varthabharthi


ಸಂಪಾದಕೀಯ

ಹೈನೋದ್ಯಮದ ಆಧುನಿಕ ಪೂತನಿಗಳು

ವಾರ್ತಾ ಭಾರತಿ : 26 Jul, 2019

ಕ್ರಿಮಿನಲ್‌ಗಳೆಲ್ಲ ಗೋರಕ್ಷಕರ ವೇಷದಲ್ಲಿ ಬೀದಿಗಿಳಿದರೆ, ಅಮೃತದಂತಹ ಹಾಲು ವಿಷವಾಗುವುದು ಸಹಜವೇ ಆಗಿದೆ. ನಕಲಿ ಗೋರಕ್ಷಕರು ಈ ದೇಶದ ಜನರಿಗೆ ಎರಡು ಬಗೆಯ ವಿಷಕಾರಿ ಹಾಲುಗಳನ್ನು ಹಂಚುತ್ತಿದ್ದಾರೆ. ಒಂದು, ಗೋವನ್ನು ದೇವತೆ ಎಂದು ಬಿಂಬಿಸಿ ಜನರಲ್ಲಿ ಪರಸ್ಪರ ದ್ವೇಷವನ್ನು ಹುಟ್ಟುಹಾಕುವುದು. ಸಮಾಜದಲ್ಲಿ ಭಯವನ್ನು ಬಿತ್ತಿ ಕ್ರಿಮಿನಲ್ ಚಟುವಟಿಕೆಗಳನ್ನು ಎಸಗುವುದು. ಇನ್ನೊಂದೆಡೆ, ಇವರ ಉಪಟಳದಿಂದಾಗಿ ಹೈನೋದ್ಯಮ ಕುಸಿತಕೊಂಡು ನಕಲಿ ಹಾಲು ಉತ್ಪಾದನಾ ಕಾರ್ಖಾನೆಗಳು ತೆರೆಯುತ್ತಿರುವುದು. ಈ ಕಾರ್ಖಾನೆಗಳಲ್ಲಿ ವಿಷಗಳನ್ನು ಉತ್ಪಾದನೆ ಮಾಡಿ ಹಾಲೆಂದು ಜನರಿಗೆ ಹಂಚಲಾಗುತ್ತದೆ. ಸಂಸ್ಕೃತಿಯ ಹೆಸರಲ್ಲಿ ದ್ವೇಷವನ್ನು ಹಂಚಿದಂತೆ. ಕಳೆದ ಹಲವು ದಶಕಗಳಿಂದ ಬಿಜೆಪಿ ನೇತೃತ್ವದ ಸರಕಾರದ ವಶದಲ್ಲಿದ್ದ ಮಧ್ಯಪ್ರದೇಶದಲ್ಲಿ 3 ಕೃತಕ ಹಾಲು ಉತ್ಪಾದನಾ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕೃತಕ ಹಾಲಿನ ತಯಾರಿಕೆಯಲ್ಲಿ ಭಾಗಿಯಾದ ಸುಮಾರು 57 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊರೇನಾ ಜಿಲ್ಲೆಯ ಅಂಬಾ, ಗ್ವಾಲಿಯರ್-ಛಂಬಲ್ ವಲಯದ ಭಿಂದ್ ಜಿಲ್ಲೆಯ ಲಹರ್‌ನಲ್ಲಿದ್ದ ಮೂರು ಕೃತಕ ಹಾಲು ಉತ್ಪಾದನಾ ಕಾರ್ಖಾನೆಗಳನ್ನು ಧ್ವಂಸಗೊಳಿಸಲಾಗಿದೆ. ಇಲ್ಲಿ ತಯಾರಾಗುವ ಹಾಲನ್ನು ಮಧ್ಯಪ್ರದೇಶ ಮಾತ್ರವಲ್ಲ, ಉತ್ತರಪ್ರದೇಶ, ರಾಜಸ್ಥಾನ, ದಿಲ್ಲಿ, ಹರ್ಯಾಣ ಹಾಗೂ ಮಹಾರಾಷ್ಟ್ರದಲ್ಲಿರುವ ಬ್ರಾಂಡೆಡ್ ಹಾಲಿನ ಘಟಕಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ದುರುಳರು ಈ ಹಾಲನ್ನು ಎಣ್ಣೆ, ದ್ರವರೂಪದ ಡಿಟೆರ್ಜಂಟ್, ಬಿಳಿ ಪೈಂಟ್, ಗ್ಲುಕೋಸ್ ಪೌಡರ್‌ಗಳನ್ನು ಕಲಬೆರಕೆ ಮಾಡಿ ಉತ್ಪಾದಿಸುತ್ತಿದ್ದರು. ಪ್ರತಿ ಲೀಟರ್ ಕೃತಕ ಹಾಲಿನ ಉತ್ಪಾದನೆಗೆ ಐದು ರೂಪಾಯಿ ವೆಚ್ಚವಾದರೆ, ಪ್ರಮುಖ ಮಾರುಕಟ್ಟೆಗಳಿಗೆ 45-50 ರೂಪಾಯಿ ಬೆಲೆಗೆ ಇದನ್ನು ಪೂರೈಸುತ್ತಿದ್ದರು. ಈ ನಕಲಿ ಹಾಲು ಉತ್ಪಾದನಾ ಕಾರ್ಖಾನೆಗಳು ನಕಲಿ ಗೋರಕ್ಷಕರ ಪರೋಕ್ಷ ಸೃಷ್ಟಿಯಾಗಿದೆ. ನಕಲಿ ಗೋರಕ್ಷಕರು ಹೇಗೆ ಆಧುನಿಕ ಪೂತನಿಗಳಾಗಿ ಹೈನೋದ್ಯಮವನ್ನು ವಿಷಪೂರಿತಗೊಳಿಸಿದ್ದಾರೆ ಎನ್ನುವುದಕ್ಕೆ ಮಧ್ಯಪ್ರದೇಶ ಉದಾಹರಣೆಯಾಗಿದೆ.

ಸದ್ಯದ ಕೃಷಿ ಸಮಸ್ಯೆಗಳ ಬಿಕ್ಕಟ್ಟಿನ ಕುರಿತಂತೆ ಮಾತನಾಡಬಲ್ಲ ಕೃಷಿತಜ್ಞ, ಕಾರ್ಯಕರ್ತ ಮೋಹಿತ್ ಕುಮಾರ್ ಶರ್ಮಾ ಈ ನಕಲಿ ಹಾಲು ಉತ್ಪಾದನಾ ಘಟಕ ಹೆಚ್ಚುತ್ತಿರುವುದನ್ನು ಹೀಗೆ ವಿಶ್ಲೇಷಿಸಿದ್ದಾರೆ ‘‘ಗೋರಕ್ಷಕರ ಹಾವಳಿಯಿಂದ ಹಾಲು ಉತ್ಪಾದಕ ಘಟಕಗಳು ಹೆಚ್ಚುತ್ತಿವೆ ಎನ್ನುವುದು ಸತ್ಯ. ಅದಕ್ಕೆ ನಾನೇ ಉದಾಹರಣೆ. ನನ್ನ ಬಳಿ 42 ಹಸುಗಳಿವೆ ಮತ್ತು ಯಾರೊಬ್ಬನೂ ಅದನ್ನು ಖರೀದಿಸಲು ಬಯಸುತ್ತಿಲ್ಲ. ಇದರಿಂದ ನನ್ನ ಡೈರಿಯ ವ್ಯವಸ್ಥೆಯೇ ಹಾಳಾಗಿದೆ. ಮೂರು ವರ್ಷಗಳ ಹಿಂದೆ ನನ್ನ ಪ್ರತಿಯೊಂದು ಹಸುಗಳ ಬೆಲೆ 70 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಇತ್ತು. ಕೆಲದಿನಗಳ ಹಿಂದೆ ಓರ್ವ ವ್ಯಾಪಾರಿ ನನ್ನ ನಾಲ್ಕು ದನಗಳನ್ನು 10 ಸಾವಿರ ರೂ.