varthabharthi


ಸಿನಿಮಾ

ಮಣಿರತ್ನಂ, ಅನುರಾಗ್ ಕಶ್ಯಪ್ ಸೇರಿ 49 ಸೆಲೆಬ್ರಿಟಿಗಳಿಂದ ಪ್ರಧಾನಿಗೆ ಪತ್ರ

‘ಜೈ ಶ್ರೀ ರಾಮ್’ ಇಂದು ಯುದ್ಧದ ಕರೆಯಾಗಿದೆ

ವಾರ್ತಾ ಭಾರತಿ : 24 Jul, 2019

ಹೊಸದಿಲ್ಲಿ, ಜು. 24: ಗಾಯಕಿ ಶುಭಾ ಮುದ್ಗಲ್, ನಟಿ ಕೊಂಕಣ್ ಸೇನ್ ಶರ್ಮಾ, ಚಿತ್ರ ನಿರ್ದೇಶಕರಾದ ಶ್ಯಾಮ್ ಬೆನಗಲ್, ಅನುರಾಗ್ ಕಶ್ಯಪ್ ಹಾಗೂ ಮಣಿರತ್ನಂ ಸಹಿತ ವಿವಿಧ ಕ್ಷೇತ್ರಗಳ 49ಕ್ಕೂ ಅಧಿಕ ಸೆಲೆಬ್ರೆಟಿಗಳು ದೇಶದಲ್ಲಿ ಸಂಭವಿಸುತ್ತಿರುವ ಗುಂಪಿನಿಂದ ಥಳಿತದ ಘಟನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಜುಲೈ 23ರ ದಿನಾಂಕದ ಪತ್ರದಲ್ಲಿ ಸೆಲೆಬ್ರೆಟಿಗಳು, ಇಂತಹ ಪ್ರಕರಣಗಳಲ್ಲಿ ‘ತ್ವರಿತ ಹಾಗೂ ಖಚಿತ’ ಮಾದರಿ ಶಿಕ್ಷೆ ನೀಡಬೇಕು ಎಂದಿದ್ದಾರೆ. ‘‘ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಗುಂಪಿನಿಂದ ಹಲ್ಲೆಯನ್ನು ಕೂಡಲೇ ನಿಲ್ಲಿಸಬೇಕು. 2016ರಲ್ಲಿ ದಲಿತರ ಮೇಲೆ ಇಂತಹ ದೌರ್ಜನ್ಯದ 840ಕ್ಕೂ ಅಧಿಕ ಪ್ರಕರಣಗಳು ನಡೆದಿರುವುದು ಎನ್‌ಸಿಆರ್‌ಬಿ ವರದಿಯ ಮೂಲಕ ತಿಳಿದಾಗ ನಮಗೆ ಆಘಾತವಾಯಿತು’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ‘‘1 ಜನವರಿ 2009ರಿ ಹಾಗೂ 29 ಅಕ್ಟೋಬರ್ 2018ರ ನಡುವೆ 254 ಧಾರ್ಮಿಕ ಗುರುತು ಆಧಾರಿತ ದ್ವೇಷದ ಹಲ್ಲೆಗಳು ನಡೆದಿವೆ. ಈ ಹಲ್ಲೆಗಳಲ್ಲಿ ಕನಿಷ್ಠ 91 ಮಂದಿ ಮೃತಪಟ್ಟಿದ್ದಾರೆ ಹಾಗೂ 579 ಮಂದಿ ಗಾಯಗೊಂಡಿದ್ದಾರೆ (ಫ್ಯಾಕ್ಟ್‌ಚೆಕ್ಕರ್. ಇನ್‌ಡಾಟಾಬೇಸ್-30 ಅಕ್ಟೋಬರ್ 2018). ಇಂತಹ ದ್ವೇಷದ ಹಲ್ಲೆ ಪ್ರಕರಣಗಳಲ್ಲಿ ಶೇ. 62 ಮುಸ್ಲಿಮರು (ಒಟ್ಟು ಜನಸಂಖ್ಯೆಯ ಶೇ. 14 ಇದ್ದಾರೆ), ಶೇ. 14 ಕ್ರಿಶ್ಚಿಯನರು (23 ಜುಲೈ 2019ರ ಜನಸಂಖ್ಯೆಯ ಶೇ. 2 ಇದ್ದಾರೆ.) ಸಂತ್ರಸ್ತರಾಗಿದ್ದಾರೆ ಎಂದು ಸಿಟಿಜನ್ಸ್ ರಿಲೀಜಿಯಸ್ ಹೇಟ್ ಕ್ರೈಮ್ ವಾಚ್ ಹೇಳಿದೆ. ಇದರಲ್ಲಿ ಶೇ. 90 ಘಟನೆಗಳು ಮೇ 2014ರ ಬಳಿಕ, ಅಂದರೆ ನಿಮ್ಮ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕ ಸಂಭವಿಸಿದೆ’’ ಎಂದು ಅವರು ತಿಳಿಸಿದ್ದಾರೆ.

‘‘ದುಷ್ಕರ್ಮಿಗಳ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ? ಇಂತಹ ಅಪರಾಧವನ್ನು ಜಾಮೀನು ರಹಿತ ಎಂದು ಘೋಷಿಸಬೇಕು. ಶೀಘ್ರ ಹಾಗೂ ಖಚಿತ ಮಾದರಿ ಶಿಕ್ಷೆ ನೀಡಬೇಕು. ಹತ್ಯೆ ಪ್ರಕರಣದಲ್ಲಿ ಪರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ನೀಡಲು ಸಾಧ್ಯವಾಗುವುದಾದರೆ, ಅದಕ್ಕಿಂತ ಹೆಚ್ಚು ಕ್ರೂರವಾದ ಥಳಿಸಿ ಹತ್ಯೆ ಪ್ರಕರಣದಲ್ಲಿ ಯಾಕೆ ನೀಡಬಾರದು ? ನಮ್ಮ ದೇಶದಲ್ಲಿ ಯಾವುದೇ ನಾಗರಿಕರು ಭೀತಿಯಿಂದ ಬದುಕಬಾರದು’’ ಎಂದು ಅವರು ಹೇಳಿದ್ದಾರೆ. “ಜೈಶ್ರೀರಾಮ್” ಎಂಬುದು ಈಗ ಯುದ್ಧದ ಕೂಗು ಆಗಿಬ್ಟಿಟ್ಟಿದೆ. ರಾಮ ಎಂಬುದು ಅಲ್ಪಸಂಖ್ಯಾತರಲ್ಲಿ ನಡುಕ ಹುಟ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

‘‘ಧರ್ಮದ ಹೆಸರಿನಲ್ಲಿ ಅತ್ಯಧಿಕ ಹಿಂಸಾಚಾರ ಸಂಭವಿಸುತ್ತಿರುವ ಬಗ್ಗೆ ನಮಗೆ ಆಘಾತವಾಗಿದೆ. ಇದು ಮಧ್ಯಕಾಲೀನ ಯುಗ ಅಲ್ಲ. ಭಾರತದ ಹಲವು ಬಹುಸಂಖ್ಯಾತ ಸಮುದಾಯಕ್ಕೆ ರಾಮನ ಹೆಸರು ಪವಿತ್ರ. ದೇಶದ ಪ್ರಧಾನಿಯಾಗಿರುವ ನೀವು ರಾಮನ ಹೆಸರನ್ನು ಅಪವಿತ್ರಗೊಳಿಸುವುದಕ್ಕೆ ಅಂತ್ಯ ಹಾಡಬೇಕು’’ ಎಂದು ಅವರು ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)