕೇಳಿ. ಕಳೆದ ಕೆಲವು ವರ್ಷಗಳಿಂದ ಪೂರ್ತಿಯಾಗಿ ನಿಧಿಗಳನ್ನು ನಿಲ್ಲಿಸಲಾಗಿದೆ. ಆಶ್ರಮ ಪಾಠಶಾಲೆಗಳಿಗೆ ಕೂಡಾ ಕಳೆದ ಮೂರು ವರ್ಷಗಳಿಂದ ನಿಧಿಗಳ ವಿತರಣೆಗಳೇ ಇಲ್ಲದೇ ಹೋಗಿರುವುದು ಗಮನಿಸಿದರೆ ಈ ವರ್ಗಗಳತ್ತ ಆಳುವವರ ನಿರ್ಲಕ್ಷ ಸ್ಪಷ್ಟವಾಗುತ್ತದೆ. ‘ಸ್ವಚ್ಛಭಾರತ’ ಹೆಸರಿನಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ನಾವು ಆಚರಣೆಯಲ್ಲಿ ಅಮಾನವೀಯ ವಿಧಾನಗಳನ್ನು ತೊಲಗಿಸಿಲ್ಲ. ಕೆಲದಿನಗಳ ಹಿಂದೆ ಕೇಂದ್ರಮಂತ್ರಿ ರಾಮ್‌ದಾಸ್ ಅಠಾವಲೆ ಕೊಟ್ಟ ವಿವರಣೆ ಪ್ರಕಾರ ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿರುವವರಲ್ಲಿ 1993ರಿಂದ ಇದುವರೆಗೆ 445ಮಂದಿ ಮ್ಯಾನ್‌ಹೋಲ್‌ನೊಳಗೆ ಇಳಿದು ಉಸಿರುಗಟ್ಟಿ ಸತ್ತಿದ್ದಾರೆ. ಕಳೆದ 3ವರ್ಷಗಳಲ್ಲಿ 88 ಮಂದಿ ಮೃತ್ಯು ಪಾಶಕ್ಕೆ ಸಿಲುಕಿದರು. ಇದರಲ್ಲಿ ತಮಿಳುನಾಡು 144, ಗುಜರಾತ್ 131, ಕರ್ನಾಟಕ 75, ಯುಪಿಯಲ್ಲಿ 71 ಮಂದಿ ಸತ್ತಿದ್ದಾರೆ. ಆದರೆ ಅವರ ಕ್ಷೇಮಕ್ಕೋಸ್ಕರ ಆಗಲೀ, ಅವರನ್ನು ಈ ಅಮಾನುಷ ವೃತ್ತಿಯಿಂದ ಇತರ ವೃತ್ತಿಗಳಿಗೆ ಕರೆದೊಯ್ಯವ ಪರಿಸ್ಥಿತಿಯಾಗಲೀ ಇಲ್ಲದಿರುವುದಲ್ಲದೆ, ಅವರ ವಿದ್ಯಾಭ್ಯಾಸದತ್ತ ಸರಕಾರ ತೋರುತ್ತಿರುವ ಅಶ್ರದ್ಧೆಯನ್ನು ನೋಡಿದರೆ ನಾವು ತಲೆ ತಗ್ಗಿಸಬೇಕಾಗಿದೆ. ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿರುವವರ ಸ್ವಯಂ ಉದ್ಯೋಗಕ್ಕೋಸ್ಕರ 2013-2014ರಲ್ಲಿ ರೂ. 557 ಕೋಟಿ ವಿತರಿಸಿದರೆ, 2015-2016ರಲ್ಲಿ ರೂ. 10 ಕೋಟಿಗಳು, 2016-2017ರಲ್ಲಿ ರೂ. 2 ಕೋಟಿ, ಅದನ್ನು ಮತ್ತೆ ರೂ. 1 ಕೋಟಿಗೆ ಸೀಮಿತಗೊಳಿಸಿದರು. ಮತ್ತೆ 2019-2020ರಲ್ಲಿ ಅದನ್ನು ರೂ. 5 ಕೋಟಿ ಮಾಡಿದ್ದಾರೆ. ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ತಿಳಿಯುವುದಿಲ್ಲ.

ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರ ಎಸ್ಸಿ, ಎಸ್ಟಿಗಳತ್ತ ತೋರುತ್ತಿರುವ ನಿರ್ಲಕ್ಷದಿಂದಾಗಿ ಉತ್ತರ ಭಾರತದಲ್ಲಿ ದಲಿತರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಅಂದರೆ ಒಂದು ಕಡೆ ಆರ್ಥಿಕವಾಗಿ, ಸಾಮಾಜಿಕವಾಗಿ ತಾರಾತಮ್ಯ, ಅಸ್ಪಶ್ಯತೆಗೆ, ಬಹಿಷ್ಕಾರಕ್ಕೆ ಗುರಿಯಾಗುತ್ತಲೇ, ಎರಡನೆಯದಾಗಿ ಜೀವಿಸುವ ಹಕ್ಕನ್ನು ಕೂಡಾ ಕಳೆದು ಕೊಳ್ಳುತ್ತಿದ್ದಾರೆ.

ಇವೆಲ್ಲವುಗಳ ಪ್ರತಿರೂಪವೇ ಬಿಹಾರದಲ್ಲಿ ಎಳೆಯಮಕ್ಕಳು ಹಕ್ಕಿಮರಿಗಳಂತೆ ಉದುರಿ ಹೋಗಿದ್ದು. ಈ ದೇಶದಲ್ಲಿ ಕ್ರಮೇಣ ಅಸ್ಪಶ್ಯ ಜಾತಿಗಳೆನಿಸಿದ ದಲಿತರು, ಆದಿವಾಸಿಗಳು ಭಾರತದ ಭೂಪಟದಿಂದ ಕಣ್ಮರೆಯಾಗುತ್ತಾರೇನೋ ಎಂಬ ಭಯ ಹಿಂಬಾಲಿಸುತ್ತದೆ. ಭಾರತದ ಲೋಕಸಭೆಯಲ್ಲಿ 112 ಮಂದಿ ಎಸ್ಸಿ, ಎಸ್ಟಿ ಸದಸ್ಯರಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿದ ಪ್ರತ್ಯೇಕ ಹಕ್ಕುಗಳ ಕಾರಣದಿಂದಲೇ ಇವರಿಗೆ ಆ ಪದವಿಗಳು ಬಂದವು. ಎಸ್ಸಿ, ಎಸ್ಟಿಗಳ ಪರವಾಗಿ ಸರಕಾರದಲ್ಲಿ, ಸರಕಾರದೊಂದಿಗೆ ಹೋರಾಡಿ, ಚರ್ಚಿಸಿ, ಹೇಗಾದರೂ ಸರಿ ಎಸ್ಸಿ, ಎಸ್ಟಿಗಳ, ಸಾಮಾನ್ಯ ಜನರ ಹಕ್ಕುಗಳನ್ನು, ಜೀವನ ಭದ್ರತೆಯನ್ನು ರಕ್ಷಿಸಬೇಕಾದ ಜವಾಬ್ದಾರಿ ಅವರದು. ಆದರೆ ಅಂತಹ ಪ್ರಯತ್ನ ನಡೆಯುತ್ತಿರುವಂತಿಲ್ಲ. ಇದು ಶೋಚನೀಯ. ಅವರಷ್ಟೇ ಅಲ್ಲ, ಸಮಾಜದಲ್ಲಿನ ಪ್ರಗತಿಕಾಂಕ್ಷಿಗಳು, ಪ್ರಜಾಪ್ರಭುತ್ವವಾದಿಗಳು ಕೂಡಿ ಎಸ್ಸಿ, ಎಸ್ಟಿಗಳ ಮೇಲೆ ನಡೆಯುತ್ತಿರುವ ತಾರತಮ್ಯ, ಬಹಿಷ್ಕಾರಗಳ ಮೇಲೆ ಸ್ಪಂದಿಸಬೇಕಾದ ತುರ್ತು ಅವಶ್ಯಕತೆ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)