ಗೆ ಕೇಳಿದ್ದ. ಇದು ಇಂದಿನ ಹೈನೋದ್ಯಮದ ಸ್ಥಿತಿ’’. ದೇಶದಲ್ಲಿ ಹಾಲಿನ ಬೇಡಿಕೆ ಹೆಚ್ಚಿದೆ. ಆದರೆ ಗ್ರಾಮೀಣ ಪ್ರದೇಶವೂ ಸೇರಿದಂತೆ ದೇಶಾದ್ಯಂತ ಹೈನೋದ್ಯಮ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಗೋ ಸಾಕಣೆಯ ದುಬಾರಿ ವೆಚ್ಚದಿಂದಾಗಿ ಗ್ರಾಮೀಣ ಪ್ರದೇಶದ ರೈತರು ತಮ್ಮ ಹಟ್ಟಿಗಳನ್ನು ಮುಚ್ಚಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲು ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲವು ಬ್ರಾಂಡೆಡ್ ಕಂಪೆನಿಗಳು ನಕಲಿ ಹಾಲುಗಳ ಮೊರೆಹೋಗುತ್ತಿವೆ. ಕಳೆದ ಐದು ವರ್ಷಗಳಿಂದ ಕೇಂದ್ರ ಸರಕಾರವೂ ಸೇರಿದಂತೆ ದೇಶಾದ್ಯಂತ ಬಿಜೆಪಿ ನೇತೃತ್ವದ ಸರಕಾರಗಳು ‘ಗೋರಕ್ಷಣೆ’ಯ ಕುರಿತಂತೆ ಮಾತನಾಡುತಿವೆ ಮತ್ತು ಅದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿವೆ. ಸಂಘಪರಿವಾರ ಅನಧಿಕೃತವಾಗಿ ಗೋರಕ್ಷಣಾ ಸಂಘಟನೆಗಳನ್ನು ನಡೆಸುತ್ತಿವೆ. ಸರಕಾರ್ತ ದೇಶಾದ್ಯಂತ ಗೋಶಾಲೆಗಳಿಗಾಗಿಯೇ ಕೋಟ್ಯಂತರ ರೂಪಾಯಿಯನ್ನು ಸುರಿಯುತ್ತಿವೆ.

ಆದರೆ ಕೃಷಿ ಕಾರ್ಯಕರ್ತರ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಗೋಸಾಕಣೆ ಇಳಿಕೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ಜಾನುವಾರುಗಳ ಕುರಿತಂತೆ ಸರಕಾರದ ಗೊಂದಲಕಾರಿ ನೀತಿ. ಈವರೆಗೆ ಅರ್ಥಶಾಸ್ತ್ರದ ಭಾಗವಾಗಿದ್ದ ಗೋವುಗಳನ್ನು, ಹೈನೋದ್ಯಮದಲ್ಲಿ ಯಾವ ಪಾತ್ರವೂ ಇಲ್ಲದ ಜನರು ಧರ್ಮಶಾಸ್ತ್ರದ ಭಾಗವಾಗಿ ನಿಯಂತ್ರಿಸಲು ಹೊರಟಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಈ ದೇಶದಲ್ಲಿ ಜನರು ಗೋವುಗಳನ್ನು ಸಾಕುತ್ತಿರುವುದು