varthabharthi


ಅನುಗಾಲ

ರಾಜಕಾರಣದ ಪ್ರಣಾಳ ಶಿಶುಗಳು

ವಾರ್ತಾ ಭಾರತಿ : 25 Jul, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪರಿಸ್ಥಿತಿ ತಿಳಿಯಾಗುವ ಲಕ್ಷಣವಿಲ್ಲ. ಮುಂದಿನ ದಿನಗಳು ಇಂತಹ ಬೆಳವಣಿಗೆಗಳಿಗೆ ಭವಿಷ್ಯವನ್ನೂ ಭಾಷ್ಯವನ್ನೂ ಬರೆಯಬಲ್ಲವು. ಪ್ರಣಾಳಶಿಶುಗಳಾದ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಭ್ರಷ್ಟ ಮತ್ತು ಬಹಿಷ್ಠ ರಾಜಕಾರಣಿಗಳನ್ನು ಬಹಿಷ್ಕರಿಸಲು ಎಷ್ಟು ಪ್ರಜೆಗಳು ಸಿದ್ಧರಾಗಿದ್ದಾರೆ? ಪ್ರತಿನಿಧಿಗಳನ್ನು ಆಯ್ಕೆಮಾಡಿ ಕಳಿಸುವ ಜನರು ಎಲ್ಲಿಯ ವರೆಗೆ ವಿವೇಕಿಗಳಾಗುವುದಿಲ್ಲವೋ ಮತ್ತು ತಮ್ಮ ಕಿಂಚಿತ್ ಲಾಭಕ್ಕಾಗಿ ತಮ್ಮ ಅಸ್ಮಿತೆಯನ್ನು ಐದು ವರ್ಷಗಳ ಕಾಲ ಮಾರಲು ಸಿದ್ಧರಾಗಿದ್ದಾರೋ ಅಲ್ಲಿಯವರೆಗೆ ಈ ಪರಿಸ್ಥಿತಿಯು ಅನಿವಾರ್ಯ.


ಕಳೆದ ಕೆಲವು ದಿನಗಳ ನಾಟಕೀಯ ಬೆಳವಣಿಗೆಯಲ್ಲಿ ನಿರೀಕ್ಷಿಸಿದಂತೆ ಕೊನೆಗೂ ಕರ್ನಾಟಕದಲ್ಲಿ ಸುಮಾರು ಒಂದೂವರೆ ವರ್ಷಕಾಲ ಆಡಳಿತದಲ್ಲಿದ್ದ ಮೈತ್ರಿ/ದೋಸ್ತಿ ಸರಕಾರ ಬಿದ್ದಿದೆ. ಇನ್ನು ಒಂದೆರಡು ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಸರಕಾರವು ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಅದು ಪದೇಪದೇ ಹೇಳುತ್ತಿರುವ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲಿದೆ. ಯಡಿಯೂರಪ್ಪನವರು (ಎಷ್ಟನೇ ಬಾರಿಗೆಂದು ನೆನಪಾಗುವುದಿಲ್ಲ) ಪ್ರಾಯಃ ಕರ್ನಾಟಕದ ರೈತರ ಹೆಸರಿನಲ್ಲಿ ಮತ್ತೆ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿಯಾಗಲಿದ್ದಾರೆ. ಕೇಂದ್ರ ಸರಕಾರದ ಭಾರೀ ಸಚಿವಪಾಳೆಯವು ಹಾಜರಾಗಬಹುದು.