ಪೂಜಿಸುವುದಕ್ಕಲ್ಲ, ಆರ್ಥಿಕ ವ್ಯವಹಾರಕ್ಕಾಗಿ. ಎಲ್ಲಿಯವರೆಗೆ ಗೋವುಗಳನ್ನು ಸಾಕುವವರೇ ಗೋವುಗಳ ಬಗ್ಗೆ ಮಾತನಾಡುತ್ತಿದ್ದರೋ ಅಲ್ಲಿಯವರೆಗೆ ಹೈನೋದ್ಯಮ ಸುಸೂತ್ರವಾಗಿ ನಡೆಯುತ್ತಿತ್ತು. ಯಾವಾಗ ಹೈನೋದ್ಯಮದ ಜೊತೆಗೆ ಸಂಬಂಧವೇ ಇಲ್ಲದ ಸಂಸ್ಕೃತಿ ರಕ್ಷಕರು ಗೋವುಗಳ ಹೆಸರಲ್ಲಿ ಬೀದಿಗಿಳಿದರೋ, ಆಗ ಹೈನೋದ್ಯಮ ದಿಕ್ಕು ತಪ್ಪಿತು. ಹೈನೋದ್ಯಮ ಎಂದರೆ ಕೇವಲ ಹಾಲಿನ ಉತ್ಪಾದನೆಗಳಷ್ಟೇ ಅಲ್ಲ. ಬೇರೆ ಬೇರೆ ಉದ್ಯಮಗಳ ಜೊತೆಗೆ ಅದು ತಳಕು ಹಾಕಿಕೊಂಡಿದೆ. ಒಂದು ಹಸು ಸತ್ತಿತೆಂದರೆ ಅದರ ಚರ್ಮ, ಎಲುಬುಗಳು ಬಳಕೆಯಾಗುತ್ತವೆ. ರೈತರು ಆ ಚರ್ಮ, ಎಲುಬುಗಳನ್ನು ಮಾರಿ ಹಣವನ್ನು ಸರಿದೂಗಿಸುತ್ತಾರೆ. ಮಾಂಸಾಹಾರಿಗಳೂ ಹೈನೋದ್ಯಮದ ಒಂದು ಭಾಗವೇ ಆಗಿದ್ದಾರೆ. ಮಾಂಸಾಹಾರಿಗಳಿಂದಾಗಿ ಗೋವುಗಳ ಸಂಖ್ಯೆ ಇಳಿಕೆಯಾಗುತ್ತದೆ ಎನ್ನುವುದೇ ಬಹುದೊಡ್ಡ ಸುಳ್ಳು. ಯಾಕೆಂದರೆ, ಯಾವ ರೈತರೂ ಮಾಂಸಾಹಾರಿಗಳಿಗಾಗಿ ಗೋವುಗಳನ್ನು ಸಾಕುವುದಿಲ್ಲ. ಹಾಲು ಕೊಡುವ ಅಥವಾ ಉತ್ಪಾದಕ ಗೋವುಗಳನ್ನು ರೈತರು ಮಾರುವುದೂ ಇಲ್ಲ. ಹಟ್ಟಿಯಲ್ಲಿ ಎತ್ತುಗಳಿದ್ದರೆ ಅವುಗಳನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಇರುವ ಹಸುಗಳಿಗೆ ಆಹಾರಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡುತ್ತಾರೆ. ಅನಗತ್ಯ ಎತ್ತುಗಳು ಹಟ್ಟಿಯಲ್ಲಿದ್ದರೆ ಅದಕ್ಕೂ ಆಹಾರ, ವಸತಿಯನ್ನು ನೀಡಬೇಕು. ಆಗ ಉದ್ಯಮ ಅನಗತ್ಯ ವೆಚ್ಚಗಳಿಂದಾಗಿ ದುಬಾರಿಯಾಗುತ್ತದೆ. ಇಂತಹ ಗೋವುಗಳನ್ನು ಮಾರಾಟ ಮಾಡುವುದರಿಂದ ರೈತರಿಗೆ ಆರ್ಥಿಕವಾಗಿ ತುಂಬಾ ಲಾಭವಾಗುತ್ತಿತ್ತು.