ಅಲ್ಲಿಗೆ ಪ್ರಜಾಪ್ರಭುತ್ವ ಮುಂಬೈಯಲ್ಲಿ ಭೂಗತರಾಗಿ ಕುಳಿತ ಶಾಸಕರ (ಇವರಲ್ಲಿ ಆಡಳಿತ ನಡೆಸುತ್ತಿದ್ದ ಒಂದು ಪಕ್ಷದ ಅಧ್ಯಕ್ಷರಾಗಿದ್ದವರು, ಶಿಕ್ಷಣ ಸಚಿವರಾಗಿದ್ದವರು, ಪಕ್ಷಾಂತರವನ್ನು ಸಂವೇದನಾಶೀಲವಾಗಿ ಟೀಕಿಸಿದವರು ಇದ್ದಾರೆಂಬುದು ಈ ಗುಂಪಿನ ಹಿರಿಮೆ!) ವರಾಹವತಾರವು ಮೂಲಕ ಕರ್ನಾಟಕಕ್ಕೆ ಮರಳಲಿದೆ. ಹಿಂದೆಲ್ಲ ರಾಜಕಾರಣದ ಬೆಳವಣಿಗೆಗಳನ್ನು ಟೀಕಿಸುವಾಗ ಪಕ್ಷನಿಷ್ಠೆ ಮುಖ್ಯ ಸಿದ್ಧಾಂತವಾಗುತ್ತಿತ್ತು; ಅಭಿಪ್ರಾಯ, ಅಭಿಮತಗಳು ರಾಜಕೀಯ ಧ್ರುವೀಕರಣಗೊಳ್ಳುತ್ತಿದ್ದವು. ಆದರೆ ಈ ಬಾರಿ ಕೆಲವು ಬೌದ್ಧಿಕ ಮತ್ತು ಮಾನಸಿಕ ಕುರುಡರನ್ನು, ಮೂರ್ಖರನ್ನು ಹೊರತುಪಡಿಸಿದರೆ ಬಹುತೇಕ ಇತರ ಎಲ್ಲರೂ ಈ ಸ್ವರಾಜ್ಯಭ್ರಷ್ಟ ಶಾಸಕರನ್ನು ಟೀಕಿಸಿದ್ದಾರೆ.

ಮನುಷ್ಯ ಅಧಿಕಾರದಾಹದಿಂದ, ಬಯಕೆಯ ಅಮಲಿನಿಂದ ಎಷ್ಟು ಕೇಡಿಗನಾಗಬಹುದೆಂಬುದನ್ನು ಅಳತೆಮಾಡಲು ಈ ಮಂದಿಯನ್ನು ಮಾಪಕವಾಗಿ ಬಳಸಬಹುದೆಂಬ ಅಭಿಪ್ರಾಯ ತಾಳಿದ್ದಾರೆ. ವಯಸ್ಸು, ವಿದ್ಯೆ, ಅನುಭವ, ಮಾತ್ರವಲ್ಲ ಮನುಷ್ಯತ್ವವೂ ಈ ನೀಚತನದೆದುರು ಸೋಲುತ್ತದೆಯೆಂಬುದನ್ನು ಈ ಹತ್ತಾರು ಮಹಾನುಭಾವರು ಸಾಬೀತು ಮಾಡಿದ್ದಾರೆ. ಅವರನ್ನು ಶಾಲಾ-ಕಾಲೇಜುಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಗೌರವದಿಂದ ಕಾಣುತ್ತಿದ್ದ ಜನರು ಹಳೆಯ ಚಪ್ಪಲಿಗಳಿಂದ ತಮಗೆ ತಾವೇ ಹೊಡೆದುಕೊಂಡರೂ ಅವರನ್ನು ಆಯ್ಕೆ ಮಾಡಿದ ಪಾಪವು ಪರಿಹಾರವಾಗದು. ಆದರೆ ಒಂದು ವಿಚಾರ ಮಾತ್ರ ಸತ್ಯ: ಅವರು ಮತ್ತು ಅವರನ್ನು ನಂಬಿ ಮೈತ್ರಿ ಸರಕಾರವನ್ನು ಬೀಳಿಸಿದ ಭಾರತೀಯ ಜನತಾ ಪಕ್ಷವು ಅಮೃತಮತಿಯ ಮನಸ್ಸು ಮಾಡಿದರೆ ಈ ಶಾಸನ ಸಭೆಯ ಉಳಿದ ಅವಧಿಯನ್ನು ಹೇಗೂ ದಾಟಬಹುದು. ಯಾರು ಅಥವಾ ಯಾವ ಪಕ್ಷವು ಅಧಿಕಾರಕ್ಕೆ ಬರುತ್ತದೆ ಅಥವಾ ಬಂದಿದೆಯೆಂಬುದು ಮುಖ್ಯವಲ್ಲ. ಪ್ರೀತಿ ಮತ್ತು ಯುದ್ಧಗಳಲ್ಲಿ ಎಲ್ಲವೂ ಸರಿಯೆಂಬುದನ್ನು ಕಾಲವೇ ಹೇಳಿದೆ. ಅದು ಹೇಳದೇ ಬಿಟ್ಟದ್ದೆಂದರೆ ಇವೆರಡರ ಜೊತೆಗೆ ರಾಜಕಾರಣ ಮತ್ತು ಅಧಿಕಾರ. ಪುರಾಣ ಯುಗದಿಂದಲೂ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬುದನ್ನು ಜನರು ತೋರಿದ್ದಾರೆ.

ರಾಜಕಾರಣಿಗಳು ಸದಾ ಅಧಿಕಾರ ಬೇಡವೆನ್ನಲು ತಾವೇನೂ ಸನ್ಯಾಸಿಗಳಲ್ಲ ಎಂದು ಘೋಷಿಸುತ್ತಲೇ ಇರುತ್ತಾರೆ. ಸನ್ಯಾಸಿಗಳಾದರೆ ಅಧಿಕಾರದ ಸುಖವನ್ನು ಆಶಿಸಲು, ಪಡೆಯಲು ತೊಡಕಿಲ್ಲ ಎಂಬುದನ್ನು ಯೋಗಿಗಳು, ಸಂತರು ಈಗಾಗಲೇ ಸಾಬೀತುಪಡಿಸಿದ್ದಾರೆ. ಸನ್ಯಾಸಿಗಳು ಸಂಸಾರಿಗಳಿಗಿಂತಲೂ ಲೌಕಿಕದ ಕೊಚ್ಚೆಯಲ್ಲಿ ಮುಳುಗಿರುತ್ತಾರೆಂಬುದು (ಅಪವಾದಗಳನ್ನು ಹೊರತುಪಡಿಸಿ) ನಿರ್ವಿವಾದ. ಇಷ್ಟೇ ಆಗಿದ್ದರೆ ಸಾಕಾಗಿತ್ತು. ಈಚೆಗೆ ಕೇಂದ್ರ ಸಚಿವರೊಬ್ಬರು ಡಾರ್ವಿನ್ನನ ವಿಕಾಸವಾದವನ್ನು ಖಂಡಿಸಿ ಭಾರತೀಯರು ಮಂಗಗಳಿಂದ ವಿಕಾಸ ಹೊಂದಿದವರಲ್ಲ, ಋಷಿಗಳ ಸಂತಾನವೆಂಬ ಹೊಸ ಪ್ರಮೇಯವನ್ನು ಮಂಡಿಸಿದರು. ಇಂದಿನ ಅನೇಕ ಸನ್ಯಾಸಿಗಳನ್ನು ಕಂಡರೆ ಈ ಮಾತು ನಿಜವಿರಬಹುದೆಂದೂ ಸನ್ಯಾಸಿಗಳ ಸಂಸಾರ ಭಾರೀ ದೊಡ್ಡದಿರಬಹುದೆಂಬ ಗುಮಾನಿ ಬರುತ್ತದೆ. ಸಚಿವಶ್ರೇಷ್ಠರ ಮಾತು ಈ ಕಾರಣಕ್ಕಾದರೂ ಪುರಸ್ಕಾರಕ್ಕೆ ಅರ್ಹವೆಂದು ಅನ್ನಿಸುತ್ತದೆ.