ಆ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆ, ಮುಂಜಿ ಮೊದಲಾದ ಕಾರ್ಯಕ್ರಮಗಳಿಗೆ ಬಳಸಬಹುದಿತ್ತು. ಆದರೆ ಯಾವಾಗ ಗೋರಕ್ಷಣೆಯ ಹೆಸರಲ್ಲಿ ನಕಲಿ ಗೋರಕ್ಷಕರು ಬೀದಿಗಿಳಿದರೋ ಇದೀಗ ರೈತರು ತಮ್ಮದೇ ಎತ್ತುಗಳನ್ನು ಮಾರಾಟಮಾಡಲಾಗದಂತಹ ಸ್ಥಿತಿಗೆ ಬಂದಿದಾರೆ. ಆ ಮಾರಾಟದಿಂದ ಬರುವ ಆದಾಯವೂ ನಿಂತಿದೆ. ಜೊತೆಗೆ ಅವುಗಳನ್ನು ಸಾಕುವ ಹೆಚ್ಚುವರಿ ಹೊಣೆಗಾರಿಕೆ ಬೇರೆ. ಸಾವಿರಾರು ರೂಪಾಯಿ ಬೆಲೆಬಾಳುವ ಈ ಗೋವುಗಳನ್ನು ರೈತರು ಒಂದೋ ಬೀದಿಗೆ ಬಿಟ್ಟು ಬಿಡಬೇಕು, ಇಲ್ಲವೇ ನಕಲಿ ಗೋರಕ್ಷಕರಿಗೆ ಒಪ್ಪಿಸಬೇಕು. ಅವರೋ ಅದನ್ನು ಗುಟ್ಟಾಗಿ ಕಸಾಯಿಖಾನೆಗೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಿಗೇ ಕೋಟ್ಯಂತರ ವೆಚ್ಚದಲ್ಲಿ ಸರಕಾರ ಗೋಶಾಲೆಗಳನ್ನು ತೆರೆದಿದೆ. ಯಾವ ರೀತಿಯಲ್ಲೂ ಹೈನೋದ್ಯಮಕ್ಕೆ ಸಹಾಯವಾಗದ, ಅನುತ್ಪಾದಕ ಗೋಶಾಲೆಗಳಿಂದ ಸರಕಾರದ ಖಜಾನೆಗೆ ಭಾರೀ ಹೊರೆ ಬೀಳುತ್ತಿದೆ.

ಈ ಹಣ, ಗೋವು ಸಾಕುತ್ತಿರುವ ರೈತರಿಗಾದರೂ ದೊರಕಿದ್ದಿದ್ದರೆ ತಮ್ಮ ಹೈನೋದ್ಯಮವನ್ನು ಆಧುನೀಕರಣಗೊಳಿಸುವುದಕ್ಕಾಗಿ ಬಳಸುತ್ತಿದ್ದರು. ದುರಂತವೆಂದರೆ, ಗೋಶಾಲೆಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಅಲ್ಲಿರುವ ಗೋವುಗಳು ಹಸಿವು, ರೋಗಳಿಂದ ಸಾಯುತ್ತಿವೆ ಅಥವಾ ಇದೇ ನಕಲಿ ಗೋರಕ್ಷಕರು ಗುಟ್ಟಾಗಿ ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ಕೈ ತುಂಬಾ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಅಂದರೆ, ಒಂದೆಡೆ ಬೃಹತ್ ಕಸಾಯಿಖಾನೆಗಳಿಂದ, ಇನ್ನೊಂದೆಡೆ ಸರಕಾರದಿಂದ ನಕಲಿ ಗೋರಕ್ಷಕರು ಹಣ ದೋಚುತ್ತಾ ಕೊಬ್ಬುತ್ತಿದ್ದಾರೆ. ಬೆವರು ಸುರಿಸಿ ಗೋವುಗಳನ್ನು ಸಾಕಿದ ರೈತ ಬೀದಿಗೆ ಬಿದ್ದಿದ್ದಾನೆ. ಇಂತಹ ವಾತಾವರಣದಲ್ಲಿ, ವಿಷದ ಹಾಲುಗಳಲ್ಲದೆ, ಅಮೃತ ಉತ್ಪಾದನೆಯಾಗಲು ಸಾಧ್ಯವೇ? ಇಂತಹ ನಕಲಿ ಕಾರ್ಖಾನೆಗಳ ವಿರುದ್ಧ ಕಾನೂನು ತರಲು ಸರಕಾರ ಹೊರಟಿದೆ. ಅದರ ಬದಲು ನಕಲಿ ಗೋರಕ್ಷಕರ ವಿರುದ್ಧ ಕಾನೂನು ತರಲಿ. ರೈತರ ಜಾನುವಾರುಗಳ ಮೇಲೆ ಹಕ್ಕು ಸಾಧಿಸುವ ಈ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಜಾರಿಯಾಗಲಿ. ಗೋರಕ್ಷಕರ ವೇಷದಲ್ಲಿರುವ ಪೂತನಿಗಳ ಸಂಖ್ಯೆ ಇಲ್ಲವಾದರೆ, ವಿಷಕಾರಿ ಹಾಲುಗಳ ಉತ್ಪಾದನೆಯೂ ನಿಲ್ಲುತ್ತದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)