ವಿಶ್ವಾಮಿತ್ರ-ಮೇನಕೆಯರ ಸಂಸಾರದ ಕಥೆಯನ್ನು ಓದಿದರೆ ಎಂಥವರಿಗೂ ಸನ್ಯಾಸಿಗಳಾಗಬೇಕೆಂದು ಅನ್ನಿಸಬಹುದು. ಏಕೆಂದರೆ ಅವರಿಗೆ ಕರ್ತವ್ಯಗಳಿಲ್ಲ; ಹಕ್ಕಷ್ಟೇ ಇರುತ್ತವೆ. ಆದ್ದರಿಂದ ತಾವು ಸನ್ಯಾಸಿಗಳಲ್ಲ ಎಂದು ರಾಜಕಾರಣಿಗಳು ಹೇಳುವುದನ್ನು ನಿಲ್ಲಿಸಿ, ತಾವು ಸನ್ಯಾಸಿಗಳೇ ಎಂಬ ಹೊಸ ವರಸೆಯನ್ನು ಆರಂಭಿಸಬಹುದು; ಮತ್ತು ಸತ್ಯ ಹೇಳಿದ ಫಲಕ್ಕಾದರೂ ಅವರು ಪಾತ್ರರಾಗಬಹುದು. ಭಯವೂ ಲಜ್ಜೆಯೂ ಇಲ್ಲದೆ ಮಾಡುವ ಕಾಯಕವೆಂದರೆ ಕಾಮವೆಂದು ಈ ದೇಶದ ಶಾಸ್ತ್ರ ಹೇಳುತ್ತದೆ. ಹಾಗೆ ಹೇಳಿದವನಿಗೆ ಅಧಿಕಾರ ರಾಜಕಾರಣದ ಪರಿಚಯವಿದ್ದಿರಲಿಕ್ಕಿಲ್ಲ. ಇಂದು ಅಥವಾ ಈ ಕೆಲವು ದಿನಗಳಲ್ಲಿ ತಮ್ಮ ಬಗ್ಗೆ ವಿಶ್ವಾಸವಿಲ್ಲದೆ ಕರ್ನಾಟಕವನ್ನೇ ಬಿಟ್ಟು ಮುಂಬೈಯ ಯಾವುದೋ ಕೊಂಪೆಯಲ್ಲಿ ಸ್ವಯಂ ಬಂಧನಕ್ಕೊಳಗಾಗಿ ಹಲವು ದಿನಗಳನ್ನು ಚಿಂತಾಜನಕವಾಗಿ ಕಳೆದ ಈ ಶಾಸಕರ ಗುಂಪು ತಮ್ಮ ಮಾತ್ರವಲ್ಲ, ತಮ್ಮ ಸಂಸಾರದ, ಇಷ್ಟಮಿತ್ರರ, ಅಭಿಮಾನಿಗಳ ಹೀಗೆ ಭಾರೀ ಸಮುದಾಯದ ಎದುರು ಮತ್ತೆ ಹೋಗಿ ಹೇಗೆ ಬದುಕುತ್ತಾರೋ ಎಂಬುದು ನಿಜಕ್ಕೂ ಕುತೂಹಲದ ವಿಚಾರ. ವೇಶ್ಯಾವಾಟಿಕೆಗೆ ಮಾರಲ್ಪಟ್ಟ ಅಬಲೆಯರಂತಿದ್ದ ಇವರನ್ನು ರಕ್ಷಿಸಲು ಸರಕಾರ ಮುಂದಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಅವರನ್ನು ಹಾಗೇ ಉಳಿಸಲು ಭದ್ರತೆ ನೀಡಲಾಯಿತು. ಇದರಿಂದಾಗಿ ವೇಶ್ಯಾವಾಟಿಕೆೆಯಲ್ಲಿ ಸಿಕ್ಕಿಬಿದ್ದ ಪ್ರತಿಷ್ಠಿತರಂತಿರುವ ಇವರು ಯಾವ ಸಬೂಬನ್ನು ಹೇಳಿದರೂ ಜನರೇ ಇವರನ್ನು ನೋಡಲು ನಾಚುವ ಅಭೂತಪೂರ್ವ ಪರಿಸ್ಥಿತಿಯನ್ನು ನಿರ್ಮಿಸಿದ ದಾಖಲೆಗೆ ಈ ಮಂದಿ ಪಾತ್ರರಾಗಬಹುದು.

ಗಂಡ-ಹೆಂಡಿರ ಜಗಳವನ್ನು ಶಮನ ಮಾಡಲು ಮೂರನೆಯ ವ್ಯಕ್ತಿ ಅಥವಾ ಒಟ್ಟಿನಲ್ಲಿ ಸಮಾಜವು ಪ್ರಯತ್ನಿಸಬೇಕೇ ಹೊರತು ಅವರು ಒಡೆದರೆ ಒಂದು ಭಾಗವನ್ನು ತಾನು ಅನುಭವಿಸಬಹುದೆಂಬ ತೀಟೆಯಿಂದ ವರ್ತಿಸಬಾರದು. ಈ ಲೌಕಿಕ ನೀತಿಯನ್ನು ಎಷ್ಟು ಹೇಳಿದರೂ ಹಳಿದರೂ ಫಲವಿಲ್ಲ. ಏಕೆಂದರೆ ಇವರನ್ನು ಸ್ವೀಕರಿಸಲು ಸಿದ್ಧರಾಗಿರುವ ಮತ್ತು ಇವರಿಂದಾಗಿಯೇ ಅಧಿಕಾರಕ್ಕೇರಲು ಅರ್ಹವಾದ ರಾಜಕೀಯ ಪಕ್ಷವಿದೆ. ಹಸಿದ ನಾಯಿ ಹಳಸಲು ಅನ್ನವನ್ನು ಇಷ್ಟಪಡುವುದು ಅನಿವಾರ್ಯ. ಆದ್ದರಿಂದ ಇಂತಹ ಸುವರ್ಣಸ್ಥಿತಿ ಯಾವುದೇ ತುರ್ತುಪರಿಸ್ಥಿತಿಯನ್ನು ಎರಡನೇ ಸ್ಥಾನಕ್ಕಿಳಿಸಬಹುದು. ಇದರಲ್ಲೂ ಭಾರತೀಯತೆ ಮತ್ತು ಜನತೆ ಇದ್ದಾರೆಂದರೆ ಅದು ದೇಶಕ್ಕೆ ಹೆಮ್ಮೆಯ ದೃಷ್ಟಿಬೊಟ್ಟು! ರಾಜಕೀಯ ವೇಶ್ಯಾವೃತ್ತಿಯನ್ನಾದರೂ ದೇಶವು ಒಪ್ಪಿಕೊಂಡು ಅದಕ್ಕೊಂದು ಸಮಗ್ರ ರಾಷ್ಟ್ರೀಯ (ಅ)ನೀತಿಯನ್ನು ಘೋಷಿಸಿದರೆ ಉಳಿದವರಾದರೂ ತಲೆಯೆತ್ತಿ ನಡೆಯಬಹುದು!
*

ದೇಶಕ್ಕೊಂದು ಜನಪ್ರಾತಿನಿಧ್ಯ ಕಾನೂನಿದೆ. ಅದು ಚುನಾವಣೆಗಳ ಮತ್ತು ಅಧಿಕಾರ ರಾಜಕಾರಣದ ಆರೋಗ್ಯವು ಕೆಡದಂತೆ ನೋಡಿಕೊಳ್ಳುತ್ತದೆಯೆಂಬುದು ಜನರ ನಂಬಿಕೆ. ಆದರೆ ಈ ಕಾನೂನು ಹೇಗೆ ಬೇಕಾದರೂ ತಿರುಚಬಲ್ಲ ಮಣ್ಣಮುದ್ದೆಯೆಂಬುದು ಕಳೆದ ಸುಮಾರು ಏಳು ದಶಕಗಳ ಸ್ವತಂತ್ರ ಭಾರತದಲ್ಲಿ ವಿದಿತವಾಗಿದೆ. ಚುನಾವಣಾ ಆಯೋಗವು ಚುನಾವಣೆಗಳ ಸಮಯದಲ್ಲಷ್ಟೇ ‘ಏಕ್ ದಿನ್ ಕಾ ಸುಲ್ತಾನ್’ರಂತೆ ಅಥವಾ ನಾಟಕದ ಅರಸನ ಪಾತ್ರದಂತೆ ಒಡ್ಡೋಲಗಗೈಯುತ್ತವೆಯೇ ಹೊರತು ಇನ್ನುಳಿದ ಸಂದರ್ಭದಲ್ಲಿ ನೇಪಥ್ಯದಲ್ಲಿ ಸರಕಾರದ/ಆಡಳಿತದ ಕಸಗುಡಿಸುವ ಕೈಂಕರ್ಯವನ್ನು ಮಾಡುತ್ತಿರುತ್ತವೆ. ‘ಪಕ್ಷಾಂತರ ನಿಷೇಧ ಕಾನೂನು’ ಹೆಸರಿಗಷ್ಟೇ ಉಳಿದು ನಿಷ್ಪ್ರಯೋಜಕವಾಗಿದೆ. ಗುಂಪು ಪಕ್ಷಾಂತರವಂತೂ ಈಗ ರೆಸಾರ್ಟ್ ರಾಜಕೀಯದ ಚರಂಡಿಯಲ್ಲಿದೆ. ಉತ್ಪ್ರೇಕ್ಷೆಯಲ್ಲ, ನಿಜಕ್ಕೂ ಅತೀ ಹೆಚ್ಚು ಫಲಾನುಭವಿಗಳೆಂದರೆ ರೆಸಾರ್ಟ್ ಮಾಲಕರು. ನ್ಯಾಯಾಲಯಗಳು ಕಾನೂನನ್ನು ತಿದ್ದಬಲ್ಲ ಅಧಿಕಾರವನ್ನು ಹೊಂದಿಲ್ಲ ಬದಲಾಗಿ ಅರ್ಥವಿಸಬಲ್ಲ ಅಧಿಕಾರವನ್ನಷ್ಟೇ ಹೊಂದಿವೆಯಾದ್ದರಿಂದ ಬಹಳಷ್ಟು ಚುನಾವಣಾ ಅಕ್ರಮಗಳು, ಅನಾಚಾರಗಳು ಕಾನೂನಿನ ಬಲೆಯಿಂದ ಪಾರಾಗುತ್ತಿವೆ.

ಅನುಕೂಲ ರಾಜಕಾರಣದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆಯೂ ಇದೆ. ಸಿದ್ಧಾಂತ, ದೇಶಹಿತ, ಸಮಾಜಹಿತವೆಂಬುದು ಪ್ರಣಾಳಿಕೆಗಳೊಳಗೆ ನರಳುವ ಸರಕುಗಳಾಗಿವೆ. ಈ ದೇಶದ ಇತಿಹಾಸವನ್ನು ಗಮನಿಸಿದರೆ ಇದರ ಕೆಡುಕುಗಳಿಗಾಗಿ ಯಾವ ವಿದೇಶೀ ಶಕ್ತಿಯನ್ನೂ ದೂರುವಂತಿಲ್ಲ. ನಮಗೆ ನಾವೇ ಶತ್ರುಗಳು. ಒಂದಿಷ್ಟು ಅನುಕೂಲವಾಗುತ್ತದೆಯಾದರೆ ಈ ದೇಶದ/ಸಮಾಜದ ಬಹಳಷ್ಟು ಜನರು ಸಿದ್ಧಾಂತ ಶೂನ್ಯರೂ, ಅಭಿಮಾನ ಶೂನ್ಯರೂ ಆಗುತ್ತಾರೆ. ಅದಕ್ಕೆ ಋಷಿಮುನಿಗಳ ಅನುಕೂಲ ಸಿದ್ಧಾಂತಗಳು, ಸುಭಾಷಿತಗಳು ನೆರವಾಗುತ್ತವೆ.

ಗಂಭೀರವಾದ ಚರ್ಚೆ ಬೇಡ. ಕಾನೂನೆಂದರೆ ಸಮಾಜದ ಸಮಷ್ಟಿ ಪ್ರಜ್ಞೆ. ಒಬ್ಬರ, ಇಬ್ಬರ ಹಿತದ ಪ್ರಶ್ನೆಯಲ್ಲ. ಒಂದು ಪಕ್ಷದ ಹೆಸರಿನಲ್ಲಿ ಆಯ್ಕೆಯಾದರೆ ಕನಿಷ್ಠ ಆ ಅವಧಿಗಾದರೂ ಆ ಜನಪ್ರತಿನಿಧಿ ಅದೇ ಪಕ್ಷದಲ್ಲಿ ಉಳಿಯಬೇಕೆಂಬ ಕನಿಷ್ಠ ಸೌಜನ್ಯದ ನಿಯಮಗಳನ್ನೂ ನಮ್ಮ ಕಾನೂನುಗಳು ರೂಪಿಸಿಲ್ಲ. ಅಥವಾ ಸಾವು, ಹುಚ್ಚು, ದಿವಾಳಿತನ ಮುಂತಾದವುಗಳನ್ನು ಬಿಟ್ಟರೆ ಉಳಿದ ಯಾವುದೇ ಸಂದರ್ಭಗಳಲ್ಲಿ ಪಕ್ಷವನ್ನು ತೊರೆದವನು ತನ್ನ ಸ್ಥಾನವನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಮುಂದಿನ ಒಂದೆರಡು ಅವಧಿಗಳಿಗಾದರೂ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳುವಂತೆ ಕಾನೂನಿದ್ದರೆ ಇಂತಹ ರಾಜೀನಾಮೆ ಪ್ರಹಸನಗಳು, ವಿಶ್ವಾಸ ದ್ರೋಹಗಳು ಕಡಿಮೆಯಾಗಬಹುದು.

ಒಂದೆರಡು ಪೌರಾಣಿಕ ನೆಲೆಗಳು ನೆನಪಾಗುತ್ತವೆ: ರಾಮಾಯಣದಲ್ಲಿ ಸುಗ್ರೀವನು ವಾಲಿಯ ಕುರಿತ ತನ್ನ ವೈರವನ್ನು ನೆಪವಾಗಿಟ್ಟುಕೊಂಡು ರಾಮನ ಬೆಂಬಲವನ್ನು ಪಡೆಯುತ್ತಾನೆ; ರಾಮನು ಲೋಕನ್ಯಾಯದ ಹೆಸರಿನಲ್ಲಿ ವಿಚಾರಣೆಯಿಲ್ಲದೆ ವಾಲಿಯನ್ನು ಕೊಲ್ಲುತ್ತಾನೆ. (ವೈರವಿಲ್ಲದ ವಧೆ ಎಂದು ಹೇಳುವುದು ಇದನ್ನೇ!) ವಿಭೀಷಣನು ರಾವಣನ ಪಕ್ಷವನ್ನು ತೊರೆದು ರಾಮನ ಪಕ್ಷವನ್ನು ಸೇರುತ್ತಾನೆ. ಯುದ್ಧ ಸಮೀಪಿಸುವ ವರೆಗೂ ಸುಮ್ಮನಿದ್ದು ಅಂತಿಮ ಕ್ಷಣದಲ್ಲಿ ಹೀಗೆ ಪಕ್ಷಾಂತರವಾಗುವುದು ನ್ಯಾಯವೇ ಎಂದು ರಾಮನೂ ಪ್ರಶ್ನಿಸುವುದಿಲ್ಲ. ಮಹಾಭಾರತದಲ್ಲಿ ಕೌರವನ ಪಾಳೆಯದವರು ಒಂದೊಂದು ಕಾರಣವನ್ನು ಕೊಟ್ಟು ತಮ್ಮ ನಾಯಕನನ್ನು ಸಾಮರ್ಥ್ಯಹೀನನಾಗಿಸುತ್ತಾರೆ. ಇದನ್ನು ಕುಮಾರವ್ಯಾಸ ಭಾರತದ ಕರ್ಣಪರ್ವದಲ್ಲಿ ಶಲ್ಯನ ಮೂಲಕ ಚಿತ್ರಿಸಿದ್ದಾನೆ: ಕರ್ಣನನ್ನು ಮತ್ತು ಆ ಮೂಲಕ ತನ್ನನ್ನು ಗೆಲಿಸಿಕೊಳ್ಳಲು ಕೌರವನು ಅಭಿಮಾನವನ್ನು ತೊರೆದು ಶಲ್ಯನನ್ನು ಬೇಡಿಕಾಡಿ ಕರ್ಣಸಾರಥಿಯಾಗಿಸುತ್ತಾನೆ. ಶಲ್ಯನೂ ತನ್ನ ಅಹಮಿಕೆಯನ್ನು ಮತ್ತು ಪಾಂಡವರೊಂದಿಗಿನ ತನ್ನ ಸಮೀಪಸಂಬಂಧವನ್ನು ತೊರೆದು ಕರ್ಣಸಾರಥ್ಯವನ್ನು ವಹಿಸುತ್ತಾನೆ. ಆದರೆ ಸರ್ಪಾಸ್ತ್ರವನ್ನು ಮತ್ತೊಮ್ಮೆ ತೊಡಲು ಕರ್ಣನು ಒಪ್ಪದೆ ತನ್ನ ವ್ಯಕ್ತಿ ಸಿದ್ಧಾಂತಕ್ಕಾಗಿ ಪಕ್ಷಸಿದ್ಧಾಂತವನ್ನು ಬಲಿಗೊಡುತ್ತಾನೆ. ಆಗ ‘‘ನಂಬಿ ಹಿಡಿದರೆ ನದಿಯಮಗ ಹಗೆಯಂಬಿಗಿತ್ತನು ಕಾಯವನು ಮಗನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ್ಯ ಅಂಬು ಬೆಸನನು ಬೇಡಿದಡೆ ನೀನೆಂಬನೀ ವಿಧಿಯಾದೆ ಮೂವರ ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ॥

ಯಾವುದೇ ಕಾಲ-ಸಂದರ್ಭದಲ್ಲೂ ಪಕ್ಷನಿಷ್ಠೆಯನ್ನು ವ್ಯಕ್ತಪಡಿಸುವುದು ಶಿಸ್ತಿನ ಸಿಪಾಯಿಗಳ ಕರ್ತವ್ಯ; ಹಿರಿಮೆ. ಭಾರತೀಯ ಸೇನೆಯ ಸೈನಿಕನೊಬ್ಬ ಪಾಕಿಸ್ತಾನದ ಸೈನಿಕನನ್ನು ಕೊಲ್ಲುವುದು ಅವನ ಮೇಲಿನ ವೈರದಿಂದಲ್ಲ. ತಾನು ಭಾರತೀಯ ಸೇನೆಗೆ ಸೇರಿದವನು; ತನ್ನ ಪಡೆಯ ಹಾದಿ ತನ್ನದು ಎಂಬ ಕಾರಣಕ್ಕಾಗಿ. ನಮ್ಮ ರಾಜಕಾರಣಿಗಳಂತೆ ಸೈನಿಕರು ವರ್ತಿಸಿದರೆ ದೇಶದ ಗತಿಯೇನಾದೀತು? ಪರಿಸ್ಥಿತಿ ತಿಳಿಯಾಗುವ ಲಕ್ಷಣವಿಲ್ಲ. ಮುಂದಿನ ದಿನಗಳು ಇಂತಹ ಬೆಳವಣಿಗೆಗಳಿಗೆ ಭವಿಷ್ಯವನ್ನೂ ಭಾಷ್ಯವನ್ನೂ ಬರೆಯಬಲ್ಲವು. ಪ್ರಣಾಳಶಿಶುಗಳಾದ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಭ್ರಷ್ಟ ಮತ್ತು ಬಹಿಷ್ಠ ರಾಜಕಾರಣಿಗಳನ್ನು ಬಹಿಷ್ಕರಿಸಲು ಎಷ್ಟು ಪ್ರಜೆಗಳು ಸಿದ್ಧರಾಗಿದ್ದಾರೆ? ಪ್ರತಿನಿಧಿಗಳನ್ನು ಆಯ್ಕೆಮಾಡಿ ಕಳಿಸುವ ಜನರು ಎಲ್ಲಿಯ ವರೆಗೆ ವಿವೇಕಿಗಳಾಗುವುದಿಲ್ಲವೋ ಮತ್ತು ತಮ್ಮ ಕಿಂಚಿತ್ ಲಾಭಕ್ಕಾಗಿ ತಮ್ಮ ಅಸ್ಮಿತೆಯನ್ನು ಐದು ವರ್ಷಗಳ ಕಾಲ ಮಾರಲು ಸಿದ್ಧರಾಗಿದ್ದಾರೋ ಅಲ್ಲಿಯವರೆಗೆ ಈ ಪರಿಸ್ಥಿತಿಯು ಅನಿವಾರ್ಯ. ನಮ್ಮ ಏಳ್ಗೆಗೆ ನಾವು ಶಿಲ್ಪಿಗಳು ಹೇಗೋ ಹಾಗೆಯೇ ನಮ್ಮ ಅವನತಿಗೂ ನಾವೇ ಶಿಲ್ಪಿಗಳು. ಹೀಗಿರುವಾಗ ಮುಂಬೈಯಲ್ಲಿ ಭೂಗತರಾದ ಶಾಸಕರೇ ನಮ್ಮ ನೈಜ ಜನಪ್ರತಿನಿಧಿಗಳು. ಅವರೇ ನಮ್ಮ ನಾಯಕರತ್ನಗಳು. ಅಂತಹವರಿರುವಾಗ ಹಾಲು ಮಜ್ಜಿಗೆಯಾಗುವುದು ಕಷ್ಟವಲ್ಲ.
ಯೇಸುವಿಗೆ ರೂಪದರ್ಶಿಯಾದವನೇ ಜುದಾಸನಿಗೂ ರೂಪದರ್ಶಿಯಾಗುವುದು ಪ್ರಜಾಪ್ರಭುತ್ವಕ್ಕೆ ಅನಿವಾರ